' ರಾಮನ ಸೈಕಲ್ ಸವಾರಿ ' ( ಕಥೆ ) ಭಾಗ 1

' ರಾಮನ ಸೈಕಲ್ ಸವಾರಿ ' ( ಕಥೆ ) ಭಾಗ 1

 



                             


     ' ಅಮ್ಮ ನಾಳೆ ಶಾಲೆಗೆ ರಜ ' ಎಂದು ಹೇಳುತ್ತ ಬಂದ ರವಿ ತನ್ನ ಸ್ಕೂಲ್ ಬ್ಯಾಗ್ , ವಾಟರ್ ಬ್ಯಾಗ್ ಮತ್ತು ತಿಂಡಿಯ ಬಾಕ್ಸ್ಅನ್ನು ಸೋಫಾದ ಮೇಲೆ ಎಸೆದು ಬೂಟು ಮತ್ತು ಸಾಕ್ಸ್ಗಳನ್ನು ಕಳಚಿ ಸೋಫಾದ ಕೆಳಗೆ ತಳ್ಳಿದ, ಸ್ಕೂಲ್ ಸಮವಸ್ತ್ರ ಬಿಚ್ಚಿ ಎಸೆದು ಬೇರೆ ಬಟ್ಟೆಯನ್ನು ಧರಿಸಿದ.


     ' ಹತ್ತು ವರ್ಷದ ಧಡಿಯ ಆಗಿರುವೆ, ಸರಿಯಾಗಿ ಸ್ಕೂಲ್ ಬ್ಯಾಗ್ ಬಟ್ಟೆ ಬೂಟುಗಳನ್ನು ಇಟ್ಟು ಕೊಳ್ಳಲು ಆಗುವುದಿಲ್ಲವೇನೊ ? ನಿನ್ನ ಓರಿಗೆಯ ಪ್ರಶಾಂತನನ್ನು ನೋಡು ' ಎಂದು ರವಿಯ ತಾಯಿ ವೈದೇಹಿ ಮಗನನ್ನು ಗದರಿದಳು.


     ' ಅಮ್ಮ ನಾಳೆ ಶಾಲೆಗೆ ರಜ ' ಎಂದು ರವಿ ತನ್ನ ಅಮ್ಮನನ್ನು ಉದ್ದೇಶಿಸಿ ಹೇಳಿದ. ಕುತೂಹಲ ಭರಿತಳಾದ ವೈದೇಹಿ ಮಗ ರವಿಯನ್ನುದ್ದೇಶಿಸಿ ' ಯಾಕೊ ನಾಳೆ ನಿಮ್ಮ ಶಾಲೆಗೆ ರಜೆ ' ? ಎಂದು ಪ್ರಶ್ನಿಸಿದಳು.


     ' ನಾಳೆ ಟೀಚರ್ಸ ಮೀಟಿಂಗ್ ಇದೆ ಅದಕ್ಕೆ ಶಾಲೆಗೆ ರಜೆಯಂತೆ ' ಎಂದವನೆ ತನ್ನ ಕೈಕಾಲು ಮುಖ ತೊಳೆಯಲು ಬಚ್ಚಲು ಮನೆಯ ಕಡೆಗೆ ನಡೆದ.


     ' ನಿಮ್ಮ ಶಾಲೆಗೆ ಎಷ್ಟು ದಿನ ರಜೆಯೋ ಹೋದ ವಾರ ಸಹ ರಜೆ ಇತ್ತಲ್ಲ ' ಎಂದು ವೈದೇಹಿ ಮಗ ರವಿಯನ್ನು ಮರು ಪ್ರಶ್ನಿಸಿದಳು. 


     ಅಮ್ಮನ ಪ್ರಶ್ನೆಗೆ ಸಿಟ್ಟುಗೊಂಡ ರವಿ ' ನನಗೆ ಗೊತ್ತಿಲ್ಲಮ್ಮ , ಹೊಟ್ಟೆ ಹಸಿದಿದೆ ನನಗೆ ತಿಂಡಿ ಕೊಡು ' ಎಂದು ತನ್ನ ಅಸಹನೆ ವ್ಯಕ್ತ ಪಡಿಸಿದ.


