' ರಾಮನ ಸೈಕಲ್ ಸವಾರಿ '(ಕಥೆ) ಭಾಗ 2

' ರಾಮನ ಸೈಕಲ್ ಸವಾರಿ '(ಕಥೆ) ಭಾಗ 2


                        



     ದೀಪಾವಳಿ ಹಬ್ಬದ ನರಕ ಚತುರ್ದಶಿಯಂದು ಬೆಳಿಗ್ಗೆ ಅರುಣೋದಯ ಕಾಲದಲ್ಲಿ ಆರತಿ ಮಾಡಿಸಿಕೊಳ್ಳುವ ವೇಳೆ ಆರತಿ ತಟ್ಟೆಗೆ ಹಾಕಲೆಂದು ಕೊಟ್ಟಿದ್ದ ಬೆಳ್ಳಿಯ ಒಂದು ರೂಪಾಯಿಯ ನಾಣ್ಯವನ್ನು ರಾಮ ಮರಳಿ ಆರತಿ ತಟ್ಟೆಗೆ ಹಾಕಲಿಲ್ಲ. ಆರತಿ ಕಾರ್ಯಕ್ರಮದ ನಂತರ ಮನೆಯಲ್ಲಿ ಹೆಣ್ಣುಮಕ್ಕಳು ಆರತಿ ತಟ್ಟೆಯಲ್ಲಿಯ ಹಣವನ್ನು ಎಣಿಸಿದಾಗ ಒಂದು ನಾಣ್ಯ ಕಡಿಮೆ ಇದ್ದುದು ಕಂಡು ಬಂತು. ಸಣ್ಣ ಮಕ್ಕಳೆಲ್ಲರ ವಿಚಾರಣೆ ನಡೆದಾಗ ರಾಮ ಆರತಿ ತಟ್ಟೆಗೆ ನಾಣ್ಯವನ್ನು ಹಾಕದೆ ಹಾಗೆ ಇಟ್ಟುಕೊಂಡ ವಿಷಯ ರಾಮನ ತಂಗಿ ಜಾಹ್ನವಿಯಿಂದ ತಿಳಿದು ಬಂತು. ಮೊದ ಮೊದಲು ರಾಮ ತಾನು ಹಣವನ್ನು ತಟ್ಟೆಗೆ ಹಾಕಿರುವುದಾಗಿ ವಾದಿಸಿದ. ಆದರೆ ಯವಾಗ ತಂಗಿ ಜಾಹ್ನವಿ ಸಾಕ್ಷಿ ಹೇಳಿದಳೋ ನಿರುಪಾಯನಾದ ರಾಮ ತನಗೆ ಸೈಕಲ್ ಕಲಿಯಲು ಹಣ ಬೇಕೆಂದು ವಾದಿಸಿದ. ತಂಗಿಯ ಮೇಲೆ ಸಿಟ್ಟಾದ. ಆದರೂ ಮನೆಯ ಹೆಂಗಸರೆಲ್ಲ ಆತನ ಮನ ಒಲಿಸಿ ಆತನಿಂದ ಆ ಬೆಳ್ಳಿ ನಾಣ್ಯವನ್ನು ಮರಳಿ ಪಡೆದರು.


     ಬಲಿ ಪಾಡ್ಯಮಿಯ ನಂತರ ಬರುವ ಮೊದಲನೆ ಶುಕ್ರವಾರದಂದು ಪ್ರತಿವರ್ಷ ತಾಯವ್ವನ ಜಾತ್ರೆ ನಡೆಯು ವುದು ಸರ್ವೆಸಾಮಾನ್ಯ. ಎಲ್ಲರ ಮನೆಗಳಲ್ಲಿ ಒಂದು ವಾರ ಮೊದಲೆ ಜಾತ್ರೆಯ ತಯಾರಿ ಪ್ರಾರಂಭವಾಗುತ್ತದೆ. ರಾಮನ ಮನೆಯಲ್ಲಿಯೂ ಮೂಡಲ ಎತ್ತುಗಳ ಕೋಡು ಕೆತ್ತಿಸಿ ಹಿತ್ತಾಳೆಯ ಅಣಸುಗಳನ್ನು ಹಾಕಿ ಕೋಡುಗಳಿಗೆ ಕೆಂಪು ಬಣ್ಣವನ್ನು ಹಚ್ಚಿದರು. ಜಾತ್ರೆಗೆ ಕೊಲ್ಲಾರಿ ಕಟ್ಟಿದ ಎತ್ತಿನ ಗಾಡಿಯಲ್ಲಿ ಹೋಗುವುದು ಎಂದು ನಿರ್ಧಾರ ವಾಯಿತು. ರಾಮ ಜಾತ್ರೆಯ ಆಗಮನದ ದಿನಗಳನ್ನು ಎಣಿಕೆ ಹಾಕತೊಡಗಿದ. ಜಾತ್ರೆಯ ಖರ್ಚಿಗೆ ಕೊಡುವ ಹಣ ಯಾವಾಗ ತನ್ನ ಕೈಗೆ ಬರುವುದೋ ಎನ್ನುವ ಕಾತರದಲ್ಲಿದ್ದ. ಜಾತ್ರೆಯ ಹಿಂದಿನ ದಿನವಾದ ಗುರುವಾರದಂದು ಜಾತ್ರೆಗೆಂದು ರಾಮನ ತಂದೆ ಭೀಮಯ್ಯ ಒಂದಾಣೆಯನ್ನು ಕೊಟ್ಟರು. ರಾಮ ತನ್ನ ತಾಯಿ ದೊಡ್ಡಮ್ಮರ ಹತ್ತಿರ ತನಗೆ ಜಾತ್ರೆಗೆ ಒಟ್ಟು ನಾಲ್ಕಾಣೆ ಬೇಕೆಂದು ತಗಾದೆ ಮಾಡಿದ. ಅವರಿಂದ ಒಂದೊಂದಾಣೆಯನ್ನು ಪಡೆದ ರಾಮ ಜಾತ್ರೆಯ ದಿನ ಬೆಳಿಗ್ಗೆ ಗೊರಟಿಗೆಯ ಗಿಡದ ಹತ್ತಿರ ಹೂಗಳನ್ನು  ಬಿಡಿಸುತ್ತ ನಿಂತಿದ್ದ ಅಜ್ಜಿಯ ಬಳಿಗೆ ಹೋದ. ಆಕೆ ಸುತ್ತೆಲ್ಲ ಗಮನಿಸಿ ಮೆಲ್ಲಗೆ ಒಂದಾಣೆಯನ್ನು ಆತನಿಗೆ ಕೊಟ್ಟಳು. ಇದನ್ನು ಯಾರಿಗೂ ಹೇಳಬೇಡ, ನಿನ್ನ ತಂಗಿಗೆ ಗೊತ್ತಾದರೆ ಆಕೆ ತನಗೂ ಹಣ ಬೇಕೆಂದು ರಂಪ ಮಡುತ್ತಾಳೆ ಎಂದಳು.  ರಾಮ ಮೆಲ್ಲಗೆ ಅದನ್ನು ತನ್ನ ಚೊಣ್ಣದ  ಜೋಬಿಗೆ ಇಳಿಸಿದ. ಜಾತ್ರೆಗೆಂದು ಒಟ್ಟು ನಾಲ್ಕಾಣೆ ದೊರೆತದ್ದು ಆತನಿಗೆ ಸಂತಸ ತಂದಿತ್ತು.


     ಆ ದಿನ ಬೆಳಿಗ್ಗೆ ಆಳುಮಗ ಪರಸಪ್ಪ ಎತ್ತುಗಳನ್ನು ಬಿಟ್ಟಕೊಂಡು ಕೆರೆಗೆ ಒಯ್ದು ಚೆನ್ನಾಗಿ ಅವುಗಳ ಮೈತೊಳೆದು ತಂದ. ಹಿಂದಿನ ರಾತ್ರಿಯೆ ಮನೆಯಲ್ಲಿ ಜಾತ್ರೆಗೆಂದು ವಿಶೇಷ ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿದ್ದರು. ಪರಸಪ್ಪ ಎತ್ತುಗಳ ಮೈತೊಳೆದು ತಂದವನು ಅವುಗಳ ಕೊರಳಿಗೆ ಗೆಜ್ಜೆಯ ಸರಗಳನ್ನು ಕಟ್ಟಿದ. ಬೆನ್ನಿಗೆ ಬಣ್ಣ ಬಣ್ಣಗಳ ಚಿತ್ತಾರದ ಝೂಲಾಗಳನ್ನು ಹೊದಿಸಿದ. ಕೆಂಪು ಬಣ್ಣದ ಗುಣಿಯ ಬಾರಕೋಲನ್ನು ತೆಗೆದಿರಿಸಿಕೊಂಡ. ಎತ್ತುಗಳ ಕೊರಳಿಗೆ ಹಸಿರು ಕೆಂಪು ಬಣ್ಣಗಳ ಗೊಂಡೆಯ ಹೊಸ ನೂಲಿನ ಹಗ್ಗಗಳನ್ನು ಕಟ್ಟಿದ. ದೊಡ್ಡ ಚಕ್ಕಡಿಗೆ ಕೊಲ್ಲಾರಿ ಯನ್ನು ಕಟ್ಟಿ ಅದರ ಮೇಲೆ ದೊಡ್ಡ ಗುಡಾರವನ್ನು ಹೊದಿಸಿದ. ಚಕ್ಕಡಿಯ ಒಳಗೆ ಎಲ್ಲರೂ ಕೂಡಲು ಅನುಕೂಲ ವಾಗುವಂತೆ ಬಿಳಿ ಹುಲ್ಲನ್ನು ಹರಡಿ ಎರಡು ಪೆಂಡಿ ಹುಲ್ಲನ್ನು ಇಟ್ಟು ಅದರ ಮೇಲೆ ಬಣ್ಣದ ಹೊಸ ಜಮಖಾನೆಯನ್ನು ಹಾಸಿದ. ಎಲ್ಲರೂ ಚಕ್ಕಡಿ ಏರಿ ಕುಳಿತರು. ತಾಯವ್ವನ ಜಾತ್ರೆಯ ಪಯಣ ಪ್ರಾರಂಭವಾಯಿತು.


     ತಾಯವ್ವನ ಸರುವು ಇರುವುದು ಸುರಗಿಹಳ್ಳಿಯಿಂದ ಸುಮಾರು ಐದು ಮೈಲು ದೂರದಲ್ಲಿ. ನಾಲ್ಕು ತಿಂಗಳು ಕಾಲ ಸುರಿದ ಭರ್ಜರಿ ಮಳೆ ಹಿಮ್ಮೆಟ್ಟಿತ್ತು. ಮಳೆಯ ಸಮೃದ್ಧಿಯಿಂದಾಗಿ ಊರಿನ ಎಲ್ಲ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು, ಊರ ಸುತ್ತ ಮುತ್ತಲಿನ ಹಳ್ಳ ಝರಿ ತೊರೆಗಳು ನಿನಾದ ಗೈಯುತ್ತ ಹರಿಯುತ್ತಿದ್ದವು ರಸ್ತೆಯ ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದು ಹಸುರಿನಿಂದ ಕಂಗೊಳಿಸುತ್ತಿದ್ದ ಮಾವು ಹುಣಸೆ ಹುಲಗಲ ಮತ್ತು ಗುಲ್ಮೊಹರ್ ಮರಗಳು. ಸುತ್ತಲೂ ಹಸುರಿನಿಂದಾವೃತವಾದ ಗುಡ್ಡ ಬೆಟ್ಟಗಳು, ಚಿಲಿಪಿಲಿ ಸದ್ದು ಮಾಡುತ್ತ ಹಾರಾಡುವ ವಿಧವಿಧದ ಪಕ್ಷಿಗಳು, ಸಣ್ಣ ಕಾಸಿನ ಗಾತ್ರದಿಂದ ಹಿಡಿದು ಅಂಗೈ ಅಗಲದ ಅಕಾರಗಳ ವಿವಿಧ ಬಣ್ಣಗಳ ಪಾತರಗಿತ್ತಿಗಳು, ನೀಲಾಕಾಶದಲ್ಲಿ ಬೆಳ್ಮೋಡಗಳ ಮಧ್ಯೆ ಕಣ್ಣು ಮುಚ್ಚಾಲೆಯಾ.ಡುತ್ತ ಸಾಗಿದ ಸೂರ್ಯ, ಇವೆಲ್ಲ ಹೊಸ ಲೋಕವನ್ನೆ ತೆರೆದಿಟ್ಟಿದ್ದವು. ಎತ್ತುಗಳ ಕೊರಳ ಗೆಜ್ಜೆಗಳ ನಿನಾದದೊಂದಿಗೆ ಜಾತ್ರೆಗೆ ಹೊರಟಿದ್ದ ಎತ್ತುಗಳ ಗಾಡಿಗಳ ಸಾಲುಗಳು, ಅವುಗಳಲ್ಲಿಯ ನಾ ಮೇಲು ತಾ ಮೇಲು ಎನ್ನುವ ಮೇಲಾಟ,, ಒಟ್ಟಿನಲ್ಲಿ ಮನವನ್ನು ಮುದಗೊಳಿಸುವ ಆಹ್ಲಾದಕರ ವಾತಾವರಣ ಸುತ್ತೆಲ್ಲ ಹರಡಿತ್ತು.
     ಮಸೂತಿಕೆರೆಯನ್ನು ದಾಟಿ ಸರಕಾರಿ ತೋಟದ ಪಕ್ಕದ ರಸ್ತೆಗುಂಟ ಸಾಗಿ ಲಂಬಾಣಿಗರ ತಾಂಡಾವನ್ನು ಹಿಂದೆ ಬಿಟ್ಟು ತಾಯವ್ವನ ಸರುವಿನ ಕಡೆಗೆ ರಾಮನ ಜಾತ್ರೆಯ ಸವಾರಿ ಸಾಗಿತ್ತು. ದೊಡ್ಡಕೆರೆಯಿಂದ ಅರ್ಧಮೈಲು ಮುಂದೆ ಹೋಗಿ ಬಲಬದಿಗೆ ಕಾಡಿನಲ್ಲಿ ತಿರುಗಿ ಸ್ವಲ್ಪ ದೂರ ಕ್ರಮಿಸಿ ಒಂದು ದೊಡ್ಡ ಅರಳಿ ಮರದ ಕೆಳಗೆ ಪರಸಪ್ಪ ಎತ್ತಿನ ಗಾಡಿಯನ್ನು ನಿಲ್ಲಿಸಿ ಕೊಳ್ಳು ಹರಿದ. ಆಗಲೆ ಸುಮರು ಎತ್ತಿನ ಗಾಡಿಗಳು ಬಂದು ಅಲ್ಲಲ್ಲಿ ಬಿಡಾರ ಹೂಡಿಯಾಗಿತ್ತು. ರಾಮನ ತಾಯಿ ಅಜ್ಜಿ ದೊಡ್ಡಮ್ಮ ಮತ್ತು ಇತರರು ಅರಳಿ ಮರದ ಬುಡದಲ್ಲಿ ಜಮಖಾನೆಯನ್ನು ಹಾಸಿ ಊಟ ತಿಂಡಿ ಗಳ ಗಂಟುಗಳನ್ನು ಇಳಿಸಿಕೊಂಡು ವಿಶ್ರಾಂತಿಗಾಗಿ ಕುಳಿತರು. ರಾಮನ ತಂದೆ ಭೀಮಯ್ಯ ಬಂದಿರಲಿಲ್ಲ. ರಾಮನಿಗೆ ಕಿರಿಕಿರಿ ಮಾಡುವವರು ಯಾರೂ ಇರಲಿಲ್ಲ, ಆತ ಎಲ್ಲೆಂದರಲ್ಲಿ ತಿರುಗ ಬಹುದಿತ್ತು. ಪರಸಪ್ಚ ಎತ್ತುಗಳನ್ನು ಹೊಡೆದು ಕೊಂಡು ಜಿಗ್ಗಿನಲ್ಲಿರುವ ತಾಯವ್ವನ ಹೊಳೆ ಕಡೆಗೆ ನಡೆದ. ರಾಮನೂ ಅವನನ್ನು ಅನುಸರಿಸಿ ಹೋದ.  ಅವನಿಗೆ ಕಾಡು ಸುತ್ತುವುದು ಬೇಕಿತ್ತು. ಹೊಳೆಗೆ ಹೋಗುವ ದಾರಿಯಲ್ಲಿ ಮೊಲ ಮತ್ತು ನವಿಲುಗಳು ಕಣ್ಣಿಗೆ ಬಿದ್ದವು. ಸ್ವಲ್ಪ ದೂರದಲ್ಲಿ ಕಾರೆಕಂಟೆಯ ಹತ್ತಿರ ನಿಂತಿದ್ದ ನರಿಯನ್ನು ಪರಸಪ್ಪ ರಾಮನಿಗೆ ತೋರಿಸಿದ. ಸಂಬರಗಾಗೆ ಗೊರವಂಕ ಗಿಳಿಗಳು ಗುಬ್ಬಚ್ಚಿಗಳು ಮರದಿಂದ ಮರಕ್ಕೆ ಹಾರುತ್ತಿದ್ದವು. ರಾಮ ಮೈ ಮರೆತು ಕಾಡಿನ ಪರಿಸರದ ಎಲ್ಲವನ್ನು ಉತ್ಸುಕತೆಯಿಂದ ನೋಡುತ್ತ ನಡೆದ. ಪರಸಪ್ಪ ತಾಯಿಯ ಹೊಳೆಗೆ ಎತ್ತುಗಳನ್ನು ಇಳಿಸಿ ನೀರು ಕುಡಿಸಿದ. ಆ ಹೊಳೆಯ ನೀರಿನ ಹರಿಯುವಿಕೆಯನ್ನು ಕಂಡ ರಾಮ ಉಲ್ಲಸಿತನಾಗಿ ನೀರಿಗೆ ಇಳಿದ, ತಣ್ಣಗೆ ಕೊರೆಯುವ ನೀರು ರಾಮನಿಗೆ ನಡುಕ ಬಂದಂತಾಗಿ ಒಂದು ಸಲ ನಡುಗಿದ. ತನ್ನ ಬೊಗಸೆಯಲ್ಲಿ ನೀರನ್ನು ಎತ್ತಿಕೊಂಡು ಮುಖಕ್ಕೆ ಹಾಕಿಕೊಂಡು ಕೈ ಕಾಲು ಮುಖಗಳನ್ನು ತೊಳೆದುಕೊಂಡು, ಬೊಗಸೆಯಲ್ಲಿ ಎತ್ತಿ ಕುಡಿದ. ಸಿಹಿಯಾದ ನೀರನ್ನು ಕುಡಿದು ದಾಹವನ್ನು ತಣಿಸಿಕೊಂಡ. ರಾಮನ ಅತ್ತೆಯರು ಹೊಳೆಯಿಂದ ಕೊಡಗಳಲ್ಲಿ ನೀರನ್ನು ಒಯ್ದರು. ಬಿಡಾರಕ್ಕೆ ಹೋಗುವ ದಾರಿಯಲ್ಲಿ ಕಾಡು ನೆಲ್ಲಿಯ ಮರಗಳಿದ್ದು ನೆಲ್ಲಿಕಾಯಿಗಳನ್ನು ಕಿತ್ತು ಜೋಬಿಗೆ ತುಂಬಿಕೊಂಡ, ಒದು ನೆಲ್ಲಿಯ ಕಾಯಿಯನ್ನು ಕಚ್ಚಿದ ಅದು ಕಿರುಗಹಿಯಿಂದ ಕೂಡಿತ್ತು. ಅದರ ಒಗರಿಗೆ ಮುಖ ಹಿಂಡಿದ. ತಮ್ಮ ಬಿಡಾರಕ್ಕೆ ಬಂದ ರಾಮ ತನ್ನ ಜೋಬಿನಲ್ಲಿಯ ನೆಲ್ಲಿಕಾಯಿ ಗಳನ್ನು ತೆಗೆದು ಅಜ್ಜಿಗೆ ಕೊಡಲು ಹೋದ. ಅವುಗಳನ್ನು ನೋಡಿದ ಅಜ್ಜಿ ನಾಗಕ್ಕ


