ಅವಳ ಕಾಲ್ ಬರುತ್ತಾ?? - ಭಾಗ ೭
ಭಾಗ ೬ ಲಿಂಕ್ - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%E0%B2%B2%E0%B3%8D-%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BE-%E0%B2%AD%E0%B2%BE%E0%B2%97-%E0%B3%AC/04/04/2012/36239
ಸಮಯ ೮:೩೦ ಆಗಿತ್ತು. ಹೀಗೆ ಕುಳಿತ್ತಿದ್ದರೆ ಊರಿಗೆ ತಲುಪುವುದು ಲೇಟ್ ಆಗತ್ತೆ ಅಂದುಕೊಂಡು, ಅಕ್ಕ ಹೇಳಿದ ಆ ಹೊಸಾ ಬಟ್ಟೆಯನ್ನು ಆಫೀಸ್ ನ ಲ್ಯಾಪ್‌ಟಾಪ್ ಬ್ಯಾಗಿನಲ್ಲಿರಿಸಿ zಇಪ್ ಎಳೆದೆ. ದೇವರಿಗೆ ಕೈ ಮುಗಿದು ಮನೆಗೆ ಬೀಗ ಹಾಕಿ ಸಂಯುಕ್ತಾಳ ಮನೆ ಕಡೆ ನಡೆದೆ. ಭಾರತ-ಆಸ್ಟ್ರೇಲಿಯ ಮೊದಲ T20 ಮ್ಯಾಚನು ಅಂಕಲ್ ತದೇಕಚಿತ್ತದಿಂದ ನೋಡುತ್ತಿದ್ದರು. ನಾನು ಬಾಗಿಲ ಬಳಿ ಹೋಗುತ್ತಿದ್ದಂತೆ ಒಹೋಹೋ ಇಂಜಿನಿಯರ್ ಸಾಹೇಬ್ರು ಅಪರೂಪ ಆಗ್ಬಿಟ್ರಿ, ಬರ್ಬೇಕು ಬರ್ಬೇಕು ಅಂತ ಒಳಕರೆದು, ಪುಟಿ ಯಾರ್ ಬಂದಿದಾರೆ ನೋಡು ಅಂತ ಸಂಯುಕ್ತಳನ್ನು ಕರೆದರು. ಅಡುಗೆ ಮನೆಯಲ್ಲಿದ್ದ ಆಂಟೀ ಕೂಡ ಹೊರಬಂದು ಬಾಪ್ಪ ಒಳಗೆ ಅಂದರು. ನಾ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನಿಸಿ ಒಳ ಹೋಗಿ ಸೋಫಾ ಮೇಲೆ ಕೂತೆ. ರೂಮಿನಲ್ಲಿ ಓದುತ್ತಾ ಕೂತಿದ್ದ ಸಂಯುಕ್ತ ಕೈಯಲ್ಲಿದ್ದ ಬುಕ್ ಅನ್ನು ಹಿಡಿದೆ ನನ್ನ ಪಕ್ಕ ಬಂದು ಆನಿಸಿದಳು.
