' ಆಲದ ಮರ '(ಕಥೆ) ಭಾಗ 1
' ಸುರಪುರ ' ಸಹ್ಯಾದ್ರಿಯ ತಪ್ಪಲಿನ ಸುಮಾರು ಇಪ್ಪತ್ತು ಮೂವತ್ತು ಮನೆಗಳಿರುವ ಮಲೆನಾಡಿನ ಒಂದು ಸಣ್ಣ ಹಳ್ಳಿ. ಈಗ ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಇದ್ದಿರಬಹುದಾದ ಕಣ್ಣು ಕೋರೈಸುವ ದಟ್ಟವಾದ ಕಾಡು ಇಲ್ಲದೆ ಹೋದರೂ, ಈಗಲೂ ಹಸಿರು ಹೊದ್ದು ನಿಂತ ಗಿರಿ ಬೆಟ್ಟಗಳು, ಸಾಧಾರಣ ಸಸ್ಯ ಸಂಪತ್ತು ಝರಿ ತೊರೆ ಗಳನ್ನು ಹೊಂದಿರುವ ಮತ್ತು ಮಳೆಗಾಲದಲ್ಲಿ ಧಿಡೀರನೆ ಕಾಣಿಸಿ ಕೊಳ್ಳುವ ಅಬ್ಬೆಗಳನ್ನು ಹೊಂದಿರುವ ಊರು. ಇವನ್ನೆಲ್ಲ ಹತ್ತಿರದಿಂದ ನೋಡಸಿ ಅನುಭವಿಸ ಬೇಕೆಂದಾದರೆ ಸುರಪುರದಿಂದ ಸುಮಾರು ಐದು ಮೈಲು ದೂರದಲ್ಲಿ ರುವ ಸಹ್ಯದ್ರಿ ಕಣಿವೆಗೆ ಹೊಂದಿ ಕೊಂಡಂತಿರುವ ದಟ್ಟ ಕಾನನಕ್ಕೆ ಹೋಗಬೇಕು.
ಸುರಪುರದಿಂದ ಸಹ್ಯಾದ್ರಿ ಕಣಿವೆಗೆ ಹೋಗುವ ದಾರಿಯಲ್ಲಿ ಸುಮಾರು ಅರ್ಧ ಫರ್ಲಾಂಗ್ ದೂರಕ್ಕೆ ಒಂದು ಗಾಡಿ ದಾರಿಯಿದೆ. ಆ ದಾರಿಯ ಬಲಕ್ಕೆ ಸುಮಾರು ಎರಡು ಚದುರು ಮೈಲು ವ್ಯಾಪ್ತಿಯ ಹುಲ್ಲು ಗಾವಲಿದ್ದು ಅದರಲ್ಲಿ ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದಿವೆ. ಆ ಬ್ಯಾಣದಲ್ಲಿ ಅನೇಕ ವೀರಗಲ್ಲುಗಳು ಮಾಸತಿ ಕಲ್ಲುಗಳು ಇದ್ದು, ಅವು ಗತಕಾಲದ ಸಾಕ್ಷಿಗಳಾಗಿ ಈಗಲೂ ನಿಂತಿವೆ. ಆ ಬ್ಯಾಣದಲ್ಲಿ ಅನಂತ ಶಯನ, ತ್ರಿಪುರಾಂತೇಶ್ವರ, ದುರ್ಗೆ ಮತ್ತು ಸೂರ್ಯ ದೇವಸ್ಥಾನಗಳಿವೆ. ಎಲ್ಲ ದೇವರ ವಿಗ್ರಹಗಳು ಭಗ್ನ ಗೊಂಡಿದ್ದು ಪೂಜೆ ಪುನಸ್ಕಾರಗಳಿಲ್ಲದೆ ಸುಮಾರು ಶತಮಾನ ಕಾಲವೆ ಸಂದಿರಬೇಕು. ದೇವಸ್ಥಾನಗಳ ಕಲ್ಲುಗಳು ಕಲ್ಲು ಚಪ್ಪಡಿಗಳು ಮತ್ತು ಅನೇಕ ಶಿಲಾ ಶಾಸನಗಳು ಹಾಗೂ ಮಾಸತಿ ಕಲ್ಲುಗಳು ಆ ಗ್ರಾಮದ ಅನೇಕರ ಮನೆಗಳಲ್ಲಿ ಬಚ್ಚಲು ಕಲ್ಲುಗಳಾಗಿಯೋ ಬಟ್ಟೆ ಒಗೆಯುವ ಕಲ್ಲು ಗಳಾಗಿಯೋ ಉಪಯೋಗಿಸಲ್ಪಡುತ್ತಿವೆ. ಸುಮಾರು ಐನೂರು ಆರುನೂರು ವರ್ಷಗಳ ಹಿಂದೆ ಯಾವನೋ ಒಬ್ಬ ಸಾಮಂತನ ಇಲ್ಲ ಪಾಳೆಯಗಾರನ ಆಡಳಿತ ಕೇಂದ್ರವಾಗಿ ಮೆರೆದಿರಬಹುದಾದ ಸ್ಥಳ ಈಗ ಗತ ಕಾಲದ ಪಳಯುಳಿಕೆಯಾಗಿ ನಿಂತಿದೆ.
