ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!

ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!

 ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!
ಸೈಕಲ್ ಚುನಾವಣಾ ಚಿಹ್ನೆಯಾಗುಳ್ಳ ಸಮಾಜವಾದಿ ಪಕ್ಷ ಈ ಸಲದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್,ಟ್ಯಾಬ್ಲೆಟ್ ನೀಡುವ ಭರವಸೆ ನೀಡಿತ್ತು.ಹಿಂದಿನ ಬಾರಿಯ ಚುನಾವಣೆಗಳ ವೇಳೆ ಕಂಪ್ಯೂಟರುಗಳು ಜನರ ಕೆಲಸ ಕಿತ್ತುಕೊಳ್ಳುತ್ತವೆ,ಹಾಗಾಗಿ ತಮ್ಮ ಪಕ್ಷ ಕಂಪ್ಯೂಟರೀಕರಣದ ವಿರೋಧಿ ಎಂದು ಪ್ರಚಾರ ಮಾಡಿತ್ತು.ಈ ಸಲ ಪಕ್ಷದ ಬದಲಾದ ಧೋರಣೆಗೆ,ಮುಲಾಯಮ್ ಸಿಂಗ್ ಯಾದವ್ ಅವರ ಮಗ ಅಖಿಲೇಶ್ ಯಾದವ್ ಅವರೇ ಕಾರಣ.ಇಂಜಿನಿಯರಿಂಗ್ ಓದಿರುವ "ಕನ್ನಡಿಗ" ಅಖಿಲೇಶ್,ಯುವಜನರ ಮನಸ್ಸು ಗೆಲ್ಲಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಆಮಿಷ ಒಡ್ಡಿರಬಹುದು.ಈಗಿನ ಬದಲಾದ ಸನ್ನಿವೇಶದಲ್ಲೂ ಕಂಪ್ಯೂಟರುಗಳ ಬಗ್ಗೆ ದ್ವೇಷ ಕಾರಿದರೆ,ಜನರಿಗದು ಸರಿಬರಲಿಕ್ಕಿಲ್ಲವೆನ್ನುವುದು ಯುವರಾಜಕಾರಣಿಯಾದ ಅಖಿಲೇಶ್‌ಗೆ ಅರ್ಥವಾಗಿರಬೇಕು.ಪಕ್ಷವು ನಿಚ್ಚಳ ಬಹುಮತಗಿಟ್ಟಿಸುವುದರಲ್ಲಿ ಈ ಆಶ್ವಾಸನೆಯ ಪಾಲು ಸಣ್ಣದೇ ಇರಬಹುದು.ಅಧಿಕಾರದ ಚುಕ್ಕಾಣಿ ಹಿಡಿದವರು ಲಭ್ಯವಿರುವ ತಂತ್ರಜ್ಞಾನವನ್ನು ಜನರು ಬಳಸಬೇಕೆಂಬ ಮನೋಭಾವವನ್ನು ಹೊಂದಿರುವುದು ಒಂದು ಪ್ಲಸ್‌ಪಾಯಿಂಟ್.ಸರಕಾರದ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಶೀಘ್ರ ನಿರ್ಧಾರ ಕೈಗೊಳ್ಳಲು ಕಂಪ್ಯೂಟರುಗಳ ಬಳಕೆ ಅನಿವಾರ್ಯ.ಅಖಿಲೇಶ್ ಈ ನಿಟ್ಟಿನಲ್ಲೂ ಕೆಲಸ ಮಾಡಿದರೆ.ಉತ್ತರ ಪ್ರದೇಶ ಉತ್ತಮ ಪ್ರದೇಶವಾಗದಿರದು.
------------------------------------------------------------
ಟೆಲಿಕಾಂ:ಗೊಂದಲ
ಟೆಲಿಕಾಂ ಕ್ಷೇತ್ರದಲ್ಲಿ ಆಗಿರುವ ಅದ್ಭುತ ಪ್ರಗತಿಯ ಲಾಭ ದೇಶಕ್ಕೆ ಸಿಕ್ಕಿ,ಜನರ ಜನಜೀವನದಲ್ಲಿ ನಂಬಲಸಾಧ್ಯ ಬದಲಾವಣೆಯಾದ ಬೆನ್ನಲ್ಲೇ ಹಗರಣಗಳ ಸರಮಾಲೆಯೂ ಕೇಂದ್ರ ಸರಕಾರವನ್ನು ಸುತ್ತುವರಿದಿದೆ.ತ್ರೀಜಿ ತರಂಗ ಗುಚ್ಛವನ್ನು  ಹರಾಜು ಮಾಡಿ ಬೊಕ್ಕಸಕ್ಕೆ ದಾಖಲೆಯ ಆದಾಯ ತಂದದ್ದೇ ಕೇಂದ್ರ ಸರಕಾರಕ್ಕೆ ಮುಳುವಾಯಿತು.ಟೂಜಿ ತರಂಗ ಗುಚ್ಛವನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ನೆಲೆಯಲ್ಲಿ ವಿತರಿಸಿ ಬಂದ ಆದಾಯ ತ್ರೀಜಿಯ ವಿತರಣೆಯಿಂದ ಬಂದ ಆದಾಯಕ್ಕೆ ಹೋಲಿಸಿದರೆ ಯಕಶ್ಚಿತ್ ಆಗಿತ್ತು.ಟೂಜಿ ತರಂಗ ಗುಚ್ಛದ ವಿತರಣೆ ಬೇಕಾಬಿಟ್ಟಿಯಾಗಿ ಆಗಿದೆ ಎಂದು,ನ್ಯಾಯಾಲಯ ಅವನ್ನು ಮರು ವಿತರಿಸಲು ಸರಕಾರಕ್ಕೆ ಸೂಚಿಸಿ,ಮುಖಭಂಗ ಮಾಡಿತು.ಈಗ ಆ ತೀರ್ಪಿನ ಮರುಪರಿಶೀಲನೆ ಮಾಡಲು ಕೋರಿ ಸರಕಾರ ಅನಗತ್ಯ ಗೊಂದಲ ಸೃಷ್ಟಿಸಿದೆ.ಹರಾಜಿನ ಮೂಲಕ ರದ್ದಾದ ತರಂಗ ಗುಚ್ಛವನ್ನು ಮರುವಿತರಿಸಿದರೆ,ಸರಕಾರಕ್ಕೆ ಇನ್ನೊಮ್ಮೆ ಮುಖಭಂಗವಾಗುವ ಭೀತಿಯಾದರೂ ತಪ್ಪುತ್ತಿತ್ತು.ತ್ರೀಜಿ ತಂತ್ರಜ್ಞಾನವು ಶರವೇಗದ ಟೆಲಿಕಾಂ ಸಂಪರ್ಕಕ್ಕೆ ಅನುವು ಮಾಡುತ್ತದಾದರೂ,ಅದಿನ್ನೂ ನಗರಪ್ರದೇಶಗಳಲ್ಲಿ ಮಾತ್ರಾ ಲಭ್ಯವಾಗುತ್ತಿದೆ.ದುಬಾರಿ ದರ ಮತ್ತು ದುಬಾರಿ ಹ್ಯಾಂಡ್‌ಸೆಟ್‌ಗಳು ಸಾಮಾನ್ಯರು ತ್ರೀಜಿ ತಂತ್ರಜ್ಞಾನಕ್ಕೆ ಸಾಗುವುದನ್ನು ತಡೆದಿದೆ.ಈ ನಡುವೆ ಜಗತ್ತಿನ ಹಲವೆಡೆ ಫೋರ್‌ಜಿ ತಂತ್ರಜ್ಞಾನ ಲಭ್ಯವಾಗುತ್ತಿದೆ.ಫೋರ್‌ಜಿ ತರಂಗ ಗುಚ್ಛ ವಿತರಣೆ  ಮಾಡಲು ಸರಕಾರ ಹೊರಟಿದೆಯಾದರೂ,ಟೆಲಿಕಾಮ್ ಕಂಪೆನಿಗಳು ಅದರಲ್ಲಿ ಉತ್ಸಾಹದಿಂದ ಭಾಗವಹಿಸುವ ಸಾಧ್ಯತೆ ಕಡಿಮೆ.ತ್ರೀಜಿಯಲ್ಲಿ ತಮ್ಮ ಹೂಡಿಕೆಯು ವಾಪಸ್ಸು ಬಾರದೆ,ಇನ್ನಷ್ಟು ಹೆಚ್ಚಿನ ಹೂಡಿಕೆಗೆ ಕಂಪೆನಿಗಳು ಮುಂದಾಗುವುದು ಅಷ್ಟರಲ್ಲೇ ಇದೆ.ತಮ್ಮ ಸೇವೆ ಇಲ್ಲದ ಪ್ರದೇಶಗಳಲ್ಲಿ,ತಮ್ಮ ಬಳಕೆದಾರರಿಗೆ ಸೇವೆ ಲಭ್ಯವಾಗಿಸಲು ರೋಮಿಂಗ್ ಸೌಲಭ್ಯವನ್ನು ಬಳಸುವ  ಟೆಲಿಕಾಂ ಕಂಪೆನಿಗಳ ಯೋಜನೆಗೂ ಟೆಲಿಕಾಂ ಇಲಾಖೆ ಅಡ್ಡಗಾಲು ಹಾಕಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.ಇಡೀ ಟೆಲಿಕಾಂ ನೀತಿಯೇ ಅಸ್ಪಷ್ಟವಾಗಿ,ಅದರ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಬಿದ್ದಿರುವುದು ಒಳ್ಳೆಯ ಸೂಚನೆಯಂತೂ ಅಲ್ಲ.
