"ಸಾಂಖ್ಯ " - ಹಿಂದೂ ತತ್ವಶಾಸ್ತ್ರದರ್ಶನದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧)

"ಸಾಂಖ್ಯ " - ಹಿಂದೂ ತತ್ವಶಾಸ್ತ್ರದರ್ಶನದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧)

ಈ ಸರಣಿಯ ಹಿಂದಿನ ಲೇಖನ; "ವೈಶೇಷಿಕ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೪ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.

http://sampada.net/blog/%E0%B2%B5%E0%B3%88%E0%B2%B6%E0%B3%87%E0%B2%B7%E0%B2%BF%E0%B2%95-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AA-%E0%B3%A8/07/04/2012/36282

==============================================================================                       
ಪರಿಚಯ
   
    ತನ್ನ ಚಿಂತನೆಗಳನ್ನು ಪ್ರತಿಪಾದಿಸಿ, ತದನಂತರ ಉಪನಿಷತ್ತುಗಳಲ್ಲಿ ಉಲ್ಲೇಖಿಸಿರುವ ವಾಕ್ಯಗಳ ಆಧಾರದಿಂದ ಅವುಗಳನ್ನು ಗಟ್ಟಿಗೊಳಿಸಿ ಬ್ರಹ್ಮಸೂತ್ರವನ್ನು ರಚಿಸಿರುವ ಬಾದರಾಯಣನು ತನ್ನ ಟೀಕೆಯನ್ನು ಸಾಂಖ್ಯ ಪದ್ಧತಿಯೊಂದಿಗೆ ಪ್ರಾರಂಭಿಸಿದ್ದಾನೆ (೨.೨.೧). ಬ್ರಹ್ಮಸೂತ್ರದ ೧.೪.೨೮ ಶ್ಲೋಕಕ್ಕೆ ಭಾಷ್ಯವನ್ನು ಬರೆಯುತ್ತಾ ಆದಿ ಶಂಕರರು (ಕ್ರಿ.ಶ. ೭೮೮-೮೨೦) ತಮ್ಮ ಟೀಕೆಗೆ ಸಾಂಖ್ಯ ಪದ್ಧತಿಯನ್ನು, "ಪ್ರಧಾನ-ಮಲ್ಲ-ನಿಭರ್ಹಣ-ನ್ಯಾಯೇನ" ಅಂದರೆ "ಪ್ರಧಾನ ಜಟ್ಟಿಯನ್ನು ಸೋಲಿಸುವ ತರ್ಕ"ಕ್ಕನುಗುಣವಾಗಿ ಆರಿಸಿಕೊಂಡೆನೆಂದು ತಿಳಿಸುತ್ತಾರೆ. "ಒಬ್ಬ ಹೆಸರುವಾಸಿಯಾದ ಜಟ್ಟಿಯು ತನ್ನ ವಿರುದ್ಧ ಪಾಳಯದ ಪ್ರಧಾನ ಜಟ್ಟಿಯನ್ನು ಮೊದಲು ಸೋಲಿಸಿದರೆ, ಉಳಿದವರೊಂದಿಗೆ ಸೆಣಸುವ ಅವಶ್ಯಕತೆಯೇ ಇಲ್ಲದೆ ಅವರೆಲ್ಲರನ್ನೂ ಪರಾಭವಗೊಳಿಸಿದಂತೆ". ಇದು ಸಾಂಖ್ಯ ದರ್ಶನದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
   
