"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೩)

"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೩)

ಭೌತಿಕ ಜಗತ್ತಿನ ಬಗ್ಗೆ ನ್ಯಾಯ ಶಾಸ್ತ್ರದ ಸಿದ್ಧಾಂತ
   
    ನ್ಯಾಯ ದರ್ಶನವು ಬಹುಶಃ 'ವೈಶೇಷಿಕ ದರ್ಶನ' ನಂತರದ ಕೃತಿಯಾಗಿದ್ದು ಅದನ್ನನುಸರಿಸಿ ಅದರಲ್ಲಿ ಪ್ರತಿಪಾದಿಸಿರುವ ಸೃಷ್ಠಿ ಸಿದ್ಧಾಂತವನ್ನು ಒಟ್ಟಾರೆಯಾಗಿ (ಇಡಿಯಾಗಿ) ಅಥವಾ ಸಂಪೂರ್ಣವಾಗಿ ಒಪ್ಪಿಕೊಂಡು ತನ್ನಲ್ಲಿ ಅಳವಡಿಸಿಕೊಂಡಿದೆ. ಈ ಭೌತಿಕ ಜಗತ್ತು ನಾಲ್ಕು ವಿವಿಧ ರೀತಿಯ ಅಣುಗಳು ಅಥವಾ ಕಣಗಳಾದ ಪೃಥ್ವಿ (ಭೂಮಿ), ಅಪ್ (ನೀರು), ತೇಜಸ್ (ಅಗ್ನಿ) ಮತ್ತು ವಾಯು (ಗಾಳಿ) ಇವುಗಳ ಸಮ್ಮಿಲನದಿಂದ ರಚಿತವಾದ ವಸ್ತುವಾಗಿದೆ. ಸೃಷ್ಠಿ ಕ್ರಿಯೆಯಲ್ಲಿ ಭೌತಿಕ ವಸ್ತುವಾದ 'ಆಕಾಶ'(ಎಲ್ಲ ವಸ್ತುಗಳ ಮೂಲ ರೂಪ) ಮತ್ತು ಅಭೌತಿಕ ವಸ್ತುಗಳಾದ 'ಕಾಲ' (ಸಮಯ) ಮತ್ತು 'ದಿಕ್' (ದಿಕ್ಕು) ಇವುಗಳು ಕೂಡ ಒಳಗೊಂಡಿವೆ.
     
    ಈ ರೀತಿಯ ಭೌತಿಕ ಹಾಗೂ ಅಭೌತಿಕ ವಸ್ತುಗಳಿಂದ ಮತ್ತು ಜೀವಿಗಳ ಅದೃಷ್ಠ ಅಥವಾ ಕರ್ಮಗಳಿಗನುಸಾರವಾಗಿ ಸಂಪೂರ್ಣವಾದ ಈ ಪ್ರಪಂಚವನ್ನು ಈಶ್ವರನು ಸೃಷ್ಟಿಸುತ್ತಾನೆ.
 
ಈಶ್ವರ ಅಥವಾ ದೇವರು
   
    ನ್ಯಾಯ ಪದ್ಧತಿಯು ಈಶ್ವರ ಅಥವಾ ದೇವರನ್ನು ಸೃಷ್ಟಿ, ಸ್ಥಿತಿ ಮತ್ತು ಪ್ರಳಯ (ವಿನಾಶ)ಗಳಿಗೆ ಅಂತಿಮ ಕಾರಕನೆಂದು ಪ್ರತಿಪಾದಿಸುತ್ತವೆ. ಆದರೆ ಈಶ್ವರನು ಈ ಜಗತ್ತನ್ನು ಶೂನ್ಯದಿಂದ ಅಥವಾ ತನ್ನೊಳಗಿನಿಂದ ಸೃಷ್ಟಿಸದೆ, ಬಾಹ್ಯವಾಗಿ ಲಭ್ಯವಿರುವ ಪರಮಾಣುಗಳು, ದಿಕ್, ಕಾಲ, ಆಕಾಶ, ಮನಸ್ಸುಗಳು ಮತ್ತು ಆತ್ಮಗಳಿಂದ ರಚಿಸುತ್ತಾನೆ.
   
