"ರಾಜ ಕುಮಾರ" ಬರಿ ಹೆಸರಲ್ಲ ಅದೊಂದು ಸಂಸ್ಕೃತಿ

"ರಾಜ ಕುಮಾರ" ಬರಿ ಹೆಸರಲ್ಲ ಅದೊಂದು ಸಂಸ್ಕೃತಿ

   

     ಹದಿನೆಂಟನೆಯ ಶತಮಾನದ ಕೊನೆಯ ಭಾಗ ವಿಜ್ಞಾನದ ಆವಿಷ್ಕಾರಗಳ ಭರಾಟೆಯ ಕಾಲಮಾನ. ಆ ಶತಮಾನ ಅನೇಕ ಸಂಶೋದನೆಗಳನ್ನು ಜಗತ್ತಿಗೆ ನೀಡಿತು. ನೂತನ ಆವಿಷ್ಕಾರಗಳು ಮನುಷ್ಯವರ್ಗವನ್ನು ಹೊಸ ಯುಗಕ್ಕೆ ಎಳೆತಂದವು. ಬಸವನ ಹುಳುವಿನಂತೆ ತೆವಳುತ್ತಿದ್ದ ಮನುಷ್ಯನ ನಿಧಾನ ಗತಿಯ ಜೀವನಕ್ಕೆ ಒಂದು ನಾಗಾಲೋಟ ಬಂತು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಂತೆ ಮನರಣಜನಾ ಕ್ಷೇತ್ರವೂ ಸಹ ಹೊಸ ದಿಕ್ಕನೆಡೆಗೆ ಮುಖಮಾಡಿತು.

      ನಾಟಕ, ಯಕ್ಷಗಾನ, ಬಯಲಾಟ, ದೊಡ್ಡಾಟ, ಸಣ್ಣಾಟ, ತಾಳಮದ್ದಲೆ, ಕಿಳ್ಳಿಕ್ಯಾತರ ಆಟ, ಹರಿಕಥಾ ಕಾಲಕ್ಷೇಪ ಮುಂತಾದವು ನಮ್ಮ ಪೂರ್ವಿಕರ ಮನರಂಜನೆಯ ಪ್ರಾಕಾರಗಳಾಗಿದ್ದವು.  ಕ್ರಿ.ಶ.1877 ರಿಂದ 1923ರ ವರೆಗೆ ನೆಳಲು ಬೆಳಕು ಧ್ವನಿಗಳ ಕುರಿತಂತೆ ಹೊಸ ಹೊಸ ಆವಿಷ್ಕಾರಗಳಾದ ಕಾರಣ ' ಆನ್ ಫಿಲಂ ಫೋಟೋಗ್ರಫಿ, ' ಮೂವಿಂಗ್ ಔಟ್ ಲೆನ್ಸ್' ಮತ್ತೂ ' ಮ್ಯುಜಿಕಲ್ ಸೌಂಡ್ ಗಳ ಅಳವಡಿಕೆ ವಿಧಾನಗಳ ಬಗ್ಗೆ ಅಮೆರಿಕಾದ ಜಾನ್ ಕಾರ್ಬೆಜ್, ಫ್ರಾನ್ಸನ ಲೂಯಿಸ ಪ್ರಿನ್ಸ್, ನಿಕೊಲಸ್ ಸೆವೆನ್, ಜಿನ್ ಲುಮಿನಿಯರ್ ಮತ್ತು ಲೆಡ್ ಫಾರೆಸ್ಟ್ ಮುಂತಾದ ಸಂಶೋಧಕರ ಸಂಶೋಧನೆಯ ಪರಿಣಾಮಗಳಿಂದಾಗಿ ನೆಳಲು ಬೆಳಕಿನಾಟ 'ಸಿನೆಮಾ' ಎಂಬ ನೂತನ ಹೆಸರಿನಲ್ಲಿ ದೃಶ್ಯ ಚಲನೆ ಅಭಿನಯ ಮಾತು ಮತ್ತೂ ಸಂಗೀತಗಳು ಹದವರಿತು ಮುಪ್ಪುರಿಗೊಂಡು ಬಂದವೊ ಅದು ಎಲ್ಲ ಮನರಂಜನಾ ಪ್ರಾಕಾರಗಳನ್ನು ಹಿಮ್ಮೆಟ್ಟಿ ತಾನೇ ತಾನಾಗಿ ವಿಜ್ರಂಭಿಸಲು ಪ್ರಾರಂಭಿಸಿತು. ಅಲ್ಲದೆ 'ಸಿನೆಮಾ' ಮಾಧ್ಯಮಒಂದು ಸಮೂಹ ಮನರಂಜನಾ ಮಾದ್ಯಮವಾಗಿ ಬೆಳಕಿಗೆ ಬಂತು.

      ಆಧುನಿಕ ಸಿನೆಮಾ ಒಂದು ಪ್ರಬಲ ಮಾಧ್ಯಮವಾಗಿ ಬೆಳೆಯಲು ಪ್ರಮುಖ ಕಾರಣಗಳೆಂದರೆ ಅದು ಅಲ್ಪಾವಧಿಯಲ್ಲಿ ಅಸಂಖ್ಯ ಜನರನ್ನು ತಲುಪಬಲ್ಲ ಸಂದೇಶ ಬೀರಬಲ್ಲ ಸರ್ವರಿಗೂ ಪ್ರಿಯ ಅಗ್ಗ್ದ ಮನರಂಜನಾ ಮಾಧ್ಯಮವಾಗಿ ಪ್ರಚಲಿತಕ್ಕೆ ಬಂದುದು. ಭಾರತದ ಸಿನೆಮಾ ಒಂದು ಪ್ರಬಲ ಉದ್ಯಮವಾಗಿ ಬೆಳೆದು ನಿಂತಿದೆ. ಹಿಂದಿ ಭಾಷೆ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರತಿವರ್ಷ ಸರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಚಲನಚಿತ್ರಗಳು ತಯಾರಾಗಿ ಜನಸಮೂಹವನ್ನು ರಂಜಿಸುತ್ತ ಬಂದಿವೆ. ಆಧುನಿಕ ಸಿನೆಮಾ ಮಾದ್ಯಮಕ್ಕೆ ಸುಮಾರು ಎಂಭತ್ತು ವರ್ಷಗಳ ಇತಿಹಾಸವಿದೆ. ಭಾರತದ ಚಲನಚಿತ್ರ ರಂಗಕ್ಕೆ ಭದ್ರ ಬುನಾದಿ ಹಾಕಿ ಅದಕ್ಕೊಂದು ರೂಪ ಕೊಟ್ಟವನು ಭಾರತದ ಚಲನಚಿತ್ರ ರಂಗದ ಪಿತಾಮಹ ದಾದಾ ಸಾಹೇಬ ಫಾಲ್ಕೆ. ನಂತರ ಭಾರತದ ಸಿನೆಮಾ ಇಟ್ಟದ್ದು ದೈತ್ಯ ಹೆಜ್ಜೆ ಬೆಳೆದದ್ದು ಅದ್ಭುತ ರೀತಿಯಲ್ಲಿ. ಭಾರತಕ್ಕೆ ಮೂಕಿ ಮತ್ತೂ ಟಾಕಿ ಚಲನಚಿತ್ರಗಳನ್ನು ನೀಡಿದ ಫಾಲ್ಕೆ ಭಾರತ ಸಿನೆಮಾದ ಆದ್ಯ ಪ್ರವರ್ತಕ ಎಂದು ಗುರುತಿಸಲ್ಪಟ್ಟಿದ್ದಾನೆ. ಭಾರತದ ಪ್ರಥಮ ವಾಕ್ ಚಿತ್ರ ಅಲಂಆರ ಅದರ ನಾಯಕ ಪೃಥ್ವಿ ರಾಜ್ಕಪೂರ ನಂತರ ಭಾರತದ ಸಿನಿಮಾ ಸಾಗಿದ್ದು ರಾಜಮಾರ್ಗದಲ್ಲಿ ಮೊದ ಮೊದಲು ಧಾರ್ಮಿಕ ಪೌರಾಣಿಕ ಜಾನಪದ ಐತಿಹಾಸಿಕ ಮತ್ತು ದೇಶಭಕ್ತಿ ಬಿಂಬಿಸುವ ಅನೇಕ ಚಿತ್ರಗಳು ಭಾರತದ ಎಲ್ಲಾ ಭಾಷೆಗಳಲ್ಲಿ  ಮೂಡಿ ಬಂದವು. ಏಕತಾನತೆಯಲ್ಲಿ ಸಾಗುತ್ತಿದ್ದ ಭಾರತೀಯ ಚಲನ ಚಿತ್ರಗಳು ಸಾಮಾಜಿಕ ಕಥಾನಕ ಆಧಾರಿತ ತಯಾರಿಕೆಗಳಿಗೆ ತೆರದುಕೊಂಡು ವಿಜೃಂಭಿಸಿ ಚಲನಚಿತ್ರರಂಗ ಸಶಕ್ತವಾಗಿ ಬೆಳೆದು ಬಂದಿತು. ಈ ಬೆಳವಣಿಗೆಗೆ ಕನ್ನಡ ಚಲನಚಿತ್ರ ರಂಗವೂ ಹೊರತಾಗಲ್ಲಿಲ್ಲ.

