ಶಕ್ತಿಮಾನ್ ಬಾಲ್ಯದ ನೆನಪು

ಶಕ್ತಿಮಾನ್ ಬಾಲ್ಯದ ನೆನಪು

ಚಿತ್ರ

ಏನೋ ಬರೀಬೇಕು ಅಂತ ಹೊರಟೆ ಏನು ಹೊಳಿಯಲಿಲ್ಲ!
ಯೋಚನಾ ಲಹರಿಯ ದ್ವಂದ್ವಗಳ ನಡುವೆ ಧುತ್ತೆಂದು ಹೊಳೆಯಿತು ನನ್ನ ಬಾಲ್ಯದ ಶಕ್ತಿಮಾನ್ ನೆನಪು. ಅದನ್ನೇ ನೆನಪಿಸಿಕೊಳ್ಳುತ್ತಾ ನೆನಪಾದದನ್ನ ಬರೆದಿದ್ದೇನೆ.

ನಾನು 1997 ರಲ್ಲಿ 7ನೆ ತರಗತಿ ಓದುತ್ತಿರುವಾಗ ನಮ್ಮ ದೂರದರ್ಶನ DD1 ನಲ್ಲಿ ಮಧ್ಯಾನ್ನ 12 .೦೦ ಗಂಟೆಗೆ ಸರಿಯಾಗಿ "ಶಕ್ತಿಮಾನ್" ಎಂಬ ಧಾರಾವಾಹಿ ಪ್ರಸಾರವಾಗುತಿತ್ತು ಈ ಧಾರಾವಾಹಿ ನನಗೆ ನನ್ನ ತಂಗಿ ನನ್ನ ಗೆಳಯ ಮತ್ತು ಅವನ ತಂಗಿಗೆ ಎಷ್ಟು ಗೀಳಾಗಿತ್ತೆಂದರೆ, ವಾರವಿಡಿ ಶನಿವಾರ ಎಂದು ಬರುವುದೋ ಎಂಬ ಕಾತುರದಲ್ಲಿ ಕಳೆದವಾರ ಶಕ್ತಿಮಾನ್ ಹೀಗೆ ಮಾಡಿದ ಈವಾರ ಇನ್ನೇನು ಮಾಡುವನೋ ಎಂಬ ಗುಂಗಲ್ಲೇ ಶಾಲೆಗೇ ಹೋಗುತ್ತಿದೆವು, ಸ್ಕೂಲ್ಗೆ ಹೋಗುವ ದಾರೀಲಿ ಬರೀ ಶಕ್ತಿಮಾನ್ನದೇ ಮಾತುಕತೆ.

ಬರೆವಾಗ ಇನ್ನೊಂದು ವಿಷಯ ನೆನಪಿಗೆ ಬರುತ್ತಿದೆ "ನಮ್ಮೊಳಗೇ ಒಂದು ಒಪ್ಪಂದ ಇತ್ತು, ಶನಿವಾರ 11.45ಕ್ಕೆ ಶಾಲೆ ಬಿಟ್ಟ ತಕ್ಷಣ ಯಾರು 1st ಮನೆವರೆಗೂ ಓಡಿ ಬಂದು TV ಸ್ವಿಚ್ ಆನ್ ಮಾಡ್ತಾರೋ ಅವ್ರು TV ಮುಂದೆ ಕೂರೋದು ಅಂತ" ಈ ವಿಚಾರವಾಗಿ ನಾನು ನನ್ನ ಗೆಳೆಯ ಬಹಳ ಸಲ ಜೋರಾಗಿ ಓಡಿ ಗಾಯಗಳನ್ನ ಮಾಡಿಕೊಂಡಿದ್ದೇವೆ.

ನನ್ನ ಬಳಿ ಇನ್ನು ಗಣೇಶ ಹಬ್ಬಕೆಂದು ಆಗ ಹಠ ಮಾಡಿ ಕೊಂಡ ಶಕ್ತಿಮಾನ್ T-ಶರ್ಟ್ ಇದೆ, ಮರೆಯಲಾಗದ ಸಂಗತಿ ಎಂದರೆ ಶಕ್ತಿಮಾನ್ ಮಾಡುವ ರೀತಿಯೇ ತೋರುಬೆರಳನ್ನು ಮೇಲೆತ್ತಿ ತಿರುಗಿ ಹಾರಲು ಪ್ರಯತ್ನಿಸಿ ಮಹಡಿ ಮೇಲಿಂದ ಕೆಳಗೆ ಬಿದ್ದಿದೆ ಅದೃಷ್ಟವಶಾತ್ ಗಾಯಗಳೇನು ಆಗಲಿಲ್ಲ, ಆ ದಿನ ನನ್ನಪ್ಪ ಮನೆಯ ಮೇಲೇರಿ ಆಂಟೆನಾ ಕಿತ್ತು ಹಾಕಿ ನನ್ನು ಅಮ್ಮನನು ಮನೆಯವರನೆಲ್ಲ ಬ್ಯೆದು, ಶಕ್ತಿಮಾನ್ ಗೆ ಹಿಡಿ ಶಾಪ ಹಾಕಿದ್ದು ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ, ಆಗ ಆ ಮುಗ್ದ ಮನಸ್ಸಿಂದ ಶಕ್ತಿಮಾನ್ ನನ್ನು ಬೇಡಿಕೊಂಡಿದ್ದೆ ನನಪ್ಪನನ್ನು ಏನು ಮಾಡಬೇಡವೆಂದು ( ನೆನಸಿಕೊಂಡರೆ ಈಗ ನಗು ಬರುತ್ತದೆ).

