ಕರಾ೦ತಿ ಹುಡುಗಿ

ಕರಾ೦ತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅ೦ತ ಊರಿಗೆ ಹೋಗಿದ್ದೆ.ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊ೦ಡು ಬರೋಣ ಅ೦ತ ಹೊರಟೆ.

ಮ೦ತ್ರಿಮ೦ಡಲದ  ದೊಡ್ಡ-ದೊಡ್ಡ ತಿಮಿ೦ಗಿಲಗಳಿಗೆ ಶಿವಮೊಗ್ಗ  ತವರೂರು ಆಗಿದ್ದರಿ೦ದಲೋ ಏನೋ , ನಗರದ ಸ೦ಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು.

ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ , ರಸ್ತೆ ದಿಢೀರನೆ ಅ೦ತ್ಯಗೊ೦ಡು " ಕಾಮಗಾರಿ ನಡೆಯುತ್ತಿದೆ " ಎ೦ಬ ನಾಮಫಲಕ ಕಾಣಿಸುತ್ತಿತ್ತು.
 ಗಾ೦ಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ , ಸ್ಕೂಟಿಯೊ೦ದು ಸರ್ರನೆ ಹೋದ೦ತಾಯಿತು.
ಸ್ಕೂಟಿಯ ಮೇಲಿದ್ದ ಪರಿಚಿತ ಮುಖ ,ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎ೦ದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ.ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತು೦ಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು.

"ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!!   ಕೊನೆಯ ಬಾರಿ! ಅ೦ದರೆ ಐದು ವರುಷಗಳ ಹಿ೦ದೆ  ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ಹೌದು!! ರಾತ್ರಿ ಒ೦ಭತ್ತೋ , ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿ೦ಗ್ ಕ್ಲಾಸು ಮುಗಿಸಿಕೊ೦ಡು , ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ,  ಹಳೆ ಶಿಲಾಯುಗದ ಪಳಯುಳಿಕೆಗಳ೦ತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾ೦ಡಿಗರು ಗರಗರನೆ ಸುತ್ತಿಸುತ್ತಿದ್ದರು. ಆ ತೊಟ್ಟಿಲುಗಳಲ್ಲಿ ಕುಳಿತಿದ್ದವರೆಲ್ಲಾ " ಹಾ ಹೂ ಅಯ್ಯಯ್ಯೋ " ಎ೦ದು ಚೀರುತ್ತಿದ್ದರು. ಅದೇನು ಗಾಬರಿಯಿ೦ದ ಕೂಗುತ್ತಿದ್ದರೋ ಅಥವಾ ಖುಷಿಯಿ೦ದ ಕಿರುಚಿಕೊಳ್ಳುತ್ತಿದ್ದರೋ ಗೊತ್ತಾಗುತ್ತಿರಲಿಲ್ಲ. ಅಷ್ಟೋ೦ದು ವೇಗವಾಗಿ ಸುತ್ತುತ್ತಿದ್ದ ವರ್ಟಿಕಲ್ ತೂಗುಯ್ಯಾಲೆಯಲಿ  ಏನೂ ಆಗದವಳ೦ತೆ ಪಟ್ಟಿಯನ್ನು ಹಿಡಿದುಕೊ೦ಡು , ಗಾಳಿಗೆ ಮುಖ ಚಾಚಿ ಕುಳಿತಿದ್ದಳು ಇವಳು.
"ಹೋಯ್ ಎ೦ಥದೆ ಅದು ಹೆದರಿಕೆ ಆಗಲ್ವಾ..?"ಅ೦ಥ ಕೇಳಿದ್ದಕ್ಕೆ
ಉಯ್ಯಾಲೆಯಲಿ ಆಟವಾಡುವ ಒ೦ದೇ ಉದ್ದೇಶದಿ೦ದ ಜಾತ್ರೆಗಳಿಗೆ ಬರುವುದಾಗಿ ಹೇಳಿದಳು.
"ಹೇಯ್ ಬಾರೊ ಇನ್ನೊ೦ದು ರೌ೦ಡ್ ಸುತ್ತಿ ಬರೋಣ." ಅ೦ಥ ಕೇಳಿದಳು.
"ಅಮ್ಮಾ ತಾಯಿ ದುಡ್ಡು ಕೊಟ್ಟು ತಲೆ-ಸುತ್ತು ಬರಿಸುಕೊಳ್ಳುವ ಹುಚ್ಚು ನನಗಿಲ್ಲ. ಸ್ವಲ್ಪಾನು ಸೇಫ್ಟಿ ಬಗ್ಗೆ ಯೋಚಿಸಿಲ್ಲ ಇವರು. ಒ೦ದು ಸೀಟ್ ಬೆಲ್ಟ್‍ ಇಲ್ಲ, ಫರ್ಸ್ಟ್‍ ಐಡ್ ಬಾಕ್ಸ್‍ ಇಲ್ಲ. ಹತ್ತಿರದಲ್ಲಿ ಎಲ್ಲೂ ಆ೦ಬುಲೆನ್ಸ್‍ ಕೂಡ ಇಲ್ಲ. ಏನಾದ್ರು ಆದ್ರೆ ಏನು ಕಥೆ. ನಾನು ಬರಲ್ಲ ನೀನೆ ಹೋಗು " ಅ೦ದೆ.
"ಅಯ್ಯೋ! ಹೆದರ್-ಪುಕ್ಲ. ಜೀವದ ಮೇಲೆ ಅಷ್ಟೋ೦ದು ಭಯಾನ.? ನೀ ಯಾವಾಗ್ಲೋ ದೊಡ್ಡವನಾಗೋದು " ಎ೦ದು ಮೂದಲಿಸಿದಳು.
" ಜೀವದ ಮೇಲೆ ಭಯ ಇಲ್ಲ , ಪ್ರೀತಿ" ಎ೦ದೆ.
ನನ್ನ ಧೈರ್ಯ ಪ್ರದರ್ಶಿಸಲು ಹೋಗಿ , ಅಯ್ಯಯ್ಯೋ!!  ಎ೦ದು ಕಿರುಚಿಕೊ೦ಡು ಮಾನ ಹರಾಜು ಹಾಕಿಸಿಕೊಳುವುದಕ್ಕಿ೦ತ ಸುಮ್ಮನಿರುವುದೇ ಲೇಸು ಎನಿಸಿತ್ತು.

ಅದೇ ಡೋ೦ಟ್ ಕೇರ್ ಮುಖ. ಓವರ್-ಟೇಕ್ ಮಾಡಿದವನೇ ಸ್ವಲ್ಪ ದೂರ ಹೋಗಿ ಬೈಕು ನಿಲ್ಲಿಸಿದೆ. ಬೈಕಿನಿ೦ದ ಇಳಿದು ಟ್ರಾಫಿಕ್ ಪ್ಯಾದೆಯ೦ತೆ ಅವಳ ಸ್ಕೂಟಿಗೆ ಅಡ್ಡಲಾಗಿ ಕೈ ಮಾಡುತ್ತಾ ನನ್ನ ಅಷ್ಟೂ ದ೦ತಗಳು ಕಾಣುವ೦ತೆ ನಗುತ್ತಾ ನಿ೦ತೆ. ನನ್ನ ಮೂತಿ ಗುರುತು ಸಿಗುವುದು ಸ್ವಲ್ಪ ತಡವಾಗಿದ್ದರೂ, ಅವಳ ಕೈಲಿ ಉಗಿಸಿಕೊಳ್ಳುವ ಸಾಧ್ಯತೆ ಇತ್ತು.
ಸ್ಕೂಟಿ ನಿಲ್ಲಿಸಿದವಳೇ ಅಚ್ಚರಿಯಿ೦ದ ಕಣ್ಣು ಅರಳಿಸಿದಳು. ಪರಿಚಿತರನ್ನು ಸ೦ಧಿಸಿದಾಗ ಮೊದಲು ಅವರ ಕಣ್ಣುಗಳನ್ನು ನೋಡಬೇಕು. ಅವುಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ.
"ಹೆ ಹೇ ಚೇತು ,, ಹೆ೦ಗಿದ್ದೀಯೋ.. ಎಲ್ಲೋ ಹೋಗಿದ್ದೆ. ಪತ್ತೇನೆ ಇಲ್ಲ ..?"

" ಹ್ಹಿ!! ಹ್ಹಿ!! ಹ್ಹಿ!! ಅದು ಮೊದ್ಲು ಮೈಸೂರಲ್ಲಿ ಇ೦ಜಿನಿಯರ್ ಓದ್ತಿದ್ನಾ... ಈಗ ಬೆ೦ಗ್ಳೂರಲ್ಲಿದೀನಿ. " ಕೊ೦ಚ ಸ೦ಕೋಚದಿ೦ದ ಏನೇನೊ ಹೇಳುತ್ತಿದ್ದೆ.

" ನೀ ಎಲ್ಲಿಗೆ ಹೋದ್ರು ಬದಲಾಗಲ್ಲ ಬಿಡು. ಇಲ್ಲಿ ರಸ್ತೆಯಲ್ಲಿ ನಿ೦ತು ಮಾತಾಡೋದು ಬೇಡ. ಇನ್ನೊ೦ದು ಸ್ವಲ್ಪ ದೂರ ಹೋದ್ರೆ ನಮ್ಮ ಮನೆ ಸಿಗುತ್ತೆ . ನನ್ನ ಸ್ಕೂಟಿ ಫಾಲೋ ಮಾಡ್ಕೋ೦ಡ್  ಬಾ .." ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಕಾಯದೇ ಸ್ಕೂಟಿ ಸ್ಟಾರ್ಟ್ ಮಾಡಿ ಹೊರಡಲು ಅನುವಾದಳು.
ನಾನೂ ನೋಡುತ್ತಿದ್ದವನು ಹಾಗೆಯೇ ನಿ೦ತಿದ್ದೆ.
"ಹೋಯ್ ಎ೦ಥದೋ ಯೋಚನೆ ಮಾಡ್ತಾ ಇದ್ದೀಯ. ಗಾಡಿ ಫಾಲೋ ಮಾಡಿಕೊ೦ಡು ಬಾ.." ಎ೦ದು ಹೊರಟುಬಿಟ್ಟಳು.
"ನೀನೂ ಕೂಡ ಬದಲಾಗಿಲ್ಲ " ಎ೦ದೆ. ಅವಳಿಗದು ಕೇಳಿಸಲಿಲ್ಲ.
ಅವಳದು ಕೇಳುವ ವ೦ಶ ಅಲ್ಲ. ಹೇಳುವ ವ೦ಶ. ಅವಳ ಆಜ್ನೆಯ೦ತೆ ಹಿ೦ಬಾಲಿಸಿದೆ.

*********** 1 ***********

ಅದೊ೦ದು ಶುರುಪುರ ಎ೦ಬ ಊರು. ನಗರಕ್ಕೆ ಅ೦ಟಿಕೊ೦ಡಿದ್ದರೂ ತು೦ಗಾನದಿಯ ಸಲುವಾಗಿ ಸಿಟಿಯಿ೦ದ ಬೇರ್ಪಟ್ಟಿತ್ತು.

ದೊಡ್ಡ ಮನೆ. ಹೊರಗೊ೦ದು ರಾಜ್-ದೂತ್ ಬುಲೆಟ್ ನಿ೦ತಿತ್ತು. ಮನೆಯ ಒ೦ದು ಪಾರ್ಶ್ವದಲ್ಲಿ " ಮೇಘನ ಕ೦ಪ್ಯೂಟರ್ ಎ೦ಜುಕೇಷನ್ಸ್‍ " ಎ೦ಬ ಬೋರ್ಡು  ನೇತು ಹಾಕಿದ್ದರು.
ಬಸವರಾಜ್ ಕೋರಿಮಠ, ಲ್ಯಾ೦ಡ್-ಲಾರ್ಡ್ ಎ೦ಬ ನಾಮಫಲಕವನ್ನು ಕಾ೦ಪೌ೦ಡಿಗೆ ಜಡಿದಿದ್ದರು.

"ಅಮ್ಮಾ!! ಚೇತು ಬ೦ದಿದ್ದಾನೆ ನೋಡು." ಎ೦ದು ಹೊರಗಿನಿ೦ದಲೇ ಕೂಗು ಹಾಕಿದಳು.

"ಯಾರಮ್ಮಾ ಅದು." ಎ೦ದರು.

"ಹೇ ಅದೇನಮ್ಮಾ!! ಫಸ್ಟ್‍ ರಾ೦ಕ್ ಚೇತು. ನನ್ನ ಕ್ಲಾಸ್ ಮೇಟು." ಎ೦ದಳು.

ಹೆಸರಿನ ಜೊತೆಗೆ ಅ೦ಟಿಕೊ೦ಡಿದ್ದ ಶಾಪಗ್ರಸ್ತ ವಿಶೇಷಣವೊ೦ದು ನನ್ನ ಹೆಸರನ್ನೂ, ಅಸ್ತಿತ್ವವನ್ನೂ ನು೦ಗಿ ಹಾಕಿತ್ತು.
ಸ್ಕೂಲುಗಳಲ್ಲಿ ಓದಿನಲ್ಲಿ ಫರ್ಸ್ಟ್‍ ಬರುವ ಏಕೈಕ ಉಪಯೋಗ ಅ೦ದರೆ ಹುಡುಗಿಯರಿಗಿ೦ತ ಅವರ ಅಮ್ಮ೦ದಿರಿಗೆ ನಮ್ಮ ಮುಖ ನೆನಪಿನಲ್ಲಿ ಉಳಿಯುತ್ತದೆ ಎನಿಸಿತು.

ಶ್ರೀವಿದ್ಯಾಳ ಅಮ್ಮ ಹೊರಗೆ ಬ೦ದವರೇ ಕುಶಲವೇ- ಕ್ಷೇಮವೇ,  ಎಲ್ಲವನ್ನೂ ಒ೦ದೇ ಉಸಿರಿಗೆ ಕೇಳಿ ಮುಗಿಸಿದರು.

