ಕೋಪಗೊಂಡಾಗ ನಾವು ಗಟ್ಟಿಯಾಗಿ ಮಾತನಾಡುವುದೇಕೆ?

ಕೋಪಗೊಂಡಾಗ ನಾವು ಗಟ್ಟಿಯಾಗಿ ಮಾತನಾಡುವುದೇಕೆ?

ಚಿತ್ರ

    ಋಷಿಯೋರ್ವನು ಗಂಗೆಯಲ್ಲಿ ಮೀಯಲೆಂದು ಬಂದವನು ಅಲ್ಲಿದ್ದ ಗುಂಪೊಂದು ತಮ್ಮ ತಮ್ಮೊಳಗೆ ಕೋಪದಿಂದ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಿದ್ದುದನ್ನು ನೋಡಿದ. ಅವನು ಹಸಿತ ವದನನಾಗಿ ತನ್ನ ಶಿಷ್ಯರತ್ತ ತಿರುಗಿ ಕೇಳಿದ,
"ಜನರೇಕೆ ಕೋಪದಲ್ಲಿ ಗಟ್ಟಿಯಾಗಿ ಮಾತನಾಡುತ್ತಾ ಒಬ್ಬರನ್ನೊಬ್ಬರು ದೂಷಿಸಿಕೊಂಡು ಅರಚಾಡುತ್ತಾರೆ?"

    ಶಿಷ್ಯರು ಸ್ವಲ್ಪ ಹೊತ್ತು ಆಲೋಚಿಸಿದರು, ಆಗ ಒಬ್ಬ ಶಿಷ್ಯನೆಂದ, "ಏಕೆಂದರೆ ಆವಾಗ ನಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದರಿಂದ ಹಾಗೆ ಕಿರುಚುತ್ತೇವೆ"

    "ನಿಜ, ಆದರೆ ಒಬ್ಬ ವ್ಯಕ್ತಿ ನಿನ್ನ ಸಮೀಪದಲ್ಲೆ ಇದ್ದಾಗ ಹೀಗೆ ಅರಚುವುದರ ಅವಶ್ಯಕತೆ ಏನು? ನೀವು ಅವನಿಗೆ ಹೇಳಬೇಕಾದ್ದನ್ನು ಮೆಲ್ಲನೆ ಹೇಳಬಹುದಲ್ಲವೇ?" ಎಂದು ಕೇಳಿದರು ಗುರುಗಳು.

    ಆಗ ಶಿಷ್ಯರು ಹಲವಾರು ಉತ್ತರಗಳನ್ನು ಕೊಟ್ಟರೂ ಕೂಡ ಅವು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ.
 
    ಅಂತಿಮವಾಗಿ ಋಷಿಗಳು ವಿವರಣೆ ಇತ್ತರು,

"ಯಾವಾಗ ಇಬ್ಬರು ವ್ಯಕ್ತಿಗಳು ಕೋಪಗೊಳ್ಳುತ್ತಾರೋ ಆಗ ಅವರ ಹೃದಯಗಳ ಅಂತರ ಬಹುವಾಗಿ ಹೆಚ್ಚುತ್ತದೆ. ಆ ದೂರವನ್ನು ಸರಿದೂಗಿಸಿ ಒಬ್ಬರು ಹೇಳುವುದನ್ನ ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡಲು ಹಾಗೆ ಗಟ್ಟಿಯಾಗಿ ಕಿರುಚುತ್ತಾರೆ. ಹೆಚ್ಚೆಚ್ಚು ಕೋಪಗೊಂಡಷ್ಟು ಅವರು ಹೆಚ್ಚೆಚ್ಚು ಗಟ್ಟಿಯಾದ ಧ್ವನಿಯಿಂದ ಮಾತನಾಡುವುದು ಆ ದೂರವನ್ನು ಸರಿದೂಗಿಸಲು ಅನಿವಾರ್ಯವಾಗುತ್ತದೆ."
 