    1950ರಿಂದ 1970ರ ಕಾಲಾವಧಿಯಲ್ಲಿ ಭಾರತೀಯ ಚಲನ ಚಿತ್ರ ರಂಗ ಉಚ್ಚ್ರಾಯ ಸ್ಥಿತಿಗೆ ಏರಿತು. ಸಾಮಾಜಿಕ ಕಥಾನಕಗಳ ಆಯ್ಕೆ ಅತ್ಯತ್ತಮ ಚಿತ್ರಕಥೆ ಸಂಭಾಷಣೆ ಹಾಡುಗಳು ಸಂಗೀತ ಸಂಯೋಜನೆ ತಾರಾಗಣದ ಆಯ್ಕೆ ನಿರ್ದೇಶನ ಗಳಿಂದಾಗಿ ನಾಯಕ ನಟ ನಟಿಯರುಗಳಿಗೆ ಒಂದು ತಾರಾಮೌಲ್ಯ ತಂದು ಕೊಟ್ಟಂತಹ ಕಾಲ. ಆ ಕಾಲದಲ್ಲಿ ಎಲ್ ಭಾಷೆಗಳಲ್ಲಿ ಪ್ರಬುದ್ಧ ನಟ ನಟಿಯರು ಬಂದರು. ಅಲ್ಲಿ ಅಭಿನಯದಲ್ಲಿ ತಾರಾಪಟ್ಟಕ್ಕೆ ಒಂದು ಆರೋಗ್ಯಕರವಾದ ಸ್ಪರ್ದೆಇತ್ತು. ನಟನ ಅಥವಾ ನಟಿಯ ನಟನಾ ಚಾತುರ್ಯವನ್ನನುಸರಿಸಿ ಶ್ರೇಷ್ಟರನ್ನು ಗುರುತಿಸುವ  ಸದಭಿರುಚಿಯ ಪ್ರೇಕ್ಷಕರು ಇದ್ದರು. ಅವರು ಶ್ರೇಷ್ಟ ನಟ ನಟಿಯರು ಯಾರೆಂದು ತಿರ್ಮಾನಿಸಿ ಆರಾಧಿಸುತ್ತಿದ್ದರು. ಆ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲಿಯೂ ಸಹ ಕೆಲವು ಮೂಕಿ ಮತ್ತೂ ಟಾಕಿ ಚಿತ್ರಗಳು ಬಂದವು. ಸಮರ್ಥ ನಟರ ಮತ್ತು ನಟಿಯರ ನಿರೀಕ್ಷೆಯಲ್ಲಿ ಕನ್ನಡ ಚಿತ್ರರಂಗವಿತ್ತು. ಕಳೆದ ಶತಮಾನದ ಆರನೆ ದಶಕದಲ್ಲಿ ಎಲ್ಲ ಭಾಷೆಗಳ ಶ್ರೇಷ್ಟ ನಟ ನಟಿಯರ ಮಧ್ಯೆ ಒಂದು ಆರೋಗ್ಯಕರ ಪೈಪೋಟಿಯಿತ್ತು. ಹಿಂದಿಯಲ್ಲಿ ದಿಲೀಪಕುಮಾರ ರಾಜಕಪೂರ ದೇವಾನಂದ ಅಶೋಕಕುಮಾರ ರಾಜಕುಮಾರ ರಾಜೇಂದ್ರಕುಮಾರ ಮುಂತಾದವರು ನಾಯಕ ನಟರುಗಳಾಗಿದ್ದರೆ,  ತಮಿಳಿನಲ್ಲಿ ಶಿವಾಜಿಗಣೇಶನ್ ಎಮ್.ಜಿ. ರಾಮಚಂದ್ರನ್ ಜೆಮಿನಿಗಣೇಶನ್, ತೆಲುಗುನಲ್ಲಿ ಎ.ನಾಗೇಶ್ವರರಾವ ಎನ.ಟಿ.ರಾಮರಾವ ಎಸ್.ವಿ.ರಂಗರಾವ, ಮಲೆಯಾಳಂನಲ್ಲಿ ಪ್ರೇಮನಜೀರ ಮುಂತಾದವರು ಮುಂಚೂಣಿಯ ನಾಯಕರಾಗಿದ್ದರು. ಕನ್ನಡ ಚಲನಚಿತ್ರರಂಗ ಸಮರ್ಥ ನಾಯಕರಿಗಾಗಿ ಕಾಯುತ್ತಿತ್ತು. ಆ ಕಾಲಘಟ್ಟದಲ್ಲಿ ಮೂರು ನಾಯಕ ನಟರ ಆಗಮನ ಕನ್ನಡ ಚಿತ್ರರಂಗ ಕ್ಕಾಯಿತು. ಅವರೆ ಕುಮಾರ ತ್ರಯರೆಂದು ಖ್ಯಾತರಾದ ರಾಜಕುಮಾರ ಉದಯಕುಮಾರ ಮತ್ತು ಕಲ್ಯಾಣಕುಮಾರ.
 
     ಗುಬ್ಬಿ ನಾಟಕ ಕಂಪನಿಯ ಖ್ಯಾತ ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗ ಮುತ್ತುರಾಜನನ್ನು 1954 ರಲ್ಲಿ ಹೆಚ್ಎಲ್ಎನ್ ಸಿಂಹರವರು ರಾಜಕುಮಾರ ಎಂಬ ಹೊಸಹೆಸರನ್ನು ನೀಡಿ ತಮ್ಮ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೊಂದು ಹೊಸ ತಾರೆಯೊಂದನ್ನು ನೀಡಿದರು. ತಮ್ಮ ಪ್ರಥಮ ಪದಾರ್ಪಣೆಯಲ್ಲಿಯೆ ರಾಜಕುಮಾರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು, ಮುಂದೆ ಇದೇ ಸಾಧನೆಯನ್ನು ಶಂಕರನಾಗ 'ಒಂದನೊಂದು ಕಾಲದಲ್ಲಿ' ಚಿತ್ರದಲ್ಲಿ ಮಾಡಿದರು. ಇದು ಗಿರೀಶ ಕಾರ್ನಾಡರ ಸ್ವಂತ ನಿರ್ದೇಶನದ ಪ್ರಥಮ ಚಿತ್ರವಾಗಿತ್ತು. ಮುತ್ತುರಾಜ ಸಹ ಆ ಮೊದಲು ಗುಬ್ಬಿ ಕಂಪನಿಯ ನಟರೆ. ರಾಜಕುಮಾರ ಜೊತೆ ಆ ಚಿತ್ರದಲ್ಲಿ ಹಲವು ಪ್ರಮುಖ ನಟರ ಆಗಮನ ಕನ್ನಡ ಚಲನಚಿತ್ರ ರಂಗಕ್ಕಾಯಿತು. ಅವರಾರೆಂದರೆ ನರಸಿಂಹರಾಜು, ಜಿ.ವಿ.ಅಯ್ಯರ. ಅದರಲ್ಲಿಯ ಹಳಬರೆಂದರೆ ಫಂಡರಿಬಾಯಿ ಮಾತ್ರ. ಅವರು ಅದಾಗಲೆ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಹಿಂದಿ ಚಲನಚಿತ್ರಗಳಲ್ಲಿ ಕೂಡ ಅವರು ನಟಿಸಿದ್ದರು. 1954 ರಿಂದ 2006 ರವರೆಗೆ ರಾಜಕುಮಾರ ಅಕ್ಷರಶಃ ಕನ್ನಡ ಚಲನಚಿತ್ರರಂಗದ ಅನಿಭಿಷಿಕ್ತ ರಾಜನಂತೆ ಮೆರೆದರೆಂದರೆ ತಪ್ಪಾಗಲಾರದು.

     1955ರ ಆಸುಪಾಸಿನಲ್ಲಿಯೆ ಇನ್ನಿಬ್ಬರು ಕುಮಾರರ ಪ್ರವೇಶ ಕನ್ನಡ ಚಲನಚಿತ್ರ ರಂಗಕ್ಕಾಯಿತು. ನಾರಾಯಣಸ್ವಾಮಿ ಉದಯಕುಮಾರ ಎಂಬ ತಾರಾ ಹೆಸರಿನಿಂದ 'ರತ್ನಗಿರಿ ರಹಸ್ಯ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅವರ ನಾಯಕಿ ನಟಿ ಆಗಿನ ಕಾಲದ ಪ್ರಸಿದ್ಧ ಪಂಚಭಾಷಾ ತಾರೆ ಜಮುನ. ಜಾನಪದ ಕಥೆ ಉತ್ತಮ ಸಂಗೀತ ಅಭಿನಯಗಳ ಕಾರಣದಿಂದಾಗಿ ಅದು ಜನಪ್ರಿಯತೆ ಪಡೆಯಿತು. ಅದೇ ರೀತಿ ಕಲ್ಯಾಣ ಕುಮಾರ ಪ್ರವೇಶ ಕನ್ನಡ ಚಲನಚಿತ್ರ ರಂಗಕ್ಕಾಯಿತು. ಈ ಮೂವರೂ ಅಸಮಾನ ಬಲದ ತಾಕತ್ತಿನ ನಟರೆ. ಇವರ ನಾಯಕ ನಟ ಪಾತ್ರದ ಹಲವು ಚಿತ್ರಗಳು ತೆರೆಕಂಡು ಜನಪ್ರಿಯತೆಯನ್ನು ಪಡೆದವು. ಆದರೆ ಕನ್ನಡ ಚಲನಚಿತ್ರರಂಗ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಮೂರು ನಾಯಕ ನಟರಿಗೆ ಚಿತ್ರತಯಾರಿಸುವಷ್ಟು ಚಿತ್ರರಂಗ ಬೆಳೆದಿರಲಿಲ್ಲ. ಹೀಗಾಗಿ ಕನ್ನಡ ಚಿತ್ರರಂಗವನ್ನೆ ನಂಬಿ ಬದುಕು ಸಾಗಿಸುವಂತಿರಲಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಕೆಲಸವಿಲ್ಲದಿದ್ದಾಗ ಬದುಕಿಗಾಗಿ ಬೇರೆ ಕೆಲಸ ಅನಿವಾರ್ಯವಿತ್ತು. ಹೀಗಾಗಿ ರಾಜಕುಮಾರ ಗುಬ್ಬಿ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಿದ್ದರು. ಉದಯ ಕುಮಾರ ನಾಟಕಗಳಲ್ಲಿನ ಅಭಿನಯವಲ್ಲದೆ ಖಳ ಮತ್ತು ಚಾರಿತ್ರಿಕ ಪಾತ್ರಗಳ ನಟನೆಯೆಡೆಗೆ ಹೊರಳಿಕೊಂಡರು. ಕಲ್ಯಾಣಕುಮಾರ ತಮಿಳು ಚಿತ್ರರಂಗಕ್ಕೆ ತಮ್ಮ ಭವಿಷ್ಯವನ್ನರಸಿ ಹೋಗಿ ಯಶಸ್ಸು ಪಡೆದರು. ಅವರ ಅನೇಕ ಚಿತ್ರಗಳು ರಜತೋತ್ಸವ ಮತ್ತೂ ಶತದಿನೋತ್ಸವ ಭಾಗ್ಯ ಪಡೆದವು. ಹೀಗಾಗಿ ರಾಜಕುಮಾರ ನಾಟಕಗಳಲ್ಲಿ ಅಭಿನಯಿಸುತ್ತ ಅವಕಾಶಗಳಿಗಾಗಿ ಕಾದರು. ನಟಿಸಿದರು ಬೆಳೆದರು ಯಾವ ಮಟ್ಟಕ್ಕೆಂದರೆ ಕನ್ನಡ ಚಿತ್ರರಂಗದ ಮೇರುನಟ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತರು ದಂತಕಥೆಯಾದರು.

     ಮುತ್ತುರಾಜ ಹುಟ್ಟಿದ್ದು 1928ನೇ ಇಸ್ವಿ ಎಪ್ರೀಲ್ 24 ರಂದು. ಅವರಿಗೆ ವರದಪ್ಪ ಎಂಬ ಸೋದರ ಮತ್ತು ಇಬ್ಬರು ತಂಗಿಯ ರಿದ್ದರು. ಇವರು ತಮ್ನ ತಂಗಿಯರ ಜೊತೆ ಗುಬ್ಬಿ ನಾಟಕ ಕಂಪನಿಯ ನಾಟಕಗಳಲ್ಲಿ ಬಾಲಪಾತ್ರ ಗಳಲ್ಲಿ ಅಭಿನಯಿಸುತ್ತಿದ್ದರು. ಇವರ ಓದು ಕನ್ನಡ ನಾಲ್ಕನೆಯ ತರಗತಿಯ ವರೆಗೆ ಮಾತ್ರ. ಇವರಿಗೆ ಅಕ್ಷರಾಭ್ಯಾಸ ಮಾಡಿಸಿದ್ದು ಅವರ ತಾತ ಬಾಲೇಗೌಡರು. ಅವರು ಪಾಠಾಶಾಲೆಯಲ್ಲಿ ಕಲಿಯಲಾಗದ್ದನ್ನು ಜೀವನದ ಶಾಲೆಯಲ್ಲಿ ನಾಟಕ ಚಲನಚಿತ್ರ ರಂಗಗಳಲ್ಲಿ ಕಲಿತರು ಬೆಳೆದರು ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. ಶುದ್ಧ ಅಸ್ಖಲಿತ ಭಾಷಾಪ್ರಯೋಗ ಸ್ಪಷ್ಟ ಉಚ್ಛಾರಣೆ ಗಳಿಂದಾಗಿ ಕನ್ನಡ ಭಾಷೆಯನ್ನು ಹೇಗೆ ಉಪಯೋಗಿಸ ಬೇಕೆಂಬುದಕ್ಕೆ ಒಬ್ಬ ಮಾದರಿವ್ಯಕ್ತಿ ಯಾಗುಳಿಯುತ್ತಾರೆ. ಅವರು ಅಭಿನಯಿಸದ ಪಾತ್ರ ವೈವಿಧ್ಯಗಳಿಲ್ಲ. ಅವರು ಜಾನಪದ ಪೌರಾಣಿಕ ಐತಿಹಾಸಿಕ ಧಾರ್ಮಿಕ ಬಾಂಡ್ಶೈಲಿಯ ಪಾತ್ರಗಳಿರಲಿ ಸಾಮಾಜಿಕ ಪಾತ್ರಗಳಿರಲಿ ಎಲ್ಲದಕ್ಕೂ ಒಪ್ಪುವ ಅಭಿನಯ ಅವರದು. ಅವರ ಪಾತ್ರೋಚಿತ ಅಭಿನಯ ಸಂಭಾಷಣೆ ವೈಖರಿ ಪಾತ್ರವೇ ತಾವಾಗುವ ಪರಿ ಪ್ರೇಕ್ಷಕ ರನ್ನು ಅವರೆಡೆಗೆ ಸೆಳೆದು ಬಿಡುತ್ತಿತ್ತು. ಹೀಗಾಗಿ ರಾಜ್ ಅಭಿನಯದ ಚಿತ್ರ ಬಿಡುಗಡೆ ಎಂದರೆ ಅದೊಂದು ಹಬ್ಬ. ಕನ್ನ್ನಡ ಚಿತ್ರ ಪ್ರೇಕ್ಷಕರ ಅಭಿಮಾನಿ ದೇವರಾದರು, ಬರಿ ನಟ ಅಲ್ಲ ಒಂದು ಸಂಸ್ಕೃತಿಯಾಗಿ ಬೆಳೆದು ನಿಂತರು.

     ಕನ್ನಡದಷ್ಟೆ ಪಾತ್ರೋಚಿತವಾಗಿ ಬರುತ್ತಿದ್ದ ಸಂಸ್ಕೃತ ಮತ್ತೂ ಇಂಗ್ಲೀಷ್ ನುಡಿಗಟ್ಟುಗಳನ್ನು ಎಷ್ಟು ಅಚ್ಚುಕಟ್ಟಾಗಿ ಸಂಭಾಷಣೆ ಜೊತೆಗೆ ಉಪಯೋಗಿಸುತ್ತಿದ್ದರೆಂದರೆ ಅವರು ಆ ಭಾಷೆಗಳಲ್ಲಿ ಪರಿಣಿತರೇನೋ ಎಂಬಷ್ಟು ಛಾಪು ಅವರದಾಗಿರುತ್ತಿತ್ತು. ಹೀಗಾಗಿ ಅವರು ಎಲ್ಲ ವರ್ಗದವರ ಎಲ್ಲ ಸ್ಥರಗಳ ಪ್ರೇಕ್ಷಕರ ಮನಸೂರೆಗೊಂಡರು. ಇದಕ್ಕೊಂದು ಉದಾಹರಣೆ ನೀಡುವುದಾದಲ್ಲಿ 'ನ್ಯಾಯವೇ ದೇವರು' ಚಿತ್ರದಲ್ಲಿ ಶೇಕ್ಸಪೀಯರ್ ನಾಟಕದ ಸನ್ನಿವೇಶ ವೊಂದು ಬರುತ್ತದೆ. ಉದ್ದಾದ ಆ ಸಂಭಾಷಣೆಯನ್ನು ಎಷ್ಟು ಭಾವ ಪೂರ್ಣವಾಗಿ ಸ್ಪುಟವಾಗಿ ಒಪ್ಪಿಸದ್ದಾರೆಂದರೆ ಅವರು ಇಂಗ್ಲೀಷ್ ಪರಿಣತರೇನೋ ಎನ್ನುವ ಮಟ್ಟಿಗಿನ ಛಾಪು ನೀಡುತ್ತಾರೆ. ಆ ಪರಿಪೂರ್ಣತೆ ಸಾಧಿಸಲು ಅವರು ತಮ್ಮ ಆ ಚಿತ್ರದ ಸಹನಟ ಸಂಪತ್ರವರ ಸಹಾಯ ಪಡೆಯಲು ಯಾವುದೇ ಅಹಂ ಅವರಿಗೆ ಅಡ್ಡ ಬರುವುದಿಲ್ಲ. ಈ ತನ್ಮಯತೆಯೆ ಅವರನ್ನು ಆ ಮಟ್ಟಿಗೆ ಬೆಳೆಸಿ ನಿಲ್ಲಿಸಿತು ಎಂದರೆ ತಪ್ಪಾಗಲಾರದು. ರಾಜಕುಮಾರ ಒಬ್ಬ ಸುಂದರ ಆಕರ್ಷಕ ಮೈಕಟ್ಟಿನ ಸ್ಪುರದ್ರೂಪಿ ನಟ, ಅಲ್ಲದೆ ಅವರಲ್ಲಿ ಆಂತರಿಕ ಸೌಂದರ್ಯ ಕೂಡ ಇದ್ದುದು ಬಹಳ ಮುಖ್ಯ ವಾಗುತ್ತದೆ. ಅವರು ಚಿತ್ರ ನಿರ್ಮಾಪಕರ ಡಾರ್ಲಿಂಗ್ ಆಗಿದ್ದರು. ನಿರ್ಮಾಪಕರಿಂದ ಅವರು ಯಾವುದೇ ವಿಶೇಷ ಸವಲತ್ತುಗಳನ್ನು ಅವರು ಬಯಸು ತ್ತಿರಲಿಲ್ಲ. ಸಹನಟರೊಂದಿಗೆ ತಾಂತ್ರಿಕ ವರ್ಗದವರೊಂದಿಗೆ ಅದೇ ಮುಗ್ಧತೆಯಿಂದ  ಬೆರೆಯತ್ತಿದ್ದರು. ಅವರ ಜೊತೆ ಕುಳಿತು ಸಹ ಭೋಜನ ಮಾಡುತ್ತಿದ್ದರು. ಅವರು ಉಂಡ ಊಟವನ್ನೆ ಇವರೂ ಉಣ್ಣುತ್ತಿದ್ದರು. ಪ್ರಸಿದ್ಧ ನಟನೆಂಬ ಹಮ್ಮು ತೋರದೆ ಎಲ್ಲರೋಂದಿಗೆ ಸಹಜವಾಗಿ ಬೆರೆಯುತ್ತಿದ್ದರು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಂಡು ಬಂದಿದ್ದರು. ಸಂಭಾವನೆ ವಿಷಯದಲ್ಲಿ ಎಂದಿಗೂ ನಿರ್ಮಾಪಕರೊಂದಿಗೆ ತಕರಾರು ಮಾಡಿಕೊಳ್ಳಲಿಲ್ಲ. ಈ ಮನೋಭಾವದಿಂದಾಗಿ ಅವರು ಕೆಲವು ಸಲ ಶೋಷಣೆಗೊಳಗಾಗಿದ್ದಿರಬಹುದು ಎಂದೆಸುತ್ತದೆ. ಇದನ್ನು ಅವರು ಎಂದಿಗೂ ಹೊರಗೆ ಹೇಳಿಕೊಂಡವರಲ್ಲ. ಇದು ಸುಸಂಸ್ಕೃತ ಮನಸ್ಸಿಗೆ ಹಿಡಿದ ಕನ್ನಡಿ. ಅವರೊಬ್ಬ ನಿದೇಶಕನನಟ ಎಂದಿಗೂ ಅವರೊಂದಿಗೆ ಅಹಮಿಕೆ ತೋರಿಸಲಿಲ್ಲ.
ಹೀಗಾಗಿ ಅವರು ಕನ್ನಡ ಚಲನಚಿತ್ರರಂಗದ ಅಜಾತ ಶತ್ರುವಾಗಿ ಬೆಳೆದರು. 1954 ರಿಂದ 2006ರ ಅವಧಿ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಪ್ರಮುಖ ಕಾಲಘಟ್ಟವೆಂದೇ ಹೇಳಬೇಕು. ಅವರ ಬದುಕಿದ ಆ ಸಂಧರ್ಭದಲ್ಲಿ ಅವರ ಜೊತೆಗೆ ನಟಿಸಿದವರು ಒಡನಾಟವಿರಿಸಿಕೊಂಡವರು ಅವರ ಸಂಪರ್ಕಕ್ಕೆ ಬಂದವರು ಧನ್ಯರು.

    ಭಾರತೀಯ ಚಲನಚಿತ್ರ ರಂಗವನ್ನು ಒಮ್ಮೆ ಅವಲೋಕಿಸಿದರೆ ಅಭಿನಯ ಲೋಕದ ವಿರಾಟರ ದರ್ಶನವೆ ನಮಗಾಗುತ್ತದೆ. ದಿಲೀಪಕುಮಾರ ಅಭಿನಯದ ಗ್ಯಾಮ್ಯಪಾತ್ರಗಳು, ರಾಜಕಪೂರನ ಮುಗ್ಧಪಾತ್ರಗಳು, ದೇವಆನಂದನ ಆಧುನಿಕತೆಯ ಬಿಂದಾಸ್ ಪಾತ್ರಗಳು, ಅಶೋಕಕುಮಾರ, ರಾಜಕುಮಾರ ರಾಜೇಂದ್ರಕುಮಾರ ಮುಂತಾದವರ ಸತ್ವಪೂರ್ಣ ಅಭಿನಯದ ಪಾತ್ರಗಳು,  ತಮಿಳಿನ ಶಿವಾಜಿ ಗಣೇಶನ್, ಎಮ್ಜಿಆರ್, ಜೇಮಿನಿಗಣೇಶನ್, ತೆಲುಗಿನ ಎ.ನಾಗೇಶ್ವರರಾವ್, ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಮಲೆಯಾಳಂನ ಪ್ರೇಮ್ನಜೀರ್, ಬೆಂಗಾಲಿಯ ಉತ್ತಮಕುಮಾರ ಮುಂತಾದವರ ಅದ್ಭುತ ನಟನಾವೈಖರಿ ನಮ್ಮ ಕಣ್ಮುಂದೆ ಬರುತ್ತದೆ. ಇವರೆಲ್ಲರ ಹೆಗಲೆಣೆಯಾಗಿ ನಿಲ್ಲುತ್ತಾರೆ. ಹಾಲಿವುಡ್ನ ಖ್ಯಾತನಟ ಫ್ರಾಂಕ ಸಿನಾಟ್ರಾಗೆ ಸಮ ನಮ್ಮ ರಾಜಕುಮಾರ. ಇವರೆಲ್ಲರಿಗೂ ಮಿಗಿಲಾಗಿ ರಾಜಕುಮಾರ ರಾಜ್ಯದ ಭಾಷೆ, ಚಿತ್ರರಂಗದ ಉಳಿವಿಗೆ ಪ್ರಕೃತಿ ವಿಕೋಪ ಸಂಭವಿಸಿದ ಸಂಧರ್ಭಗಳಲ್ಲಿ ಅವರು ಮಿಡಿದ ರೀತಿ ಎಲ್ಲರಿಗಿಂತಲೂ ಅವರನ್ನು ಉನ್ನತರ ಸ್ಥಾನದಲ್ಲಿ ನಿಲ್ಲಿಸುತ್ತದೆ. 1962 ರಲ್ಲಿ ಉತ್ರರ ಕರ್ನಾಟಕದಲ್ಲಿ ನೆರೆಹಾವಳಿ ಸಂಭವಿಸಿದಾಗ ಇಡೀ ಕನ್ನಡ ಚಿತ್ರರಂಗದ ಜೊತೆಗೆ ತೆರಳಿ ನಿಧಿ ಸಂಗ್ರಹಿಸಿ ಕೊಟ್ಟರು. ಗೋಕಾಕ ಚಳುವಳಿ ಕನ್ನಡದ ಅಳಿವು ಉಳುವಿನ ಪ್ರಶ್ನೆಯಾದಾಗ ಬೀದಿಗಳಿದು ಗೋಕಾಕ ವರದಿಗೆ ಬೆಂಬಲ ಸೂಚಿಸಿದರು. ಈ ಎಲ್ಲ ಕಾರಣ ಗಳಿಂದಾಗಿ ಅವರು ಮೇರು ಶಿಖರದೆತ್ತರಕ್ಕೆ ಬೆಳದು ನಿಂತರು. ಅವರನ್ನು ಜನ ನಟಸಾರ್ವಭೌಮ, ಕನ್ನಡ ಕಂಠೀರವ, ರಸಿಕರರಾಜ ಎಂದೆಲ್ಲ ಕರೆದು ಸಂಭ್ರಮಿಸಿದರು. ಅಮೆರಿಕಾದ ಕೆಂಟುಕಿಕರ್ನಲ್, ಕನರ್ಾಟಕರತ್ನ, ಮತ್ತು ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗಳು ಅವರನ್ನರಸಿ ಬಂದವು. 'ರಾಜಕುಮಾರ ಬರಿ ನಟನಲ್ಲ ಒಂದು ಸಂಸ್ಕೃತಿ' ಎಂಬ ಮಟ್ಟಿಗೆ ಅವರು ಬೆಳೆದರು. ಮುಂದೆ ಬರುವ ಎಲ್ಲ ಭಾವಿ ನಾಯಕನಟರಿಗೆ ಅವರೊಂದು ಮಾದರಿಯಾಗಿ ನಿಂತರು.

