ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!

ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!

 ನೀರು:ನಷ್ಟ ದಿನಕ್ಕೆ ಲಕ್ಷಕೋಟಿ!
ಒಂದರ ಹಿಂದೆ ಒಂದು ಹಗರಣ ಬಯಲಾಗುತ್ತಿದೆ.ಹಗರಣಗಳಲ್ಲಿ ಆಗಿರುವ ನಷ್ಟದ ಪ್ರಮಾಣವನ್ನು ತಿಳಿದೇ ಜನಸಾಮಾನ್ಯರು ಸುಸ್ತಾಗಿದ್ದಾನೆ.ತ್ರೀಜಿ ಸ್ಪೆಕ್ಟ್ರಮ್ ಹಂಚಿಕೆಯನ್ನು ಹರಾಜು ಪ್ರಕ್ರಿಯೆ ಮೂಲಕ ನಡೆಸಿ,ಸರಕಾರದ ಬೊಕ್ಕಸಕ್ಕೆ ಅಪಾರ ಹಣವನ್ನು ಗಳಿಸಿದ್ದೇ ಸರಕಾರದ ಕಷ್ಟದ ದಿನಗಳಿಗೆ ನಾಂದಿಯಾದ್ದು ವಿಪರ್ಯಾಸ.ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಲೈಸೆನ್ಸ್ ಅನ್ನು ಹರಾಜು ಪ್ರಕ್ರಿಯೆ ಮೂಲಕವೇ ನಡೆಸಬೇಕೆನ್ನುವ ನ್ಯಾಯಾಲಯದ ತೀರ್ಪು ಕೂಡಾ ಗೊಂದಲಗಳನ್ನು ಹೆಚ್ಚಿಸಿದೆ.ಗಣಿಗಾರಿಕೆಯಲ್ಲಿ ತೊಡಗಿರುವ ಕಂಪೆನಿಗಳು ನಾಮ್ಕೇವಾಸ್ತೇ ರಾಯಧನವನ್ನು ಸರಕಾರಕ್ಕೆ ನೀಡುತ್ತಿವೆ.ಒಂದು ವೇಳೆ ಕಲ್ಲಿದ್ದಲಿನಂತಹ ಸಂಪನ್ಮೂಲವನ್ನು ಹರಾಜು ಹಾಕಿದ್ದರೆ ಹತ್ತು ಲಕ್ಷಕೋಟಿ ರುಪಾಯಿಗಳಿಗೂ ಹೆಚ್ಚು ಆದಾಯವನ್ನು ಸರಕಾರ ಪಡೆಯಬಹುದು ಎಂದು ಸಿಏಜಿ ಲೆಕ್ಕ ಹಾಕಿರುವುದಾಗಿ ವರದಿಯಾಗಿದೆ.ಅದೇ ರೀತಿ ನೀರು ಕೂಡಾ ಒಂದು ಸಂಪನ್ಮೂಲವೆನ್ನುವುದನ್ನು ಒಪ್ಪುತ್ತೀರಿ ತಾನೇ?ಇದನ್ನೂ ಸರಕಾರ ಲೀಟರಿಗೆ ಹತ್ತೋ ಹದಿನೈದು ರೂಪಾಯಿಗಳಿಗೆ ಬಳಸಲು ಅನುಮತಿ ನೀಡಿದ್ದರೆ ಸರಕಾರದ ಬೊಕ್ಕಸಕ್ಕೆ ಸಿಗುತ್ತಿದ್ದ ಆದಾಯವನ್ನು ಲೆಕ್ಕ ಹಾಕಲು ಕಂಪ್ಯೂಟರ್ ಕೂಡಾ ಗಂಟೆಗಟ್ಟಲೆ ಸಮಯ ತೆಗೆದುಕೊಂಡೀತು.ಸೂಪರ್ ಕಂಪ್ಯೂಟರಿನ ಸಹಾಯ ಪಡೆದರೆ ಇಂತಹ ಲೆಕ್ಕಾಚಾರಕ್ಕೆ ಚಿಟಿಕೆ ಹಾಕಲು ಬೇಕಾದ ಸಮಯವೂ ಬೇಕಾಗಲಿಕ್ಕಿಲ್ಲ.
