ದ್ರೌಪದಿ
ದ್ರುಪದ ರಾಜ ದ್ರೋಣಾಚಾರ್ಯರ ಮೇಲಿನ ದ್ವೇಷಕ್ಕೆ ಅವರನ್ನು ಕೊಲ್ಲುವಂಥ ಮಗನನ್ನು ಹುಟ್ಟಿಸಲು ಹಾಗೆಯೇ ಅರ್ಜುನನ ಪರಾಕ್ರಮ ಕಂಡು ಅರ್ಜುನನನ್ನು ಅಳಿಯನಾಗಿ ಮಾಡಿಕೊಳ್ಳಲು ಒಬ್ಬಳು ಮಗಳನ್ನು ಹುಟ್ಟಿಸಬೇಕು ಎಂದು ನಿರ್ಧರಿಸಿಕೊಂಡು ವಿಶೇಷ ಯಾಗ ಮಾಡಲು ನಿರ್ಧರಿಸಿದ. ಯಾಗ ಮಾಡಿಸುವುದರಲ್ಲಿ ನಿಷ್ಣಾತರಾಗಿದ್ದ ಯಾಜ - ಉಪಯಾಜರ ಬಳಿ ಹೋಗಿ ನಿಮಗೆ ಹತ್ತು ಕೋಟಿ ಗೋವುಗಳನ್ನು ನೀಡುತ್ತೇನೆ. ನನಗೊಂದು ಅದ್ಭುತ ಯಾಗ ಮಾಡಿಸಬೇಕು ಎಂದು ಕೇಳಿಕೊಂಡನು. ಅದೇ ರೀತಿ ಯಾಜ - ಉಪಯಾಜರು ಬಂದು ಆ ಯಾಗವನ್ನು ಮಾಡಿದರು. ಯಜ್ಞ ಮುಗಿದ ಮೇಲೆ ಆ ಯಜ್ಞದ ಶೇಷವನ್ನು ದ್ರುಪದನ ಮಡದಿ ಸ್ವೀಕರಿಸಬೇಕು. ಆ ಶೇಷವನ್ನು ನೀಡಲು ಒಂದು ಮಹೂರ್ತ ನಿಗದಿ ಪಡಿಸಿದ್ದರು. ಇನ್ನೇನು ಆ ಮಹೂರ್ತ ಸಮೀಪಿಸುತ್ತಿದ್ದಂತೆ ಯಾಜ ಉಪಯಾಜರು ದ್ರುಪದ ರಾಜನನ್ನು ಕೇಳಿದರು ಎಲ್ಲಿ ನಿನ್ನ ಮಡದಿ ಎಂದು.
ಇಲ್ಲಿ ದ್ರುಪದನ ಮಡದಿ ಅಹಂಕಾರದಿಂದ ನಾವು ಅವರಿಗೆ ಹತ್ತು ಕೋಟಿ ಗೋವುಗಳನ್ನು ನೀಡುತ್ತಿದ್ದೇವೆ ಆದ್ದರಿಂದ ನಾನ್ಯಾಕೆ ಅವರು ಹೇಳಿದ ಸಮಯಕ್ಕೆ ಹೋಗಬೇಕು. ಸ್ವಲ್ಪ ಹೊತ್ತು ಕಾಯಲಿ ನಂತರದಲ್ಲಿ ಹೋಗುತ್ತೇನೆ ಎಂದುಕೊಂಡಳು. ಆದರೆ ಯಾಜ ಉಪಯಾಜರು ಆ ರೀತಿ ಕಾಯುವ ಪಂಡಿತರು ಆಗಿರಲಿಲ್ಲ. ಮಹೂರ್ತ ಸಮಯ ಬಂದಾಗ ಯಾಜ ಉಪಯಾಜರು ಆ ಯಜ್ಞದ ಶೇಷವನ್ನು ಮಂತ್ರ ಹೇಳಿ ಆ ಯಜ್ಞ ಕುಂಡದಲ್ಲೇ ಹಾಕಿಬಿಟ್ಟರು. ಯಜ್ಞ ಕುಂಡದಲ್ಲಿ ಹಾಕಿದ ತಕ್ಷಣ ಅದರಿಂದ ಅಗ್ನಿಯ ತೇಜಸ್ಸನ್ನು ಹೊಂದಿದ, ಅದೇ ವರ್ಚಸ್ಸಿನಿಂದ ಕೂಡಿದ ಒಬ್ಬ ವ್ಯಕ್ತಿ ಕಿವಿಯಲ್ಲಿ ಕುಂಡಲ, ಶಿರದಲ್ಲಿ ಕಿರೀಟ, ಕೈಯಲ್ಲಿ ಧನಸ್ಸನ್ನು ಹಿಡಿದು ರಥದಲ್ಲಿ ಕುಳಿತು ಅಗ್ನಿಯೇ ಒಂದು ಅಂಶವಾಗಿ ಮೇಲೆ ಬಂದ. ಅವನಿಗೆ ದೃಷ್ಟದ್ಯುಮ್ನ ಎಂದು ನಾಮಕರಣ ಮಾಡಿದರು.
