ಕಥೆ - ಅಪೂರ್ಣ
ಗಾಳಿಯನ್ನು ಸೀಳಿಕೊಂಡು ಪುರುಷೋತ್ತಮನ ಕಾರು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಹೈವೇ ಆದ್ದರಿಂದ ಕಾರು ೧೦೦-೧೨೦ ವೇಗದಲ್ಲಿ ಚಲಿಸುತ್ತಿದ್ದಾನೆ ಪುರುಷೋತ್ತಮ. ಮರಗಳನ್ನು ಹಿಮ್ಮೆಟ್ಟಿ ಸಾಗುತ್ತಿದೆ ಕಾರು. ಪುರುಷೋತ್ತಮನ ದೇಹ ಮಾತ್ರ ಕಾರಿನಲ್ಲಿದ್ದರೂ ಮನಸ್ಸು ಮಾತ್ರ ಎಲ್ಲೆಲ್ಲೋ ಹರಿದಾಡುತ್ತಿದೆ. ಪುರುಷೋತ್ತಮನ ಮನಸ್ಸು ಗೊಂದಲದ ಗೂಡಾಗಿಬಿಟ್ಟಿತ್ತು. ಅವನ ಮನಸ್ಸು ಕೋಪದಿಂದ ಕೊತ ಕೊತ ಕುದಿಯುತ್ತಿತ್ತು. ಕಾರನ್ನು ಓಡಿಸುತ್ತಾ ಆಗೊಮ್ಮೆ ಈಗೊಮ್ಮೆ ಪಕ್ಕದ ಸೀಟಿನಲ್ಲಿದ್ದ ರಟ್ಟು, ಹಾಗೂ ಅದಕ್ಕೆ ಸಿಕ್ಕಿಸಿದ್ದ ಹಾಳೆಗಳ ಕಡೆ ನೋಡುತ್ತಿದ್ದಾನೆ. ಕಿಟಕಿಯಿಂದ ನುಗ್ಗಿ ಬರುತ್ತಿದ್ದ ಗಾಳಿಗೆ ಹಾಳೆಗಳು ಪಟಪಟನೆ ಬಡಿದುಕೊಳ್ಳುತ್ತಿದೆ.
ಅದು ತಾನೇ ಬರೆಯಲು ಶುರು ಮಾಡಿದ್ದ ಹೊಸ ಕಾದಂಬರಿಯ ಹಾಳೆಗಳು. ಮೊದಲ ಪುಟದ ಮೇಲೆ “ಅಪೂರ್ಣ” ಎಂದು ಬರೆದಿದ್ದಾನೆ.
ಪುರುಷೋತ್ತಮ ಒಬ್ಬ ಖ್ಯಾತ ಕಾದಂಬರಿಕಾರ, ಎಷ್ಟೆಷ್ಟೋ ಕಾದಂಬರಿಗಳನ್ನು ಬರೆದು ಪ್ರಖ್ಯಾತನಾಗಿದ್ದ. ಅವನ ಹಲವಾರು ಕಾದಂಬರಿಗಳು ಪ್ರಶಸ್ತಿಗೆ ಪುರಸ್ಕೃತವಾಗಿದ್ದವು. ಅವನ ಎಷ್ಟೋ ಕಾದಂಬರಿಗಳು ಬೇರೆ ಭಾಷೆಗಳಿಗೂ ತರ್ಜುಮೆಗೊಂಡಿದ್ದವು. ಕೆಲವು ಕಾದಂಬರಿಗಳು ಸಿನೆಮಾಗಳು ಆಗಿದ್ದವು. ಈ ಬಾರಿ ಹೊಸದೊಂದು ಕಾದಂಬರಿಗೆ ಮುನ್ನುಡಿ ಹಾಡಿದ್ದ ಪುರುಷೋತ್ತಮ
ಪ್ರತಿ ಬಾರಿ ಕಾದಂಬರಿ ಪೂರ್ಣ ಆದಮೇಲಷ್ಟೇ ಅದಕ್ಕೆ ಹೆಸರು ಕೊಡುತ್ತಿದ್ದವನು ಈ ಬಾರಿ ಮೊದಲೇ ಅದಕ್ಕೆ "ಅಪೂರ್ಣ" ಎಂದು ಹೆಸರಿಟ್ಟಿದ್ದ. ಕಾದಂಬರಿ ಹೆಚ್ಚು ಕಡಿಮೆ ಪೂರ್ಣಗೊಳ್ಲುವ ಹಂತಕ್ಕೆ ಬಂದಿತ್ತು. ಆದರೆ ಇದ್ದಕ್ಕಿದ್ದಂತೆ ನಡೆದ ಅನಿರೀಕ್ಷಿತ ಸಂಘಟನೆ ಒಂದು ಪುರುಷೋತ್ತಮನ ಮನಸ್ಸನ್ನು ಈ ಸ್ಥಿತಿಗೆ ತಂದು ನಿಲ್ಲಿಸಿತ್ತು.
