ಬಜೆಟ್ಟು ಮತ್ತು ಮಠ-ಮಾನ್ಯಗಳು

ಬಜೆಟ್ಟು ಮತ್ತು ಮಠ-ಮಾನ್ಯಗಳು

Comments

ಬರಹ

 ಆಯ-ವ್ಯಯದ ಲೆಕ್ಕಾಚಾರ, ಸರಕಾರೀ ಆಡಳಿತದ ಬಹುಮುಖ್ಯ ಆರ್ಥಿಕ ಪ್ರಕ್ರಿಯೆ; ಯಾವ ವಲಯಕ್ಕೆ ಎಷ್ಟು ಖರ್ಚು, ಯಾವ ಬಾಬಿಗೆ ಎಷ್ಟು ತೆರಿಗೆ ಎನ್ನುವುದನ್ನು ಮಹಾಜನತೆಗೆ ತಿಳಿಸುವ ಪವಿತ್ರ ಕಾರ‍್ಯಾಚರಣೆ. ಇದರಲ್ಲಿ, ಕೃಷಿ, ವಾಣಿಜ್ಯ, ಕೈಗಾರಿಕೆಗಳಂತೆ ಮಠ-ಮಾನ್ಯಗಳೂ ಖರ್ಚಿನ ಒಂದು ಬಾಬ್ತೇ? ಶಿವ, ಶಿವಾ! ಜನತೆಯನ್ನು ನೈತಿಕ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಮಠಗಳಿಗೆ ಬಜೆಟ್ ಅನುದಾನದ ಮೂಲಕ ರಾಜಕೀಯ ಭಂಡತನ-ಮಿಂಡತನಗಳನ್ನು ಮಾರಾಟ ಮಾಡುವ ಚಾಳಿಯನ್ನು ಸಭ್ಯ ಸಮಾಜ ಸಹಿಸಿಕೊಳ್ಳಬೇಕೇ? ಕೊಡುತ್ತೇವೆಂದು ಡಂಗೂರ ಸಾರಿಕೊಳ್ಳುವ ರಾಜಕಾರಣಿಗಳಿಗೇನೋ ನಾಚಿಕೆ, ಹೇಸಿಕೆ ಎರಡೂ ಇರುವುದಿಲ್ಲ. ಆದರೆ ಆ ಭಂಡತನ-ಮಿಂಡತನಗಳನ್ನು ಕೈ ಚಾಚಿ ಕೊಂಡುಕೊಳ್ಳುವ ಮಠಧೀಶ ಮಹೋದಯರಿಗಾದರೂ ಅಸಹ್ಯಪ್ರಜ್ಞೆ ಇಲವಲ್ಲಾ!
  ಕೆಲವು ವಿರಕ್ತ ಮಠಗಳ ಪರಮಗುರುಗಳೂ, ಸಾಕ್ಷಾತ್ ಗುರುಗಳೂ, ಜಂಗಮ ವೃತ್ತಿಯಿಂದ ರಾಗಿ-ಜೋಳ ಎತ್ತಿತಂದು ಗುರುಕುಲ ನಡೆಸುತ್ತಿದ್ದ ಉಲ್ಲೇಖ ಸಿಗುತ್ತದೆ; ಇಂದಿನ ಶತಾಯುಶಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳು ಸಹ, ತಮ್ಮ ಪ್ರಾಯದಲ್ಲಿ, ಎತ್ತಿನ ಬಂಡಿಯಲ್ಲಿ ಕೋರಣ್ಯತಂದು ವಿದ್ಯಾರ್ಥಿಗಳನ್ನು ಸಾಕಿದ್ದನ್ನು ಕಂಡವರಿದ್ದಾರೆ. ಅಂಥಾ ಬಸವ ಪರಂಪರೆಯವರನ್ನು ಜಾತಿಬೆಂಬಲವಾಗಿ ರಾಜಕೀಯಕ್ಕೆ ಬಳಸಿಕೊಳ್ಳುವುದು, ಈ ಹೇಯಕ್ಕೆ ಮಠಾಧಿಪತಿಗಳು ಬಗ್ಗುವುದು ಧಾರುಣ ಸಂಗತಿ.
 ಬಸವಣ್ಣನವರಿಗೂ ಅವರ ಹೆಸರು ಹೇಳಿಕೊಂಡು ಮನುಷ್ಯತ್ವಕ್ಕೆ ದ್ರೋಹ ಬಗೆಯುವ ಪರಂಪರೆಗೂ ಅಜ-ಗಜಾಂತರ. ಬಸವಣ್ಣನವರು ಹೊಣೆಗೇಡಿ ಸನ್ಯಾಸಿಯಲ್ಲ; ಮಠದೊಡೆಯ ಮೊದಲೇ ಅಲ್ಲ. ಅವರೊಬ್ಬ ಜವಾಬ್ದಾರಿಯರಿತ ಮಂತ್ರಿ. ದುಡಿಯದ ಸೋಂಬೆರಿಗಳಿಗೂ, ದುಡಿಮೆಯ ಫಲವನ್ನು ಹಂಚಿಕೊಳ್ಳದ ಕಡು ಲೋಭಿಗಳಿಗೂ ಸಮಾಜದಲ್ಲಿ ಅಸ್ತಿತ್ವವಿರಬಾರದೆನ್ನುವ ಸ್ವಸ್ಥ ಲೌಕಿಕ ನಿಲವು, ಅವರದು. ಇದೆ ಲೌಕಿಕವನ್ನೇ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ ಎಂದು ಅಧ್ಯಾತ್ಮಕ್ಕೊಯ್ದ ಮಹಾತ್ಮ, ಆತ. ಇಂದಿನವರದರೋ ಅಧ್ಯಾತ್ಮವನ್ನು ಲೌಕಿಕದಲ್ಲಿ ಮಣ್ಣು ಮಾಡುವವರು. ಅದಕ್ಕೆ ವಿಚ್ಛಿದ್ರಕಾರೀ ರಾಜಕೀಯದವರಿಂದ ಮತ್ತಷ್ಟು ಕುಮ್ಮಕ್ಕು! ಇದು ಖಂಡನೀಯ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet