ಒನ್ ಮಿನಿಟ್ ಪ್ಲೀಸ್...

ಒನ್ ಮಿನಿಟ್ ಪ್ಲೀಸ್...

ಇಂದು ಸಂಜೆ ಬಸ್ಸನ್ನೇರುತ್ತಿದ್ದಂತೆ "ಒನ್ ಮಿನಿಟ್ ಪ್ಲೀಸ್" -ಎಂಬ ಧ್ವನಿ ಕೇಳಿಸಿತು. ಯಾರೆಂದು ತಿರುಗಿ ನೋಡಿದೆ,ಜೋರಾಗಿ ನಗುತಾ, ಬೈ-ಸೀ ಯೂ ಎಂದು ಕೈ ಆಡಿಸಿತು ಹುಡುಗರ ಗುಂಪು. ನಗುತ್ತಾ ಬೈ ಹೇಳಿ ಬಸ್ಸನ್ನೇರಿದೆ.  ನಾನು ಸಿಂಗಪುರದ ಜೂನಿಯರ್ ಕಾಲೇಜಿನಲ್ಲಿ ಲೈಬ್ರರಿಯನ್. ನನ್ನ ಕೌಂಟರಿನಲಿ ಪುಸ್ತಕ ಪಡೆಯಲು ಕಾದು ನಿಂತ ವಿದ್ಯಾರ್ಥಿಗಳಿಗೆ "ಸಾರಿ, ಒನ್ ಮಿನಿಟ್ ಪ್ಲೀಸ್"  ಒದರ್ತಾ ಇರ್ತೀನಿ, ಅಭ್ಯಾಸ ಬಲ! ಇದನ್ನು ಗಮನಿಸಿದ್ದ ಒಬ್ಬ ಪೋರ, ನನ್ನ ನೋಡಿ ಕೀಟಲೆ ಮಾಡಿದ್ದು!


"ಒನ್ ಮಿನಿಟ್" ಕೀಟ ತಲೆ ಕೊರೆಯೋಕ್ಕೆ ಶುರು ಮಾಡಿತು. ಆ ವಾಕ್ಯವನ್ನು ಅದೆಷ್ಟು ಸುಲಭವಾಗಿ ಹೇಳಿ ಬಿಡ್ತೀವಿ, ಹೌದು ತಾನೇ?  ಲೆಕ್ಕ ಹಾಕಿ ನೋಡೋಕ್ಕೆ ಹೋದ್ರೆ "ತಾರೆ ಎಣಿಸಿ ಮೊತ್ತ ಹೇಳು" ಎಂದಾಗುತ್ತೆ. ಅದೇ ಒಂದ್ನಿಮಿಷ, ಒಂದು ಸೆಕೆಂಡ್, ಒಂದು ಕ್ಷಣದಲಿ ಕೆಲವೊಂದು ಭಾರಿ ನಿರ್ಧಾರ ತೆಗೆದುಕೊಂಡೇ ಬಿಡ್ತೀವಿ. ಆ ಒಂದೇ ಕ್ಷಣದ ನಿರ್ಧಾರ ಜೀವನವನ್ನೇ ಬದಲಿಸಬಹುದು, ಹಾಗೆಯೇ ಪಶ್ಚಾತ್ತಾಪ ಕೂಡ ತರಬಹುದು. ಒಂದು ಚಣ ಅದೆಷ್ಟು ವಿಷಯಕ್ಕೆ ನಾಂದಿ ಹಾಡುತ್ತೆ ಕೂಡ.!


ಬರೀ ಅಷ್ಟೇ ಅಲ್ಲ, ಒನ್ ಮಿನಿಟ್ ಲೇಟು- ಅಪಾಯ ತಪ್ಪಿದ್ದಲ್ಲ, ಆಘಾತ ತಪ್ಪಿದ್ದಲ್ಲ. ಅಪಾಯಿಂಟ್‍ಮೆಂಟ್ ತಪ್ಪಿ, ರೈಲು, ಬಸ್ಸು, ವಿಮಾನ ಪಯಣ ಕೈ ತಪ್ಪಿ ಹೋಗಬಹುದು. ಪ್ರಾಣ ಹೋಗೋಕ್ಕೂ ಒಂದೇ ಮಿನಿಟ್, ಪ್ರಾಣಾಪಾಯ ತಪ್ಪಿಸೋಕ್ಕೊ ಒಂದೇ ಮಿನಿಟ್ ಆಗಬಹುದು.


ಅತ್ಮೀಯರಲ್ಲಿ, ಒಡ ಹುಟ್ಟಿದವರೊಡನೆ ಮಾತುಕತೆ, ಕಷ್ಟ-ಸುಖ ಹಂಚಿಕೊಳ್ಳುವಲ್ಲಿ ಒಂದು ಮಿನಿಟಿನಲ್ಲಿ ನಮ್ಮ ಬಾಯಿಂದ ಉದುರಿದ ಮಾತುಗಳು ಅಪಾರ್ಥಕ್ಕೆ ಎಡೆಕೊಡಬಹುದು, ಆತ್ಮೀಯತೆ ಕರಗಿ ನೀರಾಗಬಹುದು ಹಾಗೆಯೇ ದ್ವೇಷಕ್ಕೂ ಎಡೆ ಕೊಡಬಹುದು. ಅದೆಷ್ಟೋ ವಿಷಯಗಳು ಒಂದು ನಿಮಿಷದಲಿ ನೆನಪಿಗೆ ಬರುತ್ತೆ ಹಾಗೆ ಮರೆತೂ ಹೋಗುತ್ತೆ.



