ಶ್ರೀಪಾದರಾಜರ ಕೃತಿಗಳಲ್ಲಿ ಆತ್ಮನಿವೇದನೆ

ಶ್ರೀಪಾದರಾಜರ ಕೃತಿಗಳಲ್ಲಿ ಆತ್ಮನಿವೇದನೆ

(ಇದೊಂದು ಸ್ಥೂಲಾತಿಸ್ಥೂಲ ಪರಿಚಯ, ನಿಮ್ಮ ನಾಡಿಮಿಡಿತ ನೋಡಲು....) 
ಆತ್ಮನಿವೇದನೆ “ಭಾಗವಂತಿಕೆ”ಯ ಆರಂಭವೂ ಹೌದು; ಮುಕ್ತಾಯವೂ ಹೌದು. ’ಭಾಗವಂತಿಕೆ’ ಎನ್ನುವುದು, ಸುಳಾದಿ, ಉಗಾಭೋಗ, ಕೀರ್ತನೆ, ದೇವರನಾಮ ಇತ್ಯಾದಿ ’ದಸ ಸಹಿತ್ಯ’ ವಿಭಾಗಕ್ಕೆ ಬಂದಿಯಲ್ಲ; ಅದೇ ಒಂದು ಆಚಾರ – Practice – ಮತ್ತು ಅನುಭಾವ. ಈ ’ಆತ್ಮನಿವೇದನೆ’ಯ ಆರಂಭದಲ್ಲಿ ಆತಂಕ, ಧಾವಂತ, ತಹತಹ; ಮುಕ್ತಾಯದಲ್ಲಿ ತೃಪ್ತಿ, ನಿರಾಳ, ಧನ್ಯತೆಗಳು ಮೂಲಲಕ್ಷಣ. ’ಜಬ್ ಮೈ ಹೂಂ ತಬ್ ಹರಿ ನಹ್ಞಿ” ಎನ್ನುವುದು ಆರಂಭದ ಅವಸ್ಥೆ “ಅಬ್ ಹರಿ ಹೈ ಮೈ ನಾಹ್ಞಿ” ಎನ್ನುವ ಮುಕ್ತಾಯದ ನಿರಂಜನ ಸ್ಥಿತಿ!
 ’ಏಕೆ ಪುಟ್ಟಿಸಿದಿ ನೀ ಸಾಕಲರಿಯದೆ ’ಜಗದೇಕ ಕಾರಣಪುರುಷ’ನೇ ಕೃಷ್ಣ? ’ಏಕೋವಿಷ್ಣುವೆಂಬ ವಾಕ್ಕು’ ಎಲ್ಲಿ ಹೋಯಿತು? ಎಂಬ ಮೈ ಪರಚಿಕೊಳ್ಳುವ ಉನ್ಮಾದವನ್ನೂ ’ರಾಯರು’ ಬಿಚ್ಚಿಡುತ್ತಾರೆ. ಜೊತೆಗೆ’ನರಯಾನದೊಳು ಕ್ಷಣ ನರವರನೆನಿಸುವಿ; ವರಛತ್ರ-ಚಾಮರ ಹಾಕಿಸಿ’ದ್ದನ್ನೂ ’ಕರಣಾನಿಧಿ ನಿನ್ನ ಕರುಣ ತಪ್ಪಿದ ಮ್ಯಾಲೆ ಚರಣ ರಕ್ಷೆಯ ಪಾದರಕ್ಷೆಯೂ ದೊರೆಯದ’ ಸ್ಥಿತಿಯನ್ನೂ ಪ್ರಜ್ಞಾಪೂರ್ವಕವಾಗಿ ವಿಶ್ಲೇಷಿಸುವ ’ಸಾಕ್ಷೀಪ್ರಜ್ಞೆ’ಯೂ ಅವರೇ ಆಗುತ್ತಾರೆ! ಈ ಔನ್ನತ್ಯಾವನತಿಗಳಲ್ಲಿ ನಮ್ಮ ’ಮಿತಸ್ವಾತಂತ್ರ್ಯ’ದ ಪಾತ್ರವೂ ಇದೆ. ದುಷ್ಟ ಸಂಗಬಿಡುವ, ಗಂಗಾಜನಕ ಪಾಂಡುಂಗನ ಭಕ್ತರ ಸಂಗವಿಟ್ಟುಕೊಂಡಿರುವ, ಅಂಗನೆಯರ ಕೂಡಿ ಅನಂಗ ಬಾಣಕೆ ಸಿಲುಕಿ ಭಂಗಪಡಲಾರದ ಪ್ರಜ್ಞೆ-ಪ್ರತಿಜ್ಞೆಗಳನ್ನೂ ಪಾಲಿಸಬೆಕಾಗುತ್ತದೆನ್ನುತ್ತಾರೆ, ಅವರು!
 ವಾಸುದೇವನ ದಾಸರ, ದಾಸರ ದಾಸ್ಯವನ್ನು ಸಹಿಸುತ್ತಾ, ಅವರುಚ್ಚರಿಸುವ ಹರಿಕಥಾಮೃತದಲ್ಲಿ, ತಿಳಿದು-ತಿಳಿಯದೆ ಮುಳುಗೇಳುತ್ತಾ, ಅವರಂತೆ ನಾವು ನಾಲಗೆಯಲ್ಲಿ ನಾಮದುಚ್ಚಾರ ಮಾಡುತ್ತಾ, ಒಡೆಯನಡಿಗಳಿಗೆರುಗಿ, ನಾಗಶಯನ ರಂಗವಿಠಲನ ಬಾಗಿಲ ಕಾಯುವ ಭಾಗ್ಯಕ್ಕಾಗಿ ಆತ್ಮನ್ನೊಪ್ಪಿಸಿಕೊಡುವುದು, ಈ ಆತ್ಮ ನಿವೇದನೆ.
 ತಿರುತಿರುಗಿ ಪುಟ್ಟಿ ಪ್ರಜ್ಞಾಪುರ್ವಕವಾಗಿ, ಪ್ರಜ್ಞಾತೀತವಾಗಿ, ಪರರ ಬಾಧಿಸುತ್ತಾ, ಅನಿವಾರ್ಯತೆಯ ಹೆಸರಿನಲ್ಲಿ ಪರಿಪರಿಯ ಪಾಪಗಳನ್ನು ಮಾಡುತ್ತಾ, ಶ್ವಾನಕೂಟದಂತೆ ಹೀನಜನರೊಡುವ– ವ್ಯಾಪಾರ-ವ್ಯಹಾರ – ಇಟ್ಟುಕೊಂಡಿರುವುದೇ ಇಹಜೀವನದ ಸವಿ-ಸುಖ ಎಂದುಕೊಂಡಿದ್ದಾಗ ಜಗ್ಗನೆ ಈ ಹಿತನದ ಅರಿವಾಗುವುದೇ ದೇವರ ದಯೆ; ಪನ್ನಗಾಧಿಪಶಯನ ಮನ್ನಿಸುವ, ಮಾನ್ಯತೆ ನೀಡುವ ಅನುಭಾವ, ಇದು! ’ಇನ್ನು ಭಯವೇತಕೆ?’ ಎನ್ನುವುದು ಹಣ್ಣಾದ ’ಆತ್ಮದನಿವೇದನೆ’ ಆಗ ಆಗುತ್ತದೆ; ಎನ್ನ ದೊರೆ, ಎನ್ನೊಡೆಯ ರಂಗವಿಠಲ, ಈ ಮುನ್ನವೇ ಚೆನ್ನಾಗಿ ಪಾಲಿಸಿದ ಭಾಗವತಗಣಕ್ಕೆ ’ಆತ್ಮ’ದ ಆತ್ಮೀಯ ಸೇರ್ಪಡೆಯಾಗಿಹೋಗುತ್ತದೆ!
ಇದೇ ಹಾಡನಲ್ಲಿ ’ರಾಯರು’ ’ನಾ ಮಾಡಿದ ಕರ್ಮ ನಾನಾ ವಿಚಿತ್ರವೈ’ ಎಂಬ ಬಣ್ಣನೆ ನೀಡುತ್ತಾರೆ. ಆದರೆ ಒಂದೇ ಇರವಿನಲ್ಲಿ, ಒಂದೇ ನಾಮ-ರೂಪದ ದೇಹದಲ್ಲಿ, ಬಂಧ-ಮೋಕ್ಷಗಳೆರಡನ್ನೂ ಒಂದೇ ಹಾಡಿನಲ್ಲಿ, ಒಟ್ಟೊಟ್ಟಿಗೇ ಅನುಭವಿಸಿರುವುದು ನಿಜವಾದ ಭಾಗವಂತಿಕೆಯದೇ ’ವೈಚಿತ್ರ್ಯ’!
ಇಂತಹ ಅನುಭಾವಾಭಿವ್ಯಕ್ತಿಗಳಿಗೆ ಆದ್ಯರಾರ ಶ್ರೀಪಾದರ ಚರಣ ಸ್ಮ್ರರಣೆ ನಮಗೊಂದು ಅಸ್ತಿತ್ವ ನೀಡಲಿ; ಆ ಅಸ್ತಿತ್ವ ಸಾಥ್ಕವಾಗಲಿ.
 

Rating
No votes yet