ಮುಂಬೈನಗರದ ಮೂರು ಶ್ರೇಷ್ಠ ಕನ್ನಡ ಪರಿಚಾರಕರಿಗೆ, 'ಸಾಧನ ಶಿಖರ ಗೌರವ ಪ್ರಶಸ್ತಿ' ಸಂದಿದೆ !
೭೫ ವರ್ಷಗಳಿಗಿಂತ ಹೆಚ್ಚು ಸಮಯದ ಸುದೀರ್ಘ ಇತಿಹಾಸ ಹೊಂದಿದ ಮುಂಬಯಿ ಕರ್ನಾಟಕ ಸಂಘ, ಮುಂಬಯಿ ಕನ್ನಡಿಗರ ಭಾಷೆ, ಕಲೆಗಳನ್ನು ಬೆಳೆಸಲು ಕಂಕಣ ಕಟ್ಟಿ ದುಡಿಯುತ್ತಿರುವುದರ ಜೊತೆಗೆ,ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ ಪರಿಚಾರಿಕೆ ಮಾಡುತ್ತಾ ಬಂದಿದೆ. ಕಳೆದ ಆರು ವರ್ಷಗಳಿಂದ ಸಂಘವು‘ಸಾಹಿತ್ಯ ಸಂಸ್ಕೃತಿ ಸಮಾವೇಶ’ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸಂಘವು ಹೊರನಾಡಿನ ಕನ್ನಡಿಗರ ಸಂಘಟನಾ ಕೇಂದ್ರವು ಹೌದು. ಇಲ್ಲಿ ಕನ್ನಡದ ನಾಡು-ನುಡಿ, ಸಾಹಿತ್ಯ ಸಂಸ್ಕೃತಿ-ಸಂಘಟನೆ, ಶಿಕ್ಷಣ, ರಂಗಭೂಮಿ, ಪತ್ರಿಕೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಮಾಡಿ ಮಹತ್ತರ ಕಾಣಿಕೆ ಕೊಟ್ಟ ಸಾಧಕರುಗಳಿಗೆ ಸಂಘದವತಿಯಿಂದ ‘ಸಾಧನ ಶಿಖರ ಗೌರವ ಪುರಸ್ಕಾರ’ ವನ್ನು ನೀಡಲಾಗುತ್ತಿದೆ.
ವರ್ಷ ೨೦೧೨ ರ, ಮಾರ್ಚ್ ಶನಿವಾರ, ದಿನಾಂಕ ೨೪ ಮತ್ತು ರವಿವಾರ, ೨೫ ದಂದು ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆಸಲಾದ ಕಾರ್ಯಕ್ರಮಗಳ ನಡುವೆ, ಕನ್ನಡ ಭಾಷೆಯ ರಂಗಗಳಲ್ಲಿ ತಮ್ಮ ಅನುಪಮ ಯೋಗದಾನ ಮಾಡಿದ ಮುಂಬೈನ ಮೂರೂ ವಿಶಿಷ್ಠ ಚೇತನಗಳನ್ನು ಗುರುತಿಸಿ, ಸ್ಮರಣಿಕೆ, ಪ್ರಶಸ್ತಿಪತ್ರ, ಶಾಲು ಹೊದಿಸಿ ಫಲಪುಷ್ಪಗಳನ್ನು ಸಮರ್ಪಿಸಲಾಯಿತು. ಪುರಸ್ಕೃತರು ತಲಾ, ರೂ.೧೦,೦೦೦/= ನಗದನ್ನು ಪಡೆದಿರುತ್ತಾರೆ. ಅವರುಗಳ ಹೆಸರುಗಳು ಹೀಗಿವೆ :
* ಡಾ. ಸಂಜೀವ ಕೆ. ಶೆಟ್ಟಿ, -ನಿವೃತ್ತ ಪ್ರಾಧ್ಯಾಪಕರು,
* ಡಾ. ಬಿ.ಆರ್ ಮಂಜುನಾಥ್ , ನಾಟಕ ಕರ್ತೃ, ನಟ, ಹಾಗೂ ನಾಟಕ ನಿರ್ದೇಶಕ,
* ಶ್ರೀಮತಿ. ಉಮಾ ನಾಗಭೂಷಣ್ -ಕರ್ನಾಟಕ ಸಂಗೀತ ವಿದುಷಿ,
ಡಾ. ಸಂಜೀವ ಕೆ. ಶೆಟ್ಟಿ :
ಪ್ರಾಧ್ಯಾಪಕ, ಸಂಜೀವ ಶೆಟ್ಟಿಯವರು ಮುಂಬೈತುಳು-ಕನ್ನಡಿಗರಿಗೆ ಚಿರಪರಿಚಿತರು. ೧. ಮನ ಮಿಡಿಯುತ್ತಿದೆ ೨.ತರಂಗ ೩.ಚುಟುಕು ಮಲ್ಲಿಗೆ ೪.ಹಸಿದವರು ೫. ಕೃತಿ ರಶ್ಮಿ ೬. ಸ್ನೇಹದ ನೆಲದಲ್ಲಿ ೭. ಬರೆ ನೆರಳು ೮. ಅಭಿವ್ಯಕ್ತಿ, ಮೊದಲಾದ ಅಮೂಲ್ಯ ಹಾಗೂ ಮಹತ್ವದ ಕೃತಿಗಳ ರಚನೆಯಿಂದಾಗಿ ಮುಂಬೈ ನಗರದ ಕನ್ನಡ ಕವಿಗಳ ಶ್ರೇಣಿಯಲ್ಲಿ ಅಗ್ರಪಂಕ್ತಿಯಲ್ಲಿ ಶೋಭಿಸುತ್ತಾರೆ. ಸೋಮಯ್ಯ ಕಾಲೇಜ್ ನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ದುಡಿದು ವಿಶ್ರಾಂತಿ ಹೊಂದಿದ್ದಾರೆ. ವೃತ್ತಿ ಜೀವನದ ಜೊತೆಗೆ ಅವರು ಕನ್ನಡ ಭಾಷೆಯಲ್ಲಿ ಕವನ,ಲೇಖನ, ವಿಮರ್ಶೆ ಮೊಮ್ತಾದುವುಗಳಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇಂಗ್ಲೀಷ್ ಕವನಗಳ ಸಂಕಲನವನ್ನೂ ಪ್ರಕಟಿಸಿರುತ್ತಾರೆ. ಸಾಮಾಜಿಕ ಕಳಕಳಿ, ಮತ್ತು ನುಡಿದಂತೆ ನಡೆಯುವುದು ಇವರ ವಿಶೇಷತೆ. ಕರ್ನಾಟಕ ಸಂಘವಲ್ಲದೆ ಇತರ ಕನ್ನಡ ಪರ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಮುಂಬೈ ಕನ್ನಡ ಪ್ರಚಾರ ಸಮಿತಿಯ ಸಂಚಾಲಕರಾಗಿ, ಕರ್ನಾಟಕ ಒಳನಾಡಿನಲ್ಲೂ ತಮ್ಮ ಅನುಪಮ ಸೇವೆಯನ್ನೂ ಸಲ್ಲಿಸಿದ್ದಾರೆ. ಮುಂಬೈನಗರದ ಮನಪಾ ಕನ್ನಡ ಶಾಲಾ ಮಕ್ಕಳು, ಶಿಕ್ಷಕರ ಬಗ್ಗೆ ಕಾಳಜಿ ಇರಿಸಿ, ಸ್ಥಾಪನೆಯಾದ ಕನ್ನಡ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಒಕ್ಕೂಟದಲ್ಲೂ ತಮ್ಮ ಯೋಗದಾನ ಮಾಡುತ್ತಿದ್ದಾರೆ.
