"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೧)

"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೧)

ಈ ಸರಣಿಯ ಹಿಂದಿನ ಲೇಖನ "ಸಾಂಖ್ಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A8/13/04/2012/36366
~~~~

ಪರಿಚಯ
   
    ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯ ತತ್ವ ಸಿದ್ಧಾಂತಗಳಂತೆ, ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಭಿಸದೆ ಭಾರತೀಯ ತತ್ವಶಾಸ್ತ್ರವು ಸತ್ಯದ 'ದರ್ಶನ' ಅಥವಾ 'ನೋಟ' ಅಥವಾ 'ಅನುಭವ'ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದ 'ದರ್ಶನ' ಪದವು ಹೆಚ್ಚು ಸೂಕ್ತವೆನಿಸುತ್ತದೆ. ಈ ದರ್ಶನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ - ಆಸ್ತಿಕ ಮತ್ತು ನಾಸ್ತಿಕ. ಯಾವುವು ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿವೆಯೋ ಅವು ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.
   
    ಆರು ಸಾಂಪ್ರದಾಯಿಕ ಪದ್ಧತಿಗಳೆಂದರೆ: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ. ಸಾಮಾನ್ಯವಾಗಿ ಈ ಪದ್ಧತಿಗಳು ನಾಲ್ಕು ವಿಷಯಗಳ ಬಗ್ಗೆ ಚರ್ಚಿಸುತ್ತವೆ, ಅವೆಂದರೆ - ಬ್ರಹ್ಮನ್/ಈಶ್ವರ ಅಥವಾ ಭಗವಂತನ ಇರುವಿಕೆ ಮತ್ತು ಅವನ ಸ್ವಭಾವ; ಜೀವಿಗಳು ಅಥವಾ ಪ್ರತ್ಯೇಕ ಆತ್ಮಗಳ ಸ್ವಭಾವ;  ಜಗತ್ತಿನ ಅಥವಾ ಪ್ರಪಂಚದ ಸೃಷ್ಟಿ ; ಮೋಕ್ಷ ಅಥವಾ ಮುಕ್ತಿ ಹಾಗೂ ಅದನ್ನು ಪಡೆಯಲು ಅನುಸರಿಸುವ ವಿವಿಧ ಮಾರ್ಗಗಳು/ನಿಯಮಗಳು.

ಸಾಂಖ್ಯ ಮತ್ತು ಯೋಗ ದರ್ಶನಗಳು:
   
    ಸಾಂಖ್ಯ ಶಬ್ದವು 'ಸಂಖ್ಯಾ' ಎಂದರೆ ಜ್ಞಾನ ಅಥವಾ ಅರಿವು ಎನ್ನುವ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಏಕೆಂದರೆ, ಸಾಂಖ್ಯ ಪದ್ಧತಿಯ ದಾರ್ಶನಿಕರಾದ ಕಪಿಲ ಮುನಿಗಳು "ಜ್ಞಾನವೊಂದೇ ಮೋಕ್ಷ ಅಥವಾ ಕೈವಲ್ಯ ಪಡೆಯಲು ಏಕೈಕ ಅಥವಾ ಮೂಲ ಸಾಧನ" ಎಂದು ಪ್ರತಿಪಾದಿಸಿದ್ದರಿಂದ ಈ ಪದ್ಧತಿಯನ್ನು 'ಸಾಂಖ್ಯ ದರ್ಶನ'ವೆಂದು ಪ್ರಚುರಪಡಿಸಲಾಗಿದೆ. ಸಾಂಖ್ಯ ಎನ್ನುವುದು ಸಂಖ್ಯೆಯೆನ್ನುವ ಅರ್ಥವನ್ನೂ ಕೊಡುತ್ತದೆ. ಈ ದರ್ಶನವು ಮೂಲ ವಿಶ್ವದ ತತ್ವಗಳು ೨೩+೧ (೨೩= ಪ್ರಕೃತಿ ಮತ್ತದರಿಂದ  ಹೊಮ್ಮಿದ ವಿಶ್ವದ ತತ್ವಗಳು ಮತ್ತು ೧=ಪುರುಷ) ಎನ್ನುವ ಸಂಖ್ಯೆಯನ್ನು ನಿರ್ಧಿಷ್ಠ ಪಡಿಸುವುದರಿಂದ, ಈ ದರ್ಶನವು ತನ್ನಷ್ಟಕ್ಕೇ ಸಾಂಖ್ಯ ಪದ್ಧತಿಯೆನ್ನುವ ಅನ್ವರ್ಥ ನಾಮವನ್ನು ಪಡೆದಿರಬಹುದು.
