ಸೈಕಲ್ ಸವಾರಿ – ಅವಿರತದ ದಾರಿ

ಸೈಕಲ್ ಸವಾರಿ – ಅವಿರತದ ದಾರಿ

ನಾವೆಲ್ಲಾ ಶಾಲಾ ವಿದ್ಯಾರ್ಥಿಗಳಾಗಿದ್ದ ದಿನಗಳಲ್ಲಿ, ಎಲ್ಲರ ಸಾಮಾನ್ಯ ಬಯಕೆ ಎಂದರೆ ಸೈಕಲ್!!! ಅಪ್ಪನ ಜೊತೆ ಬಜಾಜ್ ಸ್ಕೂಟರ್ ನಲ್ಲೋ, ಶಾಲೆಯ ಬಸ್ಸಿನಲ್ಲೋ ಅಥವಾ ದೂರದ ಹಳ್ಳಿಗಳಲ್ಲಾದರೆ ಗೆಳೆಯರ ಜೊತೆ ನಡೆದುಕೊಂಡೋ ಶಾಲೆಗೆ ಬರುತ್ತಿದ್ದರೂ ೬, ೭ನೇ ತರಗತಿ ಬರುವ ಹೊತ್ತಿಗೆ ನಮ್ಮದೇ ಒಂದು ಸೈಕಲ್ ತೆಗೆದುಕೊಂಡು, ಅದರಲ್ಲೇ ಶಾಲೆಗೆ ಬರುವ ತವಕ!! ಹಾಗಾಗಿಯೇ, ನಾವು ವರ್ಷದ ಪರೀಕ್ಷೆಯಲ್ಲಿ ಪಾಸಾದಾಗ ಯಾರಾದರೂ ’ಏನು ಬೇಕು?’ ಎಂದು ಕೇಳಿದರೆ, ತಕ್ಷಣವೇ ’ಸೈಕಲ್’ ಎಂದು ಹೇಳುತ್ತಿದ್ದೆವು!! ಹೀಗೆ ಬಾಲ್ಯದಲ್ಲಿ ಸೈಕಲ್ ಕನಸು ಕಂಡವರೆಷ್ಟೋ?! ಕನಸು ಈಡೇರಿ ಸಂತಸಪಟ್ಟವರೆಷ್ಟೋ?! ಕನಸು ಕರಗಿ ಬೇಸರಿಸಿದವರೆಷ್ಟೋ?! ಒಟ್ಟಾರೆ, ಹಾಗೆ ಇಷ್ಟಪಟ್ಟು ತೆಗೆದುಕೊಂಡ ಸೈಕಲ್, ನಾವೆಲ್ಲ ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಂತೆ, ಬಾಲ್ಯದ ಒಂದು ನೆನಪಾಗಿ, ಈಡೇರದ ಒಂದು ಕನಸಾಗಿ ಉಳಿದುಬಿಡುತ್ತದೆ.

ಹೀಗೆ ಸೈಕಲ್ ಬಗೆಗಿನ ಗುಂಗು ಆವರಿಸಿದ್ದು, ಅದರ ನೆನಪಿನಲ್ಲೇ ಬರೆಯಬೇಕು ಎನಿಸುವಂತೆ ಮಾಡಿದ್ದು, ನಮ್ಮ ಅವಿರತ ಸಂಸ್ಥೆ ಆಯೋಜಿಸಿದ್ದ ’ಸೈಕಲ್ ಸವಾರಿ’ ಕಾರ್ಯಕ್ರಮದ ಸಂದರ್ಭದಲ್ಲಿ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅವಿರತ ಸಂಸ್ಥೆಯ ವತಿಯಿಂದ ಹಿಂದುಳಿದ ಮತ್ತು ಗ್ರಾಮಾಂತರ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯ ಕಾರ್ಯಕ್ರಮಕ್ಕೆ ಹಣ ಸಂಗ್ರಹಣೆಯ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸೈಕಲ್ ಸವಾರಿ, ಎಲ್ಲರನ್ನೂ ಕ್ಷಣಕಾಲದ ಮಟ್ಟಿಗಾದರೂ ತಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ದುದರಲ್ಲಿ ಸಂಶಯವಿಲ್ಲವೆನ್ನಬಹುದು.


೧೦ ರಿಂದ ೪೫ ವರ್ಷ ವಯಸ್ಸಿನ ಸುಮಾರು ೬೦ ಜನ ಭಾಗಿಗಳನ್ನು ೧೦ ಜನರ ೬ ತಂಡಗಳಾಗಿ ವಿಂಗಡಿಸಿ, ಪ್ರತಿಯೊಂದು ತಂಡದಲ್ಲೂ ಇಬ್ಬರು ಸೈಕಲ್ ಪಟುವನ್ನು ನಿಯೋಜಿಸಿಲಾಗಿತ್ತು. ಈ ನಮ್ಮ ಸೈಕಲ್ ಸವಾರಿ ಪ್ರಾರಂಭವಾಗಿದ್ದು ಗಾಂಧಿ ಕೃಷಿ ವಿಶ್ವವಿದ್ಯಾಲಯ ಕೇಂದ್ರ (ಜಿ.ಕೆ.ವಿ.ಕೆ) ದ ಆವರಣದಲ್ಲಿ.

