ಹಾಳೂರಿನ ದಿಬ್ಬಗಳು

ಹಾಳೂರಿನ ದಿಬ್ಬಗಳು

ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ "ಟಾರ್ಚ್" ಬೇಕು.

ಏನೋ ಮೆರವಣಿಗೆ ಹೊರಟಂತೆ, (ಅ)ಶಿಸ್ತಿನ ಸಿಪಾಯಿಗಳಂತೆ, ಒಬ್ಬರಹಿಂದಿಬ್ಬರು, ಪಕ್ಕಕ್ಕೊಬ್ಬರು, ಆಕಡೆ ಮತ್ತೆ ಮೂವರು. (ಅಬ್ಬಾ ತಲೆ ಲೆಕ್ಕ ತೆಗೆಯಲಾರೆ!!). ಜಾತ್ರೆಗೆ ಹೊರಟರೋ? ಯಾವ ಜಾತ್ರೆ ಇರಬಹುದು? ಉಹುಂ, ಸದ್ಯ ಯಾವುದೇ ಜಾತ್ರೆ ಇರುವಂತೆ ತೋರುತ್ತಿಲ್ಲ ! ಅದು ಜಾತ್ರೆಗಾದರೆ ಈ ಸಂಜೆಯ ಹೊತ್ತಲ್ಲೇಕೆ ಪ್ರಯಾಣ? ಮತ್ತೆ ? ಗುಳೆ ಹೊರಟರಾ? ಗುಳೆ ಹೊರಟರೆ "ಲಗೇಜು" ಇರಬೇಕಲ್ಲವಾ ? ಅದೂ ಕಾಣಿಸ್ತಿಲ್ಲ ! ಅಷ್ಟಕ್ಕೂ ಗುಳೆ ಹೋಗುವಂತದೇನಾಗಿದೆ ಈ ಊರಿಗೆ? "ಹಂದಿ ಜ್ವರ " ಎನ್ನುವ ಹೆಮ್ಮಾರಿ ಒಂದನ್ನ ಬಿಟ್ಟು ಉಳಿದಿದ್ದೆಲ್ಲ 'ನಾರ್ಮಲ್' ಆಗಿಯೇ ಇದೆಯಲ್ಲ ! ನನ್ನಷ್ಟಕ್ಕೆ ನಾನು ಸಮಾಧಾನ ಪಟ್ಟುಕೊಂಡೆ !

ಒಂದಿಬ್ಬರು ನಿಧಾನವಾಗಿ ಸಾಗುತ್ತಿದ್ದರೆ, ನಾಲ್ಕಾರು ಜನ ಪೆಕರು ಪೆಕರಾಗಿ ಹಲ್ಕಿರಿಯುತ್ತಾ ನಡೆಯುತ್ತಿದ್ದಾರೆ. ಇನ್ನೂ ಕೆಲವರು ಏನೋ ಧಾವಂತದಲ್ಲಿ (ಕ್ವಟ್ರೋಚಿಗೆ ಭಾರತ ಬಿಟ್ಟು  ಓಡಿ ಹೋಗಲು ಧಾವಂತವಿದ್ದಂತೆ !! (ಹೋಗಲು ಅವನಿಗೆ ಧಾವಂತವಿತ್ತೋ? ಅಥವಾ ಕಳುಹಿಸಲು ನಮ್ಮವರಿಗೆ ತರಾತುರಿ ಇತ್ತೋ ಎನ್ನುವುದು ಇಲ್ಲಿ ಅಪ್ರಸ್ತುತ!!) )ಸಾಗುತ್ತಿದ್ದಾರೆ. ಸುಮಾರು ಹನ್ನೆರಡರ ಪೋರಿಯೋಬ್ಬಳು ಕಾಲಿಗೆ ಚಕ್ರ ಕಟ್ಟಿ ಕೊಂಡು ಓಡುವ ಪ್ರಯತ್ನದಲ್ಲಿದ್ದಾಳೆ. ಹರೆಯದ ಹುಡುಗರ ಕೈ ಪಕ್ಕದಲ್ಲೇ ನಡೆಯುತ್ತಿರುವ ಗೆಳತಿಯ ಕೈಯಲ್ಲಿ ಭದ್ರವಾಗಿ ಕೂತು, ನಾಲ್ಕೂ ಕಾಲುಗಳು ಒಂದೇ ಗತಿಯಲ್ಲ್ಲಿ ಹೆಜ್ಜೆ ಇಡುತ್ತಿವೆ . ಆದರೆ ಅವನ ತುಂಟ ಕಂಗಳು ಮಾತ್ರ ಪಕ್ಕದಲ್ಲಿ ಸಾಗಿ ಹೋಗುತ್ತಿರುವ "ಚಂದ್ರ ಚಕೋರಿ"ಯರಮೇಲೆ ಆಗಾಗ ಹಾಯುತ್ತಿದೆ. "ಹಿರಿತಲೆ"ಗಳು 'ಉಭಯ ಕುಶಲೋಪರಿ ಸಾಂಪ್ರತ ' ಮುಗಿಸಿ, ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾರೆ.

