ರಾಮನ ಸೈಕಲ್ ಸವಾರಿ ( ಕಥೆ ) ಭಾಗ 3

ರಾಮನ ಸೈಕಲ್ ಸವಾರಿ ( ಕಥೆ ) ಭಾಗ 3

                                          


     ಕಳೆದ ವರ್ಷ ರಾಮನ ಮನೆಯಲ್ಲಿ ಒಂದು ಗಬ್ಬಾದ ಹಸು ಮೇಯಲು ಜಂಗಳಿ ದನಗಳ ಜೊತೆಗೆ ಕಾಡಿಗೆ ಹೋದದ್ದು ಮರಳಿ ಮನೆಗೆ ಬರಲೆ ಇಲ್ಲ. ರಾಮನ ತಂದೆ ಭೀಮಯ್ಯ ಮತ್ತು ಆಳುಮಗ ಪರಸಪ್ಪ ಎಲ್ಲ ಕಡೆಗೆ ಹುಡುಕಿ ನೋಡಿದರೂ ಆ ಆಕಳಿನ ಪತ್ತೆಯಾಗಲೆ ಇಲ್ಲ. ಕೆಲವು ದಿನ ಕಾದು ನೋಡಿದರು, ಅದು ಯವುದೋ ಹುಲಿಯೋ ಇಲ್ಲ ಚಿರತೆಗೆ ಬಲಿಯಾಗಿರಬೇಕೆಂದು ಭಾವಿಸಿ ಅದರ ಆಗಮನದ ನಿರೀಕ್ಷೆಯನ್ನು ಕೈಬಿಟ್ಟರು. ಆದರೆ ರಾಮನ ತಾಯಹಿ ಗಂಗಮ್ಮ ಆಕಳು ಕಪಿಲೆ ಪುನಃ ಮನೆಗೆ ಬಂದರೆ ಬರುವ ಜಾತ್ರೆಯಲ್ಲಿ ಸೀರೆ ಉಡಿಸುವುದಾಗಿ ತಾಯವ್ವನಲ್ಲಿ ಹರಕೆ ಕೇಳಿಕೊಂಡಳು. ಮುಂದೆ ಒಂದು ವಾರದ ನಂತರ ಪರಸಪ್ಪ ಆಕಳನ್ನು ಇನ್ನೊಂದು ಬಾರಿ ಹುಡುಕಿಕೊಂಡು ಬರಲು ಮತ್ತು ಕಳಲೆಯನ್ನು ತರಲು ತಾಯವ್ವನ ಸುರಿವಿನ ಕಾಡಿಗೆ ಹೋದವನು ಆಕಳು ಕಪಿಲೆ ದೊರೆಯದೆ ನಿರಾಶನಾಗಿ ಕಳಲೆಯನ್ನು ಮಾತ್ರ ಕಡಿದುಕೊಂಡು ದೇವಸ್ಥಾನಕ್ಕೆ ತೆರಳಿ ಕೈಮುಗಿದು ಗುಡಿಯಿಂದ ಹೊರಗೆ ಬಂದವನು ಅನಿರೀಕ್ಷಿತವಾಗಿ ಆತನ ದೃಷ್ಟಿ ತಾಯವ್ವನ ಗುಡಿಯ ಪಕ್ಕದ ಬೇವಿನ ಮರದ ಕಡೆಗೆ ಹೊರಳಿತು. ಅಲ್ಲಿ ಆತನಿಗೆ ಆಶ್ಚರ್ಯವೊಂದು ಕಾದಿತ್ತು. ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ತಾವು ಹುಡುಕುತ್ತಿದ್ದ ಕಪಿಲೆ ಆರಾಮವಾಗಿ ಬಾಯಾಡಿಸುತ್ತ ಬೇವಿನ ಮರದ ನೆರಳಲ್ಲಿ ಮಲಗಿದೆ. ಅದರ ಪಕ್ಕ ಹಣಿಚಿಕ್ಕಿ ಹೂಬಾಲದ ಕಂದು ಬಣ್ಣದ ಎಂಟು ಹತ್ತುದಿನಗಳ ಪ್ರಾಯದ ಕರುವೊಂದು ನೆಗೆದಾಡುತ್ತಿದೆ. ಆನಂದ ತುಂದಿಲನಾದ ಪರಸಪ್ಪ ಕಪಿಲೆಯೆಡೆಗೆ ಧಾವಿಸಿದ. ಆತನನ್ನು ಕಂಡ ಕಪಿಲೆಯ ಎದ್ದುನಿಂತು ಅಂಬಾ ಎಂದು ಕೂಗಿತು. ಅದರ ಹತ್ತಿರ ಹೋಗಿ ಇನ್ನೊಮ್ಮೆ ಗಮನಿಸಿದ, ಅದು ತನ್ನ ಒಡೆಯ ಭೀಮಯ್ಯನ ಮನೆಯ ಕಪಿಲೆಯೆ, ಎದ್ದು ನಿಂತ ಕರುವಿನ ಮೈಯನ್ನು ಕಪಿಲೆ ನೆಕ್ಕ ತೊಡಗಿತು. ಆ ಕರುವನ್ನು ಪರಸಪ್ಪ ಗಮನಿಸಿದ ಅದು ಹೆಣ್ಣುಗರುವಾಗಿತ್ತು. ಆತನಿಗೆ ಸಂಶಯವೇ ಉಳಿಯಲಿಲ್ಲ, ಅದು ಕಪಿಲೆಯದೆ ಕರು. ಪರಸಪ್ಪ ಆ ಕರುವನ್ನು ಎತ್ತಿಕೊಂಡು ಮುನ್ನಡೆದ, ಕಪಿಲೆ ಆತನನ್ನು ಹಿಂಬಾಲಿಸಿತು. ಸಾಯಂಕಾಲ ಗೋಧೂಳಿ ಸಮಯಕ್ಕೆ ಸರಿಯಾಗಿ ಪರಸಪ್ಪ ಆಕಳು ಮತ್ತು ಕರುವಿನ ಜೊತೆಗೆ ತನ್ನೊಡೆಯನ ಮನೆಗೆ ಬಂದ. ಮನೆ ಮಂದಿಗೆಲ್ಲ ಆಶ್ಷರ್ಯ ! ತಾಯವ್ವನ ಸರುವಿನ ಸುತ್ತ ಮುತ್ತ ತುಂಬ ವಿಸ್ತಾರಕ್ಕೆ ಹರಿದ್ವರ್ಣ ಕಾಡು ಹಬ್ಬಿದ್ದು ಅಲ್ಲಿದ್ದ ಹುಲಿಗೊ ಚಿರತೆಗೊ  ಕಪಿಲೆ ಆಹಾರವಾಗಿದ್ದಿರಬೇಕೆಂಬುದು ಎಲ್ಲರ ಪರಿಕಲ್ಪನೆಯಾಗಿತ್ತು. ಎಲ್ಲರೂ ಕಪಿಲೆಯನ್ನು ಮರೆಯುವ ಮನಸ್ಥಿತಿ ತಲುಪಿದ್ದರು. ಏನಾಶ್ಚರ್ಯ! ಕಪಿಲೆ ಮರಳಿ ಮನೆಗೆ ಬಂದಿದ್ದಾಳೆ ಅದೂ ಪುಟ್ಟ ಹೆಣ್ಣು ಕರುವಿನೊಂದಿಗೆ. ಅವುಗಳ ಆಗಮನ ಮನೆಯ ಸದಸ್ಯರೆಲ್ಲರಿಗೂ ಸಂತಸ ತಂದಿತ್ತು. ರಾಮ ಮತ್ತು ಆತನ ತಂಗಿ ಜಾಹ್ನವಿ ಆ ಎಳೆಯ ಕರುವನ್ನು ಮುಟ್ಟಿ ಮುಟ್ಟಿ ತಬ್ಬಿ ಸಂಭ್ರಮಿಸಿದರು.


