ಕಿವಿಮಾತುಗಳು

ಕಿವಿಮಾತುಗಳು

ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ.

ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಿದ್ದು?  ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ!

 

ಪ್ರೀತಿಯಿಂದ ಚೆನ್ನಿಗನಿಗೊಂದು ಕಿವಿಮಾತು :

 

ಹೊಳೆವ ಕಂಗಳ ಚೆಲುವೆ ಬಣ್ಣದ

ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-

ವಳನು ಮರೆತಿರೆ ನೀನದೆಂತಹ ದೇವನಾಗುವೆಯೊ?

ಎಳೆಯ ಮನಸಿಗೆ ಘಾಸಿ ಮಾಡಿ ಹ

ದುಳವ  ನೀಗಿಹೆ ಚೆನ್ನ  ಬೇಗನೆ 

ಕಳೆಯಲಿಕೆ ಬಾ ಮುಗುದೆ ಮನಸಿನ ದುಗುಡವೆಲ್ಲವನು! 

 

ಚೆನ್ನಿಗನ ಬಗ್ಗೆ ರೋಸಿ ಹೋಗಿ, ಶುಕಭಾಷಿಣಿಗೊಂದು ಕಿವಿಮಾತು :


ಹೊಳೆವ ಕಂಗಳ ಚೆಲುವೆ ಬಣ್ಣದ

ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-

ವಳನು ಮರೆತವನಾವ ದೇವನದೆಂಥ ಚೆನ್ನಿಗನು?

ಎಳೆಯ ಜೀವವ ನೋಯಿಸುತ್ತ ಹ

-ದುಳವ ನೀಗಿಹನಲ್ತೆ! ಕೇಡಿ ದು

-ರುಳನ ನೆನಹನು ತೊರೆದು ನೆಮ್ಮದಿ ಗಳಿಸು ನೀ ಹೆಣ್ಣೆ !

 

-ಹಂಸಾನಂದಿ

 

ಕೊ: ಇದು ಈ ವಾರ ಪದ್ಯಪಾನದಲ್ಲಿ ಕೊಟ್ಟ ಚಿತ್ರಕವಿತೆಗೆ ನಾನು ಬರೆದ ಉತ್ತರ

Rating
No votes yet

Comments