ಸ್ವಲ್ಪ ದಿನಗಳ ನಂತರ ವಾರ್ತೆಗಳಲ್ಲಿ ನನಂತೆಯೇ ಕೆಲ ಮಕ್ಕಳು ಶಕ್ತಿಮಾನ್ ನಂತೆ ಹಾರಲು ಹೋಗಿ, ಶಕ್ತಿಮಾನ್ ಕಾಪಾಡುತ್ತಾನೆ ಎಂಬ ಹುಚ್ಚು ಆಲೋಚನೆಗಳಿಂದ ಇಹಲೋಕ ತ್ಯಜಿಸಿದ್ದರು ಎಂದು ಸುದ್ದಿ ಪ್ರಸಾರವಾಯಿತು. ಆನಂತರ ಶಕ್ತಿಮಾನ್ ಧಾರವಾಹಿ ನೋಡುವುದೇ ಸವಾಲಾಗಿತ್ತು, ಹೀಗಿದ್ದಾಗಲು ಹಠ ಮಾಡಿಯಾದರು ಶಕ್ತಿಮಾನನ್ನ Tv ಲಿ ನೋಡಿ ಕನ್ದಣಿಯುತ್ತಿದೆವು. ಅಕಸ್ಮಾತ್ ಕರೆಂಟ್ ಹೋದರಂತೂ ಅಪ್ಪನ ಅಟ್ಲಾಸ್ ಸೈಕಲ್ ಏರಿ ಕತ್ತರಿ ತುಳಿಯುತ್ತ KEB ತಲುಪಿ ಅಲ್ಲಿನವರನ್ನ ಕರೆಂಟ್ ಹಾಕುವಂತೆ ಒತ್ತಾಯಿಸುತ್ತಿದೆವು.

ನಮ್ಮಪಣೆ ತಿರಸ್ಕರಿಸಿದ್ರಂತು ಕೈಗೆ ಸಿಕ್ಕ ಕಲ್ಲನ್ನ ಎಸೆದು ಇರು ನಿನ್ನ ಶಕ್ತಿಮಾನ್ ಸುಮ್ಮನೆ ಬಿಡಲ್ಲ ಅಂತ ಹೆದರಿಸಿ, ಇವರ್ಗೆ ಶಕ್ತಿಮಾನ್ ಏನ್ ಮಾಡ್ತಾನೆ ಅಂತ ಮಾತಾಡ್ಕೋತ, ನನ್ನ ಮಾತು ಶಕ್ತಿಮಾನ್ ಕೇಳ್ತಾನೆ ಇಲ್ಲ ನನ್ನ ಮಾತು ಶಕ್ತಿಮಾನ್ ಕೇಳ್ತಾನೆ ಅಂತ ವಾಗ್ವಾದ ಮಾಡುತ್ತ ಮನೆ ಸೇರ್ತಿದ್ವಿ.

ಕಾಕತಾಳಿಯ ಎಂದರೆ ಇಷ್ಟೆಲ್ಲ ಕಷ್ಟ ಪಟ್ಟು ನೋಡಿದ ಶಕ್ತಿಮಾನ್ ಧಾರಾವಾಹಿಯ Climax ನೋಡಲಾಗಲಿಲ್ಲ.

ಈಗ ಆಡೋ ವಯಸ್ಸು ಕಳೆಯಿತು, ನನ್ನ ಜಾಗಕ್ಕೆ ನನ್ನ ಮಗ ಇನ್ನು 5 ವರ್ಷದಲ್ಲಿ ಕಾಲಿಡುತ್ತಾನೆ, ಅವನೇನು ನೋಡುತ್ತಾನೋ ಎಂಬ ಕುತೂಹಲದ ಕಲ್ಪನೆಯಲ್ಲಿ ನನ್ನ ಮುಂದಿನ ಕೆಲ ಹೊತ್ತು ಕಳೆಯಲಿಚ್ಚಿಸುತ್ತ ಈ ನನ್ನೀ ನೆನಪಿನಾ ಮಾತುಗಳಿಗೆ ಕಡಿವಾಣ ಹಾಕುತಿದ್ದೇನೆ!!!!!!!!!!.

 

Rating
No votes yet

Comments