ಪ್ರಳಯಾನಂತರ

ಪ್ರಳಯಾನಂತರ

ಮೂರು ದಿನಗಳಾಗಿದೆ ಅದೂ ಸಹ ಸಮಯದಿಂದ ಗೊತ್ತಾಗುತ್ತಿಲ್ಲ, ಹಗಲು ರಾತ್ರಿಯನ್ನು ಆಧಾರಿಸಿ ಗೊತ್ತಾಗುತ್ತಿದೆ. ಮೂರು ದಿನದಿಂದ ಏನೂ ತಿಂದಿಲ್ಲ ಹೊಟ್ಟೆ ಚುರುಗುಟ್ಟುತ್ತಿದೆ. ತಿನ್ನುವುದು ಏನು ಬಂತು ಒಂದು ತೊಟ್ಟು ನೀರು ಸಹ ಕುಡಿದಿಲ್ಲ. ಎಲ್ಲಿ ನೋಡಿದರೂ ಬರೀ ನೀರಿದೆ ಆದರೆ ಒಂದು ಹನಿ ನೀರು ಕುಡಿಯಲು ಮನಸಾಗುತ್ತಿಲ್ಲ. ಯಾಕೆಂದರೆ ಅದೇ ನೀರಿನಲ್ಲಿ ಮನುಷ್ಯರ ಶವಗಳು, ಪಶು ಪಕ್ಷಿಗಳ ಶವಗಳು, ಇಡೀ ಊರಿನ ಕಸ, ಗಲೀಜು, ಮಣ್ಣು, ಕೆಸರು, ಕೊಚ್ಚೆ ಎಲ್ಲ ತುಂಬಿಕೊಂಡು ಅಸಹ್ಯ ಹುಟ್ಟಿಸುತ್ತಿತ್ತು. ಮೂರು ದಿನದಿಂದ ಇಂದಿಗೆ ನೀರಿನ ಮಟ್ಟ ಕಮ್ಮಿಯಾಗಿದೆ. ಈಗೀಗ ಅಳಿದುಳಿದ ಅವಶೇಷಗಳು ಕಾಣುತ್ತಿದೆ. ಆದರೆ ಏನು ಮಾಡುವುದು ಉಳಿದಿರುವುದು ನಾನೊಬ್ಬನೇ. ಹೌದು ಇಡೀ ಊರಿಗೆ ಊರೇ ಸ್ಮಶಾನ ಆಗಿಬಿಟ್ಟಿದೆ. ಏನು ಮಾಡುವುದು ಎಂದೇ ತೋಚುತ್ತಿಲ್ಲ.

ನಾಲ್ಕು ದಿನಗಳ ಕೆಳಗೆ ಟಿವಿಯಲ್ಲಿ ಬರುತ್ತಿದ್ದ ಹವಾಮಾನ ವರದಿ ನೋಡಿ ಬಹುಷಃ ಇಡೀ ಪ್ರಪಂಚ ತಲ್ಲಣಗೊಂಡಿರಬಹುದು. ಏಕೆಂದರೆ ಅದು ಅಂತಿಂಥ ಸುದ್ದಿ ಅಲ್ಲ. ಎರಡು ವರ್ಷಗಳ ಹಿಂದೆ ಅಚಾನಕ್ಕಾಗಿ ಬಂದ ಪ್ರಳಯದ ಸುದ್ದಿ. ಅಲ್ಲಿವರೆಗೂ ಜನಕ್ಕೆ ಪ್ರಳಯದ ಬಗ್ಗೆ ಯೋಚಿಸುವಷ್ಟು ಸಮಯವಿರಲಿಲ್ಲ. ದಿಡೀರನೆ ಇನ್ನೆರಡು ವರ್ಷದಲ್ಲಿ ಇಡೀ ಪ್ರಪಂಚವನ್ನೇ ಬಲಿ ತೆಗೆದುಕೊಳ್ಳುವ ಜಲಪ್ರಳಯ ಬರಲಿದೆ ಎಂದಾಗ ಅರ್ಧದಷ್ಟು ಜನ ಅದು ಸುಳ್ಳೆಂದು ಇನ್ನರ್ಧದಷ್ಟು ಜನ ಅದು ನಿಜವಾಗಬಹುದೆಂದು ಸುಮ್ಮನಾದರು. ಅದರ ಬಗ್ಗೆ ಸಿನೆಮಾಗಳು, ಚರ್ಚೆಗಳು ಎಲ್ಲವೂ ಶುರುವಾಗಿದ್ದವು. ಆದರೆ ಕಾಲಾಂತರದಲ್ಲಿ ಜನ ಅದನ್ನು ಮರೆತರು. ಆದರೆ ಎರಡು ವರ್ಷದ ನಂತರ ಪ್ರಳಯದ ದಿನಾಂಕ ಹತ್ತಿರ ಬರುತ್ತಿದ್ದ ಹಾಗೆ ಜನರಲ್ಲಿ ಅದೊಂಥರ ವಿಚಿತ್ರ ಭಯ ಆವರಿಸಲು ಶುರುವಾಯಿತು. ಜನ ತಮ್ಮ ಬಳಿ ಇದ್ದ ದುಡ್ದೆಲ್ಲವನ್ನೂ ತೆಗೆದು ರಾಜಾರೋಷವಾಗಿ ಖರ್ಚು ಮಾಡಲು ಶುರುಮಾಡಿದರು. ರಾಜಕಾರಣಿಗಳು, ಸಿನೆಮಾ ನಟರು, ಉದ್ಯಮಿಗಳು ಎಲ್ಲರೂ ತಮ್ಮ ಕಪ್ಪು ಹಣವನ್ನು ಬ್ಯಾಂಕುಗಳಿಂದ ತೆಗೆದು ಉದಾರವಾಗಿ ದಾನ ಧರ್ಮ ಮಾಡಲು ಶುರು ಮಾಡಿದರು. ಇದ್ದಕ್ಕಿದ್ದಂತೆ ಪ್ರಪಂಚದಲ್ಲಿ ಬಡತನವೇ ಇಲ್ಲದೆ ಎಲ್ಲರೂ ಶ್ರೀಮಂತರಾಗಿಬಿಟ್ಟರು.

ಕೊನೆಗೂ ಆದಿನ ಬಂದೇ ಬಂತು. ಟಿವಿಯಲ್ಲಿ ಯಾವುದೇ ಚಾನೆಲ್ ಹಾಕಿದರೂ ಪ್ರಳಯದ ಬಗ್ಗೆಯೇ ಸುದ್ದಿ, ಇಂದು ರಾತ್ರಿ ಅಪ್ಪಳಿಸಲಿರುವ ಪ್ರಳಯಕ್ಕೆ ಈ ಪ್ರಪಂಚ ಬಲಿಯಾಗುತ್ತಿದೆ. ಇಂದು ಪ್ರಪಂಚದ ಕೊನೆಯ ದಿವಸ.ಮನುಕುಲ ಸರ್ವನಾಶವಾಗುವ ದಿವಸ. ಅದೂ ಇದೂ ಏನೇನೋ ಸುದ್ದಿಗಳು ಬರುತ್ತಿದ್ದವು. ಪ್ರಪಂಚದ ಎಲ್ಲ ದೇಶಗಳಿಂದ ಚಿತ್ರ ವಿಚಿತ್ರ ಪ್ರತಿಕ್ರಿಯೆಗಳು ಬರುತ್ತಿದ್ದವು. ಎಷ್ಟೋ ವರ್ಷಗಳಿಂದ ಶತ್ರುತ್ವವನ್ನು ಬೆಳೆಸಿಕೊಂಡು ಬಂದಿದ್ದ ದೇಶಗಳು ಇದ್ದಕ್ಕಿದ್ದಂತೆ ಆ ಶತ್ರುತ್ವವನ್ನು ಮರೆತು ಸ್ನೇಹ ಸಂಭಾಷಣೆಗಳನ್ನು ನಡೆಸುತ್ತಿದ್ದರು. ಹಲವರು ಪ್ರಳಯ ಬರುತ್ತಿದೆ, ನಾವೇನು ಸಾಧಿಸಲು ಸಾಧ್ಯವಾಗಿಲ್ಲ ಎಂದು ಬೇಸರ ಮಾಡಿಕೊಂಡರೆ, ಇನ್ನು ಕೆಲವರು ಅಬ್ಬ ಸಾಕಪ್ಪ ಈ ಜೀವನ ಮೊದಲು ಪ್ರಳಯದಲ್ಲಿ ನನ್ನನ್ನೇ ಕರೆದುಕೊಂಡು ಹೋದರೆ ಸಾಕು ಎಂದುಕೊಳ್ಳುತ್ತಿದ್ದರೆ, ಮತ್ತೆ ಕೆಲ ಪ್ರದೇಶದ ಜನರು ಚಿತ್ರ ವಿಚಿತ್ರ ಆಸೆಗಳ ಬಗ್ಗೆ, ಅಸಹಾಯಕತೆ ಬಗ್ಗೆ ಮಾತಾಡುತ್ತಿದ್ದರು. ನೋವು,ನಲಿವು, ದುಃಖ, ಸಂತೋಷ, ಆಶ್ಚರ್ಯ, ಭಯ, ಗೊಂದಲ, ಕುತೂಹಲ,ನಿರೀಕ್ಷೆ, ಆಸೆ, ಅತಿ ಆಸೆ, ದುರಾಸೆ, ಕನಸುಗಳು ಎಲ್ಲ ರೀತಿಯ ಭಾವಗಳನ್ನು ಹೊಂದಿದ್ದ ಜನರೂ ಕಾಣಿಸುತ್ತಿದ್ದರು.

ಸಮಯ ರಾತ್ರಿ ಹನ್ನೊಂದೂವರೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಅಪ್ಪಳಿಸಲಿರುವ ಜಲಪ್ರಳಯ ಎನ್ನುತ್ತಿದ್ದ ಹಾಗೆ, ಫ್ಲಾಶ್ ನ್ಯೂಸ್ ಜಲಪ್ರಳಯ ಶುರುವಾಗಿಬಿಟ್ಟಿದೆ, ಆಗಲೇ ಪ್ರಪಂಚದ ಎರಡು ದೇಶಗಳು ಪ್ರಳಯಕ್ಕೆ ಬಲಿಯಾಗಿ ಮುಂದಿನ ದೇಶಗಳನ್ನು ಬಲಿ ತೆಗೆದುಕೊಳ್ಳಲು ಪ್ರಳಯ ಬರುತ್ತಿದೆ. ಐದೈದು ನಿಮಿಷಕ್ಕೆ ಒಂದೊಂದು ದೇಶ ಬಲಿ ಆಗುತ್ತಿರುವ ಸುದ್ದಿ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಕೇಬಲ್ ಕಟ್ ಆಯಿತು. ಓಹೋ ನಮ್ಮ ದೇಶಕ್ಕೆ ಬಂದಿದೆ ಪ್ರಳಯ ಎಂದು ಅರಿವಾಗುತ್ತಿದ್ದ ಹಾಗೆ ವಿದ್ಯುತ್ ಸ್ಥಗಿತವಾಯಿತು. ಫೋನ್ ಗಳು ಕೆಲಸ ಮಾಡುತ್ತಿಲ್ಲ, ಮೊಬೈಲ್ ಗಳು ನೆಟ್ವರ್ಕ್ ಇಲ್ಲದೆ ಸತ್ತು ಹೋಗಿತ್ತು. ಮುಂದೇನು ಎಂದು ಆಲೋಚಿಸುವಷ್ಟರಲ್ಲಿ ಜೋರಾಗಿ ಅಪ್ಪಳಿಸಿದ ಅಲೆಯೊಂದರಲ್ಲಿ ನಾನು ಮುಳುಗಿದ್ದೆ. ನಂತರ ಏನಾಯಿತೆಂದು ಅರಿವಾಗಲಿಲ್ಲ. ಎಷ್ಟೋ ಹೊತ್ತಿನ ನಂತರ ಕಣ್ಣು ಬಿಟ್ಟು ನಾನು ಸ್ವರ್ಗದಲ್ಲಿದ್ದೇನೋ ನರಕದಲ್ಲಿದ್ದೇನೋ ಎಂದು ಯೋಚಿಸುತ್ತಿದ್ದಾಗ ನಾನಿನ್ನೂ ಸತ್ತೆ ಇಲ್ಲ ಎಂದು ಗೊತ್ತಾಯಿತು. ಅದು ಹೇಗೆ ಬದುಕಿದೇನೋ ಗೊತ್ತಿಲ್ಲ ದೊಡ್ಡದಾದ ಒಂದು ಮರದ ದಿಮ್ಮಿಯ ಮೇಲೆ ಮಲಗಿದ್ದೆ. ಇಡೀ ಪ್ರಪಂಚಕ್ಕೆ ಪ್ರಪಂಚವೇ ಮುಳುಗಿ ಹೋಗಿದೆ ನನ್ನ ಕಣ್ಣಳತೆಯಲ್ಲಿ ಯಾವುದೇ ಜೀವಿ ಕಾಣಿಸುತ್ತಿಲ್ಲ. ಮುಂದೇನು ಮಾಡುವುದು ಎಂದು ಆಲೋಚಿಸುತ್ತ ಆ ಮರದ ದಿಮ್ಮಿಯಿಂದ ಕೆಳಗಿಳಿದೆ. ನನ್ನ ಪಾದ ಮುಳುಗುವಷ್ಟು ನೀರಿತ್ತು. ಎಲ್ಲೆಡೆ ಬರೀ ಕೆಸರು ತುಂಬಿತ್ತು. ಆ ಮರದ ದಿಮ್ಮಿಯ ಮೇಲೆ ಏನೋ ಬರೆದಿದ್ದ ಹಾಗೆ ಕಂಡಿತು. ಅದಕ್ಕೆ ಅಂಟಿರುವ ಕೆಸರನ್ನು ಪಕ್ಕಕ್ಕೆ ಸರಿಸಿ ಏನೆಂದು ನೋಡಿದರೆ ಅದರ ಮೇಲೆ TITANIC ಎಂದು ಬರೆದಿತ್ತು. ಹಾಗಿದ್ದರೆ ನಾನು ಮಲಗಿದ್ದ ದಿಮ್ಮಿ ೧೯೧೨ರಲ್ಲಿ ಅಪಘಾತದಲ್ಲಿ ಮುರಿದು ಬಿದ್ದಿದ್ದ ಆ ಹಡಗಿನ ಒಂದು ದಿಮ್ಮಿ ಎಂದು ತಿಳಿದು ಆಶ್ಚರ್ಯವಾಯಿತು. ಇನ್ನು ಏನೇನು ಆಶ್ಚರ್ಯಗಳಿದೆಯೋ ಎಂದುಕೊಂಡು ಹಾಗೆ ಕೆಸರಿನಲ್ಲಿ ಕಾಲಿಡುತ್ತಾ ಮುಂದೆ ಬರುತ್ತಿದ್ದೆ.