ನಂತರದಲ್ಲಿ ಅಲ್ಲೇ ಯಜ್ಞ ಕುಂಡದ ಪಕ್ಕ ಇದ್ದ ವೇದಿ (ಪವಿತ್ರ ಜಾಗ) ಯಿಂದ ಭಾರತಿ ದೇವಿಯೇ ದ್ರೌಪದಿ ರೂಪದಲ್ಲಿ ಮೇಲೆ ಬಂದರು. ದ್ರೌಪದಿ ದೇವಿ ಅದ್ಭುತ ಸೌಂದರ್ಯದಿಂದ ಕೂಡಿದ್ದಳು. ದ್ರೌಪದಿಯಲ್ಲಿ ಶಚಿ ದೇವಿ, ಶ್ಯಾಮಲಾ ದೇವಿ, ಉಷಾ ದೇವಿ, ಪಾರ್ವತಿ ದೇವಿಯ ಅಂಶಗಳು ಕೂಡಿದ್ದವು. ದ್ರೌಪದಿ ದೇವಿ ವರ್ಣದಲ್ಲಿ ಕಪ್ಪಿದ್ದರಿಂದ "ಕೃಷ್ಣಾ" ಎಂದು. ದ್ರುಪದನ ಮಗಳಾದ್ದರಿಂದ "ದ್ರೌಪದಿ" ಎಂಬ ಹೆಸರಿತ್ತು. ಮತ್ತೊಂದು ಹೆಸರು "ಯಾಜ್ಞ ಶೇಣಿ", ಮತ್ತೊಂದು ಹೆಸರು "ಪಾರ್ಶತಿ", ಪಾಂಚಾಲ ದೇಶದ ರಾಣಿ ಆದ್ದರಿಂದ "ಪಾಂಚಾಲಿ" ಎಂದು ಕೂಡ ಕರೆಯುತ್ತಿದ್ದರು. ದ್ರೌಪದಿ ದೇವಿ ಹುಟ್ಟುವಾಗಲೇ ನವ ತರುಣಿಯಾಗಿ, ಮುಪ್ಪಿಲ್ಲದೆ, ಸರ್ವಜ್ಞಾನಿಯಾಗಿ ಹುಟ್ಟಿದ್ದರು.
ದ್ರೌಪದಿ ದೇವಿಯ ದೇಹದಲ್ಲಿ ಶಚಿ ದೇವಿ, ಶ್ಯಾಮಲಾ ದೇವಿ, ಉಷಾದೇವಿ, ಹಾಗೂ ಪಾರ್ವತಿ ದೇವಿಯ ಅಂಶಗಳು ಬರಲು ಕಾರಣವೇನೆಂದರೆ ಒಮ್ಮೆ ಇಂದ್ರನ ಹೆಂಡತಿಯಾದ ಶಚಿ ದೇವಿ, ಯಮದೇವರ ಹೆಂಡತಿಯಾದ ಶ್ಯಾಮಲಾ ದೇವಿ, ಅಶ್ವಿನಿ ದೇವತೆಯರ ಪತ್ನಿಯಾದ ಉಷಾದೇವಿ, ಹಾಗೂ ರುದ್ರದೇವರ ಪತ್ನಿಯಾದ ಪಾರ್ವತಿ ದೇವಿ ನಾಲ್ವರೂ ಸೇರಿ ಒಂದು ದೇಹದಲ್ಲಿ ಪ್ರವೇಶಿಸಿ ಬ್ರಹ್ಮ ದೇವರಿಗೆ ತಮ್ಮ ಗುರುತು ಸಿಗುವುದೋ ಇಲ್ಲವೋ ಎಂದು ಪರೀಕ್ಷಿಸಲು ಅವರ ಮುಂದೆ ಹೋಗುತ್ತಿದ್ದರು. ನಮ್ಮನ್ನು ಯಾವ ದೇಹದಿಂದ ಗುರುತು ಹಿಡಿಯುತ್ತಾರೋ ನೋಡೋಣ ಎಂದು ಎರಡು ಬಾರಿ ಅವರ ಮುಂದೆ ಹೋದರು. ಆಗ ಕಂಡೂ ಕಾಣದಂತೆ ಸುಮ್ಮನಿದ್ದ ಬ್ರಹ್ಮದೇವರು ಮೂರನೇ ಬಾರಿ ಬಂದಾಗ ಕೋಪಗೊಂಡು ಅವರಿಗೆ ಶಾಪ ಕೊಟ್ಟು ಬಿಟ್ಟರು. ನೀವು ನಾಲ್ಕು