    ಸನಾತನವಾಗಿ ಲಭ್ಯವಿರುವ ಆಧಾರದ(ಭಾಗವತ ೩.೨೫-೩೩) ಪ್ರಕಾರ ಈ ಪದ್ಧತಿಯು ಕಪಿಲ ಮುನಿಯಿಂದ ಸ್ಥಾಪಿಸಲ್ಪಟ್ಟಿತು. ಅವನ ಮೂಲಕ ನಮಗೆ ಹರಿದು ಬಂದಿರುವ ಕೃತಿಯೆಂದರೆ 'ಸಾಂಖ್ಯಸೂತ್ರ'ಗಳು. ನಿರ್ವಿವಾದವಾಗಿ ಇದು ಇತ್ತೀಚಿನ ಕೃತಿ. ಅದು ಆರು ಅಧ್ಯಾಯಗಳನ್ನು ಒಳಗೊಂಡು ಅವೆಲ್ಲವುಗಳಿಂದ ೫೨೬ ಸೂತ್ರಗಳನ್ನು ಹೊಂದಿದೆ. ವಿಜ್ಞಾನಭಿಕ್ಷು (ಕ್ರಿ.ಶ. ೧೬ನೇ ಶತಮಾನ) ಇದಕ್ಕೆ 'ಸಾಂಖ್ಯ ಪ್ರವಚನ ಭಾಷ್ಯ' ಎನ್ನುವ ವ್ಯಾಖ್ಯಾನ ಗ್ರಂಥವನ್ನು ಬರೆದಿದ್ದಾನೆ.
   
    ಸಾಂಖ್ಯ ಪದ್ಧತಿಯ ಸಿದ್ಧಾಂತವು ಕಪಿಲನ ಶಿಷ್ಯನಾದ ಆಸುರಿ ಮತ್ತವನ ಶಿಷ್ಯನಾದ ಪಂಚಶಿಖ ಇವರ ಮೂಲಕ ಪ್ರಾಮುಖ್ಯತೆ ಹಾಗು ಪ್ರಚುರತೆಯನ್ನು ಪಡೆಯಿತು. ಪಂಚಶಿಖನ ಕೆಲವು ಸೂತ್ರಗಳನ್ನು ಕ್ರಿಸ್ತ ಶಕದಲ್ಲಿ ಬರೆಯಲ್ಪಟ್ಟಿರುವ ವ್ಯಾಸಭಾಷ್ಯ ಗ್ರಂಥದಲ್ಲಿ; ಪಾತಂಜಲಿಯ ಯೋಗಸೂತ್ರ(ಕ್ರಿ.ಪೂ.೨೦೦)ಕ್ಕೆ ಬರೆದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಪಂಚಶಿಖನ ಸಂಪೂರ್ಣ ಕೃತಿಯು ನಮಗೆ ಇದುವರೆವಿಗೂ ಲಭ್ಯವಾಗಿಲ್ಲ.
   
    ಈಶ್ವರಕೃಷ್ಣ (ಕ್ರಿ.ಶ. ೫ನೇ ಶತಮಾನ) ರಚಿಸಿದ 'ಸಾಂಖ್ಯಕಾರಿಕಾ' ಕೃತಿಯೇ ಸಾಂಖ್ಯ ದರ್ಶನದ ಬಗ್ಗೆ ಇದುವರೆಗೆ ನಮಗೆ ದೊರೆತಿರುವ ನಂಬಲರ್ಹವಾದ ಕೃತಿಯೆಂದು ನಿರ್ವಿವಾದವಾಗಿ ಹೇಳಬಹುದು. ಇದರಲ್ಲಿ ಆರ್ಯಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಎಪ್ಪತ್ತು ಪಂಕ್ತಿಗಳಿವೆ, ಆದ್ದರಿಂದ ಅದನ್ನು ಕೆಲವೊಮ್ಮೆ 'ಸಾಂಖ್ಯ ಸಪ್ತತಿ' ಎಂದೂ ಕರೆದಿದ್ದಾರೆ. ಇದರಲ್ಲಿ ಸಂಕ್ಷಿಪ್ತವಾದರೂ ವಿದ್ವತ್ಪೂರ್ಣವಾಗಿ ಮತ್ತು ಸರಳವಾಗಿ ಸಿದ್ಧಾಂತಗಳನ್ನು ಪ್ರಚುರಪಡಿಸಲಾಗಿದೆ. 'ಸಾಂಖ್ಯಕಾರಿಕಾ' ಕೃತಿಗೆ ಎರಡು ಪ್ರಸಿದ್ಧ ಭಾಷ್ಯಗಳು ಇವೆ, ಅವೆಂದರೆ ಗೌಡಪಾದ (ಕ್ರಿ.ಶ. ೭೦೦) ವಿರಚಿತ 'ಸಾಂಖ್ಯಕಾರಿಕಾ ಭಾಷ್ಯ' ಮತ್ತು ವಾಚಸ್ಪತಿಯ(ಕ್ರಿ.ಶ. ೮೪೦) 'ಸಾಂಖ್ಯತತ್ವ ಕೌಮುದಿ'. ವಿಜ್ಞಾನಭಿಕ್ಷುವಿನ 'ಸಾಂಖ್ಯಸಾರ' ಮತ್ತು ಅನಿರುದ್ಧನ(ಕ್ರಿ.ಶ. ೧೫ನೆ ಶತಮಾನ) 'ಸಾಂಖ್ಯಪ್ರವಚನಸೂತ್ರಾವೃತ್ತಿ' ಹೆಸರಿಸಬಹುದಾದ ಇತರ ಮುಖ್ಯ ಕೃತಿಗಳು.

