"ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೨)
'ಸಾಮಾನ್ಯ' ಅಥವಾ ಸಮಾನ ಅಂಶವೆಂದರೆ ಒಂದು ವರ್ಗದಲ್ಲಿರುವ ಸಾರ ಮತ್ತು ಅದರ ಸಾರ್ವತ್ರಿಕತೆ. ಸಾರ್ವತ್ರಿಕತೆ ವರ್ಗದಲ್ಲಿರುವ ಪ್ರತಿಯೊಬ್ಬ ಸದಸ್ಯನಲ್ಲೂ ನಿತ್ಯ (ನಿರಂತರ ಮತ್ತು ಕೊನೆಯಿಲ್ಲದ್ದು) ಮತ್ತು ಅಂತರ್ಜ್ಯನ್ಯವಾಗಿರುತ್ತವೆ. ಉದಾಹರಣೆಗೆ: 'ಗೋತ್ವ' (ಗೋವಿನ ಅಂಶ) ಮತ್ತು 'ಘಟತ್ವ' (ಮಡಕೆಯ ತತ್ವ) ಇವುಗಳು ಪ್ರತಿ ಹಸು ಮತ್ತು ಮಡಕೆಯಲ್ಲಿಯೂ ಅನುಕ್ರಮವಾಗಿ ಇರುತ್ತವೆ. ಒಂದು ಹಸುವಿನ ಮರಣ ಅಥವಾ ಮಡಕೆಯ ಒಡೆಯುವಿಕೆ ಅವುಗಳಲ್ಲಿದ್ದ 'ಸಾಮಾನ್ಯ'ವನ್ನು ನಾಶಪಡಿಸುವುದಿಲ್ಲ.
'ವಿಶೇಷ' ಅಥವಾ ಪ್ರತ್ಯೇಕತೆಯು 'ಸಾಮಾನ್ಯ'ದ ನೇರ ವಿರುದ್ಧ ಪದ. ಅದು ನಿತ್ಯವಿರುವ ವಸ್ತುಗಳಲ್ಲಿ ಕಂಡು ಬರುವ ಅದ್ವಿತೀಯತೆ. ಉದಾಹರಣೆಗೆ ಭೂಮಿಯ ಮೇಲೆ ಲಭ್ಯವಿರುವ ಒಂದು ಪರಮಾಣು ಇದೇ ಭೂಮಿಯ ಮತ್ತೊಂದು ಪರಮಾಣುವಿಗಿಂತ ವಿಭಿನ್ನವಾಗಿರುತ್ತದೆ. ಇವುಗಳಲ್ಲಿರುವ ಏನೋ ಒಂದು ಪ್ರತಿಯೊಂದನ್ನೂ ಒಂದರಿಂದ ಮತ್ತೊಂದನ್ನು ವ್ಯತ್ಯಾಸಗೊಳಿಸುತ್ತದೆ; ಅದನ್ನೇ 'ವಿಶೇಷ' ಎನ್ನುವುದು.
'ಸಮವಾಯ' ಅಥವಾ ಅಂತರ್ಗತತ್ವವು ವೈಶೇಷಿಕ ಸಿದ್ಧಾಂತದ ವಿಶೇಷ ಕೊಡುಗೆ ಇರಬಹುದದೆಂದು ಕಾಣುತ್ತದೆ. ಎರಡು ವಸ್ತುಗಳ ನಡುವೆ ಸಂಯೋಗ ಅಥವಾ ಜೋಡಣೆಯನ್ನು ಇಷ್ಟ ಬಂದಾಗ ಮಾಡಬಹುದು ಮತ್ತು ಅದೇ ರೀತಿ ವಿಯೋಗ ಅಥವಾ ಬೇರ್ಪಡಿಸುವಿಕೆಯನ್ನು ಕೂಡ. ಎರಡು ವಸ್ತುಗಳ ನಡುವಿನ ಈ ವಿಧವಾದ ಸಂಭಂದವು ತಾತ್ಕಾಲಿಕ. ಆದರೆ 'ಸಮವಾಯ'ವು ಪ್ರತಿಪಾದಿಸುವ ಸಂಭಂದವು ಅಂತರ್ಗತವಾದದ್ದು (ಪ್ರತ್ಯೇಕಿಸಲಾಗದ್ದು) ಆದ್ದರಿಂದ ಇದನ್ನು 'ಅಯುತಸಿದ್ಧ' ಅಥವಾ ಜೋಡಣೆಯಲ್ಲದ ಸಂಭಂದವೆಂದು ಕರೆದಿದ್ದಾರೆ. ಅದು ನಿತ್ಯ ಮತ್ತು ಸರ್ವಕಾಲಿಕ. ಒಂದು ಪೂರ್ಣ ವಸ್ತು ಮತ್ತದರ ಭಾಗಗಳೊಂದಿಗಿನ ಸಂಭಂದವು 'ಸಮವಾಯ' ಅಥವಾ ಅಂತರ್ಗತತ್ವತೆ. ದಾರದ ಎಳೆಗಳೊಂದಿಗೆ ಬಟ್ಟೆಯ ಸಂಭಂದ; ಕೆಂಪುತನದೊಂದಿಗೆ ಕೆಂಪು ವಸ್ತು(ಉದಾ: ಕೆಂಪು ಗುಲಾಬಿ)ವಿನ ಸಂಭಂದ; ಚಲಿಸುವ ವಸ್ತುವಿನಲ್ಲಿರುವ ಚಲನೆಯ ಸಂಭಂದ (ಉದಾ: ಚಲಿಸುವ ಚಂಡು) ಇವುಗಳನ್ನು ಸಮವಾಯಕ್ಕೆ ಉದಾಹರಣೆಗಳಾಗಿ ಕೊಡಬಹುದು. ಸಮವಾಯದಲ್ಲಿ ಪ್ರಸ್ತಾಪಿಸಿರುವ ಸಂಭಂದಗಳು ಮಾರ್ಪಾಟಿಗೆ ಒಳಪಡದೇ ಇರುವಂತವುಗಳು ಅಂದರೆ ಬದಲಾವಣೆಗೆ ಅತೀತವಾಗಿರುವಂತಹವು.
'ಅಭಾವ' ಅಥವಾ 'ಇಲ್ಲದಿರುವಿಕೆ' (ಏಳು ಪದಾರ್ಥಗಳಲ್ಲಿನ ಕೊನೆಯದು) ಮಾತ್ರವೇ ಋಣಾತ್ಮಕ ವರ್ಗಕ್ಕೆ ಸೇರಿದ್ದು. ಅದನ್ನು ಕೂಡ ವೈಶೇಷಿಕ ಪದ್ಧತಿಯಲ್ಲಿ ವಾಸ್ತವವೆಂದು ತಿಳಿಯಲಾಗುತ್ತದೆ. ರಾತ್ರಿಯ ಹೊತ್ತಿನಲ್ಲಿ ನಾವು ಆಕಾಶವನ್ನು ನೋಡಿದಾಗ ಅಲ್ಲಿ ಸೂರ್ಯನು ಗೋಚರಿಸದೇ ಇರುವುದನ್ನು ಗಮನಿಸುತ್ತೇವೆ; ಚಂದ್ರ ಹಾಗೂ ಇತರ ತಾರೆಗಳನ್ನು ನಾವು ನೋಡಿದರೂ ಕೂಡ. (ಇಲ್ಲಿ ಸೂರ್ಯನ ಅಭಾವವು-ಇಲ್ಲದಿರುವಿಕೆಯು ವಾಸ್ತವ). ಸ್ಥೂಲವಾಗಿ ಹೇಳಬೇಕೆಂದರೆ ಅಭಾವವು ಎರಡು ವಿಧವಾದದ್ದು, ಸಂಸರ್ಗಾಭಾವ ಮತ್ತು ಅನ್ಯೋನ್ಯಾಭಾವ. ಮೊದಲನೆಯದಾದ ಸಂಸರ್ಗಾಭಾವವು "ಒಂದರಲ್ಲಿ ಮತ್ತೊಂದರ ಇಲ್ಲದಿರುವಿಕೆ"ಯನ್ನು ಪ್ರತಿಪಾದಿಸುತ್ತದೆ. ಉದಾಹರಣೆಗೆ - ಮೇಜಿನ ಮೇಲೆ ಮಡಕೆಯು ಇಲ್ಲದಿರುವುದು. ಇನ್ನೊಂದು ಭಾವವಾದ ಅನ್ಯೋನ್ಯಾಭಾವವು ಒಂದು ವಸ್ತುವು ಇನ್ನೊಂದು ವಸ್ತುವಲ್ಲ ಎಂದು ತಿಳಿಸುತ್ತದೆ; ಉದಾಹರಣೆಗೆ - ಒಂದು ಕುದುರೆಯು ಎಮ್ಮೆಯೊಳಗೆ ದೊರೆಕದು(ಸಿಗದು).