      ಅದಕ್ಕೆ ವೈದೇಹಿ ' ಈಗ ಯಾಕೊ ತಿಂಡಿ ? ಊಟ ಬಡಿಸುತ್ತೇನೆ, ಊಟ ಮಾಡಿ ಹೋಮ್ ವರ್ಕ ಮಾಡು ' ಎಂದಳು.


     ' ಅಮ್ಮ ನನಗೆ ಊಟ ಬೇಡ ತಿಂಡಿ ಕೋಡು, ಸತೀಶ ಸೈಕಲ್ ತರುವುದಾಗಿ ಹೇಳಿದ್ದಾನೆ, ನಾನು ಸೈಕಲ್ ಕಲಿಯಲು ಹೋಗಬೇಕು ' ಎಂದು ಮಾರ್ನುಡಿದ.


     ' ಸೈಕಲ್ ಬೇಡ ಏನೂ ಬೇಡ ಸುಮ್ಮನೆ ಊಟ ಮುಗಿಸಿ ಹೋಮ್ ವರ್ಕ ಮಾಡು ' ಎಂದು ವೈದೇಹಿ ಮಗನಿಗೆ ಕಟ್ಟಾಜ್ಞೆ ಮಾಡಿದಳು.


     ' ಇಲ್ಲಮ್ಮ ನಾನು ನಳೆ ಹೋಮ್ ವರ್ಕ ಮಾಡುತ್ತೇನೆ, ನಮ್ಮ ಕ್ಲಾಸಿನಲ್ಲಿ ಎಲ್ಲರೂ ಸೈಕಲ್ ಕಲಿತಿದ್ದಾರೆ, ನಾನೂ ಕಲಿಯ ಬೇಕು ಎಂದು ' ಎಂದು ರವಿ ಹಟ ಮಾಡಿದ.


     ರವಿಯ ಅಜ್ಜಿ ಸಾವಿತ್ರಮ್ಮ ಮೊಮ್ಮಗ ರವಿಯ ಪರವಹಿಸಿ ' ಹೋಗಲಿ ಬಿಡು ವೈದೇಹಿ ನಾಳೆ ಹೋಮ್ ವರ್ಕ ಮಾಡುತ್ತಾನೆ ಈಗ ಸೈಕಲ್ ಕಲಿಯಲು ಹೋಗಲಿ ಬಿಡು ' ಎಂದಳು.


     ರವಿ ಬೇಗ ಬೇಗ ಊಟದ ಶಾಸ್ತ್ರ ಮುಗಿಸಿ ' ಅಮ್ಮ ನನಗೆ ಸೈಕಲ್ ಭಾಡಿಗೆ ತರಲು ಹಣ ಬೇಕು ಎಂಟಾಣೆ
ಯನ್ನು ಕೊಡು ' ಎಂದು ಕೇಳಿದ. ಅದಕ್ಕೆ ವೈದೇಹಿ ' ನನ್ನ ಹತ್ತಿರ ದುಡ್ಡಿಲ್ಲ ' ಎಂದಳು. ರವಿ ಅಳು ಮೋರೆ ಮಾಡಿದ. ಅದನ್ನು ಗಮನಿಸಿದ ಅಜ್ಜಿ ಸಾವಿತ್ರಮ್ಮ ರವಿಯನ್ನು ಕರೆದು ' ನಿನ್ನ ಅಜ್ಜನ ಹತ್ತಿರ ಹಣ ಇಸಿದುಕೋ ' ಎಂದಳು,.


     ಉತ್ಸಾಹ ಭರಿತನಾದ ರವಿ ಅಜ್ಜನ ಬಳಿಗೋಡಿ ' ಅಜ್ಜ ನಾನು ಸೈಕಲ್ ಹೊಡೆಯಲು ಕಲಿಯಬೇಕು, ಸೈಕಲ್ ಭಾಡಿಗೆಗೆ ತರಲು ಎಂಟಾಣೆಯನ್ನು ಕೊಡು, ಅಜ್ಜಿ ಹೇಳಿದ್ದಾಳೆ ' ಎಂದು ವರದಿಯನ್ನೊಪ್ಪಿಸಿದ.


     ಅಜ್ಜ ರಾಮಯ್ಯ ' ಎಂಟಾಣೆಯ ನಾಣ್ಯವೊಂದನ್ನು ರವಿಯ ಕೈಗಿಟ್ಟು, ಜೋಪಾನ ಎಚ್ಚರಿಕೆಯಿಂದ ಸೈಕಲ್ ಕಲಿ ' ಎಂದು ಹೇಳಿದರು. ಅಜ್ಜನ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನವಿಲ್ಲದ ರವಿ ಆಗಲೆ ಮನೆಯ ಮುಂದಿನ ಗೇಟು ತೆಗೆದು ಹೊರಗೆ ಓಡಿಯಾಗಿತ್ತು.


                                                                    *


     ಮೊಮ್ಮಗನ ಓಟವನ್ನೆ ಗಮನಿಸುತ್ತಿದ್ದ ಅವರಿಗೆ ತಮ್ಮ ಬಾಲ್ಯಾವಸ್ಥೆ ನೆನಪಿಗೆ ಬಂದು, ಅವರ ನೆನಪಿನ ಸುರುಳಿ ಬಿಚ್ಚಿಕೊಂಡು ಬಾಲ್ಯಾವಸ್ಥೆಗೆ ಜಾರಿತು. ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು, ಈಗಿನ ರಾಮಯ್ಯ ಬರಿ ರಾಮ ನಾಗಿದ್ದ ದಿನಗಳವು. ರಾಮ ಸಹ ಆಗ ಹತ್ತು ವರ್ಷದ ಹುಡುಗ, ಅವನ ಮನೆಯಿದ್ದುದು ಸುರಗಿಹಳ್ಳಿಯ ಕಲ್ಮೇಶ್ವರ ಬೀದಿಯಲ್ಲಿ. ಆಗ ರಾಮ ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ. ಆತನ ಸಹಪಾಠಿಗಳಾದ ಪ್ರಕಾಶ, ಸುಭಾಷ, ಹುಸೇನಿ ಎಲ್ಲರೂ ಸೈಕಲ್ ಕಲಿತಿದ್ದು ಅವರು ತಮ್ಮ ಸೈಕಲ್ ಸವಾರಿಯ ಯಶೋಗಾಥೆಯನ್ನು ವರ್ಣರಂಜಿತವಾಗಿ ಹೇಳುತ್ತಿದ್ದರು. ಅದನ್ನು ಕೇಳುತ್ತಿದ್ಚ ರಾಮನಿಗೆ ತಾನೂ ಸಹ ಸೈಕಲ್ ಸವಾರಿ ಕಲಿಯಬೇಕು ಎಂಬ ಆಶೆ ಮೊಳೆ ಯಿತು, ಆದರೆ ಸೈಕಲ್ ಕಲಿಸುವಂತಹ ದೊಡ್ಡವರು ಮನೆಯಲ್ಲಿ ಯಾರೂ ಇರಲಿಲ್ಲ, ಯಾರಲ್ಲಿ ಸೈಕಲ್ ಕಲಿಸು ಎಂದು ಕೇಳುವುದು, ರಾಮ ತನ್ನ ಆಶೆಯನ್ನು ತನ್ನ ಮನದಲ್ಲಿಯೇ ಅದುಮಿಟ್ಟು ಕೊಳ್ಳಬೇಕಾದಂತಹ ಪರಿಸ್ಥಿತಿ. ಹೀಗಾಗಿ ರಾಮನಿಗೆ ಯಾವುದರಲ್ಲಿಯೂ ಮನಸಾಗದು. ಓದುವದರಲ್ಲಿ ಆಟಗಳಲ್ಲಿ ಮನೆಯಲ್ಲಿ ಮತ್ತು ಸ್ನೇಹಿತರ ಒಡನಾಟದಲ್ಲಿ ಅನ್ಯಮನಸ್ಕತೆ ಆತನಲ್ಲಿ ಎದ್ದು ಕಾಣುತ್ತಿತ್ತು. ಓದಿನಲ್ಲಿಯ ಉದಾಸೀನತೆಯಿಂದಾಗಿ ಶಾಲೆಯಲ್ಲಿ ಗುರುಗಳಿಂದ, ಮನೆಯಲ್ಲಿ ತಂದೆ ಭೀಮಯ್ಯನವರಿಂದ ಗದರಿಕೆ ಕೇಳ ಬೇಕಾದ ಪರಿಸ್ಥಿತಿಗಳು ಬಂದೊದಗಿದವು. ರಾಮನ ಮನೆ ಹಳವೂರಿನಲ್ಲಿದ್ದರೆ ಶಾಲೆ ಪೇಟೆಯಲ್ಲಿತ್ತು. ರಾಮ ಪ್ರತಿದಿನ ಶಾಲೆಗೆ ಕ್ರಮವಾಗಿ ಬಡಿಗೇರ ಓಣಿ, ಹನುಮಂತದೇವರ ಗುಡಿ ಓಣಿಗಳನ್ನು ದಾಟಿ ಡಾಂಬರ್ ರಸ್ತೆಯನ್ನು ಕ್ರಮಿಸಿ ಕುಡಿಯುವ ನೀರಿನ ಹೊಂಡದ ಪಕ್ಕದ ರಸ್ತೆಗುಂಟ ಹೋಗಿ ಮಸೀದಿ ಕೇರಿಯನ್ನು ದಾಟಿ ಶಾಲೆಗೆ ಹೋಗಬೇಕು.


