ಕಥೆ = ವಿದ್ಯಾರ್ಥಿ ಮತ್ತು ಓದು
ಸಮಯ ರಾತ್ರಿ ೧೧.೩೦
KPN ಕಾಲೇಜ್ ಬಾಯ್ಸ್ ಹಾಸ್ಟೆಲ್ ಬೋರ್ಡ್ ಮೇಲೆ ದೊಡ್ಡ ಹಾಲೋಜಿನ್ ಲೈಟ್ ಬೆಳಕು ಬಿದ್ದು ಪ್ರತಿಫಲಿಸುತ್ತಿದೆ. ಹಾಸ್ಟೆಲ್ ನ ವಾರ್ಡನ್ ಎಲ್ಲ ರೂಮುಗಳ ಬಳಿ ಒಂದು ಸುತ್ತು ಹಾಕಿ ಬರುತ್ತಿದ್ದಾನೆ. ರೂಮಿನ ಆಚೆ ಕುಳಿತಿದ್ದ ಒಂದಿಬ್ಬರು ಹುಡುಗರನ್ನು ಗದರಿಸಿ ರೂಮಿನ ಒಳಗೆ ಕಳಿಸಿ ತನ್ನ ಕೋಣೆಯತ್ತ ಮಲಗಲು ತೆರಳುತ್ತಿದ್ದಾನೆ. ಅಷ್ಟರಲ್ಲಿ ಜೋರಾಗಿ ಧಪ್ ಎಂದು ಏನೋ ಬಿದ್ದ ಸದ್ದಾಯಿತು. ಕೋಣೆಯ ಬಾಗಿಲು ತೆರೆದು ಇನ್ನೇನು ಒಳಗೆ ಅಡಿ ಇಡುತ್ತಿದ್ದ
ವಾರ್ಡನ್ ಮತ್ತೆ ವಾಪಸ್ ಶಬ್ದ ಬಂದ ಕಡೆದ. ಅಲ್ಲಿ ಬಂದು ನೋಡಿದಾಗ ಅಲ್ಲಿ ಕಂಡ ದೃಶ್ಯ ಅವನ ಮೈ ನಡುಗಿಸಿಬಿಟ್ಟಿತ್ತು. ಅಷ್ಟರಲ್ಲಿ ಅಕ್ಕ ಪಕ್ಕದ ರೂಮಿನಿಂದ ಹುಡುಗರು ಆಚೆ ಬಂದರು. ಎಲ್ಲರೂ ಅಲ್ಲಿನ ದೃಶ್ಯ ಕಂಡು ದಂಗು ಬಡಿದಂತೆ ನಿ೦ತುಬಿಟ್ಟರು. ಅಷ್ಟರಲ್ಲಿ ವಾರ್ಡನ್ ಎಚ್ಚೆತ್ತುಗೊಂಡು ತನ್ನ ಮೊಬೈಲ್ ತೆಗೆದು ಯಾರಿಗೋ ಕರೆ ಮಾಡಿ ಅರ್ಜೆಂಟಾಗಿ KPN ಬಾಯ್ಸ್ ಹಾಸ್ಟೆಲ್ ಗೆ ambulance ಕಳಿಸಿ, ಹೌದು emergency ಎಂದು ಫೋನ್ ಇಟ್ಟು. ಮತ್ತೆ ಇನ್ಯಾರಿಗೋ ಫೋನ್ ಮಾಡಿ, ಹಲೋ ಪೋಲಿಸ್ ಸ್ಟೇಷನ್ ಸರ್ ಅರ್ಜೆಂಟಾಗಿ KPN ಬಾಯ್ಸ್ ಹಾಸ್ಟೆಲ್ ಗೆ ಬನ್ನಿ ಎಂದು ವಿಷಯ ತಿಳಿಸಿ ಫೋನ್ ಇಟ್ಟು. ಮತ್ತೆ ಕಾಲೇಜ್ ಪ್ರಿನ್ಸಿಪಾಲ್ ಗೆ ಫೋನ್ ಮಾಡಿ ವಿಷಯ ತಿಳಿಸಿದನು.
__________________________________________________________________________________
ಮೂರು ತಿಂಗಳ ಹಿಂದೆ....
ಏನೇ....ಏನೇ....ಏನೂಂದ್ರೆ...ಏನೇ ಸ್ವಲ್ಪ ಇಲ್ಲಿ ಬಾ, ನೋಡು ನಿನ್ನ ಮಗನ ಘನಂದಾರಿ ಕೆಲಸ ನೋಡು ಬಾ. ಕೊನೆಗೂ ನನ್ನ ಮರ್ಯಾದೆ ತೆಗೆದುಬಿಟ್ಟ. ಯಾಕ್ರೀ ಏನಾಯ್ತು, ಯಾಕೆ ಒಂದೇ ಸಮನೆ ಕೂಗ್ತಾ ಇದ್ದೀರಾ. ಮೂರು ಹೊತ್ತು ಪ್ರಜ್ವಲ್ ನ ಬೈಯ್ಯೋದೆ ನಿಮಗೆ ಕೆಲಸ.