ಜನ ಒಂದೇ ದೇಹದಲ್ಲಿ ಸೇರಿಕೊಂಡು ನನ್ನನ್ನು ಪರೀಕ್ಷೆ ಮಾಡಲು ಬರುತ್ತೀರಾ, ನೀವು ಇದೆ ರೀತಿ ನಾಲ್ಕು ಜನ ಒಂದೇ ದೇಹದಲ್ಲಿ ಸೇರಿಕೊಂಡು ಮೂರು ಬಾರಿ ಭೂಮಿಯಲ್ಲಿ ಹುಟ್ಟಿರಿ ಎಂದು ಬಿಟ್ಟರು. ಮತ್ತೊಮ್ಮೆ ಇದೆ ನಾಲ್ಕು ಜನ ಬ್ರಹ್ಮ ದೇವರ ಸಭೆಯಲ್ಲಿ ಅವರವರ ಪತಿಯರೊಂದಿಗೆ ವಿಲಾಸದಲ್ಲಿ ತೊಡಗಿದ್ದರು. ಇದರಿಂದ ಕುಪಿತಗೊಂಡ ಬ್ರಹ್ಮದೇವರು ಮತ್ತೊಮ್ಮೆ ಶಪಿಸಿಬಿಟ್ಟರು. ನಿಮಗೆ ಮತ್ತೊಮ್ಮೆ ಮನುಷ್ಯ ಜನ್ಮ ಬಂದು ಅದರಲ್ಲಿ ನಿಮ್ಮ ನಿಯತ ಪತಿಯರನ್ನು ಬಿಟ್ಟು ಅನ್ಯ ಪುರುಷರ ಸಂಪರ್ಕ ಆಗಿಬಿಡಲಿ ಎಂದು ಬಿಟ್ಟರು.
ನಂತರದಲ್ಲಿ ಈ ನಾಲ್ವರೂ ಸೇರಿ ಆಲೋಚಿಸಿದರು. ನಾವುಗಳು ನಾಲ್ಕು ಬಾರಿ ಮನುಷ್ಯ ಜನ್ಮ ಪಡೆಯಬೇಕು ಅದೂ ಅಲ್ಲದೆ ನಾಲ್ಕನೇ ಜನ್ಮದಲ್ಲಿ ನಮ್ಮ ನಿಯತ ಪತಿಯರನ್ನು ಬಿಟ್ಟು ಪರ ಪುರುಷರ ಸಂಪರ್ಕ ಮಾಡಬೇಕು. ತಮ್ಮ ಪಾತಿವ್ರತ್ಯ ರಕ್ಷಣೆ ಆಗಬೇಕು ಆದ್ದರಿಂದ ಭಾರತೀ ದೇವಿಯ ಬಳಿ ಬಂದು ಒಂದು ಸಾವಿರ ವರ್ಷ ಅವರ ಸೇವೆ ಮಾಡಿ ಅವರಿಗೆ ನಡೆದ ವಿಷಯವನ್ನು ತಿಳಿಸಿ ನಮಗೆ ಪಾತಿವ್ರತ್ಯ ರಕ್ಷಣೆ ಬೇಕು. ಆದ್ದರಿಂದ ನಾವು ಹುಟ್ಟುವಾಗ ನಮ್ಮೊಡನೆ ನೀವು ಹುಟ್ಟಬೇಕು ಎಂದು ಕೇಳಿಕೊಂಡರು. ಏಕೆಂದರೆ ನೀವು ವಾಯುದೇವರ ಪತ್ನಿ ಆದ್ದರಿಂದ ನಾವು ಮನುಷ್ಯ ಜನ್ಮ ತಾಳಿದಾಗ ಯಾರಿಂದಲೂ ನಮಗೆ ತೊಂದರೆ ಆಗುವುದಿಲ್ಲ. ಆದ್ದರಿಂದ ನಮ್ಮ ನಾಲ್ಕೂ ಜನ್ಮದಲ್ಲೂ ನೀವು ನಮ್ಮೊಡನೆ ಇರಬೇಕು ಎಂದು ಕೇಳಿದಾಗ ಭಾರತೀ ದೇವಿ ಒಪ್ಪಿಕೊಂಡರು. ಅದೇ ರೀತಿ ತ್ರೇತಾಯುಗದಲ್ಲಿ ಒಬ್ಬ ಬ್ರಾಹ್ಮಣನ ಮಗಳ ರೂಪದಲ್ಲಿ ಈ ಐವರು ಜನಿಸಿದರು. ಅವಳ ಹೆಸರು ವಿಪ್ರಕನ್ಯ.
