ಮಯೂರ ಸೆಪ್ಟಂಬರ್ 2005ರ ಸಂಚಿಕೆ

ಮಯೂರ ಸೆಪ್ಟಂಬರ್ 2005ರ ಸಂಚಿಕೆ

ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ ತಿಂಗಳಿನ ಸಂಚಿಕೆ ಹಾಗೆ ಓದಿಸಿಕೊಂಡುಹೋಯಿತು. ಈ ಸಂಚಿಕೆ ಶ್ರಾವಣದ ವಿಶೇಷ. ಹಾಗೇ ಪ್ರಕಟಿತ ಸಾಮಗ್ರಿಯಲ್ಲೂ ನಾವಿನ್ಯತೆ. ಜಿ.ಎಚ್.ನಾಯಕರ ಆತ್ಮಕಥನದ ಒಂದು ಭಾಗ,'ಮೀನು ಮಾಂಸ ಪುರಾಣ' ಅಂಕೋಲೆಯ ಸುತ್ತಮುತ್ತಲಿನ ಜೀವನವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಹಾಗೆಯೇ ಮಾಧವ ಕುಲಕರ್ಣಿಯವರ 'ಕನಸು' ಕಥೆ ಕೂಡ ಗದಗ ಪರಿಸರದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಸೊಗಸಾಗಿ ಮೂಡಿಬಂದಿದೆ. ಇನ್ನು ಎರಡು ಯುವ ಬರಹಗಾರರ ಕಥೆಗಳೂ ಅಷ್ಟೇ ಇಷ್ಟವಾದವು. ಸೂ ಥಾಂಗ್ ಎಂಬ ಚೀನೀ ಬರಹಗಾರನ ಕಥೆ 'ಚೆರ್ರಿ'ಯ ಜಿ.ಪೈಯವರ ಅನುವಾದವೂ ಗಮನಸೆಳೆಯಿತು. ಇವೆಲ್ಲಕ್ಕೂ ಮಕುಟವಿಟ್ಟಂತೆ ನನಗೆ ಬಹಳ ಹಿಡಿಸಿದ್ದು, ಬ್ರಜಿಲ್ ನ ನಿರ್ದೇಶಕ ಸಾಲ್ಸ್ ವಲೇಸಾನ 'ದಿ ಮೊಟಾರ್ ಸೈಕಲ್ ಡೈರೀಸ್' ಚಿತ್ರದ ಬಗೆಗಿನ ಬರಹ. ಈ ಸಂಚಿಕೆಯಲ್ಲಿ ಮತ್ತೊಂದು ಹೊಸ ಅಂಕಣ ಪ್ರಾರಂಭವಾಗಿದೆ. ಇದರಲ್ಲಿ ಲೇಖಕಕರು, ಸಮಕಾಲೀನ ಕನ್ನಡ ಭಾಷೆಯಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಚರ್ಚಿಸುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ಮಯೂರ ಮೃಷ್ಟಾನ್ನ ಭೋಜನವನ್ನೇ ಉಣಬಡಿಸಿತು.
Rating
No votes yet

Comments