ಶವಗಳೊಡನೆ ಸಂಭಾಷಣೆ
ಸುಮಾರು ೧೦ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್ ಇನ್ಸ್‌ಪೆಕ್ಟರರಿಂದ ಫೋನು ಬಂದಿತು. ಹಿಂದಿನ ದಿನ ಕೇರಳಾಪುರದಲ್ಲಿ ಒಬ್ಬ ಹೆಣ್ಣುಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆಂದೂ, ಕೂಡಲೇ ಬಂದು ಶವತನಿಖೆ ನಡೆಸಿಕೊಡಬೇಕೆಂದೂ ಅವರು ಕೋರಿದ್ದರು. ಸರಿ, ಭಾನುವಾರದ ಕಥೆ ಮುಗಿಯಿತು ಎಂದು ಅಂದುಕೊಂಡು ಬಟ್ಟೆ ಹಾಕಿಕೊಂಡು ಜೀಪಿಗೆ ಕರೆಕಳುಹಿಸಿದೆ. ಗುಮಾಸ್ತರೊಬ್ಬರನ್ನು ಜೊತೆಗೆ ಕರೆದುಕೊಂಡು ಕೇರಳಾಪುರ ತಲುಪಿದಾಗ ಅಲ್ಲಿನ ಒಂದು ಮನೆಯ ಮುಂದೆ ಜನರ ದೊಡ್ಡ ಗುಂಪು ಕೂಡಿತ್ತು. ಪೋಲಿಸರು ಜನರನ್ನು ನಿಯಂತ್ರಿಸುತ್ತಿದ್ದರು. ನಾನು ಜೀಪಿನಿಂದ ಇಳಿದ ತಕ್ಷಣ ಜನರ ಗುಂಪು 'ಸಾಹೇಬರು ಬಂದರು' ಎನ್ನುತ್ತಾ ಅಕ್ಕ ಪಕ್ಕ ಸರಿದು ನನಗೆ ಮನೆಯ ಒಳಗೆ ಹೋಗಲು ದಾರಿ ಮಾಡಿಕೊಟ್ಟರು. ನಾನು ಮನೆಯ ಒಳಗೆ ಹೋದಾಗ ನನ್ನ ಹಿಂದೆ ಒಬ್ಬ ಪೋಲಿಸ್ ಪೇದೆ, ಗುಮಾಸ್ತ ಮತ್ತು ಒಬ್ಬ ಫೋಟೋಗ್ರಾಫರ್ ಬಂದರು. ನಾನು ಮನೆಯ ಒಳ ಕೊಠಡಿಗೆ ಹೋಗುತ್ತಾ ಬಾಗಿಲ ಪಕ್ಕದಲ್ಲಿ ನಿಂತಿದ್ದ ಒಬ್ಬ ಹೆಂಗಸಿಗೆ "ಎಲ್ಲಮ್ಮಾ?" ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟವನು ಗಕ್ಕನೆ ನಿಂತು ಹಿಂತಿರುಗಿದೆ. ನಾನು ಯಾರನ್ನು ವಿಚಾರಿಸಿ ಮುಂದೆ ಹೋಗಿದ್ದೆನೋ ಅದೇ ಹೆಣವಾಗಿತ್ತು. ಮನೆಯಲ್ಲಿ ನೀರವ ಮೌನ ಆವರಿಸಿತ್ತು.
ವಿಷಯ ಮುಂದುವರೆಸುವ ಮುನ್ನ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಅಗತ್ಯವಾಗಿದೆ. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಯಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳನ್ನು ಯಾರ ಗಮನಕ್ಕೂ ಬರದಂತೆ ಮುಚ್ಚಿಹಾಕುವುದು, ಹಣದ ವಿನಿಮಯ, ರಾಜಕಾರಣಿಗಳ ಮಧ್ಯಪ್ರವೇಶದಿಂದ ರಾಜಿ ಮಾಡಿಕೊಂಡು ಬಿಡುವುದು, ಇತ್ಯಾದಿಗಳೂ ನಡೆಯುತ್ತವೆ. ಕೆಲವು ವೈದ್ಯರುಗಳೂ ಸಹ ಹಣದ ಪ್ರಭಾವದಿಂದ ಸುಳ್ಳು ಪೋಸ್ಟ್ ಮಾರ್ಟಮ್ ವರದಿ ಕೊಟ್ಟ ಪ್ರಕರಣಗಳೂ ಇಲ್ಲವೆನ್ನಲಾಗುವುದಿಲ್ಲ. ಪ್ರಕರಣ ಮುಚ್ಚಿಹಾಕಲು ಕೆಲವು ಪ್ರಕರಣಗಳಲ್ಲಿ ಪೋಲಿಸರ ಸಹಕಾರ ಸಹ ಇಲ್ಲವೆಂದು ಹೇಳಲಾಗುವುದಿಲ್ಲ. ಮುಖ್ಯವಾಗಿ ಪ್ರಕರಣ ಮುಚ್ಚಿಹಾಕುವಂತಹ ಪ್ರಸಂಗದಲ್ಲಿ ಪ್ರಮುಖ ಪಾತ್ರ ವಹಿಸುವುದು ರಾಜಕಾರಣ ಮತ್ತು ಹಣ ಎಂಬುದಂತೂ ಗೊತ್ತಿರುವ ಸತ್ಯ. ಈಗ ಇಷ್ಟು ಮಾಹಿತಿ ಸಾಕು. ಮೂಲ ವಿಷಯ ಮುಂದುವರೆಸುವೆ.
