ನಾವು...

ನಾವು...

ಕವನ
ತಿ೦ಗಳಾಯ್ತು  ಅವಳೆನ್ನವಳಾಗಿ
ತು೦ಬುಗೆನ್ನೆಯ ಚೆಲ್ಲುವೆಗೆ೦ಥಾ ಹಿಗ್ಗು
ಬರುವಾಗ ತ೦ದರೆ ಮಲ್ಲಿಗೆಯ ಮೊಗ್ಗು
ಹಾಡುವಳು ನಲಿಯುವಳು ಎನ್ನಮನದರಸಿ
ನೋಡುವೆನು ಅವಳನ್ನೇ ಚ೦ದಿರನ ಸರಿಸಿ
 
ಸಾಗರದೊಳಗಿ೦ದ ರತ್ನವನೆ ತ೦ದಿಹೆನು
ರತ್ನವದು ಬೆಳಗುತಿರೆ ಕಣ್ತು೦ಬ ನೋಡುವೆನು
ನಮ್ಮ ಮನೆಯೊಳಗೆ ಬೆಳಕಾಗಿ ಬ೦ದಿರಲು
ಮಾಧವನ ಕೈಯೊಳಗೆ ನುಡಿಯುತಿದೆ ಕೊಳಲು
 
ಅತ್ತೆ ಮಾವನೊಡನೆ ನಗೆ ಮಾತನಾಡುವಳು
ಚಿಕ್ಕ ಹುಡುಗಿ, ಮುಗ್ಧತೆಯ ಬಿಟ್ಟಿಲ್ಲವಿವಳು
ಅಪ್ಪನಿಗೋ ಬಲು ಹಿಗ್ಗು ನಮ್ಮ ಮನೆಕೂಸೆ೦ದು
ಅಮ್ಮನಿಗೂ ಬಲು ಮುದ್ದು ನಮ್ಮ ಸಿರಿ ಇವಳೆ೦ದು
 
ಮುಖ ಸ್ವಲ್ಪ ಕ೦ದಿದರೂ ಏನಾಯ್ತೆನ್ನುವಳು
ಮನದ ಮಾತನು ವೇಗದಲಿ ಹುಡುಕಿಬಿಡುವಳು
ಯಾರದೋ ಚುಚ್ಚುನುಡಿಗೆ ಇವಳ ಕಿವಿ ಕಿವುಡು
ಕಲಿಯಲೇ ಬೇಕು ನಾನದರ ಬೆಡಗು
 
ಬದುಕುವೆವು ನಮ್ಮೊಳಗೆ ನಾವೊ೦ದಾಗಿ
ಎಲ್ಲರೊಳು ಬೆರೆಯುವೆವು ನಗುನಗುತ ಸಾಗಿ
ಆಡಿಕೊಳ್ಳುವ ನಾಲಿಗೆ ಕಡಿಮೆಯೇ ಇಲ್ಲಿ?

ನಗುವೆವು ಅವರ ಕಿಚ್ಚನ್ನು ದೂರಕ್ಕೆ ತಳ್ಳಿ

Comments