ಅಮ್ಮ ಗಂಗಮ್ಮನ ಮಡಿಲಿನಲ್ಲಿ, ಆಕೆಯ ಸಿರಿಮುಡಿಯಲ್ಲಿ !

ಅಮ್ಮ ಗಂಗಮ್ಮನ ಮಡಿಲಿನಲ್ಲಿ, ಆಕೆಯ ಸಿರಿಮುಡಿಯಲ್ಲಿ !

ಭಾಗಿರಥಿ, ಗಂಗೆ, ಜಾನ್ಹವಿ, ನಮ್ಮ ಭಾರತೀಯರ ಪವಿತ್ರ ದೇವತೆ. ಭಗೀರಥ ಮಹಾರಾಜ, ಅದೆಷ್ಟು ಶ್ರಮಪಟ್ಟು ಈ ಧರೆಗೆ ಆಕೆಯನ್ನು ಕರೆತಂದ ! ಮಧ್ಯದಲ್ಲಿ ಆತ ಪಟ್ಟ ಶ್ರಮವೆಷ್ಟು. ರಭಸದಿಂದ ಭೋರ್ಗರೆಯುತ್ತಾ ಹರಿದು ಬಂದ ಗಂಗೆಯನ್ನು ಈಶ್ವರ ತನ್ನ ಜತೆಯಲ್ಲಿ ತಡೆದದ್ದು ; ಮತ್ತೆ ಋಷಿಯ ಕಿವಿಯಿಂದ ಜಾನ್ಹವಿಯಾಗಿ ಹೊರಗೆ ಪ್ರವಹಿಸಿದ್ದು, ಇವುಗಳ ವಿಷಯಗಳನ್ನು ಓದಿ ಕೇಳಿ ಅರಿತ ನಮಗೆ ಗಂಗಮ್ಮನ್ನನ್ನು ಮುಟ್ಟಿ ತಲೆಗೆ ಪ್ರೋಕ್ಷಿಸಿಕೊಂಡಾಗ ಆದ ಸಂತೋಷಕ್ಕೆ ಕೊನೆಯಿರಲಿಲ್ಲ. ಸ್ವರ್ಗದ ಬಾಗಿಲನ್ನು ಮುಟ್ಟಿಮುಟ್ಟಿ, ತಟ್ಟಿದ ಸುಮಧುರ ಅನುಭವವಾಯಿತು.

ವಾರಣಾಸಿಯಲ್ಲಿದ್ದಾಗ,  ಸಾಯಂಕಾಲ ೬-೪೫ ಕ್ಕೆ ಶುರುವಾಗುವ 'ಗಂಗಾರತಿ'ಯನ್ನು ನೋಡಿ ಸವಿಯದ ಕಣ್ಣುಗಳು ಜಡವೆನ್ನು ಭಾವನೆ ಎಲ್ಲರನ್ನು ಕಾಡುತ್ತದೆ. ಗಂಗಾನದಿಯ ದಂಡೆಯಮೇಲೆ ನೂರಾರು ಜನರು, ಚಿಕ್ಕ ಚಿಕ್ಕ ದೋಣಿಗಳಲ್ಲಿ ಕುಳಿತು ಆ ವಿಶೇಷಾರತಿಯ  ದೃಷ್ಯದಿಂದ  ತಮ್ಮ  ಕಣ್ತುಂಬಿಕೊಳ್ಳುತ್ತಾರೆ. ನಮಗಂತು ವಿಶ್ವನಾಥನ ದರ್ಶನ, ಗಂಗಾಸ್ನಾನ ಅತ್ಯಂತ ಮುದನೀಡಿತು. ಬೆಳಿಗ್ಯೆ ಕಾಶಿವಿಶ್ವನಾಥ ಸ್ವಾಮಿ ದರ್ಶನ ಚೆನ್ನಾಗಿ ಆಗಲಿಲ್ಲವೆಂಬ ಕೊರತೆ ಇತ್ತು. ಅತ್ಯಂತ ಜನಸಂದಣಿ, ಇದ್ದದ್ದರಿಂದ !

