ಜನ್ನುವಿನ ತೋಟಗಾರಿಕೆ

ಜನ್ನುವಿನ ತೋಟಗಾರಿಕೆ

ಪುಟ್ಟ ಜನ್ನು ಅಂಗಳಕ್ಕಿಳಿದಾಗ ಕಾಲು ಸುಟ್ಟಿತು. ಓ...ಆಗಲೇ ಸೂರ್ಯ ನಡುನೆತ್ತಿಗೆ ಬಂದಿದ್ದಾನೆ ಎಂದು ಅವನ ಪುಟ್ಟ ತಲೆ ಯೋಚಿಸಿತು. ಒಂದು ಸಲ ಹೊರ ಬಿದ್ದಾಗಿದೆ, ಒಳಗೆ ಹೋದರೆ ಅಮ್ಮ ಬೈತಾಳೆ ಎಂದುಕೊಂಡವನೇ "ಭುರ್ರ್ " ಅಂತ ತನ್ನ ಕೈ-ಬಾಯಿಗಳ ಸ್ಕೂಟರ್ ಬಿಟ್ಟುಕೊಂಡು ಬರೀ ಚಡ್ಡಿಯಲ್ಲಿ ಓಡಿದ. ಗದ್ದೆಯಂಚಿಗೆ ಬಂದಾಗ ತಿಮ್ಮು ದೂರದಲ್ಲಿ ಕಂಡ. "ತಿಮ್ಮೂ...." ಎಂದರಚಿ  ಸ್ಕೂಟರ್ ವೇಗ ಹೆಚ್ಚಿಸಿ ಜನ್ನು ಸವಾರಿ ಅವನ ಬಳಿ ಓಡಿತು. ತಿಮ್ಮು ಅವನ ಪ್ರಾಣಸ್ನೇಹಿತ, ಎಲ್ಲಾ ಕೀಟಲೆ-ತಂಟೆಗಳಿಗೂ ಜೊತೆಗಾರ. ಯಾವ ಮಾವಿನ ಮರದಲ್ಲೂ, ಗೇರು ಮರದಲ್ಲೂ ಹಣ್ಣು ಬಿಡಿ, ಕಾಯನ್ನೂ ಬಿಡುತ್ತಿರಲಿಲ್ಲ ಈ ಜೋಡಿ! ಹೊಳೆಬದಿಗೆ ಹೋಗಿ ಬೈರಾಸಿನಲ್ಲಿ ಮೀನು ಹಿಡಿದು ಅದನ್ನು ಪಾತ್ರೆಯಲ್ಲಿ ಇಡುತ್ತಿದ್ದರು, ಏರೋಪ್ಲೇನ್ ಚಿಟ್ಟೆ ಹಿಡಿದು ಅದನ್ನು ಬೆಂಕಿಪೊಟ್ಟಣದಲ್ಲಿರಿಸುತ್ತಿದ್ದರು. ಒಂದೇ, ಎರಡೇ ನೂರಾರು ತಂಟೆ ಅವರದ್ದು. ಜನ್ನು ಪೆಟ್ಟಿನಿಂದ ಹೇಗೋ ಬಚಾವಾಗುತ್ತಿದ್ದ. ಬೀಳುತ್ತಿದ್ದದ್ದೆಲ್ಲಾ ತಿಮ್ಮುವಿಗೆ. ತಿಮ್ಮು ಏಟು ತಿಂದೂ ತಿಂದೂ ಬಡ್ಡು ಮೈ ಬೆಳೆಸಿಕೊಂಡಿದ್ದ. ಗೆಳೆಯನಿಗೋಸ್ಕರ ಪೆಟ್ಟು ತಿನ್ನುವುದು ಖುಷಿಯ ವಿಷಯವೆಂಬಂತೆ ಆ ಬಾಲಕ ಭಾವಿಸಿದ್ದ. ಜನ್ನುವೋ, ಹೊಸ ತಂಟೆಯ ಬಗ್ಗೆ ರೂಪು-ರೇಷೆ ಸಿದ್ಧಪಡಿಸಿಯಾಗುತ್ತಿತ್ತು. ಅಡಿಗೆಮನೆಯಲ್ಲಿದ್ದ ಅಮ್ಮ "ಜನ್ನೂ.." ಎಂದು ಕರೆದು ಗಂಟಲು ನೋಯಿಸಿಕೊಂಡದ್ದೇ ಬಂತು, ಜನ್ನು ಮಹಾಶಯ ಆವಾಗಲೇ ಮಾಯವಾಗಿದ್ದ.