     ರಾಜಕುಮಾರ ಒಟ್ಟು ಅಭಿನಯಿಸಿದ ಚಿತ್ರಗಳ ಸಂಖ್ಯೆ 206. ತಮ್ಮ ನಟನೆಗೆ ಇಂತಹದೆ ಪಾತ್ರಗಳು ಸೂಕ್ತ ಎಂದು ಮಿತಿಹಾಕಿಕೊಳ್ಳಲಿಲ್ಲ. ವೈವಿಧ್ಯಪೂರ್ಣ ಪಾತ್ರಗಳಲ್ಲಿ ಅವರು ಅಭಿನಯಿಸಿದರು. ಮಹಿಷಾಸುರ ಮದರ್ಿನಿಯ ಖಳನಾಯಕನ ಪಾತ್ರ ನೋಡಿದರೆ ಇವತ್ತಿಗೂ ರೋಮಾಂಚನವೆನಿಸುತ್ತದೆ. ಅದೆ ರೀತಿ ಬಾಂಡ್ಶೈಲಿಯ ಚಿತ್ರಗಳಲ್ಲಿಂ
ಅಭಿನಯ ಅವರ ವೈವಿಧ್ಯಮಯ ನಟನೆಗೆ ಸಾಕ್ಷಿ. ಅವರ ಅಭಿನಯದ ಎಲ್ಲ ಚಿತ್ರಗಳು ಉತ್ತಮವೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದಲ್ಲಿ ರಾಣಿಹೊನ್ನಮ್ಮ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ, ಮಯೂರ, ವೀರಕೇಸರಿ, ಅಣ್ಣತಂಗಿ, ಉಯ್ಯಾಲೆ, ಸರ್ವಮಂಗಳ, ಮಂತ್ರಾಲಯ ಮಹಾತ್ಮೆ, ಭಕ್ತಕನಕದಾಸ, ಸರ್ವಜ್ಞ, ಸಂಧ್ಯಾರಾಗ, ಸಾಕ್ಷಾತ್ಕಾರ, ಕಸ್ತೂರಿನಿವಾಸ, ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಜೀವನ ಚೈತ್ರ ಮುಂತಾದವುಗಳು. ರಾಜಕುಮಾರ ಫಂಡರಿಬಾಯಿಯವರಿಂದ ಮೊದಲ್ಗೊಂಡು ಮಾಧವಿಯ ವರೆಗೆ ಆಯಾ ಕಾಲಘಟ್ಟದ ಪ್ರಮುಖ ನಟಿಯರೊಂದಿಗೆ ಅಭಿನಯಿಸಿದರು. ಎಲ್ಲರಿಗೂ ಸಮರ್ಥ ಜೋಡಿಯೇ ಅವರಾಗಿದ್ದರು. ಆದರೂ ಪ್ರಸಿದ್ಧ ತಾರಾ ಜೋಡಿಗಳೆಂದರೆ ಫಂಡರಿಬಾಯಿ, ಹರಿಣಿ, ಲೀಲಾವತಿ, ಜಯಂತಿ, ಭಾರತಿ, ಲಕ್ಷ್ಮಿ, ಜಯಪ್ರದ, ಸರಿತ, ಗೀತಾ ಮತ್ತೂ ಮಾಧವಿ ಯವರೊಂದಿಗೆ ಅಭಿನಯಿಸಿದ ಪಾತ್ರಗಳು. ರಾಜಕುಮಾರ ಬರಿ ನಾಯಕ ನಟ ಮಾತ್ರವಲ್ಲ ಅವರು ಸುಪ್ರಸಿದ್ಧ ಹಿನ್ನೆಲೆ ಗಾಯಕರೂ ಕೂಡ. ಅವರು 'ಸಂಪತ್ತಿಗೆ ಸವಾಲ್' ಚಿತ್ರದ ಮೂಲಕ ಹಿನ್ನೆಲೆ ಗಾಯಕ ರಾದರು. ಅಲ್ಲಿಯ ವರೆಗೆ ಅವರ ಪಾತ್ರಗಳ ಹಿನ್ನಲೆ ಗಾಯನ ಪಿ.ಬಿ.ಶ್ರೀನಿವಾಸರದು. ಇವತ್ತಿಗೂ ರಾಜಕುಮಾರ ಪಾತ್ರಗಳ ಪಿ.ಬಿ.ಶ್ರೀನಿವಾಸ ಹಾಡಿದ ಹಾಡುಗಳನ್ನೆ ರಾಜಕುಮಾರ ಹಾಡುಗಳಿಗಿಂತ ಹೆಚ್ಚಾಗಿ ಮೆಚ್ಚುವವರಿದ್ದಾರೆ. ಅವರೆಲ್ಲ ಸಂಪತ್ತಿಗೆ ಸವಾಲ್ ಚಿತ್ರದ ಮೊದಲಿನ ಚಿತ್ರಗಳ ಹಳೆಯ ಅಭಿಮಾನಿಗಳು. ನಂತರದ ಪೀಳಿಗೆ ಅವರನ್ನು ನಾಯಕನಟ ಮತ್ತು ಹಿನ್ನಲೆ ಗಾಯಕ ಎರಡೂ ರೂಪಗಳಲ್ಲಿ ಒಪ್ಪಿಕೊಂಡಿತು. ಅವರು 'ಜೀವನಚೈತ್ರ' ಚಿತ್ರಕ್ಕೆ ಹಾಡಿದ 'ನಾದಮಯ ಈ ಲೋಕವೆಲ್ಲ' ಹಾಡಿಗೆ ರಾಷ್ಟ್ರಮಟ್ಟದ ಶ್ರೇಷ್ಟ ಗಾಯಕ ಪ್ರಶಸ್ತಿ ಪಡೆದರು. ಬಹುಶಃ ಭಾರತೀಯ ಚಲನಚಿತ್ರ ನಟನೊಬ್ಬ ಅಭಿನಯಕ್ಕೆ ಮತ್ತೂ ಗಾಯನಕ್ಕೆ ಶ್ರೇಷ್ಟನಾಗಿ ಆಯ್ಕೆಯಾಗಿರುವುದು ರಾಜಕುಮಾರ ಒಬ್ಬರೆ ಎಂದು ಕಾಣುತ್ತದೆ. ಇದು ರಾಜಕುಮಾರ ಅಗ್ಗಳಿಕೆ.