    ಇಲ್ಲಿ ಸೃಷ್ಟಿ ಕಾರ್ಯವನ್ನು ಸರಳವಾಗಿ ಹೇಳಬೇಕೆಂದರೆ ಹೊರಗೆ (ಬಾಹ್ಯವಾಗಿ) ಲಭ್ಯವಿರುವ ವಸ್ತುಗಳನ್ನು ಈಶ್ವರನು ಕ್ರಮಬದ್ಧವಾಗಿ ಜೋಡಿಸುತ್ತಾನೆ (ಸಂಯೋಜಿಸುತ್ತಾನೆ) ಮತ್ತು ಈ ವಸ್ತುಗಳು ಭಗವಂತನ ಜೊತೆಯಲ್ಲಿ ಈ ಪ್ರಪಂಚದಲ್ಲಿ ಇದ್ದು, ಅವು ಜೀವಿಗಳ ಕರ್ಮಕ್ಕನುಸಾರವಾಗಿ ಭಗವಂತನು ನಿರ್ಮಾಣ ಮಾಡುವ ನೈತಿಕ ವಿಶ್ವವನ್ನು ರಚಿಸಲು ಬಳಸಲ್ಪಡುತ್ತವೆ. ವಿವಿಧ ಭೌತಿಕ ವಸ್ತುಗಳು ಜೀವಿಗಳ ನೈತಿಕ ಮತ್ತು ಆಧ್ಯಾತ್ಮಿಕ ಉನ್ನತಿಯ ಸಾಧನಗಳಾಗಿ ಪ್ರಯೋಜನಕ್ಕೆ ಬರುತ್ತವೆ. ಹೀಗಾಗಿ ಭಗವಂತನು ಈ ಜಗತ್ತಿನ ಪ್ರಥಮ ರಚನಕಾರನಾಗಿ 'ನಿಮಿತ್ತ ಕಾರಣ'ನೆನಿಸುತ್ತಾನೆ ಮತ್ತು ಅದರ 'ಉಪಾದಾನ (ವಸ್ತುತಃ) ಕಾರಣ'ನಲ್ಲ.
   
    ಸೃಷ್ಟಿಯನ್ನು ರಚನೆ ಮಾಡಿದ ನಂತರ ಭಗವಂತನು ಅದರ ನಿರ್ವಹಣೆಯನ್ನೂ ಮಾಡುತ್ತಾನೆ. ಅವನು ಈ ಸೃಷ್ಟಿ ವ್ಯವಸ್ಥೆಯ 'ನೈತಿಕ ಪಾಲಕ' ಅಥವಾ 'ಕರ್ಮಫಲದಾತ' ಕೂಡ ಮತ್ತು ಅವನು 'ಶಿಷ್ಟ ಪೋಷಕ-ದುಷ್ಟ ಶಿಕ್ಷಕ'ನಾಗಿಯೂ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ. ನೈತಿಕತೆಯನ್ನು ಕಾಪಾಡಲು ಸೃಷ್ಟಿ ಚಕ್ರವು ಕೊನೆಗೊಂಡ ನಂತರ ಅವನೇ ಲಯ ಕರ್ತನಾಗಿ ಜಗತ್ತನ್ನು ವಿನಾಶಗೊಳಿಸುತ್ತಾನೆ. ಅವನು ಈ ಕಾರ್ಯವನ್ನು ವಿನಾಶಕ್ಕೆ ಕಾರಣವಾದ ಶಕ್ತಿಗಳನ್ನು ಪೂರ್ತಿಯಾಗಿ ಬಿಡುಗಡೆಗೊಳಿಸುವುದರ ಮೂಲಕ ಸಾಧಿಸುತ್ತಾನೆ.
   