ಡಾ. ಬಿ.ಆರ್.ಮಂಜುನಾಥ್ :
ಮುಂಬೈನ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾಗಿರುವ, 'ಮೈಸೂರು ಅಸೋಸಿಯೇಶನ್' ನ ಸಕ್ರಿಯ ಸದಸ್ಯರಾಗಿ ಕನ್ನಡ ತಾಯಿಯ ಪ್ರೀತಿಯ ಪರಿಚಾರಕರಾಗಿ ಕನ್ನಡ ಭಾಷೆ, ಸಾಹಿತ್ಯ, ಮತ್ತು ನಾಟಕ ಕಲೆಗಳಿಗೆ, ತಮ್ಮ ತನು ಮನ ಧನಗಳನ್ನು ಮುಡಿಪಾಗಿಟ್ಟಿದ್ದಾರೆ. ಬಿ.ಟಿ.ಆರ್.ಎ.ಸಂಶೋಧನ ಸಂಸ್ಥಾನದಲ್ಲಿ ವಿಜ್ಞಾನಿಯಾಗಿ ದುಡಿದು, ಮುಂದೆ, ಖಾಸಗಿ ಕಂಪೆನಿಯೊಂದರ ನಿರ್ದೇಶಕರಾಗಿ ಕೆಲಸಮಾಡಿ, ಸೇವಾ ನಿವೃತ್ತರಾದರು. ಮಂಜುನಾಥರಿಗೆ ಬಾಲ್ಯದಿಂದಲೂ ಕಲೆ, ಸಾಹಿತ್ಯ, ನೃತ್ಯ, ನಾಟಕ ಗಳ ಗೀಳು. ಅವರಿಗೆ. ಅದೇ ಜಾಡಿನಲ್ಲಿ ಕೆಲಸಮಾಡಲು ನೆರವಾದವರು, ಶ್ರೀ. ಕುಟ್ಟಿಯವರು. (ಡಾ, ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತ, ವಿ. ಕೆ. ಮೂರ್ತಿಯವರು) ಡಾ.ಮಂಜುನಾಥ್, ನಟನೆ, ನಿರ್ದೇಶನ ,ನಾಟಕರಚನೆ, ಸಂಗೀತ, ಚಿತ್ರಕಲೆಗಳಲ್ಲೂ ಪರಿಣಿತಿಯನ್ನು ಸಾಧಿಸಿರುವ ವಿಜ್ಞಾನಿ ; ಸೃಜನಶೀಲ ನಾಟಕಕಾರ, ನಿರ್ದೇಶಕನೆಂಬ ಹೆಸರುಮಾಡಿದ್ದಾರೆ. ಮುಂಬೈ ಕನ್ನಡ ರಂಗಭೂಮಿಗೆ ಒಂದು ನೂತನ ಮುಖಾರವಿಂದವನ್ನು ನೀಡಲು ಪ್ರಯತ್ನಿಸಿ ಯಶಸ್ಸನ್ನು ಗಳಿಸಿದರು :
ಮುಂಬೈ ಕನ್ನಡ ರಂಗಭೂಮಿಗೆ ಒಂದು ನೂತನ ಮುಖಾರವಿಂದವನ್ನು ನೀಡಲು ಪ್ರಯತ್ನಿಸಿ ಯಶಸ್ವಿಯಾದ ಡಾ|ಮಂಜುನಾಥ್ ಮೊದ ಮೊದಲು ನಾಟಕಗಳನ್ನು ನಿರ್ದೇಶನ ಮಾಡಿ ಒಳ್ಳೆಯ ರಂಗಕೃತಿಗಳ ರಚನೆಗೆ ಮುಂದಾದರು. ತ್ರಿವೇಣಿಯವರ ಪ್ರಸಿದ್ಧ ಕಾದಂಬರಿ ‘ಅಪಸ್ವರ ಅಪಜಯ’ವನ್ನು ಬಿಸಿಲ್ಗುದುರೆ ಎಂಬುದಾಗಿ ರೂಪಾಂತರ ಮಾಡಿ, ನಾಟಕವಾಡಿಸಿದರು. ಮಾಸ್ತಿ ಅವರ ‘ಚೆನ್ನಮ್ಮ’ಕಥೆ ‘ಬೆಂದಕಾಳೂರು’ ನಾಟಕವಾಯಿತು.