ಒಮ್ಮೆ ನಮ್ಮ ತಾತನನ್ನು ನಿಮಗೆಷ್ಟು ಮಕ್ಕಳು ಎಂದು ಒಬ್ಬರು ಕೇಳಿದಾಗ "ಇರಿ, ಒಂದು ನಿಮಿಷ ಹೇಳ್ತೀನಿ ಎಂದು ಲೆಕ್ಕ ಹಾಕಿ ಹೇಳಿದ್ರಂತೆ"! ಹಾಗೂ ಒಂದು ಕಾಲವಿತ್ತು.


ನಮ್ಮಮ್ಮ ತುಂಬಾ ಕಟ್ಟು-ನಿಟ್ಟು " ನಾನು ಯಾವಾಗ್ಲೂ, ಒಂದ್ನಿಮಿಷ ಇರು ಅಮ್ಮಾ" ಎನ್ನುತ್ತಿದ್ದೆ! ಹಾಳಾದ್ದು ಒಂದ್ನಿಮಿಷ ಗೋಳು ನಿಂದು ಎನ್ನೋವ್ಳು. ಇದೀಗ ಅವ್ಳಿಗೆ ೮೦-ಒಂದ್ನಿಮಿಷ ಪುಟ್ಟೀ, ವಯಸ್ಸಾಯಿತು, ಬೇಗ್ ಬೇಗ್ ಆಗೋಲ್ಲ ಎಂದು! ಅಮ್ಮನಿಗೊಂದು ಕಾಲ...ನನಗೊಂದು ಕಾಲ!


"ಒಂದ್ನಿಮಿಷ ಸ್ವಲ್ಪ ಸುಮ್ನೆ ಇರೀ ಅಂದ್ರೆ"  ಜ್ಞಾಪಿಸಿಕೊಳ್ಳಿ ಈ ಡೈಲಾಗ್! ವಾವ್,  ಅದೆಷ್ಟು ಸಲ ನಾವು ಕೇಳಿಲ್ಲ ಅಮ್ಮನ ಬಾಯಲ್ಲಿ! ಅತಿಥೇಯರು ಮನೆಗೆ ಬಂದ್ರೆ, ಅಪ್ಪನ ನಿರ್ದಿಷ್ಟ ಡೈಲಾಗ್ "ಒಂದ್ನಿಮಿಷ, ಅಡುಗೆ ಆಗಿ ಹೋಗುತ್ತೆ/ತಿಂಡಿ ಆಗಿ ಹೋಗುತ್ತೆ, ತಿಂದು ಹೋಗಿ"! ಬಾಲ್ಯದತ್ತ ಇಣುಕಿ ನೋಡಿ...ಅಷ್ಟೋಂದು ಕಷ್ಟ ಪಟ್ಟು ಮಾಡಿದ್ನಲ್ಲೇ-ಒಂದ್ನಿಮಿಷದಲಿ ಒಡೆದು ಹಾಕಿಬಿಟ್ಯಲ್ಲಾ, ಕುಂಬಾರನಿಗೆ ವರ್ಷ-ದೊಣ್ಣೆಗೆ ನಿಮಿಷ! ಬೈಸಿಕೊಂಡಿದೀರಾ, ನೆನಪಿಗೆ ಬಂತು ತಾನೇ?  ಹಾಗೆಯೇ ಅಂದಿನ ಸಾಮಾಜಿಕ ಚಿತ್ರದಲ್ಲಲ್ಲಂತೂ ನನ್ನ ಬಿಟ್ಟು ಹೋಗ್‍ಬೇಡ್ವೇ! ಒಂದ್ನಿಮಿಷ ನನ್ ಮಾತು ಕೇಳು! ಡೈಲಾಗ್ ಇದ್ದೇ ಇರುತ್ತಿತ್ತು.


ಬರೀ ಮಾತಿಗಷ್ಟೇ ಸೀಮಿತವಲ್ಲ ಈ ಒನ್ ಮಿನಿಟ್ ಪ್ಲೀಸ್, ಅಮೇರಿಕೆಯಲ್ಲಿ ಜುಲೈ ೬, ೧೯೫೪ ರಿಂದ ೧೭ ಫೆಬ್ರವರಿ ೧೯೫೫ ರ ವರೆಗೆ " ಜಸ್ಟ್ ಅ ಮಿನಿಟ್ ಪ್ಲೀಸ್, ಕ್ವಿಝ್ ಶೋ ಬಿ.ಬಿ.ಸಿ ರೇಡಿಯೋ ಕಾಮಿಡ್ ಗೇಮ್ ಶೋ ನಡೆಯಿತಂತೆ.


ಆದ ಕಾರಣ ಒಂದ್ನಿಮಿಷ ಪ್ಲೀಸ್-ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಜೊತೆಗಿರಲಿ! ಒನ್ ಮಿನಿಟ್‍ನ "ಕಾಲ" ಕ್ಕೆ ಅದೆಷ್ಟು ಮಹತ್ವ ಇದೆ ನೋಡಿ!!!!!


 

Comments