ಕಥೆ : ಇರುವುದೆಲ್ಲವ ಬಿಟ್ಟು !!
ಆಗ ತಾನೇ ವೇದಾಧ್ಯಯನ ಎಲ್ಲಾ ಮುಗಿಸಿ ಊರಿನ ದೇವಸ್ಥಾನದ ಅರ್ಚನೆಯ ಉಸ್ತುವಾರಿಯನ್ನು ತಂದೆಯಿಂದ ವಹಿಸಿಕೊಂಡಿದ್ದ ಸುಬ್ಬಾ ಶಾಸ್ತ್ರಿಗಳ ಮಗ ಗಪ್ಪತಿ, ಆವತ್ತು ಒಂದು ನಿರ್ಧಾರಕ್ಕೆ ಬಂದಿದ್ದ. ‘ ಈ ಊರಿನ ಸಹವಾಸ ಸಾಕಾಗಿದೆ ದೇವಸ್ಥಾನದಲ್ಲಿ ದಿನ ಪೂರ್ತಿ ಪೂಜೆ ಮಾಡಿದ್ರೂ ನೂರು ರೂಪಾಯಿ ಹುಟ್ಟೋದು ಕಷ್ಟ. ಹೊರಗಡೆ ಪುರೋಹಿತ್ಯ ಜೊತೆಗೆ ಮಾಡೋಣವೆಂದರೆ ಅದಕ್ಕೆ ಉಳಿದವರ ಪೈಪೋಟಿ. ಹೀಗೆ ಮುಂದುವರಿದರೆ ಜೀವನ ಸಾಗಿಸೋದು ಹೇಗೆ?’ ಎನ್ನುತ್ತ ವಿಷಯವನ್ನು ಸುಬ್ಬಾ ಶಾಸ್ತ್ರಿ ಗಳ ಹತ್ತಿರ ಪ್ರಸ್ತಾಪಿಸಿದ. “ಅದೆಲ್ಲಾ ಸಾಧ್ಯವಿಲ್ಲದ ಮಾತು. ತಲೆ ತಲಾಂತರಗಳಿಂದ ನಮಗೆ ಇರೋ ದೇವಸ್ಥಾನದ ಪೂಜೆ ಬಿಡಲು ನಿನಗೆ ತಲೆ ಏನಾದ್ರೂ ಕೆಟ್ಟಿದೆಯ? ಜೊತೆಗೆ ತೋಟ ಗದ್ದೆ ಎಲ್ಲಾ ಇದೆ’ ಎನ್ನುತ್ತ ಸಿಟ್ಟಿನಿಂದ ಶಾಸ್ತ್ರಿಗಳು ಗಪ್ಪತಿಯನ್ನು ಬಯ್ಯತೊಡಗಿದರು. ‘ಇಲ್ಲಿನ ಆದಾಯ ಏನೂ ಇಲ್ಲಪ್ಪ ಅಲ್ಲದೆ ವೇದಾಧ್ಯಯನ ಎಲ್ಲಾ ಮುಗಿಸಿದ ನನ್ನ ಯೋಗ್ಯತೆಗೆ ಈ ದೇವಸ್ಥಾನದ ಅರ್ಚನೆ ತಕ್ಕುದಲ್ಲ. ಹಾಗಾಗಿ ನಾನು ಇಲ್ಲಿಂದ ಹೊರಟೆ’ ಎನ್ನುತ್ತ ಗಪ್ಪತಿ ತನ್ನ ಬಟ್ಟೆ ಬರೆ ಎಲ್ಲಾ ತುಂಬಿಕೊಂಡು, ಶಾಸ್ತ್ರಿಗಳು, ಅವನ ತಾಯಿ ಎಷ್ಟು ಬೇಡಿಕೊಂಡರೂ ಕೇಳದೆ ಅಲ್ಲಿಂದ ಹೊರಡಲು ಸಿದ್ದವಾದ.
