"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೧)
ನ್ಯಾಯ ದರ್ಶನ
ಪರಿಚಯ
ಭಾರತೀಯ ತತ್ವಜ್ಞಾನದಲ್ಲಿ 'ಆಸ್ತೀಕ'(ವೇದಗಳನ್ನು ಒಪ್ಪಿಕೊಳ್ಳುವ) ದರ್ಶನೆಗಳೆಂದು ವರ್ಗೀಕರಿಸಲ್ಪಟ್ಟಿರುವ ಆರು ದರ್ಶನಗಳಲ್ಲಿ ಗೋತಮ ಅಥವಾ ಗೌತಮ (ಕ್ರಿ.ಪೂ.೫೫೦)ನು ಪ್ರತಿಪಾದಿಸಿದ 'ಅಕ್ಷಪಾದ' ಎಂದೂ ಕರೆಯಲ್ಪಡುವ 'ನ್ಯಾಯ ದರ್ಶನ' ಮೊದಲಿನದು. (ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎನ್ನುವುದನ್ನು ಗಮನಿಸಿ.) ಕೆಲವೊಮ್ಮೆ ನ್ಯಾಯ ದರ್ಶನವನ್ನು ಉಲೂಕ ಅಥವಾ ಕಣಾದನ (ಕ್ರಿ.ಪೂ. ೬೦೦ ) 'ವೈಶೇಷಿಕ ದರ್ಶನ'ದೊಂದಿಗೆ ಒಂದೇ ಆಗಿ ಗುರುತಿಸಿದರೂ ಕೂಡ 'ನ್ಯಾಯ ದರ್ಶನ'ಕ್ಕೆ ತನ್ನದೇ ಆದ ಪ್ರತ್ಯೇಕತೆಯಿದೆ. ಆದ್ದರಿಂದ ಇದನ್ನು ಬೇರೆ ಮತ್ತು ಸ್ವತಂತ್ರ ತತ್ವವಾಗಿ ತಿಳಿದುಕೊಳ್ಳುವುದು ಒಳಿತು.
ಎಲ್ಲಾ ಭಾರತೀಯ ತತ್ವಶಾಸ್ತ್ರಗಳು ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳುತ್ತವೆ. ಅವೆಂದರೆ 'ಪ್ರಮಾಣ'ಗಳು ಮತ್ತು 'ಪ್ರಮೇಯ'ಗಳು. ಪ್ರಮಾಣಗಳೆಂದರೆ ನಂಬಲರ್ಹವಾದ ಜ್ಞಾನಗಳ ಮೂಲ ಮತ್ತು ಪ್ರಮೇಯಗಳೆಂದರೆ ಅವುಗಳಿಂದ ಹೊಂದಬೇಕಾದ ವಸ್ತುಗಳು.
ನ್ಯಾಯ ದರ್ಶನವು ಪ್ರಮಾಣಗಳಿಗೆ ಆದ್ಯತೆಯನ್ನು ಕೊಟ್ಟದ್ದರಿಂದ ಅವುಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿ, ಭಾರತೀಯ ತತ್ವಶಾಸ್ತ್ರ ಚಿಂತನೆಗೆ ಭದ್ರವಾದ ಅಡಿಪಾಯವನ್ನು ಹಾಕಿತು. ಆದ್ದರಿಂದ ಅದನ್ನು 'ನ್ಯಾಯವಿದ್ಯಾ', 'ತರ್ಕಶಾಸ್ತ್ರ' , ’ಆನ್ವೀಕ್ಷಕೀ' ಮೊದಲಾದ ಹೆಸರುಗಳಿಂದ ಕರೆದಿದ್ದಾರೆ.