     ರಾಮನ ತಾಯಿ ಗಂಗಮ್ಮ ಕಪಿಲೆಯ ಹಣೆಗೆ ಅರಿಷಿಣ ಕುಂಕುಮಗಳ ತಿಲಕವಿಟ್ಟು ಆಕೆಗೆ ತಿನ್ನಲು ಒಂದು ಮೊರದಲ್ಲಿ ಅಕ್ಕಿ ಬೆಲ್ಲಗಳನ್ನು ಇಟ್ಟಳು. ಪರಸಪ್ಪ ಆಕಳ ಹಾಲು ಕರೆದು ಕರುವಿಗೆ ಮೊಲೆಯುಣ್ಣಲು ಬಿಟ್ಟ. ಹಿಂಡಿದ ಹಾಲನ್ನು ಗಂಗಮ್ಮ ಊರಿನ ದ್ಯಾಮವ್ವ, ವೀರಭದ್ರ, ಆಂಜನೇಯ ಮತ್ತು ಮನೆಯ ಅಂಗಳದ ಮುಂದಿನ ಭರ್ಮಪ್ಪ ದೇರಿಗೆ ನೈವೇದ್ಯಕ್ಕಾಗಿ ಕಳಿಸಿ ಕೊಟ್ಟಳು. ಅವರ ಮನೆಯಲ್ಲಿ ಆ ದಿನ ಕಪಿಲೆಯದೆ ಪ್ರಧಾನ ಸುದ್ದಿ. ಮೇಯಲು ಹೋದ ಕಪಿಲೆ ಗುಂಪಿನಿಂದ ಬೇರ್ಪಟ್ಟು ಅಲೆದು ದಾರಿತಪ್ಪಿ ದಿನತುಂಬಿ ಹೆಣ್ಣುಗರುವೊಂದಕ್ಕೆ ಜನ್ಮ ನೀಡಿದೆ. ಮರಳಿ ಬರಲು ದಾರಿ ಗೊತ್ತಾಗದೆಯೋ ಸುಸ್ತಾಗಿಯೋ ಅದು ಮನೆಗೆ ಬಂದಿಲ್ಲ. ಆದರೆ ರಾಮನ ಮನೆಯವರೆಲ್ಲರಿಗೂ ಇದು ತಾಯವ್ವನ ಮಹಿಮೆಯೇ ಎಂದು ಧೃಢವಾದ ನಂಬಿಕೆ. ಆ ದೇವಿಯೇ ಕಪಿಲೆ ಮತ್ತು ಅದರ ಕರುವನ್ನು ಸಂರಕ್ಷಿಸಿದ್ದಾಳ. ಆ ಹಸುವನ್ನು ಹುಡುಕಲು ಹೋದ ಪರಸಪ್ಪನಿಗೆ ತನ್ನ ಗುಡಿಯ ಹತ್ತಿರ ಬರುವ ಪ್ರೇರಣೆಯನ್ನು ಮಾಡಿ ಕರೆಸಿಕೊಂಡು ಕಪಿಲೆ ಮತ್ತು ಅದರ ಕರು ಆತನ ದೃಷ್ಟಿಗೆ ಬೀಳುವಂತೆ ಮಾಡಿದ್ದಾಳೆ ಎಂಬುದೆ ಅವರಲ್ಲರ ನಂಬುಗೆ. ತಾಯವ್ವನ ಕಪೆಯನ್ನು ನೆನೆದು ಗಂಗಮ್ಮ ಕಪಿಲೆಯ ಕರುವಿಗೆ ತಾಯಿ ಎಂದು ನಾಮಕರಣ ಮಾಡಿದಳು. ಈಗ ಹೆಣ್ಣುಗರು ತಾಯಿ ಎರಡು ವರ್ಷ ಪ್ರಾಯದ್ದು. ಕಳೆದ ವರ್ಷ ಜಾತ್ರೆಗೆ ಬಂದಿದ್ದಾಗ ಗಂಗಮ್ಮ ಆರು ಮೊಳದ ಕಡುಹಸಿರು ಬಣ್ಣದ ಜರಿಯ ಅಂಚಿನ ಸೀರೆ, ಅದಕ್ಕೊಪ್ಪುವ ಖಣ, ಫಲತಾಂಬೂಲ ಮತ್ತು ಐದು ಪಾವಲಿ ಮುಡಿಪನ್ನು ದೇವಿಯ ಸನ್ನಿಧಾನಕ್ಕೆ ಅರ್ಪಿಸಿ ಹರಕೆ ತೀರಿಸಿದ್ದಳು. ಆಗಿನಿಂದ ರಾಮನಲ್ಲಿಯೂ ಸಹ ತಾಯವ್ವನ ಬಗ್ಗೆ ಭಕ್ತಿಭಾವ ಮತ್ತು ವಿಶ್ವಾಸಗಳು ಬೆಳೆದು ಬಂದಿದ್ದವು. ಈ ಪರಿ ಭಕ್ತಿಭಾವಗಳು ಆತನಲ್ಲಿ ಬೆಳೆಯಲು ಇನ್ನೂ ಒಂದು ಪ್ರಬಲವಾದ ಕಾರಣವೊಂದಿತ್ತು. ರಾಮ ಗಣಿತದಲ್ಲಿ ದುರ್ಬಲ, ಐದು ಆರು ಸಂಖ್ಯೆಗಳನ್ನು ಗುಣಿಸುವುದು ಮತ್ತು ಬೆಸ ಸಂಖ್ಯೆಯಿಂದ ಭಾಗಿಸುವುದು ಬಹಳ ತ್ರಾಸದಾಯಕ ಕೆಲಸವಾಗಿತ್ತು. ಆದರೆ ಅವರಿಗೆ ಗುರುಗಳು ಮನೆಯ ಪಾಠಕ್ಕೆ ಕೊಡುವುದು ಅಂತಹ ಕ್ಲೀಷ್ಟವಾದ ಲೆಖ್ಖಗಳನ್ನೆ, ಹೀಗಾಗಿ ರಾಮ ಹಿಂದಿನ ವರ್ಷ ವಾಷರ್ಿಕ ಪರೀಕ್ಷೆಯಲ್ಲಿ ನಾಲ್ಕು ಅಂಕಗಳನ್ನು ಮಾತ್ರ ಪಡೆದು ಆ ಕಾರಣಕ್ಕಾಗಿ ತಂದೆ ಭೀಮಯ್ಯ ನವರಿಂದ ಒದೆ ತಿಂದಿದ್ದ. ಹೀಗಾಗಿ ಆತ ಮುಂದಿನ ವರ್ಷ ತಾಯ್ವನ ಜಾತ್ರೆಗೆ ಹೋದಾಗ ಬರುವ ವಾರ್ಷಿಕ ಪರೀಕ್ಷೆಯಲ್ಲಿ  ಗಣಿತದಲ್ಲಿ ಹೆಚ್ಚಿನ ಅಂಕಗಳನ್ನು ದಯಪಾಲಿಸುವಂತೆ ಭಕ್ತಿಯಿಂದ ಬೇಡಿಕೆಯನ್ನು ಸಲ್ಲಿಸಿದ್ದ. ಆದರೆ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಕೈಗೆ ಬಂದಾಗ ಅದನ್ನು ನೋಡಿ ತಾಯವ್ವನೂ ತನಗೆ ಕೈಕೊಟ್ಟಳು ಎಂದುಕೊಂಡು ತನ್ನ ಪಾಲಿಗೆ ಯಾರೂ ಇಲ್ಲ ಎಂದು ನಿರಾಶನಾದ. ಎಲ್ಲ ಕ್ಲೀಷ್ಟಕರವಾದ ಉದ್ದುದ್ದ ಸಂಖ್ಯೆಯ ಲೆಖ್ಖಗಳೆ. ತಾಯವ್ವನನ್ನು ನಂಬಿಕೊಂಡು ಕೂತರೆ ಈ ವರ್ಷ ಮತ್ತೆ ತಂದೆ ಭೀಮಯ್ಯ ನವರಿಂದ ಒದೆ ಗ್ಯಾರಂಟಿ ಎಂಬುದು ಆತನಿಗೆ ಖಾತ್ರಿಯಾಗಿ ಹೋಯಿತು. ಗೂಳಪ್ಪ ಮಾಸ್ತರರು ಹೊರಗೆ ಹೋದ ಸಮಯ ಕಾದು ಪ್ರಕಾಶನನ್ನು ಕೇಳಿ ಉತ್ತರ ಬರೆದು ಸುಮಾರು ಅಂಕಗಳನ್ನು ಪಡೆದು ಉತ್ತೀರ್ಣನಾದ, ತನಗೂ ಪ್ರಕಾಶನಿಗೂ ಅಷ್ಟಕಷ್ಟೆ ಇದ್ದು