ಆ ಬ್ಯಾಣದ ಮಧ್ಯೆ ಅನೇಕ ಬಿಳಿಲುಗಳನ್ನು ಹೊಂದಿದ ಒಂದು ಬೃಹತ್ತಾದ ಆಲದ ಮರವಿದೆ. ಅದರ ಸುತ್ತಲೂ ಶಿಥಿಲಾವಸ್ಥೆಯಲ್ಲಿರುವ ಸುಮಾರು ಮೂವತ್ತು ಅಡಿ ಉದ್ದ ಮತ್ತು ಅಗಲಗಳ ವ್ಯಾಪ್ತಿಯ ಚಚ್ಚೌಕಾದ ಜಂಬಿಟ್ಟಿಗೆ ಕಲ್ಲಿನ ದೊಡ್ಡ ಕಟ್ಟೆಯಿದೆ. ಆ ಆಲದ ಕಟ್ಟೆಯ ಬಲಭಾಗದಲ್ಲಿ ಒಂದು ಕಾಲು ದಾರಿ ಇದೆ. ಅದನ್ನು ಸುರಪುರದ ಗ್ರಾಮಸ್ಥರು ಹೊನ್ನಾಪುರ ಪಟ್ಟಣಕ್ಕೆ ಹೋಗಿ ಬರಲು ಬಳಸುವ ಬಲು ಹತ್ತಿರದ ದಾರಿ. ನಿಜಕ್ಕೂ ಆ ಆಲದಮರ ಸುತ್ತ ಮುತ್ತಲಿನ ಪ್ರದೇಶ ಮನಕ್ಕೆ ಮುದ ನೀಡುವ, ದನಗಾಯಿಗಳು ವಿಶ್ರಾಂತಿ ಪಡೆಯುವ ಮತ್ತು ಆಗಾಗ ಅಲೆಮಾರಿ ತಂಡಗಳು ತಂಗುವ ಸ್ಥಳ. ತನ್ನ ಐನೂರು ಆರುನೂರು ವರ್ಷಗಳ ಜೀವನದುದ್ದಕ್ಕೂ ಆ ಆಲದಮರ ಏನನ್ನು ಕಂಡಿಲ್ಲ, ಏನನ್ನು ನೋಡಿಲ್ಲ? ಆದಕ್ಕೆ ಬಾಯಿ ಇದ್ದಿದ್ದರೆ ಎಷ್ಟು ರೋಚಕ ಮತ್ತು ಮನ ಮಿಡಿವ ಕಥೆಗಳನ್ನು ಹೇಳುತ್ತಿರಲಿಲ್ಲ. ಯಾವುದನ್ನೂ ಬಹಿರಂಗ ಪಡಿಸದೆ ಋತುಮಾನಕ್ಕನುಸರಿಸಿ ಚಿಗುರಿ ಮುದಬೀರಿ ಉದುರಿ ಮತ್ತೆ ಮತ್ತೆ ಚಿಗುರುತ್ತ ಗತಕಾಲಕ್ಕೆ ಸಾಕ್ಷಿಯಾಗಿ ನಿರ್ಲಿಪ್ತವಾಗಿ ನಿಂತಿದೆ. ಪಕ್ಷಿಗಳಿಗೆ, ಪ್ರಾಣಿಗಳಿಗೆ ಮತ್ತು ದಣಿದು ಬಂದ ಮನುಷ್ಯರಿಗೆ ನೆರಳು ನೀಡುತ್ತ ' ಪರೋಪಕಾರಾರ್ಥಂ ಇದಂ ಶರೀರಂ ' ಎಂಬ ಉಕ್ತಿಗನುಗುಣವಾಗಿ ಬದುಕುತ್ತಿದೆ.