     ' ಅವು ಇನ್ನೂ ಬಲಿತಿಲ್ಲ ಅವುಗಳನ್ನು ಈಗಲೆ ಏಕೆ ಕಿತ್ತು ತಂದೆ ? ತುಳಸಿ ಲಗ್ನವಾಗುವ ವರೆಗೆ ನೆಲ್ಲಿ ಕಾಯಿಗಳನ್ನು ತಿನ್ನ ಬಾರದು, ತಿಂದರೆ ಮುಖಕ್ಕೆ ತದ್ದು ಆಗುತ್ತದೆ ' ಎಂದು ಆಕ್ಷೇಪಿಸಿದಳು.


     ರಾಮನಿಗೆ ಒಂದು ಕ್ಷಣ ಯೋಚನೆಗಿಟ್ಟು ಕೊಂಡಿತು. ತಾನು ಈಗಾಗಲೆ ಒಂದೆರಡು ನೆಲ್ಲಿಕಾಯಿಗಳನ್ನು ತಿಂದಿದ್ದು ತನಗೆ ತದ್ದು ಆದರೆ ಏನು ಮಾಡುವುದು ಎಂಬ ಯೋಚನೆ ಆತನನ್ನು ಕಾಡ ತೊಡಗಿತು. ಅದರೆ ಆತ ಆ ವಿಷಯವನ್ನು ಅಜ್ಜಿಯ ಹತ್ತಿರ ಹೇಳಲು ಹೋಗಲಿಲ್ಲ. ಪರಸಪ್ಪ ಎತ್ತುಗಳನ್ನು ಹೊಡೆದುಕೊಡು ಬಂದು ಎತ್ತಿನ ಗಾಡಿಯ ಮೂಕಿಗೆ ಕಟ್ಟಿ ತಾನು ಕೊಯ್ದುತಂದ ಹಸಿ ಹುಲ್ಲನ್ನು ಅವುಗಳಿಗೆ ಹಾಕಿದ. ಜಾತ್ರೆಗೆ ಬಂದಿದ್ದ ಮೋಹನ ರಾಮನನ್ನು ಹುಡುಕಿ ಕೊಂಡು ಬಂದ. ರಾಮ ಮೋಹನನ ಜೊತೆ ಜಾತ್ರೆಯಲ್ಲಿ ಸುತ್ತಲು ಅಜ್ಜಿಯ ಅನುಮತಿ ಪಡೆದು ಹೊರಟ.


                                                *


     ರಾಮ ಜಾತ್ರೆಯಲ್ಲಿ ಸುತ್ತಾಡಿದ, ಎಲ್ಲ ಅಂಗಡಿಗಳ ಮುಂದೆ ಹೋಗಿ ನಿಂತು ನೋಡಿದ. ಎಷ್ಟು ವಿಧದ ಅಂಗಡಿಗಳು. ಬಣ್ಣ ಬಣ್ಣದ ಸಣ್ಣ ಮಕ್ಕಳ ಆಟದ ಸಾಮಾನುಗಳು, ಗೋಲಿಗಳು ಕನ್ನಡಕ ಬಲೂನು ಕೊಳಲು ಚೆಂಡು ಪೀಪಿಗಳನ್ನು ಮಾರುವವರು, ರಿಬ್ಬನ್ ಟೇಪು ಕ್ಲಿಪ್ಪುಗಳು ಮತ್ತು ಬಳೆ ಅಂಗಡಿಗಳು. ಬೆಂಡು ಬತ್ತಾಸು ಜಿಲೇಬಿ ಬೂಂದಿ ಮೈಸೂರು ಪಾಕು ಖಾರಾ ಮಂಡಕ್ಕಿ ಮಾರಾಟದ ಅಂಗಡಿಗಳು. ದೇವಸ್ಥಾನದ ಸಮೀಪದಲ್ಲಿ ತೆಂಗಿನಕಾಯಿ ಊದುಬತ್ತಿ ಕರ್ಪೂರ ಬಾಳೆಹಣ್ಣು ಮತ್ತು ಅರಿಷಿಣ ಕುಂಕುಮ ಮಾರುವ ಪೂಜಾ ಸಾಮಗ್ರಿಗಳ ಅಂಗಡಿಗಳು, ಎಲ್ಲವನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತ ರಾಮ ಮತ್ತು ಮೋಹನರು ಜಾತ್ರೆಯಲ್ಲಿ ಅಲೆದರು. ರಾಮ ನಾಲ್ಕಾಣೆಯಲ್ಲಿ ಏನನ್ನು ಖರೀದಿಸುವುದು ಏನನ್ನು ಬಿಡುವುದು ಎಂದು ಚಿಂತೆಗೊಳಗಾದ. ಆ ನಾಲ್ಕಾಣೆಯಲ್ಲಿ ಆತ ಒಂದಾಣೆಯನ್ನು ಸೈಕಲ್ ಕಲಿಯುವ ಸಲುವಾಗಿ ಸೈಕಲ್ ಭಾಡಿಗೆಗೆ ತರಲು ಇಟ್ಟುಕೊಳ್ಳ  ಬೇಕಿತ್ತು. ಅಷ್ಟರಲ್ಲಿ ಬಸವ ಅಲ್ಲಿಗೆ ಬಂದ ರಾಮ ಮೋಹನರು ತಲಾ ಒಂದೊಂದಾಣೆಯಂತೆ ಒಟ್ಟು ಎರಡು ಆಣೆಗಳನ್ನು ಸೈಕಲ್ ಭಾಡಿಗೆ ತರುವ ಉದ್ದೇಶಕ್ಕಾಗಿ ಬಸವನ ಕೈಗೆ ಕೊಟ್ಟರು. ಅಬ್ದುಲ್ಲಾ ಸೈಕಲ್ ಮೇಲೆ ಕೇಸರಿ ಮತ್ತು ಕೆಂಪು ಬಣ್ಣದ ತಣ್ಣನೆಯ ಶರಬತ್ತು ಮಾರುತ್ತಿದ್ದ. ಬಿಲ್ಲಿಗೊಂದು ಐಸ್ಕ್ರೀಮ್ ಸಹ ಮಾರುತ್ತಿದ್ದ. ಮೂವರೂ ಒಂದೊಂದು ಐಸ್ಕ್ರಿಂ ಖರೀದಿಸಿದರು. ಬಸವ ಐಸ್ಕ್ರಿಂ ತಿನ್ನುತ್ತ ಬರುವ ಭಾನುವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ರಫಿಕ್ನ ಸೈಕಲ್ ಶಾಪ್ ಹತ್ತಿರ ಬರಲು ರಾಮ ಮತ್ತು ಮೋಹನರಿಗೆ ಹೇಳಿ ಜಾತ್ರೆಯಲ್ಲಿ ಕಣ್ಮರೆಯಾದ. ರಾಮ ಒಂದು ಚಂಡು ಮತ್ತು ಬುಗುರಿ ಗಳನ್ನು ಖರೀದಿಸಿದ.