ಇದೇನು ಬರಿ ಸಾಮಾನ್ಯ ಪ್ರಣತಿಯಲ್ಲೋ ಅಣ್ಣ ;  ಸಕಲರ ಪಾಪಹಾರಿ, ಜಾನ್ಹವಿ, ಗಂಗಾಮಾತೆಯ ಮಡಿಲಿಗೆ ತೇಲಿಬಿಟ್ಟ ದಿವಾ !

ನಾವು ಅದೇದಿನ  ಮಧ್ಯರಾತ್ರಿ ಮತ್ತೆ ವಿಶ್ವನಾಥ ಸ್ವಾಮಿ ದರ್ಶನಕ್ಕೆ ವ್ಯವಸ್ಥೆಮಾಡಿಕೊಂಡೆವು. ಈ ದರ್ಶನಕ್ಕೆ ಪ್ರತ್ಯೇಕ ಟಿಕೆಟ್ ಕೊಡುತ್ತಿದ್ದರು. ಅದರ  ಟಿಕೆಟ್ ಕುಮ್ತರ್  ಸ್ವಲ್ಪ ದೂರದಲ್ಲಿತ್ತು. ೭೨ ವರ್ಷ ವಯಸ್ಸಿನ ನಮ್ಮ ಗೆಳೆಯ ಡಾಕ್ಟರ್, ಮತ್ತು ಅವರ ಜೊತೆಗೆ ಮತ್ತೊಬ್ಬ ಗೆಳೆಯ,  ನದಿಯ ಪಾತ್ರದಲ್ಲಿ ನಮ್ಮ ಜೊತೆಯಲ್ಲಿ ಕುಳಿತಿದ್ದವರು ಆ ಮೆಟ್ಟಲುಗಳನ್ನೆಲ್ಲಾ ಏರಿ, ಸಂದುಗೊಮ್ದಿನ ಬೆನಾರೆಸ್ ಗಲ್ಲಿಗಳನ್ನು ದಾಟಿ, ಟಿಕೆಟ್ ಖರೀದಿಸಿ ತಂದರು. ನನಗೆ ಕಾಲಿನ ನೋವು ಇದ್ದದ್ದರಿಂದ ಇದೆಲ್ಲಾ ಮಾಡುವುದು ಸಾದ್ಯವಿಲ್ಲದ ಮಾತಾಗಿತ್ತು. ಡಾ.ಕುಟುಂಬ, ಹಾಗೂ ಮತ್ತೊಂದು ಪರಿವಾರ ಸೇರಿಕೊಂಡು ಕಾರ್ ಮಾಡಿಕೊಂಡು ಮಧ್ಯರಾತ್ರಿ, ೩ ಗಂಟೆಗೆ ದೇವಸ್ಥಾನಕ್ಕೆ ಹೋದೆವು. ಆಗಲೇ ಅಲ್ಲಿ 'ಕ್ಯೂ' ಶುರುವಾಗಿತ್ತು. ನಾವು ೩ ನೆಯವರಾದೆವು. ಸೆಕ್ಯುರಿಟಿ ಬಹಳ ಕಟ್ಟುನಿಟ್ಟಾಗಿತ್ತು. ೪ ಗಂಟೆಗೆ ಪೂಜೆ ಮತ್ತು ಅಭಿಷೇಕವಿತ್ತು. ಹತ್ತಿರದಲ್ಲಿ ಸ್ವಾಮಿಯ ದರ್ಶನ ಭಾಗ್ಯ ದೊರೆಯಿತು. ಪೋಲಿಸ್ ಪೇದೆಗಳು ತಮಗೆ ಗುರುತಾದ ಅಧಿಕಾರಿಗಳಿಗೆ ಪೋನ್ ಮಾಡಿ ಕರೆಸಿಕೊಂಡು ಅವರನ್ನು ಮುಂದೆ ಬಿಡುತ್ತಿದ್ದರು.ಈ  ಗತಿವಿಧಿಗಳನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದೆವು. ವಿಧಿಯಿರಲಿಲ್ಲ. ಯಾರನ್ನು ಜೋರಾಗಿ ಬೈಯುವಂತಿಲ್ಲ. ಹೊಸಜಾಗ ಬೇರೆ. ಪಂಡಾಗಳು ತಮ್ಮ ತಮ್ಮ ವರ್ಚಸ್ಸಿಗನುಗುಣವಾಗಿ ಭಕ್ತಾದಿಗಳಿಂದ ಹಣಕೀಳುತ್ತಿದ್ದರು. ಇದನ್ನು ನಾವು ಪ್ರತಿಭಟಿಸುವಂತಿರಲಿಲ್ಲ. ನಾವು ಯಾರೋ ಒಬ್ಬ ಪಂಡಾನ ಹಿಂದೆ ಹಿಂದೆ ಹೋಗಿದ್ದರಿಂದ ಸ್ವಾಮಿಯ ದರ್ಶನ ಸಿಕ್ಕಿತು !  ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ವಿಧಿಯಿರಲಿಲ್ಲ. ಕಾಶಿಯಲ್ಲಿ ಜನರಿಗೆ ಸಂಪಾದನೆಗೆ ಇದೊಂದೆ ಮಾರ್ಗ. ಯಾವ  ಕಾರ್ಖಾನೆಗಳು ಇಲ್ಲ. ಒಟ್ಟಿನಲ್ಲಿ ಕಾಶಿಯನ್ನು ಮುಂಜಾನಿ ಕಂಡು ಸವಿ ; ಲಕ್ನೋನಗರವನ್ನು ರಾತ್ರಿ ಕಂಡು ಸವಿ] ಎನ್ನುವ ಹೇಳಿಕೆಯ ಮಾತುಗಳು ನಮ್ಮ ಕಿವಿಗಳ ಮೇಲೆ ಪದೇ ಪದೇ ಬೀಳುತ್ತಿದ್ದವು. 