---------------------------------------------------------
ಐಪ್ಯಾಡ್:4ಜಿಗೆ ರೆಡಿ



ಆಪಲ್ ಕಂಪೆನಿಯ ಐಪ್ಯಾಡ್‌ನ ಹೊಸ ಆವೃತ್ತಿ ಜಗತ್ತಿನ ಹಲವೆಡೆ ಬಿಡುಗಡೆಯಾಗಿದೆ.4ಜಿ ಸೇವೆ ಲಭ್ಯವಿರುವಲ್ಲಿ ಬಳಸಲಿದನ್ನು ತಯಾರು ಮಾಡಲಾಗಿದೆ.ಐಪ್ಯಾಡಿನ ಹೈಲೈಟ್ ಎಂದರೆ ಅದರ ಸುಸ್ಪಷ್ಟ ತೆರೆ.ಎಚ್‌ಡಿ ಟೆಲಿವಿಷನ್ ಸೆಟ್‌ನಲ್ಲಿರುವ ಪಿಕ್ಸೆಲುಗಳಿಗಿಂತ ಇದರಲ್ಲಿ ಒಂದು ದಶಲಕ್ಷ ಪಿಕ್ಸೆಲುಗಳು ಹೆಚ್ಚಾಗಿವೆ ಎಂದರೆ ಅದರ ಸ್ಪಷ್ಟತೆಯ ಅರಿವಾದೀತು-ಅದೂ ಹತ್ತಿಂಚು ತೆರೆಯ ಮೇಲೆ.ಈ ತೆರೆ,ಮುದ್ರಿತ ಪ್ರತಿಯಂತೆ ಕಾಣಿಸುವಷ್ಟು ಚೆನ್ನಾಗಿದೆ ಎಂದು ಮುಕ್ತ ಕಂಠದ ಪ್ರಶಂಸೆಗಿಟ್ಟಿಸಿದೆ.ಇನ್ನಿದರಲ್ಲಿ ಹೊಸ ಸಂಸ್ಕಾರಕವನ್ನೂ ಬಳಸಲಾಗಿದ್ದು,ವೇಗದ ಗ್ರಾಫಿಕ್ಸ್ ಸಂಸ್ಕರಣವೂ ಲಭ್ಯ.ಹೀಗಾಗಿ ಟ್ಯಾಬ್ಲೆಟ್ ಸಾಧನವನ್ನು ವಿಡಿಯೋ ಗೇಮ್‌ಗಾಗಿ ಬಳಸುವವರಿಗಿದು ವಿಶಿಷ್ಟ ಅನುಭವ ನೀಡುವುದು ಖಂಡಿತ.ಕ್ಯಾಮರಾವೂ ಅಧಿಕ ಸ್ಪಷ್ಟತೆಯುಳ್ಳದ್ದಾಗಿರುವುದರಿಂದ,ಬಳಕೆದಾರರಿಗೆ ಖುಷಿಯಾಗಲಿದೆ.ಇದು ಐಪ್ಯಾಡ್2ಗೆ ಹೋಲಿಸಿದರೆ.ತುಸು ಭಾರ ಮತ್ತು ಹೆಚ್ಚು ದಪ್ಪ ಎನ್ನುವುದು ಇದರ ಬಗ್ಗೆ ಹೇಳಬಹುದಾದ ವಕ್ರನುಡಿ.