ಹೌದು ಕಣೆ ಅವನು ಮಾಡೋ ಕೆಲಸಕ್ಕೆ ಬೈದೆ ಮುದ್ದು ಮಾಡ್ತಾರೆ. ನೋಡು ನಾನು ಅವನನ್ನು ಬೆಂಗಳೂರಿನಲ್ಲೇ ಯಾವುದಾದರೂ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೇರಿಸೋಣ ಎಂದುಕೊಂಡಿದ್ದೆ. ಆದರೆ ನಿನ್ನ ಮಗ ತೆಗೆದುಕೊ೦ಡಿರೋ Rank ಗೆ ಬೆಂಗಳೂರಿನ ಯಾವ ಕಾಲೇಜು ಅವನನ್ನು ಮೂಸಿ ನೋಡುವುದಿಲ್ಲ.ರಾಯಚೂರಿನ ಯಾವುದೋ KPN ಕಾಲೇಜ್ ಅಂತೆ ಅಲ್ಲಿ ಸೀಟ್ ಸಿಕ್ಕಿದೆ. ನನ್ನ ಫ್ರೆಂಡ್ಸ್ ಮಕ್ಕಳು ಎಲ್ರೂ ಬೆ೦ಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲೆ ಸೇರಿದರೆ ಇವನು ಮಾತ್ರ ಅದ್ಯಾವುದೋ ಕಾಲೇಜಿಗೆ ಸೇರುತ್ತಿದ್ದಾನೆ. ನಾನು ಹೇಗೆ ತಲೆ ಎತ್ತಲಿ ನನ್ನ ಸ್ನೇಹಿತರ ಮುಂದೆ.
ಅಲ್ರೀ ಹೋಗಲಿ ಇಲ್ಲೇ ಯಾವುದಾದರೂ ಡೊನೇಶನ್ ಸೀಟ್ ಕೊಡಿಸಿ. ಲೇ ನಿನಗೇನು ತಲೆ ಕೆಟ್ಟಿದ್ಯ ಡೊನೇಶನ್ ಅಂತೆ ಡೊನೇಶನ್ ನಾನೇನು ದುಡ್ಡಿನ ಗಿಡ ಹಾಕಿದ್ದೀನ ಅಲ್ಲಿಂದ ಕಿತ್ತು ಕೊಡಕ್ಕೆ. ನನಗೆ ಅಷ್ಟು ಡೊನೇಶನ್ ಕೊಡಕ್ಕೆ ಆಗಲ್ಲ ಅಂತಾನೆ ಅವನಿಗೆ ಚೆನ್ನಾಗಿ ಓದೋ ಚೆನ್ನಾಗಿ ಬರೆಯೋ ಅಂದ ಬಡಕೊಂತ ಇದ್ದೆ. ಆದರೆ ಕೊನೆಗೂ ಅವನ ಹಠ ಸಾಧಿಸಿಬಿಟ್ಟ.
ಅಲ್ಲಿಯವರೆಗೂ ಅಲ್ಲೇ ಮೂಲೆಯಲ್ಲಿ ಏನೂ ಮಾತಾಡದೆ ನಿಂತಿದ್ದ ಪ್ರಜ್ವಲ್ ಬಾಯಿ ತೆಗೆದ. ಅಪ್ಪ ಸುಮ್ಮನೆ ಪದೇ ಪದೇ ನನ್ನನ್ನು ಬೈಯ್ಯಬೇಡಿ ನಾನು ಮುಂಚೆ ಇಂದ ಹೇಳ್ತಾನೆ ಇದ್ದೆ. ನನಗೆ ಇಂಜಿನಿಯರಿಂಗ್ ಬೇಡ ನಾನು ಕಾಮರ್ಸ್ ಓದುತ್ತೇನೆ ಎಂದು. ನನಗೆ ಇಷ್ಟ ಇಲ್ಲದಿದ್ದರೂ ನಿಮ್ಮ ಹಠಕ್ಕೋಸ್ಕರ ಹತ್ತನೇ ತರಗತಿ ಮುಗಿದ ಮೇಲೆ scince ತೆಗೆದುಕೊಂಡೆ. ಈಗಲೂ ಅದೇ ಹೇಳ್ತೀನಿ ನನಗೆ ಇಂಜಿನಿಯರಿಂಗ್ ಮಾಡಲು ಆಸಕ್ತಿ ಇಲ್ಲ. ಈಗಲೂ ನೀವು ಪರ್ಮಿಶನ್ ಕೊಟ್ಟರೆ ನಾನು ಮತ್ತೆ ಕಾಮರ್ಸ್ ಓದುತ್ತೇನೆ. ಸುಮ್ಮನೆ ನಿಮ್ಮ ಇಷ್ಟ, ಪ್ರತಿಷ್ಠೆಗೋಸ್ಕರ ನನ್ನ ಮೇಲೆ ಒತ್ತಡ ಹೇರುತ್ತಿದ್ದೀರಿ. ಅದೂ ಅಲ್ಲದೆ ಬದಲಿಗೆ ನನ್ನನ್ನೇ ಬೈಯ್ಯುತ್ತಾ ಇದ್ದೀರಿ.
