ಪುಟ್ಲಿಂಗು ಪ್ರಸಂಗ 1 = ದಶಮ ಗ್ರಹ
ಚಿತ್ರ
ಜ್ಯೋತಿಷಿ: “ನೋಡೀ, ನಿಮ್ಗೆ ಈಗ ಗ್ರಹಗತಿಗಳು ಸರೀಗಿಲ್ಲ. ಯಾಕೇ ಅಂದ್ರೆ.. ಶನಿ ಆರನೇ ಮನೆಯಿಂದ ಏಳನೇ ಮನೇಗೆ ಬರ್ತಾ ಇದಾನೆ. ಇನ್ನು ಶುರು ನಿಮ್ಗೆ ಶನಿಕಾಟ”. ಎಂದವರೇ ಬದಲಾಗುವ ಭಾವನೆಗಳಿಗಾಗಿ ಹುಡುಕುತ್ತಾ, ಪುಟ್ಲಿಂಗು ದಂಪತಿಗಳ ಮುಖವನ್ನೇ ದಿಟ್ಟಿಸಿದ.
ನಮ್ಮ ಪುಟ್ಲಿಂಗು ನಡುಗಿಹೋದ. “ಇದ್ಯಾವ ಗ್ರಹಚಾರಾನಪ್ಪಾ. ಇನ್ನೊಂದಷ್ಟ್ ವರ್ಷ ಶನಿ ಅಲ್ಲೇ ಇದ್ದಿದ್ದ್ರೆ ಅವರಪ್ಪನಮನೆ ಗಂಟು ಏನುಹೋಗ್ತಿತ್ತು”, ಎಂದುಕೊಂಡವನೇ ಭಯ, ವಿನಯಗಳಿಂದ ಕೈಜೋಡಿಸಿ, “ಇನ್ನೂ ಎಷ್ಟುವರ್ಷ ಅಲ್ಲೇ ಇರ್ತಾನೆ ಸ್ವಾಮಿ”? ಕೇಳಿದ.
ಗಂಭೀರ ವದನನಾದ ಜ್ಯೋತಿಷಿ, ಮುಷ್ಟಿಹಿಡಿದ ಬಲಗೈಯನ್ನು ಹಣೆಯಮೇಲಿರಿಸಿ ಕಣ್ಣುಮುಚ್ಚಿದ. ಐದೂ ಬೆರಳುಗಳಲ್ಲಿದ್ದ ಬಂಗಾರದ ಉಂಗುರಗಳು ಮಿರಮಿರನೆ ಮಿಂಚುತ್ತಿದ್ದವು. ಅಮಾಯಕ ಪುಟ್ಲಿಂಗು ಕುತೂಹಲದಿಂದ ಅವ(ರ)ನ್ನೇ ನೋಡುತ್ತಿದ್ದ. ಹೆಂಡತಿ ಪುಟ್ಮಲ್ಲಿ “ಏನ್ ಮಾಡ್ತಾವ್ರೆ ಅಯ್ಯ್ನೋರು”? ಎಂದು ಪುಟ್ಲಿಂಗು ಕಿವಿಯಲ್ಲಿ ಮೆಲ್ಲನೆ ಉಸುರಿದಳು.
“ಸುಮ್ಕಿರಮ್ಮೀ...ಅಯ್ನೋರು ಆ ಶನೀನ ಕೇಳ್ತಾವ್ರೆ, ಇನ್ನೂ ಎಷ್ಟುದಿನ ಇರ್ತೀಯಾ ಅಲ್ಲಿ ಅಂತ” ಎಂದ. “ಅಬ್ಬಬ್ಬಾ” ಎಂದ ಪುಟ್ಮಲ್ಲಿ ತನ್ನ ಮೂಗಿನಮೇಲೆ ಕೈ ಇರಿಸಿದಳು.
ಹಣೆಯಮೇಲಿನಿಂದ ಕೈ, ಮಣಿಕಟ್ಟಿನಲ್ಲಿದ್ದ ರತ್ನಖಚಿತ ಕೈಕಡಗವನ್ನು ಸರಿಪಡಿಸಿಕೊಳ್ಳುತ್ತಾ, ಬೃಹತ್ಗಾತ್ರದ ಗುಡಾಣದಂತಹ ಹೊಟ್ಟೆಯಮೇಲಿಳಿುತು. ಅಂಗೈಯಗಲದ ಚಿನ್ನದ ಪದಕ ಜ್ಯೋತಿಷಿಗಳ ಒಂದು ಎಕರೆ ಎಧೆಯಮೇಲೆ, ಪುಟ್ಲಿಂಗು ದಂಪತಿಗಳನ್ನು ಅಣಕಿಸುತ್ತಾ ಮಲಗಿತ್ತು. ನಯವಾದ ಹೊಟ್ಟೆಯಮೇಲೆ ಕೈ ಆಡಿಸುತ್ತ, ಪುಟ್ಮಲ್ಲಿಯತ್ತಲೇ ನೋಡುತ್ತಾ “ನೋಡೀ...ಇನ್ನೂ ಏಳು ವರ್ಷ ಇತ್ರಾನೆ ಅಲ್ಲಿ” ಎಂದರು, ದಂಪತಿಗಳಿಬ್ಬರೂ ಭಯದಿಂದ ಭೂಮಿಗಿಳಿದುಹೋದರು. ಕಣ್ಣಾಲಿಗಳು ತುಂಬಿಬಂದವು.