ಭಾರತ ಪಂದ್ಯ ಸೋತಿತ್ತು. ....... presentation cermony on the other side of this break ಅಂತ ಬಡಬಡಿಸಿ ರವಿ ಶಾಸ್ತ್ರಿ ಹೊರಟ. ಅಂಕಲ್ ತಡ್ಯಪ್ಪ, ಕಾಲು ತೊಳೆದು ಬರ್ತೀನಿ ಅಂತ ಎದ್ದು ಬಚ್ಚಲು ಮನೆಗೆ ಹೋದರು. ಆಂಟೀ ನಾನ್ ಊರಿಗೆ ಹೋರ್ಟಿದೀನಿ, ಮನೆ ಬೀಗ ಕೊಟ್ಟು ಹೋಗೋಣ ಅಂತ ಬಂದೆ, ತೊಗೊಳಿ ಎಂದು ಬಲಗೈ ಚಾಚಿ ಅರ್ಧ ಎದ್ದೆ. ನಾನ್ ಪಕ್ದಲ್ಲೆ ಕೂತಿದೀನಿ ಇಲ್ಲೇ ಕೊಡು ಅಂತ ನನ್ನ ಎಡಗೈ ಎಳೆದ ಸಂಯುಕ್ತ ನನ್ನನ್ನ ಸೋಫಾ ಮೇಲೆ ಬೀಳಿಸಿ ಬಲಗೈಲಿದ್ದ ಕೀನ ಕಿತ್ತುಕೊಂಡಳು. ಅಯ್ಯೋ ಗೂಬೆ ಏನೇ ಅರ್ಜೆಂಟ್ ನಿಂಗೆ ಇಲ್ಕೊಡು ಅಂತ ಕೇಳಿದ್ದಿದ್ದ್ರೆ ಅವ್ನ್ ಕೊಡ್ತಿರ್ಲ್ಲಿಲ್ವಾ? ಅಂತ ಅವ್ಳಿಗೆ ಬೈದು, ಏನಾಗಿಲ್ಲ ತಾನೇ? ಕೂತ್ಕೋಪಾ, ನಿಂಗ್ ಇಷ್ಟವಾದ ಸಜ್ಜಿಗೆ ಮಾಡಿದೀನಿ, ತಿಂದ್ ಕೊಂಡು ಹೊರಡುವಂತೆ ಅಂತ ಹೇಳಿ ಅಡುಗೆ ಮನೆಗೆ ಹೋದರು. ಜೊತೆಗೆ ಸಂಜೆ ನಾ ಮಾಡಿದ ಚೂಡನೂ ತೊಗೊಂಡ್ ಬಾರಮ್ಮ - ಸಂಯುಕ್ತ ಅಮ್ಮನಿಗೆ ಆರ್ಡರ್ ಮಾಡಿದಳು.
ಟೀವೀಯಲಿ ಸ್ಕೋರ್ ಕಾರ್ಡ್,ಬೌಂಡರೀಸ್, ಸಿಕ್ಸರ್ಸ್, ಫಾಲ್ ಆಫ್ ವಿಕೆಟ್ಸ್ ಎಲ್ಲಾ ತೋರಿಸಿ ಪ್ರೆಸೆಂಟೇಶನ್ ಸೆರ್ಮನಿ ಶುರು ಮಾಡಿದರು. anchorman ಹೋಲ್ಡಿಂಗ್ ನ ನೋಡಿ ಅಂಕಲ್ ಮೈಕೆಲ್ ಹೋಲ್ಡಿಂಗ್ ಈಸ್ ಹೋಲ್ಡಿಂಗ್ ದ ಮೈಕ್ ಅಂದರು. ಕೆಳಗಿನ ಕವನಕೆ ಅದೇ ಸ್ಪೂರ್ತಿಯಾಯಿತು. ಸಂಯುಕ್ತ ತಂದಿದ್ದ ಬುಕ್ಕಲಿ ಒಂದು ಹಾಳೆ ಕಿತ್ತು ಬರೆಯತೊಡಗಿದೆ.
ಒಂದೇ ಬೌಂಡರಿಗೆ ಪೆವಿಲಿಯನ್ ಸೇರಿದ ವೀರೇಂದ್ರ ಸೆಹ್ವಾಗ್
ಭರವಸೆ ಮೂಡಿಸಿದ್ದ ಕೊಹ್ಲಿ ವಿಕೆಟ್ ಕಿತ್ತಿದ ಬ್ರಾಡ್ ಹಾಗ್