*
ಸುರಪುರದ ವೆಂಕಟಪ್ಪ ಆ ಊರಿಗೆ ಸ್ಥಿತಿವಂತ ಹಾಗೂ ಸರ್ವಾಧಿಕಾರಿ. ಪುರಾತನ ಕಾಲದಿಂದಲೂ ಆತನ ವಂಶದ ಸ್ಥಿರ ಚರ ಸ್ವತ್ತುಗಳ ವಿಸ್ತರಣೆಯಾಗುತ್ತ ಬಂದಿದೆಯೇ ವಿನಃ ಕಡಿಮೆಯಾಗಿಲ್ಲ. ಬಹುಶಃ ವೆಂಕಟಪ್ಪ ಮಿತ ಸಂತಾನದ ಬಗ್ಗೆ ಒಲವುಳ್ಳ ವ್ಯಕ್ತಿಯೆಂದು ಕಾಣುತ್ತದೆ, ಅದಕ್ಕೆ ಆತನಿಗೆ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಎಂಬಂತೆ ಆತನಿಗೆ ಎರಡೇ ಮಕ್ಕಳು, ಅವರೇ ಸುವರ್ಣ ಮತ್ತು ಹರೀಶ. ಆಧುನಿಕತೆಯ ಗಾಳಿ ಎಷ್ಟೆ ಗ್ರಾಮದೆಡೆ ಬೀಸಿದ್ದರೂ ಅದು ವೆಂಕಟಪ್ಪನ ಮನೆಯೊಳಗೆ ಪ್ರವೇಶ ಮಾಡಿರಲಿಲ್ಲ. ಬಹಳ ಮಾಡಿ ಅದು ವೆಂಕಟಪ್ಪನ ಸರ್ವಾಧಿಕಾರಿ ಧೋರಣೆಗೆ ಮತ್ತು ದರ್ಪಕ್ಕೆ ಹೆದರಿರಬೇಕು, ಆತನ ಮಗಳು ಸುವರ್ಣ ಬುದ್ಧಿವಂತೆ, ತಂದೆಗೆ ಮಗಳ ಮೇಲೆ ಒಲವು ಜಾಸ್ತಿ. ಆಕೆಯ ವೈಚಾರಿಕತೆಯ ಬಗ್ಗೆ ತಂದೆ ವೆಂಕಟಪ್ಪನಿಗೆ ಹೆಮ್ಮೆ ಇದ್ದರೂ ಒಂದಿಲ್ಲ ಒಂದು ದಿನ ಆ ವೈಚಾರಿಕತೆ ತನ್ನ ವಂಶದ ರೀತಿ ರಿವಾಜುಗಳನ್ನು ಧಿಕ್ಕರಿಸ ಬಲ್ಲಂತಹ ಸಂಧರ್ಭಗಳನ್ನು ತಂದೊಡ್ಡಿದರೆ ಏನು ಮಾಡುವುದು? ಎಂದು ವೆಂಕಟಪ್ಪ ಆತಂಕ ಪಡುತ್ತಿದ್ದ. ಆತನ ಆತಂಕ ನಿಜವಾಗುವ ಸಂಧರ್ಭವೊಂದು ಬಂದೊದಗಿತು.