ಜನ್ನು-ತಿಮ್ಮು ಜೋಡಿ ನೆರೆಯ ವಾಸುದೇವಜ್ಜನ ತೋಟಕ್ಕೆ ಕಾಲಿಟ್ಟಾಗ ಅಲ್ಲಿ ವಾಸುದೇವಜ್ಜ ಬೆಳೆಸಿದ್ದ ಬೆಂಡೆಗಿಡಗಳು ಜನ್ನುವಿನ ಗಮನ ಸೆಳೆದವು. ಸೊಂಪಾಗಿ ಬೆಳೆದಿದ್ದವು ಗಿಡಗಳು, ಎಲ್ಲಾ ಗಿಡಗಳಲ್ಲೂ ಕಾಯಿ ಜಗ್ಗುತಿತ್ತು.. ’ಓಹೋ! ಅಜ್ಜನ ತೋಟದಲ್ಲಿ ಮಾತ್ರ ಚೆಂದ ಚೆಂದದ ಬೆಂಡೆ ಗಿಡಗಳು, ಅಮ್ಮ ಬೆಂಡೆ ಪಲ್ಯ ಚೆಂದ ಮಾಡ್ತಾಳೆ. ಬೆಂಡೆ ಪಳದ್ಯ ಮಾಡ್ತಾಳೆ, ಬಜ್ಜಿ ಮಾಡ್ತಾಳೆ.  ಅಜ್ಜನ ಮನೇಲಿ ಯಾರಿದ್ದಾರೆ ಇದೆಲ್ಲಾ ಮಾಡಿ ಕೋಡೋಕೆ? ಯಾರೂ ಇಲ್ಲ. ನಿಜವಾಗಿ, ನಮ್ಮ ಮನೆಯಲ್ಲಿರಬೇಕಿತ್ತು ಈ ಗಿಡಗಳು’ ಅಂತ ಅವನ ಬುದ್ಧಿ ವಿವರಣೆ ನೀಡಿತು. ಗೆಳೆಯನ ಕಡೆ ಓಡಿ ಅವನೊಂದಿಗೆ ಗಹನ(?) ಚರ್ಚೆ ನಡೆಸಿದ ನಂತರ ಒಂದು ಹತ್ತು ಗಿಡಗಳನ್ನು ನಮ್ಮ ಅಂಗಳದಲ್ಲಿ ನೆಡೋಣ ಎಂದು ತೀರ್ಮಾನಿಸಿದರು ಗೆಳೆಯರೀರ್ವರು. ಸರಿ, ಎಲ್ಲಾ ಬಲ ಪ್ರಯೋಗಿಸಿ ಎಳೆದರೂ ಒಂದೇ ಒಂದು ಗಿಡ ಜಪ್ಪಯ್ಯ ಅನ್ನಲಿಲ್ಲ! ಸುಮಾರು ಒಂದು-ಒಂದೂವರೆ ಅಡಿ ಬೆಳೆದಿದ್ದ, ಬೇರು ಬಲವಾಗಿದ್ದ ಗಿಡ ಅದು. ಈ  ಕುಳ್ಳಪ್ಪರಿಗೆ ಜಗ್ಗಿತೇ ? ಇಬ್ಬರಿಗೂ ತಲೆಬಿಸಿಯಾಯಿತು. ಹತಾಶೆಯಿಂದ, ಬೆವರಿದ ಮೈ, ಸೋತ ಕಾಲಗಳನ್ನು ಎಳಕೊಂಡು ದಣಪೆ ದಾಟಿ ಇನ್ನೊಂದು ಮಡಿಯ ಕಡೆ ನಡೆದರು. ಅಲ್ಲಿ ಪುಟ್ಟ ಪುಟ್ಟ ಗಿಡಗಳಿದ್ದವು, ಅದರೂ ಅದು ಬೆಂಡೆ ಗಿಡಗಳೇ ಅಲ್ಲವೇ ಅನ್ನುವುದು ಇಬ್ಬರಿಗೂ ಹೊಳೆಯಲಿಲ್ಲ ಏಕೆಂದರೆ ಅದರಲ್ಲಿ ಕಾಯಿಗಳಿರಲಿಲ್ಲವಲ್ಲ!. ಕೊನೆಗೆ ಜನ್ನುವೇ ಅದಕ್ಕೆ ಪರಿಹಾರ ಸೂಚಿಸಿದ. ದಣಪೆಯ ಆ ಕಡೆಯಿಂದ ದೊಡ್ಡ ಗಿಡದ ಎಲೆ ತಂದು ಈ ಪುಟ್ಟ ಗಿಡದ ಎಲೆ ಪಕ್ಕ ಪಕ್ಕ ಇಟ್ಟು ನೋಡುವುದು ಅಂತ. ಅಂತೆಯೇ ಗೆಳೆಯನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ತಿಮ್ಮು ಆ ದೊಡ್ಡ ಗಿಡದ ಎಲೆ ತಂದ. ಅದನ್ನು ಹೋಲಿಸಿದ ಮೇಲೆ ಪುಟ್ಟ ಗಿಡಗಳೂ ಕೂಡಾ ಬೆಂಡೆ ಗಿಡಗಳೇ ಎಂದು ಗೊತ್ತಾಗಿ ಖುಷಿಪಟ್ಟರು ಮಕ್ಕಳು. " ಜನ್ನು, ಇದೂ ಕೂಡಾ ಬೆಂಡೆ ಗಿಡ ಮಾರಾಯ, ಆ ದೊಡ್ದ ಗಿಡಕ್ಕಿಂತ ಇದನ್ನು ಬೇಗ ಕೀಳಬಹುದು, ಕೀಳುವಾ ? " ಎಂದ ತಿಮ್ಮು. ಜನ್ನು ಭಯಂಕರ ಖುಷಿಯಾದ. ಇಬ್ಬರೂ ಸೇರಿ ಹತ್ತು ಗಿಡಗಳನ್ನು ಕಿತ್ತರು. ಹತ್ತು ಅಂದರೆ ಅದು ಹತ್ತೇ ? ಇಬ್ಬರೂ ಶಾಲೆಯ ಮೆಟ್ಟಿಲ ತುಳಿದವರಷ್ಟೇ, ಕೈಗೆ ಸಿಕ್ಕಷ್ಟು ಕಿತ್ತು ಪುಟ್ಟ ಪುಟ್ಟ ಕೈಗಳಲ್ಲಿ ಅಪ್ಪಿಕೊಂಡು ಜನ್ನು ಮನೆ ಕಡೆ ಪರಾರಿಯಾದರು. ಇಷ್ಟೆಲ್ಲಾ ಕಾರುಭಾರು ನಡೆಯುವಾಗ ವಾಸುದೇವಜ್ಜ ತಮ್ಮ ಪ್ರಾಣ ಪ್ರಿಯ ತೋಟದ ಕೆಲಸ ಮುಗಿಸಿ ಮನೆಯ ಒಳಗೆ ಕುಳಿತು ಊಟ ಮಾಡುತ್ತಿದ್ದರು.
ಜನ್ನು ಮನೆ ಹಿತ್ತಲಿಗೆ ಬಂದವರೇ ಯಾವ ಜಾಗ ಸೂಕ್ತ ಎಂದರೆಗಳಿಗೆ ಚಿಂತಿಸಿ ಕೊಟ್ಟಿಗೆಯ ಪಕ್ಕದ ಸಣ್ಣ ಕೋಣೆಯಿಂದ ಸಣ್ಣ ಹಾರೆ ತಂದು ಗುಂಡಿ ತೋಡಿ ಒಂದಾದ ಮೇಲೊಂದು ಗಿಡ ನೆಟ್ಟರು. ಕೂಡಲೇ ಬಾವಿಯಿಂದ ನೀರು ಸೇದಿ ಹೊಯ್ದಿದ್ದೂ ಆಯ್ತು. ಮನೆ ಒಳಗಡೆಯಿಂದ ಗಂಟೆ, ಜಾಗಟೆಯ ಸದ್ದು ಕೇಳಿ ಬರುತಿತ್ತು, ಅಪ್ಪನ ಪೂಜೆ ಇನ್ನೂ ಮುಗಿದಿರಲಿಲ್ಲ. ತಿಮ್ಮುವೋ, ಗೆಳೆಯನ ಮುಖ ನೋಡಿದ್ದೇ ನೋಡಿದ್ದು. ಜನ್ನು ಖುಷಿಯಾದರೆ ಅವನಿಗೆ ಸ್ವರ್ಗ ಸಿಕ್ಕಂತೆ. ಆಮೇಲೆ ಜನ್ನುವಿನ ಮನೆಯ ರುಚಿ-ರುಚಿಯಾದ ಚಕ್ಕುಲಿ-ರವೆ ಉಂಡೆಯ ದಕ್ಷಿಣೆ ಬೇರೆ ಸಿಗುತ್ತಿತ್ತಲ್ಲ. ಯಾಕೋ ಗೆಳೆಯನ ಮುಖ ಅರಳಿದಂತೆ ಕಾಣಲೇ ಇಲ್ಲ. " ಏನೋ ಮಾರಾಯ, ಗಿಡ ಬಂದಾಯ್ತಲ್ಲ. ಇನ್ನು ಬೆಂಡೆ ಕೂಡಾ ಬರುತ್ತೆ, ಅಮ್ಮನ ಹತ್ತಿರ ಹೇಳಿ ಪಲ್ಯ, ಬಜ್ಜಿ ಎಲ್ಲಾ ಮಾಡಿಸಿಕೊಂಡು ತಿನ್ನು " ಎಂದ. " ಇಲ್ಲ ತಿಮ್ಮು, ಅಮ್ಮನಿಗೆ ಇದು ಸಾಕಾಗಲ್ಲ, ಇನ್ನೂ ಸ್ವಲ್ಪ ಗಿಡ ಬೇಕು, ಹೋಗಿ ತರೋಣ" ಅಂದ ಜನ್ನು. ಸರಿ, ಮತ್ತೆ ಸವಾರಿ ಹೊರಟಿತು. ಈ ಸಲ ಇನ್ನೊಂದಿಷ್ಟು ಗಿಡಗಳು ಬಂದವು, ಅವನ್ನೂ ನೆಟ್ಟಾಯ್ತು, ನೀರು ಹೊಯ್ದಿದ್ದೂ ಆಯ್ತು. ಇವಾಗ ಒಳಗಡೆ ಅಪ್ಪನ ವಿಷ್ಣುಸಹಸ್ರನಾಮಾವಳಿ ಕೇಳುತ್ತಿತ್ತು. ನೆಟ್ಟ ಗಿಡಗಳು ಇನ್ನೂ ಕಡಿಮೆ ಅನಿಸಿ ಮತ್ತೆ ಹೋಗಿ ವಾಸುದೇವಜ್ಜನ ಮಡಿ ಪೂರ್ತಿ ಬೋಳಿಸಿಬಿಟ್ಟರು. ವಾಸುದೇವಜ್ಜ ಒಳಗೆ ಮಲಗಿ ಗೊರಕೆ ಹೊಡೆಯುತ್ತಿದ್ದರೆ ಇಲ್ಲಿ ಬೆಂಡೆ ಮಡಿ ಖಾಲಿ! ಜನ್ನುವಿನ ಹಿತ್ತಲ ತುಂಬಾ ಬೆಂಡೆಯ ಚೆಂದದ ಗಿಡಗಳು. ಮಕ್ಕಳಿಬ್ಬರಿಗೂ ಈಗ ಖುಷಿ, ಸಮಾಧಾನ. ಅಪ್ಪನ ಪೂಜೆಯೂ ಮುಗಿದಿತ್ತು ಒಳಗೆ. ಇಷ್ಟರವರೆಗೆ ಉತ್ಸಾಹದಲ್ಲಿ ಕಾಣದಿದ್ದ ಹಸಿವು ಈಗ ಕಾಣಿಸಿಕೊಂಡಿತ್ತು ಗೆಳೆಯರಿಬ್ಬರಿಗೂ.
" ಬಾ ಊಟ ಮಾಡೋಣ" ಎಂದ ಜನ್ನು ಒಳಗೆ ಬಂದವನು " ಅಮ್ಮಾ, ಊಟ ಕೊಡು " ಎಂದರಚಿದ.  ದೇವರ ಕೋಣೆಯಿಂದ ನೈವೇದ್ಯ ಹೊರ ತರುತ್ತಿದ್ದ ಅಮ್ಮ ಜನ್ನುವನ್ನು ನೋಡಿದವಳೇ ಬೆಚ್ಚಿ ಬಿದ್ದಳು. ಇಡೀ ಮೈ-ಮುಖ ತಿಳಿಯದಂತೆ ಮಣ್ಣಲ್ಲಿ ಕಲೆಸಿಹೋಗಿದ್ದ ಮುದ್ದು ಮಗರಾಯ! ಜನ್ನು ಅಪ್ಪ-ಅಜ್ಜಿ ನೋಡಿದರೇ ಇನ್ನು ಮಹಾಭಾರತ ಶುರುವಾಗುತ್ತದೆ ಎಂದುಕೊಂಡವರು ಅಲ್ಲೇ ಬಾಳೆ ಎಲೆ ಒರಸುತ್ತಿದ್ದ ದೇವಕಿಯಮ್ಮನಿಗೆ ಜನ್ನುವಿಗೆ ಸ್ವಲ್ಪ ಮೀಯಿಸುವಂತೆ ಹೇಳಿದರು. ದೇವಕಿಯಮ್ಮನಿಗೋ ತಡೆಯಲಾರದಷ್ಟು ನಗು-ಖುಷಿ, " ಈ ಅತ್ತೆ ಹತ್ತಿರ ಮೀಯಿಸಿಕೊಳ್ಳಲ್ಲಿಕ್ಕೆ ಇವಾಗ ಸಮಯ ಬಂತೋ ತುಂಟಾ! " ಎಂದವರೇ ಕೊಸರಾಡುತ್ತಿದ್ದ ತಮ್ಮನ ಮಗನನ್ನು ಎತ್ತಿ ಬಚ್ಚಲ ಕಡೆ ನಡೆದರು. ಅಲ್ಲೇ ಹೊರಗೆ ಇದ್ದ ತಿಮ್ಮುವೂ ಜನ್ನುವಂತಾಗಿದ್ದು ಕಂಡು " ಅಲ್ಲೇ ನೀರು ಸೇದಿ ಮೈಗೊಂಡಿಷ್ಟು ಹಾಕ್ಕಳಾ ತಿಮ್ಮು, ಇಬ್ಬರೂ ಸೇರಿ ಏನು ಘನಂದಾರಿ ಕೆಲಸ ಮಾಡಿದಿರಿ ಇವತ್ತು ?" ಎಂದು ಪ್ರಶ್ನಿಸಿದರು. ಇಬ್ಬರೂ ಬಾಲರು ಮುಖ-ಮುಖ ನೋಡಿ ನಕ್ಕರೇ ಹೊರತು ಬಾಯಿ ಬಿಡಲಿಲ್ಲ. ದೇವಕಿಯತ್ತೆ ಮಾತನಾಡುತ್ತ ಜನ್ನುಗೆ ಸ್ನಾನ ಮಾಡಿಸಿ ಮೈ ಒರೆಸಿ, ಅಂಗಳದಲ್ಲಿ ಒಣ ಹಾಕಿದ್ದ ಪಾಣಿ ಪಂಚೆಯನ್ನು ಅವನ ಸುತ್ತ ಸುತ್ತಿದರು. ಪಾಪ, ತಿಮ್ಮುವಿಗೋ ಹಳೆಯ, ಒದ್ದೆ ಚಡ್ಡಿಯೇ ಗತಿ.