'ಗಂಭೀರ'ವಾಗಿ ಬ್ಯಾಟ್ ಮಾಡದ ಗೌತಮ
ಭಾರತದ 'ಹಿತ'ಕಾಯದ ರೋಹಿತ್ ಶರಮ
ಕ್ರಿಶ್ಚಿಯಾನ ಎಸೆತಕ್ಕೆ ಬೋಲ್ಡ್ ಆದ ರೈನ
ಕಡೆ ಓವೆರಲಿ ತಿಣುಕಾಡಿದ ಅಶ್ವಿನ
ಟೆಸ್ಟ್ ಇನ್ನಿಂಗ್ಸ್ ಆಡಿದ ನಾಯಕ ಮಹೇಂದ್ರ
ಎನಿಕ್ಕೂ ಪ್ರಯೋಜನವಾಗದ ರವೀಂದ್ರ
ಆಲ್ ರೌಂಡ್ ಆಟ ಪ್ರದರ್ಶಿಸಿದ ಹಸ್ಸಿ
ಬಳಿದನು ಭಾರತದ ಮುಖಕ್ಕೆ ಮಸಿ
ಕೊನೆಗೂ ಏರಲಾಗಲ್ಲಿಲ್ಲ ವಾಡ್ ಪೇರಿಸಿದ ರನ್ ಗೋಡೆ
ವರುಣನ ಕೃಪೆಗೂ ಪಾತ್ರವಾಗದ ಭಾರತೀಯ ಪಡೆ
ವಿಜಯಲಕ್ಷ್ಮೀ ಒಲಿದಳು ಬೈಲಿಯ ಆಸೀಫ್ಸ್ ಕಡೆ
ಕ್ರಿಕೆಟ್ ಗೆ ಎಳ್ಳು ನೀರು ಬಿಟ್ಟು, ಊರಿಗೆ ನೀ ನಡೆ
ಬರೆಯುತ್ತಿರುವಾಗಲೇ ಇಣುಕಿ ಇಣುಕಿ ನೋಡುತ್ತಿದ್ದ ಸಂಯುಕ್ತ, ನಾನು ಲೇಖನಿ ಟೇಬಲ್ ಮೇಲಿಡುತ್ತಿದ್ದಂತೆ, ನನ್ನ ಕೈಲಿದ್ದ ಹಾಳೆಯನ್ನು ಕಿತ್ತುಕೊಂಡು ಒಂದೇ ಬೌಂಡರಿಗೆ ಪೆವಿಲಿಯನ್ ......... ಜೋರಾಗಿ ಓದಲು ಶುರು ಮಾಡಿದಳು. ಪ್ರತಿ ಲೈನಿನ ಕೊನೆಯಲ್ಲೂ ಅವರು ವಾಹ್ ವಾಹ್ ಅನ್ನುತ್ತಿದ್ದರೆ, ನಾನು ಆಂಟೀ ಕೊಟ್ಟಿದ್ದ ಘಮಘಮಿಸುತ್ತಿದ್ದ ತುಪ್ಪ ತೇಲುತ್ತಿದ್ದ ಬಿಸಿ ಬಿಸಿ ಸಜ್ಜಿಗೆಯನ್ನು ಉಫ್ ಉಫ್ ಎಂದು ಆರಿಸುತ್ತಾ ತಿನ್ನುತ್ತಿದ್ದೆ. ಸ್ಪೂನ್ ಕಿತ್ಕೊಂಡು ಸಂಯುಕ್ತನು ಸ್ವಲ್ಪ ಸಜ್ಜಿಗೆ ತಿಂದು ರೂಮಿಗೆ ಹೋಗಿ ಬಾಗಿಲು ಸರಿಸಿಕೊಂಡಳು. ನಾನು ಕೈ ತೊಳೆದು, ನೀರು ಕುಡಿದು, ಆಂಟೀ ಕೊಟ್ಟ ಚೂಡ ಅವಲಕ್ಕಿಯ ಕವರನ್ನು ಬ್ಯಾಗಿಗೆ ಸೇರಿಸಿದೆ. ಸರಿ ಆಂಟೀ, ಅಂಕಲ್ ನಾನಿನ್ನು ಹೊರಡುತ್ತೀನಿ, ನಾಳೆ ಸಂಜೆ ಬಂದ್ಬಿಡ್ತೀನಿ. ಸೀ ಯು ಕಣೇ ಸಂಯುಕ್ತ ಅಂತ ಹೇಳಿ ಬಾಗಿಲಿನ ಕಡೆಗೆ ನಡೆದೆ.
ನೈಟಿಯಲ್ಲಿದ್ದ ಸಂಯುಕ್ತ ಲೈಟ್ ಬ್ಲೂ ಜೀನ್ಸ್ ಕಪ್ಪು ಟಾಪ್ ಧರಿಸಿ ರೂಮಿನ ವಾಸ್ಕಲ್ ಮೊಳೆಗೆ ಸಿಕ್ಕಿಸಿದ್ದ ಕೈನಿಯ ಕೀ ತೆಗೆದುಕೊಂಡು ನಡಿ ಮೆಜೆಸ್ಟಿಕ್ ಗೆ ಡ್ರಾಪ್ ಮಾಡ್ತೀನಿ ಅಂತ ಹಿಂದೆನೆ ಬಂದ್ಲು. ಆ ಸಮಯದಲ್ಲಿ ಬಸ್ಸಿಗೆ ಕಾಯುವುದು ಅಥವಾ ಆಟೋದವನ ಜೊತೆ ಜಗಳ ಕಾಯಲು ನನಗೂ ಮನಸಿರಲ್ಲಿಲ್ಲ. ಆದರೂ ವಾಚ್ ನೋಡಿಕೊಂಡು ಆಗಲೇ ೯ ಗಂಟೆ, ನೀನ್ ಬರೋದು ಬೇಡ ಅಂದೆ. ೯ ಆಗಿದೆ ನಿಂಗ್ ಲೇಟ್ ಆಗತ್ತೆ ಅಂತಾನೆ ನಾನ್ ಡ್ರಾಪ್ ಮಾಡಕ್ ಬರ್ತಿರದು ಸುಮ್ನೇ ನಡಿ ಅಂದು, ಅಪ್ಪ ಅಮ್ಮ ಹೋಗ್ಬರ್‌ತೀನಿ ಅಂತ, ನನ್ನ ಕೈ ಹಿಡಿದು ಎಳೆದುಕೊಂಡು ಆಚೆ ಬಂದಳು. ನಿಧಾನ ಕಣೇ ಹುಷಾರಪ್ಪ ಅಂತ ಆಂಟೀ ಹೇಳ್ತಿದ್ರೆ, ಶಾಂತಲ ಹತ್ರ ಸಿಗ್ನಲ್ ಇದ್ಯಲ ಅಲ್ಲಿ ಬಿಡು, ತೀರಾ ಮೆಜೆಸ್ಟಿಕ್ ಬಸ್ ಸ್ಟಾಪ್ ಒಳಗೆ ಹೋದರೆ ಟ್ರ್ಯಾಫಿಕ್ ಜಾಮ್ ಇರತ್ತೆ ಅಂತ ಅಂಕಲ್ ಹೇಳಿದ್ರು. ಹೂ ಸರಿ ಸರಿ ಆಯ್ತು ಅಂತ ಇಬ್ಬರೂ ಮೆಟ್ಟಿಲಿಳಿದು ಕೈನಿ ಏರಿದೆವು. ಅವಳು ಓಡಿಸುತ್ತಿದ್ದರೆ ನಾನು ಮಧ್ಯೆ ಬ್ಯಾಗ್ ಇಟ್ಟು ಹಿಂದೆ ಕೂತೆ.
ರೋಡ್ ಕ್ರಾಸ್ ಮಾಡೋವರೆಗೂ ಸುಮ್ಮನಿದ್ದ ಸಂಯುಕ್ತ ನಿನ್ನ ಬ್ಯಾಗ್ ಚುಚ್ತಾ ಇದೆ, ತೆಗ್ದು ಹಿಂದೆ ನೇತಾಕೊ ಅಂತ ದಬಾಯಿಸಿದಳು. ಸರಿ ಆಯ್ತು ಕಿರುಚ್ಬೇಡ ಅಂತ ನಾನು ಬ್ಯಾಗ್ ತೆಗೆದು ಹಿಂದೆ ತಗ್ಲಾಕೊಂಡೆ. ಬ್ಯಾಗ್ ತೆಗೆದ ಕೂಡಲೇ ಸರಿಗೆ ಕೂತುಕೊಳ್ಳುವ ನೆಪದಲ್ಲಿ ಸಂಯುಕ್ತ ಹಿಂದೆ ಸರಿದು ಅರ್ಧಕ್ಕಿಂತ ಹೆಚ್ಚಿನ ಸೀಟನ್ನು ಆವರಿಸಿದಳು. ಕೈನಿ ಆಶ್ರಮ ಬಿಟ್ಟು ಚಾಮರಾಜಪೇಟೆ ಕಡೆ ಸಾಗುತ್ತಿತ್ತು. ಗಾಳಿಗೆ ಹರಿಬಿಟ್ಟ ಅವಳ ತಲೆಗೂದಲು ನನ್ನ ಮುಖಕ್ಕೆ ಕಚಗುಳಿ ಇಡುತ್ತಿತ್ತು. ಕೂದಲನ್ನು ಪಕ್ಕಕ್ಕೆ ಸರಿಸಿ ಅವಳ ಕಿವಿ ಹತ್ತಿರ ಮುಖ ಇಟ್ಟು ಯಾವ ಶಾಂಪೂನೇ ಕೂದ್ಲು ಘಮ ಘಮ ಅನ್ತಿದೆ ಅಂತ ವ್ಯಂಗ್ಯಮಾಡಿದೆ. ಆ.. ಯಾವ್ ಶಾಂಪೂ ಆದ್ರೆ ನಿಂಗೇನೂ.. ಸುಮ್ನೇ ಹಿಡ್ಕೊಂಡು ಕೂತ್ಕೋ ಅಂತ ಜೋರು ಮಾಡಿದಳು. ತಡಿ ಮಾಡ್ತೀನಿ ನಿಂಗೆ ಅಂತ ನನ್ನ ಕೈಗಳನ್ನು ಅವಳ ಸೊಂಟದ ಸುತ್ತಾ ಬಳಸಿ, ಮುಖವನ್ನು ಅವಳ ಭುಜದ ಮೇಲಿಟ್ಟೇ. ದಟ್ಸ್ ಲೈಕ್ ಎ ಗುಡ್ ಬಾಯ್ ಅಂದ್ಲು. ೨ ನಿಮಿಷ ಸುಮ್ಮನಿದ್ದು ನಿಂಗೆ ಏನೋ ಹೇಳಲ? ಅಂದೆ. ಹೂ ಧಾರಾಳವಾಗಿ ಹೇಳು ಅಂತ ಭುಜ ಎಗರಿಸಿದಳು. ನನ್ನ ಮೆಜೆಸ್ಟಿಕ್ ಗೆ ಡ್ರಾಪ್ ಮಾಡಲು ಯಾಕೆ ಬಂದೆ? ಕೇಳಿದೆ.
ಅಯ್ಯೋ.. ತೂ ನಿನ್ನ.. ಏನೋ ಹೇಳ್ತೀಯ ಅಂತ ನಾನ್ ಖುಷಿ ಪಡ್ತಿದ್ರೆ ಪೆದ್ ಪೆದ್ದಾಗಿ ಏನೋ ಪ್ರಶ್ನೆ ಮಾಡ್‌ತ್ಯ? ನಂಗ್ ಮಾಡಕ್ ಬೇರೆ ಕ್ಯಾಮೇ ಇರ್ಲ್ಲಿಲ್ಲ ನೋಡು ಅದಕ್ಕೆ ಬಂದೆ ಅಂದವಳೇ ಗಾಡಿ ನಿಲ್ಲಿಸಿ ನನ್ನನ್ನು ಕೆಳಗಿಳಿಸಿ ಬ್ಯಾಗ್ ತಾನು ನೇತಾಕಿಕೊಂಡು ಓಡಿಸು ಗಾಡಿ ಅಂತ ಹಿಂದೆ ಕೂತಳು. ಎಂಥ ಹುಡುಗಿ ಸಹವಾಸ ಅಯ್ತಲ ತಂದೆ ಅಂತ ಗೊಣಗುತ್ತಾ ಕೈನಿಯ ಆಕ್ಸೀಲಾರೇಟೊರ್ ತಿರುವಿದೆ. ಸಂಯುಕ್ತ ನನ್ನನ್ನು ಬಿಗಿಯಾಗಿ ಅಪ್ಪಿ ಹಿಡಿದು ಮುಖವನ್ನು ಬೆನ್ನಿಗೆ ಆನಿಸಿ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ... ಅಂತ ಮೆಲ್ಲಗೆ ಹಾಡಲು ಶುರು ಮಾಡಿದಳು. ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ? ಅನ್ನೋ ಸಾಲನ್ನು ಬೇಕು ಅಂತಲೇ ನನ್ನ ಕಿವಿ ಬಳಿ ಬಂದು ಜೋರಾಗಿ ಹೇಳುತ್ತಿದ್ದಳು.