ಯೋಚನೆಗಳ ನಾಗಾಲೋಟ ಹರಿದಿದ್ದಾಗಲೇ ಎದುರಿಗೆ ಧುತ್ತನೆ ಬಂದ ನಾಯಿಯನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಮತ್ತೆ ವಾಸ್ತವಕ್ಕೆ ಬಂದ ಪುರುಷೋತ್ತಮ ಅಲ್ಲೇ ಪಕ್ಕದಲ್ಲಿದ್ದ ಕೆರೆಯೊಂದರ ಪಕ್ಕದಲ್ಲಿ ಗಾಡಿ ನಿಲ್ಲಿಸಿ ಸುತ್ತಲೂ ಅವಲೋಕಿಸುತ್ತಿದ್ದ. ದೂರದಲ್ಲೊಂದು ಪೆಟ್ರೋಲ್ ಬಂಕ್ ಬಿಟ್ಟರೆ ಬೇರೇನೂ ತನ್ನ ಕಣ್ಣಳತೆಯಲ್ಲಿ ಕಾಣಿಸುತ್ತಿಲ್ಲ.
ತಾನು ನಿಲ್ಲಿಸಿದ್ದ ಜಾಗದ ಪಕ್ಕದಲ್ಲೇ ವಿಶಾಲವಾದ ಕೆರೆಯೊಂದಿತ್ತು. ಕೆರೆಯ ಹಿಂಬದಿಯಲ್ಲಿ ಬೃಹದಾಕಾರದ ಬೆಟ್ಟ ಒಂದು ಕಾಣುತ್ತಿತ್ತು. ಸಮಯ ಮಧ್ಯಾಹ್ನ ಸುಮಾರು ೨ ಘಂಟೆ ಆಗಿತ್ತು. ಆಕಾಶದಲ್ಲಿ ಕಾರ್ಮೋಡಗಳು ತುಂಬಿಕೊಂಡು ಯಾವ ಕ್ಷಣದಲ್ಲಿ ಬೇಕಾದರೂ ಧಾರಾಕಾರ ಮಳೆ ಸುರಿಯುವ ಸಂಭವ ಇತ್ತು.
ಇದೆ ಸರಿಯಾದ ಜಾಗ ಎಂದು ನಿರ್ಧರಿಸಿ ಕಾರನ್ನು ಬೆಟ್ಟದ ಕಡೆ ತಿರುಗಿಸಿದ.