ಆಗಲೇ ತನ್ನ ಪಕ್ಕದೂರಿನ ಸ್ನೇಹಿತರಿಂದ ಸಾಕಷ್ಟು ಕೇಳಿ ತಿಳಿದು ಕೊಂಡಿದ್ದ ಗಪ್ಪತಿ, ‘ಗೋವ’ ದ ಕಡೆ ತೆರಳಲು ನಿರ್ಧರಿಸಿದ. ಅಲ್ಲಿ ಪುರೋಹಿತರಿಗೆ ತುಂಬಾ ಬೇಡಿಕೆ ಇದೆಯಂತೆ. ಅದರಲ್ಲೂ ವೇದಾಧ್ಯಯನ ಮಾಡಿದರಂತೂ ಮುಗಿಯಿತು. ಎಂದೆಲ್ಲಾ ಕೇಳಿದ್ದ ಗಪ್ಪತಿ ಜಾಸ್ತಿ ಯೋಚಿಸದೆ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದ. ಇನ್ನು ಸದ್ಯಕ್ಕೆ ಅಲ್ಲಿ ಉಳಿದು ಕೊಳ್ಳಲು ಹೇಗಿದ್ರೂ ನಮ್ಮ ಕಡೆಯ ಜನಗಳೇ ಇದ್ದಾರೆ. ಪಕ್ಕದೊರಿನ ಕೆಲವು ಪುರೋಹಿತರೂ ಇದ್ದಾರೆ. ಅವರ ಫೋನ್ ನಂಬರ್ ಸಹ ಇದೆ. ಇನ್ನೇನು ಮುಗಿತು ಎನ್ನುತ್ತ ಟಿಕೆಟ್ ಪಡೆದು ‘ಮಡಗಾಂವ್’ ಕಡೆ ಹೋರಡೋ ರೈಲಿಗೆ ಕಾಯತೊಡಗಿದ.
ಅದೇ ಮೊದಲ ಸಲ ರೈಲು ಹತ್ತಿದ್ದ ಗಪ್ಪತಿಗೆ ಅದೇನೋ ಹೊಸ ಅನುಭವ. ಬಸ್ಸಿಗಿಂತ ಇದು ಎಷ್ಟೋ ಆರಾಮಪ್ಪ. ಅಲ್ಲದೆ ಟಿಕೆಟ್ ದರನೂ ಕಡಿಮೆ. ಎಂದೆಲ್ಲಾ ಮನಸ್ಸಿನಲ್ಲೇ ಎಣಿಸತೊಡಗಿದ. ಕುಮಟ ದಿಂದ ಹೊರಟ ರೈಲು ಅಘನಾಶಿನಿ ನದಿ, ಗೋಕರ್ಣ ದಾಟಿ ಕಾರವಾರದಕಡೆ ಸಾಗಿತ್ತು. ಈ ಕಡೆ ಹಸಿರು ಗದ್ದೆಗಳು,ಅಡಿಕೆ ತೋಟಗಳು. ಆ ಕಡೆ ಅನತಿ ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಮರಗಳ ಮರೆಯಲ್ಲಿ ಕಾಣಿಸುವ ಅರಬ್ಬೀ ಸಮುದ್ರ. ಕೆಲವೊಮ್ಮೆ ತುಂಬಿ ಹರಿಯುವ ನದಿ,ಹಳ್ಳಗಳ ಮೇಲಿನ ಸೇತುವೆಯ ಮೇಲೆ ನಿಧಾನವಾಗಿ ಸಿಳ್ಳೆ ಹಾಕುತ್ತ ಸಾಗುವ ರೈಲು. ಅಲ್ಲಿಲ್ಲಿ ಗುಡ್ಡ ಗಳನ್ನು ಸೀಳಿ ಕೊರೆದ ಸುರಂಗದಲ್ಲಿ ನುಗ್ಗುವಾಗ ಅದರ ಜೊತೆಗೇ ಒಟ್ಟಿಗೇ ರೈಲಿನೂಳಗೆ ನುಗ್ಗುವ ಧೂಳು, ಹೊಗೆ. ಹೀಗೆ ಗಪ್ಪತಿಗೆ ಇದೊಂದು ಹೊಸ ಅನುಭವವಾಗಿತ್ತು. ಸುರಂಗದ ಕತ್ತಲೆ, ಧೂಳಿಂದ ರೈಲು ಒಮ್ಮೆಗೆ ಹೊರಬಂದಾಗಲಂತೂ ತನ್ನನ್ನು ಗಪ್ಪತಿ ಅದಕ್ಕೆ ಹೋಲಿಕೆ ಮಾಡಿ ತಾನು ಕತ್ತಲೆಯಿಂದ ಬೆಳೆಕಿಗೆ ಸಾಗುತ್ತಿದ್ದೇನೆ ಎಂದು ಮನಸ್ಸಿನಲ್ಲೇ ಯೋಚಿಸಿದ್ದೂ ಉಂಟು.