ಶಾಂತಲ ಸಿಗ್ನಲ್ ಹತ್ತಿರ ಕೈನಿ ನಿಲ್ಲಿಸಿದೆ. ಆದರೆ ಅವಳು ಬ್ಯಾಗ್ ಕೊಡಲು ಒಪ್ಪಲ್ಲಿಲ್ಲ. ತಾನೇ ಗಾಡಿ ಡ್ರೈವ್ ಮಾಡುತ್ತಾ ಮೆಜೆಸ್ಟಿಕ್ ಒಳಗೆ ಬಂದಳು. ಗಾಡಿ ಪಾರ್ಕ್ ಮಾಡಿ, ನಂದಿನಿ ಹಾಲಿನ ಬೂತಲ್ಲಿ ಎರಡು ಫ್ಲೇವರ್ಡ್ ಮಿಲ್ಕ್ ಕೊಂಡು ನನ್ನ ಕೈ ಹಿಡಿದು ಪ್ಲಾಟ್ ಫಾರ್ಮ್ ತನಕ ಜೊತೆ ಬಂದಳು. ೯:೨೦ ಆಯ್ತು ನೀನ್ ಹೋಗು, ಮನೆ ಸೇರಿದಮೇಲೆ ಮೆಸೇಜ್ ಮಾಡು ಅಂದ್ರೆ, ನನ್ನ ಬಸ್ ಹೊರಡುವ ತನಕವೂ ಅಲ್ಲೇ ನಿಂತಿದ್ದು, ಬಸ್ ನಂಬರ್ ನೋಟ್ ಮಾಡಿಕೊಂಡು, ಇವತ್ತು ಕಾಲೇ ಮಾಡ್ತೀನಿ, ನಿನ್ ಜೊತೆ ಮಾತಡ್ ಬೇಕು ಅಂತ ಹೇಳಿ ಮುಖ ಚಿಕ್ಕದು ಮಾಡಿಕೊಂಡು ಹೊರಟಳು.
ಟಿಕೆಟ್ ಪಡೆದು ನಿಟ್ಟುಸಿರು ಬಿಡುತ್ತಾ ಕೂತಿದ್ದೆ. ಬಸ್ ಇನ್ನೂ ರಾಜಾಜಿ ನಗರದ ಎಂಟ್ರೆನ್ಸನ ಸಿಗ್ನಲ್ನಲಿ ನಿಂತಿತ್ತು. ಆಗಲೇ ಸಂಯುಕ್ತ ಕಾಲ್ ಮಾಡಿ ನಾನು ಸೇಫಾಗಿ ಮನೆ ಸೇರಿದೆ ನೀನ್ ಎಲ್ಲಿದ್ಯಾ? ಅಂದಳು. ಗುಡ್, ಥ್ಯಾಂಕ್ಸ್ ಸಂಯುಕ್ತ. ನನ್ನದೊಂದು ರಿಕ್ವೆಸ್ಟ್.. ನಾನು ಈಗ ನಿನ್ ಜೊತೆ ಮಾತಾಡೋ ಮನಸ್ಥಿತಿಲಿ ಇಲ್ಲ. ಪ್ಲೀಸ್ ಬೇಜಾರ್ ಮಾಡ್ಕೊಬೇಡ. ನಾಳೆ ಮಾತಾಡೋಣ ಅಂದೆ. ಅಯ್ಯೋ ಹುಚ್ಚ ಬಸ್ಸಲ್ಲಿ ನಿಂಗೆ ಬೇಜಾರ್ ಆಗತ್ತೆ ಅಂತ ಫೋನ್ ಮಾಡ್ತೀನಿ ಮಾತಾಡೋಣ ಅಂದೆ ಅಷ್ಟೇ. ಈಗ ನಾನು ನಿನ್ ಹತ್ರ ಮಾತಾಡೋ ಅಂತ ವಿಚಾರ ಏನೂ ಇಲ್ಲ. ಆರಾಮಾಗಿ ಹೋಗು. ಊರಿಗೆ ಸೇರಿದ ಮೇಲೆ ಮೆಸೇಜ್ ಮಾಡು. ಕಾಲ್ ಮಾಡಿ ನನ್ನ ಎಬ್ಸುದ್ರೆ ಊರಿಗ್ ಬಂದ ಮೇಲೆ ಜಾಡ್ಸಿ ಒದಿತೀನಿ ಅಂತ ಕಿಲ ಕಿಲ ನಕ್ಕು ಟೇಕ್ ಕೇರ್ ಅಂದಳು. ನಾನೂ ಗುಡ್ ನೈಟ್ ಟೇಕ್ ಕೇರ್ ಅಂದು ಕಾಲ್ ಕಟ್ ಮಾಡಿದೆ. ಬಸ್ ವೇಗವಾಗಿ ಚಲಿಸುತ್ತಿತ್ತು ಸೀಟಿಗೆ ತಲೆಯನ್ನು ಒರಗಿಸಿ ಕೂತೆ. ಕಣ್ಣು ಮುಚ್ಚುತ್ತಿದ್ದಂತೆ ಮನಃಪಟಲದಿಂದ ಸಂಯುಕ್ತ ಸರಿದು ಹೋದಳು.