ಸಂಸರ್ಗಾಭಾವವು ಮೂರು ವಿಧಾನದ್ದಾಗಿರುತ್ತದೆ, ಅವುಗಳೆಂದರೆ:
1) ಪ್ರಾಗಾಭಾವ (ಪೂರ್ವದಲ್ಲಿ ಇಲ್ಲದಿರುವಿಕೆ); 2) ಪ್ರಧ್ವಂಸಾಭಾವ ಅಥವಾ ಧ್ವಂಸಾಭಾವ (ಹಾಳಾದ ನಂತರ ಇಲ್ಲದಿರುವಿಕೆ); ಮತ್ತು 3) ಅತ್ಯಂತ್ಯಾಭಾವ (ಅಪ್ಪಟವಾಗಿ ಇಲ್ಲದಿರುವಿಕೆ ಅಥವಾ ಸಂಪೂರ್ಣವಾಗಿ ಯಾವಾಗಲೂ ಇಲ್ಲದಿರುವಿಕೆ).ಕಟ್ಟುವ ಮುನ್ನ ಇಟ್ಟಿಗೆಗಳಲ್ಲಿ ಮನೆಯು ಇಲ್ಲದಿರುವಿಕೆಯನ್ನು ಪ್ರಾಗಾಭಾವಕ್ಕೆ ಉದಾಹರಣೆಯಾಗಿ ಕೊಡಬಹುದು. ಒಂದು ಮಣ್ಣಿನ ಮಡಕೆಯು ಒಡೆದು ಹೋದ ನಂತರ ಅದರಲ್ಲಿ ಮಡಕೆಯು ಇಲ್ಲದಿರುವಿಕೆಯು ಪ್ರಧ್ವಂಸಾಭಾವಕ್ಕೆ ಉದಾಹರಣೆಯಾಗುತ್ತದೆ. ಗಾಳಿಯು "ಬಣ್ಣ ಅಥವಾ ಆಕಾರ" ರಹಿತವಾಗಿರುವುದು ಅತ್ಯಂತ್ಯಾಭಾವಕ್ಕೆ ಉದಾಹರಣೆ.
ದೇವರು ಮತ್ತು ಪ್ರಪಂಚ
ವೈಶೇಷಿಕ ದರ್ಶನವು ದೇವರು ಅಂದರೆ ಈಶ್ವರ ಅಥವಾ ಪರಮೇಶ್ವರ ಇವನ ಇರುವಿಕೆಯನ್ನು ಒಪ್ಪಿಕೊಳ್ಳುತ್ತದೆ. ಈ ಭಗವಂತನು ಅತ್ಯಂತ ಮೇಧಾವಿಯಾದ ಜೀವಿಯಾಗಿದ್ದು ಅವನ ಇಚ್ಛೆ ಮತ್ತು ಮಾರ್ಗದರ್ಶನದಲ್ಲಿ ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯ(ರಚನೆ-ನಿರ್ವಹಣೆ-ವಿನಾಶ)ಗಳು ಏರ್ಪಡುತ್ತವೆ.
ಈ ಪ್ರಪಂಚವು ಭೌತಿಕ ಮತ್ತು ಜೈವಿಕ ವಸ್ತುಗಳ ವ್ಯವಸ್ಥೆಯಾಗಿದ್ದು ಅವುಗಳು ಒಂದರೊಂದಿಗೆ ಮತ್ತೊಂದು ಪರಸ್ಪರ ಸಹಯೋಗವನ್ನು ಹೊಂದಿವೆ. ವಾಸ್ತವವಾಗಿ ಪ್ರಪಂಚವನ್ನು ಮುನ್ನಡೆಸುವ ನೀತಿಸೂತ್ರ ಯಾವುದೆಂದರೆ ವಿಶ್ವವ್ಯಾಪಿಯಾದ ಕರ್ಮ ನಿಯಮ - ಇದರಿಂದ ಎಲ್ಲ ಆತ್ಮಗಳ(ಜೀವರುಗಳ) ಜೀವನ ಮತ್ತು ಗುರಿಗಳು ನಿರ್ದೇಶಿಸಿಲ್ಪಟ್ಟಿದೆ.
ಸೃಷ್ಟಿಕ್ರಿಯೆಯ ಪ್ರಾರಂಭ (ಅದನ್ನನುಸರಿಸಿ ಅದರ ನಿರ್ವಹಣೆ ಮತ್ತು ವಿನಾಶ, ಇವು ಮೂರು ನಿರಂತರವಾಗಿ ಆವರ್ತನಗೊಳ್ಳುತ್ತವೆ) ಇದು ಭಗವಂತನ ಇಚ್ಛೆಗನುಗುಣವಾಗಿ ನಡೆಯುತ್ತದೆ. ಅವನ ಇಚ್ಛೆಯಿಂದ ಉತ್ಪನ್ನಗೊಂಡ ಮೊದಲ ವಸ್ತು 'ಜಗತ್ತಿನ ಆತ್ಮ' - ಬ್ರಹ್ಮ. ಭಗವಂತನ ಕೃಪೆಯಿಂದ ಅವನು ಆರು ಸದ್ಗುಣಗಳಾದ ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ ಮೊದಲಾದವುಗಳ ಗಣಿಯಾಗಿದ್ದಾನೆ. ಈ ಬ್ರಹ್ಮನು ಸೃಷ್ಟಿಯ ಪ್ರಧಾನ ಶಿಲ್ಪಿ; ಅವನು ಸಂಪೂರ್ಣವಾಗಿ ವಿವಿಧ ಆತ್ಮಗಳ ಅದೃಷ್ಟ (ಅಗೋಚರವಾದ ಒಳಿತು ಮತ್ತು ಕೆಡಕುಗಳು)ಗಳಿಗೆ ಅನುಗುಣವಾಗಿ ಮತ್ತು ವಿವಿಧ ರೀತಿಯ ಪರಮಾಣುಗಳು ಅಥವಾ ಅಣುಗಳನ್ನು ಒಂದಕ್ಕೊಂದು ಜೋಡಣೆಗೊಳಿಸಿ ಅಂತಿಮವಾಗಿ ಈ ವಿಶ್ವವನ್ನು ಸೃಜಿಸಿದ್ದಾನೆ.