ಅಮ್ಮ ನನಗೆ ಅಲ್ಲಿ ಹೋಗಿ ಓದಲು ಇಷ್ಟ ಇಲ್ಲ. ನೀನಾದರೂ ಹೇಳಮ್ಮ. ರೀ ಒಮ್ಮೆ ಯೋಚಿಸಿ ನೋಡ್ರಿ ಓದಬೇಕಾದವನು ಅವನು, ಸುಮ್ಮನೆ ಅವನಿಗೆ ಹೀಗೆ ಒತ್ತಡ ಹಾಕಿ ಓದಿಸುವ ಅಗತ್ಯ ಏನಿದೆ. ಲೇ ನೀನು ಸುಮ್ಮನೆ ಇರು. ಏನೋ ನಮ್ಮ ಪುಣ್ಯಕ್ಕೆ ಕನಿಷ್ಠ ಪಕ್ಷ ಆ ಕಾಲೇಜ್ ಆದರೂ ಸಿಕ್ಕಿದೆ. ಸುಮ್ಮನೆ ಅಲ್ಲಿ ಹೋಗಿ ಓದಲು ಹೇಳು ಅವನಿಗೆ. ಮುಂದಿನ ತಿಂಗಳು ಒಂದನೇ ತಾರೀಖಿನಿಂದ ಕಾಲೇಜ್ ಶುರು. ಅಷ್ಟರಲ್ಲಿ ಎಲ್ಲಾ ಸಿದ್ಧ ಮಾಡಿಕೊ ಅಂತ ಹೇಳು. ಇದರ ಬಗ್ಗೆ ಇನ್ನೇನು ಮಾತಾಡುವುದು ಬೇಡ ಎಂದು ಹೇಳಿ ಎದ್ದು ಹೋದರು.
ಪ್ರಜ್ವಲ್ ನ ತಾಯಿ ಪ್ರಜ್ವಲ್ ಕಡೆ ನೋಡಿ ನೋಡು ಪ್ರಜ್ವಲ್ ನಿಮ್ಮಪ್ಪನ ಹಠ ಎಂತದ್ದು ಎಂದು ನಿನಗೆ ಗೊತ್ತೇ ಇದೆ. ದಯವಿಟ್ಟು ಅರ್ಥ ಮಾಡಿಕೊ. ಇದರಲ್ಲಿ ನಾನೇನೂ ಸಹಾಯ ಮಾಡಲು ಆಗುವುದಿಲ್ಲ ಎಂದುಬಿಟ್ಟರು.
____________________________________________________________________________________________________________________________
ಒಂದು ತಿಂಗಳ ನಂತರ..
ಮೊಟ್ಟ ಮೊದಲ ಬಾರಿಗೆ ರಾಯಚೂರಿಗೆ ಬಂದಿದ್ದ ಪ್ರಜ್ವಲ್ ಅಲ್ಲಿನ ವಾತಾವರಣ ಕಂಡು ಬೆಚ್ಚಿ ಬಿದ್ದಿದ್ದ. ಬೆಂಗಳೂರಿನಂಥ ಮಹಾನಗರದಲ್ಲಿದ್ದ ಪ್ರಜ್ವಲ್ ಗೆ ರಾಯಚೂರಿಗೆ ಹೊಂದಿಕೊಳ್ಳಲು ಕಷ್ಟವಾಯಿತು. ಕಾಲೇಜ್ ಬಳಿ ಬಂದು ಆಚೆ ಇಂದ ಕಾಲೇಜನ್ನು ನೋಡಿ ಇದ್ಯಾವುದಪ್ಪ ಒಳ್ಳೆ ಸರ್ಕಾರಿ ಆಸ್ಪತ್ರೆ ಇದ್ದ ಹಾಗೆ ಇದೆ. ಆಚೆ ಇಂದಾನೆ ಇಷ್ಟು ಕೆಟ್ಟದಾಗಿದೆ ಇನ್ನು ಒಳಗಡೆ ಹೇಗಿದೆಯೋ ಎಂದು ಒಳಗಡೆ ಕಾಲಿಟ್ಟ. ಹಳೆ ಕಟ್ಟಡ, ಮಾಸಿದ ಬಣ್ಣ, ಗಲೀಜು ವಾತಾವರಣ ಎಲ್ಲವನ್ನು ನೋಡಿ ಅಸಹ್ಯ ಪಟ್ಟುಕೊಂಡ. ಕೂಡಲೇ ಅಮ್ಮನ ಮೊಬೈಲ್ ಗೆ ಕರೆ ಮಾಡಿ ಅಮ್ಮ, ಮೊದಲೇ ನನಗೆ ಓದಲು ಆಸಕ್ತಿ ಇಲ್ಲ, ಅದರಲ್ಲಿ ಈ ಕಾಲೇಜು ಕೆಟ್ಟದಾಗಿದೆ. ನನಗೆ ಇಲ್ಲಿರಲು ಆಗಲ್ಲ ನಾನು ವಾಪಸ್ ಬಂದು ಬಿಡುತ್ತೇನೆ ಎಂದ. ಪ್ರಜ್ವಲ್ ದಯವಿಟ್ಟು ಹಾಗೆಲ್ಲ ಮಾಡಬೇಡ. ಇನ್ನು ಮೊದಲನೇ ದಿನ, ಹೊಸ ಊರು, ಹೊಸ ಜಾಗ, ಹೊಸ ಜನ ಎಲ್ಲ ನಿಧಾನವಾಗಿ ಹೊಂದಿಕೊಳ್ಳುತ್ತೆ, ಸುಮ್ಮನೆ ಆತುರ ಪಟ್ಟು ವಾಪಸ್ ಬಂದರೆ ನಿಮ್ಮಪ್ಪನ ಉಗ್ರ ಅವತಾರ ನೋಡಬೇಕಾಗುತ್ತದೆ.
ಕಾಲೇಜಿನ ಒಳಗೆ ಹೋಗಿ ಎಲ್ಲ ನೋಡಿಕೊಂಡು, ಹಾಸ್ಟೆಲ್ ಗೆ ಹೋದ. ಅದೂ ಸಹ ಕಾಲೇಜ್ ಗಿಂತ ಭಿನ್ನವಾಗೇನೂ ಇರಲಿಲ್ಲ. ರೂಮುಗಳಂತೂ ವಾಕರಿಕೆ ತರಿಸುವ ಹಾಗಿದ್ದವು. ಇನ್ನೇನು ಮಾಡುವುದು ವಿಧಿ ಇಲ್ಲ ಎಂದು ಒಲ್ಲದ ಮನಸಿನಿಂದ ರೂಮಿಗೆ ಹೋದ. ಹೊಸ ಜಾಗವಾದ್ದರಿಂದ ಮೊದಲನೇ ದಿನ ಸರಿಯಾಗಿ ನಿದ್ದೆ ಬರಲಿಲ್ಲ. ಅದೂ ಅಲ್ಲದೆ ಸೊಳ್ಳೆ ಬೇರೆ. ದೇವರೇ ಯಾಕಪ್ಪ ನನಗೆ ಈ ನರಕ ವಾಸ ಎಂದುಕೊಂಡು ಕಣ್ಣು ಮುಚ್ಚಿದ.
ಮರುದಿನದಿಂದ ಕಾಲೇಜ್ ಶುರುವಾಯಿತು. ಮೊದಲೇ ಅವನಿಗೆ ಇಂಜಿನಿಯರಿಂಗ್ ನಲ್ಲಿ ಆಸಕ್ತಿ ಇಲ್ಲದ್ದರಿಂದ ಪಾಠಗಳು ಕಬ್ಬಿಣದ ಕಡಲೆಯಂತೆ ಅನಿಸುತ್ತಿದ್ದವು. ಪ್ರತಿ ದಿವಸ ಕಾಲೇಜ್ ಮುಗಿಸಿಕೊಂಡು ರೂಮಿಗೆ ಬರುವ ಮುಂಚೆ ಅಮ್ಮನಿಗೆ ಫೋನ್ ಮಾಡಿ ಅಮ್ಮ ನಾನು ವಾಪಸ್ ಬಂದು ಬಿಡುತ್ತೇನೆ ಎಂದು ಗೋಳಾಡುತ್ತಿದ್ದ.