   
    ಸಾಂಖ್ಯ ಪದ್ಧತಿಯು 'ಪುರುಷ'(ಪ್ರತ್ಯೇಕ ಆತ್ಮ) ಮತ್ತು 'ಪ್ರಧಾನ' ಅಥವಾ 'ಪ್ರಕೃತಿ' ಇವುಗಳನ್ನು ಮಾತ್ರವೇ ಮೂಲ ವಾಸ್ತವತೆಗಳೆಂದು ನಂಬುವುದರಿಂದ ಅವು 'ಈಶ್ವರ' ಅಥವಾ 'ಭಗವಂತ'ನನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಕೆಲವೊಮ್ಮೆ 'ನಿರೀಶ್ವರ ಸಾಂಖ್ಯ' (ಈಶ್ವರ ರಹಿತ ಸಾಂಖ್ಯ)ವೆಂದು ಕರೆದಿದ್ದಾರೆ. ಯೋಗ ದರ್ಶನವು ಸಾಂಖ್ಯದ ಎಲ್ಲಾ ತತ್ವಗಳೊಂದಿಗೆ ಈಶ್ವರ ಅಥವಾ ಭಗವಂತನನ್ನೂ ಒಪ್ಪಿಕೊಳ್ಳುವುದರಿಂದ ಅದು 'ಸೇಶ್ವರ-ಸಾಂಖ್ಯ' (ಈಶ್ವರ ಸಹಿತ ಸಾಂಖ್ಯ)ವೆಂದು ಪ್ರಾಚುರ್ಯ ಪಡೆದಿದೆ.
   
    ಸಾಂಖ್ಯ ಪದ್ಧತಿಯಲ್ಲಿ ತತ್ವಜ್ಞಾನ ಅಥವಾ ಸತ್ಯದ ಗುಣ ಮತ್ತು ಸ್ವಭಾವಗಳ ಬಗೆಗಿನ ಅನ್ವೇಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಆದರೆ ಯೋಗ ಪದ್ಧತಿಯು 'ಸಾಧನೆ' ಅಥವಾ 'ಆಧ್ಯಾತ್ಮಿಕ ನಿಯಮ'ಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆದ್ದರಿಂದ ಪತಂಜಲಿಯ 'ಯೋಗಸೂತ್ರಾ' ಅಥವಾ ಯೋಗ ಪದ್ಧತಿಯ ಮೂಲ ಗ್ರಂಥವು, 'ಜಿಜ್ಞಾಸಾ' ಅಥವಾ 'ಮೀಮಾಂಸಾ' ಎನ್ನುವ ಅನ್ವೇಷಣಾತ್ಮಕ ಪದವನ್ನು ಬಳಸದೆ; "ಅಥ ಯೋಗಾನುಶಾಸನಮ್" (ಈಗ ಯೋಗದ ಅನುಶಾಸನವು=ನಿಯಮಗಳ ಪಾಠವು, ಪ್ರಾರಂಭವಾಗಿದೆ) ಎಂದಿದೆ.

ಯೋಗ ಎಂದರೆ ಏನು? 
   
    ಯೋಗ ಎನ್ನುವುದನ್ನು ಎರಡು ಶಬ್ದ ಧಾತುಗಳಿಂದ ನಿಷ್ಪತ್ತಿಗೊಳಿಸಬಹುದು. 'ಯುಜ್' (ಒಂದುಗೂಡಿಸು/ಜೋಡಿಸು) ಅಥವಾ 'ಯುಜ್' (ಧ್ಯಾನಿಸು). ಆದ್ದರಿಂದ ಯಾವುದು ಜೀವಿ ಅಥವಾ ಆತ್ಮನನ್ನು ಈಶ್ವರನ ಮೇಲೆ ಧ್ಯಾನಿಸಲು ಸಹಾಯ ಮಾಡಿ ಅವನಲ್ಲಿ ಒಂದುಗೂಡಿಸುತ್ತದೆಯೋ ಅದನ್ನೇ 'ಯೋಗ'ವೆನ್ನುವುದು.

    ಯೋಗವೆನ್ನುವ ಶಬ್ದವನ್ನು ಹಲವಾರು ಅರ್ಥಗಳಲ್ಲಿ ಋಗ್ವೇದ (೫.೮೧.೧), ಕೆಲವೊಂದು ಉಪನಿಷತ್ತುಗಳು - ಕಥಾ (೬.೧೦,೧೧; ೨.೧೨) ಮತ್ತು ಶ್ವೇತಾಶ್ವತರ (೧.೩).; ಇವುಗಳಲ್ಲಿ ಬಳಸಿರುವುದನ್ನು ಕಾಣಬಹುದು. ಭಗವದ್ಗೀತೆ(೬.೧೧,೧೩,೨೦ ಮತ್ತು ೩೫)ಯಲ್ಲಿ ಕಂಡುಬರುವ ಅನೇಕ ವಿಷಯಗಳು ಯೋಗಸೂತ್ರಾ(೨.೪೬;೧.೨;೧.೧೨)ದಲ್ಲಿ ಪ್ರಸ್ತಾವಿಸಲ್ಪಟ್ಟಿರುವ ಹಲವಾರು ಉಪದೇಶಗಳಿಂದ ಪ್ರಭಾವಿತವಾಗಿರುವಂತೆ ಕಾಣುತ್ತವೆ. ಆದ್ದರಿಂದ ಯೋಗದ ಬಗ್ಗೆ ಹಿರಣ್ಯಗರ್ಭನು ರಚಿಸಿದನೆಂದು ಹೇಳಲ್ಪಡುವ ಪುರಾತನವಾದ ಕೃತಿಯಿರಬೇಕು; ಮತ್ತು ಆ ಮೂಲ ಕೃತಿಯು ಇತರ ಕೃತಿಗಳ ರಚನೆಯ ಮೇಲೆ ತನ್ನ ಪ್ರಭಾವವನ್ನು ಬೀರಿರಬಹುದು. 

ಕೃತಿಕಾರ ಮತ್ತು ಅವನ ಕಾಲ

    ಸ್ವಯಂ ಭಗವಂತನ ಸ್ವರೂಪನಾದ ಹಿರಣ್ಯಗರ್ಭನಿಂದ ಯೋಗ ವಿಜ್ಞಾನವು ಆವಿರ್ಭವಿಸಿತೆಂದು ಹಿಂದೂ ಸಂಪ್ರದಾಯವು ಆರೋಪಿಸುತ್ತದೆ. ಕೆಲವೊಮ್ಮೆ  ಋಷಿಗಳಾದ ಸನತ್ಕುಮಾರ ಮತ್ತು ಜೈಗಿಶ್ವ್ಯ ಇವರೀರ್ವರಿಂದ ಯೋಗಶಾಸ್ತ್ರವು ರಚಿಸಲ್ಪಟ್ಟಿತು ಎಂದು ತಿಳಿಸುತ್ತದೆ. ಆದರೆ ಇವರಿಂದ ರಚಿತವಾಗಿರಬಹುದಾದ  ಕೃತಿಗಳು ಇದುವರೆಗೆ ಲಭ್ಯವಾಗಿಲ್ಲ.

    ನಮಗೆ ಈಗ ದೊರೆತಿರುವ ಕೃತಿಗಳಲ್ಲಿ ಪತಂಜಲಿಯ ಯೋಗಸೂತ್ರವೇ ಬಹು ಪುರಾತನವಾದದ್ದೆಂದು ತೋರುತ್ತದೆ. ಪಾಣಿನಿಯ ಸೂತ್ರಗಳಿಗೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ಬರೆದ ಪತಂಜಲಿ ಹಾಗೂ ಯೋಗಸೂತ್ರವನ್ನು ರಚಿಸಿದ ಪತಂಜಲಿಯು ಒಬ್ಬರೇ ಎನ್ನುವುದು ಇದುವರೆಗೂ ನಿರ್ವಿವಾದಿತವಾಗಿ ನಿರೂಪಿತವಾಗಿಲ್ಲ. ಆಯುರ್ವೇದದ ಬಗ್ಗೆಯೂ ಪತಂಜಲಿಯು ರಚಿಸಿರುವನೆಂದು ಹೇಳಲಾದ ಕೃತಿಯೂ ಕೂಡ ಇದುವರೆಗೆ ನಮಗೆ ಲಭ್ಯವಾಗಿಲ್ಲ. ಈ ಪತಂಜಲಿಯು ಸುಮಾರು ಕ್ರಿ.ಪೂ. ೨೦೦ರಿಂದ ಕ್ರಿ.ಶ. ೩೦೦ರ ಮಧ್ಯ ಕಾಲದಲ್ಲಿ ಜೀವಿಸಿರಬಹುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ.