ಹೆಸರಿನ ಪ್ರಾಮುಖ್ಯತೆ
   
    ಸಾಂಖ್ಯ ಶಬ್ದದ ವ್ಯುತ್ಪತ್ತಿ ಒಂದು ಒಗಟಿನಂತೆ ತೋರುತ್ತದೆ. ಈ ಪದ್ಧತಿಯು ಸೃಷ್ಟಿ ರಚನೆಯಲ್ಲಿ ೨೪ 'ಸಂಖ್ಯೆ'ಯ ಅಂತಿಮ ತತ್ವಗಳಿವೆ ಎಂದು ಪ್ರತಿಪಾದಿಸುವುದರಿಂದ 'ಸಾಂಖ್ಯ' ಎನ್ನುವುದು 'ಸಂಖ್ಯಾ' ಶಬ್ದದಿಂದ ವ್ಯುತ್ಪತ್ತಿಯಾಗಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇತರರು ಅಭಿಪ್ರಾಯ ಪಡುವಂತೆ, ಸಾಂಖ್ಯ ದರ್ಶನವು 'ಜ್ಞಾನ' ಅಥವಾ 'ಅರಿವು' ಮಾತ್ರವೇ ಮುಕ್ತಿಗೆ ಸಾಧನವೆಂದು ಒತ್ತಿ ಹೇಳುವುದರಿಂದ ಈ ಶಬ್ದದ ವ್ಯುತ್ಪತ್ತಿಯು ಸಂಖ್ಯಾ ಎಂದರೆ ಜ್ಞಾನ (ಸಮ್ಯಕ್ ಖ್ಯಾಯತೇ ಇತಿ ಜ್ಞಾನಃ) ಎನ್ನುವ ಧಾತುವಿನಿಂದ ಬಂದಿದೆ ಎನ್ನುವುದು ಹೆಚ್ಚು ಸೂಕ್ತವಾಗಿದೆ.  

ಪ್ರಮಾಣಗಳು ಅಥವಾ ಜ್ಞಾನದ ವಿಧಗಳು
   
    ಇತರೆ ದರ್ಶನಗಳಂತಲ್ಲದೆ ಸಾಂಖ್ಯವು ಕೇವಲ ಮೂರು ಪ್ರಮಾಣಗಳು ಅಥವಾ ನಂಬಲರ್ಹವಾದ ಜ್ಞಾನದ ಮೂಲಗಳನ್ನು ಒಪ್ಪಿಕೊಳ್ಳುತ್ತದೆ. ಅವೆಂದರೆ ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ಕ್ರಮಬದ್ಧ ನಿಷ್ಕರ್ಷೆ) ಮತ್ತು ಶಬ್ದ (ವಾಕ್ಯ ಪ್ರಮಾಣ).
   