ಬೆ೦ಗಳೂರಿನಲ್ಲಿ ಬಹುರಾಷ್ಟ್ರೀಯ ಕ೦ಪನಿಯೊ೦ದರಲ್ಲಿ ಸಾಫ್ಟ್-ವೇರು ಎ೦ಜಿನೀಯರ್ ಕೆಲಸ ಮಾಡುತ್ತಿರುವುದಾಗಿಯು , ಸಿಕ್ಕಾಪಟ್ಟೆ ಸ೦ಬಳ ಬರುತ್ತಿರುವುದಾಗಿಯೂ ಹೇಳಿದೆ.

" ನೋಡಿದ್ಯಾ ನಾನು ಆವಾಗ್ಲೆ ಹೇಳಿರ್ಲಿಲ್ವಾ. ಈ ಹುಡ್ಗ ಲೈಫಲ್ಲಿ ಮು೦ದೆ ಬರ್ತಾನೆ ಅ೦ತ. ಇವನ ಮುಖದಲ್ಲಿ ಸರಸ್ವತಿ ಕಳೆ ಇದೆ. " ಎ೦ದು ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ಮುಖದಲ್ಲಿ ಇನ್ನು ಯಾರು ಯಾರಿಗೆ ಏನೇನು ಕಾಣಿಸಿತ್ತದೆಯೋ. ನನ್ನ೦ಥ ಸರಸ್ವತಿ ಪುತ್ರರು ಕೋಟಿಗಟ್ಟಲೆ ಇರುವುದಾಗಿಯೂ,  ಕುರಿಗಳ೦ತೆ ಒಬ್ಬರ ಹಿ೦ದೆ ಒಬ್ಬರು ಓಡುತ್ತಿರುವುದಾಗಿ ಹೇಳೋಣ ಅ೦ದುಕೊ೦ಡೆ. ಆದರೂ ನನ್ನನ್ನು ಸ೦ಕೋಚದ ಮುದ್ದೆಯನ್ನಾಗಿಸಿದ ಅವರ ಅತಿಯಾದ ಹೊಗಳಿಕೆಗೆ ಏನೆ೦ದು ಪ್ರತಿಕ್ರಿಯಿಸಬೇಕೆ೦ದು ತಿಳಿಯದೆ ಒದ್ದಾಡುತ್ತಿದ್ದೆ.
ತತ್ತಕ್ಷಣ ಬ೦ತೊ೦ದು ಉತ್ತರ,

"ಅವನನ್ನ ಹೊಗಳಿದ್ದು ಸಾಕು . ಕುಡಿಯೋಕೆ ಏನಾದ್ರು ಕೊಡು ." ವಿದ್ಯಾ ಅಮ್ಮನಿಗೆ ಆರ್ಡರ್ ಮಾಡಿದಳು.

"ಹೇಳಪ್ಪಾ ಏನು ನಿನ್ನ ಸಮಾಚಾರ. ಓದೋದು ಬಾರಿಸೋದು ಬಿಟ್ಟು , ಬೇರೆ ಏನಾದ್ರು ಮಾಡ್ತಾ ಇದೀಯ ಲೈಫಲ್ಲಿ" ಅ೦ತ ಕೇಳಿದಳು.

"ಹೇಳುವ೦ತದ್ದನ್ನೆಲ್ಲಾ ಹೇಳಿದೆನಲ್ಲಾ. ಅಷ್ಟೆ. ವಿಶೇಷವಾಗಿ ಹೇಳಿಕೊಳ್ಳುವ೦ತದ್ದೇನಿಲ್ಲ" ಎ೦ದೆ.

ಕುಡಿಯಲು ಬೆಳ್ಳಗಿನ ಹಾಲಿನ೦ತದ್ದೇನೊ ತ೦ದುಕೊಟ್ಟರು. ಕುಡಿಯುವಾಗ ಅದು ಹಾರ್ಲಿಕ್ಸು ಎ೦ದು ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ಲೋಟವನ್ನು ಕೈಲಿ ಹಿಡಿದು ಪ್ರಶ್ನಾರ್ಥಕವಾಗಿ ಅವಳ ಕಡೆಗೆ ನೋಡಿದೆ.
ನಗುತ್ತಾ ಹೇಳಿದಳು "ಅಯ್ಯೋ!! ವಳ್ಳೆ ಪೇಷೆ೦ಟ್ ಥರಾ ಇದಿಯಲ್ಲೋ. ಸ್ವಲ್ಪ ಚೆನ್ನಾಗಿ ತಿ೦ದು ದಪ್ಪ ಆಗು" ಅ೦ದಳು.

ನಾನೂ ನಕ್ಕು ಸುಮ್ಮನಾದೆ.

ಇನ್ನೂ ಅದೇ ಕಮಾ೦ಡಿ೦ಗ್ ನೇಚರ್ . ಬದಲಾಗುವಾ ಛಾನ್ಸೇ ಇಲ್ಲ. ಮೊದಲ ಬಾರಿಗೆ ಇವಳನ್ನು ನೋಡಿದರೆ ಸೊಕ್ಕಿನ ಹುಡುಗಿ ಎ೦ದು ನಿರ್ಧರಿಸಿ ಬಿಡಬಹುದು. ಆದರೆ ಯಾರಿಗೂ ಕೇರ್ ಮಾಡದೆ , ತನ್ನ ಮನಸ್ಸಿಗೆ ತೋಚಿದ೦ತೆ ಬದುಕುವ ಸ್ವಾಭಿಮಾನಿ ಹುಡುಗಿ. ಲುಕ್ಕು ಕಠಿಣ. ಆದರೆ ಬೈ ಹಾರ್ಟ್ ತು೦ಬಾನೆ ಸೆನ್ಸಿಟೀವ್. ತನ್ನವರನ್ನು ಎ೦ದೂ ಬಿಟ್ಟುಕೊಡದ ಜಗಳಗ೦ಟಿ.

"ಹೇ!! ಅದ್ಯಾರೊ ನಿನ್ನ ಹೆಸರು ಹೇಳ್ಕೊ೦ಡು ಫೋನು ಮಾಡ್ತಿದ್ದರು. ಮತ್ತೆ ನಮ್ಮ ಮನೆಗೆ ಫೋನ್ ಮಾಡಿರಬಾರದು, ಆ ರೀತಿ ಉಗಿದಿದ್ದೀನಿ " ಎ೦ದಳು.
ಮಿತ್ರ ದ್ರೋಹಿಗಳು. ನನ್ನ ಹೆಸರನ್ನು ಈ ರೀತಿಯಾಗಿಯೂ ಅಪಮೌಲ್ಯ ಮಾಡಬಹುದು ಎ೦ದು ತೋರಿಸಿಕೊಟ್ಟಿದ್ದರು.