ಇದ್ದಕ್ಕಿದ್ದಂತೆ ಯಾಕೋ ಮೈಯಲ್ಲಿ ಏನೋ ಒಂದು ಮತ್ತು ಬಂದಂತಾಗಿ ತಲೆ ತಿರುಗಲು ಶುರುವಾಯಿತು. ಎರಡು ಹೆಜ್ಜೆ ಮುಂದಕ್ಕೆ ಇಟ್ಟಾಗ ಮತ್ತೆ ಯಥಾಸ್ಥಿತಿಗೆ ಬಂದೇ. ಇದೇನು ವಿಚಿತ್ರ ಎಂದು ಮತ್ತೆ ಎರಡು ಹೆಜ್ಜೆ ಹಿಂದಕ್ಕೆ ಬಂದರೆ ಅದೇ ತಲೆ ತಿರುಗಿದ ಅನುಭವವಾಗಿ ಇಲ್ಲೇನೋ ಇದೆ ಎಂದು ನಿಧಾನವಾಗಿ ಮಣ್ಣನ್ನು ತೆಗೆಯಲು ಶುರುಮಾಡಿದೆ. ಸ್ವಲ್ಪ ಹೊತ್ತು ಮಣ್ಣನ್ನು ತೆಗೆದ ಮೇಲೆ ಅಡ್ಡಡ್ಡ ಬಿದ್ದಿದ್ದ ಉದ್ದನೆ ಗೋಪುರ UB ಸಿಟಿ ಎಂದು ಗೊತ್ತಾಯಿತು. ಓಹೋ ಇದು ಮಲ್ಯ ಅವರ ಪ್ರಭಾವ ಎಂದುಕೊಂಡು ಮತ್ತೆ ಸ್ವಲ್ಪ ಮುಂದಕ್ಕೆ ಹೋದೆ. ಅಲ್ಯಾವುದೋ ದೊಡ್ಡ ಕಟ್ಟಡ ಕಾಣುತ್ತಿದೆ ಅರೆರೆ ಇದೇನಿದು ಇಷ್ಟು ಪ್ರಳಯ ಬಂದರೂ ಈ ಕಟ್ಟಡ ಮಾತ್ರ ಹೀಗೆ ಇದೆಯಲ್ಲ ಯಾವುದಪ್ಪ ಇದು ಒಂದೊಂದೇ ಮೆಟ್ಟಿಲು ಹತ್ತುತ್ತಾ ಹೋಗುತ್ತಿದ್ದೆ ತಕ್ಷಣ ಕಾಲಿಗೆ ಏನೋ ತಗುಲಿದಂತಾಯ್ತು ಏನೆಂದು ಕೆಸರಿನಲ್ಲಿ ಕೈ ಹಾಕಿ ಎತ್ತಲು ನೋಡಿದರೆ ಬಹಳ ಭಾರ ಇತ್ತು ಎತ್ತಲು ಆಗಲಿಲ್ಲ ಹಾಗೆ ನೋಡೋಣ ಎಂದುಕೊಂಡು ಸ್ವಲ್ಪ ಕೆಸರನ್ನು ಒರೆಸಿ ನೋಡಿದರೆ ಕೆಲಸ ದೇವರ ಕೆಲಸ ಎಂದಿತ್ತು. ಓಹ್ ಈ ಕಟ್ಟಡವ ಇದು ಎಂದು ಹಾಗೆ ಒಳಗೆ ಬಂದಾಗ ಆ ಕೊಠಡಿ ಕಂಡಿತು. ಸೀದಾ ಒಳಗೆ ಹೋದೆ ಅಲ್ಲಿತ್ತು ಆ ಖುರ್ಚಿ ಎಷ್ಟೋ ವರ್ಷಗಳಿಂದ ಆ ಖುರ್ಚಿಗಾಗಿ ಅದೆಷ್ಟು ಜನ ಅದೆಷ್ಟು ರೀತಿ ಒದ್ದಾಡಿದ್ದಾರೋ.ಅದೆಷ್ಟು ಸ್ನೇಹಿತರು ಶತ್ರುಗಳಾಗಿದ್ದಾರೋ ಅದೆಷ್ಟು ಕಪಟ,ಮೋಸ,ವಂಚನೆ ಮಾಡಿದ್ದಾರೋ ಎಂದುಕೊಂಡು ಅಂಥಾದ್ದು ಏನಪ್ಪಾ ಇದೆ ಆ ಖುರ್ಚಿಯಲ್ಲಿ ಒಮ್ಮೆ ಕೂತು ನೋಡೋಣ ಎಂದು ಖುರ್ಚಿಯ ಬಳಿ ಬಂದರೆ ಕಾಲಿಗೆ ಏನೋ ತಗುಲಿತು. ಕೆಳಗೆ ನೋಡಿ ತಕ್ಷಣ ಕಿಟಾರನೆ ಕಿರುಚಿಕೊಂಡು ಬಿಟ್ಟೆ. ಅಲ್ಲಿ ನೋಡಿದರೆ ಆ ವ್ಯಕ್ತಿ ಆ ಖುರ್ಚಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಹಾಗೆಯೇ ಪ್ರಾಣ ಬಿಟ್ಟಿದ್ದ. ಓಹೋ ಈ ವ್ಯಕ್ತಿ ಸಾಯುವಾಗಲೂ ಆ ಖುರ್ಚಿಯ ಧ್ಯಾನ ಬಿಡಲಿಲ್ಲವಾ ಎಂದುಕೊಂಡು ಅಲ್ಲಿಂದ ಆಚೆ ಬಂದೆ.