    ಪ್ರತ್ಯಕ್ಷಾನುಭವವೆನ್ನುವುದು ಒಂದು ವಸ್ತುವು ಯಾವುದಾದರೊಂದು ಗ್ರಹಣೇಂದ್ರಿಯದೊಂದಿಗೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ನೇರವಾದ ಅರಿವು ಅಥವಾ ತಿಳುವಳಿಕೆ. ಉದಾಹರಣೆಗೆ: ಕಣ್ಣು ಮೇಜನ್ನು ನೋಡುವುದು ಅಥವಾ ಕಿವಿಗಳು ಹಕ್ಕಿಗಳ ಚಿಲಿಪಿಲಿಯನ್ನು ಕೇಳುವುದು. ಮೊದಲನೆಯ ಸಂಪರ್ಕವು ಸಾಮಾನ್ಯ ಜ್ಞಾನವನ್ನು ಒದಗಿಸಬಹುದು. ಇದನ್ನೇ 'ನಿರ್ವಿಕಲ್ಪಕ'(ಅಸ್ಪಷ್ಟ ಜ್ಞಾನ) ಎನ್ನುತ್ತಾರೆ. ಯಾವಾಗ ವಸ್ತುವನ್ನು ಹತ್ತಿರದಿಂದ, ಗಮನ ಮತ್ತು ವಿವೇಚನೆಯಿಂದ ನೋಡುತ್ತೇವೆಯೋ ಆಗ ಆ ವಸ್ತುವಿನ ಬಗ್ಗೆ ನಿಚ್ಚಳವಾದ ತಿಳುವಳಿಕೆ/ಅರಿವು ಉಂಟಾಗುತ್ತದೆ. ಅದನ್ನೇ 'ಸವಿಕಲ್ಪಕ'(ಸ್ಪಷ್ಟವಾದ ಜ್ಞಾನ) ಎನ್ನುತ್ತಾರೆ. ಒಂದು ಮೇಜನ್ನು ನೋಡಿದಾಗ, ಬರುವ ಮೊದಲ ಪ್ರಕ್ರಿಯೆ 'ನಾನು ಒಂದು ವಸ್ತುವನ್ನು ನೋಡುತ್ತಿದ್ದೇನೆ', ಆಮೇಲೆ ಅದರ ಬಗ್ಗೆ ಸ್ಪಷ್ಟತೆ ಮೂಡುತ್ತದೆ, "ಹ್ಞೋ! ಇದು ಒಂದು ಮರದಿಂದ ತಯಾರಾದ ಮೇಜು ಮತ್ತು ಅದರ ಮೇಲೆ ಒಂದು ಕೆಂಪು ಬಟ್ಟೆಯು ಹೊದಿಸಲ್ಪಟ್ಟಿದೆ". ಇಲ್ಲಿ ಮೊದಲನೆಯದು 'ನಿರ್ವಿಕಲ್ಪಕ-ಪ್ರತ್ಯಕ್ಷ' ಮತ್ತು ಎರಡನೆಯದು 'ಸವಿಕಲ್ಪಕ-ಪ್ರತ್ಯಕ್ಷ'.
   