ಸುರಪುರದ ರಾಮಪ್ಪನ ಮಗ ಸುರೇಂದ್ರ ಮತ್ತು ವೆಂಕಟಪ್ಪನ ಮಗಳು ಸುವರ್ಣ ಹೊನ್ನಾಪುರದ ಕಾಲೇಜಿನಲ್ಲಿ ಒಟ್ಟಾಗಿ ಓದುತ್ತಿದ್ದರು. ಸಣ್ಣ ವಯಸ್ಸಿನಿಂದ ಬೆಳೆದು ಬಂದ ಸಲಿಗೆ ಯೌವ್ವನಾವಸ್ಥೆಗೆ ಬರುತ್ತಿದಂತೆ ಪರಸ್ಪರ ಆಕರ್ಷಿತ ರಾಗುವಲ್ಲಿಯ ವರೆಗೆ ಬೆಳೆದು ಬಂತು. ಸುರೇಂದ್ರ ಮತ್ತು ಸುವರ್ಣ ಒಟ್ಟೊಟ್ಟಿಗೆ ಹೊನ್ನಾಪುರದಲ್ಲಿ ಸುತ್ತುವ ವಿಷಯ ಆಗಾಗ ಕೇಳಿ ಬರುತ್ತಿತ್ತು. ಈ ಬಗ್ಗೆ ತನ್ನ ಕಿವಿಗೆ ಬಿದ್ದ ಗಾಳಿ ವರ್ತಮಾನವನ್ನು ವೆಂಕಟಪ್ಪ ನಂಬಿರಲಿಲ್ಲ. ತನ್ನ ಮಗಳು ಅಂತಹ ದುರ್ಬಲ ಮನಸಿನವಳಲ್ಲ, ಯಾರೋ ತನಗಾಗದವರು ಈ ಗಾಳಿ ವರ್ತಮಾನವನ್ನು ಹಬ್ಬಿಸಿರ ಬೇಕೆಂದು ತಲೆಕೊಡವಿದ. ತನ್ನ ವಂಶದ ಭದ್ರ ಕೋಟೆಗೆ ಬಿರುಕು ಬಿಡುತ್ತಿರುವ ವಿಷಯವನ್ನು ಸ್ವತಃ ಆತನೆ ಕಾಣ ಬೇಕಾದ ಸಂಧರ್ಭ ಅಕಸ್ಮಿಕವಾಗಿ ಒದಗಿ ಬಂತು. ಕಳೆದ ಯುಗಾದಿಯ ಹಬ್ಬಕ್ಕೆ ಒಂದು ದಿನ ಮೊದಲು ಸಾಮಾನು ತರಲು ಹೊನ್ನಾಪುರಕ್ಕೆ ಹೋಗಿದ್ದ ವೆಂಕಟಪ್ಪ ವಾಪಾಸು ಬರುವಾಗ ಸೂರ್ಯ ಪಶ್ಚಿಮದ ದಿಗಂತದಲ್ಲಿ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಮರೆಯಾಗುತ್ತಿದ್ದ, ಪಡುವಣದ ಅಂಬರದಲ್ಲೆಲ್ಲ ಓಕುಳಿ ಚೆಲ್ಲಾಡಿದಂತೆ ರಂಗು ರಂಗಾಗಿತ್ತು. ನೀಲ ಗಗನದಲ್ಲಿ ಹಕ್ಕಿಗಳ ಗುಂಪಿನ ಸಾಲು ಸಾಲು ಪಯಣ ಯಾರಿಗೂ ಮತ್ತೇರಿಸ ಬಹುದಾದ ವಸಂತ ಮಾಸದ ಸುಂದರ ಸಂಜೆಯದು. ಉಲ್ಹಾಸಭರಿತ ವೆಂಕಟಪ್ಪ ಆಲದಮರದ ಪಕ್ಕದ ದಾರಿಗುಂಟ ತನ್ನ ಮನೆಗೆ ಸಾಮಾನು ಸಾಗಿಸುತ್ತಿರಬೇಕಾದರೆ ದೂರದಲ್ಲಿ ಗಂಡು ಮತ್ತು ಹೆಣ್ಣುಗಳ ಕಿಲಕಿಲ ನಗು ಕೇಳಿಬಂತು. ಇಂತಹ ಎಷ್ಟೋ ಗಂಡು ಹೆಣ್ಣುಗಳು ಆ ಆಲದಕಟ್ಟೆಯ ಹತ್ತಿರ ಕಲೆತಿವೆ ಎಂದು ಮುಂದೆ ಹೆಜ್ಜೆ ಇಟ್ಟ, ಆದರೆ ಆ ಗಂಡು ಹೆಣ್ಣುಗಳ ನಗು ಆತನನ್ನು ಅಷ್ಟು ಸುಮ್ಮನೆ ಮುಂದೆ ಹೋಗ ಗೊಡಲಿಲ್ಲ. ಆದರೆ ಆ ಹೆಣ್ಣಿನ ನಗೆಯನ್ನು ಎಲ್ಲಿಯೋ ಕೇಳಿದ ಹಾಗಿದೆಯಲ್ಲ ಎಂದು ಯೋಚನೆಗೊಳಗಾದ. ಬೇರೆಯವರ ವಿಷಯ ಬಿಡಿ ಇದೇ ವೆಂಕಟಪ್ಪ ತನ್ನ ಹರೆಯದ ದಿನಗಳಲ್ಲಿ ಏನೆಲ್ಲ ಆಟ ವಾಡಿಲ್ಲ, ಲೆಖ್ಖವಿದೆಯೆ? ಹರೆಯದ ದಿನಗಳನ್ನು ಬಿಡಿ ಈಗಲೂ ಸಹ ವೆಂಕಟಪ್ಪ ಮತ್ತು ಚಂದ್ರಿಯರು ಸರಿರಾತ್ರಿಯಲ್ಲಿ ಕಲೆಯುವ ಸ್ಥಳ ಅದೇ ಆಲದಕಟ್ಟೆಯಲ್ಲವೆ? ಅದು ಅವರಿಬ್ಬರನ್ನು ಮಾತ್ರಬಿಟ್ಟು ಊರಿಗೆಲ್ಲ ಗೊತ್ತಿರುವ ವಿಷಯ. ತಲೆಕೊಡವಿ ಮುಂದೆ ಆಲದಕಟ್ಟೆಯ ಹತ್ತಿರಕ್ಕೆ ಸಾಗಿದಂತೆ ಆ ಗಂಡು ಹೆಣ್ಣುಗಳ ಧ್ವನಿ ಸ್ಪಷ್ಟವಾಗ ತೊಡಗಿತು. ಪಾಳುಬಿದ್ದ ದುರ್ಗೆಯ ಗುಡಿಯ ಪಕ್ಕಕ್ಕೆ ನಿಂತು ಆಲೈಸಿದ. ಆ ಹೆಣ್ಣುಧ್ವನಿ ಬೇರಾರದೂ ಅಲ್ಲ, ಆತನ ಮಗಳು ಸುವರ್ಣಳದೆ, ವೆಂಕಟಪ್ಪ ಗರಬಡಿದು ನಿಂತ. ತನ್ನ ಮುದ್ದಿನ ಮಗಳು ಸುವರ್ಣ ಯಾವುದರಲ್ಲೂ ಸಮನಲ್ಲದ ರಾಮಪ್ಪನ ಮಗ ಸುರೇಂದ್ರನ ಜೊತೆ ಲಲ್ಲೆ ಹೊಡೆಯುತ್ತಿದ್ದಾಳೆ . ಈ ವರೆಗೂ ಅವರ ವಂಶದ ಯಾವ ಹೆಣ್ಣೂ ಈ ರೀತಿ ವರ್ತಿಸಿಲ್ಲಾ. ಮುಂಡೆ; ಮನೆತನಕ್ಕೆ ಮಸಿ ಬಳಿಯಲು ಹೊರಟಿದ್ದಾಳೆ, ಆಕೆಯ ಕತ್ತು ಹಿಸುಕಿ ಬಿಡಬೇಕು ಎನ್ನುವಷ್ಟು ಕೋಪಗೊಂಡ ಆತ ತನಗೆ ತಾನೆ ಸಂಯಮ ತಂದುಕೊಂಡ. ಒಂದು ರೀತಿ ದುಗುಡತೆ ಆತನನ್ನು ಆವರಿಸಿತು, ಆ ಸ್ಥಿತಿಯಲ್ಲಿಯೆ ಮನೆ ಸೇರಿಕೊಂಡ. ಸ್ವಲ್ಪ ಸಮಯದ ನಂತರ ಮನೆಗೆ ಬಂದ ಸುವರ್ಣಳನ್ನು ವೆಂಕಟಪ್ಪ ಏನೂ ಗೊತ್ತಿಲ್ಲದವನಂತೆ