ಮತ್ತೆ ಕತ್ತಲಾಗುತ್ತಿತ್ತು ಏನಪ್ಪಾ ಮಾಡಲಿ ಯಾರೂ ಇಲ್ಲ, ತಿನ್ನಲೂ ಏನೂ ಇಲ್ಲ, ಕುಡಿಯಲು ನೀರೂ ಸಹ ಇಲ್ಲ ಹೀಗೆ ಆದರೆ ಏನು ನನ್ನ ಗತಿ, ಕೊನೆಪಕ್ಷ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದರೆ ಅದಕ್ಕೂ ದಾರಿ ಇಲ್ಲ. ಹೇಗೆ ಮಾಡಿಕೊಳ್ಳಲಿ? ಯಾವುದು ಬಾವಿ ಯಾವುದು ಕೆರೆ ಒಂದೂ ಗೊತ್ತಾಗುತ್ತಿಲ್ಲ,ವಿಷ ತೆಗೆದುಕೊಳ್ಳೋಣ ಎಂದರೆ ಎಲ್ಲಿಂದ ತೆಗೆದುಕೊಳ್ಳೋದು, ಏನು ಮಾಡಲು ತೋಚುತ್ತಿಲ್ಲ ಹಾಗೆ ಸ್ವಲ್ಪ ಮುಂದೆ ನಡೆದು ಅಲ್ಲೊಂದು ಕಟ್ಟೆಯ ಹಾಗೆ ಕಂಡಿತು. ಇದರ ಮೇಲೆ ಮಲಗೋಣ ಎಂದು ಕೆಸರನ್ನೆಲ್ಲ ಒರೆಸಿ ಅಲ್ಲೇ ಮಲಗಿದೆ. ಸೂರ್ಯನನ್ನು ಕಂಡು ನಾಲ್ಕು ದಿನವಾಗಿತ್ತು. ಬೆಳಿಗ್ಗೆ ಸೂರ್ಯನ ಕಿರಣಗಳು ಕಣ್ಣನ್ನು ಚುಚ್ಚಿ ಕಣ್ಣು ಬಿಟ್ಟೆ. ಗಂಟಲು ಒಣಗಿ ಹೋಗಿದೆ, ತುಟಿಗಳು ಒಡೆದು ರಕ್ತ ಒಸರುತ್ತಿತ್ತು. ದೇಹ ನಿತ್ರಾಣವಾಗಿತ್ತು.ಹಾಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮತ್ತೆ ಕಣ್ಣು ಬಿಟ್ಟೆ. ಸೂರ್ಯ ನಡುನೆತ್ತಿಗೆ ಬಂದಿದ್ದ. ನಮ್ಮ ದೇಶದಲ್ಲಿ ಎಂದೂ ಈ ಮಟ್ಟದ ಬಿಸಿಲು ಕಂಡಿರಲಿಲ್ಲ. ಅಂಥಹ ಬಿಸಿಲು. ಅದರ ತಾಪ ಹೇಗಿತ್ತೆಂದರೆ ಮೂರು ದಿನಗಳಿಂದ ಕೆಸರು ಕಟ್ಟಿದ್ದ ಭೂಮಿ ನೋಡ ನೋಡುತ್ತಿದ್ದ ಹಾಗೆ ಒಣಗಿ ಮರುಭೂಮಿಯಂತೆ ಆಗಿಬಿಟ್ಟಿತು.