ವಿಪ್ರಕನ್ಯ ರುದ್ರದೇವರನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಚಿ ದೇವಿ, ಶ್ಯಾಮಲಾ ದೇವಿ, ಉಷಾ ದೇವಿ, ಪಾರ್ವತಿ ದೇವಿ ಯರು ತಮ್ಮ ತಮ್ಮ ನಿಯತ ಪತಿಯರೇ ತಮಗೆ ಪತಿಯಾಗಲೆಂದು ರುದ್ರದೇವರನ್ನು ತಪಸ್ಸು ಮಾಡುತ್ತಾರೆ. ಭಾರತೀ ದೇವಿಯರು ಶ್ರೀಹರಿ ಪ್ರೀತನಾಗಲೆಂದು ತಪಸ್ಸು ಮಾಡುತ್ತಾರೆ. ಆಗ ರುದ್ರ ದೇವರು ಪ್ರತ್ಯಕ್ಷರಾಗಿ ನಿಮ್ಮ ನಾಲ್ಕು ಜನ್ಮಗಳಲ್ಲಿ ಯಾವುದಾದರೊಂದು ಜನ್ಮದಲ್ಲಿ ನಿಮ್ಮ ನಿಮ್ಮ ನಿಯತ ಪತಿಯರೇ ನಿಮಗೆ ಪತಿಯರಾಗುತ್ತಾರೆ ಎಂದು ವರವನ್ನು ಕೊಟ್ಟರು. ನಂತರದಲ್ಲಿ ವಿಪ್ರಕನ್ಯ ತನ್ನ ದೇಹವನ್ನು ಪರಿತ್ಯಾಗ ಮಾಡಿ ಎರಡನೆಯ ಜನ್ಮ ಪಡೆಯುತ್ತಾರೆ. ಎರಡನೇ ಜನ್ಮದಲ್ಲಿ ನಳ ರಾಜನಿಗೆ ಮಗಳಾಗಿ ಹುಟ್ಟಿ "ನಳ ನಂದಿನಿ" ಎಂಬ ನಾಮದಿಂದ ಕರೆಯಲ್ಪಡುತ್ತಿದ್ದಳು. ಆ ಜನ್ಮದಲ್ಲೂ ಪತಿಯ ಯೋಗ ಆಗದೆ ಆ ದೇಹವನ್ನೂ ಪರಿತ್ಯಾಗ ಮಾಡಿ ಮೂರನೇ ಜನ್ಮದಲ್ಲಿ ಇಂದ್ರಸೇನೆ ಯಾಗಿ ಜನ್ಮ ಪಡೆಯುತ್ತಾರೆ. ಮೂರನೇ ಜನ್ಮದಲ್ಲಿ ಮುದ್ಗಲ ಋಷಿಗಳು ಇಂದ್ರಸೇನೆಯನ್ನು ಮದುವೆಯಾಗುತ್ತಾರೆ.