ಎಲ್ಲರ ಗಮನ ನನ್ನ ಮೇಲಿತ್ತು. ನಾನು ಶವವನ್ನು, ಶವವಿದ್ದ ಸ್ಥಿತಿಯನ್ನು ಗಮನಿಸಿದೆ. ಬಾಗಿಲಿನ ಪಕ್ಕದಲ್ಲಿದ್ದ ತೊಲೆಯಿಂದ ಪ್ಲಾಸ್ಟಿಕ್ ಹಗ್ಗದಲ್ಲಿ ನೇತಾಡುತ್ತಿದ್ದ ಶವದ ಕಾಲುಗಳು ಮುಂಚಾಚಿ ಇನ್ನೇನು ನೆಲವನ್ನು ಸೋಕುವಂತಿತ್ತು. ನೇಣು ಹಾಕಿಕೊಳ್ಳುವವರು ಅಷ್ಟು ಕಡಿಮೆ ಎತ್ತರದಿಂದ ನೇಣು ಹಾಕಿಕೊಳ್ಳಲಾರರು ಎಂದು ನನ್ನ ಮನಸ್ಸು ಹೇಳುತ್ತಿತ್ತು. ನಾನು ಪರೀಕ್ಷಿಸಲು ಅನುಕೂಲವಾಗುವಂತೆ ಪೋಲಿಸ್ ಪೇದೆ ಶವವನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಲ್ಲಾಡುತ್ತಿದ್ದ ಶವ 'ನೀವಂದುಕೊಂಡಿರುವುದು ಸರಿ' ಎಂದು ಹೇಳುವಂತಿತ್ತು. ಶವದ ನಾಲಿಗೆ ಹೊರಚಾಚಿದ್ದು ಹಲ್ಲುಗಳಿಂದ ಕಚ್ಚಿಕೊಂಡಿದ್ದು, ಬಾಯಿಯಿಂದ ನೊದ್ಲೆ ಹೊರಬಂದಿತ್ತು. ತೊಲೆಯಿಂದ ನೆಲಕ್ಕೆ ಇದ್ದ ಅಂತರ ಸುಮಾರು ೭ ಅಡಿ ಇತ್ತು. ಹೆಣದ ಕುತ್ತಿಗೆಯ ಗಂಟಿಗೂ ತೊಲೆಗೂ ಇದ್ದ ಅಂತರ ಸುಮಾರು ಎರಡೂವರೆ ಅಡಿ ಇದ್ದು, ಕೆಳಗಿನ ಪಾದಕ್ಕೂ ನೆಲಕ್ಕೂ ಇದ್ದ ಅಂತರ ಸುಮಾರು ಒಂದೂವರೆ ಇಂಚು ಇತ್ತು. ತೊಲೆಗೆ ಮೂರು ಎಳೆಯಲ್ಲಿ ಸುತ್ತಿ ಹಗ್ಗವನ್ನು ಗಂಟು ಹಾಕಲಾಗಿತ್ತು. ಶವದ ಕುತ್ತಿಗೆಯಲ್ಲಿದ್ದ ಹಗ್ಗವೂ ಮೂರು ಎಳೆಯಿಂದ ಸುತ್ತಿ ಗಂಟು ಹಾಕಿದ್ದಾಗಿತ್ತು. ಆ ಸ್ಥಿತಿಯಲ್ಲಿ ಕೆಲವು ಫೋಟೋಗಳನ್ನು ಸ್ಥಳೀಯ ಫೋಟೋಗ್ರಾಫರನ ಸಹಾಯದಿಂದ ತೆಗೆಸಿದೆ. ಹೆಣದ ಫೋಟೋ ತೆಗೆಯಲು ಹೆದರುತ್ತಿದ್ದ ಅವನಿಗೆ ಗದರಿಸಿ ಧೈರ್ಯ ಹೇಳಬೇಕಾಯಿತು. ನಂತರದಲ್ಲಿ ಹೆಣವನ್ನು ಕೆಳಗೆ ಇಳಿಸಿ ಒಂದು ಚಾಪೆಯ ಮೇಲೆ ಮಲಗಿಸಿ ಹಲವು ಕೋನಗಳಿಂದ ಫೋಟೋ ತೆಗೆಸಿದೆ. ಕುತೂಹಲದಿಂದ ಗುಂಪು ಕೂಡಿದ್ದ ಜನರನ್ನು ಹೊರಕಳುಹಿಸಿ ಒಬ್ಬರು ಹೆಂಗಸನ್ನು ಕರೆಸಿ ಶವದ ಬಟ್ಟೆ ಸರಿಸಿಸಿ ದೇಹದಲ್ಲಿ ಏನಾದರೂ ಗಾಯಗಳಾಗಿವೆಯೇ, ಗಮನಿಸುವಂತಹ ಅಸಹಜ ಸಂಗತಿಗಳಿವೆಯೇ ಎಂಬುದನ್ನು ನೋಡಿದೆ. ಅದು ನನ್ನ ಕರ್ತವ್ಯವಾಗಿತ್ತು. ಕುತ್ತಿಗೆಯ ಬಲಭಾಗದಿಂದ ಗಂಟಲವರೆಗೆ ಸುಮಾರು ೧೦ ಇಂಚು ಉದ್ದ, ಅರ್ಧ ಇಂಚು ಆಳ ಕೊರೆದಿರುವ ಲಿಗೇಚರ್ ಮಾರ್ಕು ಇತ್ತು. ಕುತ್ತಿಗೆಯ ಎಡಭಾಗದಲ್ಲೂ ಸುಮಾರು ೯ ಇಂಚು ಉದ್ದ, ಅರ್ಧ ಇಂಚು ಆಳದ ಕೊರೆದ ಗುರುತು ಇತ್ತು. ಎರಡು ಕೈಗಳೂ ದೇಹಕ್ಕೆ ಅಂಟಿಕೊಂಡಂತೆ ಇದ್ದು ನೀಳವಾಗಿದ್ದವು. ಮರ್ಮಸ್ಥಾನಗಳಿಂದ ತ್ಯಾಜ್ಯ ಹೊರಬಂದಿರಲಿಲ್ಲ. ಬಲಗೈಯಲ್ಲಿ ಒಂದು ಕೇಸರಿ ಬಣ್ಣದ ಗಾಜಿನ ಬಳೆಯಿತ್ತು. ಘಟನೆ ನಡೆದ ಸ್ಥಳಸಹಿತ ಪೂರ್ಣ ಮನೆಯ ಸ್ಥಿತಿ ಗಮನಿಸಿದೆ. ಮುಂಭಾಗದ ಕೊಠಡಿಯಲ್ಲಿ ಒಂದೆರಡು ಕೇಸರಿ ಬಳೆಗಳ ಚೂರುಗಳಿದ್ದುದನ್ನು ಗಮನಿಸಿದೆ. ಮೃತೆ ಸುಮಾರು ೨೨ ವರ್ಷದವಳಾಗಿದ್ದು ಮದುವೆಯಾಗಿ ಕೇವಲ ೯ ತಿಂಗಳಾಗಿತ್ತು. ಮದುವೆಗೆ ಮುನ್ನ ಆಗಿದ್ದ ಮಾತುಕಥೆಯಂತೆ ಹುಡುಗಿಯ ಮನೆಯವರು ೧೦೦ ಗ್ರಾಮ್ ಚಿನ್ನ ಮತ್ತು ರೂ. ೧,೦೦,೦೦೦/- ನಗದು ಕೊಡಬೇಕಾಗಿದ್ದು, ಅವರು ೧೦೦ ಗ್ರಾಮ್ ಚಿನ್ನ ಮತ್ತು ೭೫೦೦೦/- ಹಣ ಕೊಟ್ಟಿದ್ದರಂತೆ. ಉಳಿದ ರೂ. ೨೫೦೦೦/- ಕೊಡಲು ಒತ್ತಾಯಿಸಿ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರಂತೆ. ಮೃತಳ ತಾಯಿ, ತಮ್ಮರೂ ಸೇರಿದಂತೆ ಕೆಲವರ ಹೇಳಿಕೆ ಪಡೆದೆ. ಪಂಚರ ಸಮಕ್ಷಮದಲ್ಲಿ ವಿವರವಾದ ಶವತನಿಖಾ ವರದಿ ಬರೆಸಿದೆ. ಅಗತ್ಯದ ಇತರ ನಿಗದಿತ ನಮೂನೆಗಳಲ್ಲಿ ಮಾಹಿತಿ ಸಿದ್ಧಪಡಿಸಿ, ಶವಪರೀಕ್ಷೆ ನಡೆಸಿ ವರದಿ ಕೊಡಲು ಕೇರಳಾಪುರದ ಸರ್ಕಾರೀ ವೈದ್ಯಾಧಿಕಾರಿಗೆ ಸೂಚಿಸಿದೆ. ಮುಂದಿನ ತನಿಖೆ ನಡೆಯಿಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿ, ಶವತನಿಖಾ ವರದಿಯನ್ನು ನನ್ನ ಅನಿಸಿಕೆಯೊಂದಿಗೆ ಜ್ಯುಡಿಶಿಯಲ್ ನ್ಯಾಯಾಧೀಶರಿಗೆ ಕಳಿಸಿದೆ.
ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾದಷ್ಟೂ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬುದು ಸತ್ಯ. ವಿಳಂಬಕ್ಕೆ ನಾನಾ ಕಾರಣಗಳಿರುತ್ತವೆ. ಈ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ನಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನನಗೆ ಸಾಕ್ಷಿ ಹೇಳಲು ಸಮನ್ಸ್ ಬಂದಿತ್ತು. ಸಾಕ್ಷಿ ಹೇಳಿಕೆ ಕೊಟ್ಟಿದ್ದೆ. ಸರ್ಕಾರಿ ವಕೀಲರು ಖಾಸಗಿಯಾಗಿ ನನಗೆ ದೂರು ಅರ್ಜಿದಾರರು ಮತ್ತು ಆರೋಪಿಗಳು ರಾಜಿಯಾಗಿದ್ದಾರೆಂದು ಹೇಳಿದ್ದರು. ಕೊನೆಯಲ್ಲಿ ನ್ಯಾಯಾಲಯದ ತೀರ್ಪು ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ.
ನನ್ನ ಸೇವಾವಧಿಯಲ್ಲಿ ಇಂತಹ ಸುಮಾರು ೭೦-೮೦ ಶವತನಿಖೆಗಳನ್ನು ಮಾಡಿದ್ದೇನೆ. ಅವುಗಳು ಹೇಳಿದ ದಾರುಣ ಕಥೆಗಳಿಗೆ ಕಿವಿ ಕೊಟ್ಟಿದ್ದೇನೆ, ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು ವಿವರಿಸಿದಾಗ ಮರುಗಿ ಒಳಗೇ ಕಣ್ಣೀರು ಹಾಕಿದ್ದೇನೆ. ನನ್ನ ಮಿತಿಯಲ್ಲಿ ಅವು ಹೇಳಿದ ಸಂಗತಿಗಳನ್ನು ದಾಖಲಿಸಿಕೊಂಡು, ನನ್ನ ಕೈಲಾದಷ್ಟು ನಿಮಗೆ ನ್ಯಾಯ ಒದಗಿಸಲು ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದೇನೆ. ಹಾಗೂ ನ್ಯಾಯ ಸಿಗದಿದ್ದರೆ ಅದರಲ್ಲಿ ನನ್ನ ಪಾತ್ರವಿರುವುದಿಲ್ಲವೆಂದೂ ಒಪ್ಪಿಸಿದ್ದೇನೆ. ಶವತನಿಖೆಗಳನ್ನು ನಡೆಸಿದ ಸಂದರ್ಭಗಳಲ್ಲಿ ದಾರುಣ ಅಂತ್ಯವನ್ನು ಕಣ್ಣಾರೆ ಕಂಡು ಒಂದೆರಡು ದಿನಗಳು ಸರಿಯಾಗಿ ಊಟ, ತಿಂಡಿ ಮಾಡಲಾಗದೆ ಇದ್ದುದೂ ಇದೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.
-ಕ.ವೆಂ.ನಾಗರಾಜ್.
Comments
ಉ: ಶವಗಳೊಡನೆ ಸಂಭಾಷಣೆ
In reply to ಉ: ಶವಗಳೊಡನೆ ಸಂಭಾಷಣೆ by venkatb83
ಉ: ಶವಗಳೊಡನೆ ಸಂಭಾಷಣೆ
ಉ: ಶವಗಳೊಡನೆ ಸಂಭಾಷಣೆ
In reply to ಉ: ಶವಗಳೊಡನೆ ಸಂಭಾಷಣೆ by padma.A
ಉ: ಶವಗಳೊಡನೆ ಸಂಭಾಷಣೆ
ಉ: ಶವಗಳೊಡನೆ ಸಂಭಾಷಣೆ
In reply to ಉ: ಶವಗಳೊಡನೆ ಸಂಭಾಷಣೆ by makara
ಉ: ಶವಗಳೊಡನೆ ಸಂಭಾಷಣೆ