ಮಾಸ ವಿಶೇಷ‌

ಮಾಸ ವಿಶೇಷ‌

 

ಜಗದ್ಗುರು ಶ್ರೀ ಶಂಕರಾಚಾರ್ಯರುಃ
ವೈಶಾಖ ಶುಧ್ದ ಪಂಚಮಿಯಂದು ಕೇರಳದ ಕಾಲಟಿ ಎಂಬ ಗ್ರಾಮದಲ್ಲಿ ಜನಿಸಿ, ತಮ್ಮ ಎಂಟನೇ ವಯಸ್ಸಿನಲ್ಲಿ ನಾಲ್ಕು ವೇದಗಳನ್ನೂ ಬಲ್ಲವರಾಗಿ, ಹನ್ನೆರಡನೇ ವಯಸ್ಸಿನಲ್ಲಿ ಸಕಲ ಶಾಸ್ತ್ರಗಳನ್ನೂ ತಿಳಿದವರಾಗಿ, ಹದಿನಾರನೇ ವಯಸ್ಸಿಗೆ ಪ್ರಸ್ಥಾನ ತ್ರಯಗಳಿಗೆ ಭಾಷ್ಯವನ್ನು ರಚಿಸಿ, ಮೂವತ್ತೆರಡನೇ ವಯಸ್ಸಿಗೆ ದೈವತ್ವವನ್ನು ಪಡೆದ ಯತಿಕುಲತಿಲಕ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಅದ್ವೈತ ಮತ ಸಂಸ್ಥಾಪಕರು.  “ಬ್ರಹ್ಮ ಸತ್ಯಂ, ಜಗನ್ ಮಿಥ್ಯಂ” ಎಂಬ ಪರಮಸತ್ಯವನ್ನು ಧೀರೋಧಾತ್ತವಾಗಿ ಜಗತ್ತಿಗೆ ಸಾರಿಹೇಳಿ, ಸಾರಿಗೆ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಎರಡು ಬಾರಿ ಅಖಂಡ ಭಾರತವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ಭಾರತವನ್ನು ಏಕರಾಷ್ಟ್ರವನ್ನಾಗಿಸಿದ ಐಕ್ಯತೆಯ ಶಿಲ್ಪಿ ಶ್ರೀ ಶಂಕರರು.  ಈ ಮಹಾಮಹಿಮರ ಜಯಂತ್ಯೋತ್ಸವ ಇದೇ ತಿಂಗಳು 26ರಂದು ವಿಶ್ವಾದ್ಯಂತ ನೆರವೇರಲಿದೆ.
 
ಶ್ರೀ ರಾಮಾನುಜಾಚಾರ್ಯರುಃ
ಹನ್ನೊಂದನೆ ಶತಮಾನದ ಆಸುಪಾಸಿನಲ್ಲಿ ಶ್ರೀರಂಗಂನಲ್ಲಿ ಜನಿಸಿದ ಶ್ರೀ ರಾಮಾನುಜರು ವಿಶಿಷ್ಠಾದ್ವ್ಯೆತ ಪ್ರತಿಪಾದಕರು.  ಸುಮಾರು 120 ವರ್ಷಗಳ ಕಾಲ ಸಾರ್ಥಕ ಜೀವನ ನೆಡೆಸಿದ ಧೀಮಂತ ಯತಿವರೇಣ್ಯರಿವರು.  ಇವರು ಜಾತಿಪದ್ದತಿಯ ವಿರೋಧಕರಾಗಿದ್ದರು.  ಹರಿಜನರಿಗೆ ದೇವಾಲಯ ಪ್ರವೇಶ ಸಮುಚಿತವೆಂದು ಭಾವಿಸಿದ್ದ ಕರುಣಾಮು.  ತನ್ನೊಬ್ಬನ ಬಂಧ ಮುಕ್ತಿಯ ಸ್ವಾತಂತ್ರ್ಯವನ್ನೊಲ್ಲದೆ ಎಲ್ಲರಿಗೂ ಕೇಳುವಂತೆ ಅಷ್ಟಾಕ್ಷರೀ ಮಂತ್ರವನ್ನು ಕೂಗಿಹೇಳಿದ ಸದ್ಗುಣ ತ್ಯಾಗಶೀಲಿ.  ಸುಮಾರು ಹನ್ನೆರಡು ವರ್ಷ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿ, ಅಲ್ಲಿ ಚಲುವಚನ್ನಿಗರಾಯನನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಶ್ರೀ ಶಂಕರರಂತೆ ಪ್ರಸ್ಥಾನ ತ್ರಯಗಳಿಗೆ ಭಾಷ್ಯವನ್ನು ರಚಿಸಿದ ಶ್ರೀಗಳು “ಶ್ರೀ ಭಾಷ್ಯ”ವನ್ನೂ ರಚಿಸಿ ಶ್ರೀಲಕ್ಷ್ಮಿಯ ಕೃಪೆಗೆ ಪಾತ್ರರಾದರು.  ಈ ಯತಿಶ್ರೇಷ್ಟರ ಜಯಂತಿುರುವುದೂ ಇದೇ ತಿಂಗಳು 27ರಂದು.
 
