ನಾ ನಿನ್ನೊಳನ್ಯ ಬೇಡುವುದಿಲ್ಲ

ನಾ ನಿನ್ನೊಳನ್ಯ ಬೇಡುವುದಿಲ್ಲ

 

ನಿನ್ನಡಿಗಳಲೆ ಮನವು ನಿಂತಿಹು

-ದಿನ್ನು ಕೊಂಡಾಡಿಹುದು ನಾಲಗೆ

ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ;

ನಿನ್ನ ಪೂಜೆಯ ಮಾಳ್ಪ ಕೈಗಳು

ನಿನ್ನ ನೆನಹಲೆ ಬುದ್ಧಿ ಕಣ್ಣಿರ-

ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ!

 

 

ಸಂಸ್ಕೃತ ಮೂಲ (ಆದಿ ಶಂಕರರ  ಶಿವಾನಂದ ಲಹರಿ, ಶ್ಲೋಕ ೭):

 

ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ

ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ |

ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ

ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ||

 

 

ಈ ಹಿಂದೆ ನಾನು ಮಾಡಿರುವ ಶಂಕರಾಚಾರ್ಯರ ಕೆಲವು ಶ್ಲೋಕಗಳ ಅನುವಾದಗಳನ್ನು ಇಲ್ಲಿ ಚಿಟಕಿಸಿ ಓಡಬಹುದು

 

 

 

 

 

 

 

 

 

-ಹಂಸಾನಂದಿ

 

ಕೊ: ಇವತ್ತು ವೈಶಾಖ ಶುದ್ಧ ಪಂಚಮಿ - ಶಂಕರ ಜಯಂತಿ ; ಕ್ರಿ.ಶ:೭೮೮ ರಲ್ಲಿ ಆದಿಶಂಕರರು ಹುಟ್ಟಿದ ದಿವಸ. ಹಾಗಾಗಿ ಅವರ ಒಂದು ಪದ್ಯವನ್ನು  ಹೊಸದಾಗಿ  ಅನುವಾದಿಸಬೇಕೆನ್ನಿಸಿತು. ಅದಕ್ಕಾಗಿ ಈ ಷಟ್ಪದಿ.

 

ಕೊ.ಕೊ: ನಾ ನಿನ್ನೊಳನ್ಯ ಬೇಡುವುದಿಲ್ಲ  (ನಾ ನಿನಗೇನು ಬೇಡುವುದಿಲ್ಲ ಅನ್ನುವ ಪಾಠಾಂತರವೂ ಇದೆ) ಅನ್ನುವುದು ಶ್ರೀಪಾದರಾಯರ ಒಂದು ಪ್ರಸಿದ್ಧ ರಚನೆ. ಅದರ ಚರಣಗಳಲ್ಲಿ ಬರುವ ಭಾವಕ್ಕೂ, ಈ ಪದ್ಯದ ಭಾವಕ್ಕೂ ಬಹಳ ಹೋಲಿಕೆ ಕಂಡಿದ್ದರಿಂದ ಆ ತಲೆಬರಹ ಕೊಟ್ಟಿರುವೆ.
 
ಕೊ.ಕೊ.ಕೊ: ಈ  ಬಾರಿ ಚಿತ್ರ ಎಲ್ಲಿಂದ ತೆಗೆದುಕೊಂಡಿದ್ದು ಎಂಬ ಮಾಹಿತಿ ಮರೆತಿದ್ದೇನೆ. ಕ್ಷಮೆ ಇರಲಿ.

 

Rating
No votes yet

Comments