"ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೨)
"ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A7/11/04/2012/36328
ವಿಶ್ವದ ಉಗಮ
ಸೃಷ್ಟಿಯ ಅಥವಾ ವಿಶ್ವದ ಉಗಮ ಪ್ರಕೃತಿ ಮತ್ತು ಪುರುಷರ 'ಸಂಯೋಗ್ಯ' ಅಥವಾ 'ನಿಶ್ಚಿತವಾದ ಒಂದುಗೂಡುವಿಕೆ'ಯಿಂದ ಪ್ರಾರಂಭವಾಗುತ್ತದೆ. ಒಟ್ಟಾರೆಯಾಗಿ ಎಲ್ಲಾ ಪುರುಷರ ಕರ್ಮವು (ಅದೃಷ್ಟವು) ಪ್ರಕೃತಿಯಲ್ಲಿರುವ ಗುಣಗಳ ಸಮತುಲ್ಯ ಸ್ಥಿತಿಯನ್ನು ವ್ಯತ್ಯಸ್ಥಗೊಳಿಸಿ ಸೃಷ್ಟಿಯ ಪ್ರಕ್ರಿಯೆಯನ್ನು ಉಂಟುಮಾಡುತ್ತವೆ.
ಪ್ರಕೃತಿಯು ಜಡವಾಗಿದ್ದು (ಜೀವರಹಿತ ಮತ್ತು ಚೈತನ್ಯರಹಿತವಾಗಿದ್ದು) ಮತ್ತು ಪುರುಷನು ಅಸಂಗನಾಗಿರುವಾಗ (ಸಂಪೂರ್ಣವಾಗಿ ಬಂಧನಕ್ಕೊಳಗಾಗದೇ ಇರುವಾಗ) ಇವೆರಡೂ ಅದು ಹೇಗೆ ಸೃಷ್ಟಿಕ್ರಿಯೆಗೆ ಸಹಕರಿಸುತ್ತವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ? ಈ ರೀತಿಯ ಸಹಕಾರವು ಒಬ್ಬ ಕುರುಡ ಹಾಗು ಒಬ್ಬ ಕುಂಟ ಒಗ್ಗಟ್ಟಾಗಿ ಕಾಡಿನಿಂದ ಹೊರಬರುವ ತರದಲ್ಲಿರುತ್ತದೆ; ಕುರುಡನು ಹೆಳವನನ್ನು ಹೊತ್ತುಕೊಂಡು ಅವನ ನಿರ್ದೇಶನದಂತೆ ಸರಿಯಾದ ರಸ್ತೆಗೆ ಬರುವಂತೆ. ಸಾಂಖ್ಯರು ತಮ್ಮ ವಾದವನ್ನು ಪ್ರತಿಪಾದಿಸಲು ಇನ್ನೊಂದು ಉದಾಹರಣೆಯನ್ನು ಮುಂದಿಡುತ್ತಾರೆ - ತನ್ನ ಸಮೀಪದಲ್ಲಿ ಕರುವಿದ್ದಾಗ ಆಕಳ ಕೆಚ್ಚಲಿನಿಂದ ಅಪ್ರಚೋದಿತವಾಗಿ ಹಾಲು ಸ್ರವಿಸುವಂತೆ.
ಪ್ರಕೃತಿಯಿಂದ ಸೃಷ್ಟಿಕ್ರಿಯೆಯ ಉಗಮವು ಈ ರೀತಿ ಇರುತ್ತದೆ: ಗುಣಗಳು ಒಂದರೊಂದಿಗೆ ಮತ್ತೊಂದು ಸಂಕರಗೊಂಡಾಗ (ಕಲೆತಾಗ) ಪ್ರಕೃತಿಯಿಂದ ಲಭ್ಯವಾಗುವ ಪ್ರಥಮ ಸಂಕರವೇ ಮಹತ್ ಅಥವಾ ಬುದ್ಧಿ (ವಿಶ್ವದ ಬುದ್ಧಿ). ಈ ಮಹತ್ತಿನಿಂದ ಉಂಟಾಗುವುದೇ ಅಹಂಕಾರ (ವಿಶ್ವದ ಅಹಂಕಾರ - ನಾನು ಎನ್ನುವ ತತ್ವ). ಅಹಂಕಾರದ ಸಾತ್ವಿಕ ಅಂಶದಿಂದ ಮನಸ್ (ವಿಶ್ವದ ಮನಸ್ಸು), ಐದು ಜ್ಞಾನೇಂದ್ರಿಯಗಳು (ವಿಶ್ವದ - ಕಣ್ಣು, ಕಿವಿ ಮೊದಲಾದ ಜ್ಞಾನೇಂದ್ರಿಯಗಳು), ಮತ್ತು ರಾಜಸಿಕ ಅಂಶದಿಂದ ಐದು ಕರ್ಮೇಂದ್ರಿಯಗಳು (ವಿಶ್ವದ ಕರ್ಮೇಂದ್ರಿಯಗಳಾದ ಕೈ, ಕಾಲು ಮೊದಲಾದವುಗಳು) ಉದ್ಭವಿಸುತ್ತವೆ. ಅಹಂಕಾರದ ತಾಮಸಿಕ ಅಂಶದಿಂದ ಐದು ತನ್ಮಾತ್ರಗಳು (ಸೂಕ್ಷ್ಮ ರೂಪದ ಪೃಥ್ವಿ , ಜಲ ಮೊದಲಾದವುಗಳು) ಮತ್ತು ಅವುಗಳಿಂದ ಸ್ಥೂಲ ರೂಪದ ಪಂಚ ಮಹಾಭೂತಗಳಾದ ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶ ಇವುಗಳು ಉದ್ಭವಿಸುತ್ತವೆ.
ಒಟ್ಟಿನಲ್ಲಿ ಪ್ರಕೃತಿಯನ್ನು ಒಳಗೊಂಡು ೨೪ ಆಕಾಶ ತತ್ವಗಳು ಅಥವಾ ಧಾತುಗಳು ಉಂಟಾಗುತ್ತವೆ. ಉಳಿದ ಸೃಷ್ಟಿಕ್ರಿಯೆಯು ಈ ವಿವಿಧ ಧಾತುಗಳ ಸಂಕೀರ್ಣತಗೆಳಿಂದ ಉಂಟಾದ ಸಂಯೋಜನೆಗಳಿಂದ ಒಡಗೂಡಿ ಪ್ರತಿಯೊಬ್ಬ ಪುರುಷನು ಒಂದು 'ಮನೋಭೌತಿಕ ಸಂಕೀರ್ಣ'(ಕಾಯ/ದೇಹ)ವನ್ನು ತನ್ನ ಕರ್ಮಫಲಕ್ಕನುಗುಣವಾಗಿ ಪಡೆಯುವಲ್ಲಿ ಮುಗಿಯುತ್ತದೆ.
ಬಂಧನ ಮತ್ತು ಬಿಡುಗಡೆ
ಸೋಜಿಗದ ಸಂಗತಿಯೆಂದರೆ ಸಾಂಖ್ಯ ತತ್ವಸಿದ್ಧಾಂತದ ಪ್ರಕಾರ ಈ ಪ್ರಪಂಚವನ್ನು ಸೃಷ್ಟಿಯು ಸೃಜಿಸುವುದರ ಹಿಂದಿರುವ ಮೂಲ ಉದ್ದೇಶ ಪುರುಷನಿಗೆ ಮುಕ್ತಿ ಹೊಂದಲು ಮತ್ತೊಂದು ಅವಕಾಶವನ್ನು ಒದಗಿಸುವುದು. ಮತ್ತದೇ ಪ್ರಕೃತಿ ಮತ್ತದರ ಉತ್ಪನ್ನವಾದ ಈ ಪ್ರಪಂಚ ಅವನನ್ನು ಮತ್ತೊಮ್ಮೆ ಬದ್ಧನಾಗಿಸುತ್ತದೆ (ಬಂಧನಕ್ಕೊಳಪಡಿಸುತ್ತದೆ)!
ಪುರುಷನು ಪ್ರಾಪಂಚಿಕತೆಯ ಸುಳಿಗೆ ಸಿಕ್ಕಿವುದು ಮತ್ತು ದುಃಖವನ್ನು ಅನುಭವಿಸುವುದು 'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ ಅಂದರೆ; ನಿತ್ಯಶುದ್ಧ ಮತ್ತು ಚೈತ್ಯನ್ಯ ಸ್ವರೂಪಿ ಪುರುಷನಾದ ತನಗೂ ಜಡ ಮತ್ತು ಚೈತನ್ಯರಹಿತವಾದ ಪ್ರಕೃತಿಗೂ ಭೇದವನ್ನು ಕಂಡುಕೊಳ್ಳದೇ ಹೋಗುವುದು. ಈ ಅಜ್ಞಾನದಿಂದಾಗಿಯೇ ಪುರುಷನು ಜನನ-ಮರಣಗಳ ಸ್ಥಿತಿಗಳಿಗೊಳಗಾಗಿ ಅಥವಾ ಕೊನೆಯಿಲ್ಲದ ಪುನರ್ಜನ್ಮಗಳ ಚಕ್ರಕ್ಕೆ ಸಿಲುಕುತ್ತಾನೆ.
ಈ ಗೊಂದಲದೊಳಗೆ ಹೇಗೆ ಮತ್ತು ಯಾವಾಗ ಪುರುಷನು ಸಿಲುಕಿಕೊಂಡ ಎನ್ನುವುದನ್ನು ಉತ್ತರಿಸುವುದು ಸಾಧ್ಯವಿಲ್ಲ ಆದರೆ ಇದು 'ಅನಾದಿ' (ಪ್ರಾರಂಭರಹಿತವಾದದ್ದು) ಆದರೂ ಇದು 'ಸಾಂತ'ವಾದದ್ದು(ಕೊನೆಯಿರುವಂಥಾದ್ದು).
'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ ಪುರುಷನು ಪ್ರಾಪಂಚಿಕ ಬಂಧನದಲ್ಲಿ ಸಿಲುಕುವುದರಿಂದ, 'ಕೈವಲ್ಯ' ಅಥವಾ 'ಮುಕ್ತಿ'ಯು ಕೇವಲ 'ವಿವೇಕಖ್ಯಾತಿ' ಅಥವಾ ನಿಜವಾದ ಜ್ಞಾನದಿಂದ ಮಾತ್ರವೇ ಲಭ್ಯವಾಗುವುದು. 'ಖ್ಯಾತಿ' ಎಂದರೆ 'ಜ್ಞಾನ' (ಅಂದರೆ ನೇರವಾದ ಗ್ರಹಿಕೆ ಎನ್ನುವ ಅರ್ಥದಲ್ಲಿ) ಮತ್ತು 'ವಿವೇಕ'ವೆಂದರೆ ಪುರುಷನು ತಾನು ಶುದ್ಧವಾದ ಚೇತನರೂಪಿಯೆಂದೂ ಮತ್ತು ತನಗೂ ಹಾಗೂ ಅಚೇತನವಾದ ಜಡ ಪ್ರಕೃತಿಯು ಬೇರೆಯೆಂದು ಅರಿಯುವುದು. ಈ ತಿಳುವಳಿಕೆಯನ್ನು ಯೋಗದ ಅಷ್ಟಾಂಗಗಳನ್ನು ಅನುಸರಿಸುವುದರಿಂದ ಗಳಿಸಿಕೊಳ್ಳಬಹುದು; ಇಲ್ಲಿ ಪುರುಷ ಅಥವಾ ಆತ್ಮವು ಧ್ಯಾನದ ವಸ್ತುವಾಗಿರುತ್ತದೆ.
ಸಾಂಖ್ಯ ದರ್ಶನವು ಎರಡು ವಿಧವಾದ ಮುಕ್ತಿಯನ್ನು ಒಪ್ಪಿಕೊಳ್ಳುತ್ತದೆ, ಅವೆಂದರೆ 'ಜೀವನ್ಮುಕ್ತಿ' ಮತ್ತು 'ವಿದೇಹಮುಕ್ತಿ'. 'ಜೀವನ್ಮುಕ್ತಿ'ಯು ಜೀವಿಸಿರುವಾಗಲೇ ಹೊಂದಲ್ಪಡುತ್ತದೆ; ಅಂದರೆ ದೇಹವು 'ಪ್ರಾರಬ್ಧ ಕರ್ಮ'ವು (ಈ ಜನ್ಮಕ್ಕೆ ಕಾರಣವಾದ ಕರ್ಮವು) ಅಂತ್ಯಗೊಳ್ಳುವ ತನಕ ಇರುತ್ತದೆ. ಈ ಸ್ಥಿತಿಯಲ್ಲಿ ಮುಕ್ತ ಪುರುಷನು ಪ್ರಪಂಚದಲ್ಲಿ ಜೀವನವನ್ನು ಮುಂದುವರೆಸುತ್ತಾನೆ; ಪ್ರಾಪಂಚಿಕತೆಯನ್ನು ಬದಿಗಿಟ್ಟು.
ಅಂತಿಮ ಮುಕ್ತಿಯು ದೇಹವು ಮರಣಿಸಿದ ನಂತರ ಉಂಟಾಗುತ್ತದೆ ಆದ್ದರಿಂದ ಅದನ್ನು 'ವಿದೇಹಮುಕ್ತಿ' ಎನ್ನುತ್ತಾರೆ; ಇಲ್ಲಿ ಪುರುಷನು ಮತ್ತೆ ಈ ದೈನಂದಿನ ಪ್ರಪಂಚಕ್ಕೆ ಹಿಂತಿರುಗುವುದಿಲ್ಲ. ಅವನು ಎಲ್ಲಾ ವಿಧವಾದ ನೋವು ಮತ್ತು ಯಾತನೆಯಿಂದ ಪೂರ್ಣಮುಕ್ತಿಯನ್ನು ಹೊಂದಿದ ಸ್ಥಿತಿಯಲ್ಲಿರುತ್ತಾನೆ; ಆದರೆ ನಿತ್ಯಾನಂದದಲ್ಲಿ ಅಲ್ಲ. ಆದರೆ ಚೈತನ್ಯ ಅಥವಾ ಪ್ರಜ್ಞೆಯು ಅವನ ಸ್ವರೂಪವಾದ್ದರಿಂದ ಅವನು ತನ್ನ ಆ ಸ್ಥಿತಿಯಲ್ಲೇ ನಿತ್ಯವಾಗಿ ಇರುತ್ತಾನೆ.
=================================================================================================
ವಿ.ಸೂ: ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Sankhya Darshanaನದ ೩೮ ರಿಂದ ೪೧ನೆಯ ಪುಟದ ಅನುವಾದದ ಭಾಗ.
Comments
ಉ: "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by geethavision
ಉ: "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...