ಸಾಹಿತ್ಯ
ಗೌತಮನ 'ನ್ಯಾಯಸೂತ್ರ'ಗಳು ಈ ವಿಧಾನಕ್ಕೆ ಮೂಲಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಈ ಗ್ರಂಥವು ಐದು ಅಧ್ಯಾಯಗಳನ್ನೊಳಗೊಂಡು, ಪ್ರತಿಯೊಂದು ಅಧ್ಯಾಯವು ಎರಡೆರಡು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಒಟ್ಟು ೫೨೮ ಸೂತ್ರಗಳು ಈ ಗ್ರಂಥದಲ್ಲಿ ನಮಗೆ ದೊರೆಯುತ್ತವೆ. ಈ ಗ್ರಂಥಕ್ಕೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ವಾಯನನು (ಕ್ರಿ.ಶ ೪೦೦) ಬರೆದಿರುತ್ತಾನೆ. ಉದ್ಯೋತಕರ (ಕ್ರಿ.ಶ.೭೦೦) ಎನ್ನುವವನು ನ್ಯಾಯ ಭಾಷ್ಯಕ್ಕೆ 'ನ್ಯಾಯವಾರ್ತಿಕ' ಎನ್ನುವ ಉಪಭಾಷ್ಯವನ್ನು ಬರೆದಿದ್ದರೆ; ವಾಚಸ್ಪತಿ (ಕ್ರಿ.ಶ.೮೪೧) ನ್ಯಾಯಸೂತ್ರಗಳನ್ನು ಇನ್ನಷ್ಟು ವಿಶದ ಪಡಿಸಿ ಅದಕ್ಕೆ 'ತಾತ್ಪರ್ಯಟೀಕಾ'ವನ್ನು ಬರೆದಿದ್ದಾನೆ. ಈ ಭಾಷ್ಯಗಳಿಗೆ ಅಂತಿಮ ಟಿಪ್ಪಣಿಯಾಗಿ ಉದಯನನು (ಕ್ರಿ.ಶ.೯೮೪) 'ತಾತ್ಪರ್ಯಟೀಕಾ ಪರಿಶುದ್ದಿ'ಯನ್ನು ಬರೆದಿದ್ದಾನೆ ಮತ್ತು ಅವನದೇ ಇನ್ನೊಂದು ಕೃತಿ ಕುಸುಮಾಂಜಲಿ. ಜಯಂತನ (ಕ್ರಿ.ಶ. ೮೮೦) 'ನ್ಯಾಯ ಮಂಜರಿ' ಮತ್ತು ಗಣೇಶನ (ಕ್ರಿ.ಶ.೧೨೦೦) 'ತತ್ವಚಿಂತಾಮಣಿ' ಇವುಗಳು ಕೂಡ ಇಲ್ಲಿ ಉಲ್ಲೇಖಾರ್ಹವಾಗಿವೆ. ಗಣೇಶನ ತತ್ವಚಿಂತಾಮಣಿಯು ಹೊಸದಾದ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಆಧುನಿಕ ದರ್ಶನವೊಂದಕ್ಕೆ ದಾರಿಮಾಡಿಕೊಟ್ಟಿತು, ಅದನ್ನೇ "ನವ್ಯ-ನ್ಯಾಯ" ಪದ್ದತಿಯೆನ್ನುತ್ತಾರೆ. ಈ ಪದ್ದತಿಯು ಬಂಗಾಲ ದೇಶದ ನವದ್ವೀಪವನ್ನು ಕೇಂದ್ರವಾಗಿರಿಸಿಕೊಂಡು ಅಭಿವೃದ್ಧಿ ಹೊಂದಿತು.
ಉಲ್ಲೇಖಾರ್ಹವಾದ ಇತರ ಗ್ರಂಥಗಳೆಂದರೆ: ಅಣ್ಣಮಭಟ್ಟನ (ಕ್ರಿ.ಶ. ೧೬೫೦) 'ತರ್ಕಸಂಗ್ರಹ' ಮತ್ತು ವಿಶ್ವನಾಥನ (ಕ್ರಿ.ಶ. ೧೬೫೦) 'ಕಾರಿಕಾವಳಿ' ಅಥವಾ 'ಭಾಷಾಪರಿಚ್ಛೇದ' ಮತ್ತು ಅವಕ್ಕೆ ಬರೆದ 'ದೀಪಿಕಾ' ಮತ್ತು 'ಸಿದ್ಧಾಂತ ಮುಕ್ತಾವಳಿ' ಎನ್ನುವ ಭಾಷ್ಯಗಳು.
ಹದಿನಾರು ಪದಾರ್ಥಗಳು
ನ್ಯಾಯ ಪದ್ದತಿಯು ಹದಿನಾರು 'ಪದಾರ್ಥ' ಅಥವಾ ವಿಷಯಗಳನ್ನು ಪ್ರತಿಪಾದಿಸಿ ಅವುಗಳನ್ನು ವಿಶದ ಪಡಿಸುತ್ತದೆ. ಅವುಗಳ ಒಂದು ಸ್ಥೂಲ ಪರಿಚಯವನ್ನು ಇಲ್ಲಿ ಮಾಡಿಕೊಳ್ಳಲು ಪ್ರಯತ್ನಿಸಬಹುದು.
ಆ ಹದಿನಾರು ವಿಷಯಗಳು ಯಾವುವೆಂದರೆ: ಪ್ರಮಾಣಗಳು (ನೈಜ ಜ್ಞಾನದ ಮೂಲಗಳು), ಪ್ರಮೇಯಗಳು (ನೈಜ ಜ್ಞಾನದ ಮೂಲಕ ತಿಳಿಯಬೇಕಾದ ವಿಷಯಗಳು), ಸಂಶಯ (ಶಂಕೆ), ಪ್ರಯೋಜನ (ಉಪಯೋಗ ಅಥವಾ ಅಂತಿಮ ಉದ್ದೇಶ), ದೃಷ್ಟಾಂತ (ಉದಾಹರಣೆ/ನಿದರ್ಶನ), ಸಿದ್ಧಾಂತ (ತತ್ವ), ಅವಯವ (ಅಂಗಗಳು), ತರ್ಕ (ಕ್ರಮಬದ್ಧ ಆಲೋಚನಾ ಸರಣಿ), ನಿರ್ಣಯ (ನಿರ್ಧಾರ), ವಾದ (ನಿಜವನ್ನು ತಿಳಿಯಲು ಪ್ರತಿಪಾದಿಸುವ ಮಾತುಕತೆ), ಜಲ್ಪ (ಕೇವಲ ವಾದವನ್ನು ಗೆಲ್ಲಲ್ಲು ಮಾಡುವ ಹುನ್ನಾರ), ವಿತಂಡ (ವಿನಾಶಕಾರಕ ಟೀಕೆ), ಹೇತ್ವಾಭಾಸ (ಮೇಲ್ನೋಟಕ್ಕೆ ಸರಿಯೆನಿಸಿದರೂ ಸರಿಯಲ್ಲದ ಕಾರಣ), ಛಲ (ಅಸಮಂಜಸ ಉತ್ತರ), ಜಾತಿ (ತಪ್ಪು ತಿಳುವಳಿಕೆ ಅಥವಾ ವಿಶ್ಲೇಷಣೆ) ಮತ್ತು ನಿಗ್ರಹಸ್ಥಾನ (ವಾದದಲ್ಲಿ ಸೋಲನ್ನು ನಿರ್ಣಯಿಸುವ ಒಂದು ಹಂತ).
ಅವುಗಳಲ್ಲಿ ಕೆಲವನ್ನು ಇಲ್ಲಿ ಸ್ಥೂಲವಾಗಿ ತಿಳಿದುಕೊಳ್ಳಬಹುದು. ನ್ಯಾಯ ದರ್ಶನವು ನಾಲ್ಕು ರೀತಿಯ ಪ್ರಮಾಣಗಳನ್ನು ಒಪ್ಪಿಕೊಳ್ಳುತ್ತದೆ: ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ), ಉಪಮಾನ (ಹೋಲಿಕೆ) ಮತ್ತು ಶಬ್ದ (ನುಡಿ ಸಾಕ್ಷ್ಯ)ಗಳು. (ಶಬ್ದ ಪ್ರಮಾಣವನ್ನು 'ವಾಕ್ಯ ಪ್ರಮಾಣ' ಎಂದೂ ಕರೆಯುತ್ತಾರೆ ಇಲ್ಲಿ ಶಬ್ದವೆಂದರೆ ಶ್ರುತಿಯೆಂದೂ ಮತ್ತು ವಾಕ್ಯಗಳು ಎಂದರೆ ಶ್ರುತಿಗಳಿಂದ ಉದಾಹರಿಸಿದ ವಾಕ್ಯ/ಸೂತ್ರ/ನುಡಿಗಟ್ಟುಗಳು ಎಂದು ತಿಳಿಯಬೇಕು.)
ಪ್ರಮೇಯಗಳು ಯಾವುವೆಂದರೆ: ಆತ್ಮ, ಶರೀರ, ಜ್ಞಾನೇಂದ್ರಿಯಗಳು (ಜ್ಞಾನಕ್ಕೆ ಕಾರಣವಾದ ಕಣ್ಣು, ಕಿವಿ ಮೊದಲಾದ ಪಂಚೇಂದ್ರಿಯಗಳು), ವಿಷಯಗಳು (ಪಂಚೇಂದ್ರಿಯಗಳ ಲಕ್ಷ್ಯಗಳು - ಬಣ್ಣ, ರೂಪ ಮುಂತಾದವುಗಳು), ಬುದ್ಧಿ (ಅರಿವು ಅಥವಾ ಜ್ಞಾನ), ಉಪಲಬ್ಧಿ (ದುಗುಡ/ಉದ್ವೇಗ/ಆತಂಕ), ಮನಸ್(ಮನಸ್ಸು), ಪ್ರವೃತ್ತಿ (ಚಟುವಟಿಕೆ); ದೋಷ (ಮಾನಸಿಕ ನ್ಯೂನ್ಯತೆಗಳಾದ ರಾಗ, ದ್ವೇಷಗಳು ಅಥವಾ ಅನುರಕ್ತಿ ಮತ್ತು ವ್ಯತಿರಿಕ್ತ ಭಾವಗಳು); ಪ್ರೇತ್ಯಭಾವ (ಪುನರ್ಜನ್ಮ); ಫಲ (ಪ್ರವೃತ್ತಿ ಅಥವಾ ಚಟುವಟಿಕೆಯಿಂದ ಲಬ್ದವಾದದ್ದು - ನೋವು ಮತ್ತು ನಲಿವುಗಳು); ದುಃಖ (ಯಾತನೆ); ಮತ್ತು ಅಪವರ್ಗ (ಯಾತನೆಯಿಂದ ಸಂಪೂರ್ಣ ಮುಕ್ತಿ).