ಪ್ರಕಾಶ ತನಗೆ ಲೆಖ್ಖ ಬಿಡಿಸಲು ಸಹಾಯ ಮಾಡಿದ್ದು ದೇವಿಯ ಕೃಪೆಯೆ ಕಾರಣವೆಂಬ ತೀರ್ಮಾನಕ್ಕೆ ರಾಮ ಬಂದಿದ್ದ. ಅಂದಿನಿಂದ ರಾಮನಿಗೆ ತಾಯವ್ವ ಎಂದರೆ ಒಂದು ತರಹದ ಭಕ್ತಿ, ಭಕ್ತಿ ಎನ್ನುವುದಕ್ಕಿಂತ ಹೆಚ್ಚಾಗಿ ಭಯ ಎನ್ನುವುದು ಸರಿಯೇನೋ, ಆ ಘಟನೆಯನ್ನು ನೆನೆದು ರಾಮಯ್ಯ ಮನದಲ್ಲಿಯೆ ನಕ್ಕರು.


     ತಾಯವ್ವನ ಗುಡಿಯ ಪಕ್ಕದಲ್ಲಿಯೇ ಸಿರ್ಸಿ ಕುಮಟಾ ಮತ್ತು ಹೊನ್ನಾವರಗಳ ಕಡೆಗೆ ಹೋಗುವ ಟಾರ್ ರಸ್ತೆಯಿದ್ದು, ಆ ಮಾರ್ಗವಾಗಿ ಪ್ರತಿದಿನ ಸರ್ಕಾರಿ ಕೆಂಪು ಬಸ್ಸುಗಳು, ನಾಟಾ ಸಾಗಿಸುವ ಟ್ರಕ್ಕುಗಳು ಅಪರೂಪಕ್ಕೆ ಒಂದೆರಡು ಕಾರುಗಳು ಹೋಗುತ್ತಿದ್ದವು. ಎಲ್ಲ ಟ್ರಕ್ನವರೂ ಆ ಮಾರ್ಗವಾಗಿ ಹೋಗುವಾಗ ತಾಯವ್ವನಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಹೋಗಬೇಕು, ಇಲ್ಲವಾದರೆ ಮಾರ್ಗದಲ್ಲಿ ಅವಾಡಿಗಳನ್ನು ಗೆ ಏನಾದರೂ ತೊಂದರೆ ಯಾಗುತ್ತದೆ ಎನ್ನುವ ಪ್ರತೀತಿ ಆ ದಿನಗಳಲ್ಲಿ ಇತ್ತು. ಅದು ಕಾಡು ದಾರಿ ಹುಲಿ ಚಿರತೆ ಹಾವುಗಳ ಹೆದರಿಕೆ ಹೀಗಾಗಿ ಎಲ್ಲ ಟ್ರಕ್ನವರೂ ತಾಯವ್ವನಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಹೋಗುವ ಪರಿಪಾಠ ಬೆಳೆದು ಬಂದಿತ್ತು. ಈ ನಂಬಿಕೆಯನ್ನು ಧೃಢಪಡಿಸುವಂತಹ ಕಥೆಯೊಂದು ಆ ಕಾಲದಲ್ಲಿ ಚಾಲ್ತಿ ಯಲ್ಲಿತ್ತು. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ, ಜನರ ಬಾಯಿಯಿಂದ ಬಾಯಿಗೆ ಕಥೆ ಪ್ರಚಾರದಲ್ಲಿದ್ದದ್ದು ಮಾತ್ರ ನಿಜ. ತಾಯವ್ವನ ಗುಡಿಯಿಂದ ಸುಮಾರು ಮೂವತ್ತು ಮೈಲಿ ದೂರದಲ್ಲಿ ಪಟ್ಟಣವೊಂದಿತ್ತು, ಆ ಪಟ್ಟಣದವರೊಬ್ಬರು