     ರಾಜಕುಮಾರ ಒಬ ನಟನಾಗಿ ತನ್ನ ಕಲಾಬದುಕನ್ನು ಪ್ರಾರಂಭಿಸಿ ಒಂದು ಸಂಸ್ಕೃತಿ ಎನ್ನುವ ಮಟ್ಟಿಗೆ ಬೆಳೆದಂತೆ ಪ್ರೇಕ್ಷಕ ವರ್ಗ ಅವರನ್ನು ಒಂದು ದಂತಗೋಪುರದಲ್ಲಿ ಪ್ರತಿಷ್ಟಾಪಿಸಿದರೆನಿಸುತ್ತದೆ. ಇದು ಯಾವ ಮಟ್ಟಿಗೆ ಬೆಳೆಯಿತೆಂದರೆ ರಾಜಕುಮಾರ ಯಾವುದೆ ಚಿತ್ರದಲ್ಲಿ ಸಿಗರೇಟು ಸೇದುವುದಾಗಲಿ ಮಧ್ಯಪಾನ ಮಾಡುವುದಾಗಲಿ ಇನ್ನಾವುದೇ ದುಗರ್ುಣಗಳ ಪಾತ್ರಗಳಲ್ಲಿ ಅಭಿನಯಿಸು ವುದನ್ನಾಗಲಿ ಪ್ರೇಕ್ಷಕರು ಇಷ್ಟಪಡುತ್ತಿರಲಿಲ್ಲ. ಇದಕ್ಕೊಂದು ಉದಾಹರಣೆ ನೀಡುವುದಾದಲ್ಲಿ 1982-83 ಕಾಲವೆಂದು ಕಾಣುತ್ತದೆ . ಪ್ರಜಾವಾಣಿ ದಿನಪತ್ರಿಕೆಯಲ್ಲಿ ಗಂಗಾಧರ ಮೊದಲಿಯಾರರ ಲೇಖನವೊಂದು ವ್ಯಂಗ್ಯ ಚಿತ್ರದೊಂದಿಗೆ ಪ್ರಕಟಗೊಂಡಾಗ ಉಂಟಾದ ಪರಿಸ್ಥಿತಿ ರಾಜಕುಟುಂಬ ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ ಕೆಲಕಾಲ ಮೊದಲಿಯಾರ ಭಯದ ವಾತಾವರಣದಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ರಾಜಕುಮಾರ ಪತ್ರಿಕಾಧರ್ಮದ ಬಗ್ಗೆ ತಿಳುವಳಿಕೆಯುಳ್ಳವರು ಉದಾರತೆಯನ್ನು ತೋರಬಹುದಿತ್ತು ಅವರು ಒಂದು ಹೇಳಿಕೆ ನೀಡಿದ್ದರೆ ಪರಿಸ್ಥಿತಿ ತಿಳಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ ಇದು ಮುಂದೆ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಯಿತು. ರಾಜಕುಮಾರ ಪ್ರಶ್ನಾತೀತರಾಗಿ ಬೆಳೆದರು. ಮುಂದೆ ಅವರು ಫಂಡರಿಬಾಯಿಯವರು ನಿರ್ಮಿಸಿದ 'ಕೆರಳಿದಸಿಂಹ' ಬಿಟ್ಟರೆ ಬೇರೆ ಯಾವುದೇ ನಿರ್ಮಾಪಕರ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ಅವರ ಸ್ವಂತ ಬ್ಯಾನರ್ ಗಳ ಚಿತ್ರಗಳ ಅಭಿನಯಕ್ಕೆ ಮಾತ್ರ ಅವರು ಸೀಮಿತಗೊಂಡರು. ಸ್ವಂತ ಬ್ಯಾನರ್ ಗಳಲ್ಲಿಯೆ ಅತ್ಯುತ್ತಮ ಚಿತ್ರಗಳಲ್ಲಿ ಅವರು ಅಭಿನಯಿಸಿದರು. ಅವರ ಚಿತ್ರಗಳ ಯಶಸ್ಸಿಗೆ ಅವರ ಕುಟುಂಬವರ್ಗದವರು ಸೋದರ ವರದಪ್ಪ ಮತ್ತು ಅವರ ಚಿತ್ರಗಳ ಕಾಯಂ ಚಿತ್ರಸಾಹಿತಿ ಚಿ.ಉದಯ ಶಂಕರರ ಸಂಭಾಷಣೆ ಹಾಡುಗಳು ಉತ್ತಮಕಥೆ ನಿರ್ದೇಶನ   ತಾಂತ್ರಿಕಮೌಲ್ಯ ಸೂಕ್ತ ಹೊರಾಂಗಣ ತಾರಾಗಣಗಳ ಆಯ್ಕೆ ಎಲ್ಲವೂ ಕಾರಣವಾಗಿ ಚಿತ್ರಗಳು ಯಶಸ್ಸು ಪಡೆಯುತ್ತಿದ್ದವು. ರಾಜಕುಮಾರರ ಕಥಾನಕದ ಆಯ್ಕೆಯಲ್ಲಿಯ ದೂರದರ್ಶಿತ್ವ ವನ್ನು ಯಾರೂ ಮೆಚ್ಚಲೇಬೇಕು. ಇದಕ್ಕೊಂದು ಉದಾಹರಣೆ ನೀಡುವುದಾದಲ್ಲಿ 1970ರ ಕಾಲಘಟ್ಟ ಟಿ.ಕೆ.ರಾಮರಾವ ಜನಪ್ರಿಯ ಕಾದಂಬರಿಕಾರರು. ಅವರದೊಂದು ಕಾದಂಬರಿ 'ಕೋವಿ ಕುಂಚ' ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ಯಾಗಿ ಜನಪ್ರಿಯತೆ ಪಡೆದ ಕಾದಂಬರಿ. ಅಂತೆಯೆ ಅವರ ಇನ್ನೊಂದು ಕಾದಂಬರಿ 'ಬಂಗಾರದ ಮನುಷ್ಯ' ಸಹ ಅಷ್ಟೆ ಜನಪ್ರಿಯತೆ ಪಡೆದ ಕಾದಂಬರಿ. ಶ್ರೀನಿಧಿ ಪ್ರೊಡಕ್ಶನ್ ನಿರ್ಮಾಣ ಸಂಸ್ಥೆ ಈ ಎರಡರಲ್ಲಿ ಯವುದನ್ನು ತೆರೆಗೆ ತರುವುದು ಎಂದು ಜಿಜ್ಞಾಸೆಯಲ್ಲಿ ಬಿದ್ದಂತಹ ಕಾಲ ಅವರು ಯಾವುದೊಂದು ತೀರ್ಮಾನಕ್ಕೆ ಬಾರದೆ ಆಯ್ಕೆಯನ್ನು ರಾಜಕುಮಾರಗೆ ಬಿಡುತ್ತಾರೆ. ಆದರೆ ರಾಜಕುಮಾರ ಆಯ್ಕೆ 'ಬಂಗಾರದ ಮನುಷ್ಯ' ಆಗಿರುತ್ತದೆ. ಅದು ರಾಜಕುಮಾರರ ಅತ್ಯಂತ ಯಶಸ್ವಿ ಚಿತ್ರವೆನಿಸುತ್ತದೆ. ನಂತರ ಇದು ತೆಲುಗುನಲ್ಲಿ ಮರುನಿರ್ಮಾಣಗೊಳ್ಳುತ್ತದೆ.