ಮುದ್ಗಲ ಋಷಿಗಳು ಹಿಂದೊಮ್ಮೆ ಬ್ರಹ್ಮ ದೇವರ ಸಭೆಯಲ್ಲಿ ಬ್ರಹ್ಮನನ್ನು ಅಪಹಾಸ ಮಾಡಿಬಿಟ್ಟರು. ಅದರಿಂದ ಕುಪಿತಗೊಂಡ ಬ್ರಹ್ಮ ದೇವರು ಮುಂದೆ ನಿನಗೆ ನಿನಗಿಂತ ಉನ್ನತ ಮಟ್ಟದ ದೇವತೆಯರೊಂದಿಗೆ ಸಂಪರ್ಕವಾಗಲಿ ಎಂದು ಶಪಿಸಿಬಿಟ್ಟರು. ಆಗ ಮುದ್ಗಲ ಋಷಿಗಳು ನಾನೊಬ್ಬ ಅಧಮ ನನಗಿಂತ ಉನ್ನತ ಮಟ್ಟದವರ ಜೊತೆ ಸಂಪರ್ಕ ಅತಿ ಘೋರ ಅಪರಾಧ ಹಾಗೂ ಮಹಾ ಪಾಪ ಆಗುತ್ತದೆ ಎಂದು ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದಾಗ ಬ್ರಹ್ಮ ದೇವರು ಮುದ್ಗಲ ಋಷಿಗಳಿಗೆ ಸಮಾಧಾನ ಮಾಡಿ ನೀನೇನು ಯೋಚಿಸಬೇಡ. ಶಾಪವಂತೂ ಕೊಟ್ಟಿದ್ದೇನೆ, ಆದರೆ ನೀನು ಆ ದೇವತೆಗಳ ಸಂಪರ್ಕ ಮಾಡಿದಾಗ ನಿನ್ನೊಳಗೆ ವಾಯುದೇವರ ಪ್ರವೇಶ ಆಗುತ್ತದೆ. ಅದರಿಂದ ನಿನಗೇನೂ ದೋಷ ಬರುವುದಿಲ್ಲ ಎಂದು ವರ ಕೊಟ್ಟರು.
ಇಂದ್ರಸೇನೆಯನ್ನು ಮದುವೆ ಆದಾಗ ಮುದ್ಗಲ ಋಷಿಗಳಲ್ಲಿ ವಾಯುದೇವರು ಪ್ರವೇಶಿಸಿದ್ದರು. ಆಗ ಅವರು ಭಾರತೀ ದೇವಿಯರೊಂದಿಗೆ ಮಾತ್ರ ರಮಿಸುತ್ತಿದ್ದರು. ಉಳಿದ ದೇವತೆಗಳು ಸುಪ್ತಾವಸ್ಥೆಯಲ್ಲಿ ಇರುತ್ತಿದ್ದರು. ಒಂದೇ ದೇಹದಲ್ಲಿ ನಾಲ್ಕು ದೇವತೆಗಳೂ ಇದ್ದರೂ ಅವರಿಗೆ ವಾಯು ದೇವರ ಸ್ಪರ್ಶ ಯಾವುದೇ ದೋಷ ತರುತ್ತಿರಲಿಲ್ಲ. ನಂತರದಲ್ಲಿ ವಾಯುದೇವರು ಮುದ್ಗಲ ಋಷಿಯ ದೇಹವನ್ನು ಬಿಟ್ಟು ಹೊರಡುವಾಗ ಮುದ್ಗಲ ಋಷಿಗಳು ಇಂದ್ರಸೇನೆಯನ್ನು ಬಿಟ್ಟು ಕಾಡಿನಲ್ಲಿ ತಪಸ್ಸಿಗೆ ಹೊರಟು ಬಿಟ್ಟರು. ಆಗ ಇಂದ್ರಸೇನೆಯೂ ರುದ್ರ ದೇವರನ್ನು ಕುರಿತು ತಪಸ್ಸು ಮಾಡುತ್ತಾಳೆ. ಆಗ ರುದ್ರ ದೇವರು ಪ್ರತ್ಯಕ್ಷರಾದಾಗ ಇಂದ್ರಸೇನೆ ನಮಗೆ ನಮ್ಮ ನಿಯತ ಪತಿಯೋಗ ಆಗಬೇಕು ಎಂದು ಕೇಳಿದಾಗ ಐದು ಸಲ 'ಪತಿಂ ದೇಹಿ" ಎಂದು ಸ್ವರ ಆಚೆ ಬಂತು. ಆಗ ರುದ್ರ ದೇವರು 'ಪತಿಂ ಪ್ರಾಪ್ಸಸಿ' ಎಂದು ಐದು ಬಾರಿ ಹೇಳಿ ಬಿಟ್ಟರು. ಇಂದ್ರಸೇನೆ ಇದೇನಿದು ನಾನು ಒಂದೇ ದೇಹ ಆದರೆ ಐದು ಗಂಡಂದಿರನ್ನು ವರ ಕೊಟ್ಟು ಬಿಟ್ಟೆಯಲ್ಲ ರುದ್ರ ದೇವ ಎಂದು ರೋಧಿಸುತ್ತಿದ್ದಾಗ ಅಲ್ಲಿಗೆ ಇಂದ್ರ ದೇವರು ಬಂದು ಯಾಕೆ ಹೀಗೆ ರೋಧಿಸುತ್ತಿದ್ದೀರ ಎಂದು ಕೇಳಿದಾಗ ಇಂದ್ರಸೇನೆ ವಟು ರೂಪಿಯಾಗಿದ್ದ ರುದ್ರದೇವರನ್ನು ತೋರಿಸಿ ನಾನು ಪತಿಯನ್ನು ಕರುಣಿಸು ಎಂದು ಬೇಡಿದರೆ ಐದು ಜನರನ್ನು ಕರುಣಿಸಿಬಿಟ್ಟ ಎಂದಳು. ಆಗ ಇಂದ್ರ ವಟು ರೂಪದಲ್ಲಿರುವುದು ರುದ್ರ ದೇವರು ಎಂದು ತಿಳಿಯದೆ ಯಾಕೆ ನೀನು ಹೀಗೆ ಮಾಡಿದೆ ಎಂದು ಕೋಪದಿಂದ ಕೇಳಿದಾಗ ರುದ್ರ ದೇವರು ನನ್ನನ್ನೇ ಪ್ರಶ್ನಿಸುತ್ತೀಯ ಅವಳು ಐದು ಬಾರಿ ಕೇಳಿದ್ದಕ್ಕೆ ನಾನು ಐದು ಬಾರಿ ವರ ಕೊಟ್ಟೆ ಎಂದು ನೀನು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿ ಅವಳನ್ನೇ ಮದುವೆ ಆಗು ಎಂದು ಶಪಿಸಿ ಬಿಟ್ಟರು.
ಅಷ್ಟೇ ಅಲ್ಲದೆ ರುದ್ರದೇವರು ಇಂದ್ರನಿಗೆ ಒಂದು ಸುಳ್ಳು ಹೇಳಿದರು. ಅಲ್ಲಿ ನೋಡು ಅಲ್ಲಿ ಇರುವ ಪರ್ವತದ ಕೆಳಗೆ ನನ್ನ ವಿರೋಧ ಮಾಡಿದವರೆಲ್ಲ ಹೇಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಹೋಗಿ ನೋಡು ಎಂದು ಬಿಟ್ಟರು. ಅಲ್ಲಿ ಬಂದು ಇಂದ್ರ ಆ ಪರ್ವತ ಕಿತ್ತು ನೋಡಿದಾಗ ಅಲ್ಲಿ ಯಮದೇವರು, ವಾಯುದೇವರು ಹಾಗೂ ಅಶ್ವಿನಿ ದೇವತೆಗಳು ಏನೋ ಚಿಂತನೆ ನಡೆಸುತ್ತಿದ್ದರು. ಇಂದ್ರ ಅದನ್ನು ನೋಡಿ ರುದ್ರ ದೇವರ ಮಾತು ನಿಜ ಎಂದು ಇಂದ್ರ ಸುಮ್ಮನಾಗಿ ನಂತರದಲ್ಲಿ ಅರ್ಜುನನಾಗಿ ಅವತರಿಸಿದ. ಇದನ್ನು ನೋಡಿ ಬ್ರಹ್ಮ ದೇವರು ರುದ್ರ ದೇವರಿಗೆ ಇಂದ್ರನಿಗೆ ಸುಳ್ಳು ಹೇಳಿದ್ದೀಯ ಎಂದು ನೀನು