ಸಿರಿವಂತಗರು ಪವಾರ ಟ್ರಾನ್ಸ್ ಪೋರ್ಟ ಎಂಬ ಲಾರಿ ಸಂಸ್ಥೆಯನ್ನು ನಡೆಸುತ್ತಿದ್ದು ಅವರ ಅನೇಕ ಟ್ರಕ್ಗಳು ಆ ಮಾರ್ಗವಾಗಿ ಹೋಗುತ್ತಿದ್ದವು. ಅವರ ಲಾರಿಗಳಲ್ಲೊಂದಾದ ಕುಲದೇವತಾ ಲಾರಿಯ ಡ್ರೈವರ್ ಸ್ವಲ್ಪ ಉ ಉಡಾಫೆಯವನಾಗಿದ್ದು ಆ ಮಾರ್ಗವಾಗಿ ಹೋಗುವಾಗ ಉಳಿದ ಡ್ರೈವರು ಗಳಂತೆ ತಾಯವ್ವನಿಗೆ ಹಣ್ಣು ಕಾಯಿ ಮಾಡಿಸದೆ ಹೋಗಿದ್ದು ನಾಟಾ ಲಾರಿ ತಾಯವ್ವನ ಸರುವಿನ ಹತ್ತಿರ ಕೆಟ್ಟು ನಿಂತಿತು. ಡ್ರೈವರ್ ಎಷ್ಟು ಪ್ರಯತ್ನಿಸಿದರೂ ಆ ಲಾರಿ ಚಲಿಸಲೆ ಇಲ್ಲ. ಪಟ್ಟಣದಿಂದ ಮೆಕ್ಯಾನಿಕ್ನನ್ನು ಕರೆ ಸಿದರೂ ಆತನಿಗೂ ಸಹ ಲಾರಿಗೆ ಏನಾಗಿದೆ ಎನ್ನುವುದು ಗೊತ್ತಾಗಲೆ ಇಲ್ಲ. ಅವರದೆ ಕಂಪನಿಯ ಇನ್ನೊಂದು ಟ್ರಕ್ ತಕದೀರನ ಡ್ರೈವರ್ ಕುಲದೇವತಾ ಲಾರಿಯ ಡ್ರೈವರ್ನನ್ನು ತಾಯವ್ವನ ಗುಡಿಗೆ ಕರೆದು ಕೊಂಡು ಹೋಗಿ ಹಣ್ಣು ಕಾಯಿ ಮಾಡಿಸಿಕೊಂಡು ಬಂದೊಡನೆ, ಮೂರ್ನಾಲ್ಕು ದಿನಗಳಿಂದ ರಿಪೇರಿಯಾಗದೆ ಹಟ ಹಿಡಿದು ನಿಂತಿದ್ದ ಕುಲದೇವತಾ ಲಾರಿ ಸ್ಟಾರ್ಟ ಆಗಿ ತೊಂದರೆ ಪರಿಹಾರ ವಾಯಿತೆಂದೂ, ಮುಂದೆ ಆ ಡ್ರೈವರ್ ಪ್ರತಿಸಲ ಆ ಮಾರ್ಗವಾಗಿ ಹೋಗುವಾಗ ತಾಯವ್ವನಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಹೋಗು ವಷ್ಟು ದೈವಭಕ್ತನಾದನೆಂದೂ ಜನ ಕಥೆಕಟ್ಟಿ ಹೇಳುತ್ತಿದ್ದುದನ್ನೂ ರಾಮ ಅನೇಕ ಸಲ ಕೇಳಿದ್ದ. ದೇವಿಗೆ ಹಣ್ಣು ಕಾಯಿ ಮಾಡಿಸಿಕೊಂಡು ರಾಮನ ಅಮ್ಮ ಅಜ್ಜಿ ದೊಡ್ಡಮ್ಮ ಅತ್ತೆ ಎಲ್ಲರೂ ತಾವೂ ವಾಸ್ತವ್ಯ ಹೂಡಿದ ಜಾಗೆಗೆ ಬಂದರು. ಅಲ್ಲಿಯೇ ವಿಶಾಲವಾಗಿ ಹಾಸಿದ ಗುಡಾರದ ಮೇಲೆ ಕುಳಿತು ಎಲ್ಲರೂ ಊಟ ಮುಗಿಸಿ ವಿಶ್ರಾಂತಿ ಪಡೆದರು.