(Piture: From internet)
ಇವೆಲ್ಲ ಅಪರೂಪಕ್ಕೆ  "ತಂತ್ರಾಂಶ ಕಾರ್ಖಾನೆ "ಯಿಂದ ಬೇಗನೆ ಹೊರಬಂದ ನಮಗೆ ಹೊಸದು. ಆದರೆ ಈ ದಿಬ್ಬಗಳು  ದಿನನಿತ್ಯ ಇವನ್ನೆಲ್ಲ ಕಂಡಿವೆ. ಜನರ ಅಲೆದಾಟಗಳನ್ನು ನೋಡಿವೆ . ಹೆಚ್ಚು ತಿಂದವರು ("ಲಂಚ್" ಅಥವಾ "ಲಂಚ"? ಏನನ್ನು ತಿಂದವರು ? ನೀವೇ ನಿರ್ಧರಿಸಿ) ಕರಗಿಸಲೆಂದೂ, ತಿನ್ನದವರು ಪಕ್ಕದ ಮೋರಿಯಿಂದ ಎತ್ತಿ ಕುದಿಸಿ ಮಸಾಲೆ ಹಾಕಿ 'ಘಂ' ಎನ್ನುವಂತೆ ಮಡಿದ "ಪಾನಿ ಪೂರಿ" ತಿನ್ನೋಣವೆಂದೂ, ತಿನ್ನಲಾಗದವರು ನೋಡೋಣ ಎಂದೂ (ಏನನ್ನ ನೋಡೋಣ? ಮುಂದಿನ ಪ್ಯಾರದಲ್ಲಿ ಉತ್ತರವಿದೆ. ), ಜೊತೆ(pair) ಇರುವವರು  ಸಮಯ ಸದ್ವಿನಿಯೋಗಕ್ಕೆಂದೂ, ಇರದವರು ಅರಸಲೆಂದೂ ತನ್ನೆಡೆಗೆ ಬರುವುದನ್ನು ಈ ದಿಬ್ಬಗಳು ಕಳೆದ ಹಲವಾರು ವರ್ಷಗಳಿಂದ ನೋಡಿವೆ. ಇಂಗ್ಲಿಷರು ಅದನ್ನು "ವಾಕಿಂಗ್" ಎಂದೂ, ಕನ್ನಡದವರು "ಗಾಳಿ ತಿನ್ನುವುದೆಂದೂ" ಹೇಳಿದ್ದನ್ನೂ ಅದು ಎಷ್ಟೋ ಸಾರಿ ಕೇಳಿಸಿಕೊಂಡಿದೆ.

ಅಷ್ಟಲ್ಲದೇ ಈ ದಿಬ್ಬಗಳು ಇಂದು ವಾಯುವಿಹಾರಕ್ಕೆ ಬಂದಿರುವ ಅದೆಷ್ಟೋ "ನೆರೆತ ಕೂದಲಿನ ಯುವಕರು" ' ಲವ್ @ ಫಸ್ಟ್ ಸೈಟ್ ' ಎಂದು ಹಳ್ಳಕೆ ಬಿದ್ದದ್ದನ್ನು ನೋಡಿ ಪಕ ಪಕನೆ ನಕ್ಕಿದೆ . ಅದೇ ಜನರಿಗೆ ತನ್ನ ಮರೆಯಲ್ಲಿ ಪ್ರಥಮ ಪ್ರೇಮ ಪಾಠವನ್ನೂ ಕಲಿಸಿದೆ. ಅದೇ ಜನರ ಮುಂದಿನ ಪೀಳಿಗೆಯೂ ತನ್ನ ನೆರಳಿನಲ್ಲೇ ಪ್ರೇಮ ಪಾಠ ಕಲಿಯುತ್ತಿರುವ ಸಂತೃಪ್ತಿಯೂ ಈ ದಿಬ್ಬಗಳಿಗಿದೆ.

