ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ

ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ

ಕವನ

ಆಗಸದ ತುಂಬಾ

ಆಸೆಗಳ ನೇತುಹಾಕಿ

ನನಸಾಗುವ ಸಮಯಕ್ಕಾಗಿ

ಕಾದು ಕುಳಿತಿದ್ದೆ

ಮಿಂಚೊಡೆಯಿತು ಮಳೆಸುರಿಯಿತು

ಎಲ್ಲವೂ ಬಿದ್ದು

ನೀರಲ್ಲಿ ಕೊಚ್ಚಹೋಗಿವೆ

ಹೇಗೆ ಹುಡುಕಲಿ ಹೇಳಿ

ನನ್ನ ಆಸೆಗಳನ್ನು?

 

ಅವಳ ಹೃದಯ ಹದ ಮಾಡಿ

ಬಯಕೆಗಳ ನೆಟ್ಟಿದ್ದೆ

ಚಿಗುರೊಡೆದು

ಮೊಗ್ಗು-ಬಿರಿಯಬಹುದೆಂದು

ಪೊರೆಕೆಯಿಂದ ಅವೆಲ್ಲವನ್ನೂ

ಗುಡಿಸಿಹಾಕಿದ್ದಾಳೆ

ಇನ್ನೆಲ್ಲಿಯ ಬಯಕೆ!

ಇನ್ನೆಲ್ಲಿಯ ಚಿಗುರು!

 

ಜಗತ್ತಿಗೇ

ಬುದ್ಧಿಹೇಳ ಹೊರಟಿದ್ದೆ

ಶಾಂತಿಯಿಂದಿರಿ

ಸಂಯಮ ಕಾಯ್ದುಕೊಳ್ಳಿ

ನಾವು ಮನುಷ್ಯರು!

ಜಾಡಿಸಿ ಒದ್ದರು

ಒಟ್ಟನಲ್ಲಿ

ನಾನು ಗಾಂಧಿಯಾಗಲಿಲ್ಲ

ಬುದ್ಧ ದಾರಿತೋರಲಿಲ್ಲ

 

ಈಗಷ್ಟೆ ಕವನ ಬರೆಯಲು

ಕುಳಿತಿದ್ದೇನೆ

ನಾನು ಕವಿಯಾಗಬೇಕಿದೆ

ಯಾರೂ

ತೊಂದರೆ ಕೊಡಬೇಡಿ

ನನ್ನ ನೆಮ್ಮದಿಯನ್ನು

ನಾನೇ ಹುಡುಕಿಕೊಳ್ಳುತ್ತೇನೆ

Comments