                                                  
     ಸಮಯ ಕಳೆದಂತೆ ನೇಸರ ಪಶ್ಚಿಮದಂಚಿಗೆ ಸರಿಯ ಹತ್ತಿದ, ಪಡುವಣದ ಆ ಬಾನಂಗಣ ಹೊಂಬಣ್ಣದ ಛಾಯೆಯಿಂದ ಕಂಗೊಳಿಸ ತೊಡಗಿತ್ತು. ಅಲ್ಲಲ್ಲಿ ತೇಲುತ್ತಿದ್ದ ಮೋಡಗಳ ಅಂಚು ಸುವರ್ಣದ ಕುಸುರಿ ಮಾಡಿದ ವಸ್ತ್ರದಂತೆ ಭಾಸವಾಗುತ್ತಿತ್ತು. ಸೂರ್ಯನ ತೀಕ್ಷ್ಣತೆ ಕಡಿಮೆಯಾಗಿದ್ದು ಸಂಜೆಯ ಎಳೆ ಬಿಸಿಲು ಹಿತವಾಗಿತ್ತು. ಇದಕ್ಕೆ ಪೂರಕವಾಗಿ ಕಾಡಿನೆಡೆಯಿಂದ ಗಾಳಿ ಆಹ್ಲಾದಕರವಾಗಿ ಬೀಸಿ ಬರುತ್ತಿತ್ತು. ಎಲ್ಲರೂ ಜಾತ್ರೆ ಮುಗಿಸಿ ಊರ ಕಡೆಗೆ ಎತ್ತಿನ ಗಾಡಿಗಳನ್ನು ಕಟ್ಟಿದರು. ಪರಸಪ್ಪನೂ ಎತ್ತಿನ ಗಾಡಿಯ ಕೊಳ್ಳು ಕಟ್ಟಿದ, ರಾಮನ ಮನ ದಲ್ಲಿ ಜಾತ್ರೆಯದೆ ಗುಂಗು. ಆ ಕಾಡು ಗುಡ್ಡ ಬೆಟ್ಟಗಳು, ನೀರಿನ ಝರಿ ತೊರೆಗಳು, ವಿಧ ವಿಧದ ಪಶು ಪಕ್ಷಿಗಳು ರಾಮನ ಮನಃಪಟಲದೆದುರು ಕಿನ್ನರ ಲೋಕವನ್ನೆ ತೆರೆದಿದ್ದವು. ಶಾಲೆ ಪ್ರಾರಂಭವಾಗುವ ವರೆಗೂ ರಾಮ ಆ ಲಹರಿಯಲ್ಲಿಯೆ ಇದ್ದ.