----------------------------------------
ಸೌರ ವಿದ್ಯುತ್ತಿನಿಂದ ದ್ರವ ಇಂಧನ
ಸೌರವಿದ್ಯುತ್‌ ಮೂಲಕ ಬ್ಯಾಟರಿ ಚಾರ್ಜ್ ಮಾಡಿ,ವಿದುಚ್ಛಕ್ತಿ ಪಡೆಯುವುದು ಸಾಮಾನ್ಯ ವಿಧಾನ.ಈಗ ಸೌರವಿದ್ಯುತ್ತನ್ನು ದ್ರವ ಇಂಧನವಾಗಿಸುವ ಬಗೆಯನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧಕರು ಸಂಶೋಧಿಸಿದ್ದಾರೆ.ಸಸ್ಯಮೂಲದಿಂದ ಎಣ್ಣೆ ಉತ್ಪಾದಿಸುವುದಕ್ಕಿಂತ ಇದು ಹೆಚ್ಚು ದಕ್ಷತೆಯುಳ್ಳ ವ್ಯವಸ್ಥೆಯಾಗಲಿದೆ.ಬ್ಯಾಟರಿಯು ಪರಿಸರಕ್ಕೆ ಹಾನಿತರುವ ವಸ್ತುಗಳನ್ನು ಹೊಂದಿರುವುದರಿಂದ ಇದು ಹೆಚ್ಚು ಪರಿಸರಪ್ರಿಯವಾದದ್ದು ಕೂಡಾ ಆಗಿದೆ.ಬಯೋರಿಯಾಕ್ಟರ್ ಜೆನೆಟಿಕ್ ತಂತ್ರಜ್ಞಾನ ಬಳಸುತ್ತದೆ ಮತ್ತು ಇದಕ್ಕೆ ಬೇಕಾದ್ದು ಇಂಗಾಲದ ಡಯಾಕ್ಸೈಡ್ ಮತ್ತು ಸೌರಶಕ್ತಿ.ಬಯೋರಿಯಾಕ್ಟರಿನಲ್ಲಿ ನೀರು,ಇಂಗಾಲದ ಡಯಾಕ್ಸೈಡ್ ಮೂಲಕ ವಿದ್ಯುತ್ ಹಾಯಿಸಿದಾಗ ಫಾರ್ಮೇಟ್ ಎನ್ನುವ ಇಂಗಾಲದ ಡಯಾಕ್ಸೈಡಿನ ಬಗೆಯಾಗಿ ಬದಲಾಗುತ್ತದೆ.ಮಣ್ಣಿನಲ್ಲಿ ಕಂಡು ಬರುವ ಒಂದು ಬಗೆಯ ಸೂಕ್ಷ್ಮಾಣುಗಳು,ಈ ಫಾರ್ಮೇಟನ್ನು ಭಕ್ಷಿಸಿ,ಬ್ಯುಟನಾಲ್ ಆಗಿ ಪರಿವರ್ತಿಸುತ್ತವೆ.ಬಯೋರಿಯಾಕ್ಟರ್ ಬ್ಯುಟನಾಲ್‌ನ್ನು ಉತ್ಪಾದಿಸಿದ್ದರೂ,ಉತ್ಪಾದನೆಯನ್ನು ವೃದ್ಧಿಸುವ ಕ್ರಮಗಳಿನ್ನೂ ತಿಳಿದಿಲ್ಲ.ಇದನ್ನು ಪ್ರಾಯೋಗಿಕವಾಗಿ ಬಳಸಲು ಇನ್ನಷ್ಟು ಸಂಶೋಧನೆಯಾಗಬೇಕಿದೆ.
