ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ

  ಮೊದಲ ಬಾಗ : ಬೆಟ್ಟದ ಬುಡದಲ್ಲಿ ಮನೆಯ ಮಾಡಿ

 
'ಒಬ್ಬರೆ ಕುಳಿತಾದರು ಮನೆಯಲ್ಲಿ ಏನುಮಾಡುವಿರಿ? ಹೇಗು ರಜಾ ಅಲ್ಲವೆ ಜೊತೆಗೆ ಬನ್ನಿ' 
ಮಗಳು ಮತ್ತೊಮ್ಮೆ ಹೇಳಿದಳು, ನಾನು ಏನು ಉತ್ತರ ಕೊಡಲಿಲ್ಲ.
ಬಾನುವಾರವು ಸೇರಿ, ಒಟ್ಟೊಟ್ಟಿಗೆ ಮೂರುದಿನಗಳ ರಜಾ ಬಂದಿತ್ತು. ನನ್ನ ತಮ್ಮ ಹಾಗು ಅವನ ಸಂಸಾರ, ಜೊತೆಗೆ ನಮ್ಮ ಮನೆಯವರು ಸೇರಿ, ಬಾನುವಾರ ಶಿವಗಂಗೆಗೆ ಹೋಗಿಬರುವುದು ಅಂತ ಮಾತನಾಡುತ್ತಿದ್ದರು. ನನಗೆ ಕಳೆದ ನಾಲ್ಕೈದು ದಿನ ಎಂತದೊ ವೈರಲ್ ಫೀವರ್ ಅಂತ ಹೇಳಿ ಡಾಕ್ಟರ್ ಆಂಟಿಬಯೋಟಿಕ್ ಕೊಟ್ಟಿದ್ದರು ಅದು ನಿನ್ನೆಗೆ ಮುಗಿದಿತ್ತು. ಜ್ವರ ಇಲ್ಲವಾದರು ಮೈಯಲ್ಲಿ ಎಂತದೊ ಸುಸ್ತು , ಮುಜುಗರ ಎಲ್ಲವು ಸೇರಿ ನನಗೆ ಹೊರಡುವ ಉತ್ಸಾಹವಿರಲಿಲ್ಲ. ಏನು ಉತ್ತರ ಕೊಡುವದೆಂಬ ಸ್ವಷ್ಟತೆ ನನ್ನ ಮನದಲ್ಲಿ ಮೂಡುವ ಮೊದಲೆ ನನ್ನ ಪತ್ನಿ ಮಾತನಾಡಿದಳು.
"ಅವಳನ್ನುವುದು ನಿಜವೆ, ನೀವು ಒಬ್ಬರೆ ಮನೆಯಲ್ಲಿದ್ದು ಮಾಡುವದೇನು, ಊಟ ತಿಂಡಿಯದು ಎಲ್ಲವು ಸಮಸ್ಯೆ. ಬದಲಿಗೆ ನಮ್ಮ ಜೊತೆ ಹೊರಟುಬಿಡಿ. ಶಿವಗಂಗೆಯಲ್ಲಿ ಬೇಕಿದ್ದರೆ ಕೆಳಗೆ ದೇವಸ್ಥಾನ ನೋಡಿ ನೀವು ಅಲ್ಲಿಯೆ ಉಳಿದುಬಿಡಿ. ನಾವೆಲ್ಲ ಬೆಟ್ಟವನ್ನು ಹತ್ತಿ ಶಾಂತಲ ಡ್ರಾಪ್, ಬಸವ ಎಲ್ಲ ನೋಡಿಬರುತ್ತೇವೆ. ಅಲ್ಲಿಯವರೆಗು ನೀವು ಕಾರಿನ ಹತ್ತಿರ ನೆರಳಿನಲ್ಲಿ ಎಲ್ಲಿಯಾದರು ಇದ್ದರೆ ಆಯಿತು" ಎಂದಳು.
 
 ಪ್ರಪಂಚದಲ್ಲಿ ಇದೊಂದು ಸೋಜಿಗ! ನಮ್ಮ ಬಗ್ಗೆ ಯಾವುದಾದರು ವಿಷಯದಲ್ಲಿ ನಿರ್ದಾರ ಕೈಗೊಳ್ಳುವಾಗ ಎಷ್ಟೊಂದು ದ್ವಂದ್ವಕ್ಕೆ , ಅನುಮಾನಕ್ಕೆ ಒಳಗಾಗುತ್ತೇವೆ ಆದರೆ ಬೇರೆಯವರ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಎಷ್ಟು ಬೇಗ ನಿರ್ಧಾರಕ್ಕೆ ಬರುತ್ತೇವೆ ಅಲ್ಲವೆ.  ನಾನು ಶಿವಗಂಗೆಗೆ ಹೊರಡುವ ಬಗ್ಗೆ ನನ್ನ  ಹೆಂಡತಿ  ಹಾಗು  ಮಗಳು  ನಿರ್ಧಾರ  ತೆಗೆದುಕೊಂಡು ಆಗಿತ್ತು.  ನನಗೆ ಅನ್ನಿಸಿತು  "ವಾದ ಹಾಗು ಯುದ್ದ ಮಾಡಿ ಯಾರ  ಮನಸನ್ನು ಗೆಲ್ಲಲಾಗುವದಿಲ್ಲ"   ಹಾಗಾಗಿ ಸುಮ್ಮನೆ ಹೊರಡುವುದು ಮತ್ತು ಎಲ್ಲರ ಮನಸಿನ ಕಿರಿಕಿರಿ ತಪ್ಪಿಸುವುದು ಒಳ್ಳೆಯದು ಎಂದು. 
 
 ಬೆಳಗ್ಗೆ ಶಿವಗಂಗೆ ತಲುಪುವಾಗ ಹತ್ತಿರ ಹತ್ತಿರ ಒಂಬತ್ತರ ಸಮಯ. ಮನುಷ್ಯನ ಈ ಮನೋವೃತ್ತಿಯೆ ವಿಚಿತ್ರ, ನಿನ್ನೆ ಎಲ್ಲರು ಕರೆದು ಬಲವಂತ ಮಾಡುವಾಗ ನನಗೆ ಹೊರಡಲು ಮನಸ್ಸು ಇರಲಿಲ್ಲ. ಆದರೆ ಬೆಳಗ್ಗೆ ಹೊರಟ ನಂತರ ಮನಸ್ಸು ಉಲ್ಲಾಸದಿಂದ ತುಂಬಿ, ಪ್ರಯಾಣ ಉತ್ಸಾಹದಿಂದ ಕೂಡಿತ್ತು.  
 
   ಕಾರು ನಿಲ್ಲಿಸಿ ಎಲ್ಲರು ಸುತ್ತಲು ಹೊರಟೆವು. ಮೊದಲು ಪರಶಿವನ ದರುಶನ ನಂತರ ಬೆಟ್ಟದ ಮೇಲಿನ ಬಸವನ ಹತ್ತಿರಕ್ಕೆ ಹೋಗುವ ಕೆಲಸ ಎಂದು ನಿರ್ದರಿಸಿ. ದೇವಾಲಯಕ್ಕೆ ಹೊರಟೆವು.  ಬೆಂಗಳೂರಿನಲ್ಲಿ ಅಧುನಿಕವಾಗಿ ಕಟ್ಟುವ ದೇವಾಲಯಗಳು ಜನಸಂದಣಿಯಿಂದ ಕೂಡಿರುತ್ತಾವಾಗಲಿ ದೇವಾಲಯದಲ್ಲಿ ಮನಸಿಗೆ ಸಿಗಬೇಕಾದ ಶಾಂತಿ ನೆಮ್ಮದಿಯಿಂದ ಹೊರಗಿರುತ್ತವೆ. ಆ ದೃಷ್ಟಿಯಲ್ಲಿ ಶೃಂಗೇರಿಯ ಶಾರದೆಯ ದೇವಾಲಯ ನನಗೆ ಮೆಚ್ಚು, ಅಲ್ಲಿ ಎಷ್ಟೆ ಜನದಟ್ಟಣೆಯಿರಲಿ, ಅದೇನೊ ಒಳಗೆ ಕುಳಿತರೆ ಮನದಲ್ಲಿ ಒಂದು ಶಾಂತಿ ನೆಲಸುತ್ತದೆ. 
    ಶಿವಗಂಗೆಯ ಶಿವನ ದೇವಾಲಯದ ಒಳಗೆ ಹೋದಂತೆ ಅಲ್ಲಿನ ಶಾಂತ ಹಾಗು ತಣ್ಣನೆಯ ವಾತವರಣ ನನ್ನ ಮನ ತಟ್ಟಿತ್ತು. ಶಿವನ ತಲೆಯ ಮೇಲಿಟ್ಟ ತುಪ್ಪವು ಅವನ ತಂಪಿಗೆ ಬೆಣ್ಣೆಯಾಗುವದಂತೆ. ಅಲ್ಲಿನ ಮುಚ್ಚಿದ ದ್ವಾರದ ಗುಹೆಯು ಬೆಂಗಳೂರಿನ ಗವಿಗಂಗಾದರೇಶ್ವರನ ಗುಡಿಗೆ ತಲುಪಿಸುವುದು ಎಂದು ತಿಳಿಯಿತು. ಒಮ್ಮೆ ಆ ದಾರಿಯಲ್ಲಿ ಬೆಂಗಳೂರಿಗೆ ಹೋದರೆ ಎಷ್ಟು ಚೆನ್ನು ಅನ್ನಿಸಿತು ಆದರೆ ನಮ್ಮದು ಆ ರೀತಿ ಸಾಹಸಿಗರ ಮನವಲ್ಲ.  ನನಗೇಕೊ ಅಲ್ಲಿನ ವಾತವರಣ ತುಂಬ ಮೆಚ್ಚುಗೆಯಾಯಿತು. ಹೊರಬಂದಂತೆ ಎಲ್ಲರು ಉಳಿದ ದೇವಾಲಯಗಳು , ಬೆಟ್ಟದ ತುದಿಯಲ್ಲಿನ ಬಸವ, ಶಾಂತಲ ಡ್ರಾಪ್ , ಒಳಕಲ್ಲು ತೀರ್ಥ ಎಲ್ಲವನ್ನು ನೋಡುವ ಉತ್ಸಾಹದಿಂದ ಹೊರಟರು. 
 
