ಕಾಡಿನ ಜ್ವಾಲೆ ಮುತ್ತುಗದ ಹೂ

ಕಾಡಿನ ಜ್ವಾಲೆ ಮುತ್ತುಗದ ಹೂ

 ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ಕುರುಚಲು ಕಾಡಿನಲ್ಲಿ ತಿರುಗಾಡಿದರೆ ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ ಬಣ್ಣದಿಂದ ಮನಸೆಳೆಯುವ ಈ ಗಿಡ ಭಾರತೀಯರಿಗೆ ಪವಿತ್ರವಾದುದು. ಇದನ್ನು ಮುತ್ತುಗದ ಗಿಡ ಎಂದು ಕನ್ನಡದಲ್ಲಿ, ಪಲಾಶ ಎಂದು  ಹಿಂದಿಯಲ್ಲಿ, ಲಾಕ್ಷಾತರು ಎಂದು ಸಂಸ್ಕೃತದಲ್ಲಿ, ಫ್ಲೇಮ್ ಆಫ್ ದಿ ಫಾರೆಸ್ಟ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಬ್ಯುಟಿಯಾ ಮೊನೆಸ್ಪರ್ಮಾ ಎಂಬ ಬೊಟಾನಿಕಲ್ ಹೆಸರು ಇದಕ್ಕಿದೆ. 

ಸುಮಾರು ೨೦-೪೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಗಿಡದ ಎಲೆಗಳನ್ನು ಊಟದ ತಟ್ಟೆಯನ್ನು ತಯಾರಿಸಲು ಬಳಸಲಾಗುತ್ತಿತ್ತು. ಪತ್ರೋಳಿ ಎಂದೇ ಕರೆಯಲ್ಪಡುವ ಊಟದ ತಟ್ಟೆಗಳನ್ನು ಇದರ ಎಲೆಗಳನ್ನು ಹರಿದು, ಬಿಸಿಲಿನಲ್ಲಿ ಒಣಗಿಸಿ, ಸಣ್ಣ ಕಡ್ಡಿಗಳಿಂದ ಚುಚ್ಚಿ ಸಿದ್ಧಪಡಿಸಲಾಗುತ್ತಿತ್ತು. ಈಗ ಎಲ್ಲೆಡೆ ಕಾಗದದ, ಪ್ಲಾಸ್ಟಿಕ್‌ನ ತಟ್ಟೆಗಳು ಬಂದಿವೆ. ಡಿಸೆಂಬರ್‌ನಲ್ಲಿ ತನ್ನ ಎಲ್ಲ ಎಲೆಗಳನ್ನು ಉದುರಿಸಿಕೊಂಡು ನಗ್ನವಾಗಿ ನಿಲ್ಲುವ ಮುತ್ತುಗದ ಗಿಡ ಜನೆವರಿಯಿಂದ ಮೈತುಂಬ ಹೂಗಳನ್ನರಳಿಸಿಕೊಂಡಾಗ ನೋಡಲು ಕಣ್ಣುಗಳೇ ಸಾಲವು ಎನಿಸುತ್ತದೆ. ಹೂವಿಗೆ ವಾಸನೆ ಇಲ್ಲದಿದ್ದರೂ ತಕ್ಷನ ಕಣ್ಮನ ಸೆಳೆಯುವ ಆಕರ್ಷಣ ಶಕ್ತಿ ಇದಕ್ಕಿದೆ. ಗಾಢ ಕೆಂಪು, ಹಳದಿ ಬಣ್ಣದ ಮಿಶ್ರಣದಂತಿರುವ ಈ ಹೂವುಗಳು ಗಿಳಿಯ ಕೊಕ್ಕಿನಂತಿವೆ. ಅದಕ್ಕಾಗಿಯೇ ಇದನ್ನು ಪ್ಯಾರೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ರೈತರು ಮುತ್ತುಗದ ಗಿಡವನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಸುಗ್ಗಿಯಾಗಿ ರಾಶಿಯಾದಾಗ ಪೂಜೆಗಾಗಿ ಇದರ ಹೂವುಗಳನ್ನೇ ಬಳಸಲಾಗುತ್ತದೆ. ಜಗತ್ತಿನ ಎಲ್ಲ ಗಿಡಗಳಿಗೂ ಪುರಾತನವಾದುದು ಎಂಬ ನಂಬಿಕೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇದನ್ನು ಮುದುಕನ ಮರ ಮತ್ತು ಮುದುಕನ ಹೂ ಎಂದು ಗುರುತಿಸಲಾಗುತ್ತದೆ. ಇದರ ಹೂಗಳನ್ನು ಮೊದಲೆಲ್ಲ ಹೋಳಿ ಹುಣ್ಣಿಮೆಯ ಬಣ್ಣಕ್ಕಾಗಿ ಬಳಸಲಾಗುತ್ತಿತ್ತು. ಇದು ಪರಿಸರ ಸ್ನೇಹಿ ಬಣ್ಣವಾಗಿದ್ದುದರಿಂದ ಚರ್ಮಕ್ಕೂ ಯಾವುದೇ ಹಾನಿಯನ್ನುಂಟುಮಾಡುತ್ತಿದ್ದಿಲ್ಲ. 
ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಮುತ್ತುಗದ ಗಿಡ ಹಾಗೂ ಅದರ ಹೂವುಗಳ ಸುಂದರ ಅಂಚೆಚೀಟಿಯನ್ನೂ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಇನ್ನೇಕೆ ತಡ? ಬೆಂಕಿಯ ಕೆನ್ನಾಲಗೆಯಂತಿರುವ ಹೂಗಳನ್ನರಳಿಸಿಕೊಂಡ ವರ್ಣರಂಜಿತ ಗಿಡಗಳನ್ನು ಹುಡುಕಲು ಹೊರಡಿ. ಏಕೆಂದರೆ ಮನುಷ್ಯನ ಸ್ವಾರ್ಥಕ್ಕೆ ಎಲ್ಲ ಗಿಡಗಳೂ ಧರೆಗುರುಳಿದ್ದು, ಈ ಗಿಡವೂ ಮುಂದೊಮ್ಮೆ ನೋಡಲು ಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?
 

Comments