‘ ನಾ ದ್ಯಾವ್ರುನ್ನೋಡು ಬ್ಯಾಕು’ ಅವರ ಜಾನಪದ ಶೈಲಿಯ ಪ್ರಕಟಿತ ನಾಟಕ. 'ರಂಗೋಲಿ ನ್ಯಾಯ', 'ಬೆಳ್ಳಿ ಬೈಲು', 'ಹೂ ಗಿಡದಲಿ ಹೂ ಅರಳಿಹುದು,'ಹೀರಾ','ಬೋನು','ಸಾಕಾರ' ಮೊದಲಾದ ನಾಟಕಗಳನ್ನು ಬರೆದು ಆಡಿಸಿ, ಜನಪ್ರಿಯರಾಗಿದ್ದಾರೆ.ಅವರ ಪ್ರತಿಭೆಗೆ ಮೆಚ್ಚಿ 'ಕರ್ನಾಟಕ ನಾಟಕ ಅಕಾಡೆಮಿ' ಪ್ರಶಸ್ತಿ ನೀಡಿ ಗೌರವಿಸಿದೆ. ನೃತ್ಯ,ಸಂಗೀತ,ಜಾನಪದ,ಚಿತ್ರಕಲೆ,ಶಿಲ್ಪದಲ್ಲಿಯೂ ಆಸಕ್ತಿ ಹೊಂದಿದ, ಡಾ. ಮಂಜುನಾಥ್, ಉತ್ತಮ ವಾಗ್ಮಿಯೂ ಹೌದು.
ಶ್ರೀಮತಿ ಉಮಾ ನಾಗಭೂಷಣ :
ಸಂಗೀತಕ್ಕೆ ಹೆಸರಾದ ಕುಟುಂಬಕ್ಕೆ ಸೇರಿದ ತಹಶಿಲ್ದಾರರ ಮಗಳು, ಶ್ರೀಮತಿ ಉಮಾ ನಾಗಭೂಷಣರವರು ಮೂಲತಃ ತುಮಕೂರಿರವರು. ಮೈಸೂರು ವಿಶ್ವ ವಿದ್ಯಾಲಯದಿಂದ ಬಿ.ಎ ಪದವಿ ಮುಗಿಸಿ ಇವರು ಸೀನಿಯರ್ ದರ್ಜೆ ಕಾಲೇಜಿನ ಸಂಗೀತ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ರ್‍ಯಾಂಕ್ ಪಡೆದವರು. ಸಂಗೀತ ಪ್ರೇಮಿಗಳಿಂದಲೂ ಮತ್ತು ಪತ್ರಿಕಾ ವಿಮರ್ಶಕರಿಂದಲೂ ಅಪಾರ ಪ್ರಶಂಸೆ ಗಳಿಸಿದ್ದಾರೆ. ೧೯೮೨ ರಿಂದ ಡೊಂಬಿವಲಿಯಲ್ಲಿ, 'ಮೈಸೂರು ಸಂಗೀತ ವಿದ್ಯಾಲಯ' ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಪ್ರಾಂಶುಪಾಲರೂ ಆಗಿರುವ ಪ್ರಸಿದ್ಧ ಸಂಗೀತ ಕಲಾವಿದೆ ಉಮಾ, ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ 'ಡೊಂಬಿವಲಿಯ ರೋಟರಿ ಕ್ಲಬ್', 'ಬೆಂಗಳೂರಿನ ಗಾಯನ ಸಮಾಜ' ಮುಂತಾದ ಸಂಗೀತ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. 'ಮುಂಬೈ ಕನ್ನಡ ಸಂಘದ ಪ್ಲಾಟಿನಂ ಜ್ಯುಬಿಲಿ ಸಮಾರಂಭ'ದಲ್ಲಿ ಉಮಾ ನಾಗಭೂಷಣರನ್ನು ಗೌರವಿಸಲಾಯಿತು.