------------------------------------
ಭೂದಿವಸದ ಆಚರಣೆ ಮತ್ತು ಎಸ್ಕೋಮ್‌ಗಳು
ವಿಶ್ವದ ಐದು ಸಾವಿರಕ್ಕಿಂತಲೂ ಹೆಚ್ಚು ನಗರಗಳಲ್ಲಿ ವಿಶ್ವ ಭೂದಿವಸವನ್ನು ಮಾರ್ಚ್ ತಿಂಗಳ ಕೊನೆಯ ಶನಿವಾರ ಆಚರಿಸಲಾಗುತ್ತದೆ.ಸ್ಮಾರಕಗಳು,ಮ್ಯೂಸಿಯಂಗಳೂ ಸೇರಿದಂತೆ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ,ರಾತ್ರಿ ಒಂದು ಗಂಟೆ ವಿದ್ಯುದ್ದೀಪಗಳನ್ನು ಆರಿಸಿ ಭೂದಿವಸವನ್ನು ಆಚರಿಸುವುದು ರೂಡಿ.ವಿಶ್ವದ ಇತರೆಡೆ ಎಂಟೂವರೆಯಿಂದ ಒಂಭತ್ತೂವರೆಯ ನಡುವೆ ದೀಪಗಳನ್ನು ಆರಿಸಿ,ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದ್ದರೆ,ನಮ್ಮಲ್ಲಿ ಎಸ್ಕೋಮ್‌ಗಳೇ ವಿದ್ಯುತ್ ಕಟ್ ಮಾಡಿ,ಜನರ ಕೆಲಸವನ್ನು ಸಲೀಸಾಗಿಸುತ್ತವೆ.ನಮ್ಮಲ್ಲಿ ಇಂತಹ ಆಚರಣೆಗಳಿಗೆ ಯಾವ ಅರ್ಥವೂ ಇಲ್ಲ.ವಿದ್ಯುತ್‌ನ ತೀವ್ರ ಕೊರತೆ ಎದುರಿಸುತ್ತಿರುವ ನಮ್ಮ ಎಸ್ಕೋಂ‌ಗಳು ಬೇಡಿಕೆ-ಪೂರೈಕೆಯ ನಡುವಣ ಅಂತರವನ್ನು ಸರಿದೂಗಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.ಹೊಸ ವಿದ್ಯುತ್ ಯೋಜನೆಗಳಿಗೆ ಅನುಮತಿ,ಜನರ ಸಹಕಾರ ಪಡೆಯುವಲ್ಲಿನ ವಿಳಂಬ,ಕಲ್ಲಿದಲು ಕೊರತೆ,ಅಣು ವಿದ್ಯುತ್ ಸ್ಥಾವರಗಳಿಗೆ ವಿರೋಧ ಮುಂತಾದ ಕಾರಣಗಳಿಂದ ಸದ್ಯೋಭವಿಷತ್ತಿನಲ್ಲಿ,ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವ ಸಾಧ್ಯತೆಗಳೂ ಇಲ್ಲ.ಕಿರುಯೋಜನೆಗಳಿಗೆ ಪ್ರೋತ್ಸಾಹ,ಸೌರವಿದ್ಯುತ್-ಪವನ ವಿದ್ಯುತ್ ಅಂತಹ ಪರ್ಯಾಯ ವಿದ್ಯುತ್ ಮೂಲಗಳಿಂದ ವಿದ್ಯುದುತ್ಪಾದನೆಯಂತಹ ಕ್ರಮಗಳು ವಿದ್ಯುತ್ ಕೊರತೆ ನೀಗಿಸುವಲ್ಲಿ ಅನಿವಾರ್ಯವಾಗಿದೆ.ವಿದ್ಯುತ್ತಿನ ಮಿತಬಳಕೆ ಅನಿವಾರ್ಯವೆನಿಸಿದೆ.ಆದರಿದನ್ನು ಪಾಲಿಸುವುದು ಕಷ್ಟಕರ-ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿಯಲ್ಲಾಗುತ್ತಿರುವ ಬದಲಾವಣೆಗಳು.