 ನಾನು 'ನನಗೇಕೊ ಇಲ್ಲಿಯೆ ಕುಳಿತಿರುವ ಮನಸಾಗಿದೆ, ನೀವೆಲ್ಲ ಮೇಲೆ ಹೋಗಿ ಬನ್ನಿ ನಾನು ಸ್ವಲ್ಪ ನೆಮ್ಮದಿಯಿಂದ ಇಲ್ಲಿಯೆ ಕುಳಿತಿರುತ್ತೇನೆ ' ಅಂದೆ. ಮಗಳ ಮುಖ ಚಿಕ್ಕದಾಯಿತು.  ಅವಳು ನಾನೇಕೊ ಬಲವಂತವಾಗಿ ಕರೆತಂದಿದ್ದರಿಂದ ಹಾಗೆ ವರ್ತಿಸುತ್ತಿರುವೆ ಎಂದು ಭಾವಿಸಿದಂತಿತ್ತು. ಆದರೆ ನಿಜ ಹೇಳಬೇಕೆಂದರೆ ನನಗೆ ಅಲ್ಲಿ ತಣ್ಣಗೆ ಕುಳಿತಿರುವ ಮನಸು ಬಲವಾಗಿತ್ತು. ನಾನು ಅದನ್ನೆ ಹೇಳಿದೆ, ಮೇಲೆ ಹತ್ತಲು ನನಗೆ ಉತ್ಸಾಹವು ಇಲ್ಲ, ಅಲ್ಲದೆ ಸ್ವಲ್ಪ  ಶ್ರಮವಾಗುತ್ತಿರುವದರಿಂದ ಇಲ್ಲಿಯೆ ಇರುವೆನು ನೀವೆಲ್ಲ ಹೋಗಿಬನ್ನಿ ನನಗೆ ಬೇರೆ ಯಾವ ಬೇಸರವು ಇಲ್ಲವೆಂದು ತಿಳಿಸಿದೆ. ಸರಿ ಅವರೆಲ್ಲ ಅರ್ಧಮನದಿಂದ ಅಲ್ಲಿಂದ ಹೊರಟರು. 
 
 ನನ್ನ ಮಗಳು ಹೋಗುವಾಗ  "ಸರಿ ಅಪ್ಪ ನಾವು ಆದಷ್ಟು ಬೇಗ ಹಿಂದೆ ಬರುವೆವು, ನೀವು ವಿರಾಮ ಮಾಡಿ, ಬಿಸಿಲಿನಲ್ಲಿ ಕುಳಿತಿರಬೇಡಿ. ಆಯಾಸವಾಗುತ್ತದೆ, ನೀರು ಬೇಕೆನಿಸಿದರೆ ಕಾರಿನಲ್ಲಿ ಇದೆ, ಕಾರಿನ ಕೀ ನಿಮ್ಮ ಜೇಬಿನಲ್ಲಿ ಇದೆ ನೆನಪಿರಲಿ" ಅಂತ ಏನೆಲ್ಲ ಹೇಳಿ ಅವಳ ಅಮ್ಮ ಮತ್ತು ನನ್ನ ತಮ್ಮ ಮತ್ತು ಅವನ ಸಂಸಾರದೊಡನೆ ಹೊರಟಳು. ನಾನು ಸರಿ ಎಂದು ತಲೆಯಾಡಿಸಿ ದೇವಾಲಯದ ಮುಂದೆ ಕುಳಿತಿದ್ದೆ. 
 
 ದೇವಾಲಯದಿಂದ ಸ್ವಲ್ಪ ದೂರದಲ್ಲಿಯೆ ಕೆಲವು ಬಿಕ್ಷುಕರು ಕುಳಿತ್ತಿದ್ದರು. ಅವರೆಲ್ಲರ ಕೊನೆಯಲ್ಲಿ , ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬರು ಕುಳಿತಿದ್ದರು. ನೋಡಲು ಬಿಕ್ಷುಕನಂತೆ ಅನ್ನಿಸಲಿಲ್ಲ. ನನಗೆ ಹಾಗೆನ್ನಿಸಲು ಕಾರಣವಿದೆ,  ಸಾಮನ್ಯ ಬಿಕ್ಷುಕರ ಮುಖ ನೋಡುವಾಗ ಅಲ್ಲಿ ಒಂದು ಧೈನ್ಯತೆಯ ಭಾವ ತುಂಬಿರುತ್ತದೆ, ಕೆಲವೊಮ್ಮೆ ಮುಖದಲ್ಲಿ ಬಲವಂತವಾಗಿ ಅವರೆ ದೈನ್ಯತೆ ತುಂಬಿ, ದೀನಸ್ವರದಲ್ಲಿ ಮಾತನಾಡುತ್ತಾರೆ.   ಆದರೆ ಈತನ ಮುಖದಲ್ಲಿ ಅದೇನೊ ಒಂದು ಶಾಂತಭಾವ.  ಅವರ ಮುಖವನ್ನು ನೋಡುವಾಗಲೆ ನಮ್ಮ ಮನವು ಶಾಂತವಾಯಿತೇನೊ ಎನಿಸುವ ಭಾವ.   
 
  ನನ್ನ ಮಗಳು ನನ್ನ ಜೊತೆ ಮಾತನಾಡುವಾಗ ನಗುತ್ತ ಅವಳತ್ತಲೆ ನೋಡುತ್ತಿದ್ದ ಆತ. ಅವಳು ನನಗೆ ಉಪಚಾರವನ್ನೆಲ್ಲ ಹೇಳಿ ಮೇಲೆ ಹೊರಟಾಗ ನಗುತ್ತ ತಲೆಯಾಡಿಸುತ್ತಿದ್ದರು. ನನಗೇನು ಒಂದು ರೀತಿ ಅನ್ನಿಸಿತು. ಇವರೇಕೆ ನಮ್ಮನ್ನು ಈರೀತಿ ಗಮನಿಸುತ್ತಿದ್ದಾರೆ, ಎಂಬ ಸಣ್ಣ ಅನುಮಾನ.  ಅವಳು ಅತ್ತ ಹೋದ ನಂತರ ಅವರು ನನ್ನ ಕಡೆ ನೋಡುತ್ತ 
"ನಿಮ್ಮ ಮಗಳೇನು" ಎಂದರು . ನಾನು ಸ್ವಲ್ಪ ಗಂಭೀರವಾಗಿಯೆ 
"ಹೌದು, ನನ್ನ ಮಗಳು" ಎಂದೆ, ಅವರ ಮುಖ ನೋಡಿದೆ. ಸನ್ಯಾಸಿಗಳು ಧರಿಸುವ ಕಾವಿ ವಸ್ತ್ರಗಳನ್ನು ದರಿಸಿದ್ದರು. ದೀರ್ಘವಾದ ಗಡ್ಡ, ಪೊದೆ ಮೀಸೆಯ ಹಿನ್ನಲೆಯಲ್ಲಿ ಕಾಂತಿಯುಕ್ತ ಕಣ್ಣುಗಳು.   ಅವರು ಮುಂದೇನು ಮಾತನಾಡಲಿಲ್ಲ. ನಾನು ಕೆಲವು ನಿಮಿಷ ಕಳೆದು ಅಲ್ಲಿಂದ ಎದ್ದು , ಸುತ್ತಲೆಲ್ಲ ನೋಡೋಣ  ಎಂದು ಹೊರಟೆ.
 