ಕ್ರಾಂತಿಯೋಗಿ ಶ್ರೀ ಬಸವಣ್ಣನವರು:

ಕರ್ನಾಟಕದ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿ, ಸಂಪ್ರದಾಯದ ಸರಳುಗಳನ್ನು ಕಿತ್ತೊಗೆದು, ಧರ್ಮವು ಜಾತಿಗಳನ್ನು ಮೀರಿದ್ದೆಂದು ಸಾರಿದ ಕ್ರಾಂತಿಯೋಗಿ ಶ್ರೀ ಬಸವಣ್ಣನವರ ಜಯಂತಿ ಇರುವುದೂ ಇದೇ ಏಪ್ರಿಲ್ ತಿಂಗಳು 24 ರಂದು.  ಹಿಂದಿನ ಧರ್ಮ ಪ್ರವತ್ರಕರು ವೇದ ವೇದಾಂಗಗಳ ಸಾರವನ್ನು ಕಬ್ಬಿಣದ ಕಡಲೆಯಾಗಿದ್ದ ಸಂಸ್ಕೃತ ಭಾಷೆಯಲ್ಲಿ ಹೇಳಿದ್ದರು.  ಶ್ರೀ ಬಸವಣ್ಣನವರು ವಚನಸಾಹಿತ್ಯದ ಮೂಲಕ ನಮ್ಮ ತಿಳಿಗನ್ನಡ ಭಾಷೆಯಲ್ಲಿ ಶ್ರೀಸಾಮಾನ್ಯನಿಗೂ ಅರಿವಾಗುವಂತೆ ಸಾರಿಹೇಳಿ ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದರು.  “ಕಾಯಕವೇ ಕೈಲಾಸ” ಎಂಬ ಸದ್ಘೋಷವಾಕ್ಯ ಈ ಮಹಾಮಹಿಮನದೇ.  ಇಂದು ಎಷ್ಟುಜನ ಇದನ್ನು ಪಾಲಿಸುತ್ತಿರುವರು.  ಆಡಳಿತದ ಚುಕ್ಕಾಣಿ ಹಿಡಿದಿರುವವರೇ ಇದನ್ನು ಪಾಲಿಸದಿರುವುದು ನಿಜಕ್ಕೂ ನಾಚಿಕೆಗೇಡು.    

ಸಂವಿಧಾನ ಶಿಲ್ಪಿ ಶ್ರೀ ಅಂಬೇಡ್ಕರ್ ಜಯಂತಿ ಇರುವುದೂ ಇದೇ ತಿಂಗಳು 14 ರಂದು.  ಇದೇ ತಿಂಗಳಿನಲ್ಲಿ ಜನಿಸಿರುವ ಇನ್ನಿತರ ಮಹಾನ್ ವ್ಯಕ್ತಿಗಳು ಸರ್ವ ಕನ್ನಡಿಗರ ಆರಾಧ್ಯ ದೈವ, ನಟಸಾವ್ರಭೌಮ, ವರನಟ ಡಾ.ರಾಜ್‌ಕುಮಾರ್ (24-04-1928), ಕ್ರಿಕೆಟ್ ದೇವರೆಂದೇ ಖ್ಯಾತರಾದ ಮಾಸ್ಟರ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (24-04-1973), ಖ್ಯಾತ ಅಭಿನೇತ್ರಿ ಶ್ರೀಮತಿ ಜಯಪ್ರದ, ಶ್ರೀಮತಿ ಜಯಾ ಬಚ್ಚನ್, ಖ್ಯಾತ ಹಿಂದಿ ನಿರ್ದೇಶಕರಾದ  ಶ್ರೀ ಬಿ.ಆರ್.ಚೋಪ್ರಾ, ಶ್ರೀ ರಾಮ್ಗೋಪಾಲ್ ವರ್ಮ ಮುಂತಾದವರು ಭಾರತೀಯರಾದರೆ, ವಿದೇಶೀಯರಾದ ಜಾಕಿಚಾನ್ ಮತ್ತು ಜೆಟ್-ಲೀಕೂಡ ಈ ಸಾಲಿಗೆ ಸೇರುತ್ತಾರೆ. 
 
 ಇಂತಹ ಮಹತ್ವಗಳನ್ನು ಹೊಂದಿದ ಏಪ್ರಿಲ್ ತಿಂಗಳಿನಾರಂಭವನ್ನು ಮುಟ್ಟಾಳರ ದಿನವೆಂದು  ಆಚರಣೆಮಾಡುವ ಶತಮಡಿಯರ ಗುಂಪೂ ಒಂದಿದೆ.  ಇವರಿಗೆ ಬೇರೇ ಕೆಲಸವಿರುವುದಿಲ್ಲ. ಕಿಂಚಿತ್ತೂ ಉಪಯೋಗಕ್ಕೆ ಬಾರದ, ಪರಕೀಯರ ಎಂಜಲಿನ ದಿನಗಳನ್ನಾಚರಿಸುತ್ತಾ ದಿವ್ಯಭಾರತೀಯ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಾ ಪುಕ್ಕಟ್ಟೇ ಪ್ರಚಾರವನ್ನು ಪಡೆಯಲಿಚ್ಚಿಸುವ ಇಂತಹವರನ್ನು ದೇಶಭ್ರಷ್ಟರನ್ನಾಗಿಸದ ಹೊರತು, ಭವ್ಯಭಾರತಕ್ಕೆ ಏಳಿಗೆುಲ್ಲ.
 
-ಎಂ.ಎಸ್.ಮುರಳಿಧರ್, ಶಿರಾ