ಹಸಿವೆಯಿಂದ ಚಡಪಡಿಸುತ್ತಿದ್ದ ಜನ್ನು ಊಟಕ್ಕೆ ಬರುತ್ತಿದ್ದಂತೆಯೇ ಅಪ್ಪ-ಅಜ್ಜಿ ಊಟ ಮುಗಿಸಿ ಏಳುತ್ತಿದ್ದದ್ದು ಕಂಡಿತು. ಅಬ್ಬಾ! ಬಚಾವಾದೆ ಎಂದುಕೊಂಡವನು ಅವರ ಕಣ್ಣಿಗೆ ಬೀಳದಂತೆ ಬಾಗಿಲಸಂದಿಯಲ್ಲಿ ಅಡಗಿ ಅವರು ಹೊರಚಾವಡಿಗೆ ಹೋಗುತ್ತಿದ್ದಂತೆ ಮೆಲ್ಲನೆ ಅಡುಗೆ ಮನೆಗೆ ನುಸುಳಿದ. ಹಿತ್ತಲ ಬಾಗಿಲಲ್ಲಿ ತಿಮ್ಮು ಕಾದು ಕುಳಿತದ್ದು ಕಂಡಿತು. " ಅಮ್ಮಾ, ನಂಗೂ, ತಿಮ್ಮುವಿಗೂ ಊಟ ಕೊಡು" ಎಂದು ಕೇಳಿದ. ತಿಮ್ಮುವಿಗೆ ಬಾಳೆ ಎಲೆಯಕುಡಿಯೊಂದರಲ್ಲಿ ಊಟ ಕೊಟ್ಟ ಅಮ್ಮ ಜನ್ನುವಿಗೆ ಅವನ ಪುಟ್ಟ ಬೆಳ್ಳಿ ಬಟ್ಟಲಲ್ಲಿ ಊಟ ಕೊಟ್ಟರು. ದೇವಕಿಯತ್ತೆ ಮತ್ತು ಅಮ್ಮ ಅಲ್ಲೇ ಊಟಕ್ಕೆ ಕುಳಿತದ್ದು ನೋಡಿ ಜನ್ನುವಿಗೆ ಗೆಳೆಯನ ಬಳಿ ಮಾತಾಡಲು ಧೈರ್ಯ ಸಾಲದೇ ತಲೆತಗ್ಗಿಸಿ ತಿನ್ನತೊಡಗಿದ. ಮಕ್ಕಳಿಬ್ಬರೂ, ಬಿಟ್ಟರೆ ಸೊಕ್ಕಲು ಹೋಗವರೆಂದು ಅಮ್ಮ, " ತಿಮ್ಮೂ,ಹಟ್ಟಿಗೆ ನಡಿ...ಗೋಮಯ ಹಾಕಿ" ಎಂದರು. ತಿಮ್ಮುವಿಗೆ ಜನ್ನು ಮನೆ ಊಟವೆಂದರೆ ಪ್ರಾಣ, ಅದ್ರಲ್ಲೂ ಜನ್ನು ಅಮ್ಮ ಹಾಕೋ ಊಟ ಮಾಡಲಿಕ್ಕೆ ಸಾಕು-ಸಾಕಾಗುತ್ತಿತ್ತು. ಎಲೆ ತುಂಬಾ ಬಡಿಸುತ್ತಿದ್ದರು ಅಮ್ಮ. ತಿಮ್ಮುವೂ ಸುಸ್ತಾಗಿದ್ದ, ಊಟ ಮುಗಿಸಿ, ಗೋಮಯ ಹಾಕಿ ತನ್ನ ಹಟ್ಟಿ ಕಡೆ ನಡೆದ. ಇತ್ತ ಜನ್ನುವೋ ಸ್ವಲ್ಪ ಹೊಟ್ಟೆಗೆ ಬಿದ್ದೊಡನೆ ಹಸಿವು ಮಾಯವಾಗಿ ತಟ್ಟೆಯಲ್ಲಿದ್ದ ಅನ್ನದೊಡನೆ ಆಟವಾಡಲು ಶುರುಮಾಡಿದ್ದ. ಅತ್ತೆ ಜೊತೆ ಮಾತನಾಡುತ್ತ ಊಟ ಮಾಡುತ್ತಿದ್ದ ಅಮ್ಮ ದೊಡ್ಡ ಕಣ್ಣು ಬಿಟ್ಟು