ಸಾರಗ್ರಾಹಿಯ ರಸೋದ್ಗಾರಗಳು -5

ಸಾರಗ್ರಾಹಿಯ ರಸೋದ್ಗಾರಗಳು -5

 

     ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. 116 ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಸ್ತ್ರೀಯರು ವೇದ ಮಂತ್ರಗಳನ್ನು ಹೇಳಬಾರದು ಎಂಬ ವಿಚಾರ ಸಂಪೂರ್ಣ ಅವೈದಿಕ ಎಂದು ಸಾಧಾರ ಹೇಳುವ ಅವರ ಪ್ರತಿವಾರದ ಸತ್ಸಂಗದಲ್ಲಿ ನಡೆಯುವ ಅಗ್ನಿಹೋತ್ರದ    ಕಾರ್ಯವನ್ನು ಮಂತ್ರಸಹಿತವಾಗಿ ಮಹಿಳೆಯರೇ ಮಾಡುತ್ತಾರೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . .  

-ಕ.ವೆಂ.ನಾಗರಾಜ್.

****************

ಮೂರ್ತಿಪೂಜೆಯ ತಪ್ಪು ಕಲ್ಪನೆ

     ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ಜೊತೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. "ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ" ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, "ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅದರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?"

ಪರಮಾತ್ಮ ಎಲ್ಲಿದ್ದಾನೆ?

     ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. ವ್ಯಾಪ್ಯ-ವ್ಯಾಪಕ- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,

ಆಲೋಚನೆ ಮಾಡೋಣ

      ಪಕ್ಕಾ ಮೂರ್ತಿಪೂಜಕರಾದ ಮಧ್ವಾಚಾರ್ಯರೂ ಕೂಡ ಒಪ್ಪಿಕೊಳ್ಳುತ್ತಾರೆ. 'ಯಾವುದು ವಿಷ್ಣುವಲ್ಲವೋ ಅದನ್ನು ವಿಷ್ಣು ಅಂತ ಪೂಜೆ ಮಾಡೋನು, ಯಾವುದರಲ್ಲಿ ವಿಷ್ಣು ಇದ್ದಾನೋ ಅದನ್ನು ಬಿಟ್ಟು ಬೇರೆ ಪದಾರ್ಥಗಳನ್ನು ಪೂಜೆ ಮಾಡೋನು, ಅವನಿಗೆ ನೂರು ಜನ್ಮಕ್ಕೂ ಉದ್ಧಾರ ಇಲ್ಲ' ಅಂತಾ ಹೇಳ್ತಾರೆ. ಮಧ್ವಾಚಾರ್ಯರು ಕೃಷ್ಣನ ಪ್ರತಿಮೆ ಇಟ್ಟುಕೊಂಡು ಪೂಜೆ ಮಾಡೋರು, ಅವರ ಬಾಯಲ್ಲೇ ಈ ಮಾತು ಬರುತ್ತೆ. ಚತುರರು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ, ಧ್ಯಾನ ಅನ್ನುವ ಪದ ಉಪಯೋಗಿಸುತ್ತಾರೆಯೇ ಹೊರತು ಪೂಜೆ ಅನ್ನುವ ಪದ ಉಪಯೋಗಿಸುವುದಿಲ್ಲ. ಮೂರ್ತಿಪೂಜೆ ಅಂತ ಹೇಳುವುದಿಲ್ಲ ಅವರು - ಧ್ಯಾನ - ಅದರೊಳಗೆ ಪರಮಾತ್ಮ ಇದಾನೆ ಅಂತ ಧ್ಯಾನ ಮಾಡಿ ಅಂತಾರೆ, ಮತ್ತೆ ಅದೇ ಪ್ರಶ್ನೆ ಬರುತ್ತೆ, ಅಲ್ಲೇ ಇದಾನಾ ಅವನು? ಸರ್ವವ್ಯಾಪಕನನ್ನು ಒಂದು ಕಲ್ಲಿನ ಮೂರ್ತಿಯ ಒಳಗೆ ಅಡಕ ಮಾಡೋಕಾಗುತ್ತಾ? ಆಗುವುದಿಲ್ಲ. ಆದ್ದರಿಂದ ನಾವು, ಜೀವಾತ್ಮರು, ಚೇತನ ಸ್ವರೂಪರು, ಅದರಲ್ಲೂ ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ನಾವೇನೇ ಹಾಗೆ ಮಾಡುತ್ತಾ ಕುಳಿತುಕೊಂಡರೆ ಇನ್ನು ತಿಳಿಯದವರು  ಇನ್ನೇನು ಮಾಡ್ತಾರೆ? ನಮ್ಮನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ

ಸುಪ್ಪತ್ತಿಗೆ

     ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, "ಯಾಕೆ ಸ್ವಾಮಿ, ಹೀಗಾಗುತ್ತೆ?" ಅದಕ್ಕೆ ದಯಾನಂದರು ಹೇಳಿದರು, "ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?"

ಸ್ತ್ರೀಯರು ಮತ್ತು ವೇದ

     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, 'ಅಮ್ಮಾ, ಯಾಕೆ ಹೀಗೆ?' ಅವರು ಹೇಳುತ್ತಿದ್ದರು: "ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ".  [ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.]  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ನಾನೇ ಒಂದು ಋಗ್ವೇದದಲ್ಲಿ ೯೭ ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಕಲ್ಲು, ಮಣ್ಣು ಪೂಜೆ ಮಾಡೋರು ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!

..ಮುಂದುವರೆಯುವುದು.

***************

ಹಿಂದಿನ ಲೇಖನಕ್ಕೆ ಲಿಂಕ್:

sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0%E0%B2%B8%E0%B3%8B%E0%B2%A6%E0%B3%8D%E0%B2%97%E0%B2%BE%E0%B2%B0%E0%B2%97%E0%B2%B3%E0%B3%81-4

 
 

Comments