ಅಶ್ವತ್ಥಾಮನಾಗಿ ಹುಟ್ಟು ಹಾಗೆ ಅರ್ಜುನನಿಂದ ಸೋಲನುಭವಿಸು. ಅಷ್ಟೇ ಅಲ್ಲದೆ ನಾನು ಇಂದ್ರಸೆನೆಗೆ ಪೂರ್ವದಲ್ಲಿ ನಿಮ್ಮ ನಿಯತ ಪತ್ನಿಯರ ಯೋಗ ಆಗದಿರಲಿ ಎಂದು ಶಾಪ ಕೊಟ್ಟಿದ್ದೆ. ಆದರೆ ನೀನು ಅದನ್ನು ಮೀರಿ ಅವರವರ ಪತಿಯ ಯೋಗ ಆಗಲಿ ಎಂದು ವರ ಕೊಟ್ಟು ಬಿಟ್ಟೆ. ಆದ್ದರಿಂದ ಈ ವರ ಸತ್ಯವಾಗಲಿ ಆದರೆ ನಿನ್ನ ಪಾಲಿಗೆ ಸುಳ್ಳಾಗಲಿ ಎಂದು ಶಪಿಸಿಬಿಟ್ಟರು. ಇಂದ್ರಸೇನೆಯ ದೇಹದಲ್ಲಿ ಶಚಿ,ಶ್ಯಾಮಲಾ, ಭಾರತಿ,ಉಷಾ ಹಾಗೂ ಪಾರ್ವತಿ ದೇವಿಯರು ಇದ್ದಾರೆ. ಮುಂದಿನ ಜನ್ಮದಲ್ಲಿ ಎಲ್ಲರಿಗೂ ಅವರವರ ನಿಯತ ಪತಿ ಸಿಗುತ್ತಾರೆ ಆದರೆ ನಿನಗೆ ಮಾತ್ರ ಪಾರ್ವತಿ ಸಿಗುವುದಿಲ್ಲ. ನೀನು ಅಶ್ವತ್ಥಾಮನಾಗಿ ಬ್ರಹ್ಮಚಾರಿಯಾಗೆ ಉಳಿಯುತ್ತೀಯ ಎಂದರು. ಹಾಗೆಯೇ ನಿನಗೆ ಮದುವೆಯ ಭಾಗ್ಯವೇ ಇಲ್ಲದೆ ಚಿರಂಜೀವಿ ಆಗಿ ಇದ್ದುಬಿಡು ಎಂದು ಮತ್ತೊಂದು ಶಾಪವನ್ನು ಕೊಟ್ಟರು.
ನಂತರದಲ್ಲಿ ಇಂದ್ರಸೇನೆಯ ದೇಹವನ್ನೂ ಪರಿತ್ಯಾಗ ಮಾಡಿ ನಾಲ್ಕನೇ ಜನ್ಮದಲ್ಲಿ ದ್ರೌಪದಿಯಾಗಿ ಜನ್ಮ ತಾಳಿದಳು. ಮುಂದೆ ರುದ್ರ ದೇವರ ವರದಂತೆ ಇಂದ್ರನ ರೂಪದಲ್ಲಿದ್ದ ಅರ್ಜುನನನ್ನು ದ್ರೌಪದಿಯ ದೇಹದಲ್ಲಿದ್ದ ಶಚಿದೇವಿ ಮದುವೆ ಆದರೆ, ಯುಧಿಷ್ಠಿರನ ರೂಪದಲ್ಲಿದ್ದ ಯಮದೇವರನ್ನು ಶ್ಯಾಮಲಾ ದೇವಿ ಮದುವೆ ಆದರೆ, ಭೀಮಸೇನನ ರೂಪದಲ್ಲಿದ್ದ ವಾಯುದೇವರನ್ನು ಭಾರತಿ ದೇವಿ ಮದುವೆ ಆದರೆ, ನಕುಲ ಸಹದೇವರ ರೂಪದಲ್ಲಿದ್ದ ಅಶ್ವಿನಿ ದೇವತೆಯರನ್ನು ಉಷಾ ದೇವಿ ಮದುವೆ ಆಗುತ್ತಾರೆ. ಬ್ರಹ್ಮ ದೇವರ ಶಾಪದಿಂದ ಪಾರ್ವತಿ ದೇವಿ ಮಾತ್ರ ಮದುವೆ ಇರದೇ ಹಾಗೆ ಇದ್ದು ಬಿಡುತ್ತಾರೆ. ಒಂದು ದೇವತೆ ಸಂಸಾರದಲ್ಲಿದ್ದಾಗ ಉಳಿದ ದೇವತೆಯರು ಸುಪ್ತಾವಸ್ಥೆಯಲ್ಲಿ ಇರುತ್ತಿದ್ದರು