     ರಾಮ ಪ್ರತಿದಿನ ಶಾಲೆಗೆ ಹೋಗುವಾಗ ಆತನ ಜೊತೆಗೆ ಆತನ ಸಹಪಾಠಿ ಮೋಹನ ಜೊತೆಯಾಗುತ್ತಿದ್ದ. ಇಬ್ಬರೂ ಹಳವೂರಿನವರಾಗಿದ್ದು ಉತ್ತಮ ಸ್ನೇಹ ಬಾಂಧವ್ಯ ಅವರಲ್ಲಿತ್ತು. ರಾಮನಂತಗೆ ಮೋಹನನೂ ಸಹ ಸೈಕಲ್ ಸವಾರಿ ಕಲಿಯುವ ಆದಮ್ಯ ಉತ್ಸಾಹ ಹೊಂದಿದ್ದು, ಅವನಿಗೂ ಸಹ ಮನೆಯಲ್ಲಿ ಸೈಕಲ್ ಕಲಿಸುವವರು ಯಾರೂ ಇರಲಿಲ್ಲ. ಅವನದೂ ಸಹ ರಾಮನಂತೆ ಒದ್ದಾಟದ ಸ್ಥಿತಿಯಾಗಿತ್ತು. ಅವರಿಬ್ಬರೂ ಹೊಂಡದ ಕೇರಿಯ ರಸ್ತೆಯ ಬದಿಯಲ್ಲಿದ್ದ ರಫಿಕ್ನ ಸೈಕಲ್ ಶಾಪ್ ಮುಂದೆ ಹಾದು ಹೋಗುವಾಗ ಅಲ್ಲಿ ನಿಲ್ಲಿಸಿರುತ್ತಿದ್ದ ಸೈಕಲ್ಗಳು ಅವರ ಗಮನ ಸೆಳೆಯುತ್ತಿದ್ದವು. ರಫಿಕ್ ಆಗಷ್ಟೆ ಒಂದು ಹೊಸ ಕೆಂಪು ಬಣ್ಣದ ಸಣ್ಣ ಸೈಕಲ್ನ್ನು ತಂದಿದ್ದು, ಅದನ್ನು ದಿನವೂ ನೋಡುತ್ತಿದ್ದ ಅವರಿಗೆ ಎಂದಾದರೊಂದು ದಿನ ಆ ಸೈಕಲ್ ಸವಾರಿ ಮಾಡಸ ಬೇಕೆಂಬ ಆಶೆ ದಿನದಿಂದ ದಿನಕ್ಕೆ ಹೆಮ್ಮರವಾಗ ತೊಡಗಿತು.