     ವರದಪ್ಪ ಮತ್ತು ಚಿ.ಉದಯಶಂಕರರ ಮರಣ, ರಾಜಕುಮಾರರ ಅನಾರೋಗ್ಯ ಮತ್ತು ಮಂಡಿನೋವು ಅವರ ಚಿತ್ರಗಳು ಕಡಿಮೆಯಾಗುತ್ತವೆ. ಈ ಕಾಲದಲ್ಲಿಯೆ ನರಹಂತಕ ವೀರಪ್ಪನ್ ರಾಜಕುಮಾರರನ್ನು ಅವರ ಗಾಜನೂರು ಮನೆಯಿಂದ ಅಪಹರಿಸುತ್ತಾನೆ. 108 ದಿನಗಳ ಕಾಲ ಅವರನ್ನು ತನ್ನ ಬೇಡಿಕೆಗಳ ಈಡೇರಿಕೆಗಳಿಗಾಗಿ ಒತ್ತೆಯಾಳಾಗಿ ಇರಿಸಿಕೊಳ್ಳುತ್ತಾನೆ. ಅಲ್ಲಿಯ ವರೆಗೆ ಆತ ಅಪಹರಿಸಿದ ಒತ್ತೆಯಾಳುಗಳನ್ನು ಜೀವಂತ ಬಿಟ್ಟದ್ದು ಕಡಿಮೆ. ಕೃಪಾಕರ ಸೇನಾನಿ ಯವರನ್ನು ಬಿಟ್ಟರೆ ಬೇರೆಯಾರನ್ನೂ ಆತ ಜೀವಂತ ಬಿಟ್ಟಿರುವುದಿಲ್ಲ. ಮಾಜಿಮಂತ್ರಿ ನಾಗಪ್ಪರವರನ್ನು ಸಹ ಹತ್ಯೆ ಮಾಡಿರುತ್ತಾನೆ. ರಾಜಕುಮಾರ ಅಪಹರಣ ತಮಿಳ್ನಾಡು ಮತ್ತು ಕರ್ನಾಟಕ ಎರಡು ರಾಜ್ಯಗಳಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತದೆ. ಅನೇಕ ಸಂಧಾನಗಳು ನಡೆಯತ್ತವೆ. ಕೊನೆಗೆ ರಾಜಕುಮಾರ ನರಹಂತಕನ ಬಂಧನದಿಂದ ಮರಳಿ ಬರುತ್ತಾರೆ. ಈ ಘಟನೆ ಅವರನ್ನು ಘಾಸಿಗೊಳಿಸುತ್ತದೆ. ರಾಜಕುಮಾರ ಸನ್ನಡೆತೆಗೆ ಮಾರುಹೋದ ನರಹಂತಕ ಅವರನ್ನು ಬಿಟ್ಟುಕಳಿಸಿರುತ್ತಾನೆ. ಇದು ರಾಜಕುಮಾರ ವ್ಯಕ್ತಿತ್ವಕ್ಕೆ ಸಂದ ಗೌರವ. ರಾಜಕುಮಾರ ರಂತಹ ಸಜ್ಜನ ನಟನನ್ನೆ ಏಕೆ ವೀರಪ್ಪನ್ ಆಯ್ಕೆ ಮಾಡಿಕೊಂಡ ಎಂಬ ಬಗ್ಗೆ ಒಂದು ಸುದ್ದಿ ತುಣುಕು ಸಾರ್ವಜನಿಕ ವಲಯದಲ್ಲಿ ಸುಳಿದಾಡುತ್ತಿತ್ತು. ಛಾಯಾಚಿತ್ರಗ್ರಾಹಕರು ಮತ್ತು ಪರಿಸರ ಪ್ರೇಮಿಗಳಾದ ಕೃಪಾಕರ ಮತ್ತು ಸೇನಾನಿ ಯವರನ್ನು ತನ್ನ ಬೇಡಿಕೆಗಳ ಪೂರೈಕೆಗಾಗಿ ಅಪಹರಿಸಿದಾಗ ಅದು ಯಶಸ್ವಿಯಾಗದ ಸಂಧರ್ಭದಲ್ಲಿ ವೀರಪ್ಪನ್ನೊಡನೆ ನಡೆದ ಮಾತುಕತೆಯ ಸಂಧರ್ಭದ ವೇಳೆ ಅವರು ವೀರಪ್ಪನ್ ನಿಗೆ  ' ನಾವು ಜನಸಾಮಾನ್ಯರು ನಮ್ಮನ್ನು ನೀನು ಕೊಂದು ಹಾಕಿದರೂ ಸರಕಾರ ಕಾಳಜಿ ಮಾಡುವುದಿಲ್ಲ. ಉಳಿದವರ ಸಾವಿನ ಲೆಖ್ಖಕ್ಕೆ ನಮ್ಮ ಸಾವಿನ ಸಂಖ್ಯೆಯ ಸೇರ್ಪಡೆಯಷ್ಟೆ. ನೀನು ಸರಕಾರದ ಗಮನ ಸೆಳೆಯ ಬೇಕೆಂದರೆ ಯಾವುದೋ ಒಬ್ಬ ಪ್ರಮುಖ ರಾಜಕಾರಣಿಯನ್ನೊ ಇಲ್ಲ ಪ್ರಖ್ಯಾತನಟರನ್ನೊ ಅಪಹರಿಸಿದರೆ ಸರಕಾರ ಆಗ ಗಂಭೀರವಾಗಿ ಯೋಚಿಸುತ್ತದ' ಎಂಬ ಅರ್ಥಬರುವ ಅವರ ಸಂದರ್ಶನ ಪತ್ರಿಕೆಯಲ್ಲಿ ಪ್ರಕಟವಾದಂತೆ ನೆನಪು. ಆಗಲೆ ಆತ ಕೊನೆಗೆ ರಾಜಕುಮಾರ ಅಪಹರಣ ಮಾಡಿದ್ದು. ನಂತರ ಮಂತ್ರಿ ನಾಗಪ್ಪ ರವರನ್ನು ಅಪಹರಿಸಿ ಕೊಂದು ಹಾಕಿದ್ದು. ಇದು ನಿಜವೋ ಸುಳ್ಳೊ ಆದರೆ ಇದು ಕಾಕತಾಳೀಯವಿದ್ದರೂ ಇದ್ದಿರಬಹುದು. ಈ ಮಾನಸಿಕ ಆಘಾತ ಅನಾರೋಗ್ಯ ಅವರಜೊತೆ ಬದುಕಿದ್ದ ಒಡನಾಡಿಗಳ ಸಾವು ಎಲ್ಲವುಗಳಿಂದ ಜರ್ಜರಿತರಾದ ರಾಜಕುಮಾರ 2006ರ ಎಪ್ರೀಲ್ 12 ರಂದು ಇಹಲೋಕ ಯಾತ್ರೆಯನ್ನು ಮುಗಿಸಿದರು.

     ಅವರು ಮರಣಕಾಲದಲ್ಲಿ ಅಭಿಮಾನಿಗಳೆಂಬ ಕೆಲವರು ಸಡೆಸಿದ ದಾಂಧಲೆ ಸಾರ್ವಜನಿಕ ಆಸ್ತಿಪಾಸ್ತಿಯ ಲೂಟಿ ಅಗ್ನಿಸ್ಪರ್ಶ ಸಾವು ನೋವುಗಳು ರಾಜಕುಮಾರರ ಶವವಾಹನವನ್ನು ಅನಾಥ ರೀತಿ ಕೆಲವು ಗಂಟೆಗಳ ಕಾಲ ರಸ್ತೆಬದಿಯಲ್ಲಿ ನಿಲ್ಲಬೇಕಾಗಿ ಬಂದ ಸಂಧರ್ಭ ಮನಕಲುಕುವ ನಮ್ಮನ್ನು ಯೋಚನೆಗೆ ಹಚ್ಚಿದ ಒಂದು ಘಟನೆ. ಇದಕ್ಕೆ ಕಾರಣರಾದವರು ನಂತರವಾದರೂ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರಬಹುದೆ? ಬಹಶಃ ಇರಲಿಕ್ಕಿಲ್ಲ. ಇದು ನಾವು ಜನಪ್ರಿಯ ನಟನಿಗೆ ಮಾದರಿ ಕನ್ನಡಿಗನಿಗೆ ಸಲ್ಲಿಸಿದ ನಿಜವಾದ ಶದ್ಧಾಂಜಲಿಯಲ್ಲ. ನಿಸ್ಸಂಶಯವಾಗಿ ರಾಜಕುಮಾರ ಆತ್ಮ ಇದನ್ನು ಕಂಡು ಮರುಗಿದೆ. ಇದನ್ನು ಆ ದಿನದ ದೊಂಬಿ ಕೋರರು ಅರಿತುಕೋಂಡು ಪಶ್ಚಾತಾಪ ಪಟ್ಟರೆ ನಿಜಕ್ಕೂ ಅವರು ಮತ್ತು ನಾವು ಎಲ್ಲರೂ ರಾಜಕುಮಾರಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ. ಆಗ ರಾಜಕುಮಾರ ಆತ್ಮಕ್ಕೆ ಶಾಶ್ವತವಾದ ಶಾಂತಿ ದೊರೆಯುತ್ತದೆ. ಆ ಆತ್ಮಾವಲೋಕನ ನಮ್ಮೆಲ್ಲರಲ್ಲಿ ಆಗಲಿ.

 

Rating
No votes yet

Comments