--------------------------------------------------
ಸಾಗರತಳದ ಅಂತರ್ಜಾಲ ಕೇಬಲ್‌ಗಳು
ಅಂತರ್ಜಾಲ ವ್ಯವಸ್ಥೆಯ ಮೂಲಕ ಮಾಹಿತಿ ವರ್ಗಾವಣೆ ಜಗತ್ತಿನ ಮೂಲೆ ಮೂಲೆಗಳನ್ನು ಬೆಸೆದಿವೆ.ಇವುಗಳ ಮೂಲಕ ಅತಿವೇಗದ ಸಂಪರ್ಕ ಸಾಧ್ಯವಾಗಿದೆ.ಟಾಟಾ ಕಂಪೆನಿಯು ಸಾಗರ ತಳದ ಕೇಬಲುಗಳನ್ನು ಅಳವಡಿಸಿ ನಿರ್ವಹಿಸುವ ಪ್ರಮುಖ ಕಂಪೆನಿಗಳಲ್ಲೊಂದಾಗಿದೆ.ಸಾಗರ ತಳದಲ್ಲಿ ಅಳವಡಿಸುವ ಕೇಬಲುಗಳನ್ನು ಸಮುದ್ರ ತಳದಲ್ಲಿ ಇರಿಸಲಾಗುತ್ತದೆ.ಅವನ್ನಳವಡಿಸಲು ಗೋಪುರಗಳು ಬೇಡ.ಗಾಳಿ,ಮಳೆ ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳಿಂದವಕ್ಕೆ ಹಾನಿಯಾಗದು.ಆದರೆ,ಅಪರೂಪಕ್ಕೊಮ್ಮೆ ಅವು ಹಡಗುಗಳಿಗೆ ಸಿಲುಕಿ ಮುರಿಯುವುದಿದೆ.ಲಂಡನ್-ಟೊಕಿಯೋ ನಡುವಣ ಕೇಬಲ್ ಪ್ರತಿ ಸೆಕೆಂಡಿಗೆ ಹತ್ತು ಗಿಗಾಬಿಟ್ ವೇಗದಲ್ಲಿ ದತ್ತಾಂಶ ವರ್ಗಾಯಿಸಬಲ್ಲುದು.ಇದರಿಂದ ಮಾಹಿತಿ ರವಾನೆ ಅರುವತ್ತು ಮಿಲ್ಲಿ ಸೆಕೆಂಡು ಹೆಚ್ಚಿನ ವೇಗದಲ್ಲಿ ಆಗಬಹುದು.ಇಂತಹ ಅತಿ ಸಣ್ಣ ವೇಗದಲ್ಲಿನ ಹೆಚ್ಚಳವೂ ಕೂಡಾ ಶೇರುಮಾರುಕಟ್ಟೆ,ಬ್ಯಾಂಕುಗಳ ನಡುವಣ ಸಂಪರ್ಕದಲ್ಲಿ ಗಮನಾರ್ಹ ಸುಧಾರಣೆಯನ್ನು ತರಬಲ್ಲುದು.
---------------------------------------
ಗೂಗಲ್ ಸುದ್ದಿ



ಗೂಗಲ್ ಡ್ರೈವ್ ಎನ್ನುವ ಹೊಸ ಸೇವೆ ಆರಂಭವಾಗಲಿದೆಯಂದು ವದಂತಿಗಳಿವೆ.ಐದು ಗಿಗಾಬೈಟುಗಳಷ್ಟು ಮಾಹಿತಿಯನ್ನು ಆನ್‌ಲೈನಿನಲ್ಲಿ ಶೇಖರಿಸಲು ಬಳಕೆದಾರರಿಗೆ ಗೂಗಲ್ ಉಚಿತ ಸೇವೆ ಒದಗಿಸಲಿದೆ.ಕ್ಲೌಡ್ ಸೇವೆಗಳ ಮೂಲಕ ಗೂಗಲ್ ಡ್ರೈವಿನಲ್ಲಿ ಶೇಖರಿಸಿದ ಮಾಹಿತಿ ಅಥವಾ ಕಡತಗಳನ್ನು ಬೇಕಾದೆಡೆಯಿಂದ ಬಳಸಿಕೊಳ್ಳಬಹುದು.ಅಂತರ್ಜಾಲ ಸಂಪರ್ಕವಿದ್ದರೆ ಇದು ಸಾಧ್ಯವಾಗುತ್ತದೆ.ಸೇವೆಯು ಯಾವಾಗ ಲಭ್ಯವಾಗುತ್ತದೆನ್ನುವುದು ಸ್ಪಷ್ಟವಿಲ್ಲ.