ಕಿಟಕಿಯಿಂದ ಬರುತ್ತಿದ್ದ ತಂಪಾದ ಗಾಳಿಗೆ ಶರ್ಟಿನ ಕಾಲರ್ ಪಟ ಪಟ ಅಂತ ಹೊಡೆದುಕೊಳ್ಳುತ್ತಿತ್ತು. ನನ್ನ-ಅಮಲಳ ಸಂಬಂಧವನ್ನು ವಿಮಲ ಅಪಾರ್ಥ ಮಾಡಿಕೊಂಡಿದ್ದಾಳ? ನಾವು ಜೊತೆಯಾಗಿರುವವರೆಗೂ ನಮ್ಮಿಬ್ಬರಲ್ಲಿ ಕೇವಲ ಆಕರ್ಷಣೆ ಇತ್ತೇ ಹೊರತು ಪ್ರೀತಿಯ ಸುಳಿವೂ ಕೂಡ ಇರಲ್ಲಿಲ್ಲ. ನಾವು ಯಾವತ್ತಿಗೂ ಒಬ್ಬರಿಗೊಬ್ಬರು ಐ ಲವ್ ಯು ಅಂತ ಹೇಳಿಕೊಂಡಿರಲ್ಲಿಲ್ಲ. ನಾನು-ಅಮಲ ಕೇವಲ ಗೆಳೆಯರು ಅಷ್ಟೇ ಅನ್ನೋ ಸತ್ಯ ವಿಮಲಳಿಗೆ ಮನವರಕೆಯಾಗಬೇಕು ಹಾಗೂ ವಿಮಲ ಅದನ್ನು ಒಪ್ಪಬೇಕು. ಹಾಗಾದರೆ ಮಾತ್ರ ವಿಮಲ ನನ್ನ ಬಾಳ ಸಂಗಾತಿಯಾಗಿ ಬರಲು ಸಾಧ್ಯ. ಮನದಲ್ಲಿ ಏನೋ ಲೆಕ್ಕಾಚಾರ ಮಾಡಿ ಕಣ್ಣು ಮುಚ್ಚಿದೆ. ಬಸ್ಸು ದಾಸರಹಳ್ಳಿ ದಾಟಿ ನೆಲಮಂಗಲದ ಕಡೆ ಓಡುತ್ತಿತ್ತು.
ಆದರೆ ಮನಸ್ಸು ಸುಮಾರು ವರ್ಷಗಳ ಹಿಂದೆ ನಡೆದ ನನ್ನ-ಅಮಲಳ ನೆನಪುಗಳನ್ನು ಮೆಲಕು ಹಾಕುತ್ತಿತ್ತು.
*************************************************************************************************************
ಭಾಗ ೫ ಲಿಂಕ್ - http://sampada.net/b...
ಭಾಗ ೪ ಲಿಂಕ್ - http://sampada.net/b...
ಭಾಗ ೩ ಲಿಂಕ್ - http://sampada.net/b...
ಭಾಗ ೨ ಲಿಂಕ್ - http://sampada.net/b...
ಭಾಗ ೧ ಲಿಂಕ್ - http://sampada.net/b...