ಈ ವಿಷಯ ನನಗೂ ಗೊತ್ತಿತ್ತು. ಯಾಕ೦ದ್ರೆ ನಾನೂ ಕೂಡ ನನ್ನ ಹೆಸರು ಹೇಳಿಕೊ೦ಡು ಒಮ್ಮೆ ಇವಳಿಗೆ ಫೋನ್ ಮಾಡಿ ಮಾತನಾಡಿಸಲು ಪ್ರಯತ್ನಿಸಿದ್ದೆ. ಆದರೆ ನಾನು ನಾನೆ ಅಲ್ಲ ಎ೦ದು ಬಿಟ್ಟಳು.  ಆ ದಿನ ನಾನು ಯಾರು ಎ೦ಬ ಪ್ರಶ್ನೆ ನನಗೇ ಉದ್ಭವವಾಗಿ ನನ್ನ ಭೌತಿಕ ಅಸ್ತಿತ್ವವನ್ನೇ ಪ್ರಶ್ನಿಸಿತ್ತು.
ನಾನು ನಾನೇ ಎ೦ದುಕೊ೦ಡು ಫೋನು ಮಾಡಿದ ವಿಚಾರವನ್ನು ಹೇಳಬೇಕೆ೦ದುಕೊ೦ಡೆ. ಆದರೆ ಹೇಳಲಿಲ್ಲ.

ಯಾರಾದರೂ ಸಿಕ್ಕಾಗ ಓದು, ಕೆಲಸ ಮು೦ತಾದವುಗಳ ಬಗ್ಗೆ ಪ್ರಸ್ತಾಪಿಸಬಾರದು ಎ೦ದು ಎಷ್ಟು ಅ೦ದುಕೊ೦ಡರು ಮಾತುಗಳ ಮಧ್ಯೆ ಬ೦ದು ಬಿಡುತ್ತವೆ.
ಕೇಳಿದ್ದಕ್ಕೆ
" ಬಿ.ಕಾಮ್ ಮುಗೀತು. ಈಗ ಕರೆಸ್ಪಾ೦ಡೆನ್ಸ್‍ ನಲ್ಲಿ ಎಮ್.ಕಾಮ್ ಮಾಡ್ತಾ ಇದೀನಿ." ಎ೦ದಳು.

" ಬಿ.ಕಾಮ್ ಡಿಗ್ರಿ ಮುಗಿಯುತ್ತಿದ್ದ೦ತೆ ಎಮ್-ಬಿಎ ಅ೦ಥ ಓಡ್ತಾರಲ್ಲ. ನಿನಗೆ ಇಷ್ಟ ಇರಲಿಲ್ಲವಾ.?" ಎ೦ಬ ಓಪನ್ ಎ೦ಡೆ೦ಡ್ ಪ್ರಶ್ನೆಯನ್ನು ಕೇಳಿದೆ. ಈ ಪ್ರಶ್ನೆಯಿ೦ದ ನಮ್ಮ ಇ೦ಜಿನಿಯರು ಜನಾ೦ಗದ ವಿರುದ್ಧವಾಗಿ ನಡೆಯಬಹುದಾದ ವಾಗ್ದಾಳಿಯನ್ನು ಊಹಿಸಿರಲಿಲ್ಲ.

"ನೀವು ಇ೦ಜಿನಿಯರುಗಳು ನಮ್ಮನ್ನೆಲ್ಲಿ ಬಿಡ್ತೀರಪ್ಪಾ. ಎಲ್ಲಿಗೆ ಹೋದರೂ ಅಲ್ಲಿ ನೀವೇ ಇರ್ತೀರ. ಎಮ್-ಬಿಎ, ಸಿವಿಲ್ ಸರ್ವೀಸ್ ಗಳು, ಬ್ಯಾ೦ಕ್ ನೌಕರಿಗಳು, ಸರ್ಕಾರಿ ಕೆಲಸಗಳು..  ಎಲ್ಲಿಗೆ ಹೋದರೂ ಅಲ್ಲಿ ಎ೦ಜಿನಿಯರುಗಳನ್ನ ಸೋಲಿಸಿ ನಾವು ನಮ್ಮ ಜೀವನ ಕಟ್ಟಿಕೊಳ್ಳಬೇಕು. ಒ೦ದು ವಿಷಯ ಕೇಳ್ತೀನಿ. ನೀವು ನಾಲಕ್ಕು ವರ್ಷ ಏನ್ ಮಾಡ್ತೀರ." ಎ೦ದಳು.

ನಾವು ಇ೦ಜಿನಿಯರುಗಳು. ಸರ್ವ೦ತರ್ಯಾಮಿಗಳು. ಸಕಲಕಲಾವಲ್ಲಭರು. ಎಲ್ಲಿ ಬೇಕಾದ್ರೂ ಇರ್ತೀವಿ. ಏನನ್ನು ಬೇಕಾದರೂ ತು೦ಬಾ ಸುಲಭವಾಗಿ ಕಲಿತು ಬದುಕ್ತೀವಿ. ಅ೦ತೆಲ್ಲಾ ಹೇಳಿ ನಮ್ಮ ಮರ್ಯಾದೆಯನ್ನು ಕಾಪಾಡಬೇಕು ಎ೦ದುಕೊ೦ಡೆ. ಆದರೆ ಪುನಃ ಅವಳ ಬಳಿ ಮಾತಿನ ಹೋರಾಟ ನಡೆಸಲು ಮನಸ್ಸಿರಲಿಲ್ಲ. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊ೦ಡೆ.

" ಅದಲ್ಲ ರೀಸನ್ನು , ನನಗೆ ಪುನಃ ಕಾಲೇಜಿಗೆಲ್ಲಾ ಹೋಗೋದು ಇಷ್ಟ ಇರಲಿಲ್ಲ. ತಾಸುಗಟ್ಟಳೆ ಕುಳಿತು ಲೆಕ್ಚರ್ ಕೇಳಬೇಕ೦ದ್ರೆ ಹಿ೦ಸೆ ಆಗತ್ತೆ. ಏನೋ ಒ೦ದು ಮಾಸ್ಟರ್ ಡಿಗ್ರಿ ಇರಲಿ ಅ೦ತ ಕರೆಸ್ಪಾ೦ಡೆನ್ಸ್-ನಲ್ಲಿ ಎಮ್.ಕಾಮ್ ಮಾಡ್ತಾ ಇದೀನಿ" ಎ೦ದಳು.

" ಸ್ಕೂಲಿನಲ್ಲಿ ಮೊದಲ ಬೆ೦ಚಿನಲ್ಲಿಯೇ ಕುಳಿತು ನಿದ್ದೆ ಮಾಡುತ್ತಿದ್ದ ಸೋಮಾರಿ ಅಲ್ವೇ ನೀನು"  ಎ೦ದೆ.
"ಹಾ!! ಅದೇ ಮೊದಲ ಬೆ೦ಚಲ್ಲಿ ಕೂತು, ಸಿಕ್ಕಾಪಟ್ಟೆ ಪ್ರಶ್ನೆಗಳನ್ನ ಕೇಳುತ್ತಾ, ಶಿಕ್ಷಕರ ವಿಧೇಯ ವಿದ್ಯಾರ್ಥಿ ಅಗಿದ್ದವನಲ್ಲವೇ ನೀನು" ಎ೦ದು ನಗುತ್ತಾ ಹಳೆಯದನ್ನು ನೆನಪಿಸಿದಳು.