ಮಾನವನ ಅಂತಿಮ ಗುರಿ ದುಃಖದಿಂದ ಸಂಪೂರ್ಣ ಬಿಡುಗಡೆ ಪಡೆಯುವುದು ಅಂದರೆ 'ಅಪವರ್ಗ' ಅಥವಾ ಮೋಕ್ಷದ ಸ್ಥಿತಿಯನ್ನು ಹೊಂದುವುದು. ನಮಗೆ ಯಾವಾಗ 'ಅಪವರ್ಗ' ಮತ್ತು ಇತರ ಅವಶ್ಯ ವಿಷಯಗಳ ಬಗೆಗೆ ತತ್ವಜ್ಞಾನ ಅಥವಾ ನಿಜವಾದ ಜ್ಞಾನ ಉಂಟಾಗುತ್ತದೆಯೋ ಆವಾಗ ಮಾತ್ರ ನಾವು 'ಅಪವರ್ಗ'ದ ಸ್ಥಿತಿಯನ್ನು ಹೊಂದಬಹುದು. 'ಅಪವರ್ಗ' ಅಥವಾ ಮೋಕ್ಷವನ್ನು ಹೊಂದಲು ನಾವು 'ವೇದಾಂತ' ಮೊದಲಾದ ಇತರ ಪ್ರಸಿದ್ಧ ದರ್ಶನಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ 'ಶ್ರವಣ' (ಶ್ರುತಿಗಳ ಬಗ್ಗೆ ತಿಳಿದುಕೊಳ್ಳುವುದು), 'ಮನನ' (ಅವುಗಳ ಬಗ್ಗೆ ಆಲೋಚಿಸುವುದು) ಮತ್ತು 'ನಿದಿಧ್ಯಾಸನ' (ಧ್ಯಾನ) ಮೊದಲಾದ ವಿವಿಧ ಹಂತಗಳನ್ನು ಅನುಸರಿಸಬೇಕು. ಹದಿನಾರು ಪದಾರ್ಥಗಳ ಉದ್ದನೆಯ ಪಟ್ಟಿಯಲ್ಲಿರುವ ಸಂಶಯ (ಶಂಕೆ), ದೃಷ್ಠಾಂತ (ಉದಾಹರಣೆ), ತರ್ಕ (ಕ್ರಮಬದ್ಧ ಆಲೋಚನಾ ಸರಣಿ), ನಿರ್ಣಯ (ನಿರ್ಧಾರ) ಮತ್ತು ವಾದ (ನಿಜವನ್ನು ತಿಳಿಯಲು ಪ್ರತಿಪಾದಿಸುವ ಮಾತುಕತೆ) ಮುಂತಾದವುಗಳು 'ಕಾರ್ಯ ಮತ್ತು ಕಾರಣ'ಗಳ ಸರಣಿಯ ವಿವಿಧ ಮುಖಗಳು ಹಾಗೂ ಸತ್ಯಾನ್ವೇಷಣೆಯ ಮಾರ್ಗ ಮತ್ತು ನಿಜವಾದ ಸತ್ಯ ಇವುಗಳನ್ನು ಅರಿಯುವಲ್ಲಿ ಸಹಾಯಕವಾಗುತ್ತವೆ.
ಹೀಗೆ ವಿವಿಧ ಹಂತಗಳನ್ನು ನಾವು ಹಾದುಹೋದಾಗ ಅದು ನಮ್ಮನ್ನು ನ್ಯಾಯ ದರ್ಶನದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಜ್ಞಾನದ ಸಿದ್ಧಾಂತದೆಡೆಗೆ ಕೊಂಡೊಯ್ಯುತ್ತದೆ.
====================================================================================
ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Nyaya Darshanaನದ 7 ರಿಂದ 11.5 ನೆಯ ಪುಟದ ಅನುವಾದದ ಭಾಗ.
ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A8-%E0%B3%A8/25/03/2012/36113