ಹೆಂಗೆಳೆಯರು ಸೂಸಿದ ಸುಗಂಧ ದ್ರವ್ಯದ ಪರಿಮಳವನ್ನು ಅಸ್ವಾದಿಸಿದೆ. ಮಲ್ಲಿಗೆಯ ಘಮವನ್ನೂ ಅನುಭವಿಸಿದೆ . ಜೋಡಿ ಪಕ್ಷಿಗಳು ಎಲ್ಲಿಂದಲೋ ಹಾರಿ ಬಂದು, ದಿಬ್ಬಗಳ ನೆರಳಿನಲ್ಲಿ ಅವಿತು ಕುಳಿತು , ತಬ್ಬಿ ಹಿಡಿದು ಮುತ್ತಿಟ್ಟಾಗ, ಇವು ನಾಚಿ ಕಣ್ಮುಚ್ಚಿಕೊಂಡಿವೆ. ಪ್ರೇಮಿಗಳ ಪಿಸುಮಾತನ್ನು  ಪ್ರತಿನಿತ್ಯ ಕೇಳಿ ಅನುಭವಿಸಿವೆ.ಅದೇ ಪ್ರಣಯ ಪಕ್ಷಿಗಳು ದಿಬ್ಬದ ಮೇಲೆ ಬಿದ್ದು ಹೊರಳಾಡಿದಾಗ, ಅವರ ದೇಹ ಸಿರಿಯನ್ನು "ತಾನೆ ಅನುಭವಿಸಿದಷ್ಟು " ಸಂತಸಪಟ್ಟಿವೆ. ಕುಡಿದು ತೂರಾಡಿಬಂದು,ಲೋಕವನ್ನೇ ಮರೆತು ಬಿದ್ದುಕೊಂಡಿರುವ  ಪುಂಡ  ಪಟಿಂಗರಿಗೆ ಅಂಗಿಯೊಳಗೆ ಇರುವೆ ಹರಿಸಿ,ತಕ್ಕ ಶಾಸ್ತಿ ಮಾಡಿವೆ.

ಈ ರೀತಿಯ ದಿನಚರಿಯೇನೂ ಈ ದಿಬ್ಬಗಳಿಗೆ ತೀರಾ ಹೊಸತಲ್ಲ, ಅಥವಾ ತುಂಬಾ ಹಳತೂ ಅಲ್ಲ . ಆದರೆ ಕಳೆದ ಕೆಲವು ವರ್ಷಗಳಿಂದ ತನ್ನಕಡೆಗೆ ಸಾಗಿ ಬರುತ್ತಿರುವ ಜನ ಪ್ರವಾಹ ಊರ್ಧ್ವಗತಿಯಲ್ಲಿರುವುದು  ಮಾತ್ರ  ಈ ದಿಬ್ಬಗಳ ಅರಿವಿಗೆ ಬಂದಿದೆ. ೨ ವರ್ಷ ಎಳೆಯ 'ಪಾಪು'ಗಳು ಅಮ್ಮನ ಮಡಿಲಿನಲ್ಲಿ ಕೂತು , ತನ್ನಡೆಗೆ ನೋಡಿ ನಕ್ಕು ನಲಿದಾಡುವುದು, ತನ್ನಮೇಲೆ ತಮ್ಮ ಪುಟ್ಟ ಪಾದಗಳನ್ನೂರಿ ಕುಣಿದು ಕುಪ್ಪಳಿಸುವುದು, ಆನಂದಿಸುವುದು ಇನ್ನೂ ಹಸಿ ಹಸಿಯಾಗಿಯೇ ಇದೆ. ಅದೇ ಕಂದಮ್ಮಗಳು ಕೇವಲ ಮತ್ತೆರಡು ವರ್ಷಗಳ ಅಂತರದಲ್ಲಿ, ಅನಿವಾರ್ಯ ಕರ್ಮವೋ ಎಂಬಂತೆ 'ಗಲಿ ಸೇವನೆಗೆ ' ಬರುವುದನ್ನೂ , "ಅಸ್ತಮಾ" ಎನ್ನುವ ಪಿಶಾಚಿಯನ್ನು ಹೊತ್ತು ತಿರುಗುವುದನ್ನೂ ನೋಡಿ, ತನ್ನಲ್ಲೇ ತಾನು ಈ ಹಾಳೂರಿನ ನಗರಗಳಿಗೆ, ವಿಷ ಸೂಸುವ ಕಾರ್ಖಾನೆಗಳಿಗೆ ತನ್ನಲ್ಲೇ ತಾನು ಶಾಪ ಹಾಕಿದೆ.