ಹಾಗೂ ಹೀಗೋ ಒಂದು ತಿಂಗಳು ಕಳೆದು ಹೋಯಿತು. ಒಂದು ದಿನ ಕಾಲೇಜ್ ಮುಗಿಸಿ ರೂಮಿಗೆ ಬರುವಷ್ಟರಲ್ಲಿ ಅಪ್ಪ ಅಮ್ಮ ಬಂದಿದ್ದರು. ಅಮ್ಮನನ್ನು ನೋಡುತ್ತಿದ್ದ ಹಾಗೆ ಮನಸಿನಲ್ಲಿ ಇದ್ದ ದುಃಖವೆಲ್ಲ ಒತ್ತರಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಅಮ್ಮ ಇಲ್ಲಿ ನನಗೆ ಆಗುತ್ತಾ ಇಲ್ಲ ನಾನು ವಾಪಸ್ ಬಂದು ಬಿಡುತ್ತೇನೆ ನನಗೆ ಇಲ್ಲಿ ನರಕ ಇದ್ದ ಹಾಗೆ ಇದೆ. ನನಗೆ ಓದಲು ಆಗುತ್ತಿಲ್ಲ. ಏನೇನೂ ಅರ್ಥ ಆಗುತ್ತಿಲ್ಲ ನನಗೆ ತಲೆ ಕೆಟ್ಟು ಹುಚ್ಚು ಹಿಡಿದಂತಾಗುತ್ತಿದೆ ದಯವಿಟ್ಟು ಅಪ್ಪನಿಗೆ ಹೇಳಮ್ಮ.
ರೀ....ಲೇ ನೀನು ಸುಮ್ಮನೆ ಇರು ಇನ್ನು ಬಂದು ಎರಡು ತಿಂಗಳಾಗಿಲ್ಲ ಆಗಲೇ ವಾಪಸ್ ಬರ್ತಾನಂತೆ. ಹುಚ್ಚು ಹಿಡಿಯಲ್ಲ ಏನೂ ಆಗಲ್ಲ ಕಷ್ಟ ಪಟ್ಟು ಓದಿದರೆ ಎಲ್ಲಾ ತಾನಾಗೆ ಅರ್ಥ ಆಗತ್ತೆ. ನಾವು ಬಂದಿದ್ದೆ ತಪ್ಪಾಯಿತು ನಡಿ ಹೋಗೋಣ ಎಂದು ಎದ್ದರು. ಅವರಮ್ಮ ಪ್ರಜ್ವಲ್ ನ ಪಕ್ಕಕ್ಕೆ ಕರೆದುಕೊಂಡು ಹೋಗಿ ನೋಡು ಪ್ರಜು ದಯವಿಟ್ಟು ನನ್ನನ್ನು ಕ್ಷಮಿಸು ಇದೊಂದು ವಿಷಯದಲ್ಲಿ ನಾನು ಏನೂ ಮಾಡಕ್ಕೆ ಆಗಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ಹೇಳಿ ಊರಿಂದ ತಂದಿದ್ದ ತಿಂಡಿ ಎಲ್ಲ ಕೊಟ್ಟು ಹೊರಟು ಬಿಟ್ಟರು.
_______________________________________________________________________________________________________________________________________
ಸಮಯ ರಾತ್ರಿ ೧.೦೦ ಘಂಟೆ.
ಫೋನ್ ಒಂದೇ ಸಮನೆ ಹೊಡೆದುಕೊಳ್ಳುತ್ತಿದೆ. ಪ್ರಜ್ವಲ್ ನ ತಾಯಿ ಫೋನ್ ತೆಗೆದುಕೊಂಡರು. ಹಲೋ ಏನೋ ಪ್ರಜ್ವಲ್ ಇಷ್ಟು ಹೊತ್ತಿನಲ್ಲಿ ಫೋನ್ ಮಾಡಿದ್ದೀಯ. ಅಮ್ಮ ನನಗೆ ಆಗ್ತಾ ಇಲ್ಲ ಇಲ್ಲಿ. ನಾನು ಏನಾಗಿ ಬಿಡ್ತೀನೋ ಭಯ ಆಗ್ತಿದೆ ನಂಗೆ. ಈ ಓದು ನನ್ನ ತಲೆಗೆ ಹತ್ತುತ್ತಿಲ್ಲ. ಎಷ್ಟೇ ಕಷ್ಟ ಪಟ್ಟರೂ ಏನೊಂದೂ ಅರ್ಥ ಆಗುತ್ತಿಲ್ಲ ನನಗೆ. ಹುಚ್ಚು ಹಿಡಿದಂತೆ ಆಗುತ್ತಿದೆ. ಇತ್ತೀಚಿಗೆ ಇದೆ ಯೋಚನೆಯಲ್ಲಿ ಸರಿಯಾಗಿ ನಿದ್ದೆ ಸಹ ಬರುತ್ತಿಲ್ಲ. ದಯವಿಟ್ಟು ನೀನಾದರೂ ಏನಾದರೂ ಮಾಡಿ ಅಪ್ಪನನ್ನು ಒಪ್ಪಿಸಿ ನನ್ನನ್ನು ಇಲ್ಲಿಂದ ವಾಪಸ್ ಕರೆಸಿಕೊಂಡು ಬಿಡಮ್ಮ. ಪ್ಲೀಸ್ ನಿನ್ನನ್ನು ಬೇಡುತ್ತೇನೆ ಏನಾದರೂ ಮಾಡಮ್ಮ ಎಂದು ಅಳುತ್ತಿದ್ದ. ಪ್ರಜ್ವಲ್ ಅಳು ನಿಲ್ಲಿಸು. ನಾನು ಮಾತಾಡಿ ನೋಡ್ತೀನಿ ನಿಮ್ಮಪ್ಪನ ಹತ್ತಿರ. ನೀನು ಏನೂ ತಲೆ ಕೆಡಿಸಿಕೊಳ್ಳಬೇಡ ನಿನ್ನ ಆರೋಗ್ಯದ ಕಡೆ ಗಮನ ಕೊಡು ಎಂದು ಹೇಳುತ್ತಿದ್ದರು. ಅಷ್ಟರಲ್ಲಿ ಪ್ರಜ್ವಲ್ ನ ತಂದೆ ಎಚ್ಚರಗೊಂಡು ಫೋನ್ ತೆಗೆದುಕೊಂಡು ಲೇ ನಿನಗೆ ಒಂದು ಸಲ ಹೇಳಿದರೆ ಅರ್ಥ ಆಗೋದಿಲ್ವಾ. ಕಷ್ಟನೋ ನಷ್ಟನೋ ಓದಬೇಕು ಅಷ್ಟೇ ಎ೦ದು ಫೋನ್ ಕಟ್ ಮಾಡಿದರು
ಬೆಳಿಗ್ಗೆ ಎದ್ದು ಪ್ರಜ್ವಲ್ ನ ತಾಯಿ ರೀ ನೀವು ಮಾಡ್ತಾ ಇರೋದು ಸ್ವಲ್ಪನೂ ಸರಿ ಇಲ್ಲ, ಸುಮ್ಮನೆ ಆ ಹುಡುಗನ ಮೇಲೆ ಈ ಪಾಟಿ ಒತ್ತಡ ಹೇರುತ್ತಿರುವುದು ಏನೇನೂ ಸರಿ ಇಲ್ಲ. ಆ ಹುಡುಗ ಪಾಪ ಓದಲು ಆಗದೆ ಅಲ್ಲಿ ಒದ್ದಾಡುತ್ತಿದ್ದಾನೆ. ನೀವು ಸುಮ್ಮನೆ ನಿಮ್ಮ ಹಠ ಸಾಧಿಸದೆ ಅವನನ್ನು ವಾಪಸ್ ಕರೆದುಕೊಂಡು ಬನ್ನಿ. ದಿನ ಬೆಳಗಾದರೆ ಪೇಪರ್ ನಲ್ಲಿ , ಟಿ. ವಿ ನಲ್ಲಿ ಬರೀ ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿ ಓದುತ್ತಿರುತ್ತೇವೆ. ಅವನು ಏನಾದರೂ ಓದಲಿ ಒಟ್ಟಿನಲ್ಲಿ ನಮ್ಮ ಕಣ್ಣ ಮುಂದಿದ್ದಾರೆ ಅಷ್ಟೇ ಸಾಕು ದಯವಿಟ್ಟು ಅವನನ್ನು ಕರೆದುಕೊಂಡು ಬಂದು ಬಿಡೋಣ. ಇದೊಂದು ವಿಷಯದಲ್ಲಿ ದಯವಿಟ್ಟು ಆ ಹುಡುಗನ ಮೇಲೆ ಸ್ವಲ್ಪ ಕರುಣೆ ತೋರಿಸಿ.
ಅಲ್ವೇ ಮಗ ಎಂದ ಮೇಲೆ ನನಗೇನು ಅವನ ಮೇಲೆ ಪ್ರೀತಿ ಇಲ್ಲ ಎಂದುಕೊಂಡಿದ್ದೀಯ. ಅವನ ಭವಿಷ್ಯಕ್ಕೆ ತಾನೇ ನಾನು ಇಷ್ಟು ಒದ್ದಾಡುತ್ತಿರುವುದು. ನಮಗೆ ಕಾಸು ಕೊಟ್ಟು ಓದಿಸುವವರು ಯಾರೂ ಇರಲಿಲ್ಲ. ಈಗಿನ ಮಕ್ಕಳಿಗೆ ಎಲ್ಲ ಇದ್ದು ಓದುವುದಿಲ್ಲ ಎನ್ನುತ್ತಾರೆ. ಸರಿ ನಿಮ್ಮಿಷ್ಟ ಇವತ್ತು ರಾತ್ರಿ ಹೊರಟು ನಾಳೆ ಬೆಳಿಗ್ಗೆ ಅಲ್ಲಿಗೆ ಹೋಗಿ ಕರೆದು ಕೊಂಡು ಬರುತ್ತೇನೆ ಎಂದರು.