ಐಪ್ಯಾಡ್2ಗಿನ್ನು ಐದಾರು ಸಾವಿರ ರೂಪಾಯಿಗಳು ಕಡಿಮೆಯಾದೀತು ಎನ್ನುವುದು ಭಾರತೀಯ ಗ್ರಾಹಕರ ಮಟ್ಟಿಗೆ ಹೇಳಬಹುದಾದ ಸಮಾಧಾನದ ಮಾತು.ಇನ್ನುಳಿದಂತೆ 4ಜಿ ನಮ್ಮಲ್ಲಿನೂ ಆರಂಭವೇ ಆಗಿಲ್ಲವಾದ್ದರಿಂದ ಹೊಸ ಐಪ್ಯಾಡ್ ನಮ್ಮಲ್ಲಿ ಪ್ರಸ್ತುತವಲ್ಲ.ಎಂದಿನಂತೆ ಜಗತ್ತಿನೆಲ್ಲೆಡೆ ಇದು ಬಿಡುಗಡೆಯಾದರೂ ನಮ್ಮಲ್ಲಿಗಿನ್ನೂ ಬಂದಿಲ್ಲ.ದುಬಾರಿ ಸರಕಾದ ಆಪಲ್ ಉತ್ಪನ್ನಗಳು ನಮ್ಮಲ್ಲಿನ್ನೂ ಜನಪ್ರಿಯವಲ್ಲವಾದರೂ,ನಿಧಾನವಾಗಿ ಇದರ ಗುಣಮಟ್ಟ ಜನರ ಗಮನ ಸೆಳೆಯುತ್ತಿರುವುದು ಮಾತ್ರಾ ನಿಜ.
------------------------------------------------
ಆಂಡ್ರಾಯಿಡ್ ಸಾಧಗಳಿಗೆ ಕೀಲಿಮಣೆ
ಆಂಡ್ರಾಯಿಡ್ ಬಳಸುವ ಸಾಧನಗಳಿಗೆ ಸೂಕ್ತವಾದ ಬಾಹ್ಯ ಕೀಲಿಮಣೆ ಈಗ ಲಭ್ಯವಾಗಿದೆ.ಇದನ್ನು ಕೇಬಲ್ ಬಳಸಿ ಸಾಧನಕ್ಕೆ ಸಂಪರ್ಕಿಸಬೇಕು.ಇದರಲ್ಲಿರುವ ಬ್ಯಾಟರಿ,ಸಾಧನದ ಬ್ಯಾಟರಿ ಬ್ಯಾಕಪ್ ಆಗಿ ಲಭ್ಯವಿರುವುದು ಪ್ಲಸ್ ಪಾಯಿಂಟ್.ಅಲ್ಲದೆ ಕೀಲಿಮಣೆಯಲ್ಲಿ,ಸಾಧನವನ್ನು ಲ್ಯಾಪ್‌ಟಾಪ್‌ನಂತಾಗಿಸುವ ವ್ಯವಸ್ಥೆಯೂ ಇದೆ.ಇನ್ನು ಅಪ್ಟಿಕಲ್ ಮೌಸ್,ಟಚ್‌ಪ್ಯಾಡ್ ಸವಲತ್ತಿರುವ ಕೀಲಿಮಣೆಗಳೂ ಲಭ್ಯ.ಸ್ಪರ್ಶಸಂವೇದಿ ಕೀಲಿಮಣೆ ಬಳಸಿ ಟೈಪ್ ಮಾಡಲು ಕಷ್ಟವಾಗುವುದರಿಂದ ಬರಹಗಾರಿಕೆ ಮಾಡುವವರಿಗೆ ಇಂತಹ ಬಾಹ್ಯ ಕೀಲಿಮಣೆಗಳು ವರದಾನವೇ ಸರಿ.
---------------------------------------------------
ಸೌರ ಚಟುವಟಿಕೆ:ಉಪಗ್ರಹಗಳಿಗೆ ಕಿರಿಕ್
ಸೌರ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳು ಉಂಟು ಮಾಡುವ ವಿದ್ಯುದಯಸ್ಕಾಂತೀಯ ಅಲೆಗಳು ಕೃತಕ ಉಪಗ್ರಹಗಳಿಗೆ ಮಾರಕವಾಗುವ ಭೀತಿಯಿದೆ.ಹಿಂದೆಯೂ ಇಂತಹ ಸೌರ ಚಟುವಟಿಕೆಗಳು ನಡೆದಿದ್ದರೂ,ಅವು ಭೂಮಿಯಿಂದ ದೂರದಲ್ಲೇ ಸಂಭವಿಸಿದ್ದುವು.ಆದರೀಸಲ ಭೂಮಿಯನ್ನು ಆವರಿಸಿರುವ ವಾತಾವರಣಕ್ಕೂ ಚಟುವಟಿಕೆಗಳ ಬಿಸಿ ಮುಟ್ಟಲಿದೆ.ಆ ಸಮಯವನ್ನು ಲೆಕ್ಕ ಹಾಕಲು ಬರುವುದು ನಮ್ಮ ಅದೃಷ್ಟ.ಉಪಗ್ರಹಗಳ ಸಂವೇದಕಗಳನ್ನು ಬಂದು ಮಾಡಿಟ್ಟು,ನಮ್ಮ ಉಪಗ್ರಹಗಳನ್ನು ರಕ್ಷಿಸಿಕೊಳ್ಳಲು ವಿಜ್ಞಾನಿಗಳು ತಯಾರಾಗಿದ್ದಾರೆ.ಟಿವಿ,ಬ್ರಾಡ್‌ಬ್ಯಾಂಡ್ ಮಾಡೆಮ್ ಸಿಡಿಲಿನಿಂದ ಕೆಡುವುದನ್ನು ತಪ್ಪಿಸಲು ಅವನ್ನು ಬಂದು ಮಾಡಿಡುವುದು ನೆನಪಾಯಿತೇ?
-------------------------------------------------------
ಹೊಸತಾಣ ಚಿಲ್
http://chill.com ಈ ಅಂತರ್ಜಾಲ ತಾಣದಲ್ಲಿ ವಿಡಿಯೋಗಳನ್ನು ಪರಸ್ಪರ ಹಂಚಿಕೊಳ್ಳಲು ಬರುತ್ತದೆ.ಇದೂ ಇನ್ನೊಂದು ಬಗೆಯ ಸಾಮಾಜಿಕ ಜಾಲತಾಣವಾದರೂ,ವಿಡಿಯೋ ಕ್ಲಿಪ್‌ಗಳ ಕಡೆ ಹೆಚ್ಚಿನ ಒತ್ತು ನೀಡಿರುವುದು ಈ ತಾಣದ ವೈಶಿಷ್ಟ್ಯ.ಅದೇ ರೀತಿ ನಿಮಗಿಷ್ಟವಾದ ಸಂಗೀತವನ್ನು ಇತರರ ಜತೆ ಹಂಚಿಕೊಳ್ಳಲು ಬಯಸುವಿರಾದರೆ,http://www.thisismyjam.com ತಾಣವು ನಿಮಗೆ ಹೇಳಿ ಮಾಡಿಸಿದಂತಿದೆ.ಕೊಟ್ಟುಕೊಳ್ಳುವುದಕ್ಕೆ ಒತ್ತು ನೀಡುವುದೇ ಇಂತಹ ತಾಣಗಳ ಕಾರ್ಯವಿಧಾನ.ಹಾಗೆ ಮಾಡುವಾಗ ಕಾಪಿರೈಟ್ ಬಗ್ಗೆ ಗಮನದಲ್ಲಿರಿಸಿಕೊಳ್ಳುವುದು ಕ್ಷೇಮ.ಬೇಕಾಬಿಟ್ಟಿ ಹಂಚಿಕೊಂಡರೆ,ಕಾನೂನಿನ ಸಂಕೋಲೆಗೆ ಸಿಲುಕಬೇಕಾದೀತು.
---------------------------------------------------UDAYAVANI 
ಅಶೋಕ್‌ಕುಮಾರ್ ಎ

Comments