“ಬ್ಯಾಡ ಅಯ್ನೋರೆ, ಅಂಗಾಗ್ಬಾರ್ದು. ಏನಾರಾ ಮಾಡಿ ಮತ್ತೆ, ಇಲ್ಲಾ ಅಂದ್ರೆ ನಾವು ಸತ್ತೇ ಓಗ್ತೀವಿ, ಅಷ್ಟೇಯಾ” ಅಂದ ಪುಟ್ಲಿಂಗು, ಪುಟ್ಮಲ್ಲಿಯತ್ತ ನೋಡಿ: ಏಯ್..ಮೂದೇವಿ, ಏನ್ ಅಂಗೇ ಗರ ಬಡ್ದೋಳಂಗೆ ನಿಂತಿದೀಯ, ಬೀಳೂ ಅಯ್ನೋರ ಕಾಲ್ಗೆ.” ಎಂದವನೇ ಜ್ಯೋತಿಷಿಯ ಕಾಲಿಗೆ ಡೈ ಹೊಡೆದ. ಹಿಂದೆಯೇ ಸಾಧ್ವಿ ಪುಟ್ಮಲ್ಲಿ ಗಂಡನನ್ನೇ ಅನುಸರಿಸಿದಳು.
ಜ್ಯೋತಿಷಿ: “ನೋಡಪ್ಪಾ...ಅಂಗೆಲ್ಲಾ ಮಾಡೋಕ್ಕಾಗಲ್ಲಾ. ಅದು ಅವನ ಸ್ವಗೃಹ”
ಪುಟ್ಲಿಂಗು: “ಅಂಗಂದ್ರೆ”
ಜ್ಯೋತಿಷಿ: “ಈಗಾ...ನಿನ್ನ ಸೊಂತ ಮನೇಗೆ, ನಿನ್ನೇ ಬಿಟ್ಕೋಳಲ್ಲಾ ಅಂತ ಅಂದ್ರೆ ನೀನು ಸುಮ್ನೇ ಇರ್ತೀಯಾ?”
ಪುಟ್ಲಿಂಗು: “ಮೆಟ್ನಾಗ್ ಹೊಡ್ಯಾಕಿಲ್ವ್ರಾ, ಎಡ್ಗಾಲಿಂದು ಬಿಚ್ಕಂಡು”
ಜ್ಯೋತಿಷಿ: ಇದೂ ಹಾಗೇನೇ, ಅದು ಶನಿಯ ಸೊಂತ್ಮನೆ, ಅವನ ಮನೇಗೇ ಅವನು
ಹೋಗ್ಬಾದ್ರು ಅಂದ್ರೆ ಹೇಗೆ ಹೇಳು ಮತ್ತೆ”? ಎಂದರು ನಗುತ್ತಾ.
ಪುಟ್ಲಿಂಗು: “ನೀವೇ ಏನಾರಾ ಮಾಡಿ ಅಯ್ಯ್ನೋರೇ, ನಿಮ್ಮನ್ನೇ ನಂಮ್ಕೋಂಡ್ ಬಂದಿದೀವಿ.
ಟಿ.ವಿ.ನಾಗೆ ನಿಮ್ಮನ್ನ ನೋಡಿದ್ಮ್ಯಾಗೇನೇ ನಮ್ಗೆ ಧೈರ್ಯ ಬಂದದ್ದು. ಈಗ ನೀವೂ
ನಮ್ಕೈ ಬುಟ್ಬುಟ್ರೆ, ನಮ್ ಗತಿಏನು ಸ್ವಾಮಿ”? ದಂಪತಿಗಳ ಕಣ್ಣಲ್ಲಿ ನೀರೂರಿತ್ತು..
ಜ್ಯೋತಿ: “ಅದಕ್ಕೇ ತುಂಬಾ ದುಡ್ಡಾಗುತ್ತಲ್ಲಪ್ಪಾ”? ವಿಷ್ಯಕ್ಕೆ ಬಂದಿದ್ರು ಅಯ್ನೋರು.