ಹಿಂದಿನ ದಿನ ಸುರಿದಿದ್ದ ಮಳೆಯಿಂದ ಕೆರೆ ಏರಿಯ ರಸ್ತೆ ಪೂರ್ತಿ ಕೆಸರು ಕೆಸರಾಗಿತ್ತು. ಪುರುಷೋತ್ತಮನಿಗೆ ಅದ್ಯಾವುದರ ಪರಿವೆಯೇ ಇರಲಿಲ್ಲ. ಕಾರು ಹಳ್ಳ ಕೊಳ್ಳಗಳಲ್ಲಿ ಇಳಿದು ನೀರನ್ನು ಹಾರಿಸಿಕೊಂಡು ಬೆಟ್ಟದ ತಪ್ಪಲಿಗೆ ತಂದು ನಿಲ್ಲಿಸಿದ. ಕಾರಿನಿಂದ ಇಳಿದ ಪುರುಷೋತ್ತಮ ತನ್ನ ರಟ್ಟು, ಹಾಳೆಗಳು ಹಾಗೆ ಪೆನ್ನನ್ನು ತೆಗೆದುಕೊಂಡು ಬೆಟ್ಟ ಹತ್ತಲು ಶುರು ಮಾಡಿದ. ಮಳೆಯಿಂದ ಒದ್ದೆಯಾಗಿದ್ದ ಬಂಡೆ ಕಲ್ಲುಗಳು ಜಾರುತ್ತಿತ್ತು, ತಣ್ಣನೆ ಗಾಳಿ ಜೋರಾಗಿ ಬೀಸುತ್ತಿತ್ತು. ಆ ಗಾಳಿಯನ್ನು ಭೇಧಿಸಿಕೊಂಡು ಪುರುಷೋತ್ತಮ ಬೆಟ್ಟವನ್ನು ಹತ್ತುತ್ತಿದ್ದಾನೆ. ಒಂದೆರಡು ಮಳೆ ಹನಿ ಬೀಳಲು ಶುರು ಆಯಿತು. ಆದರೆ ಜೋರಾಗೇನು ಬರುತ್ತಿರಲಿಲ್ಲ. ರಟ್ಟು ಹಾಗೂ ಹಾಳೆಗಳನ್ನು ತನ್ನ ಜರ್ಕಿನ್ ನ ಒಳಗೆ ಇಟ್ಟುಕೊಂಡು ಮತ್ತೆ ಹತ್ತಲು ಶುರು ಮಾಡಿ ಒಂದು ಎತ್ತರವಾದ ಪ್ರದೇಶಕ್ಕೆ ಬಂದು ತಲುಪಿದ. ಅಷ್ಟರಲ್ಲಿ ಮಳೆ ಜೋರಾಗಿ ಶುರುವಾಯಿತು. ಅಲ್ಲೇ ಪಕ್ಕದಲ್ಲಿದ್ದ ಬಂಡೆಯ ಕೆಳಗೆ ಹೋಗಿ ಕುಳಿತ. ಆ ಬಂಡೆಯ ಕೆಳಗೆ ಮಳೆ ಬೀಳುತ್ತಿರಲಿಲ್ಲ. ಅಲ್ಲಿ ಹೋಗಿ ಕುಳಿತು ಸುತ್ತಲೂ ನೋಡಿದ. ಮಧ್ಯಾಹ್ನದ ಸಮಯಕ್ಕೆ ಮೋಡ ಹಾಕಿಕೊಂಡು ಮಳೆ ಬೀಳುತ್ತಿದ್ದರಿಂದ ಸುತ್ತಲಿನ ಪ್ರದೇಶ ಕತ್ತಲಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು. ರಟ್ಟು ಮತ್ತು ಹಾಳೆಗಳನ್ನು ತೆಗೆದು ಬರೆಯಲು ಕುಳಿತ.