ರೈಲು ಮಡಗಾಂವ್ ತಲುಪಲು ಎರಡುವರೆ ಗಂಟೆ ತೆಗೆದುಕೊಂಡಿತು. ಆಗಲೇ ಮಧ್ಯಾಹ್ನವಾಗಿತ್ತಾದ್ದರಿಂದ ಗಪ್ಪತಿ ಅಲ್ಲೇ ಊಟ ಮುಗಿಸಿ ಅಲ್ಲಿಂದ ಹತ್ತಿರದ ತನ್ನ ಸ್ನೇಹಿತರಿರುವ ದೇವಸ್ಥಾನಗಳಿಗೆ ಹೆಸರಾದ ‘ಪೋಂಡ’ ಪಟ್ಟಣಕ್ಕೆ ಹೊರಡಲು ಸಿದ್ದನಾದ. ಆಗಲೇ ಫೋನ್ ಮಾಡಿ ಹೇಗೆ ಅಲ್ಲಿಗೆ ತಲುಪಬೇಕೆಂದು ತಿಳಿದುಕೊಂಡಿದ್ದರಿಂದ, ಅಲ್ಲಿನ ಮಹಾಲಕ್ಷ್ಮಿ ದೇವಸ್ತಾನದ ಸುತ್ತ ಮುತ್ತ ವಾಸವಾಗಿದ್ದ ಸ್ನೇಹಿತರ ಜೊತೆ ಸೇರುವುದು ಅಷ್ಟೊಂದು ಕಷ್ಟವಾಗಲಿಲ್ಲ. ಕಷ್ಟ ಸುಖ ವಿಚಾರಿಸಿದ ಮೇಲೆ ಎಲ್ಲರೂ “ನೀನು ಸರಿಯಾದ ನಿರ್ಧಾರ ಮಾಡಿದ್ದಿಯ,ಮುಂದೆ ನೋಡು ನಿನ್ನ ಜೀವನ ಹೇಗೆ ಬದಲಾಗುತ್ತದೆ. ಊರಲ್ಲೇ ಇದ್ದಿದ್ರೆ ಅದೇ ಹರುಕು ಪಂಚೆ, ಮಡಿ ಉಟ್ಟಿಕೊಂಡು ಜೀವನ ಪೂರ್ತಿ ಒಂದು ರೂಪಾರಿ, ಎರಡು ರೂಪಾಯಿಗೆ ತೃಪ್ತಿ ಪಡಬೆಕಾಗಿತ್ತಷ್ಟೇ. ನೀನು ವೇದ ಜೋತಿಷ್ಯ ಎಲ್ಲಾ ಬೇರೆ ಓದಿದ್ದೀಯ ಮುಂದೆ ನೋಡು ನಿನ್ನ ಅದೃಷ್ಟ ಹೇಗೆ ಬದಲಾಗುತ್ತದೆ”. ಎನ್ನುತ್ತ ಎಲ್ಲರೂ ಗಪ್ಪತಿಯನ್ನು ಹುರುದುಂಬಿಸಿದರು.ಗಪ್ಪತಿಯೂ ಅವರೆಲ್ಲರ ವೈಭೋಗ ನೋಡಿ ಮನಸ್ಸಲೇ ಖುಷಿ ಪಟ್ಟ.