____________________________________________________________________________________
ರಾತ್ರಿ ಅಪ್ಪನ ಮಾತು ಕೇಳಿದಾಗಿನಿಂದ ಪ್ರಜ್ವಲ್ ನ ಮನಸು ಒಡೆದು ಹೋಗಿತ್ತು. ಅಂದು ಕಾಲೇಜ್ ಗೂ ಹೋಗಲಿಲ್ಲ. ಮೊಬೈಲನ್ನು ಆಫ್ ಮಾಡಿ ರೂಮಿನಲ್ಲಿ ಕುಳಿತು ಏನನ್ನೋ ಯೋಚಿಸುತ್ತಿದ್ದಾನೆ. ಊಟಕ್ಕೂ ಹೋಗಿರಲಿಲ್ಲ. ಕಾಲೇಜ್ ಮುಗಿಸಿಕೊಂಡು ರೂಮಿಗೆ ಬಂದ ರೂಂಮೇಟ್ ಪ್ರಜ್ವಲ್ ಬೆಳಿಗ್ಗೆ ಹುಷಾರಿಲ್ಲ ಎಂದಿದ್ದೆ ಈಗ ಹೇಗಿದ್ದೀಯ ಎಂದ. ಪರವಾಗಿಲ್ಲ ಎಂದು ಸುಮ್ಮನೆ ಮಲಗಿದ್ದ.
ಪ್ರಜ್ವಲ್ ನ ತಂದೆ ರಾತ್ರಿ ಒಂಭತ್ತು ಘಂಟೆ ಟ್ರೈನಿಗೆ ಹೊರಟಿದ್ದರು. ಪ್ರಜ್ವಲ್ ನ ತಾಯಿ ಪ್ರಜ್ವಲ್ ಗೆ ವಿಷಯ ತಿಳಿಸಲು ಫೋನ್ ಮಾಡಿದರೆ ಫೋನ್ ಆಫ್ ಬರುತ್ತಿತ್ತು. ಏನಾಯಿತು ಈ ಹುಡುಗನಿಗೆ ಬೆಳಗಿನಿಂದ ಫೋನ್ ಆಫ್ ಬರ್ತಾ ಇದ್ಯಲ್ಲ ಎಂದುಕೊಂಡರು. ಅಷ್ಟರಲ್ಲಿ ಟ್ರೈನ್ ಹೊರಟಿತು. ಪ್ರಜ್ವಲ್ ನ ತಾಯಿ ಮನೆಗೆ ಬಂದು ಊಟ ಮಾಡಿ ಮಲಗಿದ್ದರು.
_____________________________________________________________________________________
ambulance ಹಾರನ್ ಮಾಡಿಕೊಂಡು ಹಾಸ್ಟೆಲ್ ನ ಒಳಗೆ ಬಂದಿತು. ವಾರ್ಡ್ ಬಾಯ್ ಗಳು ದಢ ದಢ ನೆ ಸ್ಟ್ರೆಚರ್ ತೆಗೆದುಕೊಂಡು ಇಳಿದರು. ಅಂಗಾತ ಬಿದ್ದಿದ್ದ ದೇಹವನ್ನು ತಿರುಗಿಸಿ ಸ್ಟ್ರೆಚರ್ ಮೇಲೆ ಮಲಗಿಸಿದರು. ಪ್ರಜ್ವಲ್ ನ ಬಾಯಿ ಹಾಗೂ ಕಿವಿಯಿಂದ ರಕ್ತ ಬರುತ್ತಿತ್ತು. ಮತ್ತೆ ಹಾರನ್ ಮಾಡಿಕೊಂಡು ambulance ಹೊರಟು ಹೋಯಿತು. ಮತ್ತೆ ಅರ್ಧ ಗಂಟೆಯಲ್ಲಿ ಆಸ್ಪತ್ರೆ ಯಿಂದ ವಾರ್ಡನ್ ಗೆ ಫೋನ್ ಬಂತು. ಆ ಹುಡುಗನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರು. ಅಷ್ಟರಲ್ಲಿ ಪೋಲಿಸ್ ನವರು ಹಾಸ್ಟೆಲ್ ಬಳಿ ಬಂದಿದ್ದರು. ಪ್ರಜ್ವಲ್ ನ ರೂಂ ಮೇಟ್ ನನ್ನು