ತಾನೇ ಬರೆದ ಕಾದಂಬರಿಯ ಕಥಾವಸ್ತು ತನ್ನ ಜೀವನದಲ್ಲೇ ನಡೆಯುತ್ತದೆ ಎಂದು ಅವನು ಕನಸಿನಲ್ಲೂ ಎಣಿಸಿರಲಿಲ್ಲ. ಈಗ ಪುರುಷೋತ್ತಮನ ಕಾದಂಬರಿ ಹಾಗೂ ಅವನ ಜೀವನ ಎರಡೂ ಮುಕ್ತಾಯದ ಹಂತಕ್ಕೆ ಬಂದು ನಿಂತಿತ್ತು. ಕಾದಂಬರಿಯನ್ನು ಮೊದಲಿನಿಂದ ಓದಲು ಶುರು ಮಾಡಿದ. ಮೊದಮೊದಲು ಎಲ್ಲೂ ತನಗೆ ಆ ಕಥೆ ಹೋಲಿದಂತೆ ಅನಿಸಲಿಲ್ಲ. ಆದರೆ ಬರಬರುತ್ತ ಆ ಕಥೆಯಲ್ಲಿ ಏನು ಬರೆದಿದ್ದನೋ ಅದೇ ಸಂಘಟನೆಗಳು ತನ್ನ ಜೀವನದಲ್ಲೇ ನಡೆಯಲಾರ೦ಭಿಸಿತ್ತು. ಆ ವಿಷ್ಯ ಮೊದಲಿಗೆ ಪುರುಷೋತ್ತಮನಿಗೆ ಅರಿವಿಗೆ ಬಂದಿರಲಿಲ್ಲ. ಅಷ್ಟರಲ್ಲಿ ಜೋರಾಗಿ ಸಿಡಿಲೊಂದು ಸಿಡಿಯಿತು ಅದು ಬೆಟ್ಟದ ಪಕ್ಕದಲ್ಲಷ್ಟೇ ಅಲ್ಲ ಪುರುಷೋತ್ತಮನ ಜೀವನದಲ್ಲೂ ಸಿಡಿಲೊಂದು ಎರಗಿತ್ತು. ದಿನ ಕಳೆದಂತೆ ಪುರುಷೋತ್ತಮನಿಗೆ ತನ್ನ ಜೀವನದಲ್ಲಿ ನಡೆಯುತ್ತಿರುವ ಘಟನೆಗಳು ತಾನು ಬರೆದ ಕಾದಂಬರಿಯನ್ನೇ ಹೋಲುತ್ತಿದೆ ಎ೦ದು ತಿಳಿದು ಗಾಭರಿಯಾಗಿದ್ದ. ಆದರೆ ಮುಂದೇನು ಮಾಡುವುದೆಂದು ತಿಳಿಯದೆ ಕಂಗಾಲಾಗಿದ್ದಾಗ ಈ ಕಾದಂಬರಿಗೆ ಒಂದು ಮುಕ್ತಾಯ ಕೊಡಬೇಕೆಂದು ನಿರ್ಧರಿಸಿದ್ದ.
ಕಾದಂಬರಿಯನ್ನು ಮುಂದುವರೆಸುತ್ತಿದ್ದಾನೆ.
ಕಥಾನಾಯಕ ಅರವಿಂದ ತನ್ನ ಸ್ನೇಹಿತನಿಗೆ ಕರೆ ಮಾಡಿ ತುರ್ತಾಗಿ ಮನೆಗೆ ಬರಬೇಕೆಂದು ಆಹ್ವಾನಿಸಿದ್ದಾನೆ. ಅರವಿಂದನ ಸ್ನೇಹಿತ ಮನೋಜ್ ಗೆ ಎಲ್ಲಿ ತನ್ನ ವಿಷಯ ಅರವಿಂದನಿಗೆ ತಿಳಿದು ಹೋಯಿತ ಎಂದು ಗಾಭರಿಯಾಗಿದ್ದಾನೆ. ಅರವಿಂದ ಕರೆ ಮಾಡಿದಾಗ ಅವನ ಧ್ವನಿಯಲ್ಲಿದ್ದ ರೌದ್ರತೆಯನ್ನು ಮನೋಜ್ ಗಮನಿಸಿದ್ದ. ಈಗ ಅರವಿಂದನ ಮನೆಗೆ ಹೋದರೆ ಹೇಗೆ ಅವನನ್ನು ಎದುರಿಸುವುದು ಅವನು ಕೇಳುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿದೆಯ? ಅವನಿಗೆ ನಾನು ಮಾಡಿದ ದ್ರೋಹಕ್ಕೆ ಕ್ಷಮೆ ಇದೆಯಾ? ಖಂಡಿತ ಅರವಿಂದ ನನ್ನನ್ನು ಕ್ಷಮಿಸುತ್ತಾನ? ಅಥವಾ ಅರವಿಂದನಿಗೆ ಈ ವಿಷಯ ತಿಳಿದಿದೆಯೋ ಇಲ್ಲವೋ ನಾನೇ ಅನಾವಶ್ಯಕವಾಗಿ ಗಾಭರಿ ಬೀಳುತ್ತಿದ್ದೆನ? ಆದದ್ದಾಗಲಿ ಅವನ ಮನೆಗೆ ಹೋಗಿ ನೋಡೋಣ ಎಂದು ಮನೋಜ್ ಅರವಿಂದನ ಮನೆಗೆ ಬಂದಿದ್ದಾನೆ. ಪ್ರತಿದಿನವೂ ಮನೋಜ್ ಅರವಿಂದನ ಮನೆಗೆ ಬರುತ್ತಿದ್ದನಾದರೂ ಇಂದೇಕೋ ಅರವಿಂದನ ಮನೆ ಮಾಮೂಲಿನಂತೆ ಇರಲಿಲ್ಲ. ಮನೆಯ ದೀಪಗಳನ್ನೆಲ್ಲ ಆರಿಸಿ ಒಂದೇ ಒಂದು ಸಣ್ಣ ಮೇಣದ ಬತ್ತಿಯ ಬೆಳಕಿನಲ್ಲಿ ಅರವಿಂದ ಗ್ಲಾಸಿಗೆ ಮದ್ಯವನ್ನು ಸುರಿದುಕೊಂಡು ಕುಡಿಯುತ್ತಿದ್ದಾನೆ.