ಆರಂಭದ ದಿನಗಳಲ್ಲಿ ಅಲ್ಲಿನ ಭಾಷೆ, ಊಟ ಎಂದೆಲ್ಲಾಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ನಂತರದಲ್ಲಿ ಎಲ್ಲವೂ ಗಪ್ಪತಿಗೆ ಒಗ್ಗತೊಡಗಿತು. ಅಲ್ಪ ಸ್ವಲ್ಪ ಕೊಂಕಣಿ, ಹಿಂದಿ ಕಲಿತದ್ದರಿಂದ ಗಪ್ಪತಿ ಈಗ ವ್ಯವಹರಿಸುವುದು ಮತ್ತೂ ಸುಲಭವಾಗಿತ್ತು. ಪೂಜೆ, ಪರಾಯಾಣ, ತಿಥಿ, ಹೋಮ, ಹವನ ಹೀಗೆ ಗಪ್ಪತಿ ಬಿಡುವಿಲ್ಲದವನಾಗಿದ್ದ. ದಕ್ಷಿಣೆ,ದಾನ ಎಲ್ಲಾ ಸೇರಿಸಿ ಇನ್ನೂರು, ಕೆಲವೊಮ್ಮೆ ಮುನ್ನೂರು ಹೇಗೆ ಗಪ್ಪತಿಯ ಸಂಭಾವನೆ ಸಾಗಿತ್ತು. ಊರಿನಲ್ಲಿ ಐವತ್ತು ಹೆಚ್ಚೆಂದರೆ ನೂರು ರೂಪಾಯಿಯ ಸಂಭಾವನೆ, ಈಗ ಮನೆ ಬಾಡಿಗೆ, ಆ ಖರ್ಚು ಈ ಖರ್ಚು ಅಂದರೂ ನೂರು ರೂಪಾಯಿಗಿಂತ ಜಾಸ್ತಿ ಉಳಿಯುತ್ತದೆ. ಈಗ ಶುರು ಅಷ್ಟೆ, ಮುಂದೆ ಸ್ವಲ್ಪ ಹೆಸರು ಬೆಳೆದಂತೆ ಮತ್ತಷ್ಟು ಅದೃಷ್ಟ ಖುಲಾಯಿಸುತ್ತದೆ ಎಂದೆಲ್ಲಾ ಯೋಚಿಸಿ ಗಪ್ಪತಿ ಕೆಲವೊಮ್ಮೆ ಮನಸ್ಸಲ್ಲೇ ಖುಷಿಪಟ್ಟಿದ್ದೂ ಉಂಟು. ಕೆಲವೊಮ್ಮೆ ಊರಿನಲ್ಲಿದ್ದ ತಾಯಿಗೆ, ಸ್ನೇಹಿತರಿಗೆ ಇದಕ್ಕೇ ಸ್ವಲ್ಪ ಬಣ್ಣ ಬಳಿದು ಹೇಳಿ ಮತ್ತೂ ಸಂತೋಷ ಪಟ್ಟಿದ್ದೂ ಉಂಟು. ಅಂತೂ ಗಪ್ಪತಿ, ಬೇರೆ ಊರಲ್ಲಿ ಒಂದು ಸ್ಥಿತಿಗೆ ಬಂದು ತಲುಪಿದ್ದ. ಕೆಲವೇ ಸಮಯದಲ್ಲಿ ಹಲವು ವರ್ಷಗಳಿಂದ ಅಲ್ಲಿದ್ದ ಎಲ್ಲಾ ಸ್ನೇಹಿತರನ್ನೂ ಸಂಭಾವನೆಯಲ್ಲಿ ಅಲ್ಲದೆ ವಿದ್ಯೆ.ಬುದ್ಧಿ ಯಿಂದಲೂ ಹಿಂದೆ ಹಾಕಿದ್ದ. ಇನ್ನೂ ಕೆಲವೇ ವರ್ಷದಲ್ಲಿ ನೀನು ಇಡೀ ಗೋವಾಕ್ಕೇ ಜನಪ್ರಿಯ ಆಗ್ತೀಯ ಎಂದು ಸ್ನೇಹಿತರೆಲ್ಲ ಬಹಳ ಸಲ ಹೊಗಳಿದ್ದೂ ಉಂಟು. ಇದನ್ನೆಲ್ಲ ಕೇಳಿದ ಗಪ್ಪತಿಗೆ ಹೊಸ ಹೊಸ ಕನಸುಗಳು, ಆಸೆಗಳು ಮನಸ್ಸಿನಲ್ಲಿ ಸೃಷ್ಟಿ ಯಾಗಿತ್ತು.
ದಿನಕಳೆದಂತೆ ಗಪ್ಪತಿಯ ಜನಪ್ರಿಯತೆ ಅಂದುಕೊಂಡಷ್ಟು ಏರದಿದ್ದರೂ ಅಲ್ಪ ಸ್ವಲ್ಪ ಏರಿತ್ತು. ‘ಪೋಂಡ’ ಪಟ್ಟಣದಲ್ಲಿ ಸ್ವಲ್ಪ ಹೆಸರು ಬಂದಿತ್ತು. ಆದರೂ ಈಗ ಬೇರೆ ಕಡೆಯಿಂದ ಮತ್ತಷ್ಟು ಅರ್ಚಕರು ಈಗಿರುವವರ ಜೊತೆ ಸೇರಿ ಅವರಲ್ಲೇ ಸ್ಪರ್ಧೆ ಉಂಟಾದ್ದರಿಂದ ಮೊದಲಿಗಿಂತಲೂ ಗಪ್ಪತಿಗೆ ಸ್ವಲ್ಪ ಕಷ್ಟವಾಗಿತ್ತು. ಈಗ ಸ್ವಲ್ಪ ಜಾಸ್ತಿ ಪುರೋಹಿತ್ಯ ಇದ್ದರೂ ಸಂಭಾವನೆ ಅಷ್ಟಾಗಿ ಬೆಳೆದಿರಲಿಲ್ಲ. ಆದರೂ ಗಪ್ಪತಿಗೆ ಅದು ತನ್ನ ಊರಿಗಿಂತಲೂ ಎಷ್ಟೋ ಜಾಸ್ತಿ ಅಂತ ಅನಿಸಿದ್ದರಿಂದ ಖುಷಿಯಾಗಿಯೇ ಇದ್ದ. ಹೀಗೆ ಗಪ್ಪತಿಯ ಬಿಡುವಿಲ್ಲದ ಜೀವನ ಸಾಗಿ ಆಗಲೇ ಒಂದು ವರ್ಷದ ಹತ್ತಿರಕ್ಕೆ ಬಂದಿತ್ತು. ಬರಿ ಪೋನಿನಲ್ಲೇ ಇಷ್ಟು ದಿನ ಊರಿನಲ್ಲಿದ್ದ ತಾಯಿ, ಒಂದೋ ಎರಡೋ ಬಾರಿ ಅಪ್ಪನ ಜೊತೆ ಮಾತನಾಡಿದ್ದ ಗಪ್ಪತಿಗೆ ಊರಿಗೆ ಹೋಗಿಬರುವ ಮನಸ್ಸಾಯಿತು.ಅಲ್ಲದೇ ಗಪ್ಪತಿಗೆ ಊರಿನಲ್ಲಿ ತನ್ನ ಸಾಧನೆಯ ಬಗ್ಗೆಯೂ ಹೇಳಿಕೊಳ್ಳಬೇಕಿತ್ತು. ಒಂದೆರಡು ದಿನದ ಪೂಜೆ,ಪಾರಾಯಣ ಎಲ್ಲಾ ಬದಿಗೊತ್ತಿ ಊರಿನ ಕಡೆ ಹೊರಡಲು ಗಪ್ಪತಿ ತಯಾರಿ ಮಾಡಿಕೊಂಡ.
ಮತ್ತೆ ಕೊಂಕಣ ರೈಲನ್ನು ಹತ್ತಿ ಊರಿನತ್ತ ಪ್ರಯಾಣ ಪ್ರಾರಂಭವಾಗಿತ್ತು. ಅದೇ ನದಿ, ಅದೇ ಸಮುದ್ರ, ಅದೇ ಸುರಂಗದ ಧೂಳು ಹೊಗೆ ಇದ್ದರೂ ಮೊದಲ ಸಲದ ರೈಲಿನ ಪ್ರಯಾಣದ ಉತ್ಸಾಹ ಈಗ ಇರಲಿಲ್ಲ. ಪರ ಊರಲ್ಲಿ ತನ್ನ ಸಾಧನೆ, ಊರಿನ ಪರಿಸ್ಥಿತಿ, ಹೀಗೆ ಹತ್ತು ಹಲವು ಯೋಚನೆಗಳು ಗಪ್ಪತಿಯ ಮನಸ್ಸನ್ನು ಹೊಕ್ಕಿತ್ತು. ರೈಲಿಂದ ಇಳಿದು ಊರಿಗೆ ಹೋಗುವ ಬಸ್ಸನ್ನು ಹತ್ತಿ ಮನೆಯತ್ತ ಪ್ರಯಾಣ ಸಾಗಿತ್ತು.
