ಕಿಟಕಿ ಪಕ್ಕದ ಹುಡುಗಿ

ಕಿಟಕಿ ಪಕ್ಕದ ಹುಡುಗಿ

ಕವನ

 

 
ಬಿಟ್ಟುಬಂದ ಹಳೆಯ ಭೌತಿಕ 
ಸಂಶೋಧನಾಲಯದ ಕದವು 
ತೆರೆದಿದೆ ಬರುವಿಕೆಗಾಗಿ ಕಾದು
ಕುಟಿಲ ಭಾವನೆಗಳ ನಟಿಸುತ್ತ 
ಕರೆಯನೀಯಲು ಗುರುವು
 
ವಾಸ್ತವದ ಅನಿವಾರ್ಯತೆಗೆ
ಕಟ್ಟುಬಿದ್ದು ಹೊರಡಲನುವಾದೆ
ಸೋಮವಾರದ ಮುಂಜಾವು
ಒಲ್ಲದ ಮನಸಿನಿಂದಲೇ
ಪೂರ್ವ ಕಾಯಕದ ಮಡಿಲಿಗೆ
 
ಹರೆಯದಲ್ಲಿ ಪ್ರೌಢನಾಗಿಸಿ
ಜೀವನಕೆ ಗುರಿಗಳನ್ನಿರಿಸಿ 
ಜಿಗುಪ್ಸೆಗೂ ಕಾರಣವಾದ
ಪರಿಸರವು ನನಗಾಗಿಯೆ
ಕಾದಿರಿಸಿತ್ತೊಂದು ವಿಸ್ಮಯ
 
ಆಪ್ತರೆನಿಸಿದವರ ಸುಳಿವಿರದೆ
ಪರಿಚಯವ ಹುಡುಕುತಿರಲು
ಬಂಧಿಸಿದೆ ನೋಟವು ಅವಳ
ಹೃದಯ ಕಲಕುವ ವಿಷಯ
ಆಕೆಯಲ್ಲೇನಿದೆ ತಿಳಿಯಲಿಲ್ಲ
 
ರೆಪ್ಪೆಯಾಡಿಸದೆ ದಿಟ್ಟಿಸಲು 
ಅವಳಲ್ಲ ಚಂದನದ ಗೊಂಬೆ
ಲಕ್ಷಣವಾದ ಮೊಗದೊಳಿಹುದು
ನಿರ್ಮಲವಾದ ಮುಗುಳ್ನಗೆ
ಅಚ್ಚ ಕನ್ನಡತಿಯರ ಹಾಗೆ
 
ಕನಸಿನಲ್ಲಿ ಕಾಡುವಷ್ಟು ಸೌಮ್ಯ
ಪುಳಕಿತವಾದ ಮನವೆ ಧನ್ಯ
ಕಾಲೇಜಿನಲ್ಲಿ ಕದ್ದು ನೋಡುವಾಗ
ಕಿಟಕಿ ಪಕ್ಕದ ಹುಡುಗಿ 
ಒಮ್ಮೆ ನೋಡಬಾರದೆ ತಿರುಗಿ
 
ಹುರಿದುಂಬಿಸಿ ಕಾಲೆಳೆಯುವ 
ವಯಸ್ಸಿನ ಸೆಳೆತವಿದು ನಿಜವೆ
ಪ್ರೀತಿಯ ಭ್ರಮೆಯೊ ಅರಿಯೆ
ಕುತೂಹಲಗಳ ಪರದೆ ಸರಿಸುವ
ಪ್ರಣಯ ಋತುವು ನೀನಲ್ಲವೆ
 
ನಿಘಂಟಿನಿಂದ ಪದಗಳ ಹೆಕ್ಕಿ 
ರಚಿಸಿರುವೆ ಜಾಗರೂಕನಾಗಿ 
ಕವಿತೆಯಿರಬಹುದು ?, ನಿನಗಾಗಿ
ಕಿಟಕಿಯಾಚೆಯ ಹುಡುಗಿ 
ಸಂವೇದಿಸು ಒಮ್ಮೆ ನನಗಾಗಿ
 
 
 
  - ಪ್ರಮೋದ್ ಗೌಡ
 

Comments