ಮನೋಜನಿಗೆ ಯಾಕೋ ಏನೋ ಅನಾಹುತ ನಡೆಯುವ ಹಾಗೆ ಅನಿಸಿತ್ತು. ಮನೋಜನ ಆಗಮನವನ್ನು ಗಮನಿಸಿದ ಅರವಿಂದ ಅವನಿಗೂ ಒಂದು ಗ್ಲಾಸಿನಲ್ಲಿ ಮದ್ಯವನ್ನು ಸುರಿದು ಅವನ ಕೈಗಿತ್ತ. ಮನೋಜ ಒಂದೇ ಗುಟುಕಿಗೆ ಗ್ಲಾಸನ್ನು ಖಾಲಿ
ಮಾಡಿ ನೋಡು ಅರವಿಂದ ನಾನು ನಿನಗೆ ಬಹಳ ದೊಡ್ಡ ದ್ರೋಹ ಮಾಡಿದ್ದೇನೆ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು, ನಿನಗೆ ನಾನು ಮಾಡಿದ ದ್ರೋಹಕ್ಕೆ ನೀನೇನು ಶಿಕ್ಷೆ ಕೊಟ್ಟರೂ ನಾನು ಅನುಭವಿಸಲು ಸಿದ್ದ ಎಂದು ಹೇಳುತ್ತಿದ್ದ ಹಾಗೆ ಮನೋಜ ಕುಸಿದು ಬಿದ್ದ. ಮನೋಜನಿಗೆ ಕೊಟ್ಟ ಮದ್ಯದಲ್ಲಿ ಅರವಿಂದ ವಿಷ ಬೆರೆಸಿದ್ದ. ತನ್ನ ಗ್ಲಾಸನ್ನು ಖಾಲಿ ಮಾಡಿದ ಅರವಿಂದ ಮನೋಜನ ಪಕ್ಕಕ್ಕೆ ಬಂದು ಮನೋಜ್ ನೀನು ಮಾಡಿದ ತಪ್ಪಿಗೆ ಸಾವೇ ನಿನಗೆ ಸರಿಯಾದ ಶಿಕ್ಷೆ ಎಂದು ಹೇಳಿ ನಿಟ್ಟುಸಿರು ಬಿಟ್ಟ.