ಅಂತ್ಯದ ಪ್ರಕ್ರಿಯೆಯು ಸೃಷ್ಟಿಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಬ್ರಹ್ಮನು ತನ್ನ ದೇಹವನ್ನು ಪರಿತ್ಯಜಿಸುತ್ತಾನೆ, ತದನಂತರ ಮಹೇಶ್ವರನು ಸೃಷ್ಟಿಯನ್ನು ಅಂತಿಮಗೊಳಿಸಲು ಇಚ್ಛಿಸಿ ಪ್ರಳಯ ಅಥವಾ ವಿನಾಶವನ್ನು ಉಂಟುಮಾಡುತ್ತಾನೆ. ಆಗ ಇಡೀ ಪ್ರಪಂಚವು ತನ್ನ ಮೂಲ ಸ್ವರೂಪವಾದ ಏಳು ಪದಾರ್ಥಗಳ ಸ್ಥಿತಿಗೆ ಹಿಂತಿರುಗುತ್ತದೆ.
ಉಪಸಂಹಾರ
ನ್ಯಾಯ ಪದ್ಧತಿಯಂತೆ ವೈಶೇಷಿಕ ದರ್ಶನವೂ ಕೂಡ ನೈಜ ತತ್ವವನ್ನು ಒಳಗೊಂಡು ಅನೇಕತೆ ಮತ್ತು ಆಸ್ತಿಕತೆಯನ್ನು ಪ್ರತಿಪಾದಿಸುತ್ತದೆ. ಸೃಷ್ಟಿಯು ಅವಾಂಛಿತವಾದುದ್ದಲ್ಲ ಅದು ಭಗವಂತನ ಇಚ್ಛೆಯಂತೆಯೇ ಕ್ರಮಬದ್ಧವಾಗಿ; ಜೀವಾತ್ಮರ ಕರ್ಮಕ್ಕನುಗುಣವಾಗಿ ಅವುಗಳು ಅಂತಿಮ ನೈತಿಕ ಪರಿಪೂರ್ಣತೆಯನ್ನು ಪಡೆಯುವ ದಿಕ್ಕಿನಲ್ಲಿ ಸಾಗುತ್ತದೆ.
ಅಣು ಸಿದ್ಧಾಂತವನ್ನು ನೈತಿಕ ಹಾಗು ಆಧ್ಯಾತ್ಮಿಕತೆಗಳೊಂದಿಗೆ ಸಮನ್ವಯಗೊಳಿಸಿದ್ದಲ್ಲದೆ, ಭಗವಂತನನ್ನು ಸೃಷ್ಟಿಕರ್ತ ಮತ್ತು ಜಗನ್ನಿಯಾಮಕನೆಂದು ಒಪ್ಪಿಕೊಂಡು ವೈಶೇಷಿಕ ದರ್ಶನವು ಭಾರತೀಯ ತತ್ವಶಾಸ್ತ್ರಗಳಲ್ಲಿ ಅತ್ಯುನ್ನತವೆಂದು ಪರಿಗಣಿಸಲ್ಪಟ್ಟಿರುವ ವೇದಾಂತ ದರ್ಶನಕ್ಕೆ ಅತೀ ಸಮೀಪದಲ್ಲಿ ಬಂದು ನಿಂತಿತು.
=================================================================================================
ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Vaiseshika Darshanaನದ ೨೬ ರಿಂದ ೩೦ನೆಯ ಪುಟದ ಅನುವಾದದ ಭಾಗ.
"ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B5%E0%B3%88%E0%B2%B6%E0%B3%87%E0%B2%B7%E0%B2%BF%E0%B2%95-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AA-%E0%B3%A7/05/04/2012/36256
ಚಿತ್ರಕೃಪೆ: ಗೂಗಲ್
Comments
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by mmshaik
ಉ: "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...