    ಭಗವಂತನು ಸರ್ವಜ್ಞನು ಏಕೆಂದರೆ ಅವನು ಎಲ್ಲ ವಿಷಯಗಳ ಮತ್ತು ಘಟನೆಗಳ ಕುರಿತಾಗಿ ನಿಖರವಾದ ತಿಳುವಳಿಕೆ ಹೊಂದಿರುತ್ತಾನೆ. ಭಗವಂತನು ನಿತ್ಯ ಪ್ರಜ್ಞೆಯನ್ನು (ತಿಳುವಳಿಕೆ ಅಥವಾ ಜ್ಞಾನವನ್ನು) ತನ್ನ ಅಂತರ್ಭಾಗವಾಗಿ ಹೊಂದಿರುತ್ತಾನೆ. ಅದ್ವೈತ ವೇದಾಂತದಲ್ಲಿ ಪ್ರತಿಪಾದಿಸಿರುವಂತೆ ಇಲ್ಲಿ ಭಗವಂತನು ಪ್ರಜ್ಞಾ ಅಥವಾ ಜ್ಞಾನದ ಸ್ವರೂಪನಲ್ಲ. (ಒಟ್ಟಾರೆಯಾಗಿ ಹೇಳಬೇಕೆಂದರೆ ಭಗವಂತನು ಜ್ಞಾನವನ್ನು ತನ್ನೊಳಗೆ ಹೊಂದಿರುತ್ತಾನೆ ಅಂದರೆ ಅದು ಅವನ ಒಂದು ಅಂಶವೇ ಹೊರತು ಅದ್ವೈತ ವೇದಾಂತದಲ್ಲಿ ಪ್ರತಿಪಾದಿಸಿರುವಂತೆ ಅವನ ಸ್ವರೂಪವೇ ಜ್ಞಾನವಲ್ಲ). ಇವಲ್ಲದೆ ಷಡೈಶ್ವರ್ಯಗಳೆಂದು ಕರೆಯಲ್ಪಡುವ ಎಲ್ಲಾ ಆರು ಪರಿಪೂರ್ಣತೆಗಳನ್ನೂ ಭಗವಂತನು ಹೊಂದಿದ್ದಾನೆ. ಅವುಗಳು, ಜ್ಞಾನ (ತಿಳುವಳಿಕೆ), ಐಶ್ವರ್ಯ (ಈಶ್ವರತ್ವ), ಯಶಸ್ಸು (ಗೆಲುವು), ಶ್ರೀ (ಸಂಪತ್ತು ಮತ್ತು ಸೌಂದರ್ಯ) ಮೊದಲಾದವು.    
   
    ನ್ಯಾಯ ಹಾಗೂ ವೈಶೇಷಿಕ ದರ್ಶನಗಳು ದೇವರ ಇರುವಿಕೆಗೆ ಸುಮಾರು ಹತ್ತರಷ್ಟು ಕಾರಣಗಳನ್ನು ಕೊಡುತ್ತವೆ. ಇವುಗಳಲ್ಲೆಲ್ಲಾ ಪ್ರಮುಖವಾದದ್ದು ಯಾವುದೆಂದರೆ, ಈ ಸೃಷ್ಟಿ ಕ್ರಿಯೆಯ ಹಿಂದೆ ಖಚಿತವಾಗಿ ಒಬ್ಬ ಅತೀ ಮೇಧಾವಿ ಕಾರಣಕರ್ತನಿರಬೇಕು. ಏಕೆಂದರೆ ಬಹುತೇಕ ಎಲ್ಲಾ ವಸ್ತುಗಳು ಜಡವಾಗಿದ್ದು, ಆತ್ಮರು ಅಥವಾ ಜೀವರಿಗೆ ಪರಿಮಿತ ಜ್ಞಾನ ಮತ್ತು ಶಕ್ತಿ ಇದೆ. ಮತ್ತು ದಿನ ನಿತ್ಯದ ಸಾಮಾನ್ಯ ಸಂಗತಿಗಳಿಗೆ ಅತೀತವಾಗಿರುವ ವಿಷಯಗಳ ಅವಗಾಹನೆಗೆ (ತಿಳುವಳಿಕೆಗೆ) ಅಂತಿಮ ಪ್ರಮಾಣವಾಗಿರುವ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ನುಡಿಗಳು ಈ ವಿಷಯವನ್ನು ದೃಢಪಡಿಸುತ್ತವೆ. 

ಜೀವರು ಅಥವಾ ಪ್ರತ್ಯೇಕ ಆತ್ಮಗಳು
   
    ನ್ಯಾಯ ದರ್ಶನದ ಪ್ರಕಾರ ಜೀವರು ಅಥವಾ ಆತ್ಮರುಗಳ ಸಂಖ್ಯೆಯು ಅನಂತವಾದದ್ದು. ಅವು ನಿತ್ಯವೂ ಮತ್ತು ನಾಶರಹಿತವೂ ಆಗಿವೆ. ಪ್ರಜ್ಞೆಯು (ಜ್ಞಾನವು) ಅವುಗಳ ಅಂತರ್ಗತ ಭಾಗವಾಗಿರದೆ ಅದು ಅಣುವಿನ ಪ್ರಮಾಣದಷ್ಟಿರುವ ಮನಸ್ಸಿನ ಸಹಯೋಗದಿಂದ ಪಡೆದ ಗುಣವಾಗಿದೆ. ಆ ಜೀವರುಗಳು ಸ್ವಯಂವಿಭುಗಳು ಅಂದರೆ ಅವು ಸರ್ವಾಂತರ್ಯಾಮಿಯಾಗಿ ಎಲ್ಲ ಕಡೆ ಇರುತ್ತವೆ. ಮನಸ್ಸು ಇಂದ್ರಿಯಗಳ ಮೂಲಕ ಬಾಹ್ಯ ಪ್ರಪಂಚದೊಂದಿಗೆ ಸಂಭಂದವೇರ್ಪಡಿಸಿಕೊಂಡಾಗ ಜೀವಕ್ಕೆ ಎಲ್ಲ ರೀತಿಯ ಅನುಭವಗಳುಂಟಾಗುತ್ತವೆ.
   
