ಸಾಗು ಪುಸ್ತಕವೆ
ಕವನ
ಸಾಗು ಪುಸ್ತಕವೆ
--------------
ಸಾಗು ಪುಸ್ತಕವೆ ಸಾಗು, ನಿನಗಾವ ಪರಿಧಿಯಿಲ್ಲ.
ಸೇರು ಮಸ್ತಕವ, ನೀ ಸಾರು ಭಾವ ಜ್ಞಾನವೆಲ್ಲ.
ಸ್ಮೃತಿಯಿಂದ ಸ್ಮೃತಿಗೆ ಸಾಗು ಹೊತ್ತಿಗೆಯೆ, ನಿನ್ನ ತಡೆವರಿಲ್ಲ.
ನೀ ತರುವ ಕ್ರಾಂತಿ, ನೀ ತರುವ ಶಾಂತಿ ಯಾರು ತಡೆಯರಲ್ಲ.
ಓದುವ ರಸಘಳಿಗೆಯಲಿ ಮನಕಿಲ್ಲ ಜಗದ ಗೊಡವೆ.
ಜ್ಞಾನ ಬಿಕ್ಷುವಿಗೆ ಮೃಷ್ಟಾನ್ನ ಭೋಜನ ನೀನೆ ತಂದು ಕೊಡುವೆ .
ನಿನ್ನಾಂತರ್ಯ ಮಥಿಸರಿದ ರಸವು ಹೃತ್ ಜಿಹ್ವೆಗೆ ಬೆಲ್ಲ.
ಜೀವಬಲವ ಮನೋರಥಕೆ ಛಲವ ನೀನೆ ತರುವೆಯಲ್ಲ.
ನಿನ್ನ ಪದ ಲಹರಿಯನೆ ಆಲಿಸಿದ, ಓದುಗನೆ ಧ್ಯಾನಸ್ತ ಋಷಿಯು.
ನಿನ್ನ ಮುಕ್ತ ಯುಕ್ತಿಗಳ ಅರಿವೆ, ಓದುಗನು ಬೆಳೆದ ಕೃಷಿಯು.
ಆತ್ಮ ಇಳೆಯಾಗಿ ಭ್ರಮಿಸಲು, ನೀನದರ ಮೂಡಲಿನ ಉದಯರವಿಯು.
ಮನವು ಕಾವ್ಯವಾಗಿ ನಲಿಯೆ, ನೀನದರ ಉನ್ಮತ್ತ ಕವಿಯು.
ಮನದ ಮಾತು ಮಾರ್ಧನಿಸಿ ಚದರುವ ಪರ್ವತವು ನೀನು.
ಭಾವಕೆ ಭಾವ, ಯೋಚನೆಗಾಲೋಚನೆ ಬೆಸೆವ ಶಿಲ್ಪಿ ನೀನು.
ಏಕಾಂತದಲ್ಲಿ ಏಕಾಂಗಿಯಲ್ಲಿ ಜೊತೆಗಿರುವ ಪರಮ ಸಖನು ನೀನು.
ಸಕಲ ಭೋಧನ ಸಾಧನೆಗಳಿರುವ ಫೃಥುಲ ವಿಸ್ತರ ಬಾನು ನೀನು.
ಮೃಗವು ಮನುಜ, ಮನುಜ ದೇವನಾದ ಸತ್ಯಕೇ ನೀ ಸಾಕ್ಷಿ.
ಧರ್ಮ ಬ್ರಹ್ಮಗಳಾಂತರ್ಯ ಲೋಕಕೆ, ನೀನೆ ತೆರದ ಅಕ್ಷಿ.
ಧೈರ್ಯ, ಶೌರ್ಯ, ಮನೋಪ್ರಬುದ್ಧತೆಯನೀವ ಮಹಾದಿವ್ಯ ಯಕ್ಷಿ.
ಆತ್ಮದಣತೆಯಲಿ ಉರಿವ ಸದ್ಗುಣ ಜ್ಯೋತಿಯ ಚಿರ ರಕ್ಷಿ.
ಸಾಗಿದ್ದ, ಸಾಗುತಿಹ, ಮುಂದೆ ಸಾಗುವ ಕಾಲದ ಹೆಜ್ಜೆಯ ಗುರುತು,
ನಿನ್ನ ಪುಟಗಳಲಿ ಮೂಡುತಿಹುದು, ಮಾಸಿ ಹೋಗದೆ ಮರೆತು.
ನವಜಾತ ಶಿಶುವೊಂದು ಮುಗ್ಧ ವಿಸ್ಮೃತಿಯಲಿ ನಗುತಿಹುದು ಇಂದು.
ನೀನದಕೆ ಎದುರಾಗೆ, ಜ್ಞಾನವಿಸ್ಫೋಟದಲಿ ಜಾಗೃತವಾಗುವುದು ಮುಂದು.
ಬಾಷೆ, ಭಾವ, ಕಲ್ಪನೆಯ ಹೊನಲಿಗೆ ನೀನೆ ಶರಧಿಯಾದೆ.
ಅಜ್ಞಾನ ವಿಷವ, ಕುಜ್ಞಾನ ಕಲ್ಮಷವ ತೊಳೆವ ಅಮೃತವಾದೆ.
ವಿಧ್ಯಾ ವಿಭುವೆ, ಪ್ರಗತಿ ಪ್ರಭುವೆ, ತವಿಸು ನೀ ಅಂಧಕಾರ.
ಸರ್ವೋತ್ತಮ ಅರಿವಿನೋಜನೆ ಮೊಳಗಿಸು ಸುಜ್ಞಾನ ಝೇಂಕಾರ.
- ಚಂದ್ರಹಾಸ ( ೨೨ ಏಪ್ರಿಲ್ ೨೦೧೨)
Comments
ಉ: ಸಾಗು ಪುಸ್ತಕವೆ
In reply to ಉ: ಸಾಗು ಪುಸ್ತಕವೆ by venkatb83
ಉ: ಸಾಗು ಪುಸ್ತಕವೆ