ಬೆನಾರೆಸ್ ರೇಷ್ಮೆ   ಸೀರೆಗಳು, ಚಿಕನ್ ಕಲಾಕಾರಿಯ ಕುರ್ತಾ, ಪೈಜಾಮಗಳು, ಮತ್ತು ಹತ್ತಿ ಸೀರೆಗಳು, ವಿಶ್ವಪ್ರಸಿದ್ಧಿಯನ್ನು  ಹೊಂದಿವೆ. ಸರಿ ನಮ್ಮ ಮನೆಯವರು, ಗೆಳೆಯರ ಪತ್ನಿಯರು, ಹಿಂದಿ ಭಾಷೆ ಬರುವ  ನನ್ನ  ಹೆಂಡತಿಯನ್ನು ಮುಂದೆ ಇಟ್ಟುಕೊಂಡು ಸೀರೆ ಖರೀದಿಸಲು ಹೊರಟರು. ನನಗೆ ಕಾಲು ನೋವಿಗೆ ಪರಿಹಾರ ಹುಡುಕಬೇಕಾಗಿತ್ತು. ನಾನು ಮಾತ್ರ, ಬಿಸಿನೀರಿನ ಸ್ನಾನ, ಮೂವ್ , ಮುಲಾಮಿನ ಲೇಪನೆಯ ನೆವಹಾಕಿಕೊಂಡು ಹೋಟೆಲ್ ನ ರೂಂ ನಲ್ಲೆ ಕಳೆದೆ.

ಆಶ್ಚರ್ಯವೆಂದರೆ, ನಾವು ಸಾರಾನಾಥ್ ದೇವಸ್ಥಾನಕ್ಕೆ ಹೋದಾಗ ಸೂರ್ಯ ಮುಳುಗಿದ್ದ. ಅಲ್ಲಿನ ವಿಶ್ವ ಪ್ರಸಿದ್ಧ ಸ್ಥೂಪ ವನ್ನೂ ನೋಡಲು ಆಗಲಿಲ್ಲ. ನಮ್ಮ ಗೈಡ್ ಗಳು ಅದೇ ಸನಿವೇಶವನ್ನು ಬಳಸಿಕೊಂಡು ಒಂದು ಕೋ ಆಪರೇಟಿವ್ ಸೀರೆ ಅಂಗಡಿಗೆ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿನ ರೇಷ್ಮೆ ಸೀರೆ ನೇಯುವ  ಕಾರ್ಮಿಕರಲ್ಲಿ ಹೆಚ್ಚಿನವರು, ಆಂಧ್ರದವರು. ಕೆಲವರು ನಮ್ಮ ಜೊತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ನೇಯ್ಗೆ ಮತ್ತು ರೇಷ್ಮೆಯ ಬಗ್ಗೆ ಕೊಟ್ಟ ವಿವರಣೆಗಳು ನನಗೆ ಹಿಡಿಸಲಿಲ್ಲ. ಗಿರಾಕಿಗಳನ್ನು ಆಕರ್ಷಿಸಲು, ಪ್ಯೂರ್ ರೇಷ್ಮೆಯನ್ನು ಬೆಂಗಳೂರಿನಿಂದ  ತರಿಸಿಕೊಳ್ಳುತ್ತೇವೆ.ಎನ್ನುವ ಮಾತುಗಳು ನನಗೆ ಹಿಡಿಸಲಿಲ್ಲ. ಆಗ ನನ್ನ ವಿದ್ವತ್ ಪ್ರದರ್ಶನ ಮಾಡಿ ಅವರಿಗೆಲ್ಲಾ ಮಾಹಿತಿಕೊಡಬೇಕಾಗಿ ಬಂತು. 