ಪುಟ್ಲಿಂಗು: “ಇನ್ನೇಸಾದೀತು ಸಾಮಿ, ನನ್ ದಿರಿಸ್ ನೋಡಿ ಕಡ್ಮೆ ಆಸಾಮಿ ಅನ್ಕೋಬೇಡಿ, ನನ್ನ”
ಎಂದು ಪೆದ್ದುಪೆದ್ದಾಗಿ ಹೇಳಿ, ಹಳ್ಳಕ್ಕೆ ಬಿದ್ದಿದ್ದಾ ನಮ್ಪ ಪುಟ್ಲಿಂಗು.
ರೊಟ್ಟಿಜಾರಿ ತುಪ್ಪಕ್ಕೆ ಬಿದ್ದದ್ದನ್ನು ಗಮನಿಸಿದ ಜ್ಯೋತಿ, “ನೋಡಪ್ಪ, ನೋಡೋಕ್ಕೆ ನೀವು ತುಂಬಾ ಒಳ್ಳೇವ್ರ ತರ ಕಾಣ್ತೀರ, ಅದಕ್ಕೇ ನಿಮ್ಗೆ ಅಂತ 25000ಕ್ಕೆ ಆಗೋದು ಕೇವಲ 15000ಕ್ಕೇ ಮಾಡ್ಕೊಡ್ತೀನಿ” ಅಂದ್ರು.
ದಂಪತಿಗಳಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಇಬ್ಬರ ಮುಖವೂ ಬಿಳುಪಿಟ್ಟಿತ್ತು. ಅವರ ಮುಂದೆ ಮೀಸೆ ತಿರುವಿದ್ದಾಗಿದೆ. ಇನ್ನು ಹಿಂದೆ ಸರಿಯುವುದು ಸಾಧ್ಯವಿಲ್ಲದ ಮಾತು. “ಸರೀ...ಏನ್ ಮಾಡ್ತೀರಾ ನನ್ನೋಡ್ಯಾ, ಶನಿ ಏಳ್ನೇಮನೇಗೆ ಬರ್ದಂಗೆ ಹೆಂಗ್ ತಡೀತೀರಾ”? ದುಡ್ದು ಕೊಡುವುದೆಂದು ನಿರ್ಧರಿಸಿದ ಪುಟ್ಲಿಂಗು, ತನ್ನ ಬುದ್ದಿವಂತಿಕೆಯ ಪ್ರದಶ್ರಿಸಲು ಪ್ರಶ್ನೆಯೊಂದೊಗೆದಿದ್ದ.
ಜ್ಯೋತಿಷಿ: ನಾನು...ಒಂದು ಯಂತ್ರ ಕೊಡ್ತೀನಿ, ಅದನ್ನ ತೊಂಗೊಂಡು ಹೋಗೀ, ಮಧ್ಯದಲ್ಲೇ ನಿಲ್ಲಿಸಿ ಇವರನ್ನೇ ದಿಟ್ಟಿಸಿ, “ಬೆಳ್ಳಿ ಬಟ್ಟಲಿದೆಯಾ ಮನೇಲೀ” ಎಂದು ಕೇಳಿದರು. “ಇದೇ ಬುದ್ದೀ, ಇಷ್ಟು ದಪ್ಪ ಐತೆ, ಸಾಲ್ದಾ ಅಯ್ನೋರಾ? ಎಂದು ತನ್ನ ಕೈಯಗಲಿಸಿದ.
“ಪರವಾಗಿಲ್ಲ ಸಾಕು, ಅದರ ತುಂಬಾ..., ಮತ್ತೆ ತಡೆದು, “ಹಸು, ಎಮ್ಮೆ ಕಟ್ಟಿದೀರೋ” ಕೇಳಿದರು ಜೊಲ್ಲು ಸುರಿಸುತ್ತಾ ಅಯ್ನೋರು, ಪುಟ್ಮಲ್ಲಿಯ ಕಡೆ ನೋಡುತ್ತಾ. “ಅವೇ ಅಯ್ನೋರಾ, ಎಲ್ಡು ಸೀಮೇ ಹಸ, ಮೂರು ನಾಟೀ ಎಮ್ಮೆ, ನಾಕು ಓರಿ ದನ, ಮುನ್ನೂರು ಕುರೀಗ್ಳು ಅವೆ”. ಎಂದಿದ್ದಳು ಪುಟ್ಮಲ್ಲಿ ಅಮಾಯಕಳಂತೆ.
“ಬೆಳ್ಳಿ ಬಟ್ಲತುಂಬಾ ಹಸುವಿನ ಹಸಿಹಾಲು ಹಾಕಿ, ಅದ್ರೊಳಗೆ ನಾನು ಕೊಟ್ಟ ಯಂತ್ರವನ್ನ ಹಾಕಿಡಿ. 48ಗಂಟೆ ಅದು ಅದ್ರಲ್ಲೇ ಇರ್ಬೇಕು, ಆಮೇಲೆ ತೆಗೆದು ದೇವರಬಳಿ ಇಟ್ಟು ಅರಿಶಿನ, ಕುಂಕುಮ ಪೂಜೆ ಮಾಡಿ, ಸ್ವಲ್ಪ ಮಲ್ಲಿಗೆ ಬಿಡಿಹೂ ಪೂಜೆ ಮಾಡ್ಬೇಕು. ಆಮೇಲೆ ಶನಿವಾರ ಮಧ್ಯರಾತ್ರಿ 12ಘಂಟೆಗೆ ಸರಿಯಾಗಿ ಅದನ್ನ ನಿಮ್ಮಮನೆಯ ಹೊರಬಾಗಿಲಿನ ಜಂತೆಗೆ ಕಟ್ಟಬೇಕು. ಬೆಳ್ಳಿ ಬಟ್ಟಲಲ್ಲಿರೋ ಹಾಲನ್ನ ಮನೆಯ ಮುಂಬಾಗಿಲಿನ ಮುಂದೆ ಅಡ್ಡಲಾಗಿ ಹಾಕಬೇಕು, ತಿಳೀತಾ”
ಮಧ್ಯರಾತ್ರಿ ಹನ್ನೆರಡು ಎಂದ ಕೂಡಲೆ ದಂಪತಿಗಳ ಎಧೆಯಲ್ಲಿ ಹನ್ನೆರಡು ಹೊಡೆದಿತ್ತು. “ಹಿಂಗೆ ಮಾಡಿದ್ರೆ ಶನಿ ಅವ್ರಮನೇಗೆ ಹೋಗಾಕಿಲ್ವಾ”? ಮೆಲ್ಲಗೆ ಕೇಳಿದ್ದ ಅಮಾಯಕ ಪುಟ್ಲಿಂಗು. “ಬಂದವನೇ ಯಂತ್ರ ನೋಡಿ ವಾಪಸ್ ಹೋಗ್ಬಿಡ್ತಾನೆ” ಅನ್ಬೇಕೇ ಅಯ್ನೋರು!
ಸರೀ...15000ಕೊಟ್ಟು ಯಂತ್ರ ತಂದು ಅಯ್ನೋರು ಹೇಳಿದಂತೆ ಶನಿವಾರ ರಾತ್ರಿ 12ಘಂಟೆಗೆ ಸರಿಯಾಗಿ ಭಯ ಭಕ್ತಿಯಿಂದಾ ಮನೆಯ ಹೊರಬಾಗಿಲಿನ ಜಂತೆಗೆ ಕಟ್ಟಿದ್ದರು ದಂಪತಿಗಳು. ಇನ್ನು ಶನಿ ಬರಲಾರನೆಂದು ನೆಮ್ಮದಿಯ ಸುಖನಿದ್ರೆ ಮಾಡಿದ್ದರು.
ಬೆಳಕು ಹರಿುತು, ಭಾನುವಾರ ಮಧ್ಯಾಹ್ನ 12ಘಂಟೆಗೆ ಸರಿಯಾಗಿ, ಆಸ್ತಿ ಪಾಲಿಗೆಂದು ತನ್ನ ಮಗಳೊಂದಿಗೆ, 'ದಶಮ ಗ್ರಹ' ಅಳಿಯ ಮನೆಯ ಹೊಸಿಲು ಮೆಟ್ಟಿದ್ದ!
-ಎಂ.ಎಸ್.ಮುರಳಿಧರ್ , ಶಿರಾ.
Rating
Comments
ಉ: 1. ಪುಟ್ಲಿಂಗು ಪ್ರಸಂಗ = ದಶಮ ಗ್ರಹ
In reply to ಉ: 1. ಪುಟ್ಲಿಂಗು ಪ್ರಸಂಗ = ದಶಮ ಗ್ರಹ by ಗಣೇಶ
ಉ: 1. ಪುಟ್ಲಿಂಗು ಪ್ರಸಂಗ = ದಶಮ ಗ್ರಹ
ಉ: 1. ಪುಟ್ಲಿಂಗು ಪ್ರಸಂಗ = ದಶಮ ಗ್ರಹ
ಉ: 1. ಪುಟ್ಲಿಂಗು ಪ್ರಸಂಗ = ದಶಮ ಗ್ರಹ