ಕಥೆ : ಮತ್ತೊಮ್ಮೆ ಮರೆತಾಗ !!
ಮಲ್ಲಿಗೆಪುರದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯುತ್ತದೆ ಎನ್ನುವ ಸುದ್ದಿ ತಿಳಿದ ದತ್ತುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವರ್ಷ, ತನ್ನ ಹೈ ಸ್ಕೂಲ್ ಗೆ ರಜೆ ಮಾಡಿಯಾದರೂ ಅಕ್ಕ ಪಕ್ಕದ ಊರಿನಲ್ಲಿ ನಡೆದ ಒಂದೂ ವಾಲಿಬಾಲ್ ಪಂದ್ಯಾವಳಿಯನ್ನು ತಪ್ಪಿಸಿಕೊಂಡಿರದ ದತ್ತುವಿಗೆ ತನ್ನ ಊರಿನಲ್ಲೇ ವಾಲಿಬಾಲ್ ಪಂದ್ಯ ನಡೆಯುತ್ತಿರುವುದನ್ನು ಕೇಳಿ ಸಹಜವಾಗಿಯೇ ಸಂತೋಷವಾಗಿತ್ತು. ಉಳಿದೆಲ್ಲ ಆಟಗಳನ್ನು ಬಿಟ್ಟು ಮಲ್ಲಿಗೆಪುರಕ್ಕೆ ಯಾರು ವಾಲಿಬಾಲ್ ಆಟದ ಹುಚ್ಚು ಹಿಡಿಸಿದರೋ ಗೊತ್ತಿಲ್ಲ ಆದರೆ ಊರಿನವರಿಗೆ ಮಾತ್ರ ವಾಲಿಬಾಲ್ ಅಂದ್ರೆ ಮುಗಿತು. ಎಂತ ಕೆಲಸ ಕಾರ್ಯ ಇದ್ದರೂ ಅದನ್ನ ಬದಿಗೊತ್ತಿ ಅಕ್ಕ ಪಕ್ಕದ ಊರಲ್ಲಿ ವಾಲಿಬಾಲ್ ಪಂದ್ಯಾವಳಿ ಎಲ್ಲಿದ್ದರೂ ಅಲ್ಲಿಗೆ ಮಲ್ಲಿಗೆಪುರದವರು ಹಾಜರು. ಊರಿನ ಯುವಕರಿಗಂತೂ ಸಂಜೆ ಒಂದು ಸಾರ್ತಿ ಶಾಲೆಯ ಎದುರು ವಾಲಿಬಾಲ್ ಆಡದಿದ್ದರೆ ಅದೇನೋ ಕಳೆದುಕೊಂಡ ಹಾಗೆ. ಕೆಲವೊಮ್ಮೆ ತಾಲುಕು, ಜಿಲ್ಲಾ ಮಟ್ಟದ ಪಂದ್ಯಾವಳಿಗಳಲ್ಲಿ ಮಲ್ಲಿಗೆಪುರದ ವಾಲಿಬಾಲ್ ತಂಡ ಮೊದಲನೆಯ, ಎರಡನೆಯ, ಸಮಾಧಾನಕರ ಹೀಗೆ ಪ್ರಶಸ್ತಿಯನ್ನು ಪಡೆದುಕೊಂಡದ್ದೂ ಉಂಟು. ಹಾಗಾಗಿ ಮಲ್ಲಿಗೆಪುರದ ವಾಲಿಬಾಲ್ ತಂಡ ಅಂದ್ರೆ ತಾಲೂಕಿಗೇ ಫೇಮಸ್. ಈ ವರ್ಷ ಆಗಲೇ ಹಲವಾರು ಪಂದ್ಯಾವಳಿಗಳಲ್ಲಿ ಬಹುಮಾನ ಪಡೆದಿದ್ದರಿಂದ ಮಲ್ಲಿಗೆಪುರದ ಯುವಕರು ಮತ್ತಷ್ಟು ಉತ್ತೇಜಿತರಾಗಿದ್ದರು. ಈ ವರ್ಷ ದೊಡ್ಡ ಪ್ರಮಾಣದಲ್ಲಿ ಪಂದ್ಯಾವಳಿ ನಡೆಸಬೇಕೆಂದು ಆಗಲೇ ಶೆಟ್ಟರ ನೇತೃತ್ವದಲ್ಲಿ ಊರಿನವರೆಲ್ಲ ಸಂಕಲ್ಪ ಮಾಡಿ ಆಗಿತ್ತು.