    ಅನುಮಾನ ಅಥವಾ ನಿಷ್ಕರ್ಷೆ ಎನ್ನುವುದು ಎರಡನೆಯ ಜ್ಞಾನದ ಮೂಲ. ಮೊದಲು ಯಾವುದಾದರೂ ಸಂಜ್ಞೆಯನ್ನು (ಸಂಕೇತವನ್ನು) ನೋಡಿ ನಿಷ್ಕರ್ಷೆಮಾಡಿ ಅದರ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳುವುದು(ಜ್ಞಾನವನ್ನು ಪಡೆಯುವುದು) ಅನುಮಾನದ ವಿಧಾನ. ಬಹುತೇಕ ಎಲ್ಲ ತತ್ವಶಾಸ್ತ್ರಜ್ಞರು ಅನುಮಾನಕ್ಕೆ ಕೊಡುವ ಸಾಮಾನ್ಯ ಉದಾಹರಣೆಯೆಂದರೆ, ದೂರದಲ್ಲಿರುವ ಬೆಟ್ಟದ ಮೇಲೇಳುತ್ತಿರುವ ಹೊಗೆಯಿಂದ ಅಲ್ಲಿ ಬೆಂಕಿಯಿದೆ ಎಂದು ನಿಷ್ಕರ್ಷೆ ಅಥವಾ ಕ್ರಮಬದ್ಧವಾದ ಊಹೆಯಿಂದ ತಿಳಿದುಕೊಳ್ಳುವುದು.  ನಮ್ಮ ಪೂರ್ವಾನುಭವವು ಎಲ್ಲೆಲ್ಲಿ ಹೊಗೆಯಿತ್ತೋ ಅಲ್ಲೆಲ್ಲಾ ಬೆಂಕಿಯಿತ್ತು ಎನ್ನುವುದನ್ನು ಪ್ರತ್ಯಕ್ಷ ಗ್ರಹಿಕೆಯಿಂದ ತಿಳಿಸಿ ಕೊಟ್ಟಿರುತ್ತದೆ, ಆದ್ದರಿಂದ ಇಲ್ಲಿ ಹೊಗೆಯನ್ನು ನೋಡಿ ಅಲ್ಲಿ ಬೆಂಕಿ ಇದೆ ಎನ್ನುವ ನಿರ್ಧಾರಕ್ಕೆ ಬರುತ್ತೇವೆ; ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಕೂಡ. ಗೋಚರವಾದ ವಸ್ತುವಿಗೆ ಮತ್ತು ಅಗೋಚರವಾದ ವಸ್ತುವಿಗೆ ಅವಿನಾಭಾವ ಅಥವಾ ಬೇರ್ಪಡಿಸಲಾಗದ ಸಂಭಂದ (ಇಲ್ಲಿ ಹೊಗೆ ಮತ್ತು ಬೆಂಕಿ) ಇರಬೇಕಾದದ್ದು ಈ ಪದ್ಧತಿಯಲ್ಲಿನ ಪೂರ್ವನಿಯಮ.
   
    ಶಬ್ದ ಅಥವಾ ವಾಕ್ಯದ ಆಧಾರವು ಪ್ರಮಾಣಗಳಲ್ಲಿ ಮೂರನೆಯದು ಮತ್ತು ಅಂತಿಮವಾದದ್ದು. ಈ ಆಧಾರವು ಒಬ್ಬ ನಂಬಲರ್ಹ ವ್ಯಕ್ತಿಯ ನುಡಿ. ಇದನ್ನು 'ಅಲೌಕಿಕ ಶಬ್ದ' ಅಥವಾ 'ಆಪ್ತವಾಕ್ಯ' ಎಂದೂ ಕರೆಯುತ್ತಾರೆ. ನಂಬಲರ್ಹವಾದ ಆ ವ್ಯಕ್ತಿಯ ಗ್ರಹಿಕೆ ಮತ್ತು ನಿಷ್ಕರ್ಷೆಯ ಮೇಲೆ ಇದು ಅವಲಂಬಿತವಾಗಿರುವದರಿಂದ, ಸಾಂಖ್ಯ ಶಾಸ್ತ್ರವು ಈ ರೀತಿಯ ಆಧಾರವನ್ನು ಪ್ರತ್ಯೇಕ ಪ್ರಮಾಣವೆಂದು ಪರಿಗಣಿಸುವುದಿಲ್ಲ. ಆದರೆ ವಾಕ್ಯ ಅಥವಾ ಶ್ರುತಿಗಳ ಪ್ರಮಾಣ ಅಂದರೆ ವೇದಗಳ ಆಧಾರಗಳನ್ನು ಸಾಂಖ್ಯ ದರ್ಶನವು ಪ್ರತ್ಯೇಕ ಮತ್ತು ಅಂತಿಮ ಪ್ರಮಾಣವೆಂದು ಒಪ್ಪಿಕೊಳ್ಳುತ್ತವೆ. ವೇದಗಳು ನಮಗೆ ಇಂದ್ರಿಯಗೋಚರವಲ್ಲದ ಸತ್ಯಗಳ ಬಗ್ಗೆ ನಿಜವಾದ ಜ್ಞಾನವನ್ನು ಒದಗಿಸುತ್ತವೆ; ಈ ಸತ್ಯಗಳು ನಮಗೆ 'ಪ್ರತ್ಯಕ್ಷ' ಅಥವಾ 'ಅನುಮಾನ' ಪ್ರಮಾಣಗಳ ಮೂಲಕ ಅರಿಯಲಾಗದವುಗಳು. ವೇದಗಳು ಅಪೌರುಷೇಯವೂ (ಮನುಷ್ಯ ನಿರ್ಮಿತವಾಗಿರದೆ ಅಲೌಕಿಕವಾದವುಗಳಾಗಿವೆ) ಹಾಗು ದೋಷರಹಿತವಾದವುಗಳೂ ಆಗಿವೆ. ಇವುಗಳು ಬ್ರಹ್ಮಜ್ಞಾನವನ್ನು ಕಂಡುಕೊಂಡ ಮಹಾನ್ ಋಷಿಗಳ ಆಂತರ್ಯದ ವಾಣಿಗಳಾಗಿವೆ.
   