     ನವರಾತ್ರಿಯ ಹಬ್ಬದ ರಜೆಯಲ್ಲಿ ಒಂದು ದಿನ ಅವರ ಸಹಪಾಠಿ ಬಸವ ಬಸ್ ಸ್ಟ್ಯಾಂಡಿನಲ್ಲಿ ರಫಿಕ್ನು ಹೊಸದಾಗಿ ತಂದಿದ್ದ ಕೆಂಪು ಬಣ್ಣದ ಸೈಕಲ್ಅನ್ನು ಸವಾರಿ ಮಾಡುತ್ತ ನಾಕಾದ ಕಡೆಗೆ ಹೋದ. ರಾಮ ಬೆರಗು ಗಣ್ಣುಗಳಿಂದ ಬಸವನ ಸೈಕಲ್ ಸವಾರಿಯನ್ನು ದಿಟ್ಟಿಸುತ್ತ ನಿಂತ. ಇದನ್ನು ತನ್ನ ಕಿರುಗಣ್ಣಿನ ನೋಟದಿಂದ ಗಮನಿಸಿದ ಬಸವ ಇನ್ನಷ್ಟು ಗತ್ತಿನಿಂದ ಸೈಕಲ್ ಮೇಲೆ ಸೆಟೆದು ಕುಳಿತು ಒಂದೇ ಕೈಯಲ್ಲಿ ಸೈಕಲ್ ಹ್ಯಾಂಡಲ್ ಹಿಡಿದು ಸೈಕಲ್ ಚಲಾಯಿಸುವುದು, ಎರಡೂ ಕೈಗಳನ್ನು ಮಧ್ಯ ಮಧ್ಯ ಬಿಟ್ಟು ಸೈಕಲ್ ಓಡಿಸುವುದು ಇತ್ಯಾದಿ ಯಾಗಿ ಕಸರತ್ತು ಮಾಡಿದ. ರಾಮನ ಬೆರಗಿನ ನೋಟವನ್ನು ಗಮನಿಸಿದ ಬಸವ ಆತನನ್ನು ಇನ್ನಷ್ಟು ಬೆರಗು ಗೊಳಿಸಲು ಎರಡೂ ಕೈಗಳನ್ನು ಬಿಟ್ಟು ಜೋರಾಗಿ ಸೈಕಲ್ ಪೆಡಲ್ಗಳನ್ನು ತುಳಿದ, ಪರಿಣಾಮವಾಗಿ ನಾಕಾದ ರಸ್ತೆಯ ಬಲಬದಿಯ ಚರಂಡಿಗೆ ಬಿದ್ದ. ಇದನ್ನು ಕಂಡ ರಾಮ ಕಿಸಕ್ಕನೆ ನಕ್ಕ. ಕಡೆಗಣ್ಣಿನಿಂದ ಇದನ್ನು ನೋಡಿದ ಬಸವನಿಗೆ ಅವಮಾನ ವಾದಂತಾಯಿತು. ಆದರೂ ಅದನ್ನ ತೋರಗೊಡದೆ ತನಗೆ ಏನೂ ಆಗಿಲ್ಲ ವೆಂಬಂತೆ ನಟಿಸುತ್ತ ಸೈಕಲ್ ಮಡ್ಗಾರ್ಡ ಮೇಲೆ ಕುಳಿತು ಸೈಕಲ್ ಹ್ಯಾಂಡಲ್ಅನ್ನು ಹಿಡಿದು ಆ ಕಡೆ ಮತ್ತು ಈ ಕಡೆ ತಿರುಗಿಸಿದಂತೆ ಮಾಡಿ ಮತ್ತೆ ಸೈಕಲ್ ಸವಾರಿ ಪ್ರಾರಂಭಿಸಿದ. ಓದುವುದರಲ್ಲಿ ಹಿಂದೆ ಇದ್ದು ಶಾಲೆಯಲ್ಲಿ ಗುರುಗಳಿಂದ ತನ್ನ ಸಹಪಾಠಿಗಳ ಎದುರು ಅವಮಾನಿತ ನಾಗುತ್ತಿದ್ದ ಬಸವನಿಗೆ ತಾನು ಇದರಲ್ಲಿಯಾದರೂ ಮುಂದು ಮತ್ತು ಪರಿಣಿತ ಎನ್ನುವುದನ್ನು ತೋರಿಸ ಬೇಕಿತ್ತು, ಆ ಕಾರಣದಿಂದ ಇನ್ನೂ ಉತ್ಸಾಹದಿಂದ ತನ್ನೆಲ್ಲ ಸೈಕಲ್ ಸವಾರಿಯ ವರಸೆಗಳನ್ನು ತೋರಿಸಿದ,