ಮಲ್ಲಿಗೆಪುರದ ಶಾಲಾ ಆವರಣದಲ್ಲಿ ವಾಲಿಬಾಲ್ ಪಂದ್ಯಾವಳಿಯ ರೂಪು ರೇಷೆಗಳನ್ನು ಸಿದ್ದಪಡಿಸಲು ಮೀಟಿಂಗ್ ಕರೆಯಲಾಗಿತ್ತು. ಅಲ್ಲಲ್ಲಿ ಸ್ವಲ್ಪ ಗೊಂದಲಗಳಿದ್ದರೂ ಕೆಲಸಗಳನ್ನು ಬೇರೆ ಬೇರೆ ತಂಡಗಳನ್ನು ರಚಿಸಿ ಹಂಚಲಾಯಿತು. ಶಾಲಾ ಆವರಣ ಸ್ವಚ್ಚಗೊಳಿಸಿ ವಾಲಿಬಾಲ್ ಪಂದ್ಯ ಆಡಲು ಬೇಕಾದ ಸಿದ್ಧತೆ ಮಾಡಲು ಒಂದು ತಂಡ, ಊಟದ ವ್ಯವಸ್ಥೆ ಗೆ ಒಂದು ತಂಡ. ಬೇರೆ ಬೇರೆ ಊರಿಂದ ಆಗಮಿಸುವ ವಾಲಿಬಾಲ್ ತಂಡದ ಉಸ್ತುವಾರಿಗೆ ಇನ್ನೊಂದು ತಂಡ ಹೀಗೆ ಆಯ್ಕೆ ಮಾಡಲಾಯಿತು. ಮಲ್ಲಿಗೆಪುರದ ಪ್ರತಿಷ್ಠಿತ ನಾಗರಿಕರಿಗೆ ಅಕ್ಕ ಪಕ್ಕದ ಊರುಗಳನ್ನು ಸುತ್ತಿ ಜನರನ್ನು ಅವ್ಹಾನಿಸುವ ಜೊತೆಗೆ ದೇಣಿಗೆಯನ್ನೂ ಸಂಗ್ರಹಿಸುವ ಕೆಲಸಕ್ಕೆ ಹಚ್ಚಲಾಯಿತು. ಇನ್ನು ಉಳಿದಂತೆ ಶಾಲಾ ಮಕ್ಕಳಿಗೆ ಚಾಕಲೇಟ್ , ಪೆಪ್ಸಿ ಎಂದೆಲ್ಲಾ ಆಸೆ ತೋರಿಸಿ ಅವರನ್ನು ವಾಲೆಂಟಿಯರ್ ಅಂತ ಮಾಡಲಾಯಿತು. ಇಷ್ಟೆಲ್ಲಾ ಆದರೂ ಪಂದ್ಯಾವಳಿಯ ಮುಖ್ಯ ಅತಿಥಿ ಯಾರೆಂಬುದರ ಬಗ್ಗೆ ಮಾತ್ರ ಇನ್ನೂ ಗೊಂದಲ ಹಾಗೇ ಮುಂದುವರಿದಿತ್ತು. ಒಬ್ಬೊಬ್ಬರು ಒಂದೊಂದು ಹೆಸರು ಸೂಚಿಸುತ್ತಿದ್ದಂತೆ ಶೆಟ್ಟರ ಸಲಹೆಯಂತೆ ಯಾರು ಜಾಸ್ತಿ ದೇಣಿಗೆ ನೀಡಲು ಸಿದ್ದರಿದ್ದಾರೋ ಅವರನ್ನೇ ಮುಖ್ಯ ಅತಿಥಿ ಮಾಡಲು ನಿರ್ಧರಿಸಿ ಆಯಿತು. ಒಟ್ಟಿನಲ್ಲಿ ಮಲ್ಲಿಗೆಪುರದ ವಾಲಿಬಾಲ್ ಪಂದ್ಯಾವಳಿಗೆ ಸಿದ್ಧತೆ ಜೋರಾಗಿಯೇ ಆರಂಭವಾಗಿತ್ತು. ಇಷ್ಟೆಲ್ಲಾ ತಯಾರಿ ಊರಲ್ಲಿ ನಡೆದರೂ ದತ್ತುಗೆ ಅದರಲ್ಲೆಲ್ಲ ಆಸಕ್ತಿ ಇರಲಿಲ್ಲ. ದತ್ತುವಿನ ತಲೆಯಲ್ಲಿ ಬೇರೇನೋ ಯೋಜನೆಗೆ ತಯಾರಿ ನಡೆದಿತ್ತು.
ಮಲ್ಲಿಗೆಪುರದ ವಾಲಿಬಾಲ್ ಪಂದ್ಯಾವಳಿ ಜೋರಾಗಿಯೇ ಆರಂಭವಾಯಿತು. ಶಾಲಾ ಆವರಣವನ್ನು ಸಂಜೆ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಸಿಂಗಾರಗೊಳಿಸಲಾಗಿತ್ತು. ಶಾಲೆಯ ಧ್ವಜ ಸ್ತಂಭದ ಪಕ್ಕದಲ್ಲಿ ವಾಲಿಬಾಲ್ ಅಂಕಣದ ಎದುರಿಗೇ ಹಾಕಿದ್ದ ಚಪ್ಪರದಡಿ ಖುರ್ಚಿ, ಮೇಜು ಜೊತೆಗೆ ಮೈಕನ್ನು ಹಾಕಿ ಅತಿಥಿಗಳಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಕೊಡುವ ಬಹುಮಾನಗಳನ್ನು ಅಲ್ಲಿಯೇ ಎದುರುಗಡೆ ಜೋಡಿಸಿ ಇಟ್ಟಿದ್ದರು. ವಾಲಿಬಾಲ್ ಅಂಕಣದ ಸುತ್ತಲೂ ಅಡಿಕೆ ಮರದ ಕಂಬಗಳನ್ನು ನೆಟ್ಟು ಪೇಟೆಯಿಂದ ತರಿಸಿದ್ದ ವಿಶೇಷ ಬಲ್ಬಗಳನ್ನು ಕಂಬದ ತುದಿಗೆ ಕಟ್ಟಲಾಗಿತ್ತು. ಜೆನರೇಟರ್ ಹಚ್ಚಿ, ಅದರ ಶಬ್ದದ ಜೊತೆ ಸೀಮೆಎಣ್ಣೆ ವಾಸನೆಯು ಇಡೀ ಮಲ್ಲಿಗೆಪುರವನ್ನು ವ್ಯಾಪಿಸುತ್ತಿತ್ತು. ಶಾಲೆಯ ಧ್ವಜ ಸ್ತಂಭದ ತುತ್ತ ತುದಿಗೆ ಕಟ್ಟಿದ್ದ ದ್ವನಿವರ್ಧಕದಿಂದ ಹೊರಟ ಚಿತ್ರಗೀತೆಗಳು, ಜೆನರೇಟರ್ ನ ಶಬ್ಧ, ಸಂಜೆಯ ಮಂದ ಬೆಳಕು ಹಾಗೂ ಬಲ್ಬಿನ ಹಳದಿ ಬೆಳಕು ಇವೆಲ್ಲಾ ಜೊತೆ ಸೇರಿ ಹೊಸದೊಂದು ಬಗೆಯ ಲಹರಿಯನ್ನು ಅಲ್ಲಿ ಸೃಷ್ಟಿ ಮಾಡಿತ್ತು. ಆಗಲೇ ವಾಲೆಂಟಿಯರ್ ಆಗಿ ನಿಯೋಜನೆಗೊಂಡಿದ್ದ ಶಾಲಾ ಹುಡುಗರು ವಾಲಿಬಾಲ್ ಆವರಣಕ್ಕೆ ನೀರನ್ನು ಸಿಂಪಡಿಸಲು ಅಣಿಯಾಗುತ್ತಿದ್ದರು. ಇದರ ನಡು ನಡುವೆ ಪಂದ್ಯಾವಳಿಗೆ ದೇಣಿಗೆ ಕೊಟ್ಟವರ ಯಾದಿಯನ್ನು ಮೈಕಿನಲ್ಲಿ ಹೇಳಲಾಗುತ್ತಿತ್ತು. ಮುಖ್ಯ ಅತಿಥಿಗಳಾದ ತಾಲೂಕಿನ ಶಾಸಕರು ಸ್ವಲ್ಪವೇ ತಡವಾಗಿ ಆಗಮಿಸುತ್ತಿದ್ದಂತೆಯೇ ಊರಿನವರು ಪಂದ್ಯಾವಳಿಯ ಉದ್ಘಾಟನೆಗೆ ಮುಂದಿನ ತಯಾರಿ ಆರಂಭಿಸಿದರು. ಕಾರ್ಯಕ್ರಮದ ನಿರ್ವಹಣೆಯ ಆರಂಭದಲ್ಲಿ ಸ್ವಲ್ಪ ಗೊಂದಲಗಳಿದ್ದರೂ ನಂತರ ಅದು ಸರಿಹೋಯಿತು. ಮುಖ್ಯ ಅತಿಥಿಗಳು ವಾಲಿಬಾಲ್ ಅನ್ನು ಕೈಯಿಂದ ಗುದ್ದಿ ಆಚೆ ಕಡೆಯ ಅಂಕಣಕ್ಕೆ ದಾಟಿಸುತ್ತಿದ್ದಂತೆ ಶಾಲಾ ಅವರಣದ ಆಗಸದಲ್ಲಿ ಪಟಾಕಿಗಳು ಸಿಡಿದು ಬಗೆ ಬಗೆಯ ಚಿತ್ತಾರಗಳನ್ನು ಸೃಷ್ಟಿಸಿದವು. ಅತ್ತ ಮುಖ್ಯ ಅತಿಥಿಗಳ ಭಾಷಣ ಶುರು ಆಗುತ್ತಿದ್ದಂತೆ ಇತ್ತ ಅಲ್ಲಿಗೆ ಆಗಮಿಸಿದ್ದ ಜನರು ಯಾವ ತಂಡ ಗೆಲ್ಲಬಹುದೆಂದು ತಮ್ಮೊಳಗೆಯೇ ಚರ್ಚೆ ಆರಂಭಿಸಿದ್ದರು. ಕೆಲವರು ಹುರಿದ ಶೇಂಗಾವನ್ನು ತಿಂದು ಅದರ ಸಿಪ್ಪೆಯನ್ನು ತಮ್ಮ ಕಾಲಡಿಗೆ ಚೆಲ್ಲುತ್ತ ಏನನ್ನೋ ಯೋಚಿಸುತ್ತಿದರೆ ಇನ್ನು ಕೆಲವರು ಅತ್ತಿಂದಿತ್ತ ಏನೋ ಕಾಣೆಯಾದವರಂತೆ ಓಡಾಡುತ್ತಿದರು. ಇನ್ನುಳಿದವರು ಆಗಾಗ ಭಾಷಣದ ಮಧ್ಯದಲ್ಲಿ ಚಪ್ಪಾಳೆ ತಟ್ಟಲು ಸಿದ್ದರಾಗುತ್ತಿದ್ದರು. ಒಟ್ಟಿನಲ್ಲಿ ಮುಖ್ಯ ಅತಿಥಿಗಳ ಭಾಷಣ ಮುಗಿದು, ಶೆಟ್ಟರ ಆಭಾರ ಮನ್ನಣೆ ಮುಗಿಯುವಷ್ಟರಲ್ಲಿ ಸಂಜೆಯ ಸೂರ್ಯನ ಮಂದ ಬೆಳಕು ಸಂಪೂರ್ಣ ಮಾಯವಾಗಿ ವಿದ್ಯುತ್ ಬಲ್ಬಿನ ಪ್ರಖರ ಬೆಳಕು ಮಾತ್ರ ಶಾಲಾ ಆವರಣವನ್ನು ವ್ಯಾಪಿಸಿತ್ತು. ಇದರ ಜೊತೆಗೆ ಶಾಲೆಯ ಸುತ್ತ ಅಲ್ಲಲ್ಲಿ ಹಾಕಿದ್ದ ಚಹಾ ತಿಂಡಿಯ ಅಂಗಡಿಯ ಮಂದ ಬೆಳಕು ಹಾಗೂ ರಸ್ತೆಯಲ್ಲಿ ಆಗಾಗ ಮಿನುಗುವ ಬ್ಯಾಟರಿ ಬೆಳಕನ್ನು ಬಿಟ್ಟರೆ ಎಲ್ಲೆಲ್ಲೂ ಕತ್ತಲು, ಅದರ ಜೊತೆ ಸಮ್ಮಿಲನಗೊಂಡ ವಾಲಿಬಾಲ್ ಪದ್ಯಾವಳಿಯ ಗದ್ದಲ.