    ಎಲ್ಲಾ ದರ್ಶನಗಳಲ್ಲಿ ಪ್ರಚುರ ಪಡಿಸಿರುವಂತೆ ನ್ಯಾಯ ದರ್ಶನವೂ ಕೂಡ ಜೀವನದ ಮೂಲ ಉದ್ದೇಶ 'ಅಪವರ್ಗ' ಅಥವಾ 'ಮೋಕ್ಷ'ವನ್ನು ಪಡೆದು ಜನನ-ಮರಣಗಳ ಕ್ರಿಯೆಯಿಂದ ಬಿಡುಗಡೆ ಹೊಂದುವುದನ್ನು ಪ್ರತಿಪಾದಿಸುತ್ತದೆ. ಆದರೆ, ಬೇರೆ ದರ್ಶನಗಳಲ್ಲಿ ಪ್ರಸ್ತುತ ಪಡಿಸುವಂತೆ ಮೋಕ್ಷ ಹೊಂದುವುದೆಂದರೆ ಧನಾತ್ಮಕವಾಗಿ ನಿತ್ಯವಾದ ಆನಂದವನ್ನು ಪಡೆಯುವುದಲ್ಲ. ಆದರೆ ಋಣಾತ್ಮಕವಾಗಿ; ಇಡಿಯಾಗಿ(ಸಂಪೂರ್ಣವಾಗಿ) ಮತ್ತು ಶಾಶ್ವತವಾಗಿ ಎಲ್ಲಾ ರೀತಿಯ ದುಃಖ ಮತ್ತು ಯಾತನೆಗಳಿಂದ ಮುಕ್ತನಾಗಿರುವುದು. ಏಕೆಂದರೆ ನೋವು ಮತ್ತು ನಲಿವುಗಳು ಜೀವನದಲ್ಲಿ ಯಾವಾಗಲೂ ಇರುತ್ತವೆ ಮತ್ತು ಮನಸ್ಸು ಇಂದ್ರಿಯಗಳೊಂದಿಗೆ ಸಂಭಂದ ಹೊಂದಿರುವುದರಿಂದ ಶಾಶ್ವತವಾಗಿ ದುಃಖರಹಿತವಾದ; ಕೇವಲ ನಲಿವು ಅಥವಾ ಸಂತೋಷ ಅಥವಾ ಆನಂದ ಇರುವುದಿಲ್ಲ. ಇದು ಈ ಋಣಾತ್ಮಕ ಪ್ರತಿಪಾದನೆಯ ಹಿಂದಿರುವ ತರ್ಕಬದ್ಧ ಆಲೋಚನೆಯಾಗಿರಬಹುದು.
   