     ರಾಮನ ಸಹಪಾಠಿಯಾಗಿದ್ದ ಬಸವ ತರಗತಿಯ ಎಲ್ಲ ಹುಡುಗರಿಗಿಂತ ಆಕಾರದಲ್ಲಿ ಸ್ವಲ್ಪ ದೊಡ್ಡವನಾಗಿದ್ದು, ಆತನಿಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿಯಿರದ ಕಾರಣ ಪದೆ ಪದೆ ಗುರುಗಳ ಬೈಗುಳಗಳಿಗೆ ಮತ್ತು ದಂಡನೆಗೆ ಗುರಿ ಯಾಗುತ್ತಿದ್ದ, ಆತನ ಮನೆಯಲ್ಲಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡದೆ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲ ಸಹಪಾಠಿಗಳಿಗಿಂತ ತಾನು ಭಿನ್ನ ಮತ್ತು ಪ್ರಯೋಜನಕಾರಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದ. ತನ್ನ ಸಹಪಾಠಿಗಳ ಪೈಕಿ ದುರ್ಬಲರನ್ನು ವಿನಾಕಾರಣ ಹಿಂಸಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ. ಒಂದು ಸಲ ಶಾಲೆಗೆ ಬರುತ್ತಿದ್ದ ಕುಮಾರನಿಗೆ ಚುರ್ಚಿ ಸೊಪ್ಪಿನಿಂದ ಹೊಡೆದು ಬಹಳ ಹಿಂಸಿಸಿದ್ದ. ಈ ವಿಷಯ ತಿಳಿದ ಕುಮಾರನ ತಂದೆ ಪರಸಪ್ಪ ಗೂಳಪ್ಪ ಮಾಸ್ತರರಿಗೆ ವಿಷಯ ತಿಳಿಸಿದಾಗ, ಅವರು ಬಸವನಿಗೆ ರೂಲು ದೊಣ್ಣೆಯಿಂದ ಹೊಡೆದು ಬಗ್ಗಿ ಕಿವಿ ಹಿಡಿದುಕೊಂಡು ನಿಲ್ಲುವ ಶಿಕ್ಷೆಯನ್ನು ನೀಡಿದ್ದರು. ಆತನ ಹಮ್ಮು ಬಿಮ್ಮುಗಳೆಲ್ಲ ಕರಗಿ ಅಳಲು ಪ್ರಾರಂಭಿಸಿದಾಗ ಆತನ ತಲೆ ನೇವರಿಸಿ ಬುದ್ಧಿವಾದ ಹೇಳಿದ್ದರು. ಅಂದಿನಿಂದ ಬಸವ ತನ್ನ ಸಹಪಾಠಿಗಳನ್ನು ಪೀಡಿಸುವುದನ್ನು ನಿಲ್ಲಿಸಿದ್ದ. ಬಸವನ ಬಗ್ಗೆ ಯೋಚಿಸುತ್ತ ನಿಂತಿದ್ದ ರಾಮ ದೂರದಲ್ಲಿ ಮೋಹನ ಬರುತ್ತಿದ್ದುದನ್ನು ಗಮನಿಸಿದ. ಮೋಹನ ರಾಮನಿದ್ದಲ್ಲಿಗೆ ಬಂದ ನಂತರ ಅವರಿಬ್ಬರೂ ಸೇರಿ ಬಸವನನ್ನು ಅನುಸರಿಸಿ ನಾಕಾದ ಕಡೆಗೆ ಹೋದರು. ಇವರಿಬ್ಬರೂ ತನ್ನನ್ನು ಅನುಸರಿಸಿ ಬರುತ್ತಿದ್ದುದನ್ನು ಗಮನಿಸಿದ ಬಸವ ಇನ್ನಷ್ಟು ಆಢ್ಯತೆಯಿಂದ ಸೈಕಲ್ ಹೊಡೆಯುವುದು ಮತ್ತು ತಾನು ಕಲಿತ ಎಲ್ಲ ಕಸರತ್ತುಗಳನ್ನು ಸೈಕಲ್ ಮೇಲೆ ಪ್ರದರ್ಶಿಸಿದ.