ಎಲ್ಲರ ಅತ್ಯಂತ ನಿರೀಕ್ಷೆಯ ಮಲ್ಲಿಗೆಪುರ ಹಾಗೂ ಪಕ್ಕದೂರಿನ ತಂಡಗಳ ನಡುವಿನ ಪಂದ್ಯಕ್ಕೆ ಪಟಾಕಿ ಸಿಡಿಸುವುದರ ಮೂಲಕ ಚಾಲನೆ ನೀಡಲಾಯಿತು. ಇಡೀ ಶಾಲಾ ಮೈದಾನ ಜನರಿಂದ ತುಂಬಿತ್ತು. ಕೆಲವರಂತೂ ಇನ್ನೇನು ವಾಲಿಬಾಲ್ ಅಂಕಣದ ಒಳಗೇ ನುಗ್ಗುವಷ್ಟು ಹತ್ತಿರದಲ್ಲಿ ನಿಂತಿದ್ದರು. ಕೆಲವರು ಆಗಲೇ ತಮ್ಮ ತಮ್ಮ ತಂಡಗಳಿಗೆ ಜೈಕಾರ ಹಾಕುತ್ತಿದ್ದರೆ, ಇನ್ನು ಕೆಲವರು ಅತ್ತಿಂದಿತ್ತ ನೂಕಾಡುತ್ತ ಮುಂದೆ ಮುಂದೆ ಬರಲು ಪ್ರಯತ್ನಿಸುತ್ತಿದ್ದರು. ಇವರನ್ನೆಲ್ಲ ನಿಯಂತ್ರಿಸಲು ವಾಲೆಂಟಿಯರ್ ಆಗಿ ನೇಮಕಗೊಂಡಿದ್ದ ಶಾಲಾ ಮಕ್ಕಳು ಹರಸಾಹಸ ಪಡುತ್ತಿರುವಾಗ ಊರಿನ ಕೆಲವು ಗಟ್ಟಿಮುಟ್ಟಾದ ಯುವಕರು ಅವರ ಜೊತೆ ಸೇರಿ ಪರಿಸ್ಥಿತಿಯನ್ನು ಒಂದು ಹಂತಕ್ಕೆ ತಂದರು. ಎರಡೂ ತಂಡಗಳು ಅಂಕಣ ಪ್ರವೇಶಿಸುತ್ತಿದ್ದಂತೆಯೇ ಪಂದ್ಯದ ಕಾಮೆಂಟರಿಯನ್ನು ಮೈಕಿನಲ್ಲಿ ತುಂಬಾ ಉತ್ಸಾಹ ಭರಿತವಾಗಿ ಪ್ರಾರಂಭ ಮಾಡಲಾಯಿತು. ಎಲ್ಲರೂ ಈ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದರು. ಹೈ ಸ್ಕೂಲ್ ಬಿಟ್ಟ ತಕ್ಷಣ ಸೀದಾ ವಾಲಿಬಾಲ್ ನೋಡಲು ಆಗಲೇ ಬಂದಿದ್ದ ದತ್ತು, ಇದೇ ಸರಿಯಾದ ಸಮಯ ಎಂದು ಎಣಿಸಿದ. ಯಾರಿಗೂ ಕಾಣಿಸದಂತೆ ಶೆಟ್ಟರ ತೋಟದ ಕಡೆಗೆ ಹೆಜ್ಜೆ ಹಾಕತೊಡಗಿದ.