ನೋಡಿದರೆ ತಿನ್ನುವ ನಾಟಕ, ಇಲ್ಲದಿದ್ದರೆ ಮತ್ತೆ ಆಟ... ಹೀಗೆ ಸಾಗಿತ್ತು ಅವನ ಊಟ. ಹೇಗೂ ಅಪ್ಪ ಪೇಟೆಗೆ ಹೋಗಿರುತ್ತಾರೆ, ಅಜ್ಜಿ ದೇವರ ಕೋಣೆಯಲ್ಲಿರುತ್ತಾರೆಂಬ ಧೈರ್ಯ ಅವನಿಗೆ!  ಅತ್ತೆಯ ಗದರಿಕೆ, ಅಮ್ಮನ ಹತ್ರ ಬೈಗುಳ ಕೇಳಿಸಿಕೊಂಡು ಅವರ ಎಲ್ಲಾ ಮುಸುರೆ ಕೆಲ್ಸ ಮುಗಿಯುವವರೆಗೂ ಆಮೆವೇಗದಲ್ಲಿ ತಿನ್ನುತ್ತಾ ಅಂತೂ ಇಂತೂ ಊಟ ಮುಗಿಸಿದ ಜನ್ನು.ದೇವಕಿಯತ್ತೆ ದೇವರ ಕೋಣೆ ಸೇರಿ ಅಜ್ಜಿಯೊಂದಿಗೆ ಗೆಜ್ಜೆ ವಸ್ತ್ರ ಮಾಡಲು ಕುಳಿತರೆ, ಬೆಳ್ಳಂಬೆಳಗ್ಗಿನಿಂದ ಕೊಟ್ಟಿಗೆ, ದನ-ಕರು, ಅಡುಗೆ, ಪೂಜೆ, ನೈವೇದ್ಯ, ಎಸರು ಎಂದೆಲ್ಲಾ ಕೆಲಸ ಮಾಡಿ ಮಾಡಿ ದಣಿದಿದ್ದ ಅಮ್ಮನಿಗೆ ಕಣ್ಣು ಕೂರುತಿತ್ತು. " ಜನ್ನು ಪುಟ್ಟಾ, ದಮ್ಮಯ್ಯ, ಮಲಕ್ಕೋ ಕಂದಾ ಸ್ವಲ್ಪ ಹೊತ್ತು. ರಜೆ ಮುಗಿಯುವಷ್ಟರಲ್ಲಿ ಕಪ್ಪು ಕಪ್ಪು ಕಾಗೆ ಥರ ಆಗ್ತಿ ನೋಡು, ಇದೇ ಥರಾ ಬಿಸಿಲಲ್ಲಿ ಅಲೆದರೆ " ಎಂದವರು ಕೈ-ಮುಖ ತೊಳೆಸಿ ಆರು ವರುಷದ ಜನ್ನುವನ್ನು ಹೊರಲಾರದೇ ಹೊತ್ತುಕೊಂಡು ಮಲಗುವ ಕೋಣೆಗೆ ಬಂದರು. ಜನ್ನುವೂ ಇಂದು ಸಾಕಷ್ಟು ತೋಟಗಾರಿಕೆ ಮಾಡಿದ್ದರಿಂದ ಸಾಕಷ್ಟು ಸುಸ್ತಾಗಿದ್ದ. ಅಮ್ಮನ ಪಕ್ಕ ಮಲಗಿ ಅಮ್ಮನ ಕೆನ್ನೆಗೆ ತನ್ನ ಪುಟ್ಟ ಕೈ ಇಟ್ಟು ಅಮ್ಮನ ಹೊಳೆಯುವ ಕಣ್ಣು, ಮೂಗಿನ ನತ್ತು, ಕಿವಿಯೋಲೆ, ಉದ್ದದ ನಾಮ ಎಲ್ಲಾ ನೋಡಿ ’ ನನ್ನಮ್ಮ ಎಷ್ಟು ಚೆಂದ ಪಟದಲ್ಲಿನ ದೇವರ ಹಾಗೆ’ ಅಂದುಕೊಂಡು ಅಮ್ಮನ ಕರಿಮಣಿ ಸರದೊಂದಿಗೆ ಆಟವಾಡುತ್ತಾ ಅಲ್ಲೇ ನಿದ್ದೆ ಹೋದ.