 ಸುತ್ತಮುತ್ತ ಎಲ್ಲ ಸುತ್ತಾಡಿ ನೋಡಿದೆ.  ದೇವಾಲಯಗಳು , ಮಂಟಪಗಳು , ಶಾರದ ದೇವಾಲಯ ಹೀಗೆ ಏನೇನೊ, ಆದರೆ ಅದೇಕೊ ಮತ್ತೆ ಅ ಗಂಗಾದರನ ಗುಡಿಯ ಮುಂದೆ ಹೋಗಿ ಕುಳಿತುಕೊಳ್ಳಬೇಕೆನಿಸಿತು. ಅಲ್ಲಿ ಹೋದೆ ದೇವಾಲಯದಿಂದ  ಸ್ವಲ್ಪ ದೂರ ನೆರಳಿರುವ ಸ್ಥಳ ಆರಿಸಿ ಕುಳಿತೆ, ನಂತರ ಗಮನಿಸಿದೆ, ದೇವಾಲಯದ ಮುಂದೆ ಬಿಕ್ಷುಕರ ಜೊತೆ ಇದ್ದ ಆ ಸನ್ಯಾಸಿ,  ಅಲ್ಲಿ ಬಂದು ಕುಳಿತಿದ್ದಾರೆ. ಅದೇ ಶಾಂತ ಮುಖಭಾವ. ಯಾರತ್ತಲು ನೋಡದೆ ತನ್ನ ಪಾಡಿಗೆ ತಾನು ಕುಳಿತಿದ್ದರು. ನಾನು ಕುಳಿತಿದ್ದು ಕಂಡು ನನ್ನತ್ತ ತಿರುಗಿ ಒಂದು ಕಿರುನಗೆ ಬೀರಿದರು. ನನಗೂ ನಗುವುದು ಅನಿವಾರ್ಯವಾಯಿತು. 
"ಬೆಂಗಳೂರಿನವರ ಹಾಗೆ ಕಾಣುವಿರಿ" ಎಂದರು.  ಇದೊಂದು ವಿಚಿತ್ರ, ನಾನು ಗಮನಿಸಿರುವೆ, ಭಾರತದ ಯಾವುದೆ ಬಾಗಕ್ಕೆ ಹೋಗಿ, ನೋಡಿ ಅದೇನೊ ಬೆಂಗಳೂರಿನವರ ನಡೆನುಡಿಗಳನ್ನು ಬೇಗ ಗಮನಿಸುತ್ತಾರೆ. ನನಗೆ ಈ ಪ್ರಶ್ನೆ ಎದುರಾಗಿರುವುದು ಇದು ಮೊದಲೇನು ಅಲ್ಲ. 
"ಹೌದು" ಎಂದೆ.  
"ನೀವೇಕೆ ಮೇಲೆ ಹೋಗಲಿಲ್ಲ, ಮನಸಿಲ್ಲವೆ"  ಅವರು ಮತ್ತೆ ಮಾತು ಬೆಳೆಸಿದರು. 
"ಅದೇಕೊ ನನಗೆ ಆಸಕ್ತಿಯಿರಲಿಲ್ಲ ಹಾಗಾಗಿ ಹೋಗಲಿಲ್ಲ" ಎಂದೆ ನಾನು. 
 
 ಹೀಗೆ ಅನವಶ್ಯಕ ಮಾತುಗಳಲ್ಲಿ ಮುಳುಗಿರುವಂತೆ ಒಂದು ವಿಚಿತ್ರ ಗಮನಿಸಿದೆ, ಅವರು ಯಾವುದೆ ಬಿಕ್ಷೆ ಯಾರಲ್ಲಿ ಬೇಡದಿದ್ದರು, ಅಲ್ಲಿಗೆ ಬರುವು ಕೆಲವು ಪ್ರವಾಸಿಗರು, ಅವರನ್ನು ಕಂಡು ಅದೇನು ಭಾವಿಸುತ್ತಿದ್ದರೊ , ಅವರ ಮುಂದೆ ಹಣವನ್ನು ಹಾಕಿ ಹೋಗುತ್ತಿದ್ದರು. ಅವರಾದರೊ ಆ ಹಣವನ್ನು ಕಣ್ಣೆತ್ತಿಯು ನೋಡುತ್ತಿರಲಿಲ್ಲ. ಸ್ವಲ್ಪ ಕಾಲವಾದ ಕೂಡಲೆ ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ಬಿಕ್ಷುಕರು ಓಡಿಬಂದು ಅವರ ಮುಂದೆ ಬಿದ್ದಿದ್ದ ಹಣವನ್ನು ಎತ್ತಿಕೊಂಡು ಹೋಗಿ   ಅ ಚಿಲ್ಲರೆ ಹಣವನ್ನು ಹಂಚಿಕೊಳ್ಳುತ್ತಿದ್ದರು. ಮತ್ತೆ ಸ್ವಲ್ಪ ಕಾಲ ಅವರ ಮುಂದು ಹಣಬಿದ್ದೊಡನೆ ಅದೇ ಕತೆ ಯಾರೊ ಬಂದು ಪುನಃ ಅದನ್ನು ಕೊಂಡೋಯ್ದು ಅದೆ ರೀತಿ ಹಂಚಿಕೊಳ್ಳುತ್ತಿದ್ದರು. ಅವರಾದರು ಅದನ್ನು ಗಮನಿಸುತ್ತಲೆ ಇರಲಿಲ್ಲ ಅದಕ್ಕು ತನಗು ಯಾವ ಸಂಬಂಧವು ಇಲ್ಲವೆಂಬಂತೆ ಕುಳಿತಿದ್ದರು. 
 