ವಿಚಾರಿಸುತ್ತಿದ್ದರು. ವಾರ್ಡನ್ ಪ್ರಜ್ವಲ್ ನ ತಂದೆಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದರು ಆದರೆ ಅವರ ಫೋನ್ ನಾಟ್ ರೀಚಬಲ್ ಎಂದು ಬರುತ್ತಿತ್ತು. ನಂತರ ಮನೆ ನಂಬರಿಗೆ ಕರೆ ಮಾಡಿದರು. ಪ್ರಜ್ವಲ್ ನ ತಾಯಿ ಬಹುಶ ಪ್ರಜ್ವಲ್ ಕರೆ ಮಾಡಿರಬಹುದೆಂದು, ಅವನಿಗೆ ಸಂತಸದ ಸುದ್ದಿ ಹೇಳಬೇಕೆಂದು ಫೋನ್ ಎತ್ತಿ ಯಾಕೋ ಪ್ರಜ್ವಲ್ ಬೆಳಗಿನಿಂದ ಫೋನ್ ಆಫ್ ಮಾಡಿದ್ದೆ ಎಂದರು. ಅಮ್ಮ ನಾನು ಹಾಸ್ಟೆಲ್ ವಾರ್ಡನ್ ಮಾತಾಡುತ್ತಿರುವುದು ಎಂದು ಹೇಳಿ ವಿಷಯ ತಿಳಿಸಿದರು. ಕೈಲಿದ್ದ ರಿಸೀವರ್ ಕೆಳಗೆ ಬಿದ್ದು ಪ್ರಜ್ವಲ್ ನ ತಾಯಿ ಹಾಗೆ ಕುಸಿದು ಬಿದ್ದರು. ವಾರ್ಡನ್ ಹಲೋ ಹಲೋ ಎನ್ನುತ್ತಲೇ ಇದ್ದ...
ಟ್ರೈನ್ ಬೆಳಿಗ್ಗೆ ರಾಯಚೂರು ನಿಲ್ದಾಣಕ್ಕೆ ಬರುತ್ತಿದ್ದ ಹಾಗೆ ಪ್ರಜ್ವಲ್ ನ ತಂದೆಯ ಫೋನ್ ಹೊಡೆದುಕೊಳ್ಳುತ್ತಿತ್ತು. ಹಲೋ ಹೇಳೇ ಈಗಿನ್ನೂ ರಾಯಚೂರಿಗೆ ಬಂದಿದ್ದೇನೆ ಅಷ್ಟು ಬೇಗ ಆತುರನ ಕರೆದುಕೊಂಡು ಬರುತ್ತೀನಮ್ಮ ನಿನ್ನ ಮಗನನ್ನ ಎಂದರು.
ಅಂತೂ ನಿಮ್ಮ ಹಠಕ್ಕೆ ನನ್ನ ಮಗನನ್ನು ಬಲಿ ತೆಗೆದುಕೊಂಡು ಬಿಟ್ಟಿರಲ್ಲ ಎಂದು ವಿಷಯ ತಿಳಿಸಿ ಬಿಕ್ಕುತ್ತಿದ್ದಳು ಪ್ರಜ್ವಲ್ ನ ತಾಯಿ...
(ಇದೊಂದು ಇತ್ತೀಚೆಗಷ್ಟೇ ನಡೆದ ಸತ್ಯ ಘಟನೆಯಾಧಾರಿತ ಕಥೆ. ಹೆಸರುಗಳು ಬದಲಾಯಿಸಿದ್ದೇನೆ)
Comments
ಉ: ಕಥೆ = ವಿದ್ಯಾರ್ಥಿ ಮತ್ತು ಓದು
In reply to ಉ: ಕಥೆ = ವಿದ್ಯಾರ್ಥಿ ಮತ್ತು ಓದು by harishsharma.k
ಉ: ಕಥೆ = ವಿದ್ಯಾರ್ಥಿ ಮತ್ತು ಓದು
ಉ: ಕಥೆ = ವಿದ್ಯಾರ್ಥಿ ಮತ್ತು ಓದು
In reply to ಉ: ಕಥೆ = ವಿದ್ಯಾರ್ಥಿ ಮತ್ತು ಓದು by venkatb83
ಉ: ಕಥೆ = ವಿದ್ಯಾರ್ಥಿ ಮತ್ತು ಓದು
In reply to ಉ: ಕಥೆ = ವಿದ್ಯಾರ್ಥಿ ಮತ್ತು ಓದು by Jayanth Ramachar
ಉ: ಕಥೆ = ವಿದ್ಯಾರ್ಥಿ ಮತ್ತು ಓದು