ದತ್ತು ಎಷ್ಟು ಸಾಧ್ಯವೋ ಅಷ್ಟು ಅಡಿಕೆ, ಸೀಬೆ ಹೀಗೆ ಸಿಕ್ಕಿದ್ದನ್ನೆಲ್ಲ ತನ್ನ ಹೈ ಸ್ಕೂಲ್ ಬ್ಯಾಗಿನಲ್ಲಿ ತುಂಬಿದ. ಆದರೆ ದತ್ತು ಬಹಳ ದಿನದಿಂದ ಆಸೆ ಇಟ್ಟುಕೊಂಡಿದ್ದ ಶೆಟ್ಟರ ಮಾವಿನಮರದ ಹಣ್ಣನ್ನು ಮಾತ್ರ ಕೀಳಲಾಗಲಿಲ್ಲ. ‘ಜೀವನದಲ್ಲಿ ಯಾವುದೂ ಅಸಾಧ್ಯ’ ಎಂದು ಬಹಳ ಬಾರಿ ಪ್ರಯತ್ನ ಪಟ್ಟನಾದರೂ, ಮಾವಿನ ಹಣ್ಣು ತುಂಬಾ ಎತ್ತರದಲ್ಲಿದ್ದರಿಂದ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು. ಇನ್ನೂ ಜಾಸ್ತಿ ಹೊತ್ತು ಇಲ್ಲಿರುವುದು ಉಚಿತವಲ್ಲ ಎಂದು ನಿರ್ಧರಿಸಿದ ದತ್ತು, ಸದ್ದುಮಾಡದೆ ಅಲ್ಲಿಂದ ಪಾರಾಗಿ, ಒಮ್ಮೆ ಬ್ಯಾಗನ್ನು ಪರೀಕ್ಷಿಸಿ ತೋಟದಲ್ಲಿ ಏನನ್ನೂ ಬಿಟ್ಟಿ ಬಂದಿಲ್ಲ ಎಂದು ಖಚಿತವಾದ ಮೇಲೆ ಬ್ಯಾಗನ್ನು ಶಾಲೆಯ ಹತ್ತಿರದ ಪೊದೆಯಲ್ಲಿ ಯಾರಿಗೂ ಕಾಣದಂತೆ ಬಚ್ಚಿಟ್ಟು ಮನೆಗೆ ಹೋಗುವಾಗ ಅಲ್ಲಿಂದ ತೆಗೆದುಕೊಂಡು ಹೋಗಲು ನಿರ್ಧರಿಸಿ ಏನೂ ಆಗದವರಂತೆ ನಟಿಸುತ್ತ ಮತ್ತೆ ವಾಲಿಬಾಲ್ ಪಂದ್ಯ ನೋಡಲು ನಡೆದ.
ಮರುದಿನ ಬೆಳಿಗ್ಗೆ ಹೈ ಸ್ಕೂಲ್ ಗೆ ಹೋಗುವಾಗ ದತ್ತುಗೆ ತಟ್ಟನೆ ತಾನು ಮುಖಕ್ಕೆ ಸುತ್ತಿ ಕೊಂಡಿದ್ದ ಟಾವೆಲ್ ಅನ್ನು ಶೆಟ್ಟರ ತೋಟದಲ್ಲೇ ಬಿಟ್ಟಿ ಬಂದಿರುವುದು ನೆನಪಿಗೆ ಬಂತು. ತೋಟದಲ್ಲಿ ಯಾರಾದರೂ ನೋಡಿದರೆ ಗುರುತು ಹತ್ತಬಾರದೆಂದು ಮುಖಕ್ಕೆ ಟಾವೆಲ್ ಸುತ್ತಿಕೊಂಡಿದ್ದ. ರಾತ್ರಿಯ ಗಡಿಬಿಡಿಯಲ್ಲಿ ಅದನ್ನು ತೋಟದಲ್ಲಿಯೇ ಬಿಟ್ಟಿರುವುದು ಗಮನಕ್ಕೆ ಬಂದಿರಲಿಲ್ಲ. ಆ ಟಾವೆಲ್ ನಿಂದ ಯಾರು ಏನು ಮಾಡಲಿಕ್ಕೆ ಸಾಧ್ಯ ಎಂದು ಅಂದುಕೊಂಡನಾದರೂ ಶೆಟ್ಟರ ಮನೆಯ ಕುಖ್ಯಾತ ನಾಯಿಯು ನೆನಪಿಗೆ ಬಂದ ತಕ್ಷಣ ಏನೋ ಒಂದು ಬಗೆಯ ಭಯ ದತ್ತುವನ್ನು ಆವರಿಸಿತು. ಆಗಲೇ ಹಲವಾರು