 ನನಗೆ ಆಶ್ಚರ್ಯ ತಡೆಯಲಾಗಲಿಲ್ಲ, ಕಡೆಗೆ ಕೇಳಿಯೆ ಬಿಟ್ಟೆ
"ಅದೇನು ನಿಮ್ಮಮುಂದೆ ಬಿದ್ದ  ಹಣವನ್ನೆಲ್ಲ ಅವರು ಅಗಾಗ್ಯೆ ಬಂದು ತೆಗೆದುಕೊಂಡು ಹೋಗುತ್ತಿರುವರು, ನೀವಾದರು ಅದನ್ನು ಮುಟ್ಟುತ್ತಿಲ್ಲ, ಅದು ನಿಮಗೆ ಸಲ್ಲಬೇಕಾದ ಹಣವಲ್ಲವೆ" ಎಂದು. 
ಅವರು ಸ್ವಲ್ಪ ನಗುತ್ತ ಹೇಳಿದ 
"ಹಣವೆ ತೆಗೆದುಕೊಳ್ಳಲಿ ಬಿಡಿ ನನಗೇನು ಅದರ ಅವಶ್ಯಕತೆಯಿಲ್ಲ, ಅವರಿಗೆ ಅಗತ್ಯವಿದ್ದೀತು ತೆಗೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತೆ" 
ನನಗೆ ಆಶ್ಚರ್ಯವೆನಿಸಿತು ಹಣದ ಅಗತ್ಯವಿಲ್ಲದವರು ಇದ್ದಾರೆಯೆ ಈ ಪ್ರಪಂಚದಲ್ಲಿ , ಅಲ್ಲದೆ ನಮ್ಮದು ಅನ್ನುವ ಹಣವನ್ನು ಸಹ ನನಗೆ ಅಗತ್ಯವಿಲ್ಲವೆಂದು ಬಿಡುತ್ತಾರೆಯೆ ಅದು ಎಷ್ಟೆ ಸಣ್ಣ ಮೊತ್ತವಾಗಿರಲಿ, ಇದೇನೊ ವಿಚಿತ್ರದಂತೆ ತೋರಿತು, ಹಾಗಾಗಿ ನಾನು ಹೇಳಿದೆ
"ನಿಮಗೆ ಅಗತ್ಯವಿಲ್ಲದಿದ್ದರೆ, ನೀವು ಕೊಡುವರಿಗೆ ಹೇಳಬಹುದಲ್ಲ, ನನಗೆ ಹಣದ ಅಗತ್ಯವಿಲ್ಲವೆಂದು, ಕೊಡಬೇಡಿ ಎಂದು"
ಅವರು ಅಂದರು
"ಮಗು ನಾನು ಎಷ್ಟು ಜನರಿಗೆ ಆ ರೀತಿ ಹೇಳುತ್ತ ಕೂಡಲು ಸಾದ್ಯ,  ಇಲ್ಲಿ ಹೋಗುವ ಜನ ನನ್ನ ಸನ್ಯಾಸಿಯ ಬಟ್ಟೆ ಕಾಣುತ್ತ ಅವರಾಗಿಯೆ ಹಾಕಿ ಹೋಗುತ್ತಿದ್ದಾರೆ, ಆದರೆ ನನಗೆ ನನ್ನದೆ ಆದ ಒಂದು ವ್ರತವಿದೆ, ನಾನು ಜೀವನದಲ್ಲಿ ಎಂದು ಹಣವನ್ನು ಮುಟ್ಟಲಾರೆನು ಏನು ಮಾಡಲಿ" ಎಂದರು. ನನಗೆ ಮತ್ತು ಆಶ್ಚರ್ಯವಾಯಿತು, ಹಣವನ್ನು ತೆಗೆದುಕೊಳ್ಳದೆ ಈ ಸನ್ಯಾಸಿ ತನ್ನ ಖರ್ಚಿಗೆ ಏನು ಮಾಡುವರು? ಹೋಗಲಿ ಈ ಮಧ್ಯಾನದ ಊಟಕ್ಕಾದರು ಏನು ಮಾಡುವರು ಅನ್ನಿಸಿ , ಬಾಯಿ ತಪ್ಪಿ ಅದನ್ನೆ ಕೇಳಿದೆ 
"ಸರಿ ನಿಮಗೆ ಹಣ ಬೇಡವೆಂದರೆ ಸರಿ , ಮಧ್ಯಾನದ ಊಟಕ್ಕೆ ಏನು ಮಾಡುವಿರಿ " 
ಅವರು ಜೋರಾಗಿ ಗಹಗಹಿಸಿ ನಕ್ಕರು 
"ಈ ದಿನದ ಮಧ್ಯಾನದ ಊಟವನ್ನು ನೀನು ಕೊಡಿಸುವಿಯಲ್ಲ ಮಗು, ನನಗಿನ್ನೇನು ಯೋಚನೆ" 
ನನಗೆ ಕಸಿವಿಸಿಯಾಯಿತು, ನಾನೆಲ್ಲಿ ಊಟ ಕೊಡಿಸುವೆನೆಂದು ಹೇಳಿದೆ, ಈತ ಏನೇನೊ ಹೇಳುವರಲ್ಲ ಎಂದುಕೊಂಡು, ತಡವರಿಸುತ್ತ
"ಏನು,  ಹಾಗೆಂದರೆ ಏನು " ಎಂದು ಕೇಳಿದೆ.
"ಏನಿಲ್ಲ, ಮಗು, ನಾನು ಯಾರೆಂದು ಸಹ ನಿನಗೆ ಗೊತ್ತಿಲ್ಲ, ನನ್ನಂತಹ ಯಾರೊ ಅಪರಿಚಿತ ಮನುಷ್ಯನೊಬ್ಬ ಮಧ್ಯಾಹ್ನದ ಊಟಕ್ಕೆ ಏನು ಮಾಡುವನೆಂಬ ಯೋಚನೆಯನ್ನು ನಿನ್ನ ಮನಸಿನಲ್ಲಿ ಆ ಶಿವ ಹುಟ್ಟುಹಾಕಿದ್ದಾನೆಂದರೆ, ಅದಕ್ಕೆ ಒಂದೇ ಅರ್ಥ ಈದಿನ ನನ್ನ ಅನ್ನದ ಜವಾಬ್ದಾರಿಯನ್ನು ನಿನಗೆ ವಹಿಸಿದ್ದಾನೆ ಆ ಶಿವ   ಎಂದು ನನಗೆ ಅನ್ನಿಸಿತು,  ಅದಕ್ಕೆ ಹಾಗೆಂದೆ ಅಷ್ಟೆ" ಎಂದು ನಿಲ್ಲಿಸಿದರು. 
 ಈಗ ನನ್ನ ಮನ ಇಕ್ಕಟ್ಟಿನಲ್ಲಿ ಸಿಲುಕಿತು, 'ಇಲ್ಲಿಯೆ ಮಠದಲ್ಲಿ ಊಟಹಾಕುತ್ತಾರೆ ' ಎಂಬ ಮಾತು ಮನದಲ್ಲಿ ಮೂಡಿತು, ಆದರೆ ಅದು ಸರಿಹೋಗದು ನಾನು ಊಟಹಾಕಿಸಲು ಹಿಂಜರಿದಂತೆ ಅನ್ನಿಸಿತು. 
 ನಾನು ಹೇಳಿದೆ
"ಇಲ್ಲಿ ನಾನು ನಿಮ್ಮಂತೆ ಪರಸ್ಥಳದವ, ನಿಮಗೆ ಊಟ ಹಾಕುವ ಅನುಕೂಲ ನನಗೆ ಇಲ್ಲ, ನೀವು ಹಣ ಮುಟ್ಟುವದಿಲ್ಲ ಎನ್ನುವ ನಿಯಮವಿದೆ ಎನ್ನುವಿರಿ, ನಿಮಗೆ ಒಪ್ಪಿಗೆಯಿದ್ದಲ್ಲಿ, ಹೋಟೆಲ್ ನಲ್ಲಿ ನಿಮಗೆ ಊಟ ಕೊಡಿಸುವೆ ಅಷ್ಟು ಮಾತ್ರ ನನ್ನಿಂದ ಸಾದ್ಯ "  
 
ಅವರು  "ಸರಿ ಮಗು ಈದಿನ , ತಾಯಿ ಅನ್ನಪೂರ್ಣೇಶ್ವರಿಯು ಹೋಟೆಲ್ ನಲ್ಲಿರುವೆ ಅಲ್ಲಿಯೆ ಸೇವೆಗೆ ಬಾ ಎಂದರೆ, ನಾನು ಸಹ ಏನು ಮಾಡಲು ಸಾದ್ಯವಿಲ್ಲ, ಅಲ್ಲಿಯೆ   ಬರುತ್ತೇನೆ" ಎಂದ. ನನಗೆ ಈಗ ಅವರಮಧ್ಯಾನದ ಊಟದ ಜವಾಬ್ದಾರಿ ನಿರ್ವಹಿಸುವುದು ಅನಿವಾರ್ಯವಾಯಿತು. 
"ಹಾಗಾದರೆ ಸರಿ ಹೋಗೋಣ ಬನ್ನಿ " ಎನ್ನುತ್ತ ಎದ್ದೆ. 
"ನಡಿ ಮಗು ಆಗಲಿ ಹೋಗೋಣ" ಎನ್ನುತ್ತ ಎದ್ದು ನಿಂತರು. ನನಗೆ ಅದೇನೊ ಕಸಿವಿಸಿ ಇದೆಂತ ಬಲೆಯಲ್ಲಿ ಸಿಕ್ಕಿಬಿದ್ದೆ.  ಪೊದೆಯಂತಹ ಮೀಸೆ, ನೀಳಗಡ್ಡ, ಸನ್ಯಾಸಿಯ ನಿಲುವಂಗಿ ಇಂತಹ ವ್ಯಕ್ತಿಯೊಡನೆ ನನಗೆ ಹೋಟೆಲಿಗೆ ಹೋಗಲು ಅದೇನೊ ಮುಜುಗರ ಎನಿಸುತ್ತಿತ್ತು, ಸುತ್ತಲಿದ್ದವರು ನನ್ನನ್ನೆ ನೋಡುತ್ತಿದ್ದಾರೇನು ಎನ್ನುವ ಭಾವ ತುಂಬಿ, ಸುತ್ತಲ್ಲು ನೋಡಲು ಸಹ ನಾಚಿಕೆ ಎನಿಸಿ, ತಲೆ ತಗ್ಗಿಸಿ ನಡೆಯುತ್ತಿದ್ದೆ, ಈ ವ್ಯಕ್ತಿ ಪದೆ ಪದೆ ನನ್ನನ್ನು "ಮಗು" ಎಂದು ಕರೆಯುತ್ತ ಇರುವುದು ಸಹ ನನಗೆ ಅಸಹಜ, ನನಗಾಗಲೆ ನಡುವಯಸ್ಸನು ಮೀರಿದ ವಯಸ್ಸು, ಈತ ನನ್ನನ್ನು ಮಗು ಎನ್ನಬೇಕಾದಲ್ಲಿ ಇವರ ವಯಸ್ಸು ಎಷ್ಟಿರಬಹುದು ಎಂಬ ಯೋಚನೆ ನನ್ನ ಮನಸನ್ನು ಹೊಕ್ಕಿತ್ತು ತಕ್ಷಣ ಕೇಳಿಯುಬಿಟ್ಟೆ
"ನಿಮ್ಮ ವಯಸ್ಸೇನಾಗಿರಬಹುದು" ಎಂದು
 ಆತ ಮತ್ತೆ ಗಹಗಹಿಸಿ ನಕ್ಕರು , ಸುತ್ತಲಿದ್ದವರು ನಮ್ಮಿಬ್ಬರತ್ತ ನೋಡಿದರು, ನನಗೆ ಎಂತದೊ ಮುಜುಗರ , ಸುಮ್ಮನೆ ಎಲ್ಲರ ಜೊತೆ ಬೆಟ್ಟದ ಮೇಲೆ ಹೋಗಿದ್ದರೆ ಆಗಿತ್ತು, ಇದೆಲ್ಲಿಯ ಗ್ರಹಚಾರ ಅನ್ನಿಸಿತು. 
 
