ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)

ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)

 

     ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜನ ನೆನೆಯುವುದು ಅವರ ಕೃತಿಗಳಿಂದಲೇ ಹೊರತು ಅವರು ಮಾಡಿಟ್ಟಿದ್ದ ಆಸ್ತಿ-ಪಾಸ್ತಿಗಳಿಂದಲ್ಲ. ಕೆಳದಿ ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದವರಾದ ಲಿಂಗಣ್ಣಯ್ಯ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದವರು. ಸಂಬಂಧದಲ್ಲಿ ನನಗೆ ಅವರು ನನ್ನ ಮುತ್ತಜ್ಜ ಕವಿ ವೆಂಕಣ್ಣನವರ ತಮ್ಮ - ಅಂದರೆ ಚಿಕ್ಕ ಮುತ್ತಜ್ಜ - ಆಗಬೇಕು. ಬೆಂಗಳೂರಿನ ಅಠಾರಾ ಕಛೇರಿಯಲ್ಲಿ (ಈಗಿನ ಉಚ್ಛ ನ್ಯಾಯಾಲಯದ ಕಟ್ಟಡ) ಸ್ಟಾಂಪ್ ಸೂಪರ್‌ವೈಸರ್ ಆಗಿ ವೃತ್ತಿ ಪ್ರಾರಂಭಿಸಿದ್ದ ಇವರು ಸೊರಬದಲ್ಲಿ ಸಬ್ ರಿಜಿಸ್ಟ್ರಾರರೂ ಆಗಿದ್ದರು. ಒಳ್ಳೆಯ ಸಂಗೀತಗಾರರು, ವೀಣಾ ವಿದ್ವಾಂಸರು ಸಹ ಆಗಿದ್ದ ಇವರು ಬೆಂಗಳೂರಿನ ವಿಶ್ವೇಶ್ವರಪುರ ಸಜ್ಜನರಾವರ ವೃತ್ತದ ಸಮೀಪದಲ್ಲಿ ರೋಷನ್ ಬಾಗ್ ರಸ್ತೆ (ಬುರುಗಲ್ ಮಠ ರಸ್ತೆ)ಯಲ್ಲಿ ಶ್ರೀ ಕಾಂತರಾಜಾ ಕ್ರೋಮೋ ಲಿಥೋ ಮುದ್ರಣಾಲಯ ಸ್ಥಾಪಿಸಿ ವಾಣಿಜ್ಯೋದ್ಯಮಿಯಾಗಿಯೂ ಹೆಸರು ಮಾಡಿದ್ದವರು. ಶಾಲಾ ಕಾಲೇಜುಗಳಿಗೆ ವಿವಿಧ ಭೂಪಟಗಳನ್ನು ಸ್ವತಃ ತಾವೇ ಸಿದ್ದಪಡಿಸಿ ಒದಗಿಸುತ್ತಿದ್ದವರು. ಜ್ಯೋತಿಷ್ಯ, ವೈದ್ಯಕೀಯ, ಫೋಟೋಗ್ರಫಿ, ಮುಂತಾಧ ರಂಗಗಳಲ್ಲೂ ಗುರುತಿಸಿಕೊಂಡಿದ್ದವರು. ಒಳ್ಳೆಯ ಸಾಹಿತಿಯೂ ಆಗಿದ್ದರು. ಇವರ ಸಾಧನೆಯ ಒಂದೊಂದು ಕ್ಷೇತ್ರದ ಕುರಿತೂ ವಿವರಿಸ ಹೊರಟರೆ ಒಂದು ದೊಡ್ಡ ಉದ್ಗ್ರಂಥವೇ ಆಗುತ್ತದೆ. ಒಳ್ಳೆಯ ಚಿತ್ರ ಕಲಾವಿದರಾಗಿದ್ದ ಇವರ ಕೆಲವು ಕೃತಿಗಳ ಫೋಟೋಗಳನ್ನು ತಮ್ಮ ಅವಲೋಕನಕ್ಕಾಗಿ ಕೊಟ್ಟಿರುವೆ.