     ಆಗ ರಾಮ ಬಸವನನ್ನುದ್ದೇಶಿಸಿ ' ಬಸವ ನಮಗೂ ಸ್ವಲ್ಪ ಸೈಕಲ್ ಕಲಿಸೋ ' ಎಂದ. ಅದಕ್ಕೆ ಬಸವ ರಾಮನಿಗೆ


     ' ಈ ಸೈಕಲ್ನ್ನು ರಫಿಕ್ನ ಸೈಕಲ್ ಶಾಪಿನಿಂದ ತಾಸಿಗೆ ಒಂದಾಣೆಯಂತೆ ಭಾಡಿಗೆಗೆ ತಂದಿದ್ದೇನೆ, ನೀವೂ ಹಣ ತನ್ನಿ ನಿಮಗೂ ಸೈಕಲ್ ಕಲಿಸುತ್ತೇನೆ ' ಎಂದ.


     ರಾಮ ಮತ್ತು ಮೋಹನರು ಬಸವ ತಮಗೂ ಸ್ವಲ್ಪ ಸೈಕಲ್ ಕೊಡ ಬಹುದು ಎಂದು ಆಸೆಗಣ್ಣುಗಳಿಂದ ನೋಡುತ್ತ ನಿಂತರು. ಸುಮಾರು ಅರ್ಧ ಗಂಟೆಯ ನಂತರ ಅವರಿಬ್ಬರ ಕಾಯುವಿಕೆಯನ್ನು ಕಂಡು ಕನಿಕರಗೊಂಡ ಬಸವ ರಾಮನನ್ನು ಕರೆದು ಸೈಕಲ್ ಮೇಲೆ ಹತ್ತಿಸಿ ಮೋಹನನ ಸಹಾಯದಿಂದ ಎರಡು ಸುತ್ತು ಸೈಕಲ್ ಸವಾರಿ ಮಾಡಿಸಿದ. ನಂತರ ರಾಮ ಬಸವ ಸೇರಿ ಮೋಹನನಿಗೂ ಎರಡು ಸುತ್ತು ಸೈಕಲ್ ಸವಾರಿ ಮಾಡಿಸಿದರು. ಅವರಿಗೆ ಖುಷಿಯಾಗಿತ್ತು. ತಮಗೂ ಸೈಕಲ್ ಹೊಡಯಲು ಬಂತು ಎಂದು ಹಿಗ್ಗಿದರು. ರಫಿಕ್ನ ಸೈಕಲ್ ಶಾಪ್ ವರೆಗೂ ಬಸವನನ್ನು ಅನುಸರಿಸಿ ಹೋದರು. ಬಸವ ಸೈಕಲ್ ಭಾಡಿಗೆ ಹಣ ಒಂದಾಣೆಯನ್ನು ರಫಿಕ್ನಿಗೆ ಕೊಟ್ಟು ಬಂದು ರಾಮ ಮೋಹನರನ್ನು ಉದ್ದೇಶಿಸಿ


     ' ಭಾನುವಾರ ರಜೆಯ ದಿನ ನೀವೂ ಹಣ ತೆಗೆದುಕೊಂಡು ಬನ್ನಿ, ನಿಮಗೆ ಸೈಕಲ್ ಕಲಿಸುತ್ತೇನೆ ' ಎಂದು ಹೇಳಿದ.