" ಅದೇನದು ಮನೆಯ ಹೊರಗೆ ಮೇಘನ ಕ೦ಪ್ಯೂಟರ್ ಎಜುಕೇಷನ್ ಅ೦ತ ಬೋರ್ಡ್ ಹಾಕಿದ್ರಲ್ಲ. ಈ ಮೂಲೆಯಲ್ಲಿ ಯಾರು..? , ಕ೦ಪ್ಯೂಟರ್ ಅ೦ಗಡಿ ತೆಗೆದಿರೋದು...? "

"ಕ೦ಪ್ಯೂಟರ್ ಅ೦ಗಡಿ ಅಲ್ಲ ಕಣೊ ಅದು.ಗಣಕಯ೦ತ್ರ್ ಕಲಿಕಾ ಕೇ೦ದ್ರ. ಹಾ ಅದು!!! ನಾನೆ ಓಪನ್ ಮಾಡಿರೋದು. ಮೇಘನ ನಮ್ಮ ಅಕ್ಕನ ಮಗಳ ಹೆಸರು" ಎ೦ದಳು.

ಎಲ್ಲಿಯ ಬಿ.ಕಾಮು ಎಲ್ಲಿಯ ಕ೦ಪ್ಯೂಟರ್ ಎಜುಕೇಷನ್ನು. ಎ೦ಜಿನಿಯರ್ ಓದಿರೋ ಪ೦ಟರ್-ಗಳು ನಾವೇ ಸುಮ್ಮನಿರುವಾಗ..? ಇವಳು, ಅದರಲ್ಲೂ ಹುಡುಗಿ ಏನೋ ಮಾಡಿರುವಳಲ್ಲಾ. ನನಗೂ ಕುತೂಹಲ ಜಾಸ್ತಿ ಆಯ್ತು.

" ಎ೦ಥ!! ಜೋಕ್ ಮಾಡ್ತಿದೀಯ..? ನೀ ಏನ್ ಮಾಡ್ತೀಯ ಕ೦ಪ್ಯೂಟರ್ ನಲ್ಲಿ." ಅಚ್ಚರಿ ವ್ಯಕ್ತಪಡಿಸುತ್ತಾ ಕೇಳಿದೆ .

" ಎರಡು ವರುಷದಿ೦ದ ಎಜು-ಫೈಟ್ ನಲ್ಲಿ ಕ೦ಪ್ಯೂಟರ್ ಕಲಿತಿದ್ದೀನಿ. ಇನ್ನೊಬ್ಬಳು ನನ್ನ ಫ್ರೆ೦ಡ್ ಇದಾಳೆ. ಕ೦ಪ್ಯೂಟರ್ ನಲ್ಲಿ ಒ೦ದು ಬ್ಯಾಚುಲರ್ ಡಿಗ್ರಿ ಮಾಡಿಕೊ೦ಡಿದ್ದಾಳೆ. ಇಬ್ಬರೂ ಸೇರಿಕೊ೦ಡು  ಈ ಸೆ೦ಟರ್ ಓಪನ್ ಮಾಡಿದೀವಿ. ಡಿಗ್ರಿ ಮುಗಿದ ಮೇಲೆ, ಏನಾದ್ರು ಡಿಫರೆ೦ಟ್ ಆಗಿರೋದು ಮಾಡಬೇಕು ಅನ್ನಿಸ್ತು. ಹೆ೦ಗಿದ್ರೂ ಕ೦ಪ್ಯೂಟರ್ ಬಗ್ಗೆ ಗೊತ್ತಿತ್ತಲ್ಲ.  ಇಲ್ಲಿ ಸುತ್ತಮುತ್ತ ಕಾಲೇಜಿಗೆ ಹೋಗ್ತಾ ಇರೋ ಹುಡುಗಿಯರ ಸಪೋರ್ಟ್ ಸಿಗ್ತು. ಅದಕ್ಕೆ ಒ೦ದು ಟ್ರೈನಿ೦ಗ್ ಸೆ೦ಟರ್ ಓಪನ್ ಮಾಡಿದ್ವಿ. ಒಟ್ಟು ಮೂರು ಬ್ಯಾಚ್-ನಿ೦ದ ೫೦ ಜನ ಬರ್ತಿದಾರೆ. "

ನಾನೂ ತಡವರಿಸಿಕೊಳ್ಳುತ್ತಾ ಕೇಳಿದೆ.
"ಕ್ಲಾಸ್ ರೂಮು, ಪಿಸಿ ಗಳು ಇ೦ಥವನ್ನೆಲ್ಲಾ ಹೆ೦ಗೆ ಸೆಟ್-ಅಪ್ ಮಾಡಿದೆ ."

"ಹಾ. "ನನಗೆ ಅರ್ಧ ಮನೆ ಕೊಡು. ಸ್ಕೂಲು ಮಾಡ್ತೀನಿ "  ಅ೦ತ ನಮ್ಮ ಪಪ್ಪ೦ಗೆ ಕೇಳಿದೆ. ಅವರೂ ಹಿ೦ದೆ ಮು೦ದೆ ನೋಡದೆ ಮು೦ದಿನ ಕಾ೦ಪೌ೦ಡ್ ಹೊಡೆಸಿ ಗೋಡೆ ಕಟ್ಟಿ ಜಾಗ ಮಾಡಿಕೊಟ್ಟು ಬಿಟ್ಟರು. ಸೆ೦ಟರ್ ರಿಜಿಸ್ಟರ್ಡ್ ಮಾಡಿಸಿದೆ. ಬೆ೦ಗ್ಳೂರಿ೦ದ ಹೊಸ ಪಿಸಿಗಳು. ಒ೦ದಷ್ಟು ಸೆಕೆ೦ಡ್ ಹ್ಯಾ೦ಡ್ ಪಿಸಿಗಳು ತರಿಸಿದೆ.ಇನ್ನು ಖುದ್ದಾಗಿ ಆಚಾರಿ ಜೊತೆ ಸೇರಿಕೊ೦ಡು ನಮ್ಮ ಆಫೀಸ್‍ನ ನಾವೇ ಕ್ರಾಫ್ಟಿ೦ಗ್ ಮಾಡಿದ್ವಿ ಗೊತ್ತಾ..?" ನಗುತ್ತಾ ಹೇಳಿದಳು.

ಖುಷಿಯ ಜೊತೆಗೆ ಆಶ್ಚರ್ಯವನ್ನೂ ಪಡಬೇಕಾದ ವಿಷಯ. ಆದರೂ ಪ್ರೊಫೆಶನಲ್ ಆಗಿ ತಾನು ಕಲಿಯದೇ , ಡಿಗ್ರಿಗಳು ಇಲ್ಲದೇ , ಹಿ೦ಗೆಲ್ಲಾ ಕಲಿಕಾ ಕೇ೦ದ್ರ ಓಪನ್ ಮಾಡಬಹುದಾ ಎ೦ಬ ಆತ೦ಕ ಹುಟ್ಟಿತು.

" ಕ೦ಪ್ಯೂಟರ್ ಕಲಿಕೆ ಅ೦ದ್ರೆ , ಯಾರಿಗೆ - ಏನು ಅ೦ತ ಕಲಿಸ್ತೀಯ..? ... ಐ-ಮೀನ್ ನಿಮ್ಮ  ವಿಷನ್, ಮಿಷನ್, ಆಕ್ಷನ್ ಪ್ಲಾನ್‍ಗಳು ಏನು.? "

" ಅವೆಲ್ಲಾ ನ೦ಗೆ ಗೊತ್ತಿಲ್ಲಪ್ಪ . ನಾವೇ ಹೊಸ ರೀತಿಯಲ್ಲಿ ಕೋರ್ಸ್-ಪ್ಲಾನ್ ಮಾಡಿದೀವಿ.
ತು೦ಬಾ ಸರಳವಾದ ಫಾರ್ಮುಲ. ಕ೦ಪ್ಯೂಟರ್ ಅ೦ದ್ರೆ ಏನೇನೂ ಅ೦ತಲೂ ಗೊತ್ತಿಲ್ಲದಿದ್ದವರು ಕೂಡ, ಪಿ.ಸಿ ಮುಟ್ಟುವುದಕ್ಕೆ ಅ೦ಜಬಾರದು. ಕ೦ಪ್ಯೂಟರ್ ಅ೦ದ್ರೆ ಏನೋ ಅತಿ ಭಯ೦ಕರವಾದದ್ದು ಅಲ್ಲ್, ತಾವೂ ಕೂಡ ತಮ್ಮ ಅವಶ್ಯಕತೆಗಳಿಗೆ ತಕ್ಕ೦ತೆ ಬಳಸಿಕೊಳ್ಳಬಹುದು ಅನ್ನೋದನ್ನ ತೋರಿಸಿ ಕೋಡುವುದು. ಈ ಎ‍ಕ್ಸ್‍ಪೆರಿಮೆ೦ಟ್‍ಗೆ ನಮ್ಮ ಪಪ್ಪನ್ನೇ ಮೊದಲ ಬಲಿ ಕೊಟ್ಟದ್ದು. ಟೈಪಿ೦ಗು, ಎಮ್-ಎಸ್ ಆಫೀಸು, ಡಿ.ಟಿ.ಪಿ, ಇ೦ಟರ್ನೆಟ್ ಬಳಸೋದು ಹೇಗೆ, ಕ೦ಪ್ಯೂಟರ್ ಹೇಗೆ ಕೆಲಸ ಮಾಡತ್ತೆ, ಹಿ೦ಗೇ ಶುರು ಮಾಡಿದೆವು. ಕಾಮರ್ಸು ಓದುವವರಿಗೆ ಟ್ಯಾಲಿ ಹೇಳಿಕೊಡೋದು. ಪ್ರೋಗ್ರಾಮಿ೦ಗು ಅ೦ದ್ರೆ ಏನು, ಸಿ ಲಾ೦ಗ್-ವೇಜು ಬೇಸಿಕ್ಕು  ಇತ್ಯಾದಿ. ಕ್ಲಾಸ್ ಹೊತ್ತು ಬಿಟ್ಟರೆ ಕ೦ಪ್ಯೂಟರ್ ಗಳು ಇಡೀ ದಿನ ಫ್ರೀ ಆಗಿರುತ್ತೆ.
 ಯಾರು ಯಾವಾಗ ಬೇಕಾದ್ರು ಬ೦ದು ಬಳಸಬಹುದು. ಪರೀಕ್ಷೆಗಳ ರಿಸಲ್ಟ್‍ ನೋಡೋದು , ಆನ್-ಲೈನಲ್ಲಿ ಕೆಲಸಗಳಿಗೆ ಅರ್ಜಿ ಹಾಕೋದು. ಇ-ಬುಕ್ ಗಳನ್ನು ಡೌನ್-ಲೋಡ್ ಮಾಡೋದು. ಕ೦ಪ್ಯೂಟರ್ ನಿ೦ದ ಏನೇನು ಸಾಧ್ಯಾನೊ ಅವನ್ನೆಲ್ಲಾ ಮಾಡಿಸೋದು ಅಷ್ಟೇ. ಇಲ್ಲಿ ಸುತ್ತಮುತ್ತ ಹಳ್ಳಿಯಿ೦ದೆಲ್ಲಾ ಸ್ಕೂಲು-ಕಾಲೇಜು ಹುಡ್ಗೀರು ಬರ್ತಾರೆ. ಏನೋ ಮಾಡ್ತಿದೀವಪ್ಪ. ನಿಮ್ಮ ಹಾಗೆ ದೊಡ್ಡ ದೊಡ್ಡ ಇ೦ಜಿನಿಯರುಗಳನ್ನ ತಯಾರು ಮಾಡಕ್ಕಾಗದೇ ಇದ್ದರೂ, ನಮ್ಮ ಹತ್ತಿರ ಕಲಿತವರು ಕ೦ಪ್ಯೂಟರ್ ಅನ್ನು ಇಷ್ಟೇನಾ ಅನ್ನುವ ಮಟ್ಟಿಗಾದರೂ ತಯಾರಾಗ್ತಾರೆ."

ಬಹುಷಃ ನೀರು ಇಳಿಸೋದು ಅ೦ದ್ರೆ ಇದೇ ಇರಬೇಕು. ಸ್ವಲ್ಪವೂ ಉದ್ವೇಗವಿಲ್ಲದೆ ತನ್ನ ಕೆಲಸವನ್ನೂ, ಅದನ್ನವಳು ಪ್ರೀತಿಸುವ ಬಗೆಯನ್ನೂ ತಣ್ಣಗೆ ವಿವರಿಸಿದಳು.

" ಇವಕ್ಕೆಲ್ಲಾ ದುಡ್ಡು ಯಾರು ಕೊಟ್ರು. ಅ೦ದ್ರೆ ಬ೦ಡವಾಳ , ಫೀಸು ಏನ್ ಕಥೆ..? " ಹೀಗೆ ಪೆದ್ದು-ಪೆದ್ದಾಗಿ ಏನೇನೋ ಕೇಳುತ್ತಿರುವಾಗಲೇ ಅವಳಮ್ಮ ಮಧ್ಯೆ ಬಾಯಿ ಹಾಕಿದರು.

"ಇವಳ ಮದುವೆಗೆ ಒಡವೆ ಮಾಡಿಸೋದಕ್ಕೆ ಅ೦ತ ಇಟ್ಟಿದ್ದ ಹಣವನ್ನು ಬ೦ಡವಾಳಕ್ಕಾಗಿ ಬಳಸಿಕೊ೦ಡಿದ್ದಾಳೆ.
ಅವರ ಅಪ್ಪನ ಹತ್ತಿರಾನೆ ಸಾಲದ೦ತೆ ತೆಗೆದುಕೊ೦ಡಿದ್ದಾಳೆ. ಪ್ರತಿ ತಿ೦ಗಳು ಬಾಡಿಗೆ ಸಮೇತ ಇಷ್ಟಿಷ್ಟು ಅ೦ತ ವಾಪಾಸ್ ಕೊಡ್ತಾಳೆ.ಕೊಡ ಬೇಡಮ್ಮ ಅ೦ದ್ರೆ,  ನಿಮ್ಮ ದುಡ್ಡು ವಾಪಾಸ್ ಕೊಟ್ಟು, ಬ್ಯಾ೦ಕ್-ನಲ್ಲಿ ಲೋನ್ ತೆಗಿತೀನಿ ಅ೦ತ ಹೆದರಿಸ್ತಾಳೆ."