ಶಿಶುವಿಹಾರದಿಂದ ಪ್ರಾರಂಭವಾಗುವ ಮಕ್ಕಳ ವಿದ್ಯಾಭ್ಯಾಸವು, ಶಾಲಾ ಕಾಲೇಜಿನ ಮೂಲಕ ಸಾಗಿ ಒಂದು ಹಂತ ತಲುಪುವುದು ವಿಶ್ವವಿದ್ಯಾಲಯದಲ್ಲಿ!! ಹೀಗೆ ವಿಶ್ವವಿದ್ಯಾಲಯವೊಂದರಿಂದ ಪ್ರಾರಂಭವಾದ ಸೈಕಲ್ ಸವಾರಿ ಹೊರಟಿದ್ದು ಜವಾಹರ್ ನವೋದಯ ವಿದ್ಯಾಲಯಕ್ಕೆ (ಜೆ.ಎನ್.ವಿ). ನಿಜಕ್ಕೂ ಈಗಿನ ಜೀವನದಿಂದ ಬಾಲ್ಯದ ಕಡೆಗಿನ ಪಯಣ……..
 
೨೫ ಜನ ಸ್ವಯಂಸೇವಕರೊಂದಿಗೆ ೨೨ ಕಿಲೋ ಮೀಟರ್ ಉದ್ದದ ಸೈಕಲ್ ಸವಾರಿ ಪ್ರಾರಂಭವಾಗುವ ಹೊತ್ತಿಗೆ ನಿಗದಿತ ಸಮಯ ದಾಟಿತ್ತು, ಭಾನುವಾರದ ಬೆಳಗಿನ ಸೂರ್ಯನ ಬಿಸಿಲು ಚುರುಗುಟ್ಟುತ್ತಿತ್ತು. ಜಿ.ಕೆ.ವಿ.ಕೆ ಯಿಂದ ಹೊರಟು, ಅಮೃತಪುರ, ಥಣಿಸಂದ್ರ, ಕಣ್ಣೂರು, ಚಕ್ಕಲೆಟಿ ಮಾರ್ಗದ ಮೂಲಕ ಸಾಗಿ ಜವಾಹರ್ ನವೋದಯ ವಿದ್ಯಾಲಯ ತಲುಪುವುದು ಸವಾರಿಯ ಅಂತ್ಯ. ಮಾರ್ಗದ ಮಧ್ಯ ಪ್ರತಿ ೩-೪ ಕಿ.ಮೀ. ಗೆ ಒಂದರಂತ, ಸೈಕಲ್ ಸವಾರರ ದಣಿವು ತಣಿಸಲು, ಸಹಾಯ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಸವಾರರ ಸುರಕ್ಷತೆಯ ದೃಷ್ಟಿಯಿಂದ ವೈದ್ಯರಿರುವ ಕಾರೊಂದು ಸವಾರರ ಜೊತೆಯಲ್ಲಿಯೇ ಚಲಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ರೀತಿಯ ತೊಂದರೆಯಾಗದೆ, ಅವಘಡ ಸಂಭವಿಸದೆ, ಮರ ಕಡಿದು, ನೆರಳಿನ ಸುಳಿವಿಲ್ಲದಂತೆ ಮಾಡಿದ್ದ ರಸ್ತೆಯಲ್ಲಿ ಸೈಕಲ್ ತುಳಿದು ಬಂದು ಜೆ.ಎನ್.ವಿ ತಲುಪಿದ ಎಲ್ಲಾ ಸೈಕಲ್ ಸವಾರರಿಗೂ, ಜೆ.ಎನ್.ವಿ ಯ ವಿದ್ಯಾರ್ಥಿಗಳು ಮಾಡಿದ್ದ ಕೈತೋಟದ ನೆರಳುತಂಪಿನ ಸ್ವಾಗತವನ್ನೇ ಕೋರಿ, ಬಂದವರ ದಣಿವಾರಲು ಸಹಾಯ ಮಾಡಿತು.


ನವೋದಯದ ಹಳೆಯ ವಿದ್ಯಾರ್ಥಿಗಳು ನವೋದಯ ವಿದ್ಯಾಲಯದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡು ಖುಷಿಪಟ್ಟರೆ; ಜೊತೆಯಲ್ಲಿದ್ದ ಉಳಿದವರು ತಮ್ಮ ತಮ್ಮ ಬಾಲ್ಯದ ಜೀವನವನ್ನು ನೆನೆದರು.