     ತಾಯವ್ವನ ದೆವಸ್ಥಾನದ ಹತ್ತಿರವಿದ್ದ ಒಂದು ಬೇವಿನ ಮರದ ಕೆಳಗೆ ಒಬ್ಬ ಒಂದು ಡಬ್ಬವನ್ನಿರಿಸಿಕೊಂಡು ಗರ್ದಿ ಗಮ್ಮತ್ ನೋಡಿ ಎಂದು ಪೆಟ್ಟಿಗೆಯ ಮೇಲೆ ತಾಳ ಹಾಕುತ್ತ ಒಂದು ಗೊಂಬೆಯನ್ನು ಕುಣಿಸುತ್ತಿದ್ದ. ಅದರ ಸುತ್ತಲೂ ಎಲ್ಲ ವಯೋಮಾನದ ಜನರೂ ಸೇರಿದ್ದರು. ಆ ಪೆಟ್ಟಿಗೆಯ ಮುಂಭಾಗದಲ್ಲಿ ಕೆಳಗೆ ನಾಲ್ಕು ಕಿಂಡಿಗಳಿದ್ದು ಅದರಲ್ಲಿ ತಮ್ಮ ಎರಡೂ ಕಣ್ಣುಗಳನ್ನು ಕೀಲಿಸಿ ಜನ ನೋಡುತ್ತಿದ್ದರು. ಆ ಗಮ್ಮತ್ತು ನೋಡಲು ಒಂದು ಬಿಲ್ಲೆಯನ್ನು ಕೊಡ ಬೇಕಿತ್ತು. ಆ ಗರ್ದಿ ಗಮ್ಮತ್ ತೋರಿಸುವವ ಜನರನ್ನು ಆಕರ್ಶಿಸಲು ರಾಜಾ ರಾಣಿ ದೇಖಿಯೆ ಆಯಿಯೆ ಎಂದು ಕೂಗುತ್ತಿದ್ದ. ಆಟ ಶುರುವಾದಂತೆ ಆತನ ವಿವರಣೆ ' ರಾಜಾ ರಾಣಿ ನೋಡು, ಅವರ್ ದೌಲತ್ ನೋಡು, ರಾಜನ್ ದರ್ಬಾರ್ ನೋಡು, ರಾಣಿ ಮಂದಿರ್ ನೋಡು, ಕನ್ನಂಬಾಡಿ ಕಟ್ಟೆ ನೋಡು, ಚಾಮುಂಡಿಬೆಟ್ಟ ನೋಡು, ಹಳೆಬೀಡು ಬೇಲೂರು ನೋಡು, ಹಂಪಿ ವಿರುಪಾಕ್ಷನ್ ನೋಡು, ಗೋಲ್ಗುಂಬಜ್ ನೋಡು, ಆಗ್ರಾದ ತಾಜ್ಮಹಲ್
ನೋಡು, ಇದಾನ್ಸೌಧ ನೊಡು, ಶ್ರೀರಂಗಪಟ್ಟಣಾ ನೋಡು, ಕನ್ಯಾಕುಮಾರಿ ನೋಡು, ಕಾಕನಕೋಟೆ ಆನೆ ನೋಡು, ಗಿರ್ನಾರ್ ಸಿಂಹ ನೋಡು, ಕಾಳಿಂಗಸರ್ಪ ನೋಡು, ಗೊಡರ್ಗಪ್ಪಿ ನೋಡು ಎಂದು ಮುಂತಾಗಿ ರಾಗ ಬದ್ಧವಾಗಿ ಹಾಡುತ್ತ ಅದಕ್ಕೆ ತಕ್ಕಂತೆ ತಾಳ ತಟ್ಟುತ್ತ ಜನ ಸೇರುತ್ತ ಬಂದಂತೆ ಇನ್ನಷ್ಟು ಉತ್ಸುಕತೆಯಿಂದ ಗಟ್ಟಿ ದನಿಯಲ್ಲಿ ಹಾಡುತ್ತ ಗೊಂಬೆಯನ್ನು ಮತ್ತಷ್ಟು ಒಯ್ಯಾರವಾಗಿ ಕುಣಿಸುತ್ತಿದ್ದ. ರಾಮನೂ ಆಸೆಯಿಂದ ಒಂದು ಬಿಲ್ಲೆಯನ್ನು ಕೊಟ್ಟು ಗರ್ದಿ ಗಮ್ಮತ್ ನೋಡಿದ. ಆದರೆ ಆತ ಕೂಗಿ ಕರೆಯುವಷ್ಟು ಆಕರ್ಷಕವಾಗಿ ಗರ್ದಿಗಮ್ಮತ್ ನೋಟ ಇರಲಿಲ್ಲ. ಕಳೆದ ಬೇಸಿಗೆಯಲ್ಲಿ ಟೆಂಟ್ನಲ್ಲಿ ನೋಡಿದ ' ಗುಣ ಸಾಗರಿ ' ಸಿನೆಮಾದಷ್ಟು ಆಕರ್ಷಕ ವಾಗಿರಲಿಲ್ಲ.