ಒಂದೆರೆಡು ಘಂಟೆ ಕಳೆಯಿತೋ ಎನೋ ಅನಿಸಿ ಅಮ್ಮ ಒಳಚಾವಡಿಯ ಬಾಗಿಲು ತೆಗೆದರು, ಸೂರ್ಯ ಕಂತುತ್ತಾ ಬಂದಿದ್ದ. ಓ! ಹಾಲು ಕರೆಯುವ ಹೊತ್ತಾಯ್ತು ಎಂದು ಧಡಬಡಿಸಿ ಮುಖ ತೊಳೆದುಕೊಂಡು ಕೊಟ್ಟಿಗೆಯ ಕಡೆ ಲಗುಬಗೆಯಿಂದ ಹೆಜ್ಜೆ ಹಾಕಿದರು.  ಜನ್ನುವಿಗೋ ಗಾಢ ನಿದ್ದೆ, ನಿದ್ದೆಯಲ್ಲೊಂದು ಸುಂದರ ಕನಸು....ಕನಸಲ್ಲಿ ಎಲ್ಲಾ ಬೆಂಡೆಗಿಡಗಳು ಆಕಾಶದೆತ್ತರ ಬೆಳೆದಿವೆ. ಎಲ್ಲಾ ಗಿಡಗಳಲ್ಲೂ ಜಗ್ಗುವಷ್ಟು ಉದ್ದ-ಉದ್ದದ ಬೆಂಡೆಕಾಯಿಗಳು. ಅಮ್ಮ"ಜನ್ನೂ" ಎಂದು ಅವನ್ನು ಕೊಯ್ಯಲು ಕರೆಯುತ್ತಾರೆ. ಎಲ್ಲಾ ಕಿತ್ತಾದ ಮೇಲೆ ಬಜ್ಜಿ, ಪಲ್ಯ, ಪಳದ್ಯ.......ಅಷ್ಟರಲ್ಲಿ ಥಟ್ಟನೇ ಎಚ್ಚರವಾಯಿತು. ಕನಸು ಇಷ್ಟರವರೆಗೆ ಕಂಡದ್ದು ಅಂತ ಅರ್ಥವಾಗುವಷ್ಟರಲ್ಲಿ ಹೊರಗೆ ಯಾರದೋ ದೊಡ್ಡ ದನಿ ಕೇಳಿ ಬಂತು. ಅತ್ತೆ ಸುತ್ತಿದ್ದ ಪಾಣಿಪಂಚೆಯನ್ನು ಮೇಲೆಳೆದುಕೊಳ್ಳುತ್ತಾ, ಆಕಳಿಸುತ್ತಾ ಹೊರ ಬಂದ. ಅಲ್ಲಿ ನೋಡುತ್ತಾನೆ. ವಾಸುದೇವಜ್ಜ ತಮ್ಮ ಊರುಗೋಲು ಹಿಡಿದು ಬಂದಿದ್ದಾರೆ, ಸಿಟ್ಟಲ್ಲಿ ಹಾರಾಡುತ್ತಿದ್ದಾರೆ. ಅಮ್ಮನೋ ಕಂಗಾಲಾಗಿದ್ದಾರೆ. ತಿಮ್ಮು ಕಣ್ಣೀರು ಸುರಿಸುತ್ತಾ ವಾಸುದೇವಜ್ಜನ ಕೆಲಸದಾಳು ಕರಿಯನ ಬಿಗಿಮುಷ್ಠಿಯಲ್ಲಿ ಸಿಲುಕಿದ ತನ್ನ ಕೈಯನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಜನ್ನುವಿಗೆ ಏನಾಗುತ್ತಿದೆಯೆಂದೇ ತಿಳಿಯಲಿಲ್ಲ. ಅಷ್ಟರಲ್ಲಿ ವಾಸುದೇವಜ್ಜನ ದೃಷ್ಟಿ ಜನ್ನುವಿನ ಕಡೆ ಹರಿಯಿತು. " ಮೂರು ಮಾವಿನ ಮಿಡಿಯಷ್ಟೂ ಉದ್ದ ಇಲ್ಲದ ಪೋರ, ನಿನಗ್ಯಾಕೋ ನನ್ನ ತೋಟದ ಉಸಾಬರಿ? ಎಲ್ಲೋ ನನ್ನ ಬೆಂಡೆ ಗಿಡಗಳು ??? ಹಾಂ " ಎಂದು ಕಣ್ಣರಳಿಸಿ ಹರಿಹಾಯ್ದರು. ಸರಿ, ಎಲ್ಲರ ಸವಾರಿ ಜನ್ನುವಿನ ನೇತೃತ್ವದಲ್ಲಿ ಹಿತ್ತಲ ಕಡೆ ಹೋಯಿತು. ಅಮ್ಮ, ವಾಸುದೇವಜ್ಜ ನೋಡುತ್ತಾರೆ, ಎಲ್ಲಾ ಬೆಂಡೆ ಗಿಡಗಳೂ ಅಲ್ಲಿವೆ. " ಮಾಮ, ಅಂವ ಸಣ್ಣ ಹುಡುಗ ಅಲ್ವಾ, ಗೊತ್ತಾಗಿಲ್ಲ...