ಬಸ್ಸಿನಿಂದ ಇಳಿದು ಒಂದೆರಡು ಮೈಲಿ ಇದ್ದ ಮನೆಯ ಕಡೆ ಗಪ್ಪತಿ ನಡೆಯ ತೊಡಗಿದ. ಇನ್ನೇನು ಮನೆಗೆ ಸ್ವಲ್ಪವೇ ದೂರ ಇದೆ ಎನ್ನುವಾಗ ಪಕ್ಕದ ಮನೆ ವಿನಾಯಕ, ಜೋರಾಗಿ ಶಬ್ದ ಮಾಡುತ್ತಾ ತನ್ನ ಮೋಟಾರು ಬೈಕಿನಲ್ಲಿ ಬರುತ್ತಿದ್ದದ್ದನ್ನು ನೋಡಿ ಗಪ್ಪತಿ “ಅರೆ ಇದ್ಯಾವಾಗ ತಗೊಂಡೆ” ಎಂದು ಆಶ್ಚರ್ಯದಿಂದ ಕೇಳಿದ. ವಿನಾಯಕ ಗಪ್ಪತಿಯ ಜೊತೆಗೆ ಓದಿದ್ದ. ಹೈಸ್ಕೂಲ್ ಮುಗಿದ ಮೇಲೆ ಅಲ್ಪ ಸ್ವಲ್ಪ ಮಂತ್ರ ಕಲಿತು. ಅಲ್ಲಿ ಇಲ್ಲಿ ಪುರೋಹಿತ್ಯ ಮಾಡಿ ಹೇಗೋ ಜೀವನ ಸಾಗಿಸ್ತಾ ಇದ್ದ. ಮೊದಲು ತೆಳ್ಳಗೆ ನರಪೇತಲನಂತೆ ಇದ್ದವ ಈಗ ಉಬ್ಬಿಕೊಂಡಿದ್ದ. ಜೊತೆಗೆ ದೊಡ್ಡದಾದ ಬೈಕ್ ಬೇರೆ, ಇದರ ಜೊತೆ ಕುತ್ತಿಗೆಗೆ ನೇತಾಡುತ್ತಿದ್ದ ಮೊಬೈಲ್, ಚಿನ್ನದ ಸರ. ಇದೆಲ್ಲಾ ನೋಡಿ ಗಪ್ಪತಿಗೆ ಆಶ್ಚರ್ಯವಾಗಿತ್ತು. “ಯಾವಾಗ ಬಂದೆ ಗಪ್ಪತಿ, ಹೇಗಿದ್ದೆ?” ಎನ್ನುತ್ತ ವಿನಾಯಕ ತನ್ನ ಗಾಡಿಯನ್ನು ನಿಲ್ಲಿಸಿದ. “ಇದೆಲ್ಲಾ ಏನು ಒಂದೇ ಸಲ ಇಷ್ಟೊಂದು ಬದಲಾಗಿ ಬಿಟ್ಟಿದ್ದಿಯ ಗುರ್ತೆ ಸಿಗದಷ್ಟು” ಎಂದು ಗಪ್ಪತಿ ಹೇಳುತ್ತಿದ್ದಂತೆ “ಅದಾ ನೀನು ಹೋದ್ಮೇಲೆ ಇಲ್ಲಿ ದೇವಸ್ಥಾನ ನೋಡ್ಕೊಳೋ ಸಲುವಾಗಿ ನನ್ನನ್ನ ನೇಮಿಸಿದ್ದ್ರು. ಅವಾಗ ನಿಂಗೆ ಗೊತ್ತಲ್ಲ ದೇವಸ್ಥಾನದ ಆದಾಯ. ಆಮೇಲೆ ನಂಗೆ ಹೀಗೆ ಮಾಡಿದ್ರೆ ಹೇಗೆ ಅಂತ ಅನಿಸ್ತು. ಬೆಂಗಳೂರು, ಗೋವ ಕಡೆ ನನ್ನ ಗೆಳೆಯರನ್ನೆಲ್ಲ ಸಂಪರ್ಕ ಮಾಡ್ದೆ. ಜೊತೆಗೆ ಗೋವಾದಲ್ಲಿ ನಮ್ಮೂರಿನ ಕಾಮತರು, ಬೆಂಗಳೂರಿನಲ್ಲಿ ಪಕ್ಕದೂರಿನ ಹೆಗ್ಡೆ ಇವರ ಜೊತೆಗೆಲ್ಲ ಮಾತಾಡಿ ದೇವಸ್ಥಾನದ ಬಗ್ಗೆ ಸ್ವಲ್ಪ ಪ್ರಚಾರ ಮಾಡಿಸ್ದೆ. ಹಾಗಾಗಿ ಗೋವ, ಮುಂಬಯಿ, ಬೆಂಗಳೂರು ಹಂಗೆ ಎಲ್ಲಾ ಕಡೆ ಇರೋ ನಮ್ಮ ಕಡೆ ಜನ ದೇವಸ್ಥಾನಕ್ಕೆ ಸಹಾಯ ಮಾಡಿದ್ರು. ಅಲ್ದೆ ಅಲ್ಲಿಂದ ಜನ ಆಗಾಗ ಬರಲು ಶುರು ಮಾಡಿದ್ರು. ಅದನ್ನ ನೋಡಿ ಸುತ್ತ ಮುತ್ತಲಿನ ಊರಿನ ಜನರೂ ಇನ್ನೂ ಬರತೊಡಗಿದ್ರು. ಈಗ ನೋಡು ನಮ್ಮ ದೇವಸ್ಥಾನ ಇಡೀ ತಾಲೂಕಿಗೆ ಫೇಮಸ್. ಪ್ರತೀದಿನ ಏನಾದ್ರೂ ಪೂಜೆ,ಪುನಸ್ಕಾರ. ಜೊತೆಗೆ ಅಡಿಕೆಗೆ, ತೆಂಗಿಗೆ ಈ ಸಾರ್ತಿ ಒಳ್ಳೆ ರೇಟ್ ಬೇರೆ. ನನ್ನ ನೋಡಿದ್ರೆ ಗೊತ್ತಾಗುತ್ತಲ್ಲ ” ಎನ್ನುತ್ತ ವಿನಾಯಕ ಹಲ್ಲು ಗಿಂಜಿದ.
ಗಪ್ಪತಿಗೆ ಒಮ್ಮೆಲೇ ಏನು ಹೇಳಲೂ ತೋಚದಂತಾಯಿತು. ತನ್ನ ಬಗ್ಗೆ ಹೇಳಬೇಕಾದದ್ದೆಲ್ಲ ಒಮ್ಮೆಲೇ ಮರೆತು ಹೋಯಿತು. “ಆಮೇಲೆ ಸಿಗುವ” ಎನ್ನುತ್ತ ಗಪ್ಪತಿ ಮನೆಯತ್ತ ಮುಖ ಮಾಡಿದ. ಇತ್ತ ವಿನಾಯಕನ ಗಾಡಿ ಮತ್ತೆ ಜೋರಾದ ಶಬ್ದ ಮಾಡುತ್ತ ದೇವಸ್ಥಾನದ ಕಡೆ ಸಾಗಿತು.
Comments
ಉ: ಕಥೆ : ಇರುವುದೆಲ್ಲವ ಬಿಟ್ಟು !!
ಉ: ಕಥೆ : ಇರುವುದೆಲ್ಲವ ಬಿಟ್ಟು !!
In reply to ಉ: ಕಥೆ : ಇರುವುದೆಲ್ಲವ ಬಿಟ್ಟು !! by Dr. pannag kamat
ಉ: ಕಥೆ : ಇರುವುದೆಲ್ಲವ ಬಿಟ್ಟು !!
ಉ: ಕಥೆ : ಇರುವುದೆಲ್ಲವ ಬಿಟ್ಟು !!