     ಅಲ್ಲಿಂದ ಹೊರಟ ರಾಮ ಮೋಹನರಿಗೆ ಸ್ವಲ್ಪ ದೂರದಲ್ಲಿ ದ್ಯಾಮವ್ವನಗುಡಿ ಓಣಿಯ ' ದೇವಿ ಕೋಲಾಟ ಮೇಳ ' ದವರಿಂದ ಕೋಲಾಟ ನಡೆದಿತ್ತು. ಆ ಮೇಳದಲ್ಲಿ ರಾಮ ಮೋಹನರ ಓರಿಗೆಯ ಹುಡುಗರಿದ್ದು ಅವರೆಲ್ಲರೂ ಬಿಳಿ ಧೋತರವನ್ನು ಏರುಗಚ್ಚೆ ಹಾಕಿ ಉಟ್ಟು ಬಿಳಿ ಬಣ್ಣದ ಅಂಗಿಯನ್ನು ತೊಟ್ಟಿದ್ದು ತಮ್ಮ ಸೊಂಟಕ್ಕೆ ಮತ್ತು ತಲೆಗೆ ಹಳದಿ ಬಣ್ಣದ ಬಟ್ಟೆಯ ಪಟ್ಟಯನ್ನು ಕಟ್ಟಿ ಕೊಂಡಿದ್ದರು. ಮೇಳದ ಯಜಮಾನ ಕಮ್ಮಾರ ಶಂಕರಪ್ಪ ಶೃತಿಬದ್ಧವಾಗಿ ತಾಳ ಹಾಕುತ್ತ


                                ಹತ್ತು ವರ್ಷದ ಹುಡುಗೂರಾ
                                ಮುತ್ತಿನ ಟೊಪಿಗಿ ಹಾಕ್ಯಾರಾ
                                ಕೋಲ ಕ್ಯಾಂವಿ ಬಡಿದಾರಾ
                                ಗಂಡೆರಳೆ ಜಿಗತಾ ಜಿಗದಾರಾ


     ಎಂದು ರಾಗಬದ್ದವಾಗಿ ಹಾಡುತ್ತ ಅದಕ್ಕೆ ತಕ್ಕವಾಗಿ ಲಯ ಬದ್ಧವಾಗಿ ಹುಡುಗರು ಹೆಜ್ಜೆ ಹಾಕುತ್ತ ಕೋಲಾಟ ದಲ್ಲಿ ತಲ್ಲೀನ ರಾಗಿದ್ದರು. ಅಲ್ಲಿ ನೆರೆದ ಗುಂಪಿನಲ್ಲಿ ಸೇರಿಕೊಂಡು ರಾಮನೂ ಕೋಲಾಟದ ವೀಕ್ಷಣೆಗೆ ತೊಡಗಿದ. ಅದನ್ನು ನೋಡುತ್ತ ನೋಡುತ್ತ ತಾನೂ ಆ ಕೋಲಾಟದ ತಂಡದ ಒಂದು ಭಾಗವಾದಂತೆ ಭಾವಿಸಿ ಸುಪ್ತಾವಸ್ಥೆಗೆ ಇಳಿದು ಆನಂದಿಸಿದ. ಮೋಹನ ರಾಮನ ಅಂಗಿ ಹಿಡಿದು ಎಳೆದು ಆ ದಾರಿಯಾಗಿ ಬರುತ್ತಿದ್ದ ಆತನ ಅಜ್ಜಿ ದೊಡ್ಡಮ್ಮ ಅತ್ತೆಯರೆಡೆಗೆ ಕೈಮಾಡಿ ತೋರಿಸಿದ. ವಾಸ್ತವಕ್ಕಿಳಿದ ರಾಮ ತಾಯವ್ವನಿಗೆ ಹಣ್ಣು ಕಾಯಿ ಮಾಡಿಸಲು ಹೊರಟಿದ್ದ ಅವರ ಜೊತೆಗೆ ಹೊರಟ. ಆ ದಾರಿಯಲ್ಲಿ ಸ್ವಲ್ಪ ದೂರದಲ್ಲಿ ತಳವಾರ ಕೆಂಚಪ್ಪ ಡಪ್ಪು ಬಾರಿಸುತ್ತ


                               ಹೊಸತಾಗಿ ಪ್ರಸಿದ್ಧಾತೊ  ತಾಲೂಕು ಹುಬ್ಬಳ್ಳಿ
                               ಮಲ ಮೂತ್ರಕ ಮಾಡತಾರೊ ತಳ್ಳಿ                          
                               ತೋರ್ಕಿಗೆ ಬೆಳಕಾಗಿ ನಾರುವ ಕಳಕಾಗಿ
                               ಹಸನದ ಕಸಾ ಮಾರೋ ಕುಶಲ ಹುಬ್ಬಳ್ಳಿ