"ಅದೇ ಇಬ್ಬರು ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ? ಅವರು ಒಬ್ಬರಿಗೊಬ್ಬರು ಗಟ್ಟಿಯಾಗಿ ಅರಚುವುದಿಲ್ಲ, ಬದಲಿಗೆ ಮೃದುವಾಗಿ ಮಾತನಾಡುತ್ತಾರೆ; ಏಕೆಂದರೆ ಅವರ ಹೃದಯಗಳು ಹತ್ತಿರವಾಗಿರುತ್ತವೆ. ಹೃದಯಗಳ ಅಂತರವು ಬಹಳ ಕಡಿಮೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು........."

ಋಷಿಗಳು ಮತ್ತೆ ಮುಂದುವರೆಸಿದರು,......."ಅವರು ಒಬ್ಬನ್ನೊಬ್ಬರು ಇನ್ನೂ ಹೆಚ್ಚು ಪ್ರೀತಿಸಿದರೆ ಏನಾಗುತ್ತದೆ? ಅವರು ಮಾತನಾಡುವುದಿಲ್ಲ, ಕೇವಲ ಪಿಸುದನಿಯಲ್ಲಿ ಮಾತನಾಡುತ್ತಾರೆ ಮತ್ತು ತಮ್ಮ ಪ್ರೀತಿಯಲ್ಲಿ ಇನ್ನಷ್ಟು ಸಮೀಪರಾಗುತ್ತಾರೆ. ಅಂತಿಮವಾಗಿ ಅವರು ಪಿಸುದನಿಯಲ್ಲಿ ಮಾತನಾಡುವುದೂ ಬೇಕಿಲ್ಲ, ಅವರು ಒಬ್ಬರನ್ನೊಬ್ಬರು ತಮ್ಮ ಕಣ್ಣುಗಳಿಂದ ನೋಡಿದರೆ ಸಾಕು, ಅದೇ ಎಲ್ಲವನ್ನೂ ತಿಳಿಸುತ್ತದೆ. ಇದು ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಪ್ರೀತಿಸಿದಾಗ ಉಂಟಾಗುವ ಸ್ಥಿತಿ."

ಮತ್ತೆ ತಮ್ಮ ವಿದ್ಯಾರ್ಥಿಗಳತ್ತ ದೃಷ್ಟಿಸಿ ಹೇಳಿದರು,
"ಆದ್ದರಿಂದ ನೀವು ವಾದ ಮಾಡುವಾಗ ನಿಮ್ಮ ಹೃದಯಗಳು ದೂರ ಸರಿಯುವಂತೆ ಮಾಡಿಕೊಳ್ಳಬೇಡಿ, ಈ ಅಂತರವು ಹೆಚ್ಚುವಂತ ಯಾವುದೇ ಮಾತುಗಳನ್ನು ಆಡಬೇಡಿ, ಇಲ್ಲದಿದ್ದರೆ ಅವು ಒಂದು ದಿನ ಎಷ್ಟು ದೂರ ಹೋಗಿಬಿಡುತ್ತವೆಂದರೆ ಆ ದೂರದ ದಾರಿಯಿಂದ ಮತ್ತೆ ಹಿಂತಿರುಗಲಾರದ ದೂರದಷ್ಟು."

=================================================================================================
ವಿ.ಸೂ: ಇದರ ಇಂಗ್ಲೀಷ್ ಮೂಲವನ್ನು ಮಿತ್ರನೋರ್ವ ಮಿಂಚಂಚೆಯಲ್ಲಿ ಕಳುಹಿಸಿದ್ದು.
ಚಿತ್ರಮೂಲ: ಗೂಗಲ್
http://t1.gstatic.com/images?q=tbn:ANd9GcTYV53wCNa0MgMI6AXfpUsp2N2CcQikAYD9kCTbL831kxcpDxxGEQ

Rating
No votes yet

Comments