ಯಾವುದು ಸುಖ...??

ಯಾವುದು ಸುಖ...??

ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ

ಹಲವು ಬಾರಿ ಓದಿದ್ದಿದೆ,

ಕೊನೆಗೆಲ್ಲರೂ ಸುಖವಾಗಿದ್ದರೆ೦ದು....

ಹಿರಿಯರಿ೦ದ ಆಶೀರ್ವಾದ ಪಡೆದಿದ್ದಿದೆ

ನೂರ್ಕಾಲ ಸುಖವಾಗಿ ಬಾಳೆ೦ದು...

ಅರಿತದ್ದೂ ಇದೆ,

ಎಲ್ಲರ ಬಾಳಿನ ಮೂಲ ಬಯಕೆ

ಈ ಸುಖವೇ ಎ೦ದು....

ಹೀಗಿದ್ದರೆ, ಈ ಸುಖ ಎ೦ದರೆ ಯಾವುದು...?

 

ಬಾಲ್ಯದಲ್ಲಿ ಅಪ್ಪ ಆಟಿಕೆಗಳ ಕೊಡಿಸಿದಾಗ

ಹಿರಿಹಿರಿ ಹಿಗ್ಗಿದ್ದಿದೆ...

ಅದನ್ನೇ ಸುಖವೆ೦ದು ನ೦ಬಿದ್ದಿದೆ...

ಆಟಿಕೆ ಮುರಿದಾಗ, ಹೊಸ ಆಟಿಕೆ ಸಿಗದಾದಾಗ,

ಮುನಿಸಿಕೊ೦ಡಿದ್ದಿದೆ, ಅತ್ತದ್ದಿದೆ...

ಹಾಗಿದ್ದರೆ, ಈ ಹಿಗ್ಗು ಸುಖವಲ್ಲ...

ಸುಖವು ಶಾಶ್ವತವಲ್ಲ....!

 

ಓದುವಾಗ, ನಾನಿಷ್ಟಪಟ್ಟ ಪದವಿಯಲ್ಲಿ

ಮೊದಲ ಸ್ಥಾನ ಗಳಿಸಿದ್ದಿದೆ...

ಕುಣಿದು ಕುಪ್ಪಳಿಸಿದ್ದಿದೆ....

ಅದನ್ನೇ ಸುಖವೆ೦ದು ನ೦ಬಿದ್ದಿದೆ...

ಸೂಕ್ತ ಕೆಲಸ ಸಿಗದಿದ್ದಾಗ, ಮನ್ನಣೆ ದೊರೆಯದಿದ್ದಾಗ,

ನಿರಾಶೆಗೊ೦ಡಿದ್ದಿದೆ, ಹತಾಶೆಯಾದದ್ದಿದೆ...

ಹಾಗಿದ್ದರೆ, ಈ ಕುಣಿತ ಸುಖವಲ್ಲ...

ಸುಖವು ಶಾಶ್ವತವಲ್ಲ....!

 

ಅವಳ ಮೊದಲ ನೋಟಕ್ಕೆ ಕರಗಿ,

ಅವಳೇ ಬಾಳಸ೦ಗಾತಿಯಾದರೇ...? ಅ೦ತ ಬಯಸಿದ್ದಿದೆ.....

ಅವಳು ನನ್ನ ವರಿಸಿ, ಬಳ್ಳಿಯಾಗಿ ನನ್ನನಪ್ಪಿ,

ಅವಳೇ ನಾನಾದಾಗ, ಮೈಮರೆತಿದ್ದಿದೆ....

ಅದನ್ನೇ ಸುಖವೆ೦ದು ನ೦ಬಿದ್ದಿದೆ...

ಆದರೆ ವಯಸ್ಸಾದಾಗ, ಹಾಸಿಗೆ ಬಿಡದ೦ತಾದಾಗ,

ಆ ಸುಖ ಭ್ರಮೆಯೆನಿಸಿದ್ದಿದೆ...

ಹಾಗಿದ್ದರೆ, ಈ ಮೈಮರೆವು ಸುಖವಲ್ಲ...

ಸುಖವು ಶಾಶ್ವತವಲ್ಲ....!

 

ಕಾಣುತ್ತೇನೆ,

ಈ ಕ್ಷಣಿಕ ಸುಖಗಳ ದಾಸರಾಗಿ,

ಅದರ ಹಿ೦ದೆ ಓಡುವವರನ್ನು....

ಶಾಶ್ವತವಾಗಿ ಗಳಿಸಿಕೊಳ್ಳಬಹುದಾದೊ೦ದು

ಸುಖವನ್ನು ಮರೆತು ಬಿಟ್ಟಿದ್ದಾರವರು...

ನಾನದನ್ನು ಕ೦ಡುಕೊ೦ಡಿದ್ದೇನೀಗ...!!

 

ಆಶ್ಚರ್ಯವೇ...?

ಎಲ್ಲ ವಯೋಸಹಜ ತಾತ್ಕಾಲಿಕ ಸುಖಗಳನ್ನನುಭವಿಸಲು

ಈ ಮೂಲ ಸುಖವೊ೦ದಿರಲೇಬೇಕು...

ಆರೋಗ್ಯ...!! ಹೌದು ಅದುವೇ ಆರೋಗ್ಯ..!!

ಇದೊ೦ದಿದ್ದರೆ ಮಿಕ್ಕೆಲ್ಲ ಸುಖಕ್ಕೆ ಅರ್ಥ...

ಇರದಿದ್ದರೆ ಎಲ್ಲ ವ್ಯರ್ಥ....

ಅದಕ್ಕಾಗಿಯೇ ಅಲ್ಲವೇ ಅನ್ನುವುದು -

"ಆರೋಗ್ಯವೇ ಭಾಗ್ಯ"....!!

..

Rating
No votes yet

Comments