"ನನಗೆ ಸುಮಾರು ಎಪ್ಪತ್ತು ದಾಟಿರಬಹುದು, ನಾನು ಈಗ ನಿನ್ನನ್ನು ಮಗು ಎಂದು ಕರೆಯಬಹುದಲ್ಲವೆ" ಎಂದು ಪ್ರಶ್ನಿಸಿದರು. ನನಗೆ ಬಾಯಿ ಮುಚ್ಚಿದಂತಾಯ್ತು. ಕೆಳಗೆ ನಡೆಯುತ್ತ , ಚೆನ್ನಾಗಿರಬಹುದಾದ ಹೋಟೆಲ ಹುಡುಕುತ್ತ ಹೊರಟೆ.  ನನಗೆ ಅದು ಅಪರಿಚಿತ ಸ್ಥಳ, ಸರಿಯಾದ ಹೋಟೆಲ ಎಲ್ಲಿದೆಯೊ ತಿಳಿಯದು, ಹಾಗಾಗಿ ಕೆಳಗೆ ಬಸ್ ನಿಲ್ಡಾಣದ ಹತ್ತಿರವಿದ್ದ ಆಟೋ ಒಂದರಲ್ಲಿದ್ದ ಡ್ರೈವರ್ ಒಬ್ಬನನ್ನು ಕೇಳಿದೆ 
"ಇಲ್ಲಿ ಸಮೀಪದಲ್ಲಿ ಸರಿಯಾದ ಊಟ ಸಿಗುವ ಹೋಟೆಲ್ ಸಿಗಬಹುದೆ " ಎಂದು , ಅವನು ನನ್ನನ್ನು ಒಂದು ರೀತಿ ನೋಡಿದ, ನನ್ನ ಪಕ್ಕದಲ್ಲಿ ನಿಂತಿದ್ದ ಸನ್ಯಾಸಿಯನ್ನು ನೋಡಿದ
"ಇಲ್ಲಿ ದಾಬಸ್ ಪೇಟೆಗೆ ಹೋಗುವ ಮಾರ್ಗದಲ್ಲಿ ಒಂದೆ ಸಣ್ಣ ಹೋಟೆಲ್ ಇದೆ, ಹಳ್ಳಿಯಲ್ಲಿ, ಅಂತ ಒಳ್ಳೆಯ ಹೋಟೆಲ್ ಅನ್ನುವಹಾಗಿಲ್ಲ ಆದರೆ ಪರವಾಗಿಲ್ಲ " ಎಂದ
"ನಮ್ಮಿಬ್ಬರನ್ನು ಅಲ್ಲಿಗೆ ಕರೆದೊಯ್ಯುವೆಯ, ಮತ್ತೆ ನೀನೆ ಕಾದಿದ್ದು ನಮ್ಮ ಊಟದ ನಂತರ ಪುನಃ ಹಿಂದೆ ಕರೆತರಬೇಕು, ವೈಟಿಂಗ ಚಾರ್ಜ್ ಕೊಡುವೆ" ಎಂದೆ
 
"ಅದೇನೊ ಆ ಡ್ರೈವರ್ ಒಪ್ಪಿದ, ನಾನು ಆ ಸನ್ಯಾಸಿಯನ್ನು ಆಟೋ ಹತ್ತಲು ತಿಳಿಸಿದೆ ಅವನು ಹತ್ತಿದ ನಂತರ ನಾನು ಹತ್ತಿ ಆದಷ್ಟು ಅವನಿಗೆ ತಗಲದಂತೆ ದೂರ ಕುಳಿತೆ.  ನಡುದಾರಿಯಲ್ಲಿ ಒಮ್ಮೆ ಆ ಸನ್ಯಾಸಿ ಮಾತನಾಡಿದರು "ಎಷ್ಟೊ ವರ್ಷಗಳ ನಂತರ ವಾಹನ ಹತ್ತಿರುವೆ"  ಎಂದ. ಆಟೋದವನು ತಾನು ಹೇಳಿದ ಹೋಟೆಲಿಗೆ ನಮ್ಮನ್ನು ಕರೆದೋಯ್ದ, 
 
   ಅವನು ಹೇಳಿದ್ದು ಸರಿಯಿತ್ತು ಅಂತ ದೊಡ್ಡ ಹೋಟೆಲ್ ಏನಲ್ಲ ಹಳ್ಳಿಯಲ್ಲಿ ಇರುವಂತದ್ದು. ನಾವಿಬ್ಬರು ಊಟಕ್ಕೆ ಹೋದಾಗ ಹೋಟೆಲ್ ನವನಿಗೆ ಆಶ್ಚರ್ಯವೆ. ಆದರೆ ಊಟ ಅಂತ ಕೆಟ್ಟದಾಗೇನು ಇರಲಿಲ್ಲ. ಹಸಿದ ಹೊಟ್ಟೆಗೆ ಸಾಕಷ್ಟು ರುಚಿ ಅನ್ನಿಸಿತು. ಸನ್ಯಾಸಿಯು ಯಾವ ಮಾತು ಆಡದೆ ಊಟ ಮುಗಿಸಿ ಎದ್ದರು.  ಹೊರಬಂದು, ಅದೇ ಆಟೋದಲ್ಲಿ ಹಿಂದೆ ಪಯಣಿಸಿ, ಶಿವಗಂಗೆ ಬಂದು ಪುನಃ ನಾವು ಕುಳಿತ್ತಿದ್ದ ಸ್ಥಳದತ್ತಲೆ ನಡೆದೆವು. ಸ್ವಲ್ಪ ನೆರಳಿನ ಸ್ಥಳ ಆರಿಸಿ ಅವನು ಕುಳಿತರು , ನಾನು ಸಹ ಪಕ್ಕದಲ್ಲಿಯೆ ಕುಳಿತೆ, ಈಗ ನನಗೇನು ಮುಜುಗರ ಕಡಿಮೆಯಾಗಿತ್ತು. ಯಾರಾದರು ನೋಡಿದರೆ ನನಗೇನು ಎಂಬ ಭಾವ ತುಂಬಿತ್ತು. 
   ಸ್ವಲ್ಪ ಹೊತ್ತಾಯಿತೇನೊ, ನನಗೆ ಆ ಸನ್ಯಾಸಿಯ ಬಗ್ಗೆ ಕುತೂಹಲ ಅನ್ನಿಸುತ್ತಿತ್ತು. ನನಗೆ ಹೇಗೆ ಮಾತಿನಲ್ಲಿ ಸಿಕ್ಕಿಸಿ ನನ್ನ ಕೈಲಿ ಮಧ್ಯಾನದ ಊಟವನ್ನು ಪಡೆದಿದ್ದರು. ಆದರು ಅವರ ಬಗ್ಗೆ ಅವರ ಅನುಭವದ ಬಗ್ಗೆ ಏನಾದರು ಕೇಳಬೇಕು ಅನ್ನಿಸುತ್ತಿತ್ತು, ಅಲ್ಲದೆ ಹೇಗು ಎಲ್ಲರು ಬೆಟ್ಟದ ಮೇಲೆ ಹೋಗಿದ್ದರು, ಕೆಳಗೆ ಬರಲು ಇನ್ನು ಸಾಕಷ್ಟು ಸಮಯವಿತ್ತು. ನನಗೂ ಸಮಯ ಕಳೆಯಬೇಕಿತ್ತು, ಹಾಗಾಗಿ ಸುಮ್ಮನೆ ಮಾತಿಗೆ ಎಳೆಯೋಣ ಎಂದು ಅನ್ನಿಸಿ
 
"ನಿಮ್ಮದು ಯಾವ ಊರು, ನಿಮ್ಮ ಹೆಸರೇನು ತಿಳಿಯಬಹುದ?" ಎಂದು ಕೇಳಿದೆ. ಅವರು ಸ್ವಲ್ಪ ಕಾಲ ಸುಮ್ಮನೆ ಗಂಭೀರವಾಗಿ ಕುಳಿತಿದ್ದರು, 
 
