ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ

ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ

 ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡುತ್ತಾರೆ.

ಈ ಕೆರೆಯ ವೈಶಿಷ್ಟ್ಯವೆಂದರೆ ಈ ಕೆರೆಯ್ಲಲಿ ಕಾವಲು ಕಾಯಲೆಂದೇ ಹಿಂದಿನ ಪಾಳೆಗಾರರು ಕಾವಲಿನ ಜನರನ್ನಿಟ್ಟಿದ್ದರು. ಹೀಗಾಗಿ ಕೆರೆ ಕಾವಲು ಕಾಯುವವರು ಕೆರೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿ, ಅದೇ ಒಂದು ಗ್ರಾಮವಾಗಿ, ಪ್ರಸ್ತುತ ಅದನ್ನು ‘ಕೆರೆ ಕಾವಲರ ಹಟ್ಟಿ’ ಎಂದು ಹೆಸರು ಬಂದಿದೆ. ಕೆರೆಯನ್ನು ಕಾವಲು ಕಾಯುವವರ ಹಟ್ಟಿಯೇ ಮುಂದೆ ಕೆರೆ ಕಾವಲರ ಹಟ್ಟಿಯೆಂಬ ಆಡು ಭಾಷೆಗೆ ರೂಪಾಂತರಗೊಂಡಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಕೆರೆಯ ಮಧ್ಯೆ ಈಶ್ವರನ ದೇವಸ್ಥಾನವಿದೆ. ಕೆರೆ ತುಂಬಿದಾಗ ಕೇವಲ ದೇವಸ್ಥಾನದ ಗೋಪುರದ ಭಾಗ ಮಾತ್ರ ಕಂಡು ಉಳಿದೆಲ್ಲವೂ ನೀರಿನಲ್ಲಿ ಮುಳುಗಿರುತ್ತದೆ. ಕೆರೆ ಬತ್ತಿದಾಗ ಮಾತ್ರ ಹೊರಕಾಣುವ ಈಶ್ವರ ದೇವಸ್ಥಾನ ಈಗಾಗಲೇ ಶಿಥಿಲಗೊಂಡಿದೆ. ಕುತೂಹಲದಿಂದ ದೇವಸ್ಥಾನವನ್ನು  ಕಾಣಲು ಹೋದರೆ, ದೇವಸ್ಥಾನದ ಸುತ್ತಲೂ ಪೌಳಿ ಇದ್ದುದು ಕಂಡುಬರುತ್ತದೆ. ನೆಲಮಟ್ಟದಿಂದ ೬ ಅಡಿ ಎತ್ತರವಿರುವ ದೇವಸ್ಥಾನದ ಒಳಗೆ ಕುಳಿತೇ ಒಳಹೋಗಬೇಕು. ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಮುಂಭಾಗದ್ಲಲಿ ಮೇಲ್ಗಡೆ ಚಕ್ರಾಕಾರದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮಿಯ ಕೆತ್ತನೆಯಿದೆ. ದ್ವಾರದ ಕಂಬಗಳೂ ಕೆತ್ತನೆಯಿಂದ ಕೂಡಿವೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ, ನೀರಿನಲ್ಲಿ ಹಾಳಾಗಿರುವುದರಿಂದ ಕೆತ್ತನೆಗಳೆಲ್ಲ ಅಸ್ಪಷ್ಟವಾಗಿವೆ. ಗರ್ಭಗುಡಿಯ ಒಳಭಾಗದ್ಲಲಿ ಲಿಂಗುವನ್ನು ಕಾಣಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಶಿಥಿಲಗೊಂಡ ನಂದಿಯ ಮೂರ್ತಿಯಿದೆ. ಕೆರೆಯ ಮಣ್ಣೆಲ್ಲ ದೇವಸ್ಥಾನದ ಹೊರಗೆ, ಒಳಗೆ ನುಗ್ಗಿರುವುದಕ್ಕೇನೋ ದೇವಸ್ಥಾನ ಹೂತುಹೋದಂತಾಗಿದೆ. ದೇವಸ್ಥಾನವು ದೊಡ್ಡ ಬಂಡೆಗಳಿಂದ ಪಟ್ಟಿಕೆಯಾಕಾರದಲ್ಲಿ ನಿರ್ಮಾಣಗೊಂಡಿದೆ. ಶಿಥಿಲಗೊಂಡಿರುವುದರಿಂದಾಗಿ ಗೋಪುರದ ಕಲ್ಲುಗಳ ಜೋಡಣೆ ತಪ್ಪಿದಂತಾಗಿದೆ. 
ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. ಕೆರೆ ಸಂಪೂರ್ಣ ಬತ್ತಿದೆ. ಆಸಕ್ತರು ದೇವಸ್ಥಾನವನ್ನು ನೋಡಬಹುದಾಗಿದೆ.
 

Comments