ಸಿನಿಮಾ ಗಳಲ್ಲಿ ಬಟ್ಟೆಯ ವಾಸನೆ ಹಿಡಿದು ಕಳ್ಳರನ್ನು ಹಿಡಿಯುವ ನಾಯಿಯ ಸಾಮರ್ಥ್ಯದ ಬಗ್ಗೆ ದತ್ತು ನೋಡಿ ತಿಳಿದಿದ್ದ. ಅಲ್ಲದೇ ಹೈ ಸ್ಕೂಲ್ ಗೆ ಶೆಟ್ಟರ ಮನೆಯ ಮುಂದಿನ ದಾರಿಯಲ್ಲೇ ಹೋಗುವಾಗ ಶೆಟ್ಟರ ನಾಯಿ ಹಿಂದಿನಿಂದ ಅಟ್ಟಿಸಿಕೊಂಡು ಬಂದು ತನ್ನನ್ನು ಹಿಡಿದಂತೆ ಭ್ರಮಿಸಿ ದತ್ತು ಹೆದರಿದ. ಇದರಿಂದ ಪಾರಾಗಲು ಬೇರೆ ಉಪಾಯ ಏನೂ ತೋಚದೇ ಹೈ ಸ್ಕೂಲ್ ಗೆ ಹೋಗುವಾಗ ಮತ್ತೊಮ್ಮೆ ಶೆಟ್ಟರ ತೋಟಕ್ಕೆ ನಿಧಾನವಾಗಿ ದತ್ತು ನುಸುಳಿದ. ಅದೃಷ್ಟವಶಾತ್ ತೋಟದಲ್ಲಿ ಯಾರೂ ಇರಲಿಲ್ಲ. ನಾಯಿಯ ಸುಳಿವೂ ಇರಲಿಲ್ಲ. ಸ್ವಲ್ಪ ಧೈರ್ಯ ತಂದುಕೊಂಡ ದತ್ತು, ತೋಟದಲ್ಲಿ ಟಾವೆಲ್ ಗಾಗಿ ಹುಡುಕಾಡಿದ. ದತ್ತು ಎಣಿಸಿದಂತೆ ಟಾವೆಲ್ ಮಾವಿನ ಮರದ ಅಡಿಗೇ ಬಿದ್ದಿತ್ತು. ಟಾವೆಲ್ ಎತ್ತಿಕೊಂಡ ದತ್ತು, ಮಾವಿನ ಕಾಯಿ ಹಾಗೂ ಹಣ್ಣಿಂದ ತುಂಬಿ ಬಾಗಿದ್ದ ಮಾವಿನ ಮರದ ರೆಂಬೆ ಗಳನ್ನು ಕತ್ತೆತ್ತಿ ನೋಡಿ ಮತ್ತೊಮ್ಮೆ ತನ್ನ ಅದೃಷ್ಟವನ್ನು ಶಪಿಸಿಕೊಂಡ. ‘ಮೊದಲೇ ಮಾವಿನ ಮರದ ಎತ್ತರದ ಬಗ್ಗೆ ಯೋಚಿಸಬೇಕಾಗಿತ್ತು’ ಎಂದುಕೊಳ್ಳುತ್ತ ಕೊನೆಗೆ ತನ್ನನ್ನೇ ದೂಷಿಸಿಕೊಂಡ. ಹೀಗಿರುವಾಗ ತಟ್ಟನೆ ದತ್ತುವಿಗೆ ಶೆಟ್ಟರ ಮನೆಯ ನಾಯಿಯು ದೂರದಲ್ಲೆಲ್ಲೋ ಬೊಗಳಿದಂತೆ ಕೇಳಿತು. ಎದ್ದೆನೋ ಬಿದ್ದೆನೋ ಎನ್ನುತ್ತ ದತ್ತು ಅಲ್ಲಿಂದ ಓಡಿದ. ಯಾರಿಗೂ ಕಾಣದಂತೆ ದತ್ತು ಅಲ್ಲಿಂದ ಪಾರಾದನಾದರೂ ಓಡುವ ಗಡಿ ಬಿಡಿಯಲ್ಲಿ ಒಮ್ಮೆ ಕಾಲು ಜಾರಿ ಬಿದ್ದು ಕಾಲಿಗೆ ಸ್ವಲ್ಪ ಗಾಯವೂ ಆಯಿತು ಜೊತೆಗೆ ಹೈ ಸ್ಕೂಲ್ ಬಟ್ಟೆಗೂ,ಬ್ಯಾಗಿಗೂ ಸ್ವಲ್ಪ ಮಣ್ಣು ತಗುಲಿತು. ‘ಅಬ್ಬ ಪಾರದೆನಪ್ಪ’ ಎನ್ನುತ್ತ ದತ್ತು ತನ್ನನ್ನು ಸಮಾಧಾನಿಸಿ ಕೊಂಡು ಹೈ ಸ್ಕೂಲ್ ಕಡೆ ಮುಖಮಾಡಿದ.