  ನನಗೆ ಏಕೊ ಸ್ವಲ್ಪ ಭಯವಾಯಿತು. ಹಿಂದೆಲ್ಲ   ತ.ರಾ.ಸು ರವರ ಕೆಲ ಕಾದಂಬರಿ ಓದಿದ್ದೆ ಅದರಲ್ಲಿ ಸನ್ಯಾಸಿಯನ್ನು ಕೆಣಕಿ ಕೆಲವರು ಕೆಟ್ಟಪರಿಣಾಮ ಅನುಭವಿಸಿದ್ದು ಎಲ್ಲ ಕತೆಗಳು ನೆನಪಿಗೆ ಬಂದವು. ಈತ ಯಾರೊ ಏನೊ , ಕೆಣಕಲು ಹೋಗಿ ನನ್ನ ಶಪಿಸಿ ಬಿಟ್ಟರೆ ಅಂತ ಒಂದು ಕ್ಷಣ ಅನ್ನಿಸಿ ನಂತರ , ಈಗ ಅದೆಲ್ಲ ಸಾದ್ಯವಿಲ್ಲ, ಈ ಕಾಲಕ್ಕೆ ಅಂತ ಸನ್ಯಾಸಿಗಳೆಲ್ಲ ಇರಲು ಎಲ್ಲಿ ಸಾದ್ಯ ಎಂದು ಸ್ವಲ್ಪ ನನಗೆ ನಾನೆ ಸಮಾಧಾನಪಡಿಸಿಕೊಂಡೆ. 
ಕೆಲ ಕ್ಷಣ ಕಳೆದ ಆತ
"ಮಗು ಸನ್ಯಾಸಿಗೆ ಯಾವ ಊರಾಯಿತು, ಅವನಿಗೆ ಹೆಸರೆಲ್ಲಿ ಅದೆಲ್ಲ ವ್ಯಾಮೋಹವಿರಬಾರದು, ನನಗೆ ಯಾವ ಊರು ಇಲ್ಲ, ಯಾವ ಹೆಸರು ಇಲ್ಲ " ಎಂದರು.  
"ಸರಿಯೆ ಸನ್ಯಾಸಿಗೆ ಊರು ಇಲ್ಲ ಅಂತ ನೆನೆಸೋಣ ಆದರೆ ನೀವು ಸನ್ಯಾಸಿಯಾಗುವ ಮೊದಲು ಯಾವುದೊ ಊರಿಗೆ ಸೇರಿರಬೇಕಲ್ಲವೆ, ಆಗ ನಿಮಗೆ ಒಂದು ಹೆಸರು ಇದ್ದೀತು, ಅಲ್ಲದೆ ಸನ್ಯಾಸಿಯಾದ ಮೇಲು ಕೆಲವರು ಹೊಸ ಹೆಸರನ್ನು ಧರಿಸುತ್ತಾರಲ್ಲವೆ?" ಎಂದೆ.
ಮತ್ತೆ ಅವರ ನಗು
 "ಮಗು ಅದೆ ನೋಡು ಆಶ್ಚರ್ಯ, ಸೃಷ್ಟಿಯಲ್ಲಿ ಎಷ್ಟೊಂದು ಜೀವಿಗಳುಂಟು, ಯಾವುದು ಹೆಸರಿಟ್ಟುಕೊಳ್ಳಲು ಹೋಗಲ್ಲ, ಪ್ರಕೃತಿಯಲ್ಲಿ ಸಾವಿರಾರು ವಿಧದ ಮರ ಗಿಡ ಪ್ರಭೇದಗಳುಂಟು ಯಾವುದು ತನಗೆ ಹೆಸರಿಟ್ಟುಕೊಳ್ಳಲ್ಲ. ಆದರೆ ಈ ಮನುಷ್ಯಜಾತಿ ಮಾತ್ರ ನೋಡು , ಹುಟ್ಟುವಾಗ ಯಾವ ಹೆಸರು ಇರಲ್ಲ, ಆದರೆ ಇವನು ತನಗೆ ಮಾತ್ರ ಪ್ರತ್ಯೇಕವಾಗಿ ಒಂದು ಹೆಸರಿಟ್ಟು ಗುರ್ತಿಸಿಕೊಳ್ಳುತ್ತಾನೆ, ಅಷ್ಟೆ ಅಲ್ಲ ಸುತ್ತ ಮುತ್ತಲ ಪಶು ಪ್ರಾಣಿ, ಗಿಡ ಮರಗಳನ್ನೆಲ್ಲ ಒಂದು ಜಾತಿ ಹೆಸರಿನಿಂದ ಗುರ್ತಿಸಿ ಸಂತೋಷಪಡುತ್ತಾನೆ. ಈಗ ಪ್ರಾಣಿಗಳನ್ನು ನೋಡು , ಯಾವುದೆ ಹೆಸರಿಲ್ಲದೆ ಒಂದನೊಂದು ಗುರ್ತಿಸುತ್ತವೆ, ಮರಗಿಡಗಳಲ್ಲು ಆ ಗುರ್ತಿಸುವಿಕೆ ನಡೆಯುತ್ತದೆ ಯಾವುದೆ ಹೆಸರಿಲ್ಲದೆ, ಈ ಮನುಷ್ಯನಾದರೆ ಮಾತ್ರ ವಿಚಿತ್ರ, ತನಗೊಂದು ಹೆಸರು,  ತನ್ನ ಊರಿಗೊಂದು ಹೆಸರು"  ಅಂತ  ಮತ್ತೆ ಜೋರಾದ ಅವರ ನಗು ನನಗೆ ಕಸಿವಿಸಿ ಮೂಡಿಸಿತು. 
 
ನಾನು ನಗುತ್ತ " ಆ ವೇದಾಂತವೆಲ್ಲ ನಿಜವೆ, ಆದರೆ ನೀವು ಮಾತ್ರ ನಿಮ್ಮ ಹೆಸರಾಗಲಿ, ನಿಮ್ಮ ಊರಾಗಲಿ ತಿಳಿಸಲಿಲ್ಲ, ಇಷ್ಟವಿಲ್ಲ ಎನ್ನುವದಾದರೆ ನಾನು ಬಲವಂತ ಮಾಡುವದಿಲ್ಲ" ಎಂದೆ.  
ಅವರು ನಗುತ್ತ
"ಆಗಲಿ ಮಗು, ನೀನು ನನ್ನನ್ನು ಅನ್ನದ ಋಣದಲ್ಲಿ ಬೇರೆ ಸಿಕ್ಕಿಸಿರುವೆ, ನಾನು ಈ ರೀತಿಯ ಜೀವನ ಪ್ರಾರಂಬಿಸಿ ಎಷ್ಟೊ ವರ್ಷಗಳಾಯಿತು, ಎಷ್ಟೊ ಜನ ನನಗೆ ಅನ್ನ ಹಾಕಿದ್ದಾರೆ. ಮಾತನಾಡಿದ್ದಾರೆ, ಆದರೆ ಇಲ್ಲಿಯವರೆಗು ಯಾರು ನಿನ್ನ ಹೆಸರೇನು ಯಾವ ಊರಾಯಿತು ಎಂದು ಕೇಳಿರಲಿಲ್ಲ.  ನೀನು ಏತಕ್ಕೊ ಕೇಳುತ್ತಿದ್ದೀಯ ಇರಲಿ.    ಹಲವು ವರ್ಷಗಳ ಹಿಂದೆ ನನ್ನ ಹೆಸರು ವೆಂಕಟೇಶನೆಂದು ಇದ್ದಿತು. ಮತ್ತು ನನ್ನ ಸ್ವಂತ ಊರು ಬೆಂಗಳೂರೆ ಆಗಿತ್ತು." ಎಂದರು  ಆತ.  ನನಗೆ ಆಶ್ಚರ್ಯವಾಯಿತು  ನಾನೆಂದೆ
"ಏನು ನೀವು ಬೆಂಗಳೂರಿನವರೆ, ನಾನೆಲ್ಲೊ ನಿಮ್ಮನ್ನು ನೋಡುತ್ತ, ಉತ್ತರ ಭಾರತೀಯರಿರಬಹುದೆ ಎಂದು ಎಣಿಸಿದ್ದೆ. ಬೆಂಗಳೂರು ಎಂದರೆ ಎಲ್ಲಿದ್ದೀರಿ, ಯಾವ ಭಾಗ, ನಿಮ್ಮ ಕಂಡಿರುವವರು, ಅಥವ ನೆಂಟರು ಯಾರಾದರು ಈಗಲು ಇರಬಹುದು ಅಂತಾಯಿತು, ನೀವು ಅದೇಕೆ ಸನ್ಯಾಸಿಯಾದಿರಿ, ಅಂತಹ ಸನ್ಯಾಸಿ ಆಗುವ ಬಯಕೆ ನಿಮಗಾದರು ಹೇಗೆ ಬಂದಿತು" ಎಂದೆ
ಅದಕ್ಕವರು " ಇದೊಳ್ಳೆ ಸರಿಯಾಯಿತು, ನೀನು ನನ್ನ ಜೀವನದ ಪಂಚಾಂಗವನ್ನೆ ಬಿಚ್ಚುತ್ತಿರುವೆಯಲ್ಲ ಮಗು, ಅದೆಲ್ಲ ಎಂದೊ ನಡೆದುಹೋದ ಘಟನೆಗಳು. ಈಗ ಯಾರ ನೆನಪಲ್ಲಾಗಲಿ ಇಲ್ಲ. ಅದರಿಂದೆಲ್ಲ ಎಂತದು ಉಪಯೋಗವು ಇಲ್ಲ. ಎಲ್ಲ ಮುಗಿದುಹೋಯಿತು" ಎಂದರು. ನಾನು
"ಸ್ವಾಮಿ ಅದೇಕೊ ನನಗೆ ಕುತೂಹಲ ಎನಿಸುತ್ತಿದೆ, ಒಬ್ಬ ಸಾದಾರಣ ಮನುಷ್ಯನಿಗೆ ಸನ್ಯಾಸಿಯಾಗುವ ಬಯಕೆ ಏಕೆ ಬರುತ್ತದೆ, ಅವನ ಅನುಭವಗಳಾದರು ಹೇಗಿರುತ್ತವೆ, ಗೊತ್ತಿಲ್ಲ. ನೀವು ತಪ್ಪು ತಿಳಿಯುವದಿಲ್ಲ, ಕೋಪವಿಲ್ಲ ಅನ್ನುವದಾದರೆ ನನಗೆ ನಿಮ್ಮ ಪರಿಚಯ , ಮತ್ತೆ ಸನ್ಯಾಸಿಯಾಗುವ ಪ್ರಸಂಗವಾದರು ಏಕೆ ಬಂತು ಎಂದು ತಿಳಿಸುತ್ತೀರ" ಎಂದೆ. 
 