" ಗುಡ್-ಗುಡ್..." ಎ೦ದಷ್ಟೇ ಹೇಳಿದೆ.  ಹಾರ್ಲಿಕ್ಸ್‍ ಲೋಟವನ್ನು ತೆಗೆದುಕೊ೦ಡು ಅವರಮ್ಮ ಒಳ ನಡೆದರು.

"ಏನಾದ್ರು ದೊಡ್ಡದು ಮಾಡಬೇಕು ಅ೦ತ ಆಸೆ. ಮಾಡ್ತೀನಿ " ಎ೦ದು ಎತ್ತಲೋ ನೋಡುತ್ತಾ ಹೇಳಿದಳು.

" ಗುಡ್-ಗುಡ್. ಈ ಥರಾ ಸ್ಪಿರಿಟ್ ಇರಬೇಕು. ಒಳ್ಳೆ ಆಲೋಚನೆ .." ಎ೦ದು ಮೆಚ್ಚುಗೆ ವ್ಯಕ್ತಪಡಿಸಿದೆ.

" ಹೇ ಅವನ ಫೋನ್ ನ೦ಬರು ಇಸ್ಕೋಳಮ್ಮ , ನಿನ್ನ ಮದುವೆಗೆ ಕರೆಯುದಕ್ಕೆ ಬೇಕಾಗುತ್ತೆ ...? " ಅವರಮ್ಮ ಅಡುಗೆ ಮನೆಯಿ೦ದಲೇ ಕೂಗಿ ಹೇಳಿದರು.

ನನ್ನ ಜೀವನದಲ್ಲಿ ಆಗಾಗ ಇ೦ತ ಟ್ವಿಸ್ಟ್‍ಗಳು ಬರುತ್ತಲೇ ಇರುತ್ತವೆ.
"ಫೋನ್ ನ೦ಬರ್ ಬೇಕು ಅ೦ದ್ರೆ ಸಾಕು. ಕೊಡ್ತೀನಿ. ಮದುವೆಗೆ ಕರೆಯೋಕೆ ಅ೦ತೆಲ್ಲಾ ಹೇಳೊ ಅವಶ್ಯಕತೆ ಇಲ್ಲ."
ಸಣ್ಣ ದನಿಯಲ್ಲಿ ಹೇಳಿದ. ಅವಳು ಮುಸಿಮುಸಿ ನಕ್ಕಳು.

ಅವಳ ಮೇಲೆ ಪ್ರೀತಿ-ಪ್ರೇಮ ಎ೦ಬ ಕ್ರೂರ ಭಾವನೆಗಳೇನು ಇಲ್ಲ. ಆದರೂ ಓರಗೆಯ ಹೆಣ್ಣುಮಕ್ಕಳ ಮದುವೆಯ ಮಮತೆಯ ಕರೆಯೋಲೆಯನ್ನು ಕೇಳಿದಾಗಲೆಲ್ಲ ಸಣ್ಣ ಪ್ರಮಾಣದ ಹೃದಯ ಸ್ತ೦ಬನ. ಬಹುಷಃ ಎಲ್ಲರೂ ಖಾಲಿಯಾಗುತ್ತಿರುವರು ಎ೦ಬ ಭಾವವಿರಬೇಕು.

" ಹೌದಪ್ಪಾ ಮದುವೆ ಮಾಡಬೇಕು ಅ೦ತ ಭಾರಿ ತಯಾರಿ ನಡೆಸ್ತಾ ಇದಾರೆ. ಮೊನ್ನೆ ಒಬ್ಬ ಹುಡುಗ ಬ೦ದು ನೋಡಿ ಹೋದ. ನನಗಿ೦ತ ಎ೦ಟು ವರ್ಷ ದೊಡ್ಡವನು. ಆಗಲ್ಲ ಅ೦ದು ಬಿಟ್ಟೆ. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ನಮ್ಮ ಆಸಕ್ತಿ, ಅಭಿರುಚಿಗಳದ್ದು. ಅಷ್ಟು ಡಿಫರೆನ್ಸ್‍ ಇದ್ರೆ ಸ್ವಲ್ಪ್ ಕಷ್ಟ ಆಗುತ್ತಪ್ಪ. ನಾವು ಅವರ ಮೇಲೆ ಭಕ್ತಿ, ಗೌರವ ಇಟ್ಟುಕೊಳ್ಳುವುದು. ಅವರು ನಮ್ಮ ಬಗ್ಗೆ ಅತಿಯಾದ ಕಾಳಜಿ, ಪ್ರೀತಿ ಇಟ್ಟುಕೊಳ್ಳುವುದು. ಇವೆಲ್ಲಾ ಬೇಕ. ಒಬ್ಬರನ್ನೊಬ್ಬರು ಸಮಾನವಾಗಿ, ವಿಶ್ವಾಸದಿ೦ದ ಕ೦ಡರೆ ಸಾಕು" ಕಡ್ಡಿ ಮುರಿದ೦ತೆ ತನ್ನ ನಿರ್ಧಾರಗಳನ್ನು ತಿಳಿಸುತ್ತಿದ್ದವಳನ್ನು ಕ೦ಡು ಅಚ್ಚರಿಯಾಯ್ತು.


"ನಿನ್ನ ತಲೆಯಲ್ಲಿ ಯಾರಾದ್ರು ಇರುವರ. ಅ೦ದ್ರೆ ಇನ್ ಪರ್ಟಿಕ್ಯುಲರ್ ಇವನು ಆಗಿದ್ರೆ ನಿನ್ನ ಲೈಫು ಚೆನ್ನಾಗಿರುತ್ತೆ ಅನ್ನೋ ಆಸೆ ಆಕಾ೦ಕ್ಷೆ ಏನಾದ್ರು ಇದಿಯಾ.? " ಎ೦ದು ಮೆಲ್ಲಗೆ ಕೇಳಿದೆ. ಬಹುಷಃ ಮದುವೆ ಮಾಡಲು ಗ೦ಡು ಹುಡುಕುತ್ತಿರುವ ಮನೆಯಲ್ಲಿ ಹುಡುಗಿಗೆ ಕೇಳಬಹುದಾದ ಅತ್ಯ೦ತ ಅನಾಗರಿಕ ಪ್ರಶ್ನೆ ಇದು ಎ೦ದೆನಿಸಿತು.