ಪತಂಜಲಿಯ ಕೃತಿ

    ಷಡ್ದರ್ಶನಗಳನ್ನು ವಿಶದಪಡಿಸುವ ಇತರೇ ಕೃತಿಗಳಂತೆ ಪತಂಜಲಿಯ ಗ್ರಂಥವೂ ಕೂಡ ಸೂತ್ರರೂಪದಲ್ಲಿದೆ. ಸೂತ್ರವೆಂದರೆ ಚಿಕ್ಕದಾದ ನೆನಪಿನಲ್ಲಿಡಬೇಕಾದ ನುಡಿಗಟ್ಟು/ವಾಕ್ಯ; ಸೂತ್ರವು ಮಿತ ಅಕ್ಷರಗಳನ್ನು ಹೊಂದಿದ್ದು ಮಹತ್ತರವಾದ ಜ್ಞಾನವನ್ನು ಹೊರಹೊಮ್ಮಿಸುತ್ತದೆ.

    ಯೋಗಸೂತ್ರವು ೧೯೫ ಸೂತ್ರಗಳನ್ನೊಳಗೊಂಡ ನಾಲ್ಕು ಪಾದಗಳು ಅಥವಾ ಅಧ್ಯಾಯಗಳನ್ನು ಹೊಂದಿದೆ. ಅವೆಂದರೆ: ಸಮಾಧಿ ಪಾದ (೫೧ ಸೂತ್ರಗಳು); ಸಾಧನಪಾದ (೫೫ ಸೂತ್ರಗಳು); ವಿಭೂತಿಪಾದ (೫೫ ಸೂತ್ರಗಳು) ಮತ್ತು ಕೈವಲ್ಯಪಾದ (೩೪ಸೂತ್ರಗಳು).

    ಯಾವುದೇ ಸೂತ್ರ ಕೃತಿಯು ತನ್ನ ಶೈಲಿಯಿಂದಾಗಿ ಅಸ್ಪಷ್ಟವಲ್ಲದಿದ್ದರೂ ದ್ವಂದ್ವತೆಯಿಂದ ಕೂಡಿರುತ್ತದೆ; ಹಾಗಾಗಿ ಅದನ್ನು ಅರ್ಥ ಮಾಡಿಸಲು ಅದಕ್ಕೆ ವ್ಯಾಖ್ಯಾನ ಅಥವಾ ಭಾಷ್ಯ ಬಹು ಆವಶ್ಯಕ. ಸುದೈವವಶಾತ್ ಯೋಗಸೂತ್ರಗಳು ಹಲವಾರು ಪ್ರಭುದ್ಧರ ಗಮನ ಸೆಳೆದದ್ದರಿಂದ ಅವರು ವಿದ್ವತ್ಪೂರ್ಣ ಟಿಪ್ಪಣಿ ಹಾಗೂ ಉಪಟಿಪ್ಪಣಿ(ಭಾಷ್ಯ, ಟೀಕಾ, ವಾರ್ತಿಕ ಮೊದಲಾದವುಗಳು)ಗಳನ್ನು ರಚಿಸಿ ಯೋಗ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

    ವ್ಯಾಸ ರಚಿತ 'ಭಾಷ್ಯ'ವು ಯೋಗಸೂತ್ರಕ್ಕೆ ಬರೆದ ಮೂಲ ಟಿಪ್ಪಣಿಯೆಂದು ಒಪ್ಪಿಕೊಳ್ಳುವುದಲ್ಲದೆ ಅದನ್ನು ಗೌರವಾದರಗಳಿಂದ ವ್ಯಾಸರ ನಂತರದ ಎಲ್ಲಾ ಕೃತಿಕಾರರು ಕಂಡಿದ್ದಾರೆ. ಈ ವ್ಯಾಸನು ಬಹುಶಃ ನಮ್ಮ ಸಾಂಪ್ರದಾಯಿಕ ವ್ಯಾಸನಿಗಿಂತ ಬೇರೆಯವನು ಎಂದು ತಿಳಿಯಲಾಗಿದೆ ಮತ್ತು ಈತನ ಜೀವಿತ ಕಾಲವು ಕ್ರಿ.ಶ. ೪೦೦ ಎಂದು ಭಾವಿಸಲಾಗಿದೆ.    