ಬಳಕೆದಾರರು ತಮ್ಮ ಗೂಗಲ್ ಖಾತೆಯನ್ನು ಬಳಸುತ್ತಿರುವ ವೈಖರಿಯನ್ನು ತಿಳಿಸುವ ಸೇವೆಯನ್ನು ಗೂಗಲ್ ಉತ್ತಮ ಪಡಿಸಿದೆ.ಹೀಗಾಗಿ,ತಾನು ಹೆಚ್ಚು ಬಳಸಿದ ಶೋಧ ಪದ,ಹೆಚ್ಚು ಭೇಟಿಯಿತ್ತ ತಾಣ,ವಿನಿಮಯ ಮಾಡಿಕೊಂಡ ಮಿಂಚಂಚೆಗಳ ಸಂಖ್ಯೆಯನ್ನು ಕೂಡಾ ಗೂಗಲ್ ತಿಳಿಸಲಿದೆ.ಯಾವ ಸಾಧನವನ್ನು ಹೆಚ್ಚಾಗಿ ಬಳಸಿದ್ದಿರಿ,ಯಾವ ಪ್ರದೇಷದಿಂದ ಅಂತರ್ಜಾಲವನ್ನು ಬಳಸಿದ್ದೀರಿ ಎನ್ನುವುದನ್ನು ಕೂಡಾ ಬಳಕೆದಾರ ಅರಿಯಬಹುದು.ಹೀಗಾಗಿ ತಾನು ಭೇಟಿ ನೀಡದ ಸ್ಥಳದಿಂದ ಖಾತೆಯನ್ನಾರಾದರೂ ಬಳಸಿದರೆ,ಸಂಶಯಾಸ್ಪದ ಕಾರ್ಯ ನಡೆಯುತ್ತಿದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ.ಒಡನೆಯೇ ಪಾಸ್‌ವರ್ಡ್ ಬದಲಿಸಿಯೋ,ಇನ್ನೊಂದು ಭದ್ರತಾ ಪದರವನ್ನು ಏರ್ಪಡಿಸಿಯೋ,ದಾಳಿಕೋರರನ್ನು ಹಿಮ್ಮೆಟ್ಟಿಸಬಹುದು.
----------------------------------------------
ಐವತ್ತು ದಶಲಕ್ಷ ಲ್ಯಾಪ್‌ಟಾಪುಗಳ ಸಮಾನವಾದ ಸೂಪರ್‌ಕಂಪ್ಯೂಟರ್
ಐವತ್ತು ದಶಲಕ್ಷ ಲ್ಯಾಪ್‌ಟಾಪುಗಳು ಮಾಡುವಷ್ಟು ಮಾಹಿತಿ ಸಂಸ್ಕರಣೆಯನ್ನು ನಿಭಾಯಿಸಲು ಒಂದು ಸೂಪರ್‌ಕಂಪ್ಯೂಟರಿಗೆ ಸಾಧ್ಯ.ಈಗ ಸಂಶೋಧಕರು  ಇಂತಹ ಸೂಪರ್‌ಕಂಪ್ಯೂಟರುಗಳ ಅಭಿವೃದ್ಧಿ ಕಾರ್ಯದತ್ತ ಗಮನ ಹರಿಸಿದ್ದಾರೆ.ಕಂಪ್ಯೂಟರುಗಳು ಪ್ರತಿಸೆಕೆಂಡಿಗೆ ಎಷ್ಟು ಫ್ಲೋಟಿಂಗ್ ಪಾಯಿಂಟ್ ಲೆಕ್ಕಾಚಾರಗಳನ್ನು ಮಾಡಬಲ್ಲುದು ಎನ್ನುವ ಅಧಾರದಲ್ಲಿ ಅವುಗಳ ವೇಗವನ್ನು ಅಳೆಯಲಾಗುತ್ತದೆ.ಇನ್ನು ಬರಲಿರುವ ಸೂಪರ್‌ಕಂಪ್ಯೂಟರುಗಳು ಎಕ್ಸೋ ಮಟ್ಟದ ಸೂಪರ್‌ಕಂಪ್ಯೂಟರುಗಳು.ಎಕ್ಸೋ ಎನ್ನುವುದು ಬಿಲಿಯನ್ ಬಿಲಿಯನ್ ವೇಗದಲ್ಲಿ ಲೆಕ್ಕಾಚಾರಗಳನ್ನು ಮಾಡುತ್ತವೆ.ಈ ವೇಗವೇ ಎಕ್ಸೋ ಮಟ್ಟದ ವೇಗವೆಂದು ಪರಿಗಣಿಸಲಾಗಿದೆ.
UDAYAVANIhttp://epaper.udayavani.com/PDFDisplay.aspx?Er=1&Edn=MANIPAL&Id=518393
*ಅಶೋಕ್‌ಕುಮಾರ್ ಎ

Comments