    ಆತ "ನೋಡು ಮಗು , ಜೀವನದಲ್ಲಿ ನಡೆಯುವ ಕೆಲಘಟನೆಗಳು ನಮಗೆ ಘಾತಕ ಅನಿಸಿದರು ಮತ್ತೊಬ್ಬರಿಗೆ ಅದು ಸಾಮಾನ್ಯ ಘಟನೆ ಅನಿಸುತ್ತದೆ. ನಮ್ಮ ಸೂಕ್ಷ್ಮ ಮನಸಿಗೆ ಆದ ನೋವು ಬೇರೊಬ್ಬರಿಗೆ  ಸಹಜ ಮಾತು ಅನಿಸುತ್ತದೆ. ಅಷ್ಟೆ ಏಕೆ ಇಂದು ನಮ್ಮ ಮನಸನ್ನು ಗಾಯಗೊಳಿಸಿ ಕಾಡಿದ ಮಾತು, ನೋವು , ಹಾಗು ನಮ್ಮದೆ ವರ್ತನೆಗಳು  ಕಾಲಕಳೆದು ಎಷ್ಟೊ ವರ್ಷಗಳಾದ ನಂತರ ನಮಗೆ ಬಾಲಿಶವೆನಿಸಬಹುದು. ಹಾಗಿರುವಲ್ಲಿ ನನ್ನನ್ನು ಸಂಸಾರ ಜೀವನದಿಂದ ಸನ್ಯಾಸಕ್ಕೆ ನೂಕಿದ ಸಂದರ್ಭ ಹಾಗು ಕೆಲಮಾತುಗಳು ನಿನಗೆ ಲೋಕರೂಡಿ ಎನಿಸಬಹುದು ಅಲ್ಲವೆ. ಆದರು ನೀನು ಕೇಳುವೆ ಎಂದು ಮಾತ್ರ ಅಲ್ಲ, ಏಕೊ ನನ್ನ ಮನಸ್ಸಿಗು ನನ್ನ ಗತ ಜೀವನದ ಕತೆಯನ್ನು ನಿನಗೆ ಹೇಳಬೇಕಿನಿಸಿದೆ. ಈ ಮೂಲಕ ನಾನು ಸಹ ನನ್ನ ಜೀವನದ ಸರಿತಪ್ಪುಗಳನ್ನು ತೂಗಿ ನಿರ್ದರಿಸಬಹುದೇನು ಅನ್ನಿಸುತ್ತಿದೆ. ಸ್ವಲ್ಪ ವಿವರವಾಗಿಯೆ ಹೇಳುವೆ ಸರಿತಾನೆ, ನಿನಗೂ ಸಹ ನಿನ್ನವರೆಲ್ಲ ಬೆಟ್ಟದಿಂದ ಕೆಳಗೆ ಬರುವ ತನಕ ಹೇಗು ಸಮಯ ಕಳೆಯಬೇಕೆಂಬ ಅನಿವಾರ್ಯವಿದೆ ಅಲ್ಲವೆ ಹಾಗಾಗಿ ನನ್ನ ಕತೆ ಕೇಳಲು ಸಿದ್ದನಾಗಿರುವೆ" ಎಂದು ಜೋರಾಗಿ ನಕ್ಕರು, ನನಗೂ ಅವರ ಮಾತಿನಿಂದ ನಗು ಬಂದಿತು. 
ಸ್ವಲ್ಪ ಕಾಲ ಸುಮ್ಮನೆ ಸೂರ್ಯನ ಬಿಸಿಲು ತುಂಬಿರುವ ಆಕಾಶವನ್ನೆ ದಿಟ್ಟಿಸುತ್ತ , ಬಹುಷಃ ಹಿಂದಿನದನ್ನು ನೆನಪಿಸಿಕೊಳ್ಳುತ್ತ ಕುಳಿತರು.
"ಮಗು ನೀನು ಬೆಂಗಳೂರಿನಲ್ಲಿ ಟಿ.ಟಿ.ಪಿ.ಇಂಡಸ್ಟ್ರೀಸ್ ಹಾಗು ಅದರ ಸ್ಥಾಪಕ ವೆಂಕಟೇಶ ಎಂಬುವರ ಬಗ್ಗೆ ಕೇಳಿದ್ದೀಯ?" ಪ್ರಶ್ನಿಸಿದರು. ನಾನು ನನ್ನ ನೆನಪನ್ನು ಕೆದಕಿದೆ. ನಿಜ ಇದು ತೀರ ಕೇಳಿದಂತೆ ಇದೆಯಲ್ಲ. ಹೌದು ಟಿ.ಟಿ.ಪಿ. ಹೆಸರನ್ನು ಕೇಳಿದ್ದೇನೆ, ತಕ್ಷಣ ನೆನಪು ಬಂದಿತು, ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಗರ್ವ ಎನಿಸಿತು. ಆದರೆ ಈಗ ಆ ಗ್ರೂಪಿನ ಹೆಸರು ಬದಲಾಗಿದೆ ಏನದು ಹೌದು ಸುಧಾ ಗ್ರೂಪ್ಸ್  ಎಂದು ಅನ್ನುವುದು ನೆನಪಿಗೆ ಬಂದಿತು. ಅದರ ಸ್ಥಾಪಕ ವೆಂಕಟೇಶ್ ಎಂಬುವರು ಈಗಿಲ್ಲ , ಈಗ ಅವರ ಮಗಳು ಹಾಗು ಅಳಿಯ ಅದರ ಒಡೆಯರು ಹೌದು ಸುಧಾ ಅವರ ಮಗಳೆ ಎಲ್ಲ ಸುದ್ದಿಪತ್ರಿಕೆಯಲ್ಲಿ ಆಗೊಮ್ಮೆ ಇಗೊಮ್ಮೆ ಓದುತ್ತಿದ್ದ ಸುದ್ದಿ, ಕರ್ನಾಟಕದಲ್ಲಿ ಅತಿ ದೊಡ್ಡ ವ್ಯಾಪಾರ ವ್ಯವಹಾರಗಳನ್ನು ನಡೆಸುವ ಸಂಸ್ಥೆ ಅದು , ಈಚೆಗೆ ಅದರ ಸುಧಾ ಗ್ರೂಪ್ ಆಪ್ ಐ.ಟಿ. ಸಲ್ಯೂಶನ್ ಹೊರದೇಶದಲ್ಲು ಸಾಕಷ್ಟು ಪ್ರಸಿದ್ದಿ ಹೊಂದಿತ್ತು. ಸಾವಿರಾರು ಕೋಟಿಗಳ ವ್ಯವಹಾರ ನಡೆಸುವ ಸಂಸ್ಥೆ,  
 