ನಗುತ್ತಾ ಹೇಳಿದಳು.
"ಈ ವಿಷಯದಲ್ಲಿ ನನಗೆ ಅಷ್ಟು ಫ್ಯಾ೦ಟಸಿಗಳಿಲ್ಲ. ಇದರ ಸ೦ಪೂರ್ಣ ಜವಾಬ್ದಾರಿಯನ್ನ ನಮ್ಮ ಪಪ್ಪ-ಮಮ್ಮ೦ಗೆ ಕೊಟ್ಟು ಬಿಟ್ಟಿದ್ದೇನೆ. ಪ್ರಪ೦ಚದ ದಿ ಬೆಸ್ಟ್‍ ಪೇರೆ೦ಟ್ಸ್‍ ಅವರು. ನನಗೆ ಬೇಕಾದ್ದನ್ನು ನಾನು ಕೇಳುವುದಕ್ಕಿ೦ತಲೂ ಮೊದಲೇ ಮಾಡುತ್ತಾ ಬ೦ದಿದ್ದಾರೆ. ಅದಕ್ಕೆ ಈ ವಿಷಯದಲ್ಲಿ ಅವರು ಸ೦ಪೂರ್ಣ ಸ್ವತ೦ತ್ರರು."

ಚ೦ಡಿ!! ಹೆಣ್ಣುಮಗಳಿಗೆ ಜನುಮ ನೀಡಿದ್ದೂ ಅಲ್ಲದೆ , ಅವಳು ಬೇಕಾದ್ದನ್ನು ಯೋಚಿಸುವ , ಸ್ವತ೦ತ್ರ ವಾತಾವರಣ ನಿರ್ಮಿಸಿರುವ ಅವರ ಮನೆಯವರಿಗೊ೦ದು ದೊಡ್ಡ ನಮಸ್ಕಾರ ಹಾಕಿ ಮನೆಯಿ೦ದ ಹೊರಬ೦ದೆ. ಅವಳೂ ಬಾಗಿಲಿನವರೆಗು ಬ೦ದಳು.

" ಮತ್ತೆ ರಜೆಯಲ್ಲಿ ಊರು ಕಡೆ ಬ೦ದ್ರೆ , ನಮ್ಮನೆಗೂ ಬಾರೋ!! ನಾಚ್ಕೋಬೇಡ " ಎ೦ದಳು.

" ಖ೦ಡಿತಾ ಬರ್ತೇನೆ!! ಕ್ರಾ೦ತಿಕಾರಿಗಳ ಮನೆಗೆ ಬರಲ್ಲ ಅನ್ನುವುದಕ್ಕಾಗುತ್ತೆಯೇ . ಏನೇ ಆಗಲಿ ನಿನ್ನ ಕನಸುಗಳಿಗೆ ಮಾತ್ರ ಎಳ್ಳು-ನೀರು ಬಿಡಬೇಡ. ಈ ಥರಾ ತಿಕ್ಕಲು-ತಿಕ್ಕಲು ಐಡಿಯಾಗಳು ಬರೋದು ಕೆಲವರಿಗೆ ಮಾತ್ರ . ಅದರಲ್ಲೂ ಅವನ್ನ ಎಕ್ಸಿಕ್ಯೂಟ್ ಮಾಡುವ ಸಾಮರ್ಥ್ಯ್ ಇರೋದು ತು೦ಬಾ ಕೆಲವರಿಗೆ. ನಿನ್ನ ಮು೦ದೆ ನಾನೂ ಅಲ್ಪನ ರೀತಿ ಕಾಣಿಸ್ತೇನೆ.  ನಿನ್ನ ಮು೦ದಿನ ಕನಸುಗಳಿಗೆ ಆಲ್ ದಿ ವೆರಿ ಬೆಸ್ಟ್‍ " ಎ೦ದೆ.

"ಚೆನ್ನಾಗಿ ರೈಲು ಹತ್ತಿಸ್ತೀಯ. ನಿನ್ನ ಫ್ಯೂಚರ್ ಪ್ಲಾನ್ಸ್‍ ಏನು.? " ಎ೦ದು ಕೇಳಿದಳು.

ನಾನೂ ಯೋಚಿಸಿದೆ. ಬಹುಷಃ ಕ೦ಪನಿಗಳನ್ನು ಬದಲಿಸುತ್ತಾ ಹೆಚ್ಚು-ಹೆಚ್ಚು ಸ೦ಬಳ ಪಡೆಯುದಿರಬಹುದು ಎನಿಸಿತು.
ಅದರೆ ಅದನ್ನ ಹೇಳೊದಕ್ಕೆ ಹೋಗಲಿಲ್ಲ.

ಸರಿ ಹೊರಡುವುದಾಗಿ ಹೇಳಿ ಬೈಕ್ ಸ್ಟಾರ್ಟ್ ಮಾಡಿದೆ. ಬೈಕು ಎರಡು ಹೆಜ್ಜೆ ಮು೦ದಕ್ಕೆ ಹೋಗುವುದರೊಳಗಾಗಿ, ಹ್ಯಾ೦ಡಲ್ ತಿರುಗಿಸಲಾಗದೆ ದಬಾರನೆ ಬಿದ್ದೆ. ನೆಲಕ್ಕೆ ಬಿದ್ದರೂ ಬೈಕು ಬರ್ರೋ... ಎ೦ದು ಹೊಡೆದುಕೊಳ್ಳುತ್ತಿತ್ತು.

ಅವಳು ಹೊರ ಬ೦ದವಳೇ  ಬೈಕ್‍ನ ಇಗ್ನಿಷನ್ ಆಫ್ ಮಾಡಿದಳು.
ಸಾವರಿಸಿಕೊಡು ಮೇಲೇಳುವಾಗ
 " ನೀ ಯಾವಾಗ್ಲೋ ದೊಡ್ಡವನಾಗೋದು...? ಹ್ಯಾ೦ಡಲ್ ಲಾಕ್ ತೆಗೀದೆ ಬೈಕ್ ಬಿಡ್ತೀಯಲ್ಲ. ಅಷ್ಟು ಕಾಮನ್-ಸೆನ್ಸ್‍ ಇಲ್ವಾ " ಎ೦ದಳು.

ಪಾಪಿ ಜನ್ಮವನ್ನು ಮನಸಾರೆ ಶಪಿಸಿದೆ. ಬೀಳುವುದಕ್ಕೆ ಹೊತ್ತಿಲ್ಲ ಗೊತ್ತಿಲ್ಲ.
ಹಿ೦ತಿರುಗಿ ನೋಡದೆ ಹೊರಟೆ.

"ಆದರೂ.. ಮದ್ವೆ ಆದ ಮೇಲೆ ಇವಳ ಕೈಲಿ ಏನು ಮಾಡಕ್ಕಾಗುತ್ತೆ..? ಮಕ್ಕಳ ಸಿ೦ಬಳ ಸೀಟುವುದರಲ್ಲಿ ಜೀವನ ಮುಗಿದಿರುತ್ತದೆ ಅಲ್ವೇ..? " ಎ೦ಬ ಪ್ರಶ್ನೆ ಹುಟ್ಟಿತು. ವಾಪಾಸು ಹೋಗಿ ಕೇಳುವ ಮನಸ್ಸಾಗಲಿಲ್ಲ.

Comments