    ಜೀವನು ತಾನು ದೇಹ ಮತ್ತು ಮನಸ್ಸು ಹಾಗು ಇಂದ್ರಿಯಗಳಿಂದ ಪ್ರತ್ಯೇಕನಾದ ಆತ್ಮನು ಎಂಬ ತತ್ವಜ್ಞಾನ ಅಥವಾ ನಿಜವಾದ ಜ್ಞಾನವನ್ನು ಕಂಡುಕೊಂಡಾಗ ಈ ಮುಕ್ತಿಯನ್ನು ಅಥವಾ ಅಪವರ್ಗವನ್ನು ಹೊಂದುತ್ತಾನೆ. ಇದನ್ನು ಪಡೆಯಲು ಜೀವನು ಮೂರು ರೀತಿಯ ಸಾಧನೆ (ಆಧ್ಯಾತ್ಮಿಕ ನಿಯಮ)ಗಳನ್ನು ಕೈಗೊಳ್ಳಬೇಕು. ಅವು ಯಾವುವೆಂದರೆ ಶ್ರವಣ (ಆತ್ಮದ ಬಗ್ಗೆ ಪ್ರಚುರವಾಗಿರುವ ಆಧ್ಯಾತ್ಮಿಕ ವಿಷಯಗಳನ್ನು ಕೇಳುವುದು), ಮನನ (ಅವುಗಳನ್ನು ಕುರಿತಾಗಿ ಆಲೋಚಿಸುವುದು ಅಂದರೆ ಆ ಜ್ಞಾನವನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಸ್ಥಾಪಿಸಿಕೊಳ್ಳುವುದು) ಮತ್ತು ನಿದಿಧ್ಯಾಸನ (ಮೊದಲೆರಡು ಸಾಧನಾ ವಿಧಾನಗಳಿಗೆ ಪೂರಕವಾಗಿ ಆತ್ಮದ ಬಗ್ಗೆ ಧ್ಯಾನ ಮಾಡುವುದು). ಈ ರೀತಿಯ ಸಾಧನೆಯು ಕಾಲಕ್ರಮೇಣ ಎಲ್ಲಾ ರೀತಿಯ ಮಿಥ್ಯಾಜ್ಞಾನ ಅಥವಾ ತಪ್ಪು ತಿಳುವಳಿಕೆಗಳನ್ನು ನಾಶ ಮಾಡುತ್ತದೆ. ಆಗ ಜೀವನು ಅನುಭವಿಸಬೇಕಾದ ಭೌತಿಕ ಹಾಗು ಮಾನಸಿಕವಾದ ನೋವು ಮತ್ತು ಯಾತನೆಗಳಿಗೆ ಕಾರಕವಾದ ಆಕರ್ಷಣೆ ಮತ್ತು ಪ್ರಚೋದನೆಗೊಳಪಡಿಸುವ ಎಲ್ಲಾ ರೀತಿಯ ಬಂಧನಗಳಿಂದ ವಿಮುಕ್ತನಾಗುತ್ತಾನೆ.
 
ಉಪಸಂಹಾರ:
   
    ಭಾರತೀಯ ತತ್ವಶಾಸ್ತ್ರ ಮತ್ತು ಆರು ಸನಾತನ ವಿಧಾನಗಳ ಬಗ್ಗೆ ಇರುವ ಪ್ರಮುಖ ಆರೋಪವೆಂದರೆ ಅವು ಕ್ರಮಬದ್ಧ ಆಲೋಚನೆ ಅಥವಾ ಒಪ್ಪಬಹುದಾದಂತ ತರ್ಕಕ್ಕಿಂತ ಹೆಚ್ಚಾಗಿ ಶಾಸ್ತ್ರ ಪ್ರಮಾಣ ಅಥವಾ ಶ್ರುತಿಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ವಿಷಯಗಳ ಮೇಲೆ ಆಧಾರ ಪಡುತ್ತವೆ. ಆದರೆ ನ್ಯಾಯ ದರ್ಶನವು ಮೇಲ್ನೋಟಕ್ಕೆ ಕಾಣುವ ಈ ಅಭಾಸಕ್ಕೆ ಅವಶ್ಯಕತೆಗಿಂತಲೂ ಹೆಚ್ಚಾದ ಮತ್ತು ಕೂಲಂಕುಷವಾದ ಹಾಗೂ ರಾಜಿ ಮಾಡಿಕೊಳ್ಳದ ತರ್ಕ ವಿಧಾನಗಳಿಂದ ಪರಿಹಾರವನ್ನು ಒದಗಿಸಿದೆ.
   
    ಒಟ್ಟಾರೆಯಾಗಿ ನ್ಯಾಯ ದರ್ಶನವು ವಿವಿಧ ಪ್ರಕಾರದ ತರ್ಕ ಶಾಸ್ತ್ರದ ಪ್ರತಿಪಾದಕರ-ಅದರಲ್ಲೂ ವಿಶೇಷವಾಗಿ ವೇದಾಂತ ದರ್ಶನಗಳ ವಿಶ್ಲೇಷಕರಿಗೆ ಗಟ್ಟಿಯಾದ ಬುನಾದಿಯನ್ನು ಒದಗಿಸಿ ಕೊಟ್ಟಿತು.
=================================================================================================
   
    ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Nyaya Darshanaನದ 16.5 ರಿಂದ 21ನೆಯ ಪುಟದ ಅನುವಾದದ ಭಾಗ.
    "ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.

http://sampada.net/blog/%E0%B2%A8%E0%B3%8D%E0%B2%AF%E0%B2%BE%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%A9-%E0%B3%A8/31/03/2012/36197
 

Rating
No votes yet

Comments