     ಆ ದಿನದಿಂದ ರಾಮ ಮೋಹನರಿಗೆ ಅದೇ ಚಿಂತೆಯಾಯಿತು. ಸೈಕಲ್ ಭಾಡಿಗೆಗೆಡ ಹಣವನ್ನು ಹೇಗೆ ಹೊಂದಿ ಸುವುದು ? ಮನೆಯಲ್ಲಿ ತಂದೆಯನ್ನು ಕೇಳಿದರೆ, ಹಣ ಸಿಗುವ ಸಾಧ್ಯತೆ ಬಹಳ ಕಡಿಮೆ, ಇನ್ನು ಅಜ್ಜಿಯನ್ನು ಕೇಳಿದರೆ ? ಆಕೆ ಕೊಡಬಹುದು ಆದರೆ ಆಕೆಯ ಹತ್ತಿರ ಹಣ ಎಲ್ಲಿಂದ ಬರಬೇಕು ? ಎಂಬ ಚಿಂತೆಯಲ್ಲಿಯೆ ರಾಮ ದಿನಗಳೆದ. ರಾಮನಿಗೆ ಮತ್ತೆ ಶಾಲೆ ಪಾಠ ಆಟೋಟಗಳಲ್ಲಿ ಆಸಕ್ತಿ ಕಡಿಮೆಯಾಯಿತು. ಊಟ ತಿಂಡಿಗಳು ರುಚಿಸು ತ್ತಿರಲಿಲ್ಲ. ನವರಾತ್ರಿ ಹಬ್ಬದ ರಜೆ ಮುಗಿದು ಒಂದು ದಿನ ಶಾಲೆಗೆ ಹೋಗುವಾಗ ರಫಿಕ್ನ ಸೈಕಲ್ ಶಾಪ್ ಮುಂದೆ ನಿಲ್ಲಿಸಿದ್ದ ಕೆಂಪು ಬಣ್ಣದ ಸೈಕಲ್ ರಾಮ ಮತ್ತು ಮೋಹನರಲ್ಲಿ ಆಸೆಯನ್ನು ಹುಟ್ಟಿಸಿತು. ಆದರೆ ಒಂದು ಕ್ಷಣ ನಿರಾಶೆ ಅವರನ್ನು ಆವರಿಸಿತು. ಆಗ ಮೋಹನ ರಾಮನನ್ನು ಉದ್ದೇಶಿಸಿ


     ' ರಾಮ ಈ ಸಲ ಬಸವ ಸೈಕಲ್ ಮೇಲೆಯೇ ತಾಯವ್ವನ ಜಾತ್ರೆಗೆ ಬರುತ್ತಾನಂತೆ ' ಎಂದು ತಾನು ತಿಳಿದ ಸಂಗತಿಯನ್ನು ಹೇಳಿದ. ಜಾತ್ರೆಯ ನೆನಪು ಬಂದೊಡನೆ ರಾಮನ ಕಣ್ಣುಗಳು ಮಿಂಚಿನಂತೆ ಹೊಳೆದವು. ಆಗ ರಾಮ ಮೋಹನನಿಗೆ


     ' ಮೋಹನ ಜಾತ್ರೆಗೆ ನಮಗೆ ಹಣ ಕೊಡುತ್ತಾರೆ, ಈ ಸಲ ಹೇಗಾದರೂ ಮಾಡಿ ಜಾತ್ರೆಗೆ ಜಾಸ್ತಿ ಹಣ ಕೇಳಬೇಕು., ಇಲ್ಲವೆ ನಮಗೆ ಜಾತ್ರೆಗೆ ಕೊಟ್ಟ ಹಣದಲ್ಲಿ ಸ್ವಲ್ಪ ಉಳಿಸಿಕೊಂಡು ಬಸವನ ಸಹಾಯದಿಂದ ಸೈಕಲ್ ಕಲಿಯಬೇಕು ' ಎಂದು ತನ್ನ ಯೋಚನೆಯನ್ನು ವಿವರಿಸಿದ. ಮೋಹನನಿಗೂ ಅದು ಸರಿಯಾದ ಯೋಚನೆ ಎನಿಸಿತು. ಹಾಗೆಯೆ ಮಾಡೋಣವೆಂದು ಅನುಮತಿ ಸೂಚಿಸಿದ.


                                                                                                                ( ಮುಂದುವರಿದಿದೆ )

Rating
No votes yet

Comments