image source: internet |
ಇತ್ತ ಹೈ ಸ್ಕೂಲ್ ಗೆ ದತ್ತು ಬರುತ್ತಿದ್ದಂತೆ ಅಚ್ಚರಿ ಕಾಡಿತ್ತು. ಅನಿರೀಕ್ಷಿತವಾಗಿ ಅಂದು ಯಾರಿಗೂ ತಿಳಿಸದೇ ಹೈ ಸ್ಕೂಲ್ ಇನಿಸ್ಪೆಕ್ಟರ್ ಬಂದಿದ್ದರು. ಆಗಲೇ ಎಲ್ಲಾ ವಿದ್ಯಾರ್ಥಿಗಳು ಹೈ ಸ್ಕೂಲ್ ಮೈದಾನದಲ್ಲಿ ಸಾಲಾಗಿ ನಿಂತಿದ್ದರು. ಅಲ್ಲದೇ ಎಲ್ಲರೂ ತಮ್ಮ ಸಮವಸ್ತ್ರ ತೊಟ್ಟು ಹೈ ಸ್ಕೂಲ್ ಐ.ಡಿ. ಕಾರ್ಡ್ ತೊಟ್ಟು ಶಿಸ್ತಾಗಿ ನಿಂತಿದ್ದರು . ಆಗಲೇ ತಡವಾಗಿ ಬಂದಿದ್ದರಿಂದ ದತ್ತು ಓಡುತ್ತ ಬಂದು ವಿದ್ಯಾರ್ಥಿಗಳ ಸಾಲಿನ ಕೊನೆಯಲ್ಲಿ ನಿಂತ. ತಡವಾಗಿ ಬಂದಿದ್ದರಿಂದ ಸಹಜವಾಗಿಯೇ ಹೆಡ್ ಮಾಸ್ಟರ್ ಸಾಲಿನ ಕೊನೆಯಲ್ಲಿ ನಿಂತಿದ್ದ ದತ್ತುವಿನ ಹತ್ತಿರ ತಮ್ಮ ಬೆತ್ತವನ್ನು ತಿರುಗಿಸುತ್ತ ನಡೆದರು.
“ನಿನ್ನ ಬಟ್ಟೆಗೆ,ಬ್ಯಾಗಿಗೆ ಯಾಕ್ ಮಣ್ಣು ಬಡ್ ಕೊಂಡಿದೆ? ಬಟ್ಟೆ ತೊಳೆದೆ ಎಷ್ಟು ದಿನ ಆಯ್ತು?”
“ಎಲ್ಲಯ್ಯ ನಿನ್ನ ಐ.ಡಿ. ಕಾರ್ಡು ? ಹೋಂವರ್ಕ್ ಮಾಡಿದ್ದೀಯ ? “ ಹೇಗೆ ಒಂದರ ಮೇಲೊಂದು ಹೆಡ್ ಮಾಸ್ಟರ್ ರ ಪ್ರಶ್ನೆಗಳು ದತ್ತುವಿನ ಕಿವಿಯನ್ನು ಅಪ್ಪಳಿಸಿದವು.
ತನ್ನ ಪರಿಸ್ಥಿತಿಯ ಕಾರಣ ತಕ್ಷಣ ಊಹಿಸಿದ ದತ್ತು “ಅದಾ, ಎಲ್ಲಾ ತರ್ತೇನೆ ಸರ್” ಎಂದು ಮೆದುವಾದ ದನಿಯಲ್ಲಿ ಹೆದರುತ್ತಾ ಹೇಳಿದ.
ಇನ್ನೇನು ಹೆಡ್ ಮಾಸ್ಟರು ತಮ್ಮ ಬೆತ್ತದ ರುಚಿ ತೋರಿಸಬೇಕು ಅನ್ನುವಷ್ಟರಲ್ಲಿಯೇ ದತ್ತು, ಶೆಟ್ಟರ ತೋಟದ ಕಡೆ ಮತ್ತೊಮ್ಮೆ ಎಷ್ಟು ಸಾಧ್ಯವೂ ಅಷ್ಟು ವೇಗವಾಗಿ ಓಡಿಯಾಗಿತ್ತು.
Comments
ಉ: ಕಥೆ : ಮತ್ತೊಮ್ಮೆ ಮರೆತಾಗ !!
In reply to ಉ: ಕಥೆ : ಮತ್ತೊಮ್ಮೆ ಮರೆತಾಗ !! by ASHMYA
ಉ: ಕಥೆ : ಮತ್ತೊಮ್ಮೆ ಮರೆತಾಗ !!
ಉ: ಕಥೆ : ಮತ್ತೊಮ್ಮೆ ಮರೆತಾಗ !!
In reply to ಉ: ಕಥೆ : ಮತ್ತೊಮ್ಮೆ ಮರೆತಾಗ !! by makara
ಉ: ಕಥೆ : ಮತ್ತೊಮ್ಮೆ ಮರೆತಾಗ !!