                                                                   *


     ಶಾಲೆಯ ಅರ್ಧ ವಾರ್ಷಿಕ ರಜೆ ಕಳೆದು ರಾಮನ ಶಾಲೆ ಮತ್ತೆ ಪ್ರಾರಂಭವಾಯಿತು. ಆತಂಕ ನಿರ್ಬಂಧದ ಶಾಲಾ ಜೀವನ ಮತ್ತೆ ಪ್ರಾರಂಭವಾಯಿತು. ಮೂರು ವಾರಗಳ ರಜೆ ಅರಾಮವಾಗಿ ಕಳೆದಿತ್ತು, ಗುರುಗಳ ಕಾಟ ಓದಿನ ಹಂಗು ಇಲ್ಲದೆ ರಜೆ ಕಳೆದಿದ್ದ ರಾಮನಿಗೆ ಶಾಲಾ ಜೀವನಕ್ಕೆ ಮತ್ತೆ ಹೊಂದಿ ಕೊಳ್ಳಲು ಎರಡು ಮೂರು ದಿನಗಳೆ ಬೇಕಾದವು. ಶಾಲೆ ಪ್ರಾರಂಭವಾಗಿ ನಾಲ್ಕು ದಿನಗಳ ನಂತರ ಬಸವ ಶಾಲೆಗೆ ಬಂದ, ಕಾರಣ ಕೇಳಿದ ಗುರುಗಳಿಗೆ ಅದು ಇದು ಹೇಳಿ ಅವರನ್ನು ನಂಬಿಸಿ ಅವರಿಂದ ಹೊಡೆತ ತಪ್ಪಿಸಿಕೊಂಡ. ಶನಿವಾರ ಶಾಲೆ ಬಿಟ್ಟ ಮೇಲೆ ರಾಮ ಮೋಹನರಿಗೆ ಸಿಕ್ಕ ಬಸವ ಮರುದಿನ ಭಾನುವಾರ ಬೆಳಿಗ್ಗೆ ಒಂಭತ್ತು ಗಂಟೆಯ ವೇಳೆಗೆ ರಫಿಕ್ನ ಸೈಕಲ್ ಶಾಪ್ ಹತ್ತಿರ ಬರಲು ಹೇಳಿದ. ಹ್ಞೂ ಗುಟ್ಟಿದ ರಾಮ ಮೋಹನರು ತಮ್ಮ ತಮ್ಮ ಮನೆಗಳೆೆಡೆಗೆ ತೆರಳಿದರು. ಮನೆಗೆ ಬಂದ ರಾಮ ಆ ದಿನ ಸಣಜೆ ಚಿನ್ನಿ ದಾಂಡು ಆಡಲು ಹೊರಗೆ ಹೋಗದೆ ಮನೆಯಲ್ಲಿಯೆ ಕುಳಿತು ಅಭ್ಯಾಸವನ್ನು ಮಾಡಿ ಮುಗಿಸಿದ. ತಂದೆ ಭೀಮಯ್ಯ ಕೇಳಿದ ಪ್ರಶ್ನೆಗಳಿಗೆ ಮನಗೊಟ್ಟು ಸಮರ್ಪಕವಾಗಿ ಉತ್ತರಿಸಿದ, ಮೂವತ್ತರ ವರೆಗೆ ಮಗ್ಗಿಯನ್ನು ಜೋರಾಗಿ ಹೇಳಿದ, ಪಾಠವನ್ನು ಓದಿ ತಂದೆ ಭೀಮಯ್ಯ ಪ್ರಸನ್ನ ರಾಗಿರುವಂತೆ ನೋಡಿಕೊಂಡ. ಯಾಕೆಂದರೆ ಮಾರನೆ ದಿನ ಭಾನುವಾರ ಆತ ಸೈಕಲ್ ಕಲಿಯಲು ನಾಕಾದ ಬಯಲಿಗೆ ಹೋಗ ಬೇಕಿತ್ತು, ಅದಕ್ಕೆ ಅಡ್ಡಿ ತಂದುಕೊಳ್ಳುವುದು ರಾಮನಿಗೆ ಬೇಡ ವಾಗಿತ್ತು. ಓದು ಬರಹ ಮುಗಿಸಿದ ರಾಮ ಪುಸ್ತಕದ ಚೀಲವನ್ನು ಓರಣವಾಗಿ ಎತ್ತಿಟ್ಟ.


                                                                                                                ( ಮುಂದುವರಿದಿದೆ  )

Rating
No votes yet

Comments