    ಈ ಕೆಳಗಿನವು ವ್ಯಾಸ ಭಾಷ್ಯಕ್ಕೆ ಬರೆದಿರುವ ಟೀಕೆ ಹಾಗೂ ಟಿಪ್ಪಣಿಗಳು:
ವಾಚಸ್ಪತಿ ಮಿಶ್ರ(ಕ್ರಿ.ಶ. ೮೫೦) ಬರೆದ - 'ತತ್ವವೈಶಾರದಿ'; ವಿಜ್ಞಾನಭಿಕ್ಷು(ಕ್ರಿ.ಶ. ೧೬ನೇ ಶತಮಾನ)ವಿನ - 'ಯೋಗವಾರ್ತಿಕ'; ಹರಿಹರಾನಂದ ಅರಣ್ಯ (೧೯ನೇ ಶತಮಾನ) ವಿರಚಿತ 'ಭಾಸ್ವತೀ'.  ಶಂಕರ(ಕ್ರಿ.ಶ. ೭೮೮-೮೨೦)ರು ರಚಿಸಿದರೆಂದು ಹೇಳಲಾದ ಯೋಗಭಾಷ್ಯವಿವರಣ ಎನ್ನುವ ಕೃತಿಯೂ ಲಭ್ಯವಿದೆ. ಆದರೆ ಈ ಕೃತಿಯು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಆದಿಶಂಕರರಿಂದ ರಚಿಸಲ್ಪಟ್ಟಿತೋ ಇಲ್ಲವೋ ಎನ್ನುವ ವಿಷಯದಲ್ಲಿ ವಿದ್ವಾಂಸರಲ್ಲಿ ಗೊಂದಲವಿದೆ. ಬರವಣಿಗೆಯ ಶೈಲಿ ಮತ್ತು ಕೃತಿಯ ನಿರೂಪಣೆ, ಮತ್ತು ಆದಿ ಶಂಕರರು ಮಹಾನ್ ಯೋಗಿಗಳಾಗಿದ್ದರು ಎನ್ನುವುದು ದೃಢಪಟ್ಟ ವಿಷಯವಾದ್ದರಿಂದ, ಈ ಕೃತಿಯು ಅವರದೇ ಆಗಿರಬಹುದು ಎನ್ನುವುದಕ್ಕೆ ಸ್ವಲ್ಪ  ಪುಷ್ಟಿ ದೊರೆಯುತ್ತದೆ. 

    ಇವಲ್ಲದೆ ಯೋಗಸೂತ್ರಕ್ಕೆ ನೇರವಾಗಿ ಬರೆದ ಕನಿಷ್ಠ ಆರು ಭಾಷ್ಯಗಳು ಲಭ್ಯವಿವೆ. ಅವೆಂದರೆ: ಭೋಜದೇವ(೧೧ನೇ ಶತಮಾನ) ಬರೆದ 'ರಾಜಮಾರ್ತಾಂಡಾವೃತ್ತಿ'; ಭಾವಗಣೇಶನು ರಚಿಸಿದ 'ಯೋಗಸೂತ್ರಪದೀಪಿಕಾ'; ನಾಗೋಜಿ ಭಟ್ಟನ 'ಯೋಗಸೂತ್ರಾವೃತ್ತಿ'; ರಾಮಾನಂದ ಯತಿಗಳ 'ಯೋಗಮಣಿಪ್ರಭಾ', ನಾರಾಯಣ ತೀರ್ಥ ವಿರಚಿತ 'ಯೋಗಸಿದ್ಧಾಂತಚಂದ್ರಿಕಾ'; ಮತ್ತು ಸದಾಶಿವ ಬ್ರಹ್ಮೇಂದ್ರ (೧೮ನೇ ಶತಮಾನ) ವಿರಚಿತ, 'ಯೋಗಸುಧಾಕರ'.

============================================================================
ವಿ.ಸೂಃ ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Yoga Darshanaನದ 42 ರಿಂದ 47ನೆಯ ಪುಟದ ಅನುವಾದದ ಭಾಗ.
ಚಿತ್ರಕೃಪೆ: ಗೂಗಲ್
http://www.google.co.in/imgres?q=patanjali%27s+yoga+sutras&hl=en&client=firefox-a&hs=0J8&sa=X&rls=org.mozilla:en-US:official&biw=1016&bih=621&tbm=isch&prmd=imvns&tbnid=150JLEoRIci0aM:&imgrefurl=http://www.indianetzone.com/21/kaivalya_pada.htm&docid=D5leFW_06LzXxM&imgurl=http://www.indianetzone.com/photos_gallery/11/kaivalyapada_10191.jpg&w=350&h=280&ei=D_CKT9rjEI7IrQeLo9S-Cw&zoom=1&iact=hc&vpx=636&vpy=315&dur=452&hovh=191&hovw=244&tx=124&ty=220&sig=103390082118234576963&page=2&tbnh=141&tbnw=207&start=19&ndsp=24&ved=1t:429,r:22,s:19,i:160

=========================================================================
ಈ ಲೇಖನದ ಮುಂದಿನ ಭಾಗ; "ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:
http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AC-%E0%B3%A8/17/04/2012/36420

 

Rating
Average: 3 (2 votes)

Comments