     ಲಾವಣಿ ಪದವನ್ನು ಹಾಡುತ್ತಿದ್ದ. ರಾಮ ಆ ಲಾವಣಿ ಮೋಡಿಗೆ ಮರುಳಾಗಿ ಅದನ್ನು ಕೇಳುತ್ತ ನಿಂತ. ದೇವಿಯ ದರ್ಶನಕ್ಕೆ ಬಾ ಎಂದು ಆತನ ಅಜ್ಜಿ ಕರೆದಳು. ಅನ್ಯ ಮನಸ್ಕನಾಗಿ ರಾಮ ತಾಯವ್ವನ ಗುಡಿಯ ಕಡೆಗೆ ಅವರೊಟ್ಟಿಗೆ ನಡೆದ. ತಾಯವ್ವನ ಗುಡಿ ಅಂತಹ ಹೇಳಿಕೊಳ್ಳುವಂತಹ ವಾಸ್ತುಶಿಲ್ಪವಾಗಲಿ ಜಕಣಾಚಾರಿ ಕಟ್ಟಿದಂತಹ ದೇಗುಲ ಗಳಂತಹ ಭವ್ಯ ದೇವಸ್ಥಾನವೇನೂ ಅದಾಗಿರಲಿಲ್ಲ. ಇಟ್ಟಿಗೆ ಗೋಡೆಯಿಂದ ಕಟ್ಟಿದ ಒಂದು ಸಾಮಾನ್ಯ ದೇಗುಲ ಅದಾಗಿತು. ದೇವಸ್ಥಾನದ ಗೋಡೆಗೆ ಮತ್ತು ಗೋಪುರಕ್ಕೆ ಸುಣ್ಣ ಬಳಿದಿದ್ದು, ಹಸಿರು ಹೊದ್ದ ಕಾಡು ಗುಡ್ಡ ಬೆಟ್ಟಗಳು ಮತ್ತು ಶುಭ್ರ ಆಕಾಶದ ಹಿನ್ನೆಲೆಯಲ್ಲಿ ತಾಯವ್ವನಗುಡಿಗೆ ಒಂದು ಅನಿರ್ವಚನೀಯ ಕಳೆ ಬಂದಿತ್ತು. ಈಗಿನಂತೆ ಡಿಸ್ಟೆಂಪರ್  ಆಯಿಲ್ಪೇಂಟ್ ಮತ್ತು ಸೀರಿಯಲ್ ಲೈಟ್ಗಳ ಆಡಂಬರದ ಡಂಭಾಚಾರದ ಯುಗ ಅದಾಗಿರಲಿಲ್ಲ. ದೇವಸ್ಥಾನದೊಳಗೆಲ್ಲ ಊದುಬತ್ತಿ ಕರ್ಪೂರಗಳ ಸುವಾಸನೆ ತುಂಬಿಕೊಂಡಿತ್ತು.  ಜನಜಂಗುಳಿಯ ಹಣ್ಣುಕಾಯಿ ಮಾಡಿಸುವ ಉತ್ಸಾಹ ಒಂದು ತರಹದ ಆಹ್ಲಾದಕರ ವಾತವರಣ ದೇವಸ್ಥಾನದ ಸುತ್ತಮುತ್ತಲೂ ಹರಡಿತ್ತು. ದೇವಸ್ಥಾನದ ಒಳಗಡೆ ಸುಮಾರು ಎಂಟು ಅಡಿ ಚಚ್ಚೌಕಾರದ ಗರ್ಭಗುಡಿ ಅದರೊಳಗೆ ಒಂದು ಕಲ್ಲಿನ ಕಟ್ಟೆಯ ಮೇಲೆ ಸುಮರು ಒಂದು ಅಡಿ ಎತ್ತರದ ಕರಿಯ ಕಲ್ಲಿನ ದೇವಿಯ ವಿಗ್ರಹ, ದೇವಿಯ ಕಣ್ಣಿಗೆ ಎರಡು ಬೆಳ್ಳಿಯ ಕಣ್ಣುಗಳನ್ನು ಅಂಟಿಸಿದ್ದು ಎರಡು ಕೈಗಳ ತುಂಬ ಹಸಿರು ಬಳೆಗಳು ಹಸಿರು ಸೀರೆ ಉಡಿಸಿ ಬೆಳ್ಳಿಯ ಸೊಂಟಪಟ್ಟಿ ತೊಡಿಸಿ ತಲೆಗೆ ಬೆಳ್ಳಿಯ ಕಿರೀಟವಿಟ್ಟು ಹೂವುಗಳ ಮಾಲೆ ತೊಡಿಸಿ ಅಲಂಕಾರ ಮಾಡಿದ್ದರು., ಎಲ್ಲ ಗ್ರಾಮಸ್ಥರು ಯಾವುದೇ ಬೇಧ ಬಾವವಿಲ್ಲದೆ ತಾಯವ್ವನಿಗೆ ನಡೆದು ಕೊಳ್ಳುತ್ತಿದ್ದರು. ಸಣ್ಣ ಮಕ್ಕಳಿಗೆ ಜ್ವರಬರಲಿ ಸಿಡುಬು ಏಳಲಿ ದನಕರುಗಳು ಕಳೆಯಲಿ ಯಾವುದಕ್ಕೂ ಹರಕೆ ಕೇಳಿಕೊಳ್ಳುವುದು ಆ ತಾಯವ್ವನಿಗೆಯೆ, ಹರಕೆಗಳು ಕೈಗೂಡಿದರೆ ದೇವಿಯ ಕೃಪೆ, ಕೈಗೂಡದೆ ಹೋದರೆ ಅದು ತಮ್ಮ ತಮ್ಮ ಕರ್ಮಫಲ ಎನ್ನುವಷ್ಟರ ಮಟ್ಟಿಗೆ ಆ ದೇವಿಯಲ್ಲಿಯ ನಂಬಿಕೆ ಜನ ಸಾಮಾನ್ಯರದಾಗಿತ್ತು. ಅಂತಹ ಸಾತ್ವಿಕ ಮತ್ತು ಧಾರ್ಮೀಕ ನಂಬುಗೆಗಳ ಕಾಲಮಾನ ಅದಾಗಿತ್ತು. ಆ ನಂಬಿಕೆಗೆ ಇಂಬು ಕೊಡುವಂತಹ ಘಟನೆಯೊಂದು ರಾಮನ ಮನೆಯಲ್ಲಿಯೆ ನಡೆದಿತ್ತು.
 


                                                                              ( ಮುಂದುವರಿದಿದೆ )
 

Rating
No votes yet

Comments