ಪ್ರಮೇಯಗಳು ಅಥವಾ ತಿಳಿಯಬೇಕಾದ ವಸ್ತುಗಳು
   
    "ಗೋಚರದಿಂದ ಅಗೋಚರದೆಡೆಗೆ ಅಥವಾ ತಿಳಿದದ್ದರಿಂದ ತಿಳಿಯದಿರುವದರೆಡೆಗೆ" ಎನ್ನುವ ತತ್ವವನ್ನಾಧರಿಸಿ ಸಾಂಖ್ಯ ಪಾರಮಾರ್ಥಿಕ ಶಾಸ್ತ್ರವು ನಮ್ಮ ಅನುಭವಕ್ಕೆ ಬರುವ ಎಲ್ಲ ರೀತಿಯ ವಾಸ್ತವ ಸಂಗತಿಗಳನ್ನು ಮೂಲಭೂತವಾಗಿ ಎರಡು ನಿತ್ಯವಾದ ವಸ್ತುಗಳಿಗೆ ಇಳಿಸುತ್ತದೆ; ಅವೆಂದರೆ ಪ್ರಕೃತಿ ಮತ್ತು ಪುರುಷ. ಪ್ರಧಾನ ಮತ್ತು ಅವ್ಯಕ್ತವೆಂದೂ ಕರೆಯಲ್ಪಡುವ -  ಎಲ್ಲಾ ಜೀವರಹಿತ ಜಡ ವಸ್ತುಗಳು ಹಾಗೂ ಅವುಗಳ ಸಂಕೀರ್ಣತೆಗಳಿಂದೊಡಗೂಡಿ 'ಅಚೇತನ'ವಾಗಿರುವುದು 'ಪ್ರಕೃತಿ' ಮತ್ತು ಚೇತನದಿಂದೊಡಗೂಡಿದ ಜೀವಿ ಅಥವಾ ಆತ್ಮನೇ 'ಪುರುಷ'.
   
    ಈ ರೀತಿ ಕೇವಲ ಎರಡು ನಿತ್ಯ ವಸ್ತುಗಳಿವೆ ಎಂಬ ನಿರ್ಣಯದ ಹಿಂದಿರುವ ಮೂಲಭೂತವಾದ ವಾದವನ್ನು 'ಸತ್ಕಾರ್ಯವಾದ' ತತ್ವ ಎನ್ನುತ್ತಾರೆ. ಈ ತತ್ವವು 'ಕಾರ್ಯ'ವು ಅನಾವರಣಗೊಳ್ಳುವ ಮೊದಲೇ 'ಕಾರಣ'ದಲ್ಲಿ 'ಪೂರ್ವದಲ್ಲಿಯೇ ಇತ್ತು' (ಸತ್) ಎಂದು ತಿಳಿಸುತ್ತದೆ. ಉದಾಹರಣೆಗೆ, ಒಂದು ಮಡಕೆಯನ್ನು ನಾವು ಮಣ್ಣಿನಿಂದ ತಯಾರಿಸಿದಾಗ, ಆ ಮಣ್ಣಿನಲ್ಲಿ ಮಡಕೆಯು ಅದಾಗಲೇ ಇತ್ತು; ಸುಪ್ತಾವಸ್ಥೆಯಲ್ಲಿದ್ದರೂ ಕೂಡಾ. ಇದರ ಹಿಂದಿರುವ ಮುಖ್ಯ ತರ್ಕವೆಂದರೆ ಯಾವುದೇ ವಸ್ತುವಿಲ್ಲದೇ ಇನ್ನೊಂದು ವಸ್ತುವನ್ನು ಸೃಷ್ಟಿಸಲಾಗದು (ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು).
   