ಇಷ್ಟೆಲ್ಲಾ ಸಿಹಿ/ಕಹಿ ಸತ್ಯಗಳನ್ನು ತನ್ನಲ್ಲೇ ಅರಗಿಸಿಕೊಂಡ ಈ ದಿಬ್ಬಗಳು ಇಂದು ಮಾತ್ರ ತಮ್ಮ ಚೈತನ್ಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶೋಕ ಸಾಗರದಲ್ಲಿ ಮುಳುಗಿದಂತೆ ತೋರುತ್ತಿದೆ. ನಾಲ್ಕಾರು ವರ್ಷದ ಎಳೆಯ ಕಂದಮ್ಮಗಳು ಇಂದು ಅದರ ಮಡಿಲಿನಲ್ಲಿ ಮಲಗಿವೆ. ಹಸಿವು, ಬಾಯಾರಿಕೆ ಸಂಕಟಗಳಿಂದ ಒದ್ದಾಡುತ್ತಿವೆ. ಎಲ್ಲಿಂದ ಬಂದ ಮಕ್ಕಳಿವು?. ಅವಕ್ಕೂ ಗೊತ್ತಿಲ್ಲ, ತನಗೋ ತಿಳಿದಿಲ್ಲ. ಎಲ್ಲಿನದ ಬಂದಿರೆಂದು ಕೇಳಲು ಧ್ವನಿಯೂ ಬರುತ್ತಿಲ್ಲ.

ಇತ್ತ ವಾಯುವಿಹಾರಕ್ಕೆ ಬಂದವರಾದರೂ ಇದನ್ನು ಗಮನಿಸಿ ಸಹಾಯ ಮಾಡಬಾರದೆ? ನನಗೂ ಎಲ್ಲಾ ಅರ್ಥವಾಗುತ್ತಿದೆ ,ಆದರೆ ಕೂಗಿ ಹೇಳಲು ಧ್ವನಿ ಬರುತ್ತಿಲ್ಲ ಎಂದು ಆ ದಿಬ್ಬಗಳು ಮರುಗುತ್ತಿವೆ. "ವ್ಯಕ್ತಪಡಿಸಲಾರದ ಭಾವನೆಗಳು ಇದ್ದರೆಷ್ಟು ಸತ್ತರೆಷ್ಟು ?" ಎಂದು ತನ್ನನೇ ತಾನು ಹಳಿದು ಕೊಳ್ಳುತ್ತಿವೆ.

ಜಗತ್ತಿನ್ನ ಎಲ್ಲಾ ವೈಭೋಗಗಳನ್ನು ಕಂಡು ಅನುಭವಿಸಿದ ದಿಬ್ಬಗಳು, ಇಂದು ಅನ್ಯಮನಸ್ಕವಾಗಿವೆ.    "ಗಾಲಿ"ಗಳೂ, "ಧಣಿ"ಗಳೂ, "ಸ್ವಾಭಿಮಾನಿಗಳೂ", ತಮ್ಮನ್ನು ಹಾಗೆ ಬಿಟ್ಟರೆ, ಮುಂದಿನ ತಲೆಮಾರಿಗೂ ಆಶ್ರಯ ನೀಡುವ ಸಂಕಲ್ಪ ಮಾಡಿ ಕುಳಿತಿವೆ. ಬಹುಬಲಿಯಂತೆ ನಗ್ನರಾಗಿ, ಕಣ್ಮುಚ್ಚಿ  ತಪೋನಿರತರಾಗಿ ಕುಳಿತಿವೆ. ಸುಮಾರು ವರ್ಷಗಳಿಂದ ಅಲ್ಲೇ ಕುಳಿತಲ್ಲೇ ಇವೆ. ಕುಳಿತೆ ಇರುತ್ತವೆ !! .

 

(picture: from internet)

Comments