' ಯಾಕಮ್ಮ ಇಷ್ಟು ಹೊತ್ತು ' ಎಂದು ಪ್ರಶ್ನಿಸಿದ. ಆಕೆ ನಿಜದ ತಲೆಯ ಮೇಲೆ ಹೊಡೆದಂತೆ
' ಅಪ್ಪ ಹೊನ್ನಾಪುರದಲ್ಲಿ ನನ್ನ ಸ್ನೇಹಿತೆ ರತ್ನ ಸಿಕ್ಕಿದ್ದಳು ಬರಲು ಸ್ವಲ್ಪ ತಡವಾಯಿತು ' ಎಂದಳು.
ಆಕೆಯ ಉತ್ತರವನ್ನು ಕೇಳಿದ ವೆಂಕಟಪ್ಪ ಅವಡು ಗಚ್ಚಿದ. ಆಕೆ ತಂದೆಯ ಮುಖವನ್ನು ಗಮನಿಸಿದ್ದರೆ ಆತ ಎಷ್ಟು ಕೋಪಗೊಂಡಿದ್ದ ಎಂಬುದು ಆಕೆಗೆ ಗೊತ್ತಾಗುತ್ತಿತ್ತು. ಆದರೆ ಆಕೆ ಆಥನ ಮುಖವನ್ನು ಗಮನಿಸದೆ ತನ್ನ ಕೋಣೆಯೆಡೆಗೆ ನಡೆದಳು. ಬಿಎ ಪದವಿಗೆ ಬರೆದಿದ್ದ ಸುವರ್ಣ ಪ್ರಥಮ ದರ್ಜೆಯಲ್ಲಿ ಪಾಸಾದ ಆಕೆ ;ಮುಂದಕ್ಕೆ ಓದುವ ತನ್ನ ಆಶೆಯನ್ನು ವ್ಯಕ್ತ ಪಡಿಸಿದಳು. ಮಗಳ ಇಂಗಿತ ತಿಳಿದ ತಾಯಿ ಗಿರಿಜಮ್ಮ ತನ್ನ ಗಂಡ ವೆಂಕಟಪ್ಪನಿಗೆ
' ಮೊದಲು ಆಕೆಯ ಮದುವೆ ಮಾಡಿ ಮುಗಿಸಿ, ಆಕೆ ಮುಂದಕ್ಕೆ ಓದುವುದು ಬೇಡ ' ಎಂದಳು.
ಆದರೆ ಸುವರ್ಣಳಿಗೆ ತಾನು ತಂದೆಯ ಪ್ರೀತಿಯ ಮಗಳು, ತನ್ನ ತಾಯಿಯ ಮಾತನ್ನು ಗಮನಿಸದೆ ತಂದೆ ತನ್ನನ್ನು ಮೈಸೂರಿಗೆ ಉನ್ನತ ವ್ಯಾಸಂಗಕ್ಕೆ ಕಳಿಸುತ್ತಾರೆ ಎಂದು ಬಹಳ ನಿರೀಕ್ಷೆ ಇಟ್ಟು ಕೊಂಡಿದ್ದಳು. ಆದರೆ ಸುವರ್ಣಳ ಗ್ರಹಿಕೆ ತಪ್ಪಾಗಿತ್ತು. ಯಾವತ್ತೂ ತನ್ನ ಹೆಂಡತಿಯ ಮಾತಿಗೆ ಬೆಲೆ ಕೊಡದ ವೆಂಕಟಪ್ಪ ಮಗಳ ಮದುವೆಯ ವಿಷಯ ಕುರಿತಂತೆ ತನ್ನ ಹೆಂಡತಿ ಗಿರಿಜಮ್ಮ ನೀಡಿದ ಸಲಹೆಗೆ ಸಮ್ಮತಿ ಸೂಚಿಸಿದ. ತನ್ನ ಯೋಜನೆ ತಲೆಕೆಳಗಾದದ್ದು ಕಂಡು ಸುವರ್ಣ ಖಿನ್ನಳಾದಳು.