   ಹಾಗೆಯೆ ಅದರ ಪೂರ್ವ ಸ್ಥಾಪಕ ವೆಂಕಟೇಶ್ ಹೆಸರು ನೆನಪಿಗೆ ಬಂದಿತು, ಹೌದು ಅದು ಕಳೆದ ತೊಂಬತ್ತರ ದಶಕದ ಪ್ರಾರಂಬದಲ್ಲಿ ಬಹುಷಃ ೧೯೯೦-೯೧ ರಲ್ಲಿ ಇರಬಹುದು, ನನಗಿನ್ನು ನೆನಪಿತ್ತು, ಇದೆ ಟಿ.ಟಿ.ಪಿ ಸಂಸ್ಥೆಯ ಮಾಲಿಕ ವೆಂಕಟೇಶ್ ಅತ್ಯಂತ ನಿಗೂಡರೀತಿಯಲ್ಲಿ ಕಣ್ಮರೆಯಾದರು, ಅವರ ಮನೆಯ ಹತ್ತಿರ ಅವರ ಕಾರು ನಿಂತಿತ್ತು ಆದರೆ ಅವರು ಎಲ್ಲಿ ಹೋದರು ಎಂದು ಯಾರಿಗು ತಿಳಿಯಲಿಲ್ಲ. ಪೋಲಿಸರು ಅವರ ವೃತ್ತಿಕ್ಷೇತ್ರದ ಜನರೆ ಒಂದಾಗಿ ಅಪಹರಿಸಿ ಕೊಲೆಮಾಡಿಸಿರಬಹುದು ಎಂಬ ಅರ್ಥದ ಹೇಳಿಕೆ ನೀಡಿದರು, ಪತ್ರಿಕೆಗಳಲ್ಲಿ ಬಹಳಷ್ಟು ಕಾಲ ಆ ವಿಷಯದ ಬಗ್ಗೆ ರಂಜನೀಯ ವರದಿಗಳು ಬಂದವು. ಕ್ರಮೇಣ ಆ ವಿಷಯಗಳೆಲ್ಲ ಜನರ ಗಮನದಿಂದ ಮರೆಯಾಯಿತು. ಆಗ ನೂರು ಕೊಟಿಗಳ ವ್ಯವಹಾರದ ಸಂಸ್ಥೆಯಾಗಿದ್ದ ಅ ವ್ಯವಹಾರ ಸಂಸ್ಥೆ ಈಗ ವರ್ಷಕ್ಕೆ ಸಾವಿರ ಕೋಟಿಗಳ ಟರ್ನೊವರ್ ನಡೆಸುವ ಮಹಾಸಂಸ್ಥೆ. 
 
 ಇದೆಲ್ಲ ನೆನಪಿಗೆ ಬರುತ್ತಿರುವಂತೆ ಅವರಲ್ಲಿ ನುಡಿದೆ.
 "ನೆನಪಿಗೆ ಬಂದಿತು, ತುಂಬಾ ಹಳೆಯ ಸಂಸ್ಥೆಯದು, ಈಗ ಹೆಸರು ಬದಲಾಗಿದೆ, ಆದರೆ ನೀವು ಹೇಳುವ ವೆಂಕಟೇಶ್ ಎಂಬುವ ಅದರ ಸ್ಥಾಪಕ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಅಪಹರಣವಾಗಿ ಕೊಲೆಯಾಗಿ ಹೋದರು ಅನ್ನಿಸುತ್ತೆ, ಅವರಿಗು ನಿಮಗು ಏನು ಸಂಭಂದ? " ಎಂದು ಪ್ರಶ್ನಿಸಿದೆ. 
ಆತ ನಗುತ್ತಿದ್ದರು. 
"ಅಪಹರಣವು ಅಲ್ಲ ಕೊಲೆಯು ಅಲ್ಲ ಮಗು , ನಾನೆ ಆ ವೆಂಕಟೇಶ್  ಎಂಬ ವ್ಯಕ್ತಿ" ಎಂದರು. 
ಈಗ ನಗುವ ಸರದಿ ನನ್ನದು. "ಸ್ವಾಮಿ ನಿಮ್ಮ ಕತೆ ಹೇಳಿ ಎಂದರೆ, ನಾನು ವೆಂಕಟೇಶ್  ಎಂಬ ವ್ಯಕ್ತಿ ಅನ್ನುತ್ತೀರಿ. ಇಂತ ತಮಾಷಿಯೆಲ್ಲ ನಂಬಲು ನಾನೇನು ಕೂಸೆ. ವರ್ಷಕ್ಕೆ ಸಾವಿರಾರು ಕೋಟಿ ರೂಗಳ ವ್ಯವಹಾರ ನಡೆಸುವ ಟಿ.ಟಿ.ಪಿ. ಎಂಬ ಸಂಸ್ಥೆಯ ಸ್ಥಾಪಕ ವೆಂಕಟೇಶ್ ಎಲ್ಲಿ,  ಸನ್ಯಾಸಿಯಾಗಿ ಊರೂರು ತಿರುಗುತ್ತ, ಬಿಸಿಲು ಮಳೆಯಲ್ಲಿ ಇರುತ್ತ, ದಿನಕ್ಕೆ ಯಾರೊ ಕೊಡಿಸುವ ಒಂದು ಹೊತ್ತಿನ ಊಟ ಮಾಡಿ ಅಧ್ಯಾತ್ಮದ ಲೋಕದಲ್ಲಿರುವ ನೀವೆಲ್ಲಿ. ಹೇಳಿದರು ನಂಬುವಂತೆ ಹೇಳಬೇಕಲ್ಲವೆ?" ಎಂದೆ. 
 
ಅವರು "ಹೌದು ಮಗು ಎಂದಿಗು ಹಾಗೆ, ನಿಜವನ್ನು ನಂಬುವಂತೆ ಮಾಡುವುದು ತುಂಬಾ ಕಷ್ಟ.  ಆದರೆ ಸುಳ್ಳನ್ನು ಹೇಳಿ ಸುಲುಭವಾಗಿ ಯಾರನ್ನು ನಂಬಿಸಬಹುದು. ಅಷ್ಟಕ್ಕು ನಾನೊಂದು ಸುಳ್ಳು ಹೇಳಿದೆ ಅಂತಲೆ ಭಾವಿಸು ಅದರಿಂದ ನಿನಗೇನು ನಷ್ಟವಾಗುತ್ತಿಲ್ಲ ಅಲ್ಲವೆ.  ನನಗೆ ಅದರಿಂದ ಯಾವ ಲಾಭವು ಇಲ್ಲ. ನೀನು ಕೇಳಿದೆ ಎಂದು ನಾನು ನನ್ನ ಕತೆ ಹೇಳುತ್ತೇನೆ ನಂಬುವುದು ಬಿಡುವುದು ನಿನ್ನ ಸ್ವಂತಕ್ಕೆ ಬಿಟ್ಟ ವಿಚಾರ" ಎಂದರು. 
 
 ನನಗೆ ಈಗ ನಾನು ತಪ್ಪು ಮಾತನಾಡಿದೆ ಅನ್ನಿಸಿತು, ಎಂದಿಗು ಹಣವನ್ನೆ ಕೈಯಲ್ಲಿ ಮುಟ್ಟದ ಈ ಸನ್ಯಾಸಿ ಏನಕ್ಕಾಗಿ ನನ್ನ ಹತ್ತಿರ ಸುಳ್ಳು ಕತೆಯನ್ನು ಹೇಳಬೇಕು, ಅನ್ನಿಸಿ ಅಂದೆ
 
"ಕ್ಷಮಿಸಿ ಸ್ವಾಮಿ ನಾನು ತಪ್ಪು ಮಾತನಾಡಿದೆ ಅನ್ನಿಸುತ್ತೆ. ನೀವು ಹೇಳುವುದು ನಿಜ,  ಕೆಲವೊಮ್ಮೆ ನಿಜವನ್ನು ನಂಬುವುದು ಕಷ್ಟ ಅನ್ನಿಸಿಬಿಡುತ್ತೆ.  ನಿಮ್ಮ  ಅನುಭವ ಹೇಳಿ ನಂಬುತ್ತೇನೆ " ಎಂದೆ. 
 
"ನೀನು ನಂಬುವೆಯೊ ಇಲ್ಲವೊ ಎನ್ನುವುದು ನನಗೆ ಸಂಬಂದಿಸಿದ ವಿಚಾರವಲ್ಲ ಮಗು, ಆದರೆ ಏಕೊ ನನ್ನ ಕತೆಯನ್ನು ನಿನ್ನ ಬಳಿ ಹೇಳಬೇಕೆಂಬ ಲಹರಿ ನನ್ನ ಮನಸಿನಲ್ಲಿ ಮೂಡಿದೆ, ಅದಕ್ಕಾಗಿ ನನ್ನ ಜೀವನದ ಅನುಭವಗಳನ್ನು ಮನಸಿನ ಮಂಥನಗಳನ್ನು ಸ್ವಲ್ಪ ವಿವರವಾಗಿಯೆ ಹೇಳಿಬಿಡುವೆ. ನೀನು ವಿರಾಮವಾಗಿ ಕುಳಿತು ಕೇಳು " ಎನ್ನುತ್ತ ತಮ್ಮ ಜೀವನದ ಕತೆ ಪ್ರಾರಂಬಿಸಿದರು. ನಾನು ತಂಪಾದ ನೆರಳಿನಲ್ಲಿ ಅವರ ಕತೆಗೆ ಕಿವಿಕೊಟ್ಟು ಕುಳಿತೆ.
 
 ಮುಕ್ತಾಯ ಮುಂದಿನ ಬಾಗದಲ್ಲಿ .
==============================
 
ಕಥೆಯ ಶೀರ್ಷಿಕೆಗೆ ಸ್ಪೂರ್ತಿ : ರಘು ಎಸ್. ಪಿ.  
 
 ==============================
 ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ   
 ಎರಡನೆ ಬಾಗ : ಬಿಟ್ಟೆನೆಂದರು ಬಿಡದ ಮಾಯೆ
 
Rating
No votes yet

Comments