ಅಷ್ಟರಲ್ಲಿ ಮಳೆ ಸ್ವಲ್ಪ ಕಮ್ಮಿ ಆಗಿತ್ತು. ಆದರೆ ಪೂರ್ಣ ನಿಂತಿರಲಿಲ್ಲ. ಪುರುಷೋತ್ತಮ ಆ ಹಾಳೆಗಳು ಮತ್ತೆ ರಟ್ಟನ್ನು ಜರ್ಕಿನ್ ಒಳಗೆ ಸೇರಿಸಿ ಬೆಟ್ಟ ಇಳಿಯಲು ಶುರು ಮಾಡಿದ. ಆಗಷ್ಟೇ ಬಿದ್ದ ಮಳೆಯಿಂದ ಬೆಟ್ಟ ವಿಪರೀತ ಜಾರುತ್ತಿತ್ತು. ಒಂದೊಂದೇ ಹೆಜ್ಜೆ ಜಾಗರೂಕತೆಯಿಂದ ನೋಡಿ ಇಡುತ್ತಿದ್ದ. ತಾನು ಬರೆದಿದ್ದ ಕಾದಂಬರಿಗೆ ಈ ರೀತಿಯ ಮುಕ್ತಾಯ ಕೊಡಬೇಕಾಗಿ ಬರುತ್ತದೆ ಎಂದು ಪುರುಷೋತ್ತಮ ಕನಸಿನಲ್ಲೂ ಸಹ ಎಣಿಸಿರಲಿಲ್ಲ. ನಿಧಾನವಾಗಿ ಇಳಿದುಕೊಂಡು ಕಾರಿನ ಬಳಿ ಬಂದು ರಟ್ಟು ಮತ್ತು ಹಾಳೆಗಳನ್ನು ಸೀಟಿನ ಮೇಲಿರಿಸಿ ಡ್ಯಾಶ್ ಬೋರ್ಡ್ ತೆಗೆದು ಒಳಗಿನಿಂದ ಕೈಗವಸುಗಳನ್ನು ತೆಗೆದು ಕೈಗೆ ಧರಿಸಿ ಕಾರಿನ ಹಿಂಭಾಗಕ್ಕೆ ಬಂದು ಡಿಕ್ಕಿ ತೆರೆದ. ಒಳಗೆ ಇದ್ದ ಮೂಟೆಯನ್ನು ಹೊರಕ್ಕೆಳೆದ.. ಆಗಲೇ ಸುಮಾರು ಹೊತ್ತಾಗಿದ್ದರಿಂದ ಮೂಟೆ ಬಹಳ ಭಾರವಾಗಿತ್ತು. ಒಮ್ಮೆ ನಿಟ್ಟುಸಿರು ಬಿಟ್ಟು ಸುತ್ತಲೂ ನೋಡಿದ. ಯಾರು ಕಾಣಲಿಲ್ಲ. ನಿಧಾನವಾಗಿ ಮೂಟೆಯನ್ನು ಎಳೆದುಕೊಂಡು ಬಂದು ಅಲ್ಲೇ ಪಕ್ಕದಲ್ಲಿದ್ದ ಕೆರೆಯಲ್ಲಿ ತಳ್ಳಿಬಿಟ್ಟು ಮತ್ತೊಮ್ಮೆ ನಿಟ್ಟುಸಿರು ಬಿಟ್ಟು ಕಾರಿನ ಬಳಿ ಬಂದಾಗ ಮಳೆ ಸಂಪೂರ್ಣ ನಿಂತಿತ್ತು. ಗಾಡಿಯನ್ನು ಬಂದ ದಾರಿಯಲ್ಲೇ ಹಿ೦ದಕ್ಕೆ ತಿರುಗಿಸಿ ಹೈವೇಯಲ್ಲಿ ಮುನ್ನುಗ್ಗುತ್ತಾ ಮತ್ತೊಮ್ಮೆ ರಟ್ಟಿನ ಕಡೆ ನೋಡಿ ಈ ಕಥೆಗೆ "ಅಪೂರ್ಣ" ಶೀರ್ಷಿಕೆ ಸರಿ ಹೊಂದುತ್ತಾ ಎಂದು ಆಲೋಚಿಸುತ್ತಾ ಗಾಡಿ ಓಡಿಸುತ್ತಿದ್ದ.....
ಚಿತ್ರ ಃ ಸ್ವ೦ತದ್ದು.
Comments
ಉ: ಕಥೆ - ಅಪೂರ್ಣ
ಉ: ಕಥೆ - ಅಪೂರ್ಣ
ಉ: ಕಥೆ - ಅಪೂರ್ಣ
In reply to ಉ: ಕಥೆ - ಅಪೂರ್ಣ by kavinagaraj
ಉ: ಕಥೆ - ಅಪೂರ್ಣ