*
ರಾಮಪ್ಪನ ಮಗ ಸುರೇಂದ್ರ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದ, ಮೈಸೂರಿಗೆ ತೆರಳಲಾಗದ ಸುವರ್ಣ ಖಿನ್ನಳಾದಳು. ಆಕೆಯ ಅನ್ಯ ಮನಸ್ಕತೆಯನ್ನು ಗಮನಿಸಿದ ವೆಂಕಟಪ್ಪ ಮುಂದಿನ ವರ್ಷ ಹೋಗುವಿ ಯಂತೆ ಬಿಡು ಎಂದು ಆಕೆಯನ್ನು ಸಂತೈಸುತ್ತಾನೆ. ತಂದೆಯ ಆಶ್ವಾಸನೆಯನ್ನು ನಿಜವೆಂದು ಭಾವಿಸಿದ ಸುವರ್ಣ ಹರ್ಷಚಿತ್ತಳಾಗುತ್ತಾಳೆ. ಮೊದಲಿನ ಲವಲವಿಕೆ ಅವಳಲ್ಲಿ ಪುನಃ ಕಾಣಿಸಿಕೊಳ್ಳುತ್ತದೆ. ಮುಂದಿನ ವರ್ಷದ ಬರುವಿಕೆಯ ನಿರೀಕ್ಷೆಯಲ್ಲಿ ಮುದಗೊಳ್ಳುತ್ತಾಳೆ. ಒಂದು ವರ್ಷ ಹೋದರೆ ಏನು ಮಹಾ, ಮುಂದಿನ ವರ್ಷದಿಂದ ಪುನಃ ಸುರೇಂದ್ರನ ಸಾನಿಧ್ಯ ದೊರೆಯುತ್ತೆ, ವ್ಯಾಸಂಗ ಪೂರೈಸಿ ತಂದೆಯ ಮನ ಒಲಿಸಿ ಸುರೇಂದ್ರನನ್ನು ಮದುವೆಯಾಗ ಬಹುದು. ಮನ ಒಲಿಸಿದರೆ ತನ್ನ ಕೋರಿಕೆಯನ್ನು ತಂದೆ ಅಲ್ಲಗಳೆಯಲಿಕ್ಕಿಲ್ಲ ಎಂದು ಭವಿಷ್ಯದ ಜೀವನದ ಬಗ್ಗೆ ಹೊಂಗನಸಿಗೆ ಜಾರಿದಳು. ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಬೇಕಾದರೆ ಗುರುತಿಸಬಹುದು, ಆದರೆ ವೆಂಕಟಪ್ಪನ ಮನೋ ವ್ಯಾಪಾರವನ್ನು ಈ ವರೆಗೂ ಯಾರಿಂದಲೂ ಊಹಿಸಲು ಆಗಿಲ್ಲವೆಂದ ಮೇಲೆ ಇಂದು ನಿನ್ನೆ ಮೊನ್ನೆ ಕಣ್ಣುಬಿಟ್ಟ ಸುವರ್ಣಳೇನು ಗ್ರಹಿಸಿಯಾಳು!
( ಮುಂದುವರಿದಿದೆ )
Comments
ಉ: ' ಆಲದ ಮರ '(ಕಥೆ) ಭಾಗ 1
In reply to ಉ: ' ಆಲದ ಮರ '(ಕಥೆ) ಭಾಗ 1 by venkatb83
ಉ: ' ಆಲದ ಮರ '(ಕಥೆ) ಭಾಗ 1