     ವರ್ಣಚಿತ್ರಗಳಿಗೆ ಲಿಂಗಣ್ಣಯ್ಯನವರು ಬಳಸಿರುವ ಬಣ್ಣಗಳು ಪರಿಸರ ಸ್ನೇಹಿ ಮತ್ತು ಸ್ವಯಂ ನಿರ್ಮಿತವಾದದ್ದು ಎಂಬುದು ವಿಶೇಷ. ಆ ಕಾಲದಲ್ಲಿ ಪ್ರಚಲಿತವಿದ್ದ ಹೆಸರುವಾಸಿ ಬಣ್ಣಗಳು ವಿದೇಶಿಯಾಗಿದ್ದು ದುಬಾರಿ ಬೆಲೆಯದಾಗಿದ್ದವು. ಇವರೇ ಸ್ವತಃ ಗ್ರಂದಿಗೆ ಅಂಗಡಿಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಸಿದ್ಧಪಡಿಸಿದ ಬಣ್ಣಗಳು ಯಾವುದೇ ವಿದೇಶೀ ಬಣ್ಣಗಳಿಗಿಂತಲೂ ಕಡಿಮೆಯಲ್ಲ ಮತ್ತು ಕಡಿಮೆ ದರದಲ್ಲಿ ಸಿದ್ಧಪಡಿಸಲು ಸಾಧ್ಯವೆಂದು ತೋರಿಸಿಕೊಟ್ಟವರಿವರು. ರಾಮಾಯಣವನ್ನು ಸುಮಾರು ೭೦೦ ಚಿತ್ರಗಳ ಮೂಲಕ ರಚಿಸಿ ರಾಮಾಯಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದವರು. ಭಾಗವತವನ್ನೂ ಸಹ ಚಿತ್ರಗಳ ಮೂಲಕ ತೆರೆದಿಟ್ಟವರು. ಪೂರ್ಣ ಭಗವದ್ಗೀತೆಯ ಶ್ಲೋಕಗಳನ್ನೇ ಬಳಸಿಕೊಂಡು ರಚಿಸಿದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಬೃಹತ್ ವರ್ಣಚಿತ್ರ ಇವರ ಸಾಧನೆಗೆ ಹಿಡಿದ ಕನ್ನಡಿ. ವಾಯುಸ್ತುತಿ (ದೇವನಾಗರಿ ಮತ್ತು ಕನ್ನಡ ಲಿಪಿಗಳಲ್ಲಿ ಪ್ರತ್ಯೇಕವಾಗಿ) ಬಳಸಿ ರಚಿಸಿದ ಮಾರುತಿ, ಲಲಿತಾ ಸಹಸ್ರನಾಮ ಬಳಸಿ ರಚಿಸಿದ ಲಲಿತಾ ತ್ರಿಪುರ ಸುಂದರಿ, ವಿಷ್ಣು ಸಹಸ್ರನಾಮ ಬಳಸಿ ರಚಿಸಿದ ವಿಷ್ಣು, ಮುಂತಾದುವುಗಳನ್ನು ಈಗಿನಷ್ಟು ಸೌಲಭ್ಯಗಳು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ರಚಿಸಿರುವುದು ಇವರ ಅಗಾಧ ಕರ್ತೃತ್ವ ಮತ್ತು ತಾಳ್ಮೆಗೆ ಉದಾಹರಣೆಗಳಾಗಿವೆ. ಶ್ರೀರಾಮ ಪಟ್ಟಾಭಿಷೇಕ. ವಿಶ್ವರೂಪದರ್ಶನದ ಚಿತ್ರಪಟಗಳೂ ನಿಬ್ಬೆರಗಾಗಿಸುತ್ತವೆ. ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ್ದ ಇಂಗ್ಲೆಂಡಿನ ಆಗಿನ ಎಲ್ಲೆಗಳನ್ನು ತೋರಿಸುವ ದಿ ಗಾರ್ಡಿಯನ್ ಏಂಜೆಲ್ ಆಫ್ ದಿ ಬ್ರಿಟಿಷ್ ಎಂಪೈರ್ ಚಿತ್ರ ವಿದೇಶೀಯರೂ ಸೇರಿದಂತೆ ಎಲ್ಲರನ್ನೂ ಆಕರ್ಷಿಸಿದೆ. ಇದರಲ್ಲಿ ಮುಖಭಾಗ ಇಂಗ್ಲೆಂಡ್ ಆಗಿದ್ದರೆ, ಕೈಗಳಲ್ಲಿ ಆಸ್ಟ್ರೇಲಿಯಾ, ಕೆನಡಾ, ತೊಡೆಯಲ್ಲಿ ಅಮೆರಿಕಾ ಪ್ರಾಂತಗಳು, ಹೂ ಮುಡಿದಂತೆ ತೋರುವ ಐರ‍್ಲೆಂಡ್, ಕಿರೀಟದಲ್ಲಿ ಸ್ಕಾಟ್ಲೆಂಡ್, ಇತ್ಯಾದಿಗಳನ್ನು ತೋರಿಸಿದ್ದರೆ ಹೃದಯ ಭಾಗದಲ್ಲಿ ಭಾರತವನ್ನು ತೋರಿಸಲಾಗಿದೆ. ಇವರ ಅನೇಕ ಕೃತಿಗಳು ಈಗ ಅಲಭ್ಯವಾಗಿವೆ. ಇರುವ ಕೃತಿಗಳೂ ಜೀರ್ಣವಾಗಿ ಅಳಿಯುವ ಹಂತದಲ್ಲಿವೆ. ಹಲವಾರು ಕೃತಿಗಳು ಸಂಬಂಧಿಗಳ ಮನೆಯಲ್ಲಿವೆ. ಹಲವನ್ನು ಕೆಳದಿ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು. ಇವರ ರಚನೆಗಳನ್ನು ಸಂರಕ್ಷಿಸುವ ಕೆಲಸವನ್ನು ಈಗ ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತಕ್ಕೊಳಪಟ್ಟ ಕೆಳದಿ ವಸ್ತು ಸಂಗ್ರಹಾಲಯ ಮಾಡಬೇಕಿರುವುದು ಇಂದಿನ ಅಗತ್ಯವಾಗಿದೆ. ಸಂಬಂಧಿಸಿದವರು ಈ ಕೆಲಸ ಮಾಡುವರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

-ಕ.ವೆಂ.ನಾಗರಾಜ್.

ಆಧಾರ: ಕೆಳದಿ ಗುಂಡಾಜೋಯಿಸರ ಕೃತಿ: ಚಿತ್ರ ಕಲಾವಿದ ಕವಿ ಲಿಂಗಣ್ಣಯ್ಯ ಮತ್ತು ಸೋದರ

            ಕವಿಸುರೇಶರ ಕೃತಿ: Karmayogi Kalavallabha S.K. LINGANNAIYA’

****************

[ಮಾಹಿತಿಗಾಗಿ:

ಇದು ಸಂಪದದಲ್ಲಿ ನನ್ನ 300ನೆಯ ಬರಹ. ಈ ಸಂದರ್ಭದಲ್ಲಿ ಸಂಪದದ ನಿರ್ವಹಣಾತಂಡಕ್ಕೆ, ಎಲ್ಲಾ ಸಂಪದಿಗರಿಗೆ ಮತ್ತು ಓದುಗರಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಶ್ರೇಯವನ್ನು ಸಂಪದಿಗರಿಗೆ   ಅರ್ಪಿಸುತ್ತೇನೆ.]

**********************

 

 

 

 

 

 

 

 

 


Comments