ಕಷ್ಟಪಟ್ಟು ನಾನು ಮಲಗಿದ್ದ ಕಟ್ಟೆಯಿಂದ ಕೆಳಗೆ ಇಳಿದು ನೆಲದ ಮೇಲೆ ಕಾಲಿಟ್ಟೆ ಅಷ್ಟೇ ನನ್ನ ಕಾಲು ಬೆಂದು ಹೋಯಿತು. ಅಷ್ಟು ಸುಡುತ್ತಿತ್ತು ನೆಲ. ಅಷ್ಟರಲ್ಲಿ ಬಿಸಿ ಗಾಳಿ ಶುರುವಾಯಿತು. ಇನ್ನೇನು ಈ ಬಿಸಿಗಾಳಿಗೆ ಸತ್ತು ಹೋಗುತ್ತೇನೆ ಎಂದು ಕೊಳ್ಳುವಷ್ಟರಲ್ಲಿ ಇದ್ದಕ್ಕಿದ್ದಂತೆ ಆಕಾಶ ಕಪ್ಪಾಗಿ ಮೋಡಗಳು ತುಂಬಿಕೊಂಡು ಗುಡುಗು ಸಿಡಿಲು ಮಿಶ್ರಿತವಾಗಿ ಕುಂಭದ್ರೋಣ ಮಳೆ ಶುರುವಾಯಿತು. ಎಲ್ಲಾದರೂ ಆಶ್ರಯಿಸೋಣ ಎಂದುಕೊಂಡು ಸುತ್ತಲೂ ಹುಡುಕಿದರೆ ಅಲ್ಲೊಂದು ಕಟ್ಟಡ ಮಳೆ ನೀರಿನಲ್ಲಿ ತೇಲಿ ಬರುತ್ತಿತ್ತು. ತಕ್ಷಣ ಹೋಗಿ ಅದರಲ್ಲಿ ನಿಂತ ಕೂಡಲೇ ಮಳೆ ನಿಂತು ಹೋಯಿತು. ಇದ್ದಕ್ಕಿದ್ದಂತೆ ಮೈ ಥರಗುಟ್ಟಿಸುವ ಹಾಗೆ ಚಳಿ ಶುರುವಾಯಿತು ಏನೆಂದು ಆಚೆ ನೋಡಿದರೆ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿತ್ತು. ಈ ವಾತಾವರಣ ಬದಲಾವಣೆ ಪ್ರಳಯದ ಪ್ರಭಾವವೇ ಎಂದು ಗೊತ್ತಾಯಿತು. ಆಚೆ ಬಂದು ಹಿಮದ ಮೇಲೆ ಕಾಲಿಟ್ಟು ಹಿಂತಿರುಗಿ ನೋಡಿದರೆ ಕೆಲವೇ ಕ್ಷಣದಲ್ಲಿ ನಾನು ನಿಂತಿದ್ದ ಕಟ್ಟಡ ಕುಸಿದು ಬಿತ್ತು. ಅಯ್ಯೋ ಅಲ್ಲೇ ನಿಂತಿದ್ದರೆ ಸಾಯಬಹುದಿತ್ತು ಎಂದು ಕೊಂಡು ಎರಡು ಹೆಜ್ಜೆ ಇಟ್ಟೆ ಅಷ್ಟೇ ಕಣ್ಣು ಕತ್ತಲಾದಂತಾಯಿತು....

Rating
No votes yet

Comments