ನನ್ನ  ಮಾತಿನ ತಾತ್ಪರ್ಯ ನಿಮಗೂ ಬೇಕೇ ? ಟೆಕ್ಸ್ ಟೈಲ್ಸ್ ನಲ್ಲಿ ಪರಿಣಿತನಾದ ನಾನು ಹೇಳುವುದು ಇಷ್ಟೆ. ವಿಶ್ವದಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸುವ ನಮ್ಮ ಪೋಚಂಪಲ್ಲಿ ಸೀರೆಗಳು, ಮೈಸೂರ್ ಸಿಲ್ಕ್ ಸೀರೆಗಳು, ಕಾಂಜೀವರಂ, ನಾರಾಯಣ್ ಪೆಟ್ ಸಿಲ್ಕ್ ಗಳು ವಿಶ್ವ ಮಾನ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ಶುದ್ಧ ರೇಷ್ಮೆ ಅದರಲ್ಲೂ ಮೈಸೂರ್ ಸಿಲ್ಕ್, ಬನಾರೆಸ್ ಸಿಲ್ಕ್ ಎಂದು ಹೇಳುವ ರೇಷ್ಮೆ ನಿಜಕ್ಕೂ ಕಳಪೆ ರೇಷ್ಮೆ ಮಾತ್ರ !!

ಪ್ರಪಂಚದಲ್ಲೇ ಅತ್ಯುತ್ತಮ ರೇಷ್ಮೆ ಚೈನ, ಜಪಾನ್ ಮತ್ತು ದ.ಕೊರಿಯದ ಸ್ವತ್ತು. ಚೈನಾ ಮೇರು ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಗುಣ  ಮಟ್ಟದ ಸಿಲ್ಕ್ ಚೈನದಿಂದಲೇ ಬರುವುದು. ಅದನ್ನು ನಮ್ಮ ಸೀರೆ ಉದ್ಯಮಿಗಳು ತರಿಸಿ ಅದರಲ್ಲಿ ಬಹಳ ಬೆಲೆಬಾಳುವ ಬಟ್ಟೆಗಳನ್ನು ತಯಾರಿಸುತ್ತಾರೆ.

ಹಾ. ಸೀರೆಯನ್ನು ನೇಯಲು ಅತಿ ಸಮಾನ ಗುಣದ ರೇಷ್ಮೆ ದಾರಗಳ ಅವಶ್ಯಕತೆ ಇಲ್ಲ. ರೇಷ್ಮೆಯ ಸೊಬಗು ಅವನ್ನೆಲ್ಲ ಮುಚ್ಚಿಬಿಡುತ್ತದೆ. ನಾನು ಕೊಲ್ಕತ್ತಾದ  ವಿಶೇಷ ರೇಷ್ಮೆ, ಮುಗಾದಲ್ಲಿ ತಯಾರಾದ ಸೀರೆಗಳನ್ನು ನನ್ನ ಮಡದಿಗೆ ಕೊಡಿಸಿದೆ. ನನ್ನ ಗೆಳೆಯರ ಪತ್ನಿಯರು ಅವನ್ನೇ ಕೊಂಡರು !