ಕ್ಷಮಿಸಿ, ದಯವಿಟ್ಟು ಇವರಲ್ಲಿ ಹೇಳಬೇಡಿ " ಎಂದು ತಪಿತಸ್ಥ ದನಿಯಲ್ಲಿ ಅಮ್ಮ ನುಡಿದರು. ಅಜ್ಜನ ಆವೇಶ ಕಡಿಮೆಯಾಗಲಿಲ್ಲ,  " ನಿನ್ನ ಮಗನ ಸ್ವಲ್ಪ ಹದ್ದು ಬಸ್ತಿನಲ್ಲಿಟ್ಟುಕೋ ತಾಯೀ, ಕರಿಯಾ, ಎಲ್ಲಾ ಗಿಡ ಕಿತ್ತು ತೆಗೆದುಕೊಂಡು ಬಾ...ತಿಮ್ಮೂ ನೀನು ನನ್ನ ತೋಟದ ಸುದ್ದಿಗೆ ಬಂದರೆ ನೋಡು, ಕಾಲು ಮುರಿದು ಹಾಕ್ತೇನೆ, ಗೊತ್ತಾಯ್ತಾ ?" ಎಂದು ಆರ್ಭಟಿಸಿ ಕಾಲಪ್ಪಳಿಸಿ ಹೊರಟೇ ಹೋದರು. ಅಮ್ಮ ಕಿಟಕಿಯ ಬಳಿ ನಿಂತು ನೋಡುತ್ತಿದ್ದ ದೇವಕಿಯತ್ತೆಯ ಕಡೆ ನೋಡಿದಾಗ ಅತ್ತೆ ಚಿಂತೆ ಮಾಡಬೇಡವೆಂಬಂತೆ ತಲೆಯಾಡಿಸಿದರು. ಸಧ್ಯ, ಜನ್ನುವಿನ ಅಜ್ಜಿ ಆಚೆಮನೆಯ ಕಮಲಕ್ಕನಲ್ಲಿಗೆ ಹೋಗಿದ್ದರು. ಜನ್ನುವಿಗೆ ಬೈಯ್ಯಲೆಂದು ತಿರುಗಿದವರು ನೋಡುತ್ತಾರೆ, ಜನ್ನು ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದಾನೆ. ಅವನ ಕಣ್ಣುಗಳಲ್ಲಿ ಧಾರೆಯಾಗಿ ಸುರಿಯುತ್ತಿದೆ ನೀರು. ಮಧ್ಯಾಹ್ನದಿಂದ ಕಷ್ಟಪಟ್ಟಿದ್ದೆಲ್ಲಾ ಕರಿಯ ಹಾಳು ಮಾಡುತ್ತಿದ್ದಾನೆ, ಎಂಬ ಆಕ್ರೋಶ-ಸಂಕಟ ಬೇರೆ. ನಿಂತಿದ್ದ ಅಮ್ಮನ ಕಾಲುಗಳಿಗೆ ತನ್ನ ಪುಟ್ಟ ಕೈಗಳಿಂದ ಪಟ ಪಟ ಹೊಡೆದ. ಸೀರೆಯನ್ನು ಹಲ್ಲಿಂದ ಕಚ್ಚಿದ..."ಅಮ್ಮಾ....ಅವರ ಹತ್ತಿರ ತುಂಬಾ ತುಂಬಾ ತುಂಬಾ ಗಿಡಗಳಿದ್ದವು, ಅದಕ್ಕೆ ತಂದೆ. ಅವರು ಯಾಕೆ ನಿಂಗೆ, ನಂಗೆ, ತಿಮ್ಮುವಿಗೆ ಬೈಬೇಕು ? " ಎನ್ನುತ್ತಾ ಗೋಳೋ ಅಂತ ಅತ್ತ! ಅವನೊಂದಿಗೆ ತಿಮ್ಮುವೂ ದನಿ ತೆಗೆದು ಅಳಲಾರಂಭಿಸಿದ. ಅಮ್ಮನಿಗೂ ಅವನ ಸಂಕಟ ನೋಡಲಾರದೆ ಕಣ್ಣಂಚಿನಲ್ಲಿ ನೀರು ಜಿನುಗಿತು. ಪಳದ್ಯ, ಬಜ್ಜಿ, ಪಲ್ಯ ಎಲ್ಲವೂ ಜನ್ನುವಿನ ಕಣ್ಣೀರಿನಲ್ಲಿ ಕಲೆಸಿ ಹೋಯ್ತು.  

Comments