ಎಲ್ಲರ ಆಯಾಸ ಕಳೆದು, ಉಪಾಹಾರ ಮುಗಿಸಿದ ನಂತರ ಅಶ್ವಥ್ ರವರು ಎಲ್ಲರನ್ನೂ ಉದ್ದೇಶಿಸಿ ಆಡಿದ ಮಾತುಗಳು ತ್ರಿಕಾಲಗಳಸಂಗಮದಂತಿತ್ತು. ಅವರ ಮಾತುಗಳಲ್ಲಿ, ಅವಿರತದ ಹಿಂದಿನ ಕಾರ್ಯಗಳ ಒಂದು ಸಣ್ಣ ಅವಲೋಕನ, ಈಗಿನ ಕಾರ್ಯಗಳ ಸಮಾಲೋಚನ ಹಾಗೂ ಮುಂದಿನ ಕಾರ್ಯಗಳ ಅನಾವರಣವಿತ್ತು. ಅವಿರತದ ನೋಟ್ ಪುಸ್ತಕ ವಿತರಣೆಯ ಕಾರ್ಯವನ್ನು ಬೆಳೆಸಲು, ಧೃಡಗೊಳಿಸಲು, ’ನನ್ನ ಶಾಲೆ, ನನ್ನ ಹೆಮ್ಮೆ’ ಎಂದು ಅವರು ನೀಡಿದ ಹೊಸ ವ್ಯಾಖ್ಯಾನ ನಿಜಕ್ಕೂ ಅರ್ಥಪೂರ್ಣವಾದದ್ದು.
 
ಆ ನಂತರ ನಡೆದದ್ದೆಲ್ಲಾ ಜೆ.ಎನ್.ವಿ.ಯ ಮಕ್ಕಳೊಂದಿಗಿನ ಮನೋರಂಜನೆಯ ಕಾರ್ಯಕ್ರಮಗಳೇ…..ರಸಪ್ರಶ್ನೆ, ಹರಟೆ, ಹಾಸ್ಯ ಮತ್ತು ಹಾಡು. ಮಕ್ಕಳಂತೆ ಸೈಕಲ್ ತುಳಿದು ಶಾಲೆಗೆ ಹೋಗಿ, ಅವರೊಂದಿಗೆ ಬೆರೆತು ನಮ್ಮ ಬಾಲ್ಯದ ದಿನಗಳನ್ನು ನೆನೆದು, ನಾವೂ ಮಕ್ಕಳಾಗಿ, ಇಂದಿನ ಮಕ್ಕಳ – ಅದರಲ್ಲೂ ಹಿಂದುಳಿದ ಶಾಲೆಗಳ / ಗ್ರಾಮಾಂತರ ಪ್ರದೇಶದ ಶಾಲೆಗಳ ಮಕ್ಕಳ ಅವಶ್ಯಕತೆಗಳನ್ನು ಚರ್ಚಿಸಿ, ಅದರ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವ ಸಂಕಲ್ಪ ತೊಡುವ ಮೂಲಕ ಅವಿರತ ತನ್ನ ವಿಶಿಷ್ಟತೆಯನ್ನು ಮೆರೆದಿದೆ. ಅಷ್ಟೇ ಅಲ್ಲದೆ, ಅವಿರತದ ಸದಸ್ಯರ ಬಾಂಧವ್ಯ ಬೆಸೆಯುವಲ್ಲಿ ಸಹಕರಿಸಿದ ಈ ಕಾರ್ಯಕ್ರಮವು, ಒಬ್ಬರ/ತಂಡದ ಪ್ರಯತ್ನಕ್ಕೆ, ಮತ್ತೊಬ್ಬರ/ಎಲ್ಲರ ಸಹಕಾರ ದೊರೆತಾಗ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಂತಿತ್ತು.
 
ಕಾರ್ಯಕ್ರಮವನ್ನು ರೂಪಿಸುವಲ್ಲಿ, ಭಾಗವಹಿಸುವವರನ್ನು ಸಂಘಟಿಸುವುದರಲ್ಲಿ ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ (ಸವಾರರಿಗೂ, ಸ್ವಯಂ ಸೇವಕರಿಗೂ) ತಂಡದ ಪರವಾಗಿ ಮನ:ಪೂರ್ವಕ ಧನ್ಯವಾದಗಳು.


ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಲಿ, ತಂಡದ ಬಾಂಧವ್ಯ ಧೃಡವಾಗಲಿ, ಅವಿರತ, ನಾಡಿಗಾಗಿ ನಿರಂತರವಾಗಲಿ