ಕೌಸಲ್ಯ ಸುಪ್ರಜಾ ರಾಮ...(ರಾಮಾಯಣದ ಒ೦ದು ಪ್ರಸ೦ಗ)

ಕೌಸಲ್ಯ ಸುಪ್ರಜಾ ರಾಮ...(ರಾಮಾಯಣದ ಒ೦ದು ಪ್ರಸ೦ಗ)

ಚಿತ್ರ

ಅಯೋಧ್ಯೆಗೆ ಬಂದು ವಿಶ್ವಾಮಿತ್ರರು ದಶರಥನಲ್ಲಿ ಮಕ್ಕಳಾದ ರಾಮ ಹಾಗೂ ಲಕ್ಷ್ಮಣರನ್ನು ತನ್ನೊಡನೆ ಯಾಗ ಸಂರಕ್ಷಣೆಗಾಗಿ ಕಳುಹಿಸಬೇಕೆಂದು ಕೋರುತ್ತಿದ್ದಾರೆ. ದಶರಥ ಮಹಾರಾಜ ರಾಮ ಲಕ್ಷ್ಮಣರನ್ನು ಇನ್ನೂ ಚಿಕ್ಕ ಮಕ್ಕಳೆಂದು ಭಾವಿಸಿದ್ದಾನೆ. ಎಂದೂ ಅಯೋಧ್ಯೆಯನ್ನು ದಾಟಿ ಹೊರ ಹೋಗದ ರಾಮ ಲಕ್ಷ್ಮಣರನ್ನು ಹೇಗೆ ತಾನೇ ಕಳುಹಿಸಲು ಒಪ್ಪುತ್ತಾನೆ. ಅದೂ ಅಲ್ಲದೆ ಅರಣ್ಯ ಪ್ರದೇಶ ವನ್ಯ ಮೃಗಗಳು ಇರುತ್ತವೆ, ಅಸುರರು ಇರುತ್ತಾರೆ, ಕಲ್ಲು ಮುಳ್ಳಿನ ಹಾದಿ ಹೇಗೆ ತಾನೇ ಕಳುಹಿಸುವುದು. ವಿಶ್ವಾಮಿತ್ರರಲ್ಲಿ ಹೇಳುತ್ತಿದ್ದಾನೆ ಮುನಿಗಳೇ ನಿಮಗೆ ಯಾಗ ಸಂರಕ್ಷಣೆ ಆಗಬೇಕು ತಾನೇ ನಾನು ಬರುತ್ತೇನೆ ನಿಮ್ಮೊಡನೆ. ನಾನು ಬಂದು ನಿಮ್ಮ ಯಾಗ ಸಂರಕ್ಷಿಸುತ್ತೇನೆ.

ವಿಶ್ವಾಮಿತ್ರರು ಒಪ್ಪಲಿಲ್ಲ. ಇಲ್ಲ ರಾಮ ಲಕ್ಷ್ಮಣರನ್ನೇ ಕಳುಹಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ವಶಿಷ್ಠ ಮುನಿಗಳು ಮಧ್ಯ ಪ್ರವೇಶಿಸಿ ದಶರಥನಿಗೆ ಉಪದೇಶ ಮಾಡಿದರು. ದಶರಥ, ರಾಮ ಲಕ್ಷ್ಮಣರ ಮಹಿಮೆ ನಿನಗೆ ತಿಳಿದಿಲ್ಲ. ವಿಶ್ವಾಮಿತ್ರರಿಗೆ ತಿಳಿದಿದೆ. ಅವರಿಗೆ ಯಾರಿಂದ ಏನೂ ಆಗುವುದಿಲ್ಲ ನಿರಾತಂಕವಾಗಿ ಕಳುಹಿಸಿಕೊಡು ಎಂದರು. ಇದರಿಂದ ನಿನ್ನ ಮಕ್ಕಳಿಗೆ ಅಪಾರ ಕೀರ್ತಿ ಬರುತ್ತದೆ ಕಳುಹಿಸು ಎಂದರು. ವಿಶ್ವಾಮಿತ್ರರ ಮೂಲ ಉದ್ದೇಶ ಯಾಗ ಸಂರಕ್ಷಣೆ ಅಷ್ಟೇ ಆಗಿರಲಿಲ್ಲ. ಯಾಗ ಸಂರಕ್ಷಣೆ ಮುಗಿಸಿ ರಾಮನನ್ನು ಮಿಥಿಲಾ ನಗರಕ್ಕೆ ಕರೆದುಕೊಂಡು ಹೋಗಿ ಸೀತಾ ಸ್ವಯಂವರದಲ್ಲಿ ಸೀತೆಯೊಂದಿಗೆ ರಾಮನ ವಿವಾಹ ಮಾಡಿಸುವ ಉದ್ದೇಶವಾಗಿತ್ತು.

ದಶರಥ ಮಹಾರಾಜ ವಶಿಷ್ಠರ ಉಪದೇಶಕ್ಕೆ ಬೆಲೆಕೊಟ್ಟು ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರೊಂದಿಗೆ ಕಳುಹಿಸಿಕೊಟ್ಟ. ಎಷ್ಟೇ ಆಗಲಿ ಪುತ್ರ ವ್ಯಾಮೋಹ ಎಲ್ಲಿ ಹೋಗುತ್ತದೆ. ವಿಶ್ವಾಮಿತ್ರರು ಎರಡು ಹೆಜ್ಜೆ ಇಟ್ಟಿಲ್ಲ ಹಿಂದಿನಿದಲೇ ಬಂದು ಮುನಿಗಳೇ ತಮ್ಮಲ್ಲಿ ನನ್ನದೊಂದು ಬಿನ್ನಹ. ರಾಮ ಲಕ್ಷ್ಮಣರು ಪ್ರತಿ ದಿನ ಬಿಸಿನೀರಿನಲ್ಲೇ ಜಳಕ ಮಾಡುವುದು ಅಭ್ಯಾಸ. ಆದ್ದರಿಂದ ದಯವಿಟ್ಟು ಅವರಿಗೆ ಅದೊಂದು ವ್ಯವಸ್ಥೆ ಮಾಡಿ ಬಿಡಿ ಎಂದ. ಅವರ ಯೋಗಕ್ಷೇಮ ನನ್ನ ಜವಾಬ್ದಾರಿ ಎಂದು ವಿಶ್ವಾಮಿತ್ರರು ಮತ್ತೆ ಮುಂದೆ ಹೊರಟರು. ದಶರಥ ಮತ್ತೆ ಹಿಂದೆ ಬಂದು ಮುನಿಗಳೇ ಅವರಿಗೆ ಇನ್ನೂ ನಾನು ಈಜುವುದನ್ನು ಕಲಿಸಿಲ್ಲ, ಆದ್ದರಿಂದ ಕಾಡಿನಲ್ಲಿ ಬಾವಿ, ನದಿ, ಕೆರೆಗಳ ಕಡೆ ಹೋಗದಿರುವ ಹಾಗೆ ನೋಡಿಕೊಳ್ಳಿ ಎಂದ. ವಿಶ್ವಾಮಿತ್ರರು ಅದಕ್ಕೂ ಸರಿ ಎಂದು ಮತ್ತೆ ಎರಡು ಹೆಜ್ಜೆ ಇಡುವಷ್ಟರಲ್ಲಿ ಮತ್ತೆ ಹಿಂದೆ ಬಂದ ದಶರಥ ಮುನಿಗಳೇ ರಾಮ ಲಕ್ಷ್ಮಣರಿಗೆ ಸ್ವಲ್ಪ ತಿನ್ನುವ ಅಭ್ಯಾಸ ಜಾಸ್ತಿ, ಅವಾಗ ಇವಾಗ ಏನಾದರೂ ತಿನ್ನುತ್ತಿರುತ್ತಾರೆ. ಅದಕ್ಕೂ ಏನಾದರೂ ವ್ಯವಸ್ಥೆ ಮಾಡಿಬಿಡಿ ಎಂದ. ಎಲ್ಲದಕ್ಕೂ ಸರಿ ಎಂದು ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಕಾಡಿಗೆ ಹೊರಟರು. ದಶರಥ ಮಹಾರಾಜ ಕೌಸಲ್ಯೆಗಿಂತ ಮಕ್ಕಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಎನ್ನುವುದಕ್ಕೆ ಇದೊಂದು ನಿದರ್ಶನ

ಅಯೋಧ್ಯೆಯಿಂದ ಹೊರಟು ಕಾಡಿಗೆ ಬಂದ ತಕ್ಷಣ ವಿಶ್ವಾಮಿತ್ರರು ರಾಮ ಲಕ್ಷ್ಮಣರಿಗೆ "ಬಲ" ಮತ್ತು "ಅತಿಬಲ" ಎಂಬ ಎರಡು ಮಂತ್ರವನ್ನು ಉಪದೇಶ ಮಾಡುತ್ತಾರೆ. ಈ ಮಂತ್ರಗಳ ಮಹಿಮೆ ಎಂಥದ್ದು ಎಂದರೆ ಆ ಮಂತ್ರಗಳನ್ನು ಕಲಿತುಬಿಟ್ಟರೆಹಸಿವೆ ಮತ್ತು ಬಾಯಾರಿಕೆಯೇ ಆಗುವುದಿಲ್ಲವಂತೆ. ಇನ್ನೊಂದು ಮಂತ್ರ ಕಲಿತರೆ ಯಾವುದೇ ದುಷ್ಟ ಪ್ರಾಣಿಗಳು ಹತ್ತಿರ ಬರುವುದಿಲ್ಲವಂತೆ.  ರಾಮ ಹಾಗೂ ಲಕ್ಷ್ಮಣರು ಇಬ್ಬರೂ ಮಂತ್ರವನ್ನು ಕಲಿತು ಮುಂದೆ ಸಾಗುತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಕತ್ತಲಾವರಿಸಿತು. ವಿಶ್ವಾಮಿತ್ರರು ಅಲ್ಲೇ ಇದ್ದ ಎಲೆಗಳನ್ನೆಲ್ಲಾ ಸೇರಿಸಿ ಹಾಸಿಗೆಯಂತೆ ಮಾಡಿ ರಾಮ ಲಕ್ಷ್ಮಣರನ್ನು ಮಲಗಿಸಿ, ತಾವು ಅಲ್ಲೇ ಪಕ್ಕದಲ್ಲಿ ಮಲಗಿದರು. ಬೆಳಗಾಯಿತು, ಬೆಳಿಗ್ಗೆ ಬೇಗನೆ ಎದ್ದು ಅಭ್ಯಾಸವಿಲ್ಲದ ರಾಮ ಲಕ್ಷ್ಮಣರು ಇನ್ನೂ ಮಲಗಿದ್ದಾರೆ. ಅವರನ್ನು ಎಬ್ಬಿಸಬೇಕು. ಆಗ ವಿಶ್ವಾಮಿತ್ರರು ಒಂದು ಶ್ಲೋಕ ಹೇಳುತ್ತಾರೆ.  "

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೆ

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ಇದು ವಿಶ್ವಾಮಿತ್ರರು ಶಿಷ್ಯರನ್ನು ಎಬ್ಬಿಸಿದ ಕ್ರಮ. ಕೌಸಲ್ಯೆಯ ಮಗನಾದ ರಾಮ ಪೂರ್ವದಲ್ಲಿ ಸೂರ್ಯೋದಯವಾಗಿದೆ ಎದ್ದೇಳು. ಎದ್ದೇಳು ನರಸಿಂಹನೇ ಪ್ರಾತಃ ಕಾಲದ ಆಹ್ನಿಕವನ್ನು ಮಾಡಬೇಕು ಎದ್ದೇಳು ಎನ್ನುತ್ತಿದ್ದಾರೆ. ವಿಶ್ವಾಮಿತ್ರರು ದಶರಥನಂದನ ರಾಮಾ ಎನ್ನುವ ಬದಲು ಕೌಸಲ್ಯ ಸುಪ್ರಜಾ ರಾಮ ಎಂದರು ಏಕೆಂದರೆ, ನಿದ್ದೆ ಮಾಡುತ್ತಿದ್ದ ರಾಮನನ್ನು ಎಬ್ಬಿಸಲು ವಿಶ್ವಾಮಿತ್ರರು ಬಂದಾಗ ರಾಮನ ಮುಖ ನೋಡಿದ್ದಾರೆ. ಎಂಥ ಸೌಂದರ್ಯ, ಎಂಥ ತೇಜಸ್ಸು ಆ ಮುಖದಲ್ಲಿ ವಿಶ್ವಾಮಿತ್ರರಿಗೆ ಅರಿವಿಲ್ಲದಂತೆ ಅವರ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯಲು ಆರಂಭಿಸಿತು. ಆ ಸೌಂದರ್ಯ ಕಂಡು ವಿಶ್ವಾಮಿತ್ರರಿಗೆ, ಪ್ರತಿದಿನ ಬೆಳಿಗ್ಗೆ ರಾಮನನ್ನು ಎಬ್ಬಿಸುತ್ತಿದ್ದ ಕೌಸಲ್ಯೆ ಈ ದಿನ ರಾಮನನ್ನು ಎಬ್ಬಿಸಲು ಆ ಕೋಣೆಗೆ ಹೋಗಿ ಅಲ್ಲಿ ಖಾಲಿ ಹಾಸಿಗೆಯನ್ನು ಕಂಡು ಎಷ್ಟು ದುಃಖ ಪಡುತ್ತಿದ್ದಾಳೋ ಎಂದು ನೆನೆಸಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಕಾಡಿನಲ್ಲಿ ಕಂದಮೂಲ ಫಲಗಳನ್ನು ತಿಂದು ಬದುಕುವ ತಾಪಸ ಬ್ರಾಹ್ಮಣನಾದ ನನಗೆ ಯಾರದೋ ಮಗನಾದ ಶ್ರೀರಾಮನ ಸೌಂದರ್ಯ ಕಂಡು ಹೃದಯ ಅರಳಿ ಸಂತೋಷ ಉಂಟಾಯಿತು. ಇನ್ನು ಹೆತ್ತ ತಾಯಿ ಕೌಸಲ್ಯೆ ಪ್ರತಿ ದಿನ ರಾಮನ ಆ ಸೌಂದರ್ಯ ಕಂಡು ಸಂತೋಷ ಪಡುತ್ತಿದ್ದವಳು ಇಂದು ಆ ಸಂತೋಷದಿಂದ ವಂಚಿತಳಾಗಿದ್ದಾಳೆ. ಎಂದು ಮರುಕಪಟ್ಟು ರಾಮನನ್ನು ಎಬ್ಬಿಸಬೇಕಾದರೆ "ಕೌಸಲ್ಯಾ ಸುಪ್ರಜಾ ರಾಮಾ ಎಂದು ಶ್ಲೋಕ ಹಾಡಿ ಎಬ್ಬಿಸಿದರು....

ಸರ್ವರಿಗೂ ಶ್ರೀರಾಮನವಮಿಯ (೦೧-೦೪-೨೦೧೨) ಶುಭಾಶಯಗಳು

Rating
No votes yet

Comments