    ಈ ರೀತಿಯ ವಾದವನ್ನು ನಮ್ಮ ಅನುಭವಕ್ಕೆ ಬರುವ ಪ್ರಪಂಚದ ವಿವಿಧ ವಸ್ತುಗಳಿಗೆ ಅನ್ವಯಿಸಿದಾಗ ಎಲ್ಲಾ ವಸ್ತುಗಳಿಗೆ ಮೂರು ರೀತಿಯ ಸ್ಥಿತಿಗಳಿವೆ - ಆನಂದ, ದುಃಖ ಮತ್ತು ಅನಾಸಕ್ತಿ ಎಂದು ತಿಳಿಯುತ್ತದೆ. ಆದ್ದರಿಂದ ಸಾಂಖ್ಯ ದರ್ಶನವು ಈ ಮೂರು ಸ್ಥಿತಿಗಳು ಮೂಲಭೂತವಾಗಿ ಯಾವುದೋ ಸೂಕ್ಷ್ಮ ವಸ್ತುವಿನಿಂದ ರೂಪುಗೊಂಡಿರಬೇಕೆಂದು ಭಾವಿಸುತ್ತದೆ. ಈ ಸ್ಥಿತಿಗಳನ್ನೇ ಸಾಂಖ್ಯವು ಗುಣಗಳೆಂದು ಕರೆಯುತ್ತದೆ- ಸತ್ವಗುಣ (ಸಂತೋಷ ಅಥವಾ ಆನಂದವನ್ನು ಉಂಟುಮಾಡುತ್ತದೆ), ರಜೋಗುಣ (ನೋವು ಅಥವಾ ಯಾತನೆಯನ್ನು ಉಂಟುಮಾಡುತ್ತದೆ) ಮತ್ತು ತಮೋಗುಣ (ಎರಡನ್ನೂ ಉಂಟುಮಾಡುವುದಿಲ್ಲ).
   
    ಈ ಮೂರೂ ಗುಣಗಳು ಭೌತಿಕ ವಾಸ್ತವತೆಗಳಿಗೆ ಪ್ರತೀಕವಾಗಿವೆ. ಸತ್ವವು ಎಲ್ಲಾ ಶುದ್ಧವಾದ ಒಳ್ಳೆಯ ವಸ್ತುಗಳನ್ನು ಪ್ರತಿನಿಧಿಸುತ್ತದೆ ಮತ್ತು ಜ್ಞಾನ ಹಾಗು ಆನಂದವನ್ನು ಉಂಟು ಮಾಡುತ್ತದೆ. ರಜೋಗುಣವು ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ. ಅದು ಎಲ್ಲಾ ರೀತಿಯ ಆಸೆ ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹಾಗೂ ಒಬ್ಬರು ಕಾರ್ಯತತ್ಪರರಾಗಿರಲು ಕಾರಣೀಭೂತವಾಗಿದೆ. ತಮಸ್ಸು ಜಡತೆಯಿಂದ ಕೂಡಿದ್ದು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಅದು ನಿದ್ರೆ ಮತ್ತು ಆಲಸ್ಯಡೆಗೆ ಕೊಂಡೊಯ್ಯುತ್ತದೆ.
   
    ಈ ಮೂರೂ ಗುಣಗಳು ಯಾವಾಗಲೂ ಒಟ್ಟಿಗೇ ಇದ್ದು ಅವು ಯಾವಾಗಲೂ ಬೇರ್ಪಡುವುದಿಲ್ಲ. ಯಾವಾಗ ಈ ಮೂರೂ ಗುಣಗಳು - ಮೇಲ್ನೋಟಕ್ಕೆ ತೋರುವಂತೆ ಯಾವಾಗಲೂ ಗೊಂದಲದಲ್ಲಿದ್ದಂತೆ ಕಂಡುಬಂದರೂ, ವಾಸ್ತವವಾಗಿ ಇವು ನಿಶ್ಚಿತವಾದ ಸಮತುಲ್ಯ ಸ್ಥಿತಿಯಲ್ಲಿದ್ದು, ಒಂದಕ್ಕೆ ಮತ್ತೊಂದು ತೊಡಕುಂಟು ಮಾಡದೆ, ತಮ್ಮೊಳಗೆ ನಿರಂತರ ಚಲನೆ ಅಥವಾ ನಿತ್ಯ ಚಟುವಟಿಕೆಯಿಂದ ಕೂಡಿರುತ್ತವೋ ಆಗ ಅದು ಪ್ರಕೃತಿ ಅಥವಾ ಪ್ರಧಾನವಾಗುತ್ತವೆ. ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಮೂರು ಗುಣಗಳ ನಿಶ್ಚಿತವಾದ ಸಮತುಲ್ಯ ಸ್ಥಿತಿಯೇ ಪ್ರಕೃತಿ.
   
    ಈ ಪ್ರಕೃತಿಯು ಮೂಲ ಧಾತು ಅಥವಾ ಪ್ರಾರಂಭಿಕ ವಸ್ತುವಾಗಿದ್ದು ಇದರಿಂದಲೇ ವಿಶ್ವದ ಉಗಮವಾಗುತ್ತದೆ. ಅದು ಜಡ ಎಂದರೆ ಅಚೇತನವಾದದ್ದು. ಮತ್ತೊಂದು ವಸ್ತುವಾದ 'ಪುರುಷ'ನು ಚೈತನ್ಯದಿಂದ ಒಡಗೂಡಿದ ವಸ್ತು ಅಥವಾ ಅದರ ಸ್ವಭಾವವೇ ಚೇತನ. 'ಪುರುಷ'ನು ನಿತ್ಯ ನಿರಂತರನಾಗಿದ್ದು, ನಿತ್ಯ ಶುದ್ದನೂ, ನಿತ್ಯ ಮುಕ್ತನೂ (ಅಸಂಗನು ಅಥವಾ ಭಂದನಕ್ಕೊಳಗಾಗದವನು) ಮತ್ತು ಸರ್ವಾಂತರಯಾಮಿಯಾಗಿದ್ದಾನೆ. ಎಷ್ಟು ಜೀವಿಗಳಿವೆಯೋ ಅಷ್ಟು ಲೆಕ್ಕವಿಲ್ಲದಷ್ಟು ಪುರುಷರು ಅಥವಾ ಆತ್ಮಗಳು ಇವೆ.

                                                                                                                                   ಮುಂದುವರಿಯುತ್ತದೆ..........
============================================================================================================   ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Sankhya Darshanaನದ 31 ರಿಂದ 37ನೆಯ ಪುಟದ ಅನುವಾದದ ಭಾಗ.

ಈ ಲೇಖನದ ಮುಂದಿನ ಭಾಗ "ಸಾಂಖ್ಯ " - ಹಿಂದೂ ತತ್ವಶಾಸ್ತ್ರದರ್ಶನದ ಆರು ಪದ್ಧತಿಗಳು: ಒಂದು ಪರಿಚಯ  ಭಾಗ - ೫ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.

http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A8/13/04/2012/36366

 

 

  
=========================================================================================

Rating
Average: 5 (1 vote)

Comments