ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ
ಚಿತ್ರ
ಪುಟ್ಲಿಂಗು: ಅಣ್ಣ ಎತ್ಲಾಗೊಂಟೆ?
ಪರ್ಮೇಶಿ: ಅಯ್ಯೋ ಮುಟ್ಟಾಳ, ಯಾವ್ದಾದ್ರೂ ಒಳ್ಳೇಕೆಲ್ಸಕ್ಕೆ ಹೋಗೋವಾಗ ಹಾಗೆಲ್ಲಾ
ಕೇಳ್ತಾರೇನೋ?
ಪುಟ್ಲಿಂಗು: ತಪ್ಪಾಯ್ತು ಬಿಡಣ್ಣ, ಇನ್ಮೇಲ್ ಕೇಳಾಕಿಲ್ಲ, ಅಂದಂಗೆ ಎಲ್ಲೀಗೊಂಟಣ್ಣ? ಮತ್ತದೇ ಪ್ರಶ್ನೆ ಕೇಳಿದ್ದ ನಮ್ ಪುಟ್ಲಿಂಗು. ಅವನನ್ನೆ ದುರುಗುಟ್ಟಿಕೊಂಡು ನೋಡುತ್ತಾ, ಇನ್ನು ಇದಕ್ಕೆ ಉತ್ತರಿಸುವವರೆವಿಗೂ ಬಿಡನೆಂದರಿತ ಪರ್ಮೇಶಿ, “ಫ್ರೀಡಂ ಪಾರ್ಕ್” ಎಂದ ಕೋಪದಿಂದಾ.
ಪುಟ್ಲಿಂಗು: ‘ಅಂಗಂದ್ರೆ’? ಮತ್ತೊಂದು ಪ್ರಶ್ನೆ ಮಿಸೈಲ್ನಂತೆ ಬಂದಪ್ಪಳಿಸಿತ್ತು.
ಪರ್ಮೇಶಿ: “ಸ್ವಾತಂತ್ರ್ಯ ಉದ್ಯಾನವನ” ಎಂದ.
ಪುಟ್ಲಿಂಗು: ಈ ಬಿಸ್ಲೋತ್ನಾಗೆ ಅಲ್ಲೀಗ್ ಓಗಿ ಯಾವ್ ಆಟ ಆಡೀಯಪ್ಪಾ ನೀನು?
ಪರ್ಮೇಶಿ: ಆಟ ಆಡೋಕಲ್ವೋ, ಮಂಕ್ ಸಿದ್ರಾಮ, ಅಣ್ಣ ಹಜಾರೆ ಭ್ರಷ್ಟಾಚಾರದ ವಿರುದ್ದ ಇವತ್ತಿನಿಂದ ಉಪವಾಸ ಸತ್ಯಾಗ್ರಹ ಕೂಡ್ತಾರೆ. ಅದಕ್ಕೆ.
ಪುಟ್ಲಿಂಗು: “ಅರೆರೆ, ಹೌದು ಇದನ್ನ ಟಿ.ವಿ.ನಾಗೆ ಬೆಳಿಗ್ನಿಂದ ಬಡ್ಕೋತಾ ಇದ್ರು. ಅಂಗಾರೆ ಅವ್ರು ಬೆಂಗ್ಳೂರ್ಗೆ ಬಂದವ್ರೆ ಅನ್ನು” ಅಂದ.
ಪರ್ಮೇಶಿ: “ಅವ್ರು ಬಂದಿಲ್ವೋ, ಅವ್ರು ದೆಹಲಿ ಜಂತರ್ ಮಂತರ್ ನಲ್ಲಿ ಉಪವಾಸಕ್ಕೆ ಕೂಡ್ತಾರೆ”
ಪುಟ್ಲಿಂಗು: “ಮತ್ತೆ, ನೀನು ಇಲ್ಲೋಗಿ ಏನ್ ಗೆಣಸು ಕೆತ್ತೀಯಾ?
ತಲೆ ಕೆಟ್ಹೋಯ್ತು, ಪರ್ಮೇಶೀಗೆ. ಲೇ, ಅವೆಲ್ಲಾ ನಿಂಗ್ಯಾಕೋ, ಬರ್ತೀಯಾ ನೀನೂ, ಹೇಳು? ಎಂದ ಬೇಸರದಿಂದ. ಇದನ್ನೇ ಕಾಯುತ್ತಿದ್ದ ನಮ್ ಪುಟ್ಲಿಂಗು ಮತ್ತೊಂದು ಮಾತೂ ಆಡದಂತೆ ಪರ್ಮೇಶಿಯ ಬೈಕ್ ಹತ್ತಿ ಕುಳಿತ. ಅಲ್ಲಿ ಇವರೇನು ಕಿತ್ತು ದಬ್ಬಾಕುವರೋ ನೋಡುವ ಆಸೆಯಾಗಿತ್ತು ಅವನಿಗೆ. ಪರ್ಮೇಶಿ ಬೈಕ್ ಸ್ಟಾರ್ಟ್ ಮಾಡಿದ.
ಬಿಸಿಲಿನ ಗಾಳಿಯನ್ನು ಸೀಳಿಕೊಂಡು ಪರ್ಮೇಶಿ ಬೈಕು ಮುನ್ನುಗ್ಗಿತ್ತು. “ಅಂದಂಗೇ ಅಣ್ಣ ಹಜಾರೆ ತಾತಂಗೆ ಏಸು ವರ್ಸ ಇರ್ಬೋದಣ್ಣ”? ಹಿಂದಿನಿಂದ ಪುಟ್ಲಿಂಗು ಪ್ರಶ್ನೆ ಕಿವಿಯನ್ನಪ್ಪಳಿಸಿತ್ತು.
ಪರ್ಮೇಶಿ: “ಅದನ್ನ ತಿಳ್ಕೊಂಡು ನೀನು ಏನ್ ಮಾಡೋಹಾಗಿದೀಯ ಈಗ”? ಸಿಡುಕುತ್ತಲೇ ಉತ್ತರಿಸಿದ್ದ ಪರ್ಮೇಶಿ.
ಪುಟ್ಲಿಂಗು: “ಸುಮ್ಕೆ, ಕೇಳ್ದೆಕಣಣ್ಣೋ. ಬೇಜಾರ್ ಮಾಡ್ಕೋಬೇಡ”? ಎಂದವನೇ ಅವನ ಬೆನ್ನುತಟ್ಟಿ, “ಒಂದರವತ್ತಾಗಿರ್ಬೋಯ್ದಾ”?
ಪರ್ಮೇಶಿ: “ಇನ್ನೂ ಜಾಸ್ತಿ”
ಪುಟ್ಲಿಂಗು: “ಎಪ್ಪತ್ತು”? ಎಂದು ಮರುಪ್ರಶ್ನೆ ಎಸೆದಿದ್ದ. ಪರ್ಮೇಶಿಗೆ ಸಿಟ್ಟು ತಡೆಯಲಾಗಲಿಲ್ಲ. “ಮುಚ್ಕೊಂಡು ಸುಮ್ನೆ ಕೂತ್ಕೋತೀಯೋ ಇಲ್ಲ ಒದ್ದು ಇಲ್ಲೇ ಇಳಿಸ್ಲೋ”? ಎಂದ.
ಇನ್ನು ಹೆಚ್ಚು ಮಾತನಾಡಿದರೆ ಕೆಲಸ ಕೆಡಬಹುದೆಂದರಿತ ಪುಟ್ಲಿಂಗು ತೆಪ್ಪಗಾದ. ಅಷ್ಟರಲ್ಲೇ ಬೈಕ್ “ಫ್ರೀಡಂ ಪಾರ್ಕ್” ಮುಂದೆ ನಿಂತಿತ್ತು.
ಅಲ್ಲಿ ನೆರೆದಿದ್ದ ಜನಸಮೂಹವನ್ನು ಕಂಡು ಪುಟ್ಲಿಂಗು ಬೆರಗಾಗಿಹೋದ. ಆಡೋ ಹುಡುಗರಿಂದ ಹಿಡಿದು ಅಲ್ಲಾಡೋ ಮುದುಕರವರೆಗೂ ನೆರೆದಿದ್ರು ಅಲ್ಲಿ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಣ್ಣಬಣ್ಣದ ಉಡುಗೆತೊಟ್ಟು, ಕೈಯಲ್ಲಿ ಭಾರತದ ಭಾವುಟವನ್ನು ಹಿಡಿದು ಅತ್ಯುತ್ಸಾಹದಿಂದ ‘ಅಣ್ಣ ಹಜಾರೆಗೆ ಜೈ”, ‘ಭಾರತ್ ಮಾತಾಕಿ ಜೈ’, ‘ಭ್ರಷ್ಟಾಚಾರ ತೊಲಗಲಿ’ ಎಂದು ಘೋಷವಾಕ್ಯ ಕೂಗುತ್ತಿದ್ದರು. ಪುಟ್ಲಿಂಗುಗೆ, ಬೆಂಗಳೂರಿನ ಜನರೆಲ್ಲಾ ಇಲ್ಲೇ ಸೇರಿರಬಹುದೆನಿಸಿತ್ತು. ಇಂತ ಜನಸಾಗರವನ್ನು ಇದುವರೆವಿಗೂ ಅವನು ಕಂಡೇಇರಲಿಲ್ಲ. ಅಲ್ಲಿ ನೆರೆದಿದ್ದವರ ವೊಗದಲ್ಲಿ ಏನೋ ಮಹತ್ತರವಾದದ್ದು ಸಾಧಿಸಿದ ಭಾವ. ಪರ್ಮೇಶಿ ವೊಗದಲ್ಲೂ ಅದೇ ಗತ್ತುಕಂಡ ಪುಟ್ಲಿಂಗು ಮುಸಿಮುಸಿ ನಕ್ಕ. ಅವರೊಂದಿಗೆ ಸೇರಿ ಇವನೂ ಭ್ರಷ್ಟಾಚಾರದ ವಿರುದ್ದ ಕೂಗುಹಾಕಿದ್ದ.
ಪರ್ಮೇಶಿ, ಪುಟ್ಲಿಂಗು ಕೈಹಿಡಿದು ದರದರನೆ ಜನಗಳ ಮಧ್ಯ ಎಳೆದುಕೊಂಡು ಹೋದ. ಪುಟ್ಲಿಂಗುಗೆ ಗಾಬರಿಯಾುತು. ‘ಅದ್ಯಾಕಣ್ಣ ದನಾನೆಳ್ದಂಗೆ ಎಳೀತಾ ಇದೀಯಾ’ ಕೇಳಿಯೇಬಿಟ್ಟ. ‘ಸುಮ್ನೇ ಬಾರೋ’ ಎಂದವನೇ ಒಂದುಕಡೆ ನಿಂತ. ಅಲ್ಲಿ ಎಲ್ಲರೂ ತಮ್ಮ ತಮ್ಮ ಮುಖಗಳಿಗೆ ರಾಷ್ಟ್ರಧ್ವಜದ ಬಣ್ಣ ಬಳಿಸಿಕೊಳ್ಳುತ್ತಿದ್ದರು. ಪರ್ಮೇಶಿಯೂ ಬಳಿಸಿಕೊಂಡ. ಪುಟ್ಲಿಂಗೂಗು ಬಳಿಯಲು ಹೇಳಿದ. ‘ನಂಗೆ ಬೇಡಪ್ಪ’ ಎಂದವನೇ ಪುಟ್ಲಿಂಗು ಓಡಲೆತ್ನಿಸಿದ. ಅವನ ಕೈಹಿಡಿದು ಜಗ್ಗಿದ ಪರ್ಮೇಶಿ, ಬಲವಂತವಾಗಿ ಬಣ್ಣ ಬಳಿಸಿಯೇಬಿಟ್ಟ. ವೇದಿಕೆಯಮೇಲಿನಿಂದ ಯಾರ್ಯಾರೋ ಮುಖಂಡರು ಮೈಕ್ ಹಿಡಿದು ಮಾತನಾಡುತ್ತಲೇ ಇದ್ದರು. ಭ್ರಷ್ಟಾಚಾರದ ಕಬಂದ ಬಾಹು ಹೇಗೆ ಇಡೀ ಭಾರತವನ್ನು ಆಕ್ರಮಿಸಿ, ಇಂಚಿಂಚಾಗಿ ಕಬಳಿಸುತ್ತಿದೆಯೆಂದು ವಿವರಿಸುತ್ತಿದ್ದರು. ನಾವೆಲ್ಲರೂ ಒಗ್ಗಟ್ಟಾಗಿ ಈ ಭ್ರಷ್ಟಾಚಾರದ ಭೂತವನ್ನು ಭಾರತದಿಂದ ಹೊಡೆದೋಡಿಸುವ ಪಣತೊಡಬೇಕೆಂದು ಮನವಿ ಮಾಡುತ್ತಿದ್ದರು. ಇನ್ನುಮುಂದೆ ಇಲ್ಲಿನೆರೆದಿರುವ ಯಾರೂ ಲಂಚ ಕೊಡುವುದಾಗಲಿ, ಪಡೆಯುವುದಾಗಲಿ ಮಾಡುವುದಿಲ್ಲವೆಂದು ಪ್ರಮಾಣ ಮಾಡಬೇಕೆಂದರು. ಸರಿ, ಜನಮರುಳೋ, ಜಾತ್ರೆಮರುಳೋ ಎಂಬಂತೆ, ಎಲ್ಲರೂ ಸಮೂಹ ಸನ್ನಿಗೊಳಗಾದವರಂತೆ, ತಮ್ಮ ಬಲಹಸ್ತವನ್ನು ಎಧೆಮಟ್ಟಕ್ಕೆ ತಂದು, ಜೋರಾಗಿ ‘ಇನ್ನು ಮುಂದೆ, ನಾನು ಲಂಚ ಕೊಡುವುದಾಗಲಿ, ಪಡೆಯುವುದಾಗಲಿ ಮಾಡುವುದಿಲ್ಲವೆಂದು ಆತ್ಮ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಿದ್ದೇನೆ’ ಎಂದು ಆಕಾಶ ಬಿರಿಯುವಂತೆ ಕೂಗಿದರು. ನಮ್ಮ ಪರ್ಮೇಶಿಯೂ ನಾನೂ ಯಾರಿಗೇನೂ ಕಡಿಮೆುಲ್ಲವೆಂಬಂತೆ ಗಂಟಲು ಹರಿಯುವಂತೆ ಅರಚಿದ್ದ. ಪುಟ್ಲಿಂಗು ಮಾತ್ರ ಇದೆಲ್ಲಾ ಏನೂ ಪ್ರಯೋಜನವಿಲ್ಲವೆಂಬ ಬಾವದಲ್ಲಿ ನಿರ್ಲಿಪ್ತನಾಗಿ ನಿಂತಿದ್ದ. ನಮ್ಮ ಪರ್ಮೇಶಿ ಎಲ್ಲಿಂದಲೋ ಒಂದು ಸ್ಟಿಕ್ಕರ್ ತಂದು ತನ್ನ ಬೈಕ್ನ ಮುಂಭಾಗಕ್ಕೆ ಮತ್ತು ಹಿಂಭಾಗಕ್ಕೆ ಅಂಟಿಸಿದ. ಪುಟ್ಲಿಂಗು ಅದನ್ನು ಗಮನಿಸಿದ. ಸುಮ್ಮನೇ ಇದ್ದಾನೇ?
ಪುಟ್ಲಿಂಗು: “ಏನಣ್ಣ ಅದು, ಇಂಗ್ಲೀಸ್ನಾಗಿರೋದು”? ಪ್ರಶ್ನೆಯೊಂದೆಸೆದ.
ಪರ್ಮೇಶಿ: “I am Anna, I am an Indian, Are you?” ಅಂತ.
ಪುಟ್ಲಿಂಗು: “ಅಗಂದ್ರೆ ಏನಣ್ಣೋ?” ವಸಿ ಅರ್ಥ ಆಗೋಂಗೇಳಣ್ಣ”. ಪರ್ಮೇಶಿಗೆ ಕೋಪ ಉರಿ ಬಿಸಿಲಿನಂತೆ, ನೆತ್ತಿಗೇರಿತ್ತು. ಆದರೂ ಸಹನೆುಂದ “ನಾನು ಅಣ್ಣ, ನಾನೊಬ್ಬ ಭಾರತೀಯ, ನೀನು?” ಅಂತ.
ಪುಟ್ಲಿಂಗು: “ಕರೆಕ್ಟು ಬಿಡಣ್ಣೊ, ಅದಕ್ಕೆ ಅಲ್ವಾ ನಾನು ನಿನ್ನ ಅಣ್ಣ ಅಂತ ಕರಿಯೋದು, ಇದೇನೋ ಸರಿ, ಆದ್ರೆ, ನೀನೊಬ್ನೆ ಭಾರತೀಯಾನಾ? ನಾವೆಲ್ಲಾ ದಿಕ್ಕೆಟ್ಟ ಪರ್ದೇಶೀಗ್ಳೋ?” ಅಂದುಬಿಟ್ಟ. ಪರ್ಮೇಶಿಯ ಸಹನೆಯ ಕಟ್ಟೆಒಡೆುತು. “ಈಗ ಮಾತಾಡ್ದಂಗೆ ಸುಮ್ನೆ ಹಿಂದೆ ಕೂತ್ಕೋತೀಯೋ, ಇಲ್ಲ ಕಾಲಿಂದು ಬಿಚ್ಕೊಳ್ಳೋ”? ಕೇಳಿದ ಕೋಪದಿಂದ. ಪುಟ್ಲಿಂಗು ಬೆಕ್ಕನ್ನು ಕಂಡ ಇಲಿಯಂತೆ ತೆಪ್ಪಗಾಗಿ ಬೈಕು ಹತ್ತಿಕುಳಿತ. “ಒಳ್ಳೇ, ಬೆಕ್ಕನ್ನ ಕಂಕ್ಳಲ್ಲಿ ಇಟ್ಟ್ಕೊಂಡು ಬಂದ್ಹಾಗಾಯ್ತು, ನಿನ್ನ ಕರ್ಕೊಂಡ ಬಂದಿದ್ದು”, ಎಂದು ಗೊಣಗಿಕೊಂಡು ಕೋಪದಿಂದ, ಒಂದೇ ಕಿಕ್ನಲ್ಲಿ ಬೈಕ್ ಸ್ಟಾರ್ಟ್ ಮಾಡಿದ್ದ ಪರ್ಮೇಶಿ. ವೊದಲೇ ಕೋಪ, ಅದರಮೇಲೆ ಹಸಿವುಬೇರೇ, ಎಲ್ಲಾ ಸೇರಿ ಪರ್ಮೇಶಿ ಫಾಸ್ಟಾಗಿ ಬೈಕು ಓಡಿಸತೊಡಗಿದ. ಲಾಲ್ಬಾಗ್ ವೆಸ್ಟ್ ಗೇಟ್ ದಾಟಿ ಬಲಗಡೆ ತಿರುಗಿ, ಕಾವೇರಿ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿದ. ಅಲ್ಲಿಂದ ನೇರ ಶಾಂತಿ ಥಿಯೇಟರ್ ರೋಡ್ನಲ್ಲಿ ಮುಂದುವರಿದ.
ಭಾರತಿ ನರ್ಸಿಂಗ್ ಹೋಂ ಬಳಿ ನಿಂತಿದ್ದ ಟ್ರಾಫಿಕ್ ಪೋಲೀಸ್ ಕೈ ಅಡ್ಡಹಾಕಿದ್ದ. ಬೈಕ್ ನಿಲ್ಲಿಸಿದ ಪರ್ಮೇಶಿಯನ್ನು “ಲೈಸೆನ್ಸ್ ಇದ್ಯೆನ್ರಿ” ಕೇಳಿದ ಪೋಲೀಸ್, ಕೈಹಾಕಿ ಬೈಕ್ನ ಕೀ ಎತ್ತಿದ್ದ. ಪರ್ಮೇಶಿ ಬೆವೆತುಹೋಗಿದ್ದ. “ಲೈಸೆನ್ಸ್ ಇದೆ ಸಾರ್” ಎಂದ ತಡಬಡಾುಸುತ್ತಾ. ನುರಿತ ಪೋಲೀಸ್, “ಎಲ್ಲಿ ತೋರ್ಸಿ” ಎಂದ. ಬೈಕ್ನಿಂದ ಇಬ್ಬರೂ ಇಳಿದರು. ಹಿಂದಿನ ಜೋಬಿಗೆ ಕೈಹಾಕಿ ಪರ್ಸ್ ತೆಗೆದ ಪರ್ಮೇಶಿ, ಲೈಸೆನ್ಸ್ ಹುಡುಕುವಂತೆ ನಟಿಸಿದ. ಇದ್ದರಲ್ಲವೇ? ಲೈಸೆನ್್ಸಗೆ ಬದಲಾಗಿ ಕೈಗೆ ಸಿಕ್ಕ 50ರ ನೋಟನ್ನು ಮುಷ್ಠಿಯಲ್ಲಿ ಹಿಡಿದು ರಹಸ್ಯವಾಗಿ ಪೋಲೀಸ್ ಕೈಗೆ ತುರುಕಿದ. ನೋಟು ತಡವಿದ ಪೋಲೀಸ್ “ಆಗಲ್ರೀ, 300 ರೂಪಾು ಫೈನ್ ಕಟ್ರಿ” ಎಂದ. “ಇನ್ನೊಂದ್ಸಲ ಹೀಗೆ ಮಾಡಲ್ಲ ಸಾರ್” ಎಂದ ಪರ್ಮೇಶಿ ತಲೆ ಕೆರೆದುಕೊಳ್ಳತೊಡಗಿದ. ನಮ್ ಪುಟ್ಲಿಂಗು ಮಾತ್ರ ಮುಸಿಮುಸಿ ನಗುತ್ತಾ ಮಜ ತೊಗೋತಾ ಇದ್ದ.
“ಇನ್ನೊಂದ್ಸಲದ್ದು, ಇನ್ನೊಂದ್ಸಾರಿ ನೋಡೋಣ, ಈಗ ಇನ್ನೊಂದ್ನೂರ್ ಕೊಟ್ ಹೋಗಿ” ಎಂದ ಪೋಲೀಸ್. ಪರ್ಮೇಶಿ, ಪುಟ್ಲಿಂಗು ಮುಖ ನೋಡಿದ. ಪರ್ಮೇಶಿಯ ಮನದಿಂಗಿತವನ್ನು ಅರ್ಥೈಸಿಕೊಂಡ ನಮ್ ಪುಟ್ಲಿಂಗು, “ನಮ್ತಾಯಾಣೆಗೂ, ಐಸ್ಕ್ಯಾಂಡಿ ಚೀಪೋಣಾ ಅಂದ್ರೆ ಐದ್ಪೈಸಾ ಕೂಡಾ ಇಲ್ಲಾಕಣಣ್ಣೋ”? ಅಂದ. ಸರಿ, ಮತ್ತೊಮ್ಮೆ ಪರ್ಮೇಶಿ, ತನ್ನ ಪರ್ಸ್ ಗೆ ಕೈ ಹಾಕಿ, ಉಳಿದಿದ್ದ 50ರೂಪಾು ತೆಗೆದು ಲಂಚಕೋರ ಪೋಲೀಸನಿಗಿತ್ತು, ಋಣ ತೀರಿಸಿದ.
ಬೈಕ್ ಕೀ ಪರ್ಮೇಶಿಯ ಕೈಸೇರಿತ್ತು. ಬೈಕ್ಗೆ ಅಂಟಿಸಿದ್ದ ಅಣ್ಣಹಜಾರೆ ಫೋಟೊ ಪರ್ಮೇಶಿಯ ನೋಡಿ ಕಿಸಕ್ಕೆಂದು ನಕ್ಕು “ನಿನ್ನದೂ ಒಂದು ಜನ್ಮ, ನೀನೂ ಒಬ್ಬ ಭಾರತೀಯ!” ಎಂದು ಅಣಕಿಸಿದಂತಿತ್ತು. ನಮ್ ಪುಟ್ಲಿಂಗು ಮನದಲ್ಲೇ “ಮೇರಾ ಭಾರತ್ ಮಹಾನ್” ಎಂದು ಗೊಣಗಿದ್ದು ಇವನ ಕಿವಿಗೂ ಬಿತ್ತು. ಪರ್ಮೇಶಿ ನೆಲಕ್ಕೆ ಹಾಕಿದ್ದ ತಲೆಯನ್ನು ಎತ್ತುವ ಧೈಯ್ರ ಮಾಡಲಿಲ್ಲ. ದೂರದಲ್ಲಿ ಮೈಕೊಂದು ಕೂಗಿತ್ತು, “ಜಾಗೋ ಇಂಡಿಯಾ, ಜಾಗೋ”
-ಎಂ.ಎಸ್.ಮುರಳಿಧರ್ , ಶಿರಾ
Rating
Comments
ಉ: 2. ಪುಟ್ಲಿಂಗು ಪ್ರಸಂಗ=ಭ್ರಷ್ಟಾಚಾರ
In reply to ಉ: 2. ಪುಟ್ಲಿಂಗು ಪ್ರಸಂಗ=ಭ್ರಷ್ಟಾಚಾರ by dattatraya
ಉ: 2. ಪುಟ್ಲಿಂಗು ಪ್ರಸಂಗ=ಭ್ರಷ್ಟಾಚಾರ
ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ
In reply to ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ by makara
ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ
ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ
In reply to ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ by ಗಣೇಶ
ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ
In reply to ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ by geethavision
ಉ: ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