ಕಾಳಿಂಗ ಮರ್ಧನ

ಕಾಳಿಂಗ ಮರ್ಧನ

ಚಿತ್ರ

 ಎತ್ತರೆತ್ತರದ ಮರ ಗಿಡಗಳು, ಸಮೃದ್ಧವಾದ ಕಾಡು, ಹುಲ್ಲುಗಾವಲಿನಿಂದ ಆವೃತವಾಗಿದ್ದ ನಂದಗೋಕುಲದಲ್ಲಿ ಬರ ಬರುತ್ತಾ ಹಸಿರು ನಾಶವಾಗಿ ನಂದಗೋಕುಲ ಪಟ್ಟಣವಾಗುತ್ತಿತ್ತು. ಹುಲ್ಲೆಲ್ಲಾ ಒಣಗಿ ದನಕರುಗಳಿಗೆ ಮೇವಿಲ್ಲದಂತೆ ಆಯಿತು. ವನಪ್ರಿಯನಾದ ಶ್ರೀಕೃಷ್ಣನು ಯಾವಾಗ ನಂದಗೋಕುಲ ಹಸಿರು ಕಳೆದುಕೊಂಡು ಒಣಗತೊಡಗಿತೋ ಆಗ ತನ್ನ ಕುಟುಂಬದನಕರುಗಳೊಂದಿಗೆ ಬೃ೦ದಾವನಕ್ಕೆ ಪಯಣ ಬೆಳೆಸಿದರು.

ಮಥುರಾದಲ್ಲಿ ಹುಟ್ಟಿನಂದಗೋಕುಲದಲ್ಲಿ ಆಡಿ ಲೀಲೆಗಳನ್ನು ತೋರಿದ ಬಾಲಗೋಪಾಲ ಈಗ ತನ್ನ ಲೀಲೆಗಳನ್ನು ತೋರಲು ಬೃಂದಾವನಕ್ಕೆ ಆಗಮಿಸಿದ್ದಾನೆ. ಬೃಂದಾವನ ಬೆಟ್ಟಗುಡ್ಡಗಳುಹಚ್ಚ ಹಸಿರು ತುಂಬಿಕೊಂಡುಯಮುನಾ ನದಿಯಿಂದ ನಳನಳಿಸುತ್ತಿತ್ತು. ಬೃಂದಾವನಕ್ಕೆ ಬಂದ ಬಾಲಗೋಪಾಲ ಶ್ರೀ ಕೃಷ್ಣ ಪ್ರತಿನಿತ್ಯ ತನ್ನ ಅಣ್ಣನಾದ ಬಲರಾಮನೊಡನೆ ಹಸುಕರುಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದನು. ಹೇಗೆ ಒಂದೆರಡು ಬಾರಿ ದನ ಮೇಯಿಸಲು ಹೋಗಿದ್ದ ಶ್ರೀಕೃಷ್ಣ ಅಲ್ಲಿಗೆ ಬಂದ ಕಂಸನ ಕಡೆಯವರಾದ ಬಕಾಸುರ, ವತ್ಸಾಸುರ ಮುಂತಾದ ಅಸುರರನ್ನೆಲ್ಲಾ ಸಂಹಾರ ಮಾಡಿದ.

ಹೀಗೆ ಸಾಗುತ್ತಿರಲು ಯಮುನಾ ನದಿಯನ್ನು ಆಶ್ರಯಿಸಿದ್ದ ಪಶುಗಳು, ಪ್ರಾಣಿಗಳು ಇದ್ದಕ್ಕಿದ್ದಂತೆ ಒಂದಾದ ಮೇಲೆ ಒಂದು ಸಾಯುತ್ತಿದ್ದವು. ಇದಕ್ಕೆ ಕಾರಣ ಯಮುನಾ ನದಿಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಎಂಬ ಸರ್ಪ. ಕಾಳಿಂಗ ಸರ್ಪ ಗಾಢ ಕಪ್ಪು ವರ್ಣದಲ್ಲಿದ್ದು, ೧೦೧ ಹೆಡೆಗಳ, ವಿಷಪೂರಿತವಾದ ಬೃಹದಾಕಾರದ ಸರ್ಪ. ಆ ಸರ್ಪ ಯಮುನೆಯಲ್ಲಿ ಸೇರಿ ನದಿಯನ್ನು ವಿಷಪೂರಿತವಾಗಿ ಮಾಡಿಬಿಟ್ಟಿತ್ತು.

ಇದನ್ನು ಅರಿತ ಪರಮಾತ್ಮನು ಒಂದು ದಿನ ದನ ಮೇಯಿಸಲು ಹೋಗುವಾಗ ಬಲರಾಮನನ್ನು ಬಿಟ್ಟು ಒಬ್ಬನೇ ಹೊರಟಿದ್ದಾನೆ. ಕಾಳಿಂಗನನ್ನು ಮರ್ಧನ ಮಾಡಲು ನಿರ್ಧರಿಸಿದ್ದರಿಂದಲೇ ಬಲರಾಮನನ್ನು ಬಿಟ್ಟು ಹೊರಟಿದ್ದಾನೆ. ಏಕೆಂದರೆ ಬಲರಾಮ ಕೂಡ ಸರ್ಪದ ಅಂಶದವನು ಅಂದರೆ ಪೂರ್ವದಲ್ಲಿ ಶೇಷದೇವರ ಅವತಾರ. ಒಂದು ಸರ್ಪವನ್ನು ಮರ್ಧನ ಮಾಡಬೇಕಾದರೆ ಇನ್ನೊಂದು ಸರ್ಪ ಇರಬಾರದೆಂದು ಬಿಟ್ಟು ಬಂದಿದ್ದಾನೆ.

ಸೀದಾ ಯಮುನೆಯ ಮಡುವಿಗೆ ಬಂದ ಶ್ರೀಕೃಷ್ಣ ಒಮ್ಮೆ ಯಮುನೆಯನ್ನು ನೋಡಿದ. ಕಾಳಿಂಗನ ವಿಷದಿಂದ ಯಮುನೆ ಕಪ್ಪಾಗಿದ್ದಾಳೆ. ಅಲ್ಲೇ ಮಡುವಿನ ಪಕ್ಕದಲ್ಲಿದ್ದ ಎತ್ತರದ ಕದಂಬ ವೃಕ್ಷವನ್ನು ಏರಿದ ಕೃಷ್ಣ ತಾನು ಮೇಲೆ ಹೊದ್ದಿದ್ದ ವಸ್ತ್ರವನ್ನು ತೆಗೆದು ತನ್ನ ಸೊಂಟಕ್ಕೆ ಬಿಗಿದು ಅಲ್ಲಿಂದ ತುಂಬಿ ಹರಿಯುತ್ತಿದ್ದ ಯಮುನೆಗೆ ಹಾರಿದ. ಕೃಷ್ಣ ಯಮುನೆಗೆ ಹಾರಿದ ತಕ್ಷಣ ಕಾಳಿಂಗ ತನ್ನ ಬೃಹತ್ ಮೈಯಿಂದ ಕೃಷ್ಣನನ್ನು ಬಳಸಿ ಬಂಧಿಸಿತು. ಆರು ವರ್ಷ್ಟದ ಪುಟ್ಟ ಬಾಲಕ ಶ್ರೀಕೃಷ್ಣ ಆ ಬಂಧನವನ್ನು ಕ್ಷಣಕಾಲದಲ್ಲಿ ಬಿಡಿಸಿಕೊಂಡು ಕಾಳಿಂಗನ ಬಾಲವನ್ನು ತನ್ನ ಎಡಗೈಯಲ್ಲಿ ಹಿಡಿದು ನೆಗೆದು ಕಾಳಿಂಗನ ಹೆಡೆಯ ಮೇಲೆ ನಿಂತುಕೊಂಡ.

ಕಾಳಿಂಗ ಆಕ್ರೋಶದಿಂದ ತನ್ನ ಎಲ್ಲಾ ಹೆಡೆಗಳನ್ನು ಎತ್ತಲು ಶುರು ಮಾಡಿತು. ಯಾವ ಹೆಡೆ ಎತ್ತುತ್ತಿತ್ತೋ ಅದೆಲ್ಲವನ್ನು ತುಳಿಯುತ್ತ ಒಂದರಿಂದ ಮತ್ತೊಂದಕ್ಕೆ ಹಾರುತ್ತಿದ್ದ. ಇತ್ತ ಮನೆಯಲ್ಲಿ ಇಷ್ಟು ಹೊತ್ತಾದರೂ ಮನೆಗೆ ಬಾರದ ಶ್ರೀಕೃಷ್ಣನ ಬಗ್ಗೆ ನಂದಗೋಪ ಹಾಗೂ ಯಶೋಧಾ ದೇವಿ ಕಂಗಾಲಾಗಿದ್ದರು. ಅದೂ ಅಲ್ಲದೆ ಬಲರಾಮನನ್ನು ಬೇರೆ ಬಿಟ್ಟು ಹೋಗಿದ್ದಾನೆ. ತಾವೇ ಹೋಗಿ ನೋಡಿಕೊಂಡು ಬರೋಣ ಎಂದು ಬಲರಾಮನನ್ನು ಮುಂದಿಟ್ಟುಕೊಂಡು ಹೊರಟರು. ಬಲರಾಮ ಏಕೆಂದರೆ ಪ್ರತಿದಿನ ಕೃಷ್ಣನ ಜೊತೆ ತಾನೇ ಹೋಗುತ್ತಿದ್ದ. ಆದ್ದರಿಂದ ಅವನಿಗೆ ದಾರಿ ತಿಳಿದಿದೆ ಎಂದು ಕರೆದುಕೊಂಡು ಹೊರಟರು.

ಇತ್ತ ಶ್ರೀ ಕೃಷ್ಣ ಲೀಲಾಜಾಲವಾಗಿ ಒಂದೊಂದೇ ಹೆಡೆಗಳನ್ನು ತುಳಿಯುತ್ತ ಹಾರುತ್ತ ನೆಗೆಯುತ್ತ ನಗುನಗುತ್ತ ನಿಂತಿದ್ದಾನೆ. ದೂರದಲ್ಲಿ ತನ್ನನ್ನು ಹುಡುಕಿಕೊಂಡು ತನ್ನ ಬಳಿ ಬರುತ್ತಿದ್ದ ತನ್ನ ಕುಟುಂಬದವರನ್ನು ಕಂಡು ಶ್ರೀಕೃಷ್ಣನಿಗೆ ಮತ್ತಷ್ಟು ಖುಷಿಯಾಗಿ ನರ್ತಿಸಲು ಶುರುಮಾಡಿದ. ಸುತ್ತಲೂ ರಂಗಮಂದಿರದಂತೆ ಇರುವ ಯಮುನಾ ನದಿ, ನದಿಯ ಮಧ್ಯದಲ್ಲಿ ಕಾಳಿಂಗನ ಹೆಡೆಯನ್ನೇ ರಂಗಸ್ಥಳ ಮಾಡಿಕೊಂಡು ಪರಮಾತ್ಮ ಅದ್ಭುತವಾಗಿ ನರ್ತಿಸುತ್ತಿದ್ದಾನೆ. ಸುತ್ತಲೂ ಕೃಷ್ಣನ ಮನೆಯವರು, ದನ ಕಾಯುವ ಹುಡುಗರು, ದನಕರುಗಳು ಎಲ್ಲರೂ ನಿಂತು ಕೃಷ್ಣನ ನರ್ತನ ನೋಡುತ್ತಿದ್ದಾರೆ. ಇಂಥಹ ಅದ್ಭುತ ನರ್ತನಕ್ಕೆ ಪಕ್ಕವಾದ್ಯ ಇರದಿದ್ದರೆ ಹೇಗೆ...

ಕೃಷ್ಣನ ನರ್ತನಕ್ಕೆ ಪಕ್ಕವಾದ್ಯ ನೀಡಲು ಬ್ರಹ್ಮಾದಿ ದೇವತೆಗಳೇ ಬೃಂದಾವನಕ್ಕೆ ಆಗಮಿಸಿದ್ದಾರೆ. ಚತುರ್ಮುಖ ಬ್ರಹ್ಮದೇವರು ಮೃದಂಗ ನುಡಿಸುತ್ತಿದ್ದರೆ, ಕೈಲಾಸದಿಂದ ರುದ್ರದೇವರು ಬಂದು ನರ್ತನಕ್ಕೆ ತಾಳ ಹಾಕುತ್ತಿದ್ದಾರೆ. ಕಿಂಪುರುಷ ಖಂಡದಿಂದ ಹಾರಿಬಂದ ಮುಖ್ಯಪ್ರಾಣದೇವರು ಗಾಯನ ಮಾಡುತ್ತಿದ್ದಾರೆ. ಎಂಥಹ ಅದ್ಭುತ ದೃಶ್ಯ ಸೃಷ್ಟಿಯಾಗಿತ್ತು ಬೃಂದಾವನದಲ್ಲಿ. 

ಅಷ್ಟರಲ್ಲಿ ಅಲ್ಲಿಗೆ ಬಂದ ನಾಗಪತ್ನಿಯರು ಕಾಳಿಂಗನ ತಪ್ಪನ್ನು ಮನ್ನಿಸಬೇಕೆಂದು ಕೃಷ್ಣನಲ್ಲಿ ಪ್ರಾರ್ಥಿಸಿದರು.  ಬೇಡಿ ಬರುವ ಭಕ್ತರ ತಪ್ಪುಗಳನ್ನು ಮನ್ನಿಸುವ ಪರಮಾತ್ಮ ಕಾಳಿಂಗನ ತಪ್ಪನ್ನು ಮನ್ನಿಸಿ ಕಾಳಿಂಗನನ್ನು ರಮಣಕ್ಯ ದ್ವೀಪಕ್ಕೆ ಕಳುಹಿಸಿದ. ಬಾಲಗೋಪಾಲ ನರ್ತನ ಮಾಡಬೇಕಾದರೆ ಕಾಳಿಂಗನ ಹೆಡೆಯ ಮೇಲೆ ಪರಮಾತ್ಮನ ಪಾದದ ಗುರುತುಗಳುಶಂಖ ಚಕ್ರಗಳ ಚಿಹ್ನೆಗಳು ಮೂಡಿದ್ದವು. ಇದರಿಂದ ನಿನಗೆ ಗರುಡನಿಂದಲೂ ಯಾವುದೇ ರೀತಿಯ ಅಪಾಯ ಬರುವುದಿಲ್ಲ ಎಂದು ತಿಳಿಸಿದ. 

(ಭಾಗವತದಲ್ಲಿ ಉಲ್ಲೇಖವಾಗಿರುವ ಶ್ರೀಕೃಷ್ಣನ ಲೀಲೆಗಳಿಂದ ಆಯ್ದ ಒಂದು ಭಾಗ ಕಾಳಿಂಗ ಮರ್ಧನ)

ಚಿತ್ರ ಕ್ರುಪೆ  